ಅಥವಾ

ಒಟ್ಟು 32 ಕಡೆಗಳಲ್ಲಿ , 19 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನಗೆ ನೀನಿಂಬುಕೊಡುವಲ್ಲಿ, ಸಕಲವ ಪ್ರಮಾಣಿಸುವುದ ಬಿಟ್ಟು ನಿಃಕಲವಸ್ತುವಾಗು. ಶಕ್ತಿಸಮೇತವ ಬಿಟ್ಟು ನಿಶ್ಶಕ್ತಿನಿರ್ಲೇಪವಾಗು. ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದ ಬಿಟ್ಟು ನಿಶ್ಚಿಂತನಾಗು. ಅಂದು ಮಿಕ್ಕಾದ ಭಕ್ತರ ಗುಣವ ನೋಡಿಹೆನೆಂದು ತೊಟ್ಟ ಠಕ್ಕು ಠವಳವ ಬಿಡು. ಸರ್ವ ರಾಗ ವಿರಾಗನಾಗಿ ಸರ್ವಗುಣಸಂಪನ್ನನಾಗಿ, ಜ್ಞಾನಸಿಂಧುಸಂಪೂರ್ಣನಾಗಿ ನಿನ್ನರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ. ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೋಡಿಹೆ, ಇದಕ್ಕೆ ಗನ್ನಬೇಡ, ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನಾ.
--------------
ಮೋಳಿಗೆ ಮಹಾದೇವಿ
ಎನಗೆ ನೀನಿಂಬಕೊಡುವಲ್ಲಿ ಸಕಲವ ಪ್ರಮಾಣಿಸುವದ ಬಿಟ್ಟು, ನಿಃಕಲವಸ್ತುವಾಗು. ಶಕ್ತಿಸಮೇತವ ಬಿಟ್ಟು ನೀ ಶಕ್ತಿ ನಿರ್ಲೇಹವಾಗು. ಚಿತ್ತವ ನೋಡಿಹೆನೆಂಬ ಹೆಚ್ಚು ಕುಂದಬಿಟ್ಟು ನಿಶ್ಚಿಂತನಾಗು. ಅಂದು ಮಿಕ್ಕಾದ ಭಕ್ತರ ಗುಣವ ನೋಡೆಹೆನೆಂದು ಕೊಟ್ಟ ಠಕ್ಕುಠವಾಳವ ಬಿಡು. ಸರ್ವರಾಗ ವಿರಾಗನಾಗಿ, ಸರ್ವಗುಣಸಂಪನ್ನನಾಗಿ, ಜ್ಞಾನಸಿಂಧು ಸಂಪೂರ್ಣನಾಗಿ, ನಿನ್ನ ಅರಿವಿನ ಗುಡಿಯ ಬಾಗಿಲ ತೆರೆದೊಮ್ಮೆ ತೋರಾ. ಎನ್ನಡಿಗೆ ನಿನ್ನ ಗುಡಿಯ ಸಂಬಂಧವ ನೊಡಿಹೆ, ಇದಕ್ಕೆ ಗನ್ನಬೇಡ ಚೆನ್ನ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮಚ್ಚಬೇಡ, ಮರಳಿ ನರಕಕ್ಕೆರಗಿ ಕರ್ಮಕ್ಕೆ ಗುರಿಯಾಗಬೇಡ. ನಿಶ್ಚಿಂತವಾಗಿ ನಿಜದಲ್ಲಿ ಚಿತ್ತವ ಸುಯಿದಾನವಮಾಡಿ, ಲಿಂಗದಲ್ಲಿ ಮನವ ಅಚ್ಚೊತ್ತಿದಂತಿರಿಸಿ ಕತ್ತಲೆಯನೆ ಕಳೆದು, ಬಚ್ಚಬರಿಯ ಬೆಳಗಿನೊಳಗೆ ಓಲಾಡಿ ಸುಖಿಯಾಗೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಹರಿದ ನೀರಿನ ಅಡಿಯ ಕಾಣಬಹುದಲ್ಲದೆ ನಿಂದ ಇಂಗಡಲಿನ ಅಡಿಯ ಕಂಡವರುಂಟೆ? ಚಲನೆಯಿಂದ ತೋರುವ ತೋರಿಕೆಯ ಕಾಣಬಹುದಲ್ಲದೆ ಶಬ್ದ ಮುಗ್ಧವಾದ ಶರಣನ ಚಿತ್ತವ ಭೇದಿಸಬಹುದೆ? ಅದು ಸರಿಹರಿದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 99 ||
--------------
ದಾಸೋಹದ ಸಂಗಣ್ಣ
ಕತ್ತಲೆ ಬೆಳಗೆನಬೇಡ, ಸತ್ಯ ತಾನೆನಬೇಡ, ಚಿತ್ತವ ಸುಯಿಧಾನವ ಮಾಡಿ, ಮೊತ್ತಾದ ಹೆಣ್ಣು ಹೊನ್ನು ಮಣ್ಣು ಗೆದ್ದರೆ ನಿರ್ಮುಕ್ತ , ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಕಂಗಳ ಮುಂದಣ ಗೊತ್ತನರಿದು, ಕಾಮ್ಯದ ಮುಂದಣ ಚಿತ್ತವ ಹರಿದು, ಮಾಡಿಹೆನೆಂಬ ಮಾಟಕೂಟದ ಚಿತ್ತ ನಿಂದಲ್ಲದೆ ಸ್ವಸ್ಥವಿಲ್ಲ. ಹಾಂಗಲ್ಲದೆ ಗುಹೇಶ್ವರಲಿಂಗವ ಕಾಣಬಾರದು_ ಆಯ್ದಕ್ಕಿಯ ಮಾರಯ್ಯಾ.
--------------
ಅಲ್ಲಮಪ್ರಭುದೇವರು
ನಾನರಿದು ಕಂಡೆಹೆನೆಂದಡೆ ಸ್ವತಂತ್ರಿಯಲ್ಲ. ನಿನ್ನ ಭೇದಿಸಿ ಕಂಡೆಹೆನೆಂದಡೆ ವಿಶ್ವಾಸಿಯಲ್ಲ. ಈ ಉಭಯದ ತೆರನ ಹೇಳಾ. ಚಿತ್ತಶುದ್ಧವಾಗಿ ಕಂಡೆಹೆನೆಂದಡೆ, ಆ ಚಿತ್ತವ ಪ್ರಕೃತಿಗೊಳಗುಮಾಡಿದೆ. ನಿನ್ನನರಿದು ಭೇದಿಸಿ ಕಂಡೆಹೆನೆಂದಡೆ, ಅವರ ಮನದ ಧರ್ಮಕ್ಕೊಳಗಾದೆ. ಅಂಧಕ ಅಂಧಕನ ಕೈ ಹಿಡಿದಡೆ, ಅವರೆಲ್ಲಿಗೆ ಹೋಗುವರು, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಮೂಲಾಧಾರ ಮುಂತಾದ ಷಡಾಧಾರಂಗಳಲ್ಲಿ ಆಶ್ರಯವರ್ಣ ದಳವರ್ಣ ಭಾವವರ್ಣ ಆತ್ಮವರ್ಣ ಅಕ್ಷರವರ್ಣ ಸ್ಥಲವರ್ಣಂಗಳ ಕಲ್ಪಿಸಿ, ಭೇದಕ್ರೀಯಿಂದ ಅರಿಯಬೇಕಾಗಿ ಕ್ರೀ ಮೂರು, ಸ್ಥಲವಾರು, ತತ್ವವಿಪ್ಪತ್ತೈದು, ಕಥನ ಮೂವತ್ತಾರು, ಪ್ರಸಂಗ ನೂರೊಂದರಲ್ಲಿ ನಿರ್ವಾಹ. ಈ ಏಕವಸ್ತು ತ್ರಿಗುಣಾತ್ಮಕವಾದ ಸಂಬಂಧ. ಇಂತಿವನರಿತೆಹೆನೆಂದು ಒಂದಕ್ಕೊಂದು ಸಂದನಿಕ್ಕದೆ ಗುರುವಿನ ಕಾರುಣ್ಯವನರಿತು, ಲಿಂಗದಲ್ಲಿ ಚಿತ್ತವ ಮೂರ್ತಿಗೊಳಿಸಿ ಜಂಗಮದಲ್ಲಿ ಸತ್ವಕ್ಕೆ ತಕ್ಕ ಸಾಮಥ್ರ್ಯದಲ್ಲಿ ಭಕ್ತಿಯನೊಪ್ಪಿ ನಿಶ್ಚಯನಾಗಿಪ್ಪುದೆ ಭಕ್ತಿಯ ಅಂಗಕ್ಕೆ ಇಕ್ಕಿದ ಗೊತ್ತು ವಿಶ್ವಸ್ಥಲ ನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 77 ||
--------------
ದಾಸೋಹದ ಸಂಗಣ್ಣ
ಎಂಟು ಯೋಗ ಆರು ಭೇದ ಮೂರು ಬಟ್ಟೆ ಐದು ಮುಟ್ಟು ಈರೈದು ಹಾದಿ ಹದಿನಾರು ಸಂಗ ನಾಲ್ಕು ಮೆಟ್ಟು ಎರಡುಸಂಚಾರ ಒಂದರ ಕಟ್ಟಿನಲ್ಲಿ ಮುಟ್ಟುಮಾಡಿ ನಿಲಿಸಿ, ದೃಷ್ಟದ ಇಷ್ಟದಲ್ಲಿ ಬೈಚಿಟ್ಟು, ಅವರವರ ಸ್ವಸ್ಥಾನದ ಕಟ್ಟಣೆಯಲ್ಲಿ ವಿಶ್ರಮಿಸಿ ಆ ಚಿತ್ತವ ಆ ಚಿತ್ತು ಒಡಗೂಡಿ ಇಪ್ಪುದೆ ಕ್ರಿಯಾಪಥಲಿಂಗಾಂಗಯೋಗ. ಇದನರಿಯದೆ ಮಾಡುವ ಯೋಗವೆಲ್ಲವೂ ತನ್ನಯ ಭವರೋಗ, ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ನಾಮ ಘಟ್ಟಿಸಿಯಲ್ಲದೆ ಕರೆದಡೆ ನುಡಿಯಬಾರದು. ಕ್ರೀ ಶುದ್ಧತೆಯಾಗಿ ನಿಂದಲ್ಲದೆ ಅರಿಯಬಾರದು. ಅರಿವಿಂಗೆ ಆಶ್ರಯಿಸುವುದಕ್ಕೆ ಒಡಲಿಲ್ಲ. ಅರಿವು ಕುರುಹಿನಲ್ಲಿ ವಿಶ್ರಮಿಸಿ ಹಣ್ಣಿನ ಸಿಪ್ಪೆಯ ಮರೆಯಲ್ಲಿ ಭಿನ್ನರುಚಿ ನಿಂದು ಸವಿದಾಗ ಸಿಪ್ಪೆ ನಿಂದು ರಸವೊಪ್ಪಿತ್ತು. ಆ ಚಿತ್ತವ ನಿನ್ನ ನೀನರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಕಾಯದೊಳಗಣ ಚಿತ್ತವ ಭಾವಿಸಿ, ಇದಿರಿಟ್ಟಲ್ಲಿ ಭಾವವೋ, ಜೀವವೋ ? ನಾನೆಂಬುದು ತಾನೋ, ಬೇರೊಂದು ನೆಲೆಯ ಪರಮನೋ ? ಆ ಗುಣ ಸ್ಥೂಲ ಸೂಕ್ಷ್ಮ ಕಾರಣಕ್ಕೆ ಹೊರಗಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಜೀವನ ಬಾಗಿಲಲ್ಲಿ ಭ್ರಮೆಯ ತಡೆದು, ಆತ್ಮನ ಬಾಗಿಲಲ್ಲಿ ಪ್ರಕೃತಿಯ ತಡೆದು, ಪರಮನ ಬಾಗಿಲಲ್ಲಿ ಚಿತ್ತವ ತಡೆದು, ಮಿಕ್ಕಾದ ವಾಯುಗಳ ದಿಸೆಯಿಂದ ಇಂದ್ರಿಯಂಗಳ ತಿಳಿದು, ಇಂತೀ ಜೀವಾತ್ಮ ಪರಮ ತ್ರಿವಿಧಗುಣಂಗಳು ತಲೆದೋರದೆ ಕರ್ಮೇಂದ್ರಿಯ ಭಾವೇಂದ್ರಿಯ ಜ್ಞಾನೇಂದ್ರಿಯ ಇಂತೀ ತ್ರಿವಿಧಸ್ವಾನುಭಾವದಲ್ಲಿ ಅಡಗಿ, ಓಂಕಾರದ ಉಲುಹು ನಷ್ಟವಾಗಿ ಷಡಕ್ಷರ ಪಂಚಾಕ್ಷರ ಮೂಲದ ಉಭಯದ ಮೂಳೆ ಮುರಿದು ಐವತ್ತೊಂದು ಭೇದದ ಸೂತಕದ ಸುಳುಹಡಗಿ ಹಿಂದುಮುಂದಣ ಎಚ್ಚರಿಕೆ ಸುಮ್ಮಖ ತಿರುಗಲಾಗೆನುತ್ತಿದ್ದೆನು. ಕೂಡಲಸಂಗಮದೇವರಲ್ಲಿ ಬಸವಣ್ಣನ ಮುಂದಣ ಎಚ್ಚರಿಕೆ ಕುಂದದಂತೆ ಉಗ್ಗಡಿಸುತ್ತಿದ್ದೆನು.
--------------
ಉಗ್ಘಡಿಸುವ ಗಬ್ಬಿದೇವಯ್ಯ
ಜ್ಯೋತಿಯ ಬೆಳಗಿನಲ್ಲಿ [ನೋಡಿ] ಜ್ಯೋತಿಯ ಪಟವ ಕಾಬಂತೆ, ಕಣ್ಣಿನಿಂದ ಕನ್ನಡಿಯ ನೋಡಿ ಕಣ್ಣ ಕಲೆಯ ಕಾಬಂತೆ, ತನ್ನಿಂದ ತಾ ನೋಡಿ ತನ್ನನರಿಯಬೇಕು. ತನ್ನನರಿಯದವ ನಿಮ್ಮನೆತ್ತಬಲ್ಲನೋ ? ತನ್ನನರಿವುದಕ್ಕೆ ದೃಷ್ಟವ ಕೈಯಲ್ಲಿ ಕೊಟ್ಟು ಕಾಣದುದಕ್ಕೆ ಚಿತ್ತವ ನೆನಹಿಂಗಿತ್ತ. ಚಿತ್ತ ಇಷ್ಟದಲ್ಲಿ ಅಚ್ಚೊತ್ತಿದ ಮತ್ತೆ ದೃಷ್ಟವ ಕಾಬುದಿನ್ನೇನೋ ? ಉರಿಯೊಳಗಣ ಕರ್ಪುರ, ಅನಿಲನೊಳಗಣ ಪಾವಕ, ಶಿಲೆಯುಂಡ ಎಣ್ಣೆ ಅಳತೆ[ಗೆ ಉ]ಂಟೇ ಅಯ್ಯಾ. ಲಿಂಗವ ಮೆಚ್ಚಿದ ಅಂಗಕ್ಕೆ ಜಗದ ಹಂಗಿಲ್ಲ. ಅನಂಗ, ಅತೀತ ನಿಃಕಳಂಕ ಮಲ್ಲಿಕಾರ್ಜುನಲಿಂಗವೇ ತಾನಾದ ಶರಣಂಗೆ.
--------------
ಮೋಳಿಗೆ ಮಾರಯ್ಯ
ಬಿಸಿಲೆಂಬ ಗುರುವಿಂಗೆ ನೆಳಲೆಂಬ ಶಿಷ್ಯ. ನಿರಾಳಲಿಂಗಕ್ಕೆ ಬಯಲೆ ಸೆಜ್ಜೆ, ವಾಯುವೆ ಶಿವದಾರ, ಬೆಳಗೆ ಸಿಂಹಾಸನ. ಅತ್ತಲಿತ್ತ ಚಿತ್ತವ ಹರಿಯಲೀಯದೆ, ಮಜ್ಜನಕ್ಕೆರೆದು ಸುಖಿಯಾದೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೌತಿಕದ ಪಂಚವಿಂಶತಿಗುಣಂಗಳಿಂದಾದ ದೇಹವ ದೇವರೆಂಬರು ; ಆ ದೇಹವು ದೇವರಲ್ಲ ನೋಡಾ. ಸಕಲೇಂದ್ರಿಯಕ್ಕೂ ಒಡೆಯನಾಗಿಹ ಮನವ ದೇವರೆಂಬರು ; ಆ ಮನ ದೇವರಲ್ಲ ನೋಡಾ. ಆ ಮನದಿಂದಾದ ಬುದ್ಧಿಯ ದೇವರೆಂಬರು ; ಆ ಬುದ್ಧಿ ದೇವರಲ್ಲ ನೋಡಾ. ಆ ಬುದ್ಧಿಯಿಂದಾದ ಚಿತ್ತವ ದೇವರೆಂಬರು ; ಆ ಚಿತ್ತ ದೇವರಲ್ಲ ನೋಡಾ. ಆ ಚಿತ್ತದಿಂದಾದ ಅಹಂಕಾರವ ದೇವರೆಂಬರು ; ಆ ಅಹಂಕಾರ ದೇವರಲ್ಲ ನೋಡಾ. ಆ ಅಹಂಕಾರದಿಂದ ಜೀವನಾಗಿ ಅಳಿವ ಜೀವವ ದೇವರೆಂಬರು ; ಆ ಅಳಿವ ಜೀವ ದೇವರಲ್ಲ ನೋಡಾ. ಇವೆಲ್ಲ ಅಳಿವವಲ್ಲದೆ ಉಳಿವವಲ್ಲ ; ದೇವರಿಗೆ ಅಳುವುಂಟೆ ? ಅಳಿವಿಲ್ಲದ ಪರಶಿವತತ್ವವ ತಾನೆಂದರಿದಡೆ, ತಾನೇ ದೇವ ನೋಡಾ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->