ಅಥವಾ

ಒಟ್ಟು 116 ಕಡೆಗಳಲ್ಲಿ , 32 ವಚನಕಾರರು , 95 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೀರ್ತಿವಾರ್ತೆಗೆ ಮಾಡುವಾತ ಭಕ್ತನಲ್ಲ. ಪರರ ಬೋಧಿಸಿಕೊಂಡುಂಬಾತ ಜಂಗಮವಲ್ಲ. ತ್ರಿಸಂಧ್ಯಾಕಾಲವೆಂದು ಪ್ರಸಾದವನಿಕ್ಕುವಾತ ಗುರುವಲ್ಲ. ತ್ರಿಸಂಧ್ಯಾಕಾಲವೆಂದು ಪ್ರಸಾದವ ಕೊಂಬಾತ ಶಿಷ್ಯನಲ್ಲ. ಪರಗಮನವಿರಹಿತ ಜಂಗಮ, ಕಾಲಕರ್ಮವಿರಹಿತ ಪ್ರಸಾದಿ, ಪ್ರಸಾದವ ಇಕ್ಕಿಯೂ ಇಕ್ಕದಾತ ಗುರು, ಕೊಂಡೂ ಕೊಳ್ಳದಾತ ಶಿಷ್ಯ. ಆ ಭಕ್ತನಲ್ಲಿಯೆ ನಿಕ್ಷೇಪಿಸಿ ನಿರ್ಗಮನಿಯಾಗಿ ಹೋದಾತ ಜಂಗಮ. ಆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವಿಡಿದು ಮಾಡುವಾತ ಭಕ್ತ_ ಇಂತೀ ಚತುರ್ವಿಧದನುವನು, ಗುಹೇಶ್ವರಲಿಂಗದನುವನು ವೇಷಧಾರಿಗಳೆತ್ತ ಬಲ್ಲರು ಬಸವಣ್ಣನೊಬ್ಬನೆ ಬಲ್ಲನಲ್ಲದೆ.
--------------
ಅಲ್ಲಮಪ್ರಭುದೇವರು
ಆಚಾರಲಿಂಗ ನಾಸ್ತಿಯಾದಲ್ಲದೆ ಭಕ್ತನಲ್ಲ. ಗುರುಲಿಂಗ ನಾಸ್ತಿಯಾದಲ್ಲದೆ ಮಾಹೇಶ್ವರನಲ್ಲ. ಶಿವಲಿಂಗ ನಾಸ್ತಿಯಾದಲ್ಲದೆ ಪ್ರಸಾದಿಯಲ್ಲ. ಜಂಗಮಲಿಂಗ ನಾಸ್ತಿಯಾದಲ್ಲದೆ ಪ್ರಾಣಲಿಂಗಿಯಲ್ಲ. ಪ್ರಸಾದಲಿಂಗ ನಾಸ್ತಿಯಾದಲ್ಲದೆ ಶರಣನಲ್ಲ, ಇಂತೀ ಷಡಂಗಗಳು ಕೆಟ್ಟಲ್ಲದೆ ಸೌರಾಷ್ಟ್ರ ಸೋಮೇಶ್ವರನಲ್ಲಿ ಲಿಂಗೈಕ್ಯನಲ್ಲ.
--------------
ಆದಯ್ಯ
ಸರ್ಪನ ಗಮನದಂತೆ ಗಮನವುಳ್ಳರೆ ಭಕ್ತನೆಂಬೆ. ನವಿಲಿನ ಕಣ್ಣಿನಂತೆ ಕಣ್ಣುಳ್ಳರೆ ಭಕ್ತನೆಂಬೆ. ಬೆಕ್ಕಿನ ಹೃದಯದಂತೆ ಹೃದಯವುಳ್ಳರೆ ಭಕ್ತನೆಂಬೆ. ಕಾಕನ ಪಿಕನ ಸ್ನೇಹವ ಹಿಂದಿಟ್ಟು, ಸೂರ್ಯಂಗೆ ಕಮಲದ ರೂಪವ ಮುಂದಿಟ್ಟು ಮಾಟವರಿದು ಮಾಡುವಾತನಲ್ಲದೆ ಭಕ್ತನಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇತ(ದಿ?)ರ ಭ್ರಮಿತನು ಭಕ್ತನಲ್ಲ, ಲೋಕೋಪಚಾರಿ ಜಂಗಮವಲ್ಲ. ಹೇಳಿಹೆನು ಕೇಳಿರಣ್ಣಾ: ಜಂಗಮ ಪ್ರೇಮಿಯಾದರೆ ಭಸಿತ ರುದ್ರಾಕ್ಷೆ ಸಹ ಶಿವಸ್ವರೂಪ ಕಾಣುತ್ತ, ನಮಸ್ಕರಿಸಿ ಬಿಜಯಂ ಮಾಡಿಕೊಂಡು ಬಂದು ಮನಹರುಷದಲ್ಲಿ ಭೋಜನವ ಮಾಡಿಸೂದೀಗ ಭಕ್ತಂಗೆ ಲಕ್ಷಣ. ಕಾಡೊಳಗಿರಲಿ ಊರೊಳಗಿರಲಿ ಮಠದಲ್ಲಿರಲಿ ಮನೆಯಲ್ಲಿರಲಿ ಲಿಂಗವಂತರು ಕರೆಯಬಂದರೆ, ಹೋಗಬೇಕೆಂಬ ಅಭಿಲಾಷೆಯುಳ್ಳಡೆ, ತಾನಿದ್ದಲ್ಲಿ ತಾ ಮಾಡುವಂಥ ಅಷ್ಟವಿಧಾರ್ಚನೆ ಷೋಡಶೋಪಚಾರ ಲಿಂಗಕ್ರಿಯೆಗಳು ನಿತ್ಯನೇಮವು ಆದ ಬಳಿಕ ಮತ್ತೆ ತಾ ಹೋಗಿ ತನ್ನ ಗುಂಪ ತೋರದೆ, ಭಕ್ತರಾಶ್ರಯದಲ್ಲಿ ಭೋಜನವ ಮಾಡುವುದೀಗ ಜಂಗಮಕ್ಕೆ ಲಕ್ಷಣ. ಅಂತಲ್ಲದೆ ಗ್ರಹಸ್ಥಾಶ್ರಮದಲ್ಲಿ ಕ್ರಿಯೆ ಮಾಡಿದರೆ ಜಂಗಮಕ್ಕೆ ಹೇಳುವ ಅರಿವು ಕೊರಮಜೀವಿಯಂತಾಯಿತ್ತಾಗಿ_ ಇದು ಕಾರಣ ಲೋಕೋಪಚಾರಿಗಳಾಗಿ ಒಡಲ ಹೊರೆವವರ ನಮ್ಮ ಗುಹೇಶ್ವರಲಿಂಗವು ಬಲ್ಲನಾಗಿ ಅವರ ಒಲ್ಲನಯ್ಯಾ.
--------------
ಅಲ್ಲಮಪ್ರಭುದೇವರು
ಶರಣ ಸಂಬಂಧವನರಿದ ಬಳಿಕ ಮರಳಿ ಭವಿಯ ಬೆರಸಲಾಗದು. ಬ್ರಹ್ಮೇತಿ ಭ್ರೂಣಹತ್ಯ ವೈತರಣಿ ದುರ್ಗತಿ ಪಂಚಮಹಾಪಾತಕದಿಂದದ್ಥಿಕ ನೋಡಾ. ಅಳುಪಿ ಭವಿಯೊಡನುಂಡಡೆ ಭಕ್ತನಲ್ಲ ಕೂಡಲಸಂಗಮದೇವಾ.
