ಅಥವಾ

ಒಟ್ಟು 19 ಕಡೆಗಳಲ್ಲಿ , 7 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಂದಿ ದೇವಂಗೆ, ಖಳ ಸಿರಿಯಾಳಂಗೆ, ಲಿಂಗ ದಾಸಿಮಯ್ಯಂಗೆ, ಜಾಗರ ಬಸವಣ್ಣಂಗೆ, ಆದರಿಕೆಯ ಬಿಟ್ಟು ಜೂಜನಾಡರೆ ನಮ್ಮವರಂದು ? ಒಬ್ಬಂಗೆ ಮಗನ ರಪಣ, ಒಬ್ಬಂಗೆ ಸೀರೆಯ ರಪಣ, ಒಬ್ಬಂಗೆ ತನು ಮನ ಧನದ ರಪಣ. ಮೂವರೂ ಮೂದಲಿಸಿ ಮುಕ್ಕಣ್ಣನ ಗೆಲಿದರು ಎನ್ನ ದೇವ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಗಂಡ ಸತ್ತ ಮುಂಡೆಗೆ ಮೂವರು ಮಿಂಡರು. ಒಬ್ಬಂಗೆ ಅಂಡಿನ ಆಶೆ, ಒಬ್ಬಂಗೆ ಖಂಡಿಯಾಶೆ, ಒಬ್ಬಂಗೆ ಮಂಡೆಯಾಶೆ. ಇಂತೀ ಮೂವರಿಗಾದ ಸೂಳೆ ಸೂಳಕೊಡುವ ಪರಿಯಿನ್ನೆಂತೊ? ಅಂಡಿಗೆ ಖಂಡಿಗೆ ಮಂಡೆಗೆ ದಿಂಡೊಂದೆ ಮೂವರು ಕೊಂದಾಡುತ್ತಿದ್ದರು. ಅಭಿಸಂಧಿಯ ತಿಳಿ ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಇಬ್ಬರಿಗೆ ಮೂರು, ಮೂರಿಟ್ಟವರು ಹಲವು ಮನೆಯಲ್ಲಿ ಚರಿಸುವರು. ಒಬ್ಬಂಗೆ ಒಂದು, ಒಂದಿಟ್ಟವರು ಮನೆಯಿಲ್ಲದೆ ಬಯಲಲ್ಲಿ ಚರಿಸುವರು. ಬಯಲ ಹೊತ್ತವರೆ ಅಸುಲಿಂಗಿಗಳು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಯದ ಜೀವದ ಮಧ್ಯದಲ್ಲೊಂದೂರ ಬಾಗಿಲಲ್ಲಿ ಮೂವರು ಹೊಲೆಯರ ಕಾವಲು. ಒಬ್ಬ ಜಾತಿಸೂತಕ, ಒಬ್ಬ ಜನನಸೂತಕ, ಒಬ್ಬ ಪ್ರೇತಸೂತಕ. ಇಂತೀ ಗ್ರಾಮದ ಹೊಲೆಯರು ಕೊಂಡಾಡುತ್ತಿದ್ದರು. ಒಬ್ಬಂಗೆ ಅಂಡೊಡೆದು, ಒಬ್ಬಂಗೆ ಅಂಗ ಭಿನ್ನವಾಗಿ, ಒಬ್ಬಂಗೆ ಶಿರಚ್ಛೇದನವಾಗಿ, ಗ್ರಾಮದ ಬಾಗಿಲು ಬಟ್ಟಬಯಲಾಯಿತ್ತು. ಬಂಕೇಶ್ವರಲಿಂಗವನರಿಯಿರಣ್ಣಾ.
--------------
ಸುಂಕದ ಬಂಕಣ್ಣ
ಎಲವೋ, ಎಲವೋ ಪಾಪಕರ್ಮವ ಮಾಡಿದವನೇ, ಎಲವೋ ಎಲವೋ ಬ್ರಹ್ಮೇತಿಯ ಮಾಡಿದವನೇ, ಒಮ್ಮೆ ಶರಣೆನ್ನೆಲವೋ. ಒಮ್ಮೆ ಶರಣೆಂದಡೆ ಪಾಪಕರ್ಮ ಓಡುವವು. ಸರ್ವಪ್ರಾಯಶ್ಚಿತ್ತಕ್ಕೆ ಹೊನ್ನ ಪರ್ವತಂಗಳೈದವು. ಒಬ್ಬಗೆ ಶರಣೆನ್ನು, ನಮ್ಮ ಕೂಡಲಸಂಗಮದೇವಂಗೆ.
--------------
ಬಸವಣ್ಣ
ಒಬ್ಬಂಗೆ ಇಹವುಂಟು ಒಬ್ಬಂಗೆ ಪರವುಂಟು, ಒಬ್ಬಂಗೆ ಇಹವಿಲ್ಲ ಒಬ್ಬಂಗೆ ಪರವಿಲ್ಲ. ಒಬ್ಬಂಗೆ ಇಹಪರವೆರಡೂ ಇಲ್ಲ. ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ ಇಹಪರವೆರಡೂ ಉಂಟು.
--------------
ಅಕ್ಕಮಹಾದೇವಿ
ತಂದೆಯ ಹೆಸರ ಮಗನಮಡದಿಗೆ ಮಿಂಡರು ಮೂವರು ನೋಡಾ. ಒಬ್ಬಂಗೆ ಕೈಗೊಟ್ಟು ಗುದ್ಯಾಡುವಳು, ಒಬ್ಬಂಗೆ ಮಾತುಕೊಟ್ಟು ಚಿಂತಿಸುವಳು, ಒಬ್ಬನ ನೆರೆದು ಸುಖಿಸುವಳು, ಇಂತಪ್ಪ ನಿತ್ಯ ನೇಮದ ಹಾದರಗಿತ್ತಿಗೆ ಗುರುನಿರಂಜನ ಚನ್ನಬಸವಲಿಂಗವ ಕೂಡುವಳೆಂದು ನಗುವರು ಶರಣರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಭರಿತವೆಂಬ ಶಬ್ದಕ್ಕೆ ಕಡೆಯಾಣಿ, ಭರಿತವೆಂಬ ಸೊಲ್ಲು ಪರಿಪೂರ್ಣತ್ವ ಕುರುಹಳಿದುದು. ಭರಿತಾರ್ಪಣವೆಂಬ ಭಕ್ಷ್ಯ ಮುಂದಕ್ಕೂ ಹಿಂದಕ್ಕೂ ಕಟ್ಟಿಲ್ಲದ ದೃಷ್ಟ, ಭರಿತಾರ್ಪಣವೆಂದು ಕೃತ್ಯದ ಕಟ್ಟ ಹೊತ್ತ ಮತ್ತೆ ಭರಿತಾರ್ಪಣ ಲಿಂಗ ಪ್ರಸಾದ ಕೊಂಡಲ್ಲಿ, ಆ ಮನ ಅರೋಚಕ ತಲೆದೋರಬಾರದು ಭರಿತಾರ್ಪಣವೆಂದು. ನೈವೇದ್ಯವೆಂದು ಸಂದಲ್ಲಿ ಉದಕ ಮುಂತಾದ ಆವ ದ್ರವ್ಯವೂ ಬೀಸರಿಸಿ, ಆ ಪ್ರಸಾದದಲ್ಲಿ ಬೆರೆಯಬಾರದು. ಬೆರೆದ ಮತ್ತೆ ಧರಿಸಬಾರದು, ಇರಿಸಬಾರದು. ಆ ಪ್ರಸಾದವ ಚೆಲ್ಲಿ ಸೂಸಲಿಲ್ಲ. ಮತ್ತೆ ಅರ್ಪಿಸಿಕೊಂಡೆಹೆನೆಂದಡೆ ಬೇರೆ ದೃಷ್ಟದಲ್ಲಿ ಬಂದುದಲ್ಲ. ಬೆರೆದ ದ್ರವ್ಯವ ಮತ್ತರ್ಪಿಸಿಹೆನೆಂದಡೆ ಆ ಪ್ರಸಾದದಲ್ಲಿ ಒಡಗೂಡಿದ ದ್ರವ್ಯ. ಆ ದ್ರವ್ಯ ಒಡಗೂಡಿದಡೆ ಕುರುಹಿಟ್ಟು ನಿಂದಲ್ಲಿ ಅರ್ಪಿಸಿ ಒಡಗೂಡಬಹುದು, ಮತ್ತೆ ವಿಚಾರಿಸಲಿಕಾಗಿ ತನ್ನ ವ್ರತದ ಕಟ್ಟಿನ ನೆಮ್ಮುಗೆಯನರಿತುಕೊಳಬಾರದು. ಬಿಡಬಾರದು ಎಂಬುದ ಒಳಗನರಿದು, ಇಂತೀ ಭರಿತಾರ್ಪಣ ಆರಿಗೂ ಸಾಧ್ಯವಲ್ಲ. ಒಬ್ಬಂಗೆ ಸಾಧ್ಯವಾಯಿತ್ತು. ಬಸವಣ್ಣ ಬೋನವಾಗಿ, ಚೆನ್ನಬಸವಣ್ಣ ಪದಾರ್ಥ ಸ್ವರೂಪವಾದಲ್ಲಿ, ಪ್ರಭುದೇವರು ಸಾಕು ಭರಿತವೆಂದಲ್ಲಿ ಅರ್ಪಿತವಾಯಿತ್ತು, ಭರಿತ ಸಲೆ ಸಂದಿತ್ತು. ಎನಗೆ ಭರಿತ ನೇಮ ಓಸರಿಸುತ್ತಿದೆ. ಪೂರ್ಣವ ಬಿಟ್ಟು, ಪರಿಪೂರ್ಣವ ಮಾಡು ಚೆನ್ನ ಚೆನ್ನಕೂಡಲ ರಾಮೇಶ್ವರಲಿಂಗ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
-->