ಅಥವಾ

ಒಟ್ಟು 90 ಕಡೆಗಳಲ್ಲಿ , 27 ವಚನಕಾರರು , 83 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗ್ಘವಣಿ ಸುಯಿದಾನವಾದ ಶರಣಂಗೆ, ತನು ಸುಯಿದಾನವಾಗಬೇಕು. ತನು ಸುಯಿದಾನವಾದ ಶರಣಂಗೆ ಮನ ಸುಯಿದಾನವಾಗಬೇಕು. ಮನ ಸುಯಿದಾನವಾದ ಶರಣಂಗೆ ಪ್ರಾಣದ ಮೇಲೆ ಲಿಂಗ ಸಯವಾಗಬೇಕು. ಪ್ರಾಣದ ಮೇಲೆ ಲಿಂಗ ಸಯವಾಗದಿರ್ದಡೆ ಇದೆಲ್ಲ ವೃಥಾ ಎಂದಿತ್ತು ಕೂಡಲಚೆನ್ನಸಂಗಯ್ಯನ ವಚನ
--------------
ಚನ್ನಬಸವಣ್ಣ
ಘನಗಂಬ್ಥೀರಲಿಂಗವೆನ್ನ ಕಾಯದನುವರಿಯಬಂದಬಳಿಕ ಎನ್ನ ಕಾಯದ ರತಿಯ ಕಡೆಗಿಡಲೆನಗೆ ಸೊಗಸದು ಕಾಣಮ್ಮ. ಎನ್ನ ಮನದನುವರಿಯಬಂದಬಳಿಕ ಮನದ ಮಮಕಾರ ಸರಿದರಿಯಲೆನಗೆ ಸೊಗಸದು ಕಾಣಮ್ಮ. ಎನ್ನ ಪ್ರಾಣದನುವರಿಯಬಂದಬಳಿಕ ಪ್ರಾಣದ ಮೋಹವಿತರವೆರಸಲೆನಗೆ ಸೊಗಸದು ಕಾಣಮ್ಮ. ಎನ್ನ ಭಾವದನುವರಿಯಬಂದಬಳಿಕ ಭಾವದ ಭ್ರಾಂತಿ ಪರಿದಾವರಿಸಲೆನಗೆ ಸೊಗಸದು ಕಾಣಮ್ಮ. ಎನ್ನ ಕಾಯ ಮನ ಪ್ರಾಣ ಭಾವವೆಂಬ ಚತುರ್ವಿಧಸಾರಾಯ ಸುಖಲೋಲನಾಗಿರ್ದಬಳಿಕ ಗುರುನಿರಂಜನ ಚನ್ನಬಸವಲಿಂಗವನಗಲಲೆಡೆಗಾಣದೆ ಪರವಶವಾಗಿರ್ದೆ ಕಾಣಮ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗದ ಗುಣವಳಿಯದೆ, ಪ್ರಾಣದ ಪ್ರಪಂಚು ಹಿಂಗದೆ, ಭಾವದ ಭ್ರಮೆಯುಡುಗದೆ, ಮನದ ಮಾಯವಡಗದೆ, ಆತ್ಮನ ಅಹಂಮಮತೆ ಕೆಡದೆ, ಲಿಂಗಕ್ಕೆ ತಮಗೆ ಏಕಭಾಜನವೆಂದು ನುಡಿವ ಕಾಕುಮಾನವರನೇನೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತೂಬರದ ಕೊಳ್ಳಿಯಂತೆ ಉರಿವಾತ ಭಕ್ತನೆ ? ಹುಸಿದು ತಂದು ಮಾಡುವಾತ ಭಕ್ತನೆ ? ಭಕ್ತರ ಕುಲವನೆತ್ತಿ ನಿಂದಿಸುವಾತ ಭಕ್ತನೆ ? ನಿಂದಯಾ ಶಿವಭಕ್ತಾನಾಂ ಕೋಟಿ ಜನ್ಮನಿ ಸೂಕರಃ | ಸಪ್ತಜನ್ಮನಿ ಭವೇತ್ ಕುಷ್ಠೀ ದಾಸೀಗರ್ಭೇಷು ಜಾಯತೇ ||' ಎಂದುದಾಗಿ, ತನ್ನ ಪ್ರಾಣದ ಮೇಲೆ ಬಂದಡೂ ಬರಲಿ, ಇವರ ಬಿಡಬೇಕು. ಬಿಡದಿರಲು ಉರಿಲಿಂಗಪೆದ್ದಿಗಳರಸನೊಲ್ಲನವ್ವಾ.