--------------
ಬಸವಣ್ಣ
ವೀರಂಗೆ ರಣಾಗ್ರದ ಕದನ ಭೋರೆಂದು ಕಟ್ಟಿದಲ್ಲಿ ದೂರದಲ್ಲಿರ್ದೆಸೆವನೊಂದಂಬಿನಲ್ಲಿ. ಸೇರಿಬಂದರೆ ಹೊಯಿವ ಬಿಲ್ಲಿನಲ್ಲಿ. ಅವು ಮೀರಿ ಬಂದಲಿ ಇರಿವ ಕಠಾರಿಯಲ್ಲಿ. ಅದು ತಪ್ಪಿದಲ್ಲಿ ತೆಕ್ಕೆಯಲ್ಲಿ ಪಿಡಿವ, ಯುದ್ಧದಲ್ಲಿ ಬಿದ್ದಲ್ಲಿ ಕಡಿವ ಬಾಯಲ್ಲಿ. ಇಂತಿ ಅವರ ಪ್ರಾಣಕ್ಕೆ ಬಂದಲ್ಲಿ ಅವ ತನ್ನ ಧೈರ್ಯ, ವ್ರತವರತುದಿಲ್ಲ. ಹೀಂಗಿರಲಿಲ್ಲವೆ ಸದ್ಭಕ್ತನ ಗುಣ? ಹೊನ್ನು ಹೆಣ್ಣು ಮಣ್ಣುಳ್ಳ ಕಾಲದಲ್ಲಿಯೇ ಪನ್ನಗಧರನ ಶರಣರಿಗೆ ಅನ್ನೋದಕ ವಸ್ತ್ರಂಗಳಿಂದುಪಚಾರವ ಮಾಡುವುದು. ನೀಡಿ ಮಾಡುವ ಭಕ್ತರ ಮಠದ ಒಡಗೊಂಡು ಹೋಗಿ ತೋರುವುದು ಅದಕ್ಕಾಗದಿರ್ದಡೆ ಹರಶರಣರ ಕಮಂಡಲ ಕೊಂಡುಹೋಗಿ ಮಡುವಿನಲ್ಲಿ ಅಗ್ಘವಣಿಯ ತಂದು, ಪಾದವ ತೊಳುವುದು. ಅದಕ್ಕಾಗದಿರ್ದಡೆ ಶಿವಶರಣ ಕಂಡು, ಇದಿರೆದ್ದು ನಮಸ್ಕರಿಸುವುದು. ಇಷ್ಟರೊಳಗೊಂದು ಗುಣವಿಲ್ಲದಿರ್ದರೆ ಅವ ಭಕ್ತನಲ್ಲ, ಅವ ಹೊಲೆಯನೆಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತನುಗುಣವಳಿದಾತನಲ್ಲದೆ ಭಕ್ತನಲ್ಲ, ಮನೋಗುಣವಳಿದಾತನಲ್ಲದೆ ಮಹೇಶ್ವರನಲ್ಲ ಪ್ರಕೃತಿಗುಣರಹಿತನಾದಾತನಲ್ಲದೆ ಪ್ರಸಾದಿಯಲ್ಲ, ಪ್ರಾಣಗುಣವನಳಿದಾತನಲ್ಲದೆ ಪ್ರಾಣಲಿಂಗಿಯಲ್ಲ, ಶಬ್ದದುದ್ದೇಶವಳಿದಾತನಲ್ಲದೆ ಶರಣನಲ್ಲ, ಆತ್ಮನ ನೆಲೆಯನರಿದಾತನಲ್ಲದೆ ಐಕ್ಯನಲ್ಲ. ಇಂತೀ ಷಡಂಗಕ್ಕೆ ಅತೀತವಾದಲ್ಲದೆ ಸೌರಾಷ್ಟ್ರ ಸೋಮೇಶ್ವರಲಿಂಗ ಸನ್ನಹಿತನಲ್ಲ.
--------------
ಆದಯ್ಯ
ಭವಿಯ ಸಂಗವುಳ್ಳನ್ನಬರ ಭಕ್ತನಲ್ಲ, ಪರಧನ ಪರಸತಿಯಾಸೆಯುಳ್ಳನ್ನಬರ ಮಾಹೇಶ್ವರನಲ್ಲ, ಸಕಲ ಪದಾರ್ಥವನೆಲ್ಲ ಗ್ರಹಿಸುವನ್ನಕ್ಕ ಪ್ರಸಾದಿಯಲ್ಲ, ಪ್ರಾಣಲಿಂಗದಲ್ಲಿ ಸ್ವಸ್ಥಿರವಾಗದನ್ನಕ್ಕ ಪ್ರಾಣಲಿಂಗಿಯಲ್ಲ, ಕರಣಾದಿಗಳು ವರ್ತಿಸುವನ್ನಕ್ಕ ಶರಣನಲ್ಲ, ಜನನಮರಣವುಳ್ಳನ್ನಕ್ಕ ಐಕ್ಯನಲ್ಲ. ಕೂಡಲಚೆನ್ನಸಂಗಮದೇವರಲ್ಲಿ ಈ ಷಡುಸ್ಥಲದ ನಿರ್ಣಯವ ಬಸವಣ್ಣನೆ ಬಲ್ಲ.
--------------
ಚನ್ನಬಸವಣ್ಣ
ಓಡುವಾತ ಲೆಂಕನಲ್ಲ, ಬೇಡುವಾತ ಭಕ್ತನಲ್ಲ. ಓಡಲಾಗದು ಲೆಂಕನು, ಬೇಡಲಾಗದು ಭಕ್ತನು. ಓಡೆನಯ್ಯಾ, ಬೇಡೆನಯ್ಯಾ, ಕೂಡಲಸಂಗಮದೇವಾ. 442
--------------
ಬಸವಣ್ಣ
ವಿಶ್ವಾಸವಿಲ್ಲದವಂಗೆ ಭಕ್ತಸ್ಥಲವಿಲ್ಲ, ಗುರು ಭಕ್ತನಲ್ಲ. ವಿಶ್ವಾಸವಿಲ್ಲದವಂಗೆ ಮಾಹೇಶ್ವರಸ್ಥಲವಿಲ್ಲ, ಲಿಂಗ ಭಕ್ತನಲ್ಲ. ವಿಶ್ವಾಸವಿಲ್ಲದವಂಗೆ ಪ್ರಸಾದಿಸ್ಥಲವಿಲ್ಲ, ಜಂಗಮ ಭಕ್ತನಲ್ಲ. ವಿಶ್ವಾಸವಿಲ್ಲದವಂಗೆ ಪ್ರಾಣಲಿಂಗಿಸ್ಥಲವಿಲ್ಲ, ಸರ್ವ ವ್ಯವಧ್ಯಾನಿಯಲ್ಲ. ವಿಶ್ವಾಸವಿಲ್ಲದವಂಗೆ ಶರಣಸ್ಥಲವಿಲ್ಲ, ಆರೂಢಭಾವಿಯಲ್ಲ. ವಿಶ್ವಾಸವಿಲ್ಲದವಂಗೆ ಐಕ್ಯಸ್ಥಲವಿಲ್ಲ, ಸರ್ವಲೇಪನಲ್ಲ. ಇಂತೀ ಷಟ್‍ಸ್ಥಲಸಂಬಂಧ. ಗುರುವಿನಲ್ಲಿ ಶ್ರದ್ಧೆ, ಲಿಂಗದಲ್ಲಿ ಅಬ್ಥಿನ್ನನಲ್ಲದೆ ಜಂಗಮದಲ್ಲಿ ಮನೋಮೂರ್ತಿಯಾಗಿಪ್ಪುದೆ ಸರ್ವಾಂಗಲಿಂಗಸಂಬಂಧದ ಇರವು ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗದಲ್ಲಿ.
--------------
ಬಾಹೂರ ಬೊಮ್ಮಣ್ಣ
ಗುರು ಭಕ್ತನಲ್ಲ, ವಿರಕ್ತನಲ್ಲ, ನಿಶ್ಚಿಂತೆಯಲ್ಲ, ದುಶ್ಚಿಂತೆಯಲ್ಲ, ದಿಟವೆಂಬುದಿಲ್ಲ, ಡಂಬುಳದೆಲ್ಲಾ ಏನೆಂಬೆ! ಎನ್ನ ಮನವೆಯ್ದೆ ಹೊಲ್ಲ. ಎನಗೊಡೆಯರಿಲ್ಲ, ನಿಮ್ಮ ಬಿಡುವುದಿಲ್ಲ, ಸದ್ಗುರುವೆ ನೀ ಕರುಣಿಸು ಪುರದ ಮಲ್ಲಯ್ಯಾ.
--------------
ಗುರುಪುರದ ಮಲ್ಲಯ್ಯ
ಗುರುಪೂಜೆ ಮಾಡುವಾತ ಶಿಷ್ಯನಲ್ಲ. ಲಿಂಗಪೂಜೆ ಮಾಡುವಾತ ಶರಣನಲ್ಲ. ಜಂಗಮಪೂಜೆ ಮಾಡುವಾತ ಭಕ್ತನಲ್ಲ. ಇಂತೀ ತ್ರಿಮೂರ್ತಿಗಳ ಪಾದೋದಕ ಪ್ರಸಾದವ ಕೊಂಬುವಾತ ಪ್ರಸಾದಿಯಲ್ಲ. ಇಂತೀ ಚತುರ್ವಿಧದ ಹಂಗು ಹಿಂಗದೆ ಭವಹಿಂಗದು ಮುಕ್ತಿದೋರದು. ಮತ್ತಂ, ಇಂತೀ ತ್ರಿವಿಧ ಪೂಜೋಪಚಾರಂಗಳಮಾಡಿ ಪಾದೋದಕ ಪ್ರಸಾದವ ಕೊಳ್ಳದವರಿಗೆ ಭವಹಿಂಗದು ಮುಕ್ತಿದೋರದು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ರುಚ್ಯರ್ಪಿತ ಪ್ರಸಾದಸ್ತು ಸ್ಪರ್ಶನಂ ಸುಖಮರ್ಪಿತಂ ಉಭಯಾರ್ಪಿತ ವಿಹೀನಂ ಚ ಪೂಜನಂ ನಿಷ್ಫಲಂ ಭವೇತ್ ಇಂತೆಂಬ ಶ್ರುತಿಯನೊಲ್ಲೆ. ರುಚಿಯ ಬಲ್ಲನೆ ಪ್ರಸಾದಿ ತಾ ಲಿಂಗಭೋಗೋಪಭೋಗಿಯಾಗಿ ? ಸುಖವ ಬಲ್ಲನೆ ಭಕ್ತ ತಾ ಜಂಗಮಭೋಗೋಪಭೋಗಿಯಾಗಿ ? ರುಚಿಯನರ್ಪಿಸುವಾತ ಪ್ರಸಾದಿಯಲ್ಲ, [ಸುಖವ]ನರ್ಪಿಸುವಾತ ಭಕ್ತನಲ್ಲ, ಇದನರಿದ ಶರಣಂಗೆ ನಮೋ ನಮೋ ಎಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಭಕ್ತ ಜಂಗಮಕ್ಕೆ, ಲೆತ್ತ ಪಗಡೆ ಚದುರಂಗ ಜೂಜು ಕಳವು ಪಾಪ, ಪರಿಹಾಸ ಸರಸ ವಿನೋದ ಕುತ್ಸಿತ ಕುಟಿಲ ಕುಹಕ ಅಟಮಟ ಸಟೆ ಸಂಕಲ್ಪ ಉದಾಸೀನ ನಿರ್ದಯ ದಾಕ್ಷಿಣ್ಯ ದಾಸಿ ವೇಶಿ ಪರಸತಿ ಪರಧನ ಪರದೈವ ಭವಿಸಂಗ_ಇಷ್ಟುಳ್ಳನ್ನಕ್ಕ, ಅವನು ನಾಯಡಗು ನರಮಾಂಸ ಕ್ರಿಮಿಮಲ ಭುಂಜಕನು ಸುರಾಪಾನಸೇವಕನಪ್ಪನಲ್ಲದೆ, ಭಕ್ತನಲ್ಲ, ಜಂಗಮನಲ್ಲ, ಅದೆಂತೆಂದಡೆ: ಅಕ್ಷದೂತವಿನೋದಶ್ಚ ನೃತ್ಯಗೀತೇಷು ಮೋಹನಂ ಅಪಶಬ್ದಪ್ರಯೋಗಶ್ಚ ಜ್ಞಾನಹೀನಸ್ಯಕಾರಣಂ ತಸ್ಕರಂ ಪಾರದಾರಂಚ ಅನ್ಯದೈವಮುಪಾಸಕಂ ಅನೃತಂ ನಿಂದಕಶ್ಚೈವ ತಸ್ತ್ಯತೇ ಸ್ಯುಶ್ಚಾಂಡಲವಂಶಜಾಃ ಎಂದುದಾಗಿ ಈತನು ಗುಣಾವಗುಣವನೊಡಗೂಡಿಕೊಂಡು ನಡೆದಡೆ ಭಕ್ತ ಜಂಗಮನಲ್ಲ ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಕಾಗೆಯ ತಿಂದವನಲ್ಲದೆ ಭಕ್ತನಲ್ಲ. ಕೋಣನ ತಿಂದವನಲ್ಲದೆ ಮಹೇಶ್ವರನಲ್ಲ. ಕೋಡಗನ ತಿಂದವನಲ್ಲದೆ ಪ್ರಸಾದಿಯಲ್ಲ. ನಾಯ ತಿಂದವನಲ್ಲದೆ ಪ್ರಾಣಲಿಂಗಿಯಲ್ಲ. ಹೇಯವ ತಿಂದವನಲ್ಲದೆ ಶರಣನಲ್ಲ. ಇಂತೈವರ ತಿಂದವನಲ್ಲದೆ ಲಿಂಗೈಕ್ಯನಲ್ಲ ಗುಹೇಶ್ವರ !
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->