ಅಥವಾ

ಒಟ್ಟು 24 ಕಡೆಗಳಲ್ಲಿ , 16 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ ಪರಂಜ್ಯೋತಿ ತತ್ವ ಬ್ರಹ್ಮಾಂಡದಿಂದತ್ತತ್ತಲಾದ ಘನಕೆ ಘನ ಪರಕೆ ಪರವಾದ ಪರಾಪರವು ತಾನೆ ನೋಡಾ. ಆ ಪರಾಪರವು ತಾನೆ ತತ್ವ ಬ್ರಹ್ಮಾಂಡದೊಳಹೊರಗೆ ಸರ್ವವ್ಯಾಪಕನಾಗಿ, ಪರಿಪೂರ್ಣನಾಗಿ, ಸರ್ವವನು ಹೊದ್ದಿಯೂ ಹೊದ್ಧದ, ಮುಟ್ಟಿಯೂ ಮುಟ್ಟದ ಅಕಳಂಕನು ನೋಡಾ. ಸಪ್ತಕಮಲದ ಎಸುಳುಗಳೊಳಗೆ ಆಕ್ಷರಾತ್ಮಕ ಲಿಂಗವಾಗಿ ಅದ್ವಯನು ನೋಡಾ. ನವಚಕ್ರಾಂಬುಜಗಳ ದಳ ಕುಳ ವರ್ಣಾದಿ ದೇವತೆಗಳ ತೋರಿಕೆಯೇನುಯೇನೂ ಇಲ್ಲದ ನಿತ್ಯ ನಿರಂಜನ ನಿರಾಮಯನಾದ ಶರಣಂಗೆ ನಮೋ ನಮೋಯೆಂಬೆನು. ಆ ನಿರಾಮಯ ವಸ್ತುವೆ ಸಂಗನಬಸವಣ್ಣನು ನೋಡಾ. ಆ ಚಿದದ್ವಯವಾದ ಬಸವಣ್ಣನೇ ಎನ್ನ ಅಂಗಲಿಂಗ, ಎನ್ನ ಪ್ರಾಣಲಿಂಗ, ಎನ್ನ ಭಾವಲಿಂಗ, ಎನ್ನ ಸರ್ವಾಂಗಲಿಂಗವು ಕಾಣಾ. ಎನ್ನ ಷಡಾಧಾರದಲ್ಲಿ ಸಂಬಂಧವಾದ ಷಡಕ್ಷರ ಮಂತ್ರವು ಬಸವಣ್ಣನಾದ ಕಾರಣ, `ಬಸವಲಿಂಗ ಬಸವಲಿಂಗ ಬಸವಲಿಂಗಾ'ಯೆಂದು ಜಪಿಸಿ ಭವಾರ್ಣವ ದಾಂಟಿದೆನು ಕಾಣಾ. ಬಸವಣ್ಣನೇ ಪತಿಯಾಗಿ, ನಾನೇ ಸತಿಯಾಗಿ ಶರಣನಾದೆನು ಕಾಣಾ. ಬಸವನೇ ಲಿಂಗವಾದ ಕಾರಣ ನಾನಂಗವಾದೆನು. ಕರ್ತೃವೇ ಬಸವಣ್ಣ, ಭೃತ್ಯನೇ ನಾನು. ಒಡೆಯನೇ ಬಸವಣ್ಣ, ಬಂಟನೇ ನಾನಾದಕಾರಣ ದೇಹವೇ ನಾನು, ದೇಹಿಯೇ ಬಸವಣ್ಣನಯ್ಯ. ಇದು ಕಾರಣ, ಎನ್ನ ನಡೆವ ಚೇತನ, ಎನ್ನ ನುಡಿವ ಚೇತನ, ಎನ್ನ ನಡೆ ನುಡಿಯೊಳಗಿಪ್ಪ ಸರ್ವ ಚೈತನ್ಯಾತ್ಮಕ ಬಸವಣ್ಣನಯ್ಯ. ಇಂತಪ್ಪ ಬಸವಣ್ಣನ ಶ್ರೀಪಾದದಲ್ಲಿ ಅಡಗಿ ನಾನು ಶರಣನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸ್ಥಲವಿವರಂಗಳ ವಿಚಾರಿಸುವಲ್ಲಿ ಘಟಕ್ಕೆ ಕರ ಚರಣ ನಾಸಿಕ ನಯನ ಕರ್ಣ ಮುಂತಾದ ಅವಯವಂಗಳೊಳಗಾದ ಭೇದವ ಘಟ ಗಬ್ರ್ಥೀಕರಿಸಿಕೊಂಬತೆ ಆ ಘನವ ಚೇತನ ವಸ್ತು ಹೊತ್ತಾಡುವಂತೆ, ಇದು ಸ್ಥಲವಿವರ ಸದ್ಯೋಜಾತಲಿಂಗವನರಿವುದಕ್ಕೆ.
