ಅಥವಾ

ಒಟ್ಟು 380 ಕಡೆಗಳಲ್ಲಿ , 36 ವಚನಕಾರರು , 277 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತು ಮಾಣಿಕ್ಯವ ನುಂಗಿ, ಜ್ಯೋತಿ ಕತ್ತಲೆಯ ನುಂಗಿ ಆಳು ಆಯ್ದನ ನುಂಗಿ ಉಗುಳಲಿನ್ನೆಂತೊರಿ ಮಥನವಿಲ್ಲದ ಸಂಗ, ಮರಣವಿಲ್ಲದ ಉದಯ, ಅಳಲಿಲ್ಲದ ಶೋಕ ಸಮರಸದಲ್ಲಿ! ಉದಯದ ಬೆಳಗನು ಮದಗಜ ಒಳಕೊಂಡು ಮಾವತಿಗನ ನುಂಗಿ ಉಗುಳದಲ್ಲಾ! ಸದಮದ ಭರಿಕೈಯೊಳಗೆ ಈರೇಳು ಭುವನವನು ಒದರಿ ಹಾಯ್ಕಿ ತಾನೆ ನಿಂದುದಲ್ಲಾ! ಸದಮಲಜಾÕನಸಂಪನ್ನ ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣಂಗೆ ಸ್ವಯವಾಯಿತ್ತು
--------------
ಚನ್ನಬಸವಣ್ಣ
ಗಿಳಿಯ ಗರ್ಭದಲ್ಲಿ ಮಾರ್ಜಾಲ ಹುಟ್ಟಿ ಹಾವಿನ ತಲೆಯ ಮುಟ್ಟಲು ಹೆಡೆಯನೆಗೆದು ಮಾಣಿಕವ ಕಚ್ಚಿ ಎರಡುದಾರಿಯ ಕಟ್ಟಿ ಆಡಲು ಪುರದ ಜನರು ಭೀತಿಗೊಂಡು ನೋಡುವ ಸಮಯದಲ್ಲಿ ಮಾಣಿಕ ಹಾವ ನುಂಗಿ ಜನರ ಹೊಯ್ದು ಒಯ್ಯಲು, ಗಿಳಿ ಸತ್ತು ಗುರುನಿರಂಜನ ಚನ್ನಬಸವಲಿಂಗ ತಾನೆಯಾಯಿತು.
--------------
ದೇಶಿಕೇಂದ್ರ ಸಂಗನಬಸವಯ್ಯ
ಬೆಟ್ಟದ ತುದಿಯ ಮೇಲೆ ಮುಟ್ಟಿ ಕೂಗುವ ಕೋಗಿಲೆಯ ಕಂಡೆನಯ್ಯ. ಆ ಕೋಗಿಲೆಯ ಇರುವೆ ನುಂಗಿ, ಆ ಇರುವೆಯ ನಿರ್ವಯಲು ನುಂಗಿ, ಆ ನಿರ್ವಯಲ ತಾನು ತಾನೇ ನುಂಗಿತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹದಿನಾರಂಗುಲದುದ್ದ ಸರ್ಪನ ವಿಷ ಕೆಟ್ಟು ಎರಡು ಕಾಲನಾಕಾಶದಲೂರಿ ನಿಂದಿತ್ತು. ಬಹುಮುಖದ ಪಕ್ಷಿ ಏಕಮುಖವಾಗಿ ಚಂಚುಪುಟದಲ್ಲಿರ್ದ ರತ್ನಪಕ್ಷಿಯ ನುಂಗಿ ರತ್ನ ಕೆಟ್ಟಿತ್ತು. ಸೌರಾಷ್ಟ್ರ ಸೋಮೇಶ್ವರನಲ್ಲಿ ಅರಸುವ ಬನ್ನಿರೆ, ಸುಜ್ಞಾನಭರಿತರು.
--------------
ಆದಯ್ಯ
ದೇಶಕ್ಕೆ ಹೋಗುವ ಮಾರ್ಗದಲ್ಲಿ ಒಬ್ಬ ಭಾಷೆಗಳ್ಳ ಕುಳಿತು ಕಂಡಕಂಡವರ ಹಾಸ್ಯ ಮಾಡುತಿಪ್ಪ ನೋಡಾ. ಇದು ಕಾರಣ ಹೆತ್ತ ತಾಯ ಶಿಶುವು ನುಂಗಿ ಆ ಭಾಷೆಗಳ್ಳನ ಕೊಂದು, ದೇಶಕ್ಕೆ ಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನೀರ ನೆಳಲನೆ ಕಡಿದು, ಮೇರುವೆಂಬುದ ನುಂಗಿ, ಶಾರದೆಯೆಂಬವಳ ಬಾಯ ಕಟ್ಟಿ, ಕಾರ ಮೇಘದ ಬೆಳಸ ನೀರ ಹರಿ ನುಂಗಲು ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತು. ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು, ನೀರ ಹೊಳೆಯವರೆಲ್ಲರ ಕೊಡನೊಡೆದವು. ಕಾರೆಯ ಮುಳ್ಳೆರ್ದು ಕಲಿಗಳನಟ್ಟಿ ಸದೆವಾಗ, ಸೋರುಮುಡಿಯಾಕೆ ಗೊರವನ ನೆರೆದಳು. ಬಳ್ಳು ಆನೆಯ ನುಂಗಿ, ಹೊಳೆ (ಒಳ್ಳೆ ?) ಸಮುದ್ರವ ಕುಡಿದು, ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ, ಅತ್ತೆ ಅಳಿಯನ ಕೂಡಿ ಕೋಡಗವ ಹಡೆದಲ್ಲಿ, ಹತ್ತಿರಿರ್ದ ಹಾವಾಡಿಗನನು ಅದು ನುಂಗಿತ್ತು! ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ, ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು, ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ, ಕಟ್ಟಿದಿರ ಕರ್ಪುರದ ಜ್ಯೋತಿಯಂತೆ!
--------------
ಅಲ್ಲಮಪ್ರಭುದೇವರು
ಐವತ್ತೆರಡೆಸಳಿನ ಸ್ಥಾವರಗದ್ದುಗೆಯ ಮೇಲೆ ಪರಂಜ್ಯೋತಿಲಿಂಗವ ಕಂಡೆನಯ್ಯ. ಆ ಲಿಂಗದೊಳಗೆ ಅನಂತಕೋಟಿ ನೋಮಸೂರ್ಯರ ಬೆಳಗು ನೋಡಾ. ಆ ಬೆಳಗ ನೋಡಹೋಗದ ಮುನ್ನ, ಅದು ಎನ್ನ ನುಂಗಿ, ಬೆಳಗು ತನ್ಮಯವಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸತ್ತವರು ಸಾಯದವರ ನುಂಗಿ, ಸಾಯದವರು ಸತ್ತವರ ನುಂಗಿ, ಈ ಉಭಯರು ಎತ್ತಹೋದರೆಂಬುದ ನೀ ಬಲ್ಲೆ, ನಾನರಿಯೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಗುಡಿಗೊರವ ಗುಡಿಸಿ ಕಣ್ಣು ಕೆಂಪಗಾಗಿ ಜಟ್ಟಿಂಗ ಬೇತಾಳನ ನುಂಗಿ, ಬೇತಾಳ ಜಟ್ಟಿಂಗನ ನುಂಗಿ ತಲೆ ನರೆಗೂದಲ ನುಂಗಿ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆಜ್ಯಲೋಕದಲ್ಲಿ ಅಬಲೆ ಅಮೃತಕೊಡನನೆ ಹೊತ್ತು ಸದಮದಜ್ಞಾನಿಯಾಗಿ ತಂ ರೂಪಿನಾ ದಾಯೆ ದಾಯವ ನುಂಗಿ ಬಣ್ಣ ಬಣ್ಣವ ನುಂಗಿ ಸರ ಸರಯ ಮೇಲೆ ಉತ್ಕøಷ್ಟದಾ, ಐಲೋಕಂ ಮೇಲೆ ಆ ಕೊಡನನಿಳುಹಲ್ಕೆ ಕೊಡನೊಡದು ಅತ್ಯಂತ ಪ್ರವಾಹದಾ ನುಡಿಯ ಗಡಣವ ಮೀರಿ ಅಕ್ಷರದ್ವಯದ ಮೃಡನೊಡನೆ ಓಲಾಡಿದೆ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ದಕ್ಷಿಣದ್ವಾರದ ವೃಕ್ಷದ ತಂಪಿನಲ್ಲಿ ಸ್ವಯಂಜ್ಯೋತಿ ಉರಿವುದ ಕಂಡೆ. ದೀಪ ಕೆಟ್ಟು ವೃಕ್ಷವಳಿದು ದಕ್ಷಿಣದ್ವಾರವ ದಾಂಟಿ ಉತ್ತರದ್ವಾರದ ಬಾಗಿಲ ಬಿಯ್ಯಗ ತೆಗೆದಲ್ಲಿ ನಾದಮೂರುತಿಲಿಂಗವ ಕಂಡೆ. ಮುಟ್ಟಿ ಪೂಜಿಸಿ ಹೋದಾತನ ನೆಟ್ಟನೆ ನುಂಗಿ, ತಾ ಬಟ್ಟಬಯಲಾಯಿತ್ತು ನೋಡಾ, ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು.
--------------
ಆದಯ್ಯ
ಮಾಯೆಯಿಂದಾದ ಸಂಸಾರದಡವಿಯೊಳಗೆ ತಿರಿಗಿ ತಿರಿಗಿ ಘಾಸಿಯಾಗಿ, ಈಷಣತ್ರಯವೆಂಬ ಮೋಹಿನಿಯ ಕೈವಶವಾಗಿ, ಅರಿಗಳೊಡನೆ ಪುದುವಾಳಾಗಿ, ಆಶೆಯಾಮಿಷ ತಾಮಸಂಗಳಿಂದ ನೊಂದು, ತಾಪತ್ರಯಗಳಿಂದ ಬೆಂದು, ಸಂಸಾರ ಸರ್ವಮುಖವಾಗಿ ನುಂಗಿ ಉಗುಳುತ್ತಿರಲೆಂತಕ್ಕೆ ನಿಮ್ಮ ನೆನಹೆಂಬ ಕಿಚ್ಚು ಭವಾರಣ್ಯವ ಸುಡಲು, ಕರ್ಮದ ಕೈಬೆಂದು ಮಾಯಾಪಾಶವುರಿದು, ಮಲ ನಿರ್ಮಲವಾಗಿ, ಬಿಂದು ಭುವನವ ಹೊದ್ದದೆ, ತೀರೋಧಾನ ನಿರೋಧಾನವೆಯ್ದಿ, ನಿಮ್ಮಲ್ಲಿ ಅಚ್ಚೊತ್ತಿದಂತಿರಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಹುತ್ತದೊಳಗಳ ಹಾವು ಹದ್ದಿನ ಹೊಟ್ಟೆಯೊಳಗಳ ತತ್ತಿ ನುಂಗಿತ್ತು. ಗಿಡುಗನ ಉಡು ನುಂಗಿ, ಹೊಡೆವವನ ದಡಿ ನುಂಗಿತ್ತು. ಹಾವನು ಹದ್ದಿನ ತತ್ತಿಯ, ಗಿಡುಗನ ಉಡುವ, ಹೊಡೆವವನ ಡೊಣ್ಣೆಯ ಬಾಯಿಲ್ಲದ ಇರುಹೆ ನುಂಗಿತ್ತು ಕಂಡೆ. ಸದಾಶಿವಮೂರ್ತಿಲಿಂಗವು ಬಚ್ಚಬಯವಾಯಿತ್ತು.
--------------
ಅರಿವಿನ ಮಾರಿತಂದೆ
ಮತ್ಸ್ಯ ಹೊಳೆಯ ನುಂಗಿ, ಮೊಸಳೆ ಮಡುವ ನುಂಗುವಾಗ ಅಡಗಿರ್ದು ನೋಡಿ ಕಂಡೆ. ಕೊಡಗೂಸು ಅಡಗುವ ಠಾವ, ಒಡಗೂಡಿದಲ್ಲದೆ ಕಾಣಬಾರದು, ಅರ್ಕೇಶ್ವರಲಿಂಗವನರಿವುದಕ್ಕೆ.
--------------
ಮಧುವಯ್ಯ
ಅಪ್ರಶಿಖಾಮಂಡಲದಲ್ಲಿ ಅಮೃತತೃಪ್ತಿಯೆಂಬ ಅಂಗನೆಯ ಉದರದಲ್ಲಿ ಚಿತ್‍ಶಿಖಿಯೆಂಬ ಕಿಚ್ಚು ಹುಟ್ಟಿ ಮೃತ್ಯುಗಳ ಮೊತ್ತವ ಸಂಹರಿಸಿ ತತ್ ತ್ವಂ ಅಸಿಯೆಂಬ ಪದವ ನುಂಗಿ ಪರಾಪರವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->