ಅಥವಾ

ಒಟ್ಟು 81 ಕಡೆಗಳಲ್ಲಿ , 23 ವಚನಕಾರರು , 36 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಮ್ಮೆಗೊಂದು ಚಿಂತೆ; ಸಮಗಾರಗೊಂದು ಚಿಂತೆ. ಧರ್ಮಿಗೊಂದು ಚಿಂತೆ; ಕರ್ಮಿಗೊಂದು ಚಿಂತೆ. ಎನಗೆ ಎನ್ನ ಚಿಂತೆ, ತನಗೆ ತನ್ನ ಕಾಮದ ಚಿಂತೆ. ಒಲ್ಲೆ ಹೋಗು, ಸೆರಗ ಬಿಡು ಮರುಳೆ. ಎನಗೆ ಚೆನ್ನಮಲ್ಲಿಕಾರ್ಜುನದೇವರು ಒಲಿವರೊ ಒಲಿಯರೊ ಎಂಬ ಚಿಂತೆ !
--------------
ಅಕ್ಕಮಹಾದೇವಿ
ನಮಗೆ ನಮ್ಮ ಲಿಂಗದ ಚಿಂತೆ, ನಮಗೆ ನಮ್ಮ ಭಕ್ತರ ಚಿಂತೆ, ನಮಗೆ ನಮ್ಮ ಆದ್ಯರ ಚಿಂತೆ, ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನಯ್ಯನ ಚಿಂತೆಯಲ್ಲದೆ ಲೋಕದ ಮಾತು ನಮಗೇಕಣ್ಣಾ ?
--------------
ಅಕ್ಕಮಹಾದೇವಿ
ಬಡತನಕ್ಕೆ ಉಂಬುವ ಚಿಂತೆ, ಉಣಲಾದರೆ ಉಡುವ ಚಿಂತೆ, ಉಡಲಾದರೆ ಇಡುವ ಚಿಂತೆ, ಇಡಲಾದರೆ ಹೆಂಡಿರ ಚಿಂತೆ, ಹೆಂಡಿರಾದರೆ ಮಕ್ಕಳ ಚಿಂತೆ, ಮಕ್ಕಳಾದರೆ ಬದುಕಿನ ಚಿಂತೆ, ಬದುಕಾದರೆ ಕೇಡಿನ ಚಿಂತೆ, ಕೇಡಾದರೆ ಮರಣದ ಚಿಂತೆ, ಇಂತೀ ಹಲವು ಚಿಂತೆಯಲ್ಲಿ ಇಪ್ಪವರ ಕಂಡೆನು. ಶಿವನ ಚಿಂತೆಯಲ್ಲಿದ್ದವರೊಬ್ಬರನೂ ಕಾಣೆನೆಂದಾತ ನಮ್ಮ ಅಂಬಿಗರ ಚೌಡಯ್ಯ [ನಿಜ]ಶರಣನು.
--------------
ಅಂಬಿಗರ ಚೌಡಯ್ಯ
ಎನ್ನ ತನುವಿಕಾರದ ಭಯ, ಎನ್ನ ಮನವಿಕಾರದ ಭಯ, ತನುಮನವನಂಡಲೆವ ಧನವಿಕಾರದ ಭಯ ನೋಡಾ. ಹಗಲು ಹಸಿವಿನ ಚಿಂತೆ, ಇರುಳು ವಿಷಯದ ಚಿಂತೆ; ಹಗಲಿರುಳು ಸಾವವೊಡಲನೆ ಸಂತವಿಡುತಿಹ ಚಿಂತೆಯದಲ್ಲದೆ ಸದಾ ಶಿವನ ಧ್ಯಾನತತ್ಪರನಾಗಿ ಶಿವತತ್ವವಿಚಾರದೊಳಗೆ ಇರಲೊಲ್ಲೆನು ನೋಡಾ. ಸುಧೆಯನೊಲ್ಲದೆ ಹಡಿಕೆಗೆ ಮಚ್ಚಿದ ಸ್ವಾನನ ವಿದ್ಥಿಯಂತಾಯಿತ್ತಯ್ಯ. ಅಮೃತಮಯ ಲಿಂಗಸಂಗವನೊಲ್ಲದೆ ಸಂಸಾರಸಂಗಕ್ಕೆ ಮಯ್ಯಾನುವ ಮರುಳುಮನವೆ ನಿನ್ನ ನಾನೇನೆಂಬೆನಯ್ಯಾ?