--------------
ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ
>ಸಾವ ಜೀವ ಬಿಂದುವಿನ ಸಂಚ, ಸಾಯದ ನಾದ ಪ್ರಾಣದ ಸಂಚ. ಸಾವ ಜೀವದ, ಸಾಯದ ಪ್ರಾಣದ _ಎರಡರ ಭೇದವನರಿಯದಿರ್ದಡೆ ಲಾಂಛನಧಾರಿ, ಸಾವ ಜೀವದ, ಸಾಯದ ಪ್ರಾಣದ ಎರಡರ ಭೇದವ ಭೇದಿಸಿ ಅರಿವು ಕಣ್ದೆರೆದ ಪ್ರಾಣಲಿಂಗಸಂಬಂಧವಂತಿರಲಿ, ಮತ್ತೆಯೂ ಪ್ರಾಣಲಿಂಗಸಂಬಂಧವೇ ಬೇಕು. ಇಂತೀ ಉಭಯ ಸಂಬಂಧವಳಿದ ಸಂಬಂಧ ನಿಜವಾಯಿತ್ತು. ಕೂಡಲಚೆನ್ನಸಂಗಾ ನಿಮ್ಮ ಶರಣಂಗೆ
--------------
ಚನ್ನಬಸವಣ್ಣ
ಗುರು ಮುನಿದಡೆ ಒಂದು ದಿನ ತಾಳುವೆ, ಲಿಂಗ ಮುನಿದಡೆ ದಿನವರೆ ತಾಳುವೆ. ಜಂಗಮ ಮುನಿದಡೆ ಕ್ಷಣಮಾತ್ರ ತಾಳಿದೆನಾದಡೆ, ಎನ್ನ ಪ್ರಾಣದ ಹೋಕು ಕೂಡಲಸಂಗಮದೇವಾ.
--------------
ಬಸವಣ್ಣ
ಅಂಗದ ಮೇಲೆ ಲಿಂಗಸಾಹಿತ್ಯವಾಗದಿದ್ದರೇನು, ಕಾಯವೇನು ಬರಿ ಕಾಯವೆ ? ಪ್ರಾಣದ ಮೇಲೆ ಲಿಂಗಸಾಹಿತ್ಯವಾಗದಿದ್ದರೇನು ? ಪ್ರಾಣವೇನು ವಾಯುಪ್ರಾಣವೆ ? ಅಹಂಗಲ್ಲ, ನಿಲ್ಲು. Uõ್ಞರವಂ ಕಾಯಸಂಬಂಧಂ ಪ್ರಾಣಸ್ತು ಪ್ರಾಣಸಂಯುತಃ ಕಾರಣಂ ಭಾವಸಂಬಂಧಂ ಗುರೋಃ ಶಿಷ್ಯಮನುಗ್ರಹಂ ಎಂದುದಾಗಿ ಹರರೂಪಾಗಿದ್ದುದೆ ಪ್ರಾಣಲಿಂಗ, ಗುರುರೂಪಾಗಿದ್ದುದೆ ಜಂಗಮಲಿಂಗ. ಹರರೂಪಾಗಿರ್ದ ಪ್ರಾಣಲಿಂಗವಾವ ಕೈಯಲುಂಬುದೆಂದರೆ, ಭಕ್ತನ ಜಿಹ್ವಾಗ್ರದಲುಂಬುದು. ಗುರುರೂಪಾಗಿರ್ದ ಜಂಗಮಲಿಂಗವಾವ ಕೈಯಲುಂಬುದೆಂದರೆ ಜಂಗಮ ಜಿಹ್ವಾಗ್ರದಲುಂಬುದು. ಇದು ಕಾರಣ ಹರರೂಪಾಗಿದ್ದುದೆ ಪ್ರಾಣಲಿಂಗ ಗುರುರೂಪಾಗಿದ್ದುದೆ ಜಂಗಮಲಿಂಗ. ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಎಂಬ ವಚನವನರಿದು ಸ್ಥಾವರವನು ಜಂಗಮವನು ಒಂದೆಂದರಿದೆನಯ್ಯಾ. ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ವೇಷವ ಹೊತ್ತು , ಆಶೆ ರೋಷವ ಬಿಡದೆ, ದೇಶವ ತಿರುಗಿ, ಹೊರವೇಷದ ವಿಭೂತಿ ರುದ್ರಾಕ್ಷಿ ಕಾವಿ ಕಾಷಾಯಾಂಬರವ ಧರಿಸಿ ಫಲವೇನು? ಕಾಮ ಕೆಡದು, ಕ್ರೋಧ ಬಿಡದು, ಲೋಭ ಹಿಂಗದು, ಮೋಹ ನಿಲ್ಲದು, ಮದ ಹೆರೆಸಾರದು, ಮತ್ಸರ ಬೆಂದುಹೋಗದು. ಇವೆಲ್ಲ ಸಹಿತ ಜಂಗಮಭಕ್ತರೆಂದು ಸುಳಿವವರ ಕಂಡು ನಾಚಿತ್ತು ಎನ್ನ ಮನ. ಭಕ್ತಜಂಗಮ ಘನವನೇನೆಂದು ಉಪಮಿಸುವೆ ? ರೂಪಿನ ಹಾಗೆ, ನೆಳಲಿನ ಹಾಗೆ, ದೇಹದ ಹಾಗೆ, ಪ್ರಾಣದ ಹಾಗೆ, ಭಾವದ ಹಾಗೆ, ನಿರ್ಭಾವದ ಹಾಗೆ, ಉರಿಯ ಹಾಗೆ, ಕರ್ಪುರದ ಹಾಗೆ, ಆವಿಯ ಹಾಗೆ, ನೀರ ಹಾಗೆ, ಎರಡೊಂದಾದರೆ ತೆರಹಿಲ್ಲ. ಆ ನಿಲುವಿಂಗೆ ನಮೋ ನಮೋ ಎನುತಿರ್ದೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಪರಮನ ಹಂಗು, ಪ್ರಾಣದ ಸಂಗ ಉಂಟೆಂದೆನಲಿಲ್ಲ ಬಸವಾ. ಪರಶಿವನ ವಿಲಾಸದಲ್ಲಿರಲೊಂದುದಿನ ಬಸವಾ ಎಂಬ ಮೂರಕ್ಷರವ ಕಂಡೆ. ಬಸವಾ ಎಂಬ ಮೂರಕ್ಷರವ ಕಂಡು, ಪ್ರಾಣಲಿಂಗಸಂಬಂಧಿಯಾದೆನು ನಾನು ಬಸವಾ. ಆ ಪ್ರಣವದ ಹೊಳಹನರಿಯಹೋದಡೆ, ಆ ಬೆಳಗು ಅಲ್ಲಿ ಕಾಣಬಂದಿತ್ತಯ್ಯಾ ಬಸವಾ. ಸಂಗಯ್ಯಾ, ಸ್ವಯಲಿಂಗಸಂಬಂಧಿಯಾನಾದೆನು.
--------------
ನೀಲಮ್ಮ
ಅಗಮ್ಯ ಗತಿಭಾವಿ, ಅನುಪಮ ಮತಿಯುಕ್ತ, ತನುಪ್ರಾಣಸಂಬಂದ್ಥಿ ತಾನಾದ ಶರಣಂಗೆ, ತನುವಿನ ತರಹರವ ತರಲಿಲ್ಲ, ಮನದ ಮಗ್ನತೆಯನರಿಯಲಿಲ್ಲ, ಪ್ರಾಣದ ಹೊಲೆಯ ಕಾಣಲಿಲ್ಲ. ಭಾವ ನಿರ್ಭಾವ ನಿರಾವಲಂಬಿ ಗುರುನಿರಂಜನ ಚನ್ನಬಸವಲಿಂಗಕ್ಕಂಗವೆಂಬಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮನ ಬುದ್ಧಿ ಚಿತ್ತ ಅಹಂಕಾರವೆಂಬೀ ನಾಲ್ಕರಲ್ಲಿ ನಿಂದು ವಿಚಾರಿಸುವುದು ಜೀವನೋ, ಪರಮನೋ ? ಅದು ಮುಕುರದ ಒಳಹೊರಗಿನಂತೆ. ಘಟ ಪ್ರಾಣದ ಯೋಗವನರಿತಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಪ್ರಾಣದ ತತ್ವದ ಪ್ರಾಪಂಚುವಿಲ್ಲದಿರು, ಏಕ ಏಕಾರ್ಥವೆಂದು ನಿರ್ವಾಣದ ಆಕಾರಧ್ಯಾನವು ಬೇಕು ಮನ ಕರದಲ್ಲಿ. ಸಾಕಾರದಿಂದತ್ತ ಶೂನ್ಯಭೇದ ಅನೇಕ ರೂಪನು ಕಪಿಲಸಿದ್ಧಮಲ್ಲಿಕಾರ್ಜುನನ ಬೇಕಾದವೀ ಪರಿಯ ತಪ್ಪದಿಹುದು.
--------------
ಸಿದ್ಧರಾಮೇಶ್ವರ
ಉನ್ಮನಿಜ್ಞಾನದ ಗಮನ (ದ ಭಾವವು) ಲೌಕಿಕದ ನಿಷ್ಠೆಯ ದೃಷ್ಟಿ. ಶಾಂಭವಜ್ಞಾನದ (ಗಮನದ) ಭಾವವು ಪ್ರಾಣದ ಪರಿಣಾಮದ ನಿಲವು. ಸುಜ್ಞಾನದ ಗಮನದ ಭಾವವು ಉಪದೇಶ ಪ್ರಸೂತದ ಭಾವಭೇದ. ಈ ತ್ರಿವಿಧ ಚರಿತ್ರ, ಸಂಭಾಷಣೆಯ ಕೂಡಲಚೆನ್ನಸಂಗಾ. ನಿಮ್ಮ ಶರಣ ಬಲ್ಲ.
--------------
ಚನ್ನಬಸವಣ್ಣ
ಎಲೆ ಎಲೆ ತಾಯೆ ನೋಡವ್ವಾ! ಇರುಳು ತೊಳಲುವ ಜಕ್ಕವಕ್ಕಿಯಂತೆ ಹಲಬುತ್ತಿದ್ದೆ ನೋಡವ್ವಾ! ಮಾಗಿಯ ಕೋಗಿಲೆಯಂತೆ ಮೂಗಿಯಾಗಿದ್ದೆ ನೋಡವ್ವಾ! ಮಹಾಲಿಂಗ ಗಜೇಶ್ವರನ ಅನುಭಾವಸಂಬಂದ್ಥಿಗಳ ಬರವೆನ್ನ ಪ್ರಾಣದ ಬರವು ನೋಡವ್ವಾ
--------------
ಗಜೇಶ ಮಸಣಯ್ಯ
ಒಬ್ಬನಿಗಿಬ್ಬರು ಸ್ತ್ರೀಯರು ನೋಡಾ, ಒಬ್ಬಳು ಕಾಯದ ರೂಪೆಯಾಗಿ ಕಾಯವ ಶುದ್ಧವ ಮಾಡುವಳು. [ಆ]ಕಾಯದ ಗುಣವ ಹೊದ್ದಳು ನೋಡಾ. ಮತ್ತೊಬ್ಬಳು ಪ್ರಾಣದ ರೂಪೆಯಾಗಿ ಪ್ರಾಣವ ಶುದ್ಧವ ಮಾಡುವಳು; ಆ ಪ್ರಾಣನ ಗುಣವ ಹೊದ್ದಳು ನೋಡಾ. ಇಬ್ಬರ ಸಂಗದಿಂದ ತಾನೊಬ್ಬ ಸಾಯಲು ಮೂರುಲೋಕದ ತಬ್ಬಿಬ್ಬು ಬಿಟ್ಟು, ಕತ್ತಲೆ ಹರಿಯಿತ್ತು, ತಲ್ಲಣವಡಗಿತ್ತು. ಎಲ್ಲರೂ ನಿರಾಳರಾದರು. ಅವರು ನಿಮ್ಮವರು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->