ಅಥವಾ

ಒಟ್ಟು 9 ಕಡೆಗಳಲ್ಲಿ , 7 ವಚನಕಾರರು , 8 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನುವಿಡಿದು ಮಾಡಿದ ಪದಾರ್ಥವು ಘನಲಿಂಗಕ್ಕೆ ಸಲ್ಲದು. ಮನವಿಡಿದು ಮಾಡಿದ ಪದಾರ್ಥವು ಅನುವಿಂಗೆ ಸೊಗಸದು. ಧನವಿಡಿದು ಮಾಡಿದ ಪದಾರ್ಥವು ಪರಮಲಿಂಗಕ್ಕೆ ಸಮನಿಸದು. ಅದು ಕಾರಣ ತನು ಮನ ಧನವಿಡಿದ ಸುಖಿಗಳು ಗುರುನಿರಂಜನ ಚನ್ನಬಸವಲಿಂಗಕ್ಕತ್ತತ್ತ ದೂರ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಿಯಾಣವೇ ಭಾಜನವೆಂಬರು. ಪರಿಯಾಣ ಭಾಜನವೇರಿ ಅಲ್ಲ. ಘನಲಿಂಗಕ್ಕೆ ಶುದ್ಧ ನಿರ್ಮಲವಾದ ಸಕಲಕರಣಂಗಳೇ ಭಾಜನ. ನಿಜಾನಂದವೇ ಭೋಜನ. ಪರಿಣಾಮವೇ ಪ್ರಸಾದ. ಇಂತಿವರಲ್ಲಿ ನಿರುತನಾಗಿರಬಲ್ಲ ¸õ್ಞರಾಷ್ಟ್ರ ಸೋಮೇಶ್ವರಾ, ನಿಮ್ಮ ಶರಣ.
--------------
ಆದಯ್ಯ
ದೇವರಿಗೆಂದು ಬಂದ ದ್ರವ್ಯ ಮತ್ತೆ ಸಂದೇಹವಾಯಿತ್ತೆಂದು ಹಾಕೆಂದಾಗವೆ ಘನಲಿಂಗಕ್ಕೆ ದೂರ. ಬೇಹುದಕ್ಕೆ ಮೊದಲೆ ಸಂದೇಹವನಳಿದು ತರಬೇಕಲ್ಲದೆ ಉಂಡು ಊಟವ ಹಳಿಯಲುಂಟೆ ! ತಂದುಕೊಟ್ಟು ಕುಲವನರಸಲುಂಟೆ ! ಇಂತಿವರು ತಮ್ಮಂಗ ವ್ರತವನರಿಯದೆ ಇದಿರ ವ್ರತದಂಗ ತಪ್ಪಿತೆಂದು ಕೊಂಡಾಡುವರ ಕಂಡು ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ಅವರು ಕಂಡಹರೆಂದು ಅಂಜುತ್ತಿದ್ದನು.
--------------
ಅಕ್ಕಮ್ಮ
ಸಕಲಪದಾರ್ಥದ್ರವ್ಯಂಗಳೆಲ್ಲವ ಲಿಂಗಕ್ಕೆ ಮುಟ್ಟಿಸಿ ಪ್ರಸಾದ ಮುಂತಾಗಿ ತಾ ಮುಟ್ಟಿಹೆನೆಂಬಲ್ಲಿ ತನ್ನ ಸಂಕಲ್ಪದ ಗುಣವೊ? ಘನಲಿಂಗಕ್ಕೆ ತೃಪ್ತಿಮಾಡಿ ಒಕ್ಕುದ ಕೊಂಡಿಹೆನೆಂಬ ಕಟ್ಟಳೆಯ ಗುಣವೊ ? ಇಂತೀ ಸತ್ಕ್ರೀಮಾರ್ಗಂಗಳನರಿದು ಅರ್ಪಿಸುವಲ್ಲಿ ಲಿಂಗಮುಂತಾಗಿ ತಾ ಕೊಂಬನಾಗಿ ಲಿಂಗಕ್ಕೆ ಮರೆದು ತಾ ಕೊಂಡಿಹೆನೆಂಬಲ್ಲಿ ಲಿಂಗಕ್ಕೆ ತಾನೊಳಗೊ ಹೊರಗೊ - ಎಂಬುದ ತಿಳಿದು, ಸಂದುದ ಕೈಕೊಂಡು, ಸಲ್ಲದೆ ಮರವೆಯಿಂದ ಬಂದುದ ಚರಲಿಂಗದ ಮುಖದಿಂದ ಸಂದುದ ಕೈಕೊಂಬುದು ಅಂಗಸೋಂಕು, ಆತ್ಮಸೋಂಕು, ಅರಿವುಸೋಂಕು, ಈ ತ್ರಿವಿಧ ಸೋಂಕು ಪರಿಪೂರ್ಣವಾದುದು ಅರ್ಪಿತ, ಅವಧಾನಿಯ ಕಟ್ಟು. ಹೀಂಗಲ್ಲದೆ ಮಿಕ್ಕಾದುದೆಲ್ಲವೂ ವಾಚಾಲಕರ ಕಟ್ಟುಕದ ಮಾತು. ಆ ಮಾತಿನ ಮಾಲೆಯೆಲ್ಲವೂ ಭ್ರಷ್ಟ, ಭೋಗಬಂಕೇಶ್ವರಲಿಂಗದಲ್ಲಿ ನಿಹಿತಾಚಾರಿಗಳ ಕಟ್ಟು.
--------------
ಶ್ರೀ ಮುಕ್ತಿರಾಮೇಶ್ವರ
ಹಾಡಿ ಹೊಗಳುವ ಜಂಗಮವೆಲ್ಲ ಬ್ರಹ್ಮನ ಸಂತತಿ. ಕಾಡಿ ಬೇಡುವ ಜಂಗಮವೆಲ್ಲ ವಿಷ್ಣುವಿನ ಸಂತತಿ. ಹಾಗವರಿಯದೆ ಹೊಕ್ಕು ಉಂಬುವ ಜಂಗಮವೆಲ್ಲ [ರುದ್ರನ ಸಂತತಿ]. ವ್ಯಾಪಾರವ ಮಾಡುವ ಜಂಗಮವೆಲ್ಲ ಈಶ್ವರನ ಸಂತತಿ. ಇಂತೀ ಅನುಭಾವ ಮಾಡುವ ಜಂಗಮವೆಲ್ಲ ಪರಶಿವನ ಸಂತತಿ. ಮುಕ್ತಿ ಕುಸ್ತಿಯ ಮಾಡುವ ಜಂಗಮವೆಲ್ಲ ಮಹಾಲಿಂಗವೆನಿಸುವದು. ಹಾಡದೆ ಹೊಗಳದೆ ಕಾಡದೆ ಬೇಡದೆ, ಹಾಗವನರಿಯದೆ ಹೊಗದೆ ವ್ಯಾಪಾರ ಮಾಡದೆ, ಭಕ್ತಿಗೆ ತೊಲಗಿ ವ್ಯರ್ಥದಿ ಮುಕ್ತಿ ಕುಸ್ತಿಯನಾಡದೆ, ಭಿಕ್ಷವೆಂಬ ಶಬ್ದದಲ್ಲಿ ಇದಿರಿಟ್ಟು, ಪದಾರ್ಥವ ಲಿಂಗಕರ್ಪಿತವ ಮಾಡುವುದೆ ನಿಜಮುಕ್ತಿ. ಮಹದಾಕಾಶ ಮಹಿಮಾಪತಿಯೆಂಬ ಘನಲಿಂಗಕ್ಕೆ ಅರ್ಪಿತ ಮಾಡುವ ಗುರು. ಅದಾವುದೆಂದಡೆ : ಅದು ಅನಾದಿ ಸಂಜ್ಞೆಯೆಂಬ ಜಂಗಮವು. ಅಂಥ ಜಂಗಮದ ಶ್ರೀಚರಣ ನೆರೆನಂಬಿ, ನೆಟ್ಟನಳಿವಸ್ಥಿರಕಾಯರ ಎನಗೊಮ್ಮೆ ತೋರಿಸಯ್ಯಾ, ಜಂಗಮಲಿಂಗಪ್ರಭುವೆ.
--------------
ಜಂಗಮಲಿಂಗ ಪ್ರಭುವೆ
ಇಷ್ಟಲಿಂಗಕ್ಕೆ ದೃಷ್ಟಾರ್ಪಿತ, ಪ್ರಾಣಲಿಂಗಕ್ಕೆ ತೃಪ್ತಿ ಅರ್ಪಿತ, ಮಹಾಜ್ಞಾನ ಘನಲಿಂಗಕ್ಕೆ ಪರಮ ಪರಿಣಾಮವೆ ಅರ್ಪಿತ. ಇಂತೀ ತ್ರಿವಿಧ ಅರ್ಪಣದಲ್ಲಿ ಸುಚಿತ್ತನಾಗಿರಬೇಕು, ಏಣಾಂಕಧರ ಸೋಮೇಶ್ವರಲಿಂಗವನರಿವುದಕ್ಕೆ.
--------------
ಬಿಬ್ಬಿ ಬಾಚಯ್ಯ
ಅಯ್ಯಾ, ಯತಿಯತ್ವವ ಪಡೆದೆನೆಂಬೋ ಮನುಜನೇ, ನೀ ಕೇಳು : ನಿನ್ನ 1ಯತಿಯತ್ವ1ದ ಬಗೆ ಎಂತೆಲಾ ? ಬರಿದೆ ದ್ರವ್ಯಕ್ಕೆ ಆಶೆಮಾಡಿ, ಪರರ ಕಾರ್ಪಣ್ಯದಿಂದ ಕಾಡಿ ಬೇಡಿ, ದ್ರವ್ಯವ ಗಳಿಸಿಕೊಂಡು, ಜನರ ಕಟ್ಟಿಕೊಂಡು ಬಡಿವಾರದಿಂದ ತಿರುಗಿದ ಬಳಿಕ, ನಿನಗೆ ಯತಿಯತ್ವವು ಎಲ್ಲೈತೆಲಾ ? ಅದು ಎಂತೆಂದರೆ, ಯತಿಯತ್ವವ ಪೇಳುವೆನು ಕೇಳೆಲಾ : ಯತಿ ನೀನಾದ ಬಳಿಕ ತನುವಿನ ಹಂಗು ಹರಿಯಬೇಕು ; ಮನವ ಘನಲಿಂಗಕ್ಕೆ ಕಟ್ಟಿಹಾಕಬೇಕು ; ಧನವ ಸ್ವಪ್ನದಲ್ಲಿ ಮುಟ್ಟಲಾಗದು ; ಅನ್ನದ ಆಸೆಯ ಬಿಡಬೇಕು ; ಚಿನ್ಮಯನಾಗಿ ನಡೆಯಬೇಕು ; ಚಿಂತೆಯ ಮರೆತು ವೈರಾಗ್ಯದಿಂದಿರಬೇಕು ; ಕಾಮದ ಹಂಗ ಕಳೆಯಬೇಕು ; ಕರ್ಮೇಂದ್ರಿಯಂಗಳ ಸುಡಬೇಕು ; ಲಿಂಗದಲ್ಲಿ ಕರುಣ ಇರಬೇಕು. ಸ್ಫಟಿಕದಂತೆ ನಿರ್ಮಳ ಕಾಯನಾಗಿ, ನಿಶ್ಚಿಂತನಾಗಿ, ಮೋಕ್ಷವ ಕಂಡಡೆ ಯತಿವರನೆಂದು ನಮೋ ಎಂಬುವೆನಯ್ಯಾ ! ಬರಿದೆ ಯತಿ ಎನಿಸಿಕೊಂಡು ಕೋಪಾಟೋಪದೊಳು ಬಿದ್ದು ಹೊರಳಾಡುವ ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ.
--------------
ಕೂಡಲಸಂಗಮೇಶ್ವರ
ಎಲ್ಲಾ ವ್ರತಕ್ಕೂ ಜಂಗಮದ ಪ್ರಸಾದವೆ ಪ್ರಾಣ. ಎಲ್ಲಾ ನೇಮಕ್ಕೂ ಜಂಗಮದರ್ಶನವೆ ನೇಮ. ಎಲ್ಲಾ ಶೀಲಕ್ಕೂ ಜಂಗಮಮಾಟವೆ ಶೀಲ. ಇಂತೀ ವ್ರತ ನೇಮ ಶೀಲಂಗಳೆಲ್ಲವೂ ಜಂಗಮದ ಮುಂದಿಟ್ಟು ಶುದ್ಧತೆಯಹ ಕಾರಣ ಆ ಜಂಗಮದಲ್ಲಿ ಅರ್ಥ ಪ್ರಾಣ ಅಭಿಮಾನಕ್ಕೆ ಕಟ್ಟುಮಾಡಿದೆನಾದಡೆ ಎನಗದೆ ದ್ರೋಹ. ಆ ಜಂಗಮದ ದರ್ಶನದಿಂದ ಸಕಲದ್ರವ್ಯ ಪವಿತ್ರ. ಆ ಜಂಗಮದ ಪಾದತೀರ್ಥದಿಂದ ಘನಲಿಂಗಕ್ಕೆ ಜೀವಕಳೆ. ಆ ಜಂಗಮದ ಪ್ರಸಾದದಿಂದ ಘನಲಿಂಗಕ್ಕೆ ತೃಪ್ತಿ. ಇಷ್ಟನರಿತಲ್ಲಿ ಜಂಗಮಲಿಂಗಕ್ಕೆ ಸಂದೇಹ ಮಾಡಿದಡೆ ಎನಗೆ ಕುಂಭೀಪಾತಕದಲ್ಲಿ ನಾಯಕನರಕ ತಪ್ಪದು. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗ ಸಹಿತಾಗಿ ಮುಳುಗುವೆನು.
--------------
ಅಕ್ಕಮ್ಮ
-->