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಣ್ಗೆಡಿಸಿತ್ತು ಮಾಯಾಕಾವಳ, ಕಾಲ್ಗೆಡಿಸಿತ್ತು ಮಾಯಾಕಾವಳ, ತನುಗೆಡಿಸಿತ್ತು ಮಾಯಾಕಾವಳ. ದಿನಕ್ಕೊಮ್ಮೆ ಕತ್ತಲೆಗವಿದರೆ, ಎನಗೆ ಗಳಿಗೆ ಗಳಿಗೆಗೆ ಮಾಯಾತಮಂಧ ಕತ್ತಲೆ. ಸಮುದ್ರಕ್ಕೆ ದಿನಕ್ಕೊಮ್ಮೆ ತೆರೆ ಬಂದರೆ, ಎನ್ನ ಮನವಿಕಾರದ ತೆರೆ ವೇಳೆವೇಳೆಗೆ ಕವಿದವು. ವರುಷವರುಷಕೊಂದು ಜೋಳದ ಬೆಳೆಯಾದರೆ ಎನ್ನ ತನುವಿಕಾರದ ಚಿಂತೆ ಕರ್ಮದ ಬೆಳೆಯು ಸದಾ ಬೆಳೆಯುತಿಪ್ಪುದು. ಈ ಮಾಯಾತಮಂಧವೆಂಬ ವಿದ್ಥಿಗೆನ್ನ ಗುರಿಮಾಡಿ ಬಿಟ್ಹೋಗದಿರು, ತೊಲಗದಿರು. ಕಾಳಿ ಹೊಲೆಯನದಾದಡೇನು, ಬಿರಿದು ಒಡೆಯನದು. ಕರ್ಮದ ಬಾಯಿ ಹೊಲೆಯಾದಡೇನು ಸುಜ್ಞಾನದ ಮರ್ಮವನಿತ್ತು ಸಲಹಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ ? ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ ? ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ ? ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ ? ಕರಸ್ಥಲದೊಳಗೆ ಲಿಂಗವಿರ್ದ ಬಳಿಕ, ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಸತ್ತ ಹೆಣನ ಹೊತ್ತವರೆಲ್ಲಾ ಅಚ್ಚುಗಗೊಂಡರಲ್ಲಾ. ಹೊತ್ತವರೆಲ್ಲಾ ಸತ್ತುದ ಕಂಡು ಮೂರ್ಛೆವೋದರಲ್ಲಾ. ಸುತ್ತಿಬಂದಿದ್ದವರೆಲ್ಲಾ ಹೋಗಿ ಅದ ಮುಟ್ಟಲಮ್ಮರು ನೋಡಾ ! ಮುಟ್ಟದ ಮುನ್ನ ಮೂವರ ಕೆಡಿಸಿತ್ತು. ಸತ್ತ ಪರಿಯ ನೋಡಾ ! ಅದು ಕಾಡಿನಲ್ಲಿ ಉರಿಯದು, ಕಿಚ್ಚಿನಲ್ಲಿ ಬೇಯದು. ಸತ್ತ ಪರಿಯ ನೋಡಾ ! ಕೂಡಲಚೆನ್ನಸಂಗನೆಂಬ ಚಿಂತೆ ಸತ್ತಿತಲ್ಲಾ.
--------------
ಚನ್ನಬಸವಣ್ಣ
ಪರ ಚಿಂತೆ ಎಮಗೇಕಯ್ಯಾ ನಮ್ಮ ಚಿಂತೆ ನಮಗೆ ಸಾಲದೆ ಕೂಡಲಸಂಗಯ್ಯ ಒಲಿದಾನೊ ಒಲ್ಲನೊ ಎಂಬ ಚಿಂತೆ ಹಾಸಲುಂಟು, ಹೊದೆಯಲುಂಟು. 519
--------------
ಬಸವಣ್ಣ
ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ, ಅಂಬುಜಕೆ ಭಾನುವಿನ ಉದಯದ ಚಿಂತೆ, ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ, ಎನಗೆ ನಮ್ಮ ಕೂಡಲಸಂಗನ ಶರಣರ ನೆನೆವುದೆ ಚಿಂತೆ.
--------------
ಬಸವಣ್ಣ
ಕಾಮಿಸಿ ಕಲ್ಪಿಸಿ ಭಾವಿಸಿ ಬರಿದೆ ಬಳಲಿದೆ. ಚಿಂತೆ ಮರುಳುತನಂ ಅದೆಂತು ಬಂದುದನಂತೆ ಕಾಬುದು. ಚಿಂತೆ ಮರುಳುತನಂ ಅಚಿಂತ್ಯ ಸಕಳೇಶ್ವರ ಮಾಡಿದಂತೆ. ಅಂತೆಯಲ್ಲದೆ ಎಂತೂ ಆಗದು ಚಿಂತೆ ಮರುಳುತನಂ.
--------------
ಸಕಳೇಶ ಮಾದರಸ
ಮನವ ನಿಲಿಸಿಹೆನೆಂದು, ಆ ಮನದ ನೆಲೆಯ ಕಾಣದೆ, ಅರುಹು ಮರವೆಗೊಳಗಾಗಿ, ಕಳವಳವ ಮುಂದುಮಾಡಿ, ಚಿಂತೆ ಸಂತೋಷವನೊಡಲುಮಾಡಿ, ಭ್ರಾಂತುಗೊಂಡು ತಿರುಗುವ ಮನುಜರಿರಾ, ನೀವು ಕೇಳಿರೊ. ಮನವ ನಿಲಿಸುವುದಕ್ಕೆ ಶರಣರ ಸಂಗಬೇಕು, ಜನನಮರಣವ ಗೆಲಬೇಕು. ಗುರುಲಿಂಗಜಂಗಮದಲ್ಲಿ ವಂಚನೆಯಿಲ್ಲದೆ, ಮನಸಂಚಲವ ಹರಿದು, ನಿಶ್ಚಿಂತವಾಗಿ ನಿಜವ ನಂಬಿ ಚಿತ್ತ ಸುಯಿದಾನವಾದಲ್ಲದೆ, ಮನದೊಳಗೆ ಲಿಂಗವು ಅಚ್ಚೊತ್ತಿದಂತಿರದೆಂದರು ಬಸವಣ್ಣನ ಶರಣರು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮುಡಿಮೂಡದ ಮುನ್ನ ಪುರುಷನ ಹುಡುಕಲೇಕೆ ? ಮುಡಿಬಂದು ಪುರುಷನ ನೆರೆದ ಬಳಿಕ ಇನ್ನಾವ ಚಿಂತೆ ಏತಕ್ಕೆ? ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗವ ಪೂಜಿಸಿ ಅಂಗವ ಬೇಡಬಾರದಯ್ಯಾ. ಅದೇಕೆಂದಡೆ ಶಿವನು ದೀನನು. ಅದು ಹೇಗೆಂದಡೆ: ದ್ರವ್ಯವೆಲ್ಲವು ಕುಬೇರನ ವಾಸಮಾಡಿ ದೀನವಾಯಿತು. ಹದಿನಾಲ್ಕು ಲೋಕಗೋಸ್ಕರವಾಗಿ ಆ ದ್ರವ್ಯವಿದ್ದು, ಹದಿನಾಲ್ಕು ಲೋಕಕ್ಕೆ ಹೇಗೆ ಮಾಡಲಿ ಎಂದು ಚಿಂತಿಸಿ ಒಂದು ಕೌಪವ ತಂದು ನಮ್ಮ ಗಣಂಗಳ ಮನೆಯಲಿಟ್ಟು ಮಾಯವಾಗಿ, ನ್ಯಾಯಕಿಕ್ಕಿ, ಅಮರನೀತಿಗಳ ಮನೆಯ ಭಂಡಾರವೆಲ್ಲವ ಅವರು ಸಹಜವಾಗಿ ಒಯ್ದರು. ಅದು ಸಾಲದೆ, ನಮ್ಮ ಗಜಪತಿರಾಯನ ಮನೆಯ ಕನ್ನವನಿಕ್ಕಿ ಒಯ್ದು, ಈರೇಳು ಲೋಕವನೆ ಪ್ರತಿಪಾಲನೆಯ ಮಾಡಿ, ಅವರೆಲ್ಲ ಉಂಡ ಮೇಲೆ ನೀವು ಉಂಬಿರಿ. ದಿನದಿನಕ್ಕೆ ಇದೇ ಚಿಂತೆ ನಿಮಗೆ. ನಮ್ಮ ಗಣಂಗಳು ನಿಶ್ಚಿಂತೆಯಲ್ಲಿಪ್ಪರು. ಅದು ಹೇಗೆಂದಡೆ: ದಿನದಿನದ ಈ ಕಾಯಕವ ದಿನದಿನಕೆ ಸರಿಮಾಡಿ ಇಂದಿನ ಕಾಸು ಉದಯಕ್ಕೆ ತಂಗಳೆಂಬರು. ನಾಳಿನ ಚಿಂತೆ ನನಗೇಕೆಂಬರು. ನೀವು ನಾಳಿಗೆ ಬೇಕೆಂದು ಇಟ್ಟುಕೊಂಡು, ನಮ್ಮ ಕರಿಕಾಲಚೋಳನ ಮನೆಯಲ್ಲಿ ಅಡಿಗೆಯ ಮಾಡಿಸಿ ಉಂಡು, ಅದು ಸಾಲದೆ ? ನಮ್ಮ ಮಾದಾರ ಚೆನ್ನಯ್ಯನ ಮನೆಯಲ್ಲಿ ಅಂಬಲಿಯನುಂಡಿರಿ, ಆಗ ಈರೇಳು ಲೋಕಕ್ಕೆ ತೃಪ್ತಿಯಾಯಿತ್ತು. ಇಂತಪ್ಪ ನಮ್ಮ ಗಣಂಗಳ ಉದಾರತ್ವ ಹೇಳಲಿಕ್ಕೆ ಅಸಾಧ್ಯವು. ಇದ ನೀವು ಬಲ್ಲಿರಿಯಾಗಿ, ನಮ್ಮ ಗಣಂಗಳ ಹೃದಯದಲ್ಲಿ ಮನೆಯ ಮಾಡಿಕೊಂಡಿಪ್ಪಿರಿ ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಸಕಲ ಲೋಕಾದಿಲೋಕಂಗಳು ಉದಯ, ಮಧ್ಯಾಹ್ನ, ಸಾಯಂಕಾಲ ಪರಿಯಂತರವು ಒಡಲೋಪಾಧಿಯ ಚಿಂತೆಯಿಂದ ತಾಪತ್ರಯಾಗ್ನಿಯಲ್ಲಿ ಬೇಯುತ್ತಿರ್ಪರು ನೋಡಾ. ಅದೆಂತೆಂದೊಡೆ: ಉದಯಕಾಲಕ್ಕೆ ಹೋರಾಟದ ಚಿಂತೆ, ಮಧ್ಯಾಹ್ನಕಾಲಕ್ಕೆ ಅಶನದ ಚಿಂತೆ, ಸಾಯಂಕಾಲಕ್ಕೆ ವ್ಯಸನದ ಚಿಂತೆ, ಇಂತೀ ತ್ರಿವಿಧ ವ್ಯಸನದಲ್ಲಿ ಮನಮಗ್ನವಾದ ಪ್ರಾಣಿಗಳಿಗೆ ಶಿವಜ್ಞಾನವೆಲ್ಲಿಯದಯ್ಯಾ? ಇಂದಿನ ಚಿಂತೆಯ ಮಾಡುವರೆಲ್ಲ ಹಂದಿಗಳು. ನಾಳಿನ ಚಿಂತೆಯ ಮಾಡುವರೆಲ್ಲ ನಾಯಿಗಳು. ಅದೆಂತೆಂದೊಡೆ: ನೀ ಹುಟ್ಟದ ಮುನ್ನವೆ ತಾಯಿಗರ್ಭದಲ್ಲಿ ನವಮಾಸ ಪರಿಯಂತರವು ನಿನಗೆ ಆಹಾರವ ಕೊಟ್ಟವರಾರು ಹೇಳಾ ಮರುಳೆ? ಅಖಂಡತಂಡ ಶಿಲೆಯೊಳಗಿನ ಮಂಡೂಕಕ್ಕೆ ಆಹಾರವ ಕೊಟ್ಟು ಸಲಹಿದವರಾರು ಹೇಳಾ ಮರುಳೆ? ಕಟ್ಟಿಗಿಯೊಳಗಿನ ಭೃಂಗಕ್ಕೆ ಮಲೆಗಳ ಕೊಟ್ಟು ಸಲಹಿದವರಾರು ಹೇಳಾ ಮರುಳೆ? ಇರುವೆ ಮೊದಲು ಆನೆ ಕಡೆ ಎಂಬತ್ತು ನಾಲ್ಕುಲಕ್ಷ ಜೀವರಾಶಿಯ ಗರ್ಭದಲ್ಲಿ ಹುಟ್ಟಿ ಹುಟ್ಟಿ ಬರುವಲ್ಲಿ ನಿನಗೆ ಆಹಾರವ ಕೊಟ್ಟು ರಕ್ಷಣವ ಮಾಡಿದವರಾರು ಹೇಳಾ ಮರುಳೆ? ಇಂತೀ ಸರ್ವಲೋಕಾದಿಲೋಕಂಗಳಿಗೆ ಶಿವನೇ ಕರ್ತನೆಂದು ತಿಳಿದು ನೋಡಾ ಮರುಳೆ! ಇಂತಪ್ಪ ಯುಕ್ತಿವಿಚಾರದ ಸುಜ್ಞಾನವಿಲ್ಲದೆ ಬರಿಯ ಒಡಲ ಚಿಂತೆಯಲ್ಲಿ ಹೊತ್ತುಗಳೆದು ಸತ್ತು ಹೋಗುವ ಹೇಸಿ ಮೂಳರ ಕಂಡು ನಾಚಿದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ||4
--------------
ಕಾಡಸಿದ್ಧೇಶ್ವರ
ಯೋಗಾಂಗ ಭೋಗಾಂಗ ಜ್ಞಾನಾಂಗ ಈ ತ್ರಿವಿಧವನು ಮರೆದು, ಭಕ್ತಿಯೋಗದ ಮೇಲೆ ನಿಂದು, ವೈರಾಗ್ಯಯೋಗದ ಮೇಲೆ ನಿಂದು, ನಡೆದು ನುಡಿದು ತೋರುವರು ಎಮ್ಮೆ ಶರಣರು, ಗುರುಲಿಂಗಜಂಗಮ ಈ ತ್ರಿವಿಧವನು. ಸುಖ ದುಃಖ ಚಿಂತೆ ಸಂತೋಷವೆಂಬುವಂ ಕಳೆದು, ಉತ್ಪತ್ತಿಸ್ಥಿತಿಲಯವೆಂಬುವ ಸುಟ್ಟು, ದೃಕ್ಕು, [ದರ್ಶನ], ದೃಶ್ಯವೆಂಬ ತ್ರಿಕರಣವ ಏಕವಮಾಡಿ, ಪಿಂಡಾಂಡವಾ ಬ್ರಹ್ಮಾಂಡವೊಂದೆಂಬುದ ಅರಿದು, ಸಂದ ಹರಿದು, ನಿಂದ ನಿಜಾನಂದದಲ್ಲಿ ಹಿಂದುಮುಂದೆಂಬುದನರಿಯದೆ, ನಿಮ್ಮೊಳೊಂದಾದ ಲಿಂಗೈಕ್ಯಂಗೆ ವಂದಿಸಿ ವಂದಿಸಿ ಎನ್ನ ಬಂಧನ ಹರಿಯಿತ್ತು, ನಾನು ಬಟ್ಟಬಯಲಾದೆನಯ್ಯಾ, ಕೂಡಲಸಂಗಮದೇವಾ.
--------------
ಬಸವಣ್ಣ
ಇನ್ನಷ್ಟು ... -->