ಅಥವಾ

ಒಟ್ಟು 12 ಕಡೆಗಳಲ್ಲಿ , 8 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಾಳೆ ಮುಕ್ತಿಯ ಪಡೆವೆನೆಂಬ ಶಿಷ್ಯಂಗೆ ಮುಂದಳ ಮುಕ್ತಿಯ ತೋರಿಹೆನೆಂಬ ಗುರುಗಳ ನೋಡಿರೆ ! ಹೋಮ, ನೇಮ, ಜಪ, ತಪಗಳ ಮಾಡಿ ತಾನುಂಡು ಫಲವುಂಟೆಂದ ಗುರು ಹುಸಿದು ಸತ್ತ, ಶಿಷ್ಯ ಹಸಿದು ಸತ್ತ. ಹಿಂದಣ ಕಥೆಯ ಹೇಳುವಾತ ಹೆಡ್ಡ, ಮುಂದಣ ಕಥೆಯ ಹೇಳುವಾತ ಮೂಢ, ಇಂದಿನ ಘನವ ಹೇಳುