ಅಥವಾ

ಒಟ್ಟು 7 ಕಡೆಗಳಲ್ಲಿ , 5 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹೊಲಗೇರಿಯಲ್ಲಿ ಎಲುವಿನ ಮರ ಪೂತು ಫಲವಾಗಿ, ಆ ಫಲವ ಸೇವಿಸಿದವರು ಜೀವಿಸಿದರು. ಆ ಫಲ ಸೇವಿಸದವರು ಸತ್ತು ಜೀವಿಸಿದರು. ಈ ಬೆಡಗಿನ ಕೀಲ ಬಲ್ಲರೆ ಶರಣಲಿಂಗಸಂಬಂದ್ಥಿ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಭಕ್ತಿಯೇ ವಿಗ್ರಹ, ಜ್ಞಾನವೇ ಪ್ರಾಣ, ವೈರಾಗ್ಯವೇ ಗಮನ. ಇಂಬಿಲ್ಲ ಇಂಬಿಲ್ಲ ನೋಡುವರೆ ನುಡಿಸುವರೆ. ಎಲೆದೋರದ ವೃಕ್ಷ ಫಲವಾಗಿ ಕಾಣಿಸಿಕೊಳ್ಳದು. ಬಂದರೇನು ನಿಂದರೇನು ಭೋಗಿಸಿದರೇನು ಅಂದಂದಿಗೆ ಆರೂಢ ತಾನೆ ಗುರುನಿರಂಜನ ಚನ್ನಬಸವಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಾಯದ ಮರಣದೊಳು ಛಾಯದ ಗಿಡ ಹುಟ್ಟಿ, ಒಂಬತ್ತು ಗಳಿಗೆಗೆ ಹೂವು ಕಾಯಿ ಹಣ್ಣು ಫಲವಾಗಿ, ಮರ ಬೇರುವರಿದು ಪ್ರಜ್ವಲಿಸಿದುದ ಕಂಡೆನಯ್ಯಾ ! ಇದೇನು ಚೋದ್ಯ ಹೇಳಾ ! ಮಾರುದ್ದ ಮರನಡಗಿ ಛಾಯದ ಗಿಡವಾಗಿ, ಪಿರಿದಪ್ಪ ವೃಕ್ಷವಾಗಿ, ಜಗಕೆ ತೋರಿದ ಭೇದವ ವೃಕ್ಷಕೆ ನೀರೆರೆದು ಸಲಹಿದಾತ ಬಲ್ಲ ; ಉಳಿದವರಿಗಸಾಧ್ಯ. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಔದುಂಬರದ ಕುಸುಮದಲ್ಲಿ ಪಾದರಿ ಫಲವಾಗಿ, ಆ ಫಲಬಿಂದು ಎಲವದ ಮರದಲ್ಲಿ ಹಣ್ಣಾಯಿತ್ತು. ಆ ಹಣ್ಣನೊಡೆದು ನೋಡಲಾಗಿ, ರಸವಿಲ್ಲದೆ ತುಷಾರ ಹಾರಿತ್ತು. ಇಂತೀ ಅಂಗವಿದ್ದು, ನಿರಂಗವಾಗಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಬಲ್ಲವನೆಂಬೆ.
--------------
ಮೋಳಿಗೆ ಮಾರಯ್ಯ
ಸರ್ಪನ ಸಲಹಿದಲ್ಲಿ, ಬೇರೆ ವಿಷವ ಸಲಹಲುಂಟೆ ? ಸಸಿವೃಕ್ಷಂಗಳ ಸಲಹುವಲ್ಲಿ ಬೇರೆ ಫಲವ ಸಲಹಲುಂಟೆ ? ಕ್ರೀ ನಿರ್ಧಾರವಾದಲ್ಲಿ, ಆಚಾರಕ್ಕೆ ಅಂಕುರ, ಆಚಾರ ಅಂಕುರವಾದಲ್ಲಿ, ದಿವ್ಯಜ್ಞಾನ ಪಲ್ಲವಿಸಿತ್ತು. ಆ ಪಲ್ಲವದ ಮರೆಯಲ್ಲಿ, ಪರತತ್ವ ವಸ್ತು ಫಲವಾಗಿ, ಉಭಯದ ತೊಟ್ಟು ಹರಿದು ಬಿದ್ದ ಹಣ್ಣು, ಅಭೇದ್ಯ ಲಿಂಗಕ್ಕೆ ತೃಪ್ತಿಯಾಯಿತ್ತು. ಇಂತೀ ಭಾವದ ಭ್ರಮೆಯ ಕಳೆದು, ಜೀವವಿಕಾರ ಹಿಂಗಿ, ನಾ ನೀನೆಂಬ ಉಭಯದ ದೃಷ್ಟ ಏನೂ ಇಲ್ಲದೆ ನಿಂದುದು, ಪ್ರಾಣಲಿಂಗಸಬಂಧ. ಆ ಸಂಬಂಧವ ಸ್ವೀಕರಿಸಿ ನಿಂದುದು ಪ್ರಾಣಲಿಂಗಿಯ ತೃಪ್ತಿ. ಇಂತೀ ನಿಜದಲ್ಲಿ ತಾನು ತಾನಾಗಬಲ್ಲಡೆ, ಆತನೇ ಐಕ್ಯಾನುಭಾವಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಫಲ ಪದವನತಿಗಳೆದು ಹೊಲೆಗಲಸಿ ದಲಗೆಟ್ಟು ಕುಲವನಾಳಿದವರಾರೊ ಅಯ್ಯಾ. ನೀ ಸಲ್ಲದಿನ್ನು ನೆಲೆಗಟ್ಟು ಬ್ರಹ್ಮದೊಳಗೆ, ಅಯ್ಯ, ನಿನ್ನ ಹೊಲೆಗಲಸಿ ಹೊರಗಾದೆ. ಅಯ್ಯಾ, ದಲವೆ ಫಲವಾಗಿ ಹೊಲೆಯ ನೆಲೆಯಾದಡೆ ಒಲವು ತಪ್ಪದು ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಬೇರಿಲ್ಲದೆ ಭೂಮಿಗೆ ಹೊಂದದೆ ಒಂದು ಮಾವಿನ ವೃಕ್ಷವು ಪುಟ್ಟಿತ್ತು. ಆ ವೃಕ್ಷ ನೀರಿಲ್ಲದೆ ಗಾಳಿ ಸೋಂಕದೆ ಪಲ್ಲವಿಸಿತ್ತು. ಮೂರಾರು ಗಂಟಾಗಿರ್ಪವು. ತುದಿಗಂಟಿನಲ್ಲಿ ಮೊಳೆದೋರಿ ಎರಡು ಶಾಖೆ ಪುಟ್ಟಿದವು. ಎರಡು ಶಾಖೆಗೆ ಮೂರು ಕವಲು, ಮೂರು ಕವಲಿಗೆ ಆರು ಬಗಲು, ಆರು ಬಗಲಿಗೆ ಮೂವತ್ತಾರು ಪರ್ಣಂಗಳು, ಇನ್ನೂರಾಹದಿನಾರು ಕುಡಿಗಳು, ಅನೇಕ ಕುಸುಮಂಗಳು. ಅದರೊಳಗೆ ಅಗ್ನಿವರ್ಣದ ಕುಸುಮ ಮೂರುಗಂಟಿನ ಮೇಲೆ ಪುಟ್ಟಿ, ತುದಿಯಲ್ಲಿ ಅರಳಿ ಫಲವಾಗಿ, ಐದು ಗಂಟಿನ ಮೇಲೆ ಹಣ್ಣಾಗಿ, ಅಮೃತಜೇವಣಿಯೆಂಬ ಹಣ್ಣನು ಕಮಲದಲ್ಲಿ ಕಂಡು ಸೇವಿಸಿ ವ್ಯಾಧಿಯ ಪರಿಹರಿಸಬಲ್ಲಡೆ ಅಸುಲಿಂಗಸಂಬಂಧಿಯೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->