ಅಥವಾ
(13) (1) (4) (0) (4) (0) (0) (0) (1) (0) (0) (0) (0) (0) ಅಂ (4) ಅಃ (4) (26) (2) (5) (0) (0) (0) (0) (3) (0) (0) (0) (0) (1) (0) (0) (8) (0) (1) (2) (2) (0) (0) (0) (4) (7) (0) (3) (0) (1) (5) (0) (0) (2) (4) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಅಪ್ಪು ಅಪ್ಪುವ ನುಂಗಿದಂತೆ, ವಿಚಿತ್ರ ಚಿತ್ರದೊಳಡಗಿದಂತೆ, ಮನ ಮಹವ ಕೂಡಿ ಬೆಳಗು ಬೆಳಗನೊಳಕೊಂಡಂತೆ, ತಾನೆಂಬುದೇನೂ ಕುರುಹುದೋರದೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅರಿದೆಹೆನೆಂದು ಕುರುಹಿಟ್ಟು ಇದಿರಿಂಗೆ ಹೇಳುವಾಗ, ಆ ಗುಣ ಅರಿವೋ, ಮರವೆಯೋ ? ಹೋಗಲಂಜಿ, ಹಗೆಯ ಕೈಯಲ್ಲಿ ಹಾದಿಯ ತೋರಿಸಿಕೊಂಬಂತೆ, ತನ್ನನರಿಯದ ಯುಕ್ತಿ, ಇದಿರಿಂಗೆ ಅನ್ಯಬೋಧೆಯುಂಟೆ ? ಈ ಅನ್ಯಬ್ಥಿನ್ನಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅಂಗ ಪಿಂಡದಲ್ಲಿ ತೋರುವ ನೆಲೆ ಆತ್ಮನೋ, ಅರಿವೋ ? ಎಂಬುದ ತಿಳಿದಲ್ಲಿ, ಅರಿದು ಮಾಡುವ ಅರಿಕೆ ಮರೆದಿಹಲ್ಲಿ ಮಗ್ನ. ಉಭಯವಂ ವಿಚಾರಿಸಿ ತೊಲಗಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅಂಗಕ್ಕೆ ಕುರುಹೆಂಬುದೊಂದು ಲಿಂಗ. ಆತ್ಮಂಗೆ ಅರಿವೆಂಬುದೊಂದು ಲಿಂಗ. ಪರುಷ ಲೋಹದಂತೆ ಕೂಡುವನ್ನಬರ ಉಭಯನಾಮ ರೂಪಾಯಿತ್ತು. ಕೂಡಿದ ಮತ್ತೆ ಪರುಷವೆಂಬ ನಾಮವಿಲ್ಲ, ಲೋಹವೆಂಬ ಕುರುಹಿಲ್ಲ. ಹೇಮವೆಂಬ ನಾಮವಾಯಿತ್ತು. ಇಷ್ಟ ಪ್ರಾಣ ಹಾಗಾದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅಕ್ಕರ ರೂಪಾಗಿ ಲೆಕ್ಕವಟ್ಟೆಯ ಕಾಬಂತೆ, ವಸ್ತುಮಯ ರೂಪಾಗಿ, ಭಕ್ತರು ಜಂಗಮದಲ್ಲಿ ಲೆಕ್ಕಕ್ಕೆ ಸಿಕ್ಕಿದೆಯಲ್ಲಾ. ಲಕ್ಷ ಅಲಕ್ಷಂಗಳಿಂದ ನಿರೀಕ್ಷಿಸಿ ತಿಳಿದಲ್ಲಿ ಸಿಕ್ಕಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅರಿಕೆಗೊಡಲಾದವ ನಾನೆಂದು ಇದಿರಿಗೆ ಹೇಳಿ ಹೋರಲೇತಕ್ಕೆ ? ನಿಸ್ಪೃಹನಾದೆನೆಂದು ಕಚ್ಚುಟವ ಕಟ್ಟಿ, ಮನೆಮನೆದಪ್ಪದೆ ಹೋಗಲೇತಕ್ಕೆ? ಮಡಕೆಯ ಕೊಳಕು ನೀರ ಹಿಡಿದಾಗಲೆ ದುರ್ಗುಣ ಕಾಣಬಂದಿತ್ತು. ಇಂತೀ ಇವರುವ ಕಾಬುದಕ್ಕೆ ಮೊದಲೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅವಿರಳಕ್ಕೆ ವಿರಳದ ದ್ವಾರವುಂಟೆ ? ಅರಿದವಂಗೆ ಆತ್ಮನಡಗುವುದಕ್ಕೆ ಬೇರೊಂದೆಡೆ ಉಂಟೆ ? ವಿದ್ಯುಲ್ಲತೆಯಂತೆ, ಬೊಬ್ಬುಳಿಕೆಯಂತೆ, ತಾನಿದ್ದಲ್ಲಿಯೆ ಲೀಯ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅನಲಂಗೆ ಉರಿ ಉಷ್ಣವಿಲ್ಲದೆ, ತೃಣ ಕಾಷ*ಂಗಳ ಸುಡುವ ಪರಿಯಿನ್ನೆಂತು ? ಆತ್ಮಂಗೆ ಅರಿವಿಲ್ಲದಿರೆ, ಬಂಧ ಮೋಕ್ಷ ಕರ್ಮಂಗಳ ಹಿಂಗುವ ಪರಿಯಿನ್ನೆಂತು ? ಇಂತೀ ದ್ವಂದ್ವಂಗಳನರಿದು ಮರೆದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅರ್ಪಿಸುವುದಕ್ಕೆ ಮುನ್ನವೆ ಮನವರಿದು, ಕಂಗಳು ತುಂಬಿ, ಕಂಡ ಮತ್ತೆ ಅರ್ಪಿತವೆಲ್ಲಿ ಅಡಗಿತ್ತು? ಸಂದೇಹವ ಬಿಟ್ಟು ನಿಂದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅರಿದೆನೆಂದು ಎಲ್ಲವ ತೋರದ ಮತ್ತೆ ಅರಿವ ಮರೆದು ನೆರೆ ನೀರನಾಗಿ, ತಿರುಗಿಹೆನೆಂಬ ಭವವೇತಕ್ಕೆ ? ಅರಿದ ಒಡಲಿಂಗೆ ಸುಖದುಃಖಾದಿಗಳೆಲ್ಲವೂ ಸರಿಯೆಂದ ಮತ್ತೆ, ಇನ್ನೊಂದನರಸಲೇತಕ್ಕೆ ? ಇಂತೀ ಅರಿವ ಮರೆದ ಒಡಲು, ನಡುದೊರೆಯಲ್ಲಿ ಬಿದ್ದು ಈಜಲರಿಯದೆ, ಕೈಕಾಲ ಬೆದರಿ ಸತ್ತಂತಾಯಿತ್ತು. ಇಂತಿವರಂಗಕ್ಕೆ ಮೊದಲೆ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅಂಗಲಿಂಗಿಯಾದಲ್ಲಿ, ಜಾಗ್ರದಲ್ಲಿ ಎಡೆಬಿಡುವಿಲ್ಲದಿರಬೇಕು. ಪ್ರಾಣಲಿಂಗಿಯಾದಲ್ಲಿ, ಸ್ವಪ್ನಕ್ಕೆ ನಾನಾ ಪ್ರಕೃತಿಯ ಹಿಂಗಿರಬೇಕು. ಸರ್ವಗುಣಸಂಪನ್ನ ಸಾವಧಾನಿಯಾದಲ್ಲಿ, ಸುಷುಪ್ತಿಯಲ್ಲಿ ಯುಕ್ತಿಗೆಡದಿರಬೇಕು. ಇಂತೀ ತ್ರಿವಿಧಕ್ಕೆ ಒಳಗಹುದಕ್ಕೆ ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅಳಿವುದಕ್ಕೆ ಮುನ್ನವೆ ಉಳಿಯಿತ್ತು ಆತ್ಮ. ಉಳಿದು ಭವದುಃಖಕ್ಕೆ ಒಳಗಾಗದ ಮುನ್ನವೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಅಂಡದಲ್ಲಿಪ್ಪ ತತ್ತಿಯ ಕಂಡು, ಪಿಂಡದಲ್ಲಿಪ್ಪ ಪ್ರಾಣವನರಿದು, ಆರೋಗ್ಯದ ರೋಗವ ಹರಿದು, ಅರೋಚಕ್ಕೆ ಹೊರಗಾಗಿ ನಿಂದುದು, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