ಅಥವಾ

ಒಟ್ಟು 26 ಕಡೆಗಳಲ್ಲಿ , 10 ವಚನಕಾರರು , 18 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೂವಿನ ಮೇಲೊಂದು ಚಿಕ್ಕ ಬೆಟ್ಟ ಹುಟ್ಟಿ, ಬೆಕ್ಕಿನ ಮೇಲಾರು ಬೆಟ್ಟ ಹುಟ್ಟಿದವು. ಬೆಟ್ಟದ ಮೇಲಣವರು ಕಲ್ಲನಿರಿಸಿ ಆರೂ ಕಾಣರು ! ಒಂದು ಗಿರಿ ನೂರನಾಲ್ವತ್ತೆಂಟು ಲಕ್ಷ ಮುಖವು. ನಾನೊಂದು ಮುಖದಲಿ ಇದ್ದೇನೆ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪ್ರಸಾದವ ಪಡೆದವರೆಂದು ಬದ್ಧಸಂಕಲ್ಪ ದುರ್ವರ್ತನೆಗಳನೇನೆಂಬೆನಯ್ಯಾ! ಗಣಸಮೂಹದಲ್ಲಿ ಸೌಖ್ಯವಿಲ್ಲೆಂದು ಚಿಕ್ಕ ಬಟ್ಟಲಲ್ಲರ್ಪಿಸಿಕೊಂಡು, ಪೂರ್ವ ಬಳಗಗೂಡಿ ಹಂದಿ ನಾಯಿಯಂತೆ ಒಗೆದಾಡಿ ತಿಂಬುವ ಬೆಂದ ನರಕಿಗಳಿಗೆ ಪ್ರಸಾದವೆಲ್ಲಿ ಹುದಯ್ಯಾ? ಪ್ರಸಾದಿ ಒಮ್ಮೆ ಪ್ರಸಾದವ ಸೇವಿಸಿ, ಒಮ್ಮೆ ಉಚ್ಛಿಷ್ಟಕೂಳ ಸೇವಿಸುವನೆ? ಛೀ ಅದೇತರ ನಡೆನುಡಿ ಅತ್ತ ಹೋಗಿ, ನಮ್ಮ ಗುರುನಿರಂಜನ ಚನ್ನಬಸವಲಿಂಗಶರಣರ ತಿಂಥಿಣಿಯ ಸೋಂಕದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಕ್ಕ ಕೇಳಕ್ಕಾ, ನಾನೊಂದು ಕನಸ ಕಂಡೆ. ಚಿಕ್ಕ ಚಿಕ್ಕ ಕೆಂಜೆಡೆಗಳ ಸುಲಿಪಲ್ಲ ಗೊರವನು ಬಂದೆನ್ನ ನೆರೆದ ನೋಡವ್ವಾ. ಆತನನಪ್ಪಿಕೊಂಡು ತಳವೆಳಗಾದೆನು. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ಣಮುಚ್ಚಿ ತೆರೆದು ತಳವೆಳಗಾದೆನು.
--------------
ಅಕ್ಕಮಹಾದೇವಿ
ಅಂಗ ಸಂಸಾರವಿರಹದೊಳು ಸವೆದು, ಲಿಂಗವು ಅವಗ್ರಹಿಸಿಕೊಂಡ ಮೃತ್ತಿಕಾ ಪಂಜರದೊಳಗೆ, ಭುಜಂಗ ತಲೆಯೆತ್ತಿ ನೋಡಲು, ಥಳಥಳನೆ ಹೊಳೆವ ಮಾಣಕ್ಯದ ಬೆಳಗುಗಳೆಸೆಯೆ ಸದ್ಯೋಜಾತನ ಜಟಾಮಕುಟವ ಸುತ್ತಿರ್ದ ಫಣೀಂದ್ರನಲ್ಲದೆ ಮತ್ತಾರೂ ಅಲ್ಲವೆಂದು ಶಿಖರವ ಮೊದಲುಗೊಂಡಗುಳಿಸಲು, ಸುತ್ತಿರ್ದ ಫಣಿಸೂತ್ರವ ಕಂಡು ಚಕ್ಕನೆ ಕದವ ತೆರೆಯಲು ದೃಷ್ಟಿದೃಷ್ಟವಾದ (ಅ)ನಿಮಿಷನ ಕರಸ್ಥಲವ ಕಂಡು ಧೃಷ್ಟತನದಲ್ಲಿ ಲಿಂಗವ ತೆಗೆದುಕೊಂಡಡೆ ಸಂದು ಕಳಾಸಂಗಳು ತಪ್ಪಿ ಅಸ್ಥಿಗಳು ಬಳಬಳನುದುರಲು ಆತನ ಬೆರಗು ನಿಮ್ಮ ಹೊಡೆದು ಖ್ಯಾತಿಯಾಯಿತ್ತು ನೋಡಯ್ಯಾ, ಅಲ್ಲಮಪ್ರಭುವೆಂಬ ನಾಮ ನಿಮಗೆ ! ಭಕ್ತಿದಳದುಳದಿಂದ ಬಂದಿಕಾರರಾಗಿ ಬಂದು ಹೊಕ್ಕಡೆ ಬದನೆಯ ಕಾಯಿಗಳು ಬಾಣಲಿಂಗವಾಗವೆ ನಮ್ಮ ಬಸವಣ್ಣನ ದೃಷ್ಟಿತಾಗಲು ? ಇದು ಕಾರಣ-ಕೂಡಲಚೆನ್ನಸಂಗನಲ್ಲಿ ಅನಿಮಿಷಪ್ರಭುವಿಂಗೆ ಬಸವಣ್ಣ ಗುರುವಾದ ಕಾರಣ ನಾನು ನಿಮಗೆ ಚಿಕ್ಕ ತಮ್ಮ ಕೇಳಾ ಪ್ರಭುವೆ.
--------------
ಚನ್ನಬಸವಣ್ಣ
ಅಂಗಕ್ಕೆಂದಡೆ ಹಿರಿಯ ಹರಿವಾಣವ ತುಂಬಿ ಬೋನವ ತಾ ಎಂಬರು. ಲಿಂಗಕ್ಕೆಂದಡೆ ಚಿಕ್ಕ ಗಿಣ್ಣಿಲು ತುಂಬಿ ಬೋನವ ತಾ ಎಂಬರು. ಅಂಗವ ಹಿರಿದು ಮಾಡಿ ಲಿಂಗವ ಕಿರಿದು ಮಾಡಿ ಮನೆಯಲ್ಲಿ ಮಡಕೆ ತುಂಬಿ ಬೋನವ ಮಾಡಿ, ಚಿಕ್ಕ ಕುಡಿಕೆ ಗಿಣ್ಣಿಲು ಲಿಂಗಕ್ಕೆ ಬೋನವ ಹಿಡಿವ ಈ ಮಡಕೆಮಾರಿಗಳನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಈ ಪೊಡವಿಯ ಮಡದಿಯ ನಡುನಯನದ ಬೆಡಗಿನ ಬೆಳಗಿನೊಳೆಸೆವಾ ಬಾಳೇಹಳ್ಳಿ ಸಿಂಹಾಸನಾದ್ಥೀಶ ಪೊಡವಿಡಿ ರುದ್ರಮುನಿಸ್ವಾಮಿಗಳ ಕರಕಂಚೋದ್ಭವರಾದ ಚಿಕ್ಕರೇವಣಸಿದ್ಧಸ್ವಾಮಿಗಳು ಎನಿಸಿದರು. ಆ ಚಿಕ್ಕ ರೇವಣಸಿದ್ಧಸ್ವಾಮಿಗಳ ಶಿಷ್ಯ ಗುರುನಂಜಸ್ವಾಮಿ, ಆ ಗುರುನಂಜಸ್ವಾಮಿಗಳ ಶಿಷ್ಯ ರಾಚೋಟಿಸ್ವಾಮಿ, ಆ ರಾಚೋಟಿಸ್ವಾಮಿಗಳ ಶಿಷ್ಯ ನಿಡುಮಾಮಿಡಿ ಕರಿಬಸವಸ್ವಾಮಿ, ಆ ಕರಿಬಸವಸ್ವಾಮಿಗಳ ಶಿಷ್ಯ ಮಲಘಣ ಶಾಂತಸ್ವಾಮಿಗಳು, ಆ ಮಲಘಣದ ಶಾಂತಸ್ವಾಮಿಗಳ ಶಿಷ್ಯ ಜಡೆಶಾಂತಸ್ವಾಮಿಗಳು ಆ ಜಡೆಶಾಂತಸ್ವಾಮಿಗಳ ಶಿಷ್ಯ ಮಹಾಂತಸ್ವಾಮಿಗಳು, ಆತನ ಶಿಷ್ಯ ಮಡಿವಾಳಸ್ವಾಮಿ, ಆತನ ಶಿಷ್ಯ ರಾಚೋಟಿಸ್ವಾಮಿಗಳು, ಆತನ ಶಿಷ್ಯ ಮಹಾಂತಸ್ವಾಮಿ, ಆತನ ಶಿಷ್ಯ ಅತೀತವ ಕೈಕೊಂಡು ಸರ್ವಕ್ಕೆ ಅತೀತನಾದ ಚಿಣಮಗೇರಿ ಚೌಡಾಪೂರ ನಡುಸೀಮಿ ಗುಡ್ಡದ ಯೋಗಿಯೆನಿಸಿದ ಮಹಾಂತಸ್ವಾಮಿಗಳು, ಆತನ ಶಿಷ್ಯ ಮಡಿವಾಳಸ್ವಾಮಿ, ಆತನ ಶಿಷ್ಯ ಮರಿಸ್ವಾಮಿಗಳು, ಆತನ ಶಿಷ್ಯ ಗುರುಬಸವದೇವರು. ಆ ಗುರು ಬಸವದೇವರ ಕನ್ನೆ ಶಿಷ್ಯ ಬಿದನೂರ ಮಡಿವಾಳಾಖ್ಯನು. ಆ ಮಡಿವಾಳಾಖ್ಯನೆಂಬ ನಾಮವಿಡಿದು ನಿರ್ನಾಮಲೀಲಾ ನಟಿಸಬೇಕೆಂಬ ಅರವಿನೊಳಗೆ ಮರವಾಗಿರ್ದಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಅಪ್ಪಾ ಬೊಪ್ಪಾ ಚಿಕ್ಕ ಚೋಹಮಂ ತೊಟ್ಟು ಮುಖಕ್ಕೆ ಹೊತ್ತಿಗೊಂದು ಪರಿಯ ಬಚ್ಚಣೆಯನಿಕ್ಕಿ ಮತ್ತದನು ತಲೆಯಲ್ಲಿ ಹೊತ್ತು, ತಪ್ಪಿ ಹೆಜ್ಜೆಯನಿಕ್ಕಿ ಆಡುತ್ತಿದ್ದ ರೇಕಣ್ಣಪ್ರಿಯ ನಾಗಿನಾಥನಲ್ಲಿ ಹೊತ್ತುಹೋಗದ ಬಹುರೂಪವ.
--------------
ಬಹುರೂಪಿ ಚೌಡಯ್ಯ
ನಿನಗೆ ಮಜ್ಜನಕ್ಕೆರೆವುದಕ್ಕೆ ಮೂಚುಟಾಗಿ ಶ್ರೀಗುರುವಿನ ಪಾದೋದಕವ ಕೊಂಬೆ, ನಿನಗಾರೋಗಣೆಯ ಮಾಡಿಸುವುದಕ್ಕೆ ಮೂಚುಟಾಗಿ ಶ್ರೀಗುರುವಿನ ಪ್ರಸಾದವ ಕೊಂಬೆ. ಎನಗೆಯೂ ನಿನಗೆಯೂ ಸಹಭೋಜನ, ಎನಗೆಯೂ ನಿನಗೆಯೂ ಏಕಾರ್ಥಶಯನ, ನೀನೆನಗೆ ಚಿಕ್ಕ ತಮ್ಮ, ಕೂಡಲಸಂಗಮದೇವಾ.
--------------
ಬಸವಣ್ಣ
ಎನಗೆ ಗುರುವಿನ ಪ್ರಸಾದ, ನಿನಗೆ ಚೆನ್ನನ ಪ್ರಸಾದ, ಎನಗೆಯೂ ನಿನಗೆಯೂ ಸಮಯಾಚಾರ ಸರಿ. ಕೂಡಲಸಂಗಮದೇವಾ, ನೀನೆನಗೆ ಚಿಕ್ಕ ತಮ್ಮ.
--------------
ಬಸವಣ್ಣ
ಅಕ್ಕ ಕೇಳೌ, ನಾನೊಂದು ಕನಸ ಕಂಡೆ. ಅಕ್ಕಿ ಅಡಕೆ ಓಲೆ ತೆಂಗಿನಕಾಯ ಕಂಡೆ. ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವಾ. ಮಿಕ್ಕು ಮೀರಿ ಹೋಹನ ಬೆಂಬತ್ತಿ ಕೈವಿಡಿದೆನು. ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆನು.
--------------
ಅಕ್ಕಮಹಾದೇವಿ
ಬಿಳಿಯ ಕರಿಕೆ, ಕಣಿಗಿಲೆಲೆಯ, ತೊರೆಯ ತಡಿಯ ಮಳಲ ತಂದು, ಗೌರಿಯ ನೋನುವ ಬನ್ನಿರೆ. ಚಿಕ್ಕ ಚಿಕ್ಕ ಮಕ್ಕಳೆಲ್ಲರು ನೆರೆದು ಅನುಪಮದಾನಿ ಕೂಡಲಸಂಗಮದೇವ ಗಂಡನಾಗಬೇಕೆಂದು.
--------------
ಬಸವಣ್ಣ
ಅವ್ವಾ, ಬನ್ನಿರೆ ಚಿಕ್ಕ ಚಿಕ್ಕ ಚಿಕ್ಕ ಚಿಕ್ಕ ಮಕ್ಕಳೆಲ್ಲ ನಮ್ಮಕ್ಕನ ಮನೆಯಲೊಕ್ಕುದನುಂಬುವ. ಬನ್ನಿರೆ ಎಮ್ಮ ಸುಚಿತ್ತ ಕೈಯ ಪಿಡಿದು ನಿಂದ ನಲ್ಲನ ಸುಗಂಧಭಾಜನದಲ್ಲಿ ಕೂಡಿ ಉಂಬುವ. ಬನ್ನಿರೆ ಎಮ್ಮ ಸುಬುದ್ಧಿಯ ಕೈಯ ಪಿಡಿದು ಬಂದ ನಲ್ಲನ ಸುರಸಭಾಜನದಲ್ಲಿ ಕೂಡಿ ಉಂಬುವ. ಬನ್ನಿರೆ ಎಮ್ಮ ನಿರಹಂಕಾರ ಕೈಯ ಪಿಡಿದು ಬಂದ ನಲ್ಲನ ಸುರೂಪಭಾಜನದಲ್ಲಿ ಕೂಡಿ ಉಂಬುವ. ಬನ್ನಿರೆ ಎಮ್ಮ ಸುಮನ ಕೈಯ ಪಿಡಿದು ಬಂದ ನಲ್ಲನ ಸುಸ್ಪರ್ಶನಭಾಜನದಲ್ಲಿ ಕೂಡಿ ಉಂಬುವ. ಬನ್ನಿರೆ ಎಮ್ಮ ಸುಜ್ಞಾನ ಕೈಯ ಪಿಡಿದು ಬಂದ ನಲ್ಲನ ಸುಶಬ್ದಭಾಜನದಲ್ಲಿ ಕೂಡಿ ಉಂಬುವ. ಬನ್ನಿರೆ ಎಮ್ಮ ಸದ್ಭಾವ ಕೈಯ ಪಿಡಿದು ಬಂದ ನಲ್ಲನ ಸುತೃಪ್ತಿಭಾಜನದಲ್ಲಿ ಕೂಡಿ ಉಂಬುವ. ಬನ್ನಿರೆ ಎಮ್ಮ ಕೈಗಳಿಂದೆ ಗುರುನಿರಂಜನ ಚನ್ನಬಸವಲಿಂಗವ ಬಿಡದೆ ಕೂಡಿ ಉಂಬುವ ಸುಖವ ಹೇಳುವರೆ ತೆರಹಿಲ್ಲ ಕಾಣಿರಮ್ಮಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ ವಿಪ್ರರೆಂಬವರು ಮಾತಂಗಿಯ ಮಕ್ಕಳೆಂಬುದಕ್ಕೆ ಇದೇ ದೃಷ್ಟ. ಮತ್ತೆ ವಿಚಾರಿಸಿ ಕೇಳಿದಡೆ ಹೇಳುವೆನು : ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು, ಕಡಿದು ಹಂಚಿ ತಿಂದರಂದು ಗೋಮಾಂಸವ. ಬಿಡದೆ ಅತ್ಯಂತ ಉಜ್ಞಕ್ರಮವೆಂದು ಹೋತನ ಕೊಂದು, ಚಿಕ್ಕ ಚಿಕ್ಕವಾಗಿ ಕಡಿಮೆ ಭಕ್ಷಿಸಿದುದ ಕಂಡು, ಮಿಕ್ಕ ಹದಿನೇಳುಜಾತಿ ವಿಪ್ರರ ಕೈಯಲನುಗ್ರಹವ ಪಡೆದು, ತಿನಕಲಿತರಯ್ಯಾ. ಶ್ವಪಚೋಪಿ ವಿಪ್ರ ಸಮೋ ಜಾತಿಭೇದಂ ನ ಕಾರಯೇತ್| ಅಜಹತ್ಯೋಪದೇಶೀನಾಂ ವರ್ಣನಾಂ ಬ್ರಾಹ್ಮಣೋ ಗುರುಃ|| ಎಂಬುದಾಗಿ, ಕಿರಿಕಿರಿದ ತಿಂದ ದ್ವಿಜರು ನೆರೆದು ವೈಕುಂಠಕ್ಕೆ ಹೋಹರೆ? ನೆರೆಯಲೊಂದ ತಿಂದ ವ್ಯಾಧ ದ್ವಿಜರಿಂದಧಿಕ. `ಭರ್ಗೋ ದೇವಸ್ಯ ಧೀಮಹಿ' ಎಂಬ ದಿವ್ಯಮಂತ್ರವನೋದಿ, ನಿರ್ಬುದ್ಧಿಯಾದಿರಿ. ಶಿವಪಥವನರಿಯದೆ ಬರುದೊರೆವೋದಿರಿ. ಆದಡೀ ನರಕಕ್ಕೆ ಭಾಜನವಾದಿರಿ. ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣಂಗೆ ಸರಿಯೆ ಜಗದನ್ಯಾಯಿಗಳು.
--------------
ಹಾವಿನಹಾಳ ಕಲ್ಲಯ್ಯ
ಚಿಕ್ಕ ಒಂದು ಹೊತ್ತಗೆ, ಬೆನಕನ ಕರಡಗೆಯಯ್ಯಾ, ನೀ ಡುಂಡುಟಿ ಗೊರವನಯ್ಯಾ, ಪುಣ್ಯವೇನಾದಡಾಗಲಿ ಡಕ್ಕೆಯ ಮೇಲೆ ಅಕ್ಕಿಯ ತಳೆದೆನು. ನಮ್ಮ ಕೂಡಲಸಂಗಮದೇವನಲ್ಲದೆ ಅನ್ಯದೈವ ಉಂಟೆನ್ನದಿರು ಕಂಡಾ !
--------------
ಬಸವಣ್ಣ
ನರಸಮುದ್ರವೆಂಬುದೊಂದು ಕೊಳಚೆಯೊಳಗಣ ಚಿಕ್ಕ ಮಹಾಕೊಳಚೆಯೊಳಗೆ ಅಯ್ಯಾ, ಲೋಕ ಬಿದ್ದು ತೇಕಾಡುತ್ತಿದೆ. ಇದರಿಂದ ಹೊಲ್ಲ ; ಕೈಯ ನೀಡು, ಕಪಿಲಸಿದ್ಧಮಲ್ಲಿಕಾರ್ಜುನಾ, ನೀನು.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->