--------------
ಅವಸರದ ರೇಕಣ್ಣ
ಎನ್ನ ವ್ರತದ ನೇಮ ಅಡಿ ಆಕಾಶದೊಳಗಾದ ವ್ರತಸ್ಥರು ಕೇಳಿರೆ. ನಮ್ಮ ನಿಮ್ಮ ವ್ರತಕ್ಕೆ ಸಂಬಂಧವೇನು ? ಲೆಕ್ಕವಿಲ್ಲದ ವ್ರತ, ಕಟ್ಟಳೆಯಿಲ್ಲದ ನೇಮ, ಇವನೆಷ್ಟು ಮಾಡಿದಡೆ ಏನು ? ತನ್ನ ಮನೆಗೆ ಕಟ್ಟಳೆ ಇರಬೇಕು. ಎನ್ನ ಲಿಂಗವಂತೆಗೆ ಸೂತಕಮಾಸ ತಡೆದಲ್ಲಿ, ಗರ್ಭವೆಂಬುದು ತಲೆದೋರಿದಲ್ಲಿಯೆ ಆತ್ಮ ಚೇತನಿಸುವನ್ನಕ್ಕ ಆಕೆಯ ಉದರದ ಮೇಲೆ ನಿಹಿತ ಲಿಂಗವಿರಬೇಕು. ನವಮಾಸ ತುಂಬಿ ಆಕೆಯ ಗರ್ಭದಿಂದ ಉಭಯಜಾತತ್ವವಾಗಲಾಗಿ ಚೇತನ ಬೇರಾದಲ್ಲಿ ಗುರುಕರಜಾತನಮಾಡಬೇಕು. ಇಂತೀ ಇಷ್ಟರ ಕ್ರೀಯಲ್ಲಿ ಸಂತತ ವ್ರತ ಇರಬೇಕು. ಕಂಥೆಯ ಬಿಡುವನ್ನಕ್ಕ ಶರಣರ ಕೈಯಲ್ಲಿ ಅಂತಿಂತೆಂಬ ಶಂಕೆಯ ಹೊರಲಿಲ್ಲ. ಇಂತೀ ವ್ರತದಲ್ಲಿ ನಿಶ್ಶಂಕನಾಗಬಲ್ಲಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ಸಮಶೀಲವಂತನೆಂಬೆ.
--------------
ಅಕ್ಕಮ್ಮ
ಇಷ್ಟಲಿಂಗವ ಬಿಟ್ಟು ಸೃಷ್ಟಿಯ ಪ್ರತಿಷೆ*ಗೆ ಶರಣೆಂದಡೆ, ಆ ಇಷ್ಟಲಿಂಗದ ಚೇತನ ತೊಲಗಿ, ಭ್ರಷ್ಟನಾಗಿ ಕೆಟ್ಟು, ನರಕಕ್ಕಿಳಿದನೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಅಂಗವುಂಟಾದಲ್ಲಿ ಲಿಂಗವನರಿಯಬೇಕು. ಲಿಂಗವುಂಟಾದಲ್ಲಿ ಚೇತನ ಭೂತಹಿತವನರಿಯಬೇಕು. ಆ ಅರಿವು ನೆಲೆಗೊಂಡಲ್ಲಿ ಒಳಗು ಹೊರಗ ವಿಚಾರಸಲಿಲ್ಲ. ಮಹಾರ್ಣವ ಬಲುಜಲವನಿಂಬಿಟ್ಟುಕೊಂಡಂತೆ. ಶರಣಸತಿಯಲ್ಲಿ ಲಿಂಗಕುಲದಲ್ಲಿ ಜಂಗಮಪದದಲ್ಲಿ ಗುರುಸ್ಥಲದಲ್ಲಿ ಕಂಗಳ ಮುಂದೆ ಮಹೇಂದ್ರಜಾಲ ನಿಂದಂತೆ, ನಿಂದ ನಿಲವೆ ಸದ್ಭಕ್ತನಿರವು; ಕಾಲಾಂತಕ ಭೀಮೇಶ್ವರಲಿಂಗದ ನಿಜವಾಸದ ಬೆಳಗು.
--------------
ಡಕ್ಕೆಯ ಬೊಮ್ಮಣ್ಣ
ಐದು ಇಲ್ಲವಾದಂದಿಗಲ್ಲದೆ ಜಗದೊಳಗಾರಿಗೂ ಬಡತನವಲ್ಲದಿಲ್ಲ. ಐದು ಉಳ್ಳನ್ನಕ್ಕ ಸಕಲಜೀವನಕ್ಕೆ ಚೇತನ. ಮಾರಯ್ಯಪ್ರಿಯ ಅಮಲೇಶ್ವರಲಿಂಗ ಉಳ್ಳನ್ನಕ್ಕ ಧನಮನಸಂಪನ್ನರು.
--------------
ಆಯ್ದಕ್ಕಿ ಲಕ್ಕಮ್ಮ
ಸರ್ವಘಟಂಗಳಲ್ಲಿ ಸುಖದುಃಖ ಅನುಭವಿಸುವ ಆ ಆತ್ಮ ಒಂದೋ, ಎರಡೋ? ಸರ್ವಯೋನಿಗಳಲ್ಲಿ ಕೂಡುವ ಶಿಶ್ನೆಯ ಸುಖ ಒಂದೋ, ಎರಡೋ ? ಆತ್ಮ ಒಂದೆಂದಡೆ ಘಟಭೇದಕ್ಕೆ ಭಿನ್ನವಾಗಿಪ್ಪುದು. ಆತ್ಮ ಹಲವೆಂದಡೆ ಚೇತನ ಸ್ವಭಾವ ಏಕವಾಗಿಪ್ಪುದು. ಆ ಘಟ ಆತ್ಮನ ಕೂಟ ಎಂತೆಯಿದ್ದಿತ್ತು ಅಂತೆ ಸುಖವಿದ್ದಿತ್ತು. ಯೋನಿಯ ಘಟ ಸಾಕಾರ ಎಂತೆಯಿದ್ದಿತ್ತು ಅಂತೆಯಿದ್ದಿತ್ತು ಶಿಶ್ನೆಯ ಯೋಗ. ಆತ್ಮನ ಘಟಸಂಗ ಜಾತಿಯ ಸುಜಾತಿಯ ಕೂಟಸ್ಥ ವಿಶ್ವಾಸದ ಭ್ರಾಂತಿಯ ಭ್ರಾಮಕಯೆಂತಿದ್ದಿತ್ತು ಅಂತೆಯಿದ್ದಿತ್ತು ಆತ್ಮ. ಇಂತೀ ಘಟದ ಸಾಕಾರವಡಗಿ ತೋರುವ ಆತ್ಮನ ಪರಿ. ಭಿನ್ನ ಇಂದ್ರಿಯಂಗಳ ಹಲವು ಸಂಚಿನ ಯೋನಿ. ಅದ ಸಂಧಿಸಿ ಕೂಡಿಹೆನೆಂಬ ಅರಿಕೆಯ ತೃಷ್ಣೆಯ ಶಿಶ್ನೆ ತಲಹಗೆಟ್ಟಲ್ಲಿ, ಭ್ರಾಂತಿನ ಭ್ರಮೆಯ ಸೂತಕ ಹೋಯಿತ್ತು, ಕಾಮಧೂಮ ಧೂಳೇಶ್ವರನ ತಾನು ತಾನಾದ ಕಾರಣ.
--------------
ಮಾದಾರ ಧೂಳಯ್ಯ
ಇಂತು ಐದುನಾಡಿಗಳೊಳಗಾದ ಇಪ್ಪತ್ತೇಳು ನಾಡಿ, ಬಾಹ್ಯದಲ್ಲಿ ಆಡುವವು. ಜೀವಗತಿಯಾಗಿ ಅಸ್ಥಿನರನಾಳ ಮಧ್ಯದಲ್ಲಿ ಅಂತ್ಯನಾಡಿ. ಆತ್ಮ ಚೇತನ ಅಸ್ಥಿಯೊಳಗಾದ ಸಂದುಸಂದಿನ ಮಜ್ಜೆಯ ಮಧ್ಯದಲ್ಲಿ ಸ್ವಪ್ನನಾಡಿ. ಇಂತೀ ಉಭಯನಾಡಿ ಸುಷುಪ್ತಿಯ ಸುಷುಪ್ತಿಯಲ್ಲಿ ಪರವಶನಾದ ಪರಬ್ರಹ್ಮನೋಡಾ, ಮರುಳಶಂಕರಪ್ರಿಯ ಸಿದ್ಧರಾಮೇಶ್ವಲಿಂಗವು.
--------------
ವೈದ್ಯ ಸಂಗಣ್ಣ
ಕರ್ಪರದ ಕರದಲ್ಲಿ ಇದ್ದ ಮೂಜಗವೆಲ್ಲವು ತಪ್ಪತಿ ಸಿದ್ಧಾಂತವನು ಭೇದಿಸಿ, ಶಬ್ದಬ್ರಹ್ಮವು ಮೀರಿದತ್ತ ಬ್ರಹ್ಮಾಂಡವು ಇತ್ತೆರವು ಕಂದೊಳಲು ಮೂಲೋಕಕೆ. ಅಯ್ಯ ಕೇಳಯ್ಯ, ನಿನ್ನಮೃತಹಸ್ತವನೊಮ್ಮೆ ಒಯ್ಯನೆ ನೀಡಿ ಪರಮಪದದಲ್ಲಿ ಕೈಯೈದರಲ್ಲಿ ಮುಖವು, ನಯನದಲ್ಲಿ ಜಿಹ್ವೆ ತಾನುಣುತಪ್ಪ ಕರಮುಖದಲ್ಲಿ ಚೋದ್ಯವ ಬೆಳಗಿನಲ್ಲಿ ಗುರುಕರಣವಿಡಿಪ್ಪ ಭಾವ ಸಜ್ಜನ ಶುದ್ಧ ಸದ್ಭಕ್ತರ ಇಂದ್ರಿಯಂ ಐದು ನಿನ್ನುಂಬ ಜಿಹ್ವೆಯಾಗಿ ಸಂದಣಿಪ ಕರಣ ನಿನ್ನಯ ಚೇತನ. ಇಂತು ಭಕ್ತಂಗೆ ಪ್ರಾಣವು ಶೂನ್ಯ ನಿನಗೀಗ ಅಂತರಿಪ ಕಾಯವಿಲ್ಲದ ಪರಿಯನು, ಇಂತು ವಿಚಾರಿಸುವಡೆ ಭಕ್ತ ಕಾರಣ ಪರಶಿವನು ಸಂತತಂ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆರು ದರುಶನ ಹದಿನೆಂಟು ಜಾತಿವೊಳಗಾದ ಜೀವನಂಗಳಿಗೆ, ಕುಡಿವ ನೀರು, ಬೇಯಿಸುವ ಬೆಂಕಿ, ಅಡಗುವ ಧರೆ ಒಂದೆನಬಹುದೆ? ಸುಕ್ಷೇತ್ರ ವಾಸಂಗಳಲ್ಲಿ ಮೌಕ್ತಿಕರತ್ನ ಮಲಯಜ ಹಿಮಜಲ ಮುಂತಾದ ಅಚೇತನ ಚೇತನ ವಸ್ತು ಕುಂಭಿನಿಯಲ್ಲಿ ವಿಶೇಷ ವಾಸಂಗಳಲ್ಲಿ ಹುಟ್ಟಿದುದ ಕಂಡುಕೊಂಡು, ಮತ್ತೆ ಮನೆಮಾರಿ ಒಡೆಯಂಗೆ ಸರಿಯಿಲ್ಲಾ ಎಂದು ಅಕ್ಕನ ಕೊಂಡುಬಂದು ಡಕ್ಕೆಯ ಬಾರಿಸುತ್ತಿದ್ದೇನೆ, ಕಾಲಾಂತಕ ಭೀಮೇಶ್ವರಲಿಂಗವಲ್ಲದೆ ಇಲ್ಲಾ ಇಲ್ಲಾಎಂದು.
--------------
ಡಕ್ಕೆಯ ಬೊಮ್ಮಣ್ಣ
ಭೂತಹಿತವುಳ್ಳನ್ನಕ್ಕ ಇಷ್ಟಲಿಂಗಪೂಜೆ. ಸರ್ವರ ಚೇತನ ಭಾವವನರಿವನ್ನಕ್ಕ ಭಾವಲಿಂಗಪೂಜೆ. ಸರ್ವಜೀವಂಗಳಲ್ಲಿ ದಯವುಳ್ಳನ್ನಕ್ಕ ಪ್ರಾಣಲಿಂಗಪೂಜೆ. ಇಂತೀ ತ್ರಿವಿಧಭೇದಂಗಳಲ್ಲಿ ತ್ರಿವಿಧಾತ್ಮಭರಿತನಾಗಿ, ಕ್ರೀಯಲ್ಲಿ ತ್ರಿವಿಧ, ಭಾವದಲ್ಲಿ ತ್ರಿವಿಧ, ಜ್ಞಾನದಲ್ಲಿ ತ್ರಿವಿಧ. ತನ್ನ ತ್ರಿವಿಧವ ತಾನರಿದು, ಅನ್ಯಭಿನ್ನವಿಲ್ಲದೆ ನಿಂದುದು, ಪ್ರಾಣಲಿಂಗಸಂಬಂಧ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳು ತಲೆದೋರುವುದಕ್ಕೆ ಮುನ್ನವೆ, ಯುಗಜುಗಂಗಳು ಪ್ರಮಾಣಿಸುವುದಕ್ಕೆ ಮುನ್ನವೆ, ನಾಲ್ಕು ವೇದ ಹದಿನಾರುಶಾಸ್ತ್ರ ಇಪ್ಪತ್ತೆಂಟು ದಿವ್ಯಪುರಾಣಂಗಳು ಕುರುಹುಗೊಳ್ಳುವುದಕ್ಕೆ ಮುನ್ನವೆ, ನಿರಾಳ ಸುರಾಳವೆಂಬ ಬಯಲು ಅವಗವಿಸುವುದಕ್ಕೆ ಮುನ್ನವೆ, ಬ್ರಹ್ಮಾಂಡವೆಲ್ಲಿ ಆಯಿತ್ತು ? ವಿಷ್ಣುವಿನ ಚೇತನ ಎಲ್ಲಿ ಹುಟ್ಟಿತ್ತು ? ಮಹಾರುದ್ರನ ದ್ವೇಷ ಎಲ್ಲಿ ಹುಟ್ಟಿ, ಎಲ್ಲಿ ಅಡಗಿತ್ತು ಹೇಳಾ ? ನಾದಬಿಂದುಕಳೆಗೆ ಅತೀತವಪ್ಪ ಲಿಂಗವ ಭೇದಿಸಿ ವೇಧಿಸಲರಿಯದೆ, ಭಾವಭ್ರಮೆಯಿಂದ ನಾನಾ ಸಂದೇಹಕ್ಕೆ ಒಳಗಾಗಿ, ಜೀವ ಪರಮನ ನೆಲೆಯ ಕಂಡೆಹೆನೆಂದು ಆವಾವ ಠಾವಿನಲ್ಲಿ ಕರ್ಕಶಗೊಂಬವಂಗೆ, ಪ್ರಾಣಲಿಂಗಿಯೆಂಬ ಭಾವ ಒಂದೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜೀವಾತ್ಮನಳಿದು ಪರಮಾತ್ಮನಾಗಬೇಕೆಂಬಲ್ಲಿ ಆ ಪರಮಾತ್ಮನ ಪರವಶದಲ್ಲಿ ಬೆರೆಸಬೇಕೆಂಬುದು ಅದಾವಾತ್ಮ ? ಸ್ಥೂಲ ಸೂಕ್ಷ್ಮ ಕಾರಣ ಇಂತೀ ತನುತ್ರಯಂಗಳಲ್ಲಿ ಕೀಳ ಬಿಟ್ಟು ಮೇಲ ಬೆರಸಬೇಕೆಂಬುದು ಅದಾವಾತ್ಮ ? ಹಿಂದೆ ಮಾಡಿದ ಕರ್ಮವ ಇಂದರಿದು ಮುಂದಣ ಮುಕ್ತಿ ಎಂಬುದು ಅದಾವಾತ್ಮ ? ತಿತ್ತಿಯಲ್ಲಿ ಹೊಕ್ಕ ವಾಯು ಒತ್ತಿದಡೆ ಹೋಗಿ ಎತ್ತಿದಡೆ ತುಂಬಿ ಮತ್ತೆ ಇರಿಸಿದಡೆ ಸತ್ತಹಾಗೆಯಿಪ್ಪುದು ಅದಾವಾತ್ಮ ? ಮೃತ ಘಟ, ಚೇತನ ಘಟಂಗಳಲ್ಲಿ ಹೊರಳಿ ಮರಳುವುದು ಅದಾವಾತ್ಮ ? ಇಂತೀ ಗುಣದ ವಾಯುಧಾರಣದಿಂದ ಅಷ್ಟಾಂಗಯೋಗ ಕರ್ಮಂಗಳ ಮಾಡುವ ಯೋಗಿಗಳೆಲ್ಲರೂ ಮುಕ್ತರಪ್ಪರೆ ? ಭೂನಾಗ ಭೂಮಿಯೊಳಗಿದ್ದು ಉಸುರಿಂಗೆ ಉಬ್ಬಸವಿಲ್ಲದಂತೆ ಜಲಚರ ಜಲದಲ್ಲಿದ್ದು ಆ ಜಲವ ನಾಸಿಕ ಬಾಯಿಗೆ ಹೊಗಲೀಸದಂತೆ ನೇತ್ರ ಶ್ರೋತ್ರಂಗಳಲ್ಲಿ ಜಲವೆ ಮನೆಯಾಗಿ ಇಪ್ಪ ತೆರ. ಆವಾವ ಜಾತಿಗೂ ಆ ವಿಷಯಗೋತ್ರ ಲಕ್ಷಣಭೇದ. ಸಾಧಕ ಸಾಧನೆಗಳಿಂದ ಅಸಾಧ್ಯವ ಸಾಧಿಸಬಾರದು. ಅಸಾಧ್ಯ ವೇದ್ಯವಾದವ, ಕರ್ಮಕಾಂಡಿಯಲ್ಲ ತ್ರಿವಿಧಮಲಕ್ಕೆ ಸಲ್ಲ, ತಥ್ಯಮಿಥ್ಯವಿಲ್ಲ. ಹೆಚ್ಚು ಕುಂದೆಂಬ ಶರೀರಕ್ಕೆ ಚಿತ್ತದ ಭಾರದವನಲ್ಲ. ಸದ್ಭಕ್ತರ ಸದಮಲಯುಕ್ತರ ಸರ್ವವಿರಕ್ತರ ಷಟ್‍ಸ್ಥಲಸಂಪನ್ನರ ಸರ್ವಾಂಗಲಿಂಗಿಗಳ ಅಂಗದಲ್ಲಿ ನಿಜ ಹಿಂಗದಿಪ್ಪ ಆತ ನಿರಂಗ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು.
--------------
ಪ್ರಸಾದಿ ಭೋಗಣ್ಣ
ಸಂಚಿತ ಪ್ರಾರಬ್ಧ ಆಗಾಮಿಗಳೆಂಬ ತ್ರಿಸಂಚವನರಿತು, ಸ್ಥೂಲಸೂಕ್ಷ್ಮಕಾರಣವೆಂಬ ತನುತ್ರಯವನರಿತು, ಭಕ್ತಿಜ್ಞಾನವೈರಾಗ್ಯವೆಂಬ ಭಿತ್ತಿಯ ಕಂಡು, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಚತುಷ್ಟಯವ ಕಂಡು, ರಂಸ ಗಂಧ ಶಬ್ದ ಸ್ಪರ್ಶಂಗಳಲ್ಲಿ, ದಶವಾಯು ಅಷ್ಟಮದ ನವದ್ವಾರಂಗಳಲ್ಲಿ, ಶೋಕ ಮೋಹ ರಾಗ ವಿರಾಗಂಗಳಲ್ಲಿ, ಇಂತಿವರಲ್ಲಿ ಆತ್ಮನ ನಾನಾ ಗುಣಭೇದಂಗಳಲ್ಲಿ, ಹಿಡಿವುದ ಹಿಡಿದು, ಬಿಡುವುದ ಬಿಟ್ಟು, ಒಡಗೂಡುವುದ ಒಡಗೂಡಿ, ಮಹಾನಿಜ ಸಾಧ್ಯವಾದಲ್ಲಿ, ಕಾಯದ ಅಳಿವು, ಜೀವದ ಭವ ಎರಡಳಿವನ್ನಕ್ಕ, ಅಂಗಕ್ಕೆ ಆಚಾರ, ಮನಕ್ಕೆ ಅರಿವು, ಅರಿವಿಂಗೆ ಒಂದು ಕುರುಹು. ಆ ಕುರುಹು ನಿಃಪತಿಯಹನ್ನಕ್ಕ, ಶೂಲದ ಮೇಲಣ ಘಟ ಚೇತನ ಹೋಹನ್ನಕ್ಕ, ಅಭಿಲಾಷೆಯಿಂದ ಕೆಲವರ ಬೋಧಿಸಬೇಡ. ಇಂತೀ ಬಿಡುಮುಡಿಗಳಲ್ಲಿ ಕಳೆದುಳಿದ ಮಹಾತ್ಮಂಗೆ ಹಿಂದುಮುಂದಿಲ್ಲ, ಸಂದುಸಂಶಯವಿಲ್ಲ. ಪನ್ನಗಂಗೆ ತಲೆ ಬಾಲವಲ್ಲದೆ, ತನ್ನಲ್ಲಿ ಉದಿಸಿದ ಕಾಳಕೂಟಕ್ಕುಂಟೆ, ತಲೆ ಬಾಲವೆಂಬ ಭೇದ? ಅರಿವನ್ನಕ್ಕ ಸ್ಥಲ, ಅರಿವು ಕರಿಗೊಂಡಲ್ಲಿ ಪರಿಪೂರ್ಣ. ಉಭಯದೊಡಲಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಸಿವು ತೃಷೆ, ಚೇತನ ಅಚೇತನಾದಿಗಳಿಗೆಯೂ ಉಂಟು ಸ್ಥಾವರ ಚರಾದಿಗಳಿಗೆಲ್ಲಕೂ ಉಂಟು. ಆತ್ಮನರಿವಿನ ಸಂಬಂಧ ಎಳ್ಳಂತುಟೂ ಇಲ್ಲ. ಅದುಪಕಾಯದಂತೆ ತೋರಿ ಅಡಗುವ ಭೇದ ಏಣಾಂಕಧರ ಸೋಮೇಶ್ವರಲಿಂಗದಲ್ಲಿ.
--------------
ಬಿಬ್ಬಿ ಬಾಚಯ್ಯ
ಇನ್ನಷ್ಟು ... -->