ಅಥವಾ

ಒಟ್ಟು 278 ಕಡೆಗಳಲ್ಲಿ , 60 ವಚನಕಾರರು , 258 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೈಯಲ್ಲಿ ಹಿಡಿದು ಕಾಬುದು ಕರ್ಮಪೂಜೆಯಲ್ಲವೆ? ಮನದಲ್ಲಿ ನೆನೆದು ಮಾಡುವುದೆಲ್ಲವು ಕಾಯದ ಕರ್ಮವಲ್ಲವೆ? ಭಾವಶುದ್ಧವನರಿವ ಪರಿ ಇನ್ನಾವುದು? ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಘನಗಂಬ್ಥೀರಲಿಂಗವೆನ್ನ ಕಾಯದನುವರಿಯಬಂದಬಳಿಕ ಎನ್ನ ಕಾಯದ ರತಿಯ ಕಡೆಗಿಡಲೆನಗೆ ಸೊಗಸದು ಕಾಣಮ್ಮ. ಎನ್ನ ಮನದನುವರಿಯಬಂದಬಳಿಕ ಮನದ ಮಮಕಾರ ಸರಿದರಿಯಲೆನಗೆ ಸೊಗಸದು ಕಾಣಮ್ಮ. ಎನ್ನ ಪ್ರಾಣದನುವರಿಯಬಂದಬಳಿಕ ಪ್ರಾಣದ ಮೋಹವಿತರವೆರಸಲೆನಗೆ ಸೊಗಸದು ಕಾಣಮ್ಮ. ಎನ್ನ ಭಾವದನುವರಿಯಬಂದಬಳಿಕ ಭಾವದ ಭ್ರಾಂತಿ ಪರಿದಾವರಿಸಲೆನಗೆ ಸೊಗಸದು ಕಾಣಮ್ಮ. ಎನ್ನ ಕಾಯ ಮನ ಪ್ರಾಣ ಭಾವವೆಂಬ ಚತುರ್ವಿಧಸಾರಾಯ ಸುಖಲೋಲನಾಗಿರ್ದಬಳಿಕ ಗುರುನಿರಂಜನ ಚನ್ನಬಸವಲಿಂಗವನಗಲಲೆಡೆಗಾಣದೆ ಪರವಶವಾಗಿರ್ದೆ ಕಾಣಮ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಬಸವಣ್ಣನ ಪ್ರಸಾದದಿಂದ ಭಕ್ತಿಜ್ಞಾನ ವೈರಾಗ್ಯ ಸಂಪನ್ನನಾದೆನಯ್ಯ. ಚೆನ್ನಬಸವಣ್ಣನ ಪ್ರಸಾದದಿಂದ ಷಟ್‍ಸ್ಥಲಜ್ಞಾನಸಂಪನ್ನನಾದೆನಯ್ಯ. ಪ್ರಭುದೇವರ ಪ್ರಸಾದದಿಂದ ಪರಶಿವತತ್ವಸ್ವರೂಪವೇ ಎನ್ನ ಸ್ವರೂಪವೆಂದರಿದು ಸಮಸ್ತ ಸಂಸಾರಪ್ರಪಂಚ ಕೊಡಹಿದೆನು ನೋಡಾ. ನೀಲಲೋಚನೆಯಮ್ಮನ ಪ್ರಸಾದದಿಂದ ನಿಜಲಿಂಗೈಕ್ಯನಾದೆನಯ್ಯ. ಮಹಾದೇವಿಯಕ್ಕಗಳ ಪ್ರಸಾದದಿಂದ ಸುತ್ತಿದ ಮಾಯಾಪಾಶವ ಹರಿದು ನಿರ್ಮಾಯನಾಗಿ ನಿರ್ವಾಣಪದದಲ್ಲಿ ನಿಂದೆನಯ್ಯ. ಸಿದ್ಧರಾಮಯ್ಯನ ಪ್ರಸಾದದಿಂದ ಶುದ್ಧ ಶಿವತತ್ವವ ಹಡೆದೆನಯ್ಯ. ಮೋಳಿಗೆಯ ಮಾರಿತಂದೆಗಳ ಪ್ರಸಾದದಿಂದ ಕಾಯದ ಕಳವಳನಳಿದು ಕರ್ಮನಿರ್ಮಲನಾಗಿ ವೀರಮಾಹೇಶ್ವರನಾದೆನು ನೋಡಾ. ಇವರು ಮುಖ್ಯವಾದ ಏಳುನೂರೆಪ್ಪತ್ತುಮರಗಣಂಗಳ ಪರಮಪ್ರಸಾದದಿಂದ ಎನ್ನ ಕರಣಂಗಳೆಲ್ಲವು ಲಿಂಗಕರಣಂಗಳಾಗಿ ಕರಣೇಂದ್ರಿಯಂಗಳ ಕಳೆದುಳಿದು ಇಂದ್ರಿಯಂಗಳಿಗೆ ನಿಲುಕದ ಸ್ಥಾನದಲ್ಲಿರ್ದು ಪರಮಾನಂದ ಪ್ರಭಾಮಯನಾಗಿರ್ದೆನು ನೋಡಾ. ನಿಮ್ಮ ಶರಣರ ಪ್ರಸಾದದಿಂದ ನಾನು ಪ್ರಸಾದಿಯಾಗಿರ್ದೆನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಯದ ಕೈಯಲ್ಲಿಪ್ಪುದು ರೂಪುವಿಡಿದ ಲಿಂಗ. ಮನದ ಕೊನೆಯಲ್ಲಿಪ್ಪುದು ಸಾಕಾರವಿರಹಿತಲಿಂಗ. ಅರಿವಿನ ಭೇದಂಗಳ ತಿಳಿದು ನೋಡಿ, ಕಂಡೆಹೆನೆಂಬ ಸನ್ಮತ ಸದ್ಭಾವಿಗಳು ಕೇಳಿರೊ. ಅದು ಚಿದ್ಘನ ಚಿದಾದಿತ್ಯ ಚಿತ್ಸ್ವರೂಪ ಸದಮಲಾನಂದ ಗೂಡಿನ ಗುಮ್ಮಟನಾಥನೊಡೆಯ ಅಗಮ್ಯೇಶ್ವರಲಿಂಗ. ಇದಾರಿಗೂ ಅಪ್ರಮಾಣಮೂರ್ತಿ.
--------------
ಮನುಮುನಿ ಗುಮ್ಮಟದೇವ
ಅಯ್ಯಾ, ಎನ್ನ ಸ್ಥೂಲತತ್ವದಲ್ಲಿ ದ್ವಾದಶಕಳೆಯೊಳು ನಿಂದು ಅನಂತಕೋಟಿಪ್ರಕಾಶವಾಗಿ ತೋರುವ ಪ್ರಾಣಲಿಂಗವನು ಸತ್ಕ್ರಿಯಾನುಭಾವದಿಂದೆ ಕಾಯದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ, ಕಂಗಳಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ. ಅಯ್ಯಾ, ಎನ್ನ ಸೂಕ್ಷ್ಮ ತತ್ವದಲ್ಲಿ ಷೋಡಶಕಳೆಯೊಳು ನಿಂದು ಅನಂತಕೋಟಿಪ್ರಕಾಶವಾಗಿ ತೋರುವ ಪ್ರಾಣಲಿಂಗವನು ಸಮ್ಯಕ್ ಜ್ಞಾನಾನುಭಾವದಿಂದೆ ಮನದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ ಮನದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ. ಅಯ್ಯಾ, ಎನ್ನ ಕಾರಣತತ್ವದಲ್ಲಿ ದಶಕಳೆಯೊಳು ನಿಂದು ಅನಂತಕೋಟಿ ಪ್ರಕಾಶವಾಗಿ ತೋರುವ ಪ್ರಾಣಲಿಂಗವನು ಮಹಾಜ್ಞಾನಾನುಭಾವದಿಂದೆ ಭಾವದ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ ಭಾವದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ. ಅಯ್ಯಾ. ಎನ್ನ ಸರ್ವಾಂಗದಲ್ಲಿ ಮೂವತ್ತೆಂಟು ಕಳಾತೀತನಾಗಿ ಅಗಣಿತಕೋಟಿಪ್ರಕಾಶಮಯದಿಂದೊಪ್ಪುವ ಗುರುನಿರಂಜನ ಚನ್ನಬಸವಲಿಂಗವೆಂಬ ಪ್ರಾಣಲಿಂಗವನು ಮಹದರುವಿನ ಕರಸ್ಥಲದಲ್ಲಿಟ್ಟು ಅಷ್ಟವಿಧಾರ್ಚನೆಯ ಮಾಡಿ ಜ್ಞಾನದಾರತಿಯನೆತ್ತಿ ಮಂಗಳ ಜಯ ಜಯವೆನುತಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಸಹಭೋಜನವ ಮಾಡುವನ ಇರವು ಹೇಗೆಂದಡೆ: ದಗ್ಧಪಟದಂತೆ, ಮಂಜಿನ ರಂಜನೆಯ ವಾರಿಯ ಧೂಮದಂತೆ, ಒಡಲಿನ ಆತ್ಮನ ಭೇದದಂತಿರಬೇಕು. ಆಕಾಶದ ಸಾಕಾರದಲ್ಲಿ ತೋರುವ ನಾನಾ ಛಾಯದಂತೆ, ಒಂದು ವರ್ಣದಲ್ಲಿ ನಿಲ್ಲದೆ ತೋರುವ ತೋರಿಕೆಯಂತೆ, ಕಾಯದ ಛಾಯವ ತೊಟ್ಟಿದ್ದಲ್ಲಿ ಲಿಂಗಕ್ಕೂ ತನಗೂ ಸಹಭೋಜನ ಸಲವುದೆಂದೆ. ಅದು ಉರಿಯೊಳಗಳ ಕರ್ಪುರದಂತೆ, ಕರ್ಪುರದೊಳಗಳ ಉರಿಯಂತೆ. ಅನ್ಯಬ್ಥಿನ್ನವಿಲ್ಲದಿರಬೇಕು, ಸದಾಶಿವಮೂರ್ತಿಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಆಗಿಲ್ಲದ ಸಿರಿ, ಆಯುಷ್ಯವಿಲ್ಲದ ಬದುಕು. ಸುಖವಿಲ್ಲದ ಸಂಸಾರ. ಎಳತಟೆಗೊಂಬ ಕಾಯದ ಸಂಗ. ಬಳಲಿಸುವ ಜೀವಭಾವ. ಇವರ ಕಳವಳವಳಿದಲ್ಲದೆ ಮಳುಬಾವಿಯ ಸೋಮನ ತಿಳಿಯಬಾರದು.
--------------
ಮಳುಬಾವಿಯ ಸೋಮಣ್ಣ
ಅಯ್ಯಾ, ಶ್ರೀಗುರುವಿನ ವೇಧಾದೀಕ್ಷೆಯಿಂದೆ ಸರ್ವಕಲಾಬ್ಥಿಜ್ಞತೆಯೆಂಬ ಅನುಗ್ರಹವೇ ಭಾವಲಿಂಗವಾಗಿ ಎನ್ನ ಭಾವದ ಕರಸ್ಥಲದಲ್ಲಿ ನಿಂದು, ಭಾವ ತನುಮನಯುಕ್ತವಾದ ಕಾರ್ಮಿಕಮಲ ಭ್ರಾಂತಿಯನಳಿಸಿ ನಿಭ್ರಾಂತನಾದೆ. ಅಯ್ಯಾ, ಶ್ರೀಗುರುವಿನ ಮಂತ್ರದೀಕ್ಷೆಯಿಂದೆ ವಿದ್ಯಾವಿನಯ ಸಂಪನ್ನತೆಯೆಂಬ ಅನುಗ್ರಹವೇ ಪ್ರಾಣಲಿಂಗವಾಗಿ ಎನ್ನ ಮನದ ಕರಸ್ಥಲದಲ್ಲಿ ನಿಂದು, ಮನ ಭಾವ ತನುಯುಕ್ತವಾದ ಮಾಯಾಮಲಸಂಕಲ್ಪನಳಿಸಿ ಅಕಲ್ಪಿತನಾದೆ. ಅಯ್ಯಾ, ಶ್ರೀ ಗುರುವಿನ ಕ್ರಿಯಾದೀಕ್ಷೆಯಿಂದೆ ವೀರಶೈವೋತ್ತಮತೆಯೆಂಬ ಅನುಗ್ರಹವೇ ಇಷ್ಟಲಿಂಗವಾಗಿ ಎನ್ನ ಕಾಯದ ಕರಸ್ಥಲದಲ್ಲಿ ನಿಂದು, ತನು ಮನ ಭಾವಯುಕ್ತವಾದ ಆಣವಮಲದನಿಷ್ಟವನಳಿಸಿ ಅಕಾಯಚರಿತನಾದೆ. ಅಯ್ಯಾ, ನಿರಂಜನ ಚನ್ನಬಸವಲಿಂಗವ ಕರ, ಕಕ್ಷ, ಕಂಠ, ಉರಸಜ್ಜೆ, ಉತ್ತುಮಾಂಗ, ಅಮಳೊಕ್ಯದಲ್ಲಿ ಧರಿಸಿ ಪರಮಸುಖಿಯಾಗಿ ನಮೋ ನಮೋ ಎನುತಿರ್ದೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಾವವಿಕಾರ ಕಾಯಕ್ಕೆ ಚೇಗೆ. ಕಾಯದ ಕೇಡು, ಅರಿವಿಂಗೆ ಆಶ್ರಯಿಸುವದಕ್ಕೆ ಹೀನ. ಉಭಯದಲ್ಲಿ ಬಂದುದಕ್ಕೆ ಕಾಯ ಸುಂಕವ ತೆತ್ತು, ಜೀವ ಹೋಯಿತ್ತು, ಬಂಕೇಶ್ವರಲಿಂಗದಲ್ಲಿ .
--------------
ಸುಂಕದ ಬಂಕಣ್ಣ
ಕಾಯದ ಕಳವಳಕ್ಕಂಜಿ ಪ್ರಾಣ ಹೋದಲ್ಲಿ, ಭವ ಹಿಂಗದು, ಪ್ರಕೃತಿ ಬಿಡದು. ವಾಯಕ್ಕಾದಡೆ ಸತ್ತು ದೇವರ ಕೂಡಿಹೆವೆಂಬರು, ಈ ವಾಯದ ಮಾತಿಂಗೆ ಆನು ಬೆರಗಾದೆನು. ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ ಬೇರಿಲ್ಲ, ಗುಹೇಶ್ವರ ತಾನೆ !
--------------
ಅಲ್ಲಮಪ್ರಭುದೇವರು
ನಾರಿಯಲ್ಲಿ ಕೋಲ ಹೂಡಿ, ಆರೈಕೆಯ ಮಾಡಿ ಎಸೆಯಲಿಕ್ಕೆ ತಾಗಿತು ಮನ ಸಂದ ಗುರಿಯ. ಅದೇತರ ಗುಣದಿಂದ? ಮರ ಬಾಗಿ ನಾರಿಯೈದಿ ಬಾಣ ಶರಸಂಧಾನವಾಗಿ ತಾಗಿದಂತೆ ಚಿತ್ತ ಹಸ್ತದ ಲಿಂಗದ ದೃಷ್ಟ. ಮನ ವಚನ ಕಾಯ ತ್ರಿಕರಣದಲ್ಲಿ ಕರಣಂಗಳಿಂದ ಅರಿತು ಕಾಯದ ನೆಮ್ಮುಗೆಯಲ್ಲಿ ಕಾಣಬೇಕು. ಕಾಬ ತೆರದ ಮರೆಯಲ್ಲಿ ಕಳೆ ತೋರುತ್ತದೆ ಕುಡಿವೆಳಗು ಕಳೆಕಳಿಸುತ್ತದೆ ಸದಾಶಿವ[ಮೂರ್ತಿ]ಲಿಂಗದಲ್ಲಿ.
--------------
ಅರಿವಿನ ಮಾರಿತಂದೆ
ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ ನಿಮ್ಮತ್ತಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿಯಿಡುವೆನಯ್ಯಾ ನಾನು ? ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ. ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ. ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ. ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದಭಕ್ತಿಯೆನಗೆ ಕರುಣಿಸಯ್ಯಾ ಅಮರಗುಂಡದ ಮಲ್ಲಿಕಾರ್ಜುನಾ.
--------------
ಪುರದ ನಾಗಣ್ಣ
ಪರ್ಣದ ಮರೆಯ ಫಲದಂತೆ, ಬಣ್ಣದ ಮರೆಯ ಬಂಗಾರದಂತೆ, ತಂತು ಚರ್ಮಂಗಳಲ್ಲಿ ತೋರುವವನ ಗತಿಯಂತೆ. ಕಾಯದಲ್ಲಿ ಸುಳುಹುದೋರುತ್ತ. ಭಾವದಲ್ಲಿ ಪರವನಾಚರಿಸುತ್ತ ಕಾಯದ ಮರೆಯಲ್ಲಿ ತಿರುಗಾಡುವ ಭಾವಶುದ್ಧಾತ್ಮ ಉಭಯಕ್ಕೆ ಕಾಲಾಂತಕ ಬ್ಥೀಮೇಶ್ವರಲಿಂಗವು ಅವರ ಬಾಗಿಲಲ್ಲಿಬಳಸಾಡುತಿಪ್ಪನು.
--------------
ಡಕ್ಕೆಯ ಬೊಮ್ಮಣ್ಣ
ಕಾಯದ ಕಾನನದಲ್ಲಿ ಭಾವದ ನವಿಲು ನಲಿದಾಡುತ್ತಿರೆ, ಒಂದು ಹಾವಿನ ಮರಿ ಬಂದು ಹಾಯಿತ್ತು. ನವಿಲಂಜಿ ಹೋಗುತ್ತಿರಲಾಗಿ, ಹಾವಿನ ಮರಿಯ ನವಿಲಗರಿ ನುಂಗಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಚೋದ್ಯವಾದ ಕಾರಣ.
--------------
ಸಗರದ ಬೊಮ್ಮಣ್ಣ
ಹೃದಯಕಮಲ ಮಧ್ಯದ ಶುದ್ಧಾತ್ಮನನು ಸಿದ್ಧ ವಿದ್ಯಾಧರ ನಿರ್ದೇಹಿಗಳು ಬಲ್ಲರೆ ? ಕಾಯದ ಕೈಯಲಿ ಕೊಟ್ಟುದು ಮಾಯಾಮುಖದರ್ಪಿತ. ಇದಾವ ಮುಖವೆಂದರಿಯದೆ ಭ್ರಮೆ [ಗೊಂಡು]ಹೋದರು. ಕೊಂಬ ಕೊಡುವ ಎಡೆಯನಿಂಬಿನ ಗ್ರಾಹಕ ಬಲ್ಲ. ಕೂಡಲಚೆನ್ನಸಂಗನಲ್ಲಿ ಬಸವಣ್ಣಪ್ರಭು ಬಲ್ಲ.
--------------
ಚನ್ನಬಸವಣ್ಣ
ಇನ್ನಷ್ಟು ... -->