ಅಥವಾ

ಒಟ್ಟು 377 ಕಡೆಗಳಲ್ಲಿ , 55 ವಚನಕಾರರು , 311 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವರ್ಗ ಪಟ್ಟಣದಲ್ಲಿ ಎರಡೆಂಟು ಕಳೆಗಳನು ಹದುಳ ಪಟ್ಟಣಮಾಡಿ ಒಪ್ಪಿತೋರಿ ಸಮತೆ ಅದ್ಥಿಕಾರದ ಸುಮತಿಯಾದುದು. ಗ್ರಾಮ ಭ್ರಮೆಗೆಟ್ಟುದೈ ಬಿಡು ಜ್ಯೋತಿಮತಿರ್ಮಯವೈ. ಆನಂದ ಪಾತ್ರೆಯ ಸಮತೆ ತೈಲವನೆರೆಯೆ ಬೆಳಗು ಪ್ರಭೆಯಾಗಿ ದೆಸೆದೆಸೆಗೆವರಿದು, ಅತಿಶಯದ ನಿತ್ಯ ಕಪಿಲಸಿದ್ಧಮಲ್ಲಿಕಾರ್ಜುನನ ಎಯ್ದಿದ ಬೆಳಗು ಸಮತೆಯಾದೆ.
--------------
ಸಿದ್ಧರಾಮೇಶ್ವರ
ವಿಷಮ ವಿಷಯ ಗಾಳಿಯಲ್ಲಿ ದೆಸೆಗೆಟ್ಟೆನಯ್ಯಾ ತಂದೆ. ಆಮಿಷ ರೋಷಂಗಳೆನ್ನುವ ಕಾಡಿಹವು. ಶಾಶ್ವತ ನಿತ್ಯ ನಿತ್ಯ ನೀನೆ ನಿಜಪದವನೀಯಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ತಾಮಸ ಸಂಬಂಧ ಕನಿಷ್ಠಂಗೆ ಹುಸಿ ಜಾಗ್ರದಿಟದಂತೆ ತೋರುಗು. ರಾಜನ ಸಂಬಂಧ ಮಧ್ಯಮಂಗೆ ಹುಸಿ ತೂರ್ಯ ದಿಟದಂತೆ ತೋರುಗು. ಸಾತ್ವಿಕ ಸಂಬಂಧ ಉತ್ತಮಂಗೆ ದಿಟ ತಾನೆ ತಾನಾಗಿ ನಿಜ ನಿತ್ಯವಾಗಿರ್ದುದು, ಸಂದೇಹವಿಲ್ಲ. ಇದು ಸಚ್ಚಿದಾನಂದ ನಿತ್ಯ ಪರಿಪೂರ್ಣ ತೂರ್ಯಾತೀತವಪ್ಪ ತತ್ತ್ವ ಇಂತುಂಟೆಂದು ತಿಳಿದ ತಿಳಿವು ನೀನೇ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಇಂದೆನ್ನ ಮನೆಗೆ ಒಡೆಯರು ಬಂದಡೆ ತನುವೆಂಬ ಕಳಶದಲುದಕವ ತುಂಬಿ, ಕಂಗಳ ಸೋನೆಯೊಡನೆ ಪಾದಾರ್ಚನೆಯ ಮಾಡುವೆ. ನಿತ್ಯ ಶಾಂತಿಯೆಂಬ ಶೈತ್ಯದೊಡನೆ ಸುಗಂಧವ ಪೂಸುವೆ. ಅಕ್ಷಯ ಸಂಪದವೆಂದರಿದು ಅಕ್ಷತೆಯನೇರಿಸುವೆ. ಹೃದಯಕಮಲ ಪುಷ್ಪದೊಡನೆ ಪೂಜೆಯ ಮಾಡುವೆ. ಸದ್ಭಾವನೆಯೊಡನೆ ಧೂಪವ ಬೀಸುವೆ. ಶಿವಜ್ಞಾನ ಪ್ರಕಾಶದೊಡನೆ ಮಂಗಳಾರತಿಯನೆತ್ತುವೆ. ನಿತ್ಯತೃಪ್ತಿಯೊಡನೆ ನೈವೇದ್ಯವ ಕೈಕೊಳಿಸುವೆ. ಪರಿಣಾಮದೊಡನೆ ಕರ್ಪೂರ ವೀಳೆಯವ ಕೊಡುವೆ. ಪಂಚಬ್ರಹ್ಮದೊಡನೆ ಪಂಚಮಹಾವಾದ್ಯವ ಕೇಳಿಸುವೆ. ಹರುಷದೊಡನೆ ನೋಡುವೆ, ಆನಂದದೊಡನೆ ಕುಣಿಕುಣಿದಾಡುವೆ, ಪರವಶದೊಡನೆ ಹಾಡುವೆ, ಭಕ್ತಿಯೊಡನೆ ಎರಗುವೆ, ನಿತ್ಯದೊಡನೆ ಕೂಡಿ ಆಡುವೆ. ಚೆನ್ನಮಲ್ಲಿಕಾರ್ಜುನಾ, ನಿಮ್ಮ ನಿಲವ ತೋರಿದ ಗುರುವಿನಡಿಯಲ್ಲಿ ಅರನಾಗಿ ಕರಗುವೆ.
--------------
ಅಕ್ಕಮಹಾದೇವಿ
ಮಾಡಿದ ಮಾಟವನರಿಯದ ಭಕ್ತ. ಕೂಡಿದ ಕೂಟವನರಿಯದ ಭಕ್ತ. ಮಾಟ ಕೂಟವೆಂಬ ಕೋಟಲೆಯನುಳಿದ ನಿಸ್ಸಂಗತ್ವ ನಿರಾಭಾರಿ ನಿಸ್ಸೀಮ ನಿರ್ದೇಹಿ ನಿಜದಲ್ಲಿ ಅಡಗಿದ ನಿತ್ಯ ಮುಕ್ತನಯ್ಯಾ ಭಕ್ತನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುಲಿಂಗಜಂಗಮಾರ್ಚನೆಯ ಕ್ರಮವ ದಯೆಯಿಂದ ಕರುಣಿಪುದು ಸ್ವಾಮಿ. ಕೇಳೈ ಮಗನೆ : ತಾನಿದ್ದ ಊರಲ್ಲಿ ಗುರುವು ಇದ್ದಡೆ ನಿತ್ಯ ತಪ್ಪದೆ ದರುಶನವ ಮಾಡುವುದು. ಗುರುಪೂಜೆಯ ಮಾಡುವಾಗ ಆ ಗುರುವಿನೊಳಗೆ ಲಿಂಗ-ಜಂಗಮವುಂಟೆಂದು ಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಗುರುಪೂಜೆ. ಲಿಂಗಪೂಜೆಯ ಮಾಡುವಾಗ ಆ ಲಿಂಗದೊಳಗೆ ಜಂಗಮ-ಗುರುವುಂಟೆಂದುಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಲಿಂಗಪೂಜೆ. ಇನ್ನು ಜಂಗಮದ ಪೂಜೆ ಮಾಡುವಾಗ ಆ ಜಂಗಮದೊಳಗೆ ಗುರು-ಲಿಂಗವುಂಟೆಂದು ಭಾವಿಸಿ ತನು-ಮನ-ಧನವನೊಪ್ಪಿಸಿ ಅರ್ಚಿಸಿದ್ದುದೆ ಜಂಗಮಪೂಜೆ. ಈ ತ್ರಿವಿಧಮೂರ್ತಿ ಭಕ್ತನ ತ್ರಿವಿಧ ತನುವಿಗೋಸ್ಕರವಾಗಿ ಇಷ್ಟ ಪ್ರಾಣ ಭಾವಲಿಂಗಸ್ವರೂಪವಾಗಿಹರೆಂದು ನಿರೂಪಿಸಿದಿರಿ ಸ್ವಾಮಿ. ಆ ತ್ರಿವಿಧಲಿಂಗದ ಪೂಜೆಯ [ಕ್ರಮವ] ಕರುಣಿಪುದು ಎನ್ನ ಶ್ರೀಗುರುವೇ. ಕೇಳೈ ಮಗನೆ : ಇಷ್ಟಲಿಂಗದ ಪೂಜೆಯ ಮಾಡುವಾಗ ಆ ಇಷ್ಟಲಿಂಗದೊಳಗೆ ಪ್ರಾಣಲಿಂಗ ಭಾವಲಿಂಗವುಂಟೆಂದು ಭಾವಿಸಿ ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಇಷ್ಟಲಿಂಗದಪೂಜೆ. ಪ್ರಾಣಲಿಂಗದ ಪೂಜೆಯ ಮಾಡುವಾಗ ಆ ಪ್ರಾಣಲಿಂಗದೊಳಗೆ ಇಷ್ಟಲಿಂಗ ಭಾವಲಿಂಗವುಂಟೆಂದು ಭಾವಿಸಿ ಭಾವ-ಮನ-ಕರದೊಳಗಿರಿಸಿ ಪೂಜಿಸುವುದು ಪ್ರಾಣಲಿಂಗದಪೂಜೆ. ಭಾವಲಿಂಗದ ಪೂಜೆಯ ಮಾಡುವಾಗ ಆ ಭಾವಲಿಂಗದೊಳಗೆ ಇಷ್ಟಲಿಂಗ ಪ್ರಾಣಲಿಂಗವುಂಟೆಂದು ಭಾವಿಸಿ ಕರ-ಮನ-ಭಾವದೊಳಗಿರಿಸಿ ಪೂಜಿಸುವುದು ಭಾವಲಿಂಗದಪೂಜೆ. ಸಾಕ್ಷಿ : 'ಏಕಮೂರ್ತಿಸ್ತ್ರಯೋ ಭಾಗಾಃ ಗುರುರ್ಲಿಂಗಂತು ಜಂಗಮಃ | ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ ||' ಎಂದುದಾಗಿ, ತ್ರಿವಿಧವು ಒಂದೇ ಎಂದರಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಲಿಂಗಮುದ್ರೆಯ ಕ್ಷೇತ್ರದೊಳಗೊಂದು ಬಾಳೆಯ ಬನವಿಪ್ಪುದು. ಆ ಬನಕೊಂದು ಏಳು ಸೋಪಾನದ ಬಾವಿಯಿಪ್ಪುದು. ಆ ಬಾವಿಯ ಉದಕವನು ಎತ್ತುವ ಮನುಜರಿಲ್ಲದೆ, ಸತ್ವಕೈಯಿಂದೆತ್ತಿ ಸುತ್ತಲಿಕ್ಕೆ ಸೂಸದೆ ನಿವೇದಿಸಿಕೊಂಡರೆ ನಿತ್ಯ ಫಲವು ಸವಿಚಿತ್ರವಾಗಿಪ್ಪುದು. ಒಡೆಯ ಬಂಟರ ನಡೆಯಲ್ಲದೆ ನೋಡಿರೆ ಪರಿಣಾಮಪರವಲ್ಲ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣಂಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ವೇದ ವೇದಂಗಳೆಲ್ಲ ಶಿವನ ಹೊಗಳಿ ನಿರ್ಮಲವಾದವು ನೋಡಾ `ಓಂ ನಮಃ ಸೋಮಾಯ ಚ ರುದ್ರಾಯ ಚ' ಎಂದು ವೇದವಾಕ್ಯ ನೋಡಾ. `ನಮಸ್ತಾಮ್ರಾಯ ಚಾರುಣಾಯ ಚ' ಎಂದು ಪಂಡಿತಮುಖಪ್ರಸಿದ್ಧ ನೋಡಾ. `ನಮಃ ಶೃಂಗಾಯ ಚ ಪಶುಪತಯೇ ಚ' ಎಂದು ವೇದಾಧ್ಯಾಯಿಗಳರಿಕೆ ನೋಡಾ. `ನಮಃ ಶಿವಾಯ ಚ ಶಿವತರಾಯ ಚ' ಎಂದು ಕಪಿಲಸಿದ್ಧಮಲ್ಲಿಕಾರ್ಜುನನ ಪಂಚಮುಖದಲ್ಲಿ ನಿತ್ಯ ನಿತ್ಯ ಘೋಷ ನೋಡಾ, ಕೇದಾರಯ್ಯಾ.
--------------
ಸಿದ್ಧರಾಮೇಶ್ವರ
ನಿತ್ಯ ಚಿಲುಮೆಯ ಕೃತ್ಯಂಗಳಾದಲ್ಲಿ ತೃಣ ಕಾಷ್ಠ ವಿದಳ ಮೊದಲಾದ ಸಂಗ್ರಹಂಗಳಲ್ಲಿ ಸಂದೇಹ ಮಾತ್ರವಿಲ್ಲದೆ ಮನ ನಂಬುವನ್ನಬರ ಸೋದಿಸಬೇಕು. ಅದು ಆಚಾರವೆ ಪ್ರಾಣವಾಗಿರ್ಪ ರಾಮೇಶ್ವರಲಿಂಗಕ್ಕರ್ಪಿತ.
--------------
ಅಕ್ಕಮ್ಮ
ಕತ್ತಲೆ ಬೆಳಗೆಂಬುದಿಲ್ಲ ನಿತ್ಯನಾದವಂಗೆ, ಚಿತ್ತ ಪರಚಿತ್ತವೆಂಬುದಿಲ್ಲ ವಸ್ತುವಿನ ನೆಲೆಯ ಕಂಡವಂಗೆ. ನಿತ್ಯ ಅನಿತ್ಯವೆಂಬುದಿಲ್ಲ ಕರ್ತೃ ತಾನಾದವಂಗೆ. ಈ ಮೂರರ ಗೊತ್ತುವಿಡಿದು ನಿಶ್ಚಿಂತನಾಗಿ ನಿರ್ವಯಲನೈದುವ ಶರಣರ ಪಾದಕ್ಕೆ ಶರಣೆಂದು ಸುಖಿಯಾದೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಸೇವ್ಯಗುರುವಿನ ಮಹಾಪ್ರಸಾದವನನುಭವಿಸಿ, ತಾನೇ ಗುರುತತ್ತ್ವವಾದ ಮಹಾಪ್ರಸಾದಿಗೆ, ಬೇರೆ ಜ್ಞಾನವುಂಟೇ? ಅಪರಿಚ್ಛಿನ್ನ ವಾಙ್ಮನಕ್ಕಗೋಚರ ಪರಾನಂದರೂಪ ನಿತ್ಯ ತೃಪ್ತ ನಿಜಮುಕ್ತನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ದಶದಿಕ್ಕುಗಳಿಂದ ರೂಹಿಸಬಾರದಾಗಿ, ಕಾಲಂಗಳಿಂದ ಕಲ್ಪಿಸಬಾರದು. ಕಾಲಂಗಳಿಂದ ಕಲ್ಪಿಸಬಾರದಂಥ ಅಖಂಡ ಚಿನ್ಮಾತ್ರ ಸ್ವರೂಪನಾದ ಶಿವನ ಸ್ವಾನುಭಾವಜ್ಞಾನದಿಂ ಸಾದ್ಥಿಸಿ ಕಂಡ ಶಾಂತ ಸ್ವಯಂಜ್ಯೋತ ಸ್ವರೂಪನಾದ ಶರಣ. ಅಂಗಸಂಗವಿಲ್ಲದೆ ನಿಸ್ಸಂಗಿಯಾದ ಕಾರಣ ಉಪಮಿಸಬಾರದು. ಕಡೆ ಮೊದಲಿಲ್ಲದಾಕಾಶವು ಖೇಚರಾದಿಗಳಿಂದ ಲೇಪವಿಲ್ಲದಂತೆ ನಿತ್ಯ ನಿಜ ಜೈತನ್ಯಾಕಾರ ರೂಪನಾಗಿಹನು, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣನು.
--------------
ಸ್ವತಂತ್ರ ಸಿದ್ಧಲಿಂಗ
ಸಂಸಾರ ಸಂಸಾರ, ಕಾಳಗತ್ತಲೆ ಕಾಳಗತ್ತಲೆ. ಕರ ಹಿರಿದು ಕರ ಹಿರಿದು, ಎಚ್ಚತ್ತಿರು ಎಚ್ಚತ್ತಿರು ಜ್ಞಾನಧನಕ್ಕೆ. ಎಚ್ಚತ್ತಿರು ಎಚ್ಚತ್ತಿರು ಇಂದ್ರಿಯಗಳ್ಳರಿಗೆ. ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ್ಠಂತಿ ತಸ್ಕರಾಃ | ಜ್ಞಾನರತ್ನಾಪಹಾರಾಯ ತಸ್ಮಾತ್ ಜಾಗ್ರತ ಜಾಗ್ರತ. ಜನ್ಮ ದುಃಖಂ ಜರಾ ದುಃಖಂ ನಿತ್ಯಂ ದುಃಖಂ ಪುನಃ ಪುನಃ | ಸಂಸಾರಸಾಗರೋ ದುಃಖಂ ತಸ್ಮಾತ್ ಜಾಗ್ರತ ಜಾಗ್ರತ || ಎಂದುದಾಗಿ, ಸಲೆ ಜೀವಿತಗೊಂಡ ಸೊಡ್ಡಳ ಆಳು ಭಲಾ ಭಲಾ ಎನ್ನುತ್ತಿರಾ.
--------------
ಸೊಡ್ಡಳ ಬಾಚರಸ
ನಿತ್ಯ ತೃಪ್ತನಿಗೆ ಹಸಿವಿನ ಭಯವುಂಟೇ?. ಸತ್ಯ ಜ್ಞಾನಿಗೆ ಅಜ್ಞಾನದ ಭಯವುಂಟೇ?. ವಾತ ಪಿತ್ತ ಶ್ಲೇಷ್ಮ ನಷ್ಟವಾದವಂಗೆ ತಾಪತ್ರಯಾದಿಗಳ ಭಯವುಂಟೇ?. ಸ್ವಯಂಜ್ಯೋತಿಯ ಬೆಳಗನುಳ್ಳಾತನು ಚಂದ್ರಸೂರ್ಯಾದಿಗಳ ಬೆಳಗನಾಶ್ರಯಿಸುವನೆ?. ನಿಜದಿಂದ ತನ್ನ ತಾನರಿದು, ತಾನು ತಾನಾದತನು, ಮಾಯಾದ ಗಜಬಜೆಯ ಹುಸಿಗೆ ಬೆದರುವನೆ ಮಹಾಶರಣನು?, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಂಗವನರಿಯದೆ ಗುರುಭಕ್ತಿಯ ಮಾಡಲೊಪ್ಪಿದೆನು. ಮನವನರಿಯದೆ ಲಿಂಗಪೂಜೆಯ ಮಾಡಲೆಸವುತಿರ್ದೆನು. ಪ್ರಾಣವನರಿಯದೆ ಜಂಗಮದಾಸೋಹವ ಮಾಡಲು ಪ್ರಕಾಶವಾದೆನು. ಸತ್ತುಚಿತ್ತಾನಂದಕೆ ನಿತ್ಯ ಅಂಗ ಮನ ಪ್ರಾಣ ನಿರಂತರ ಶೋಭನ ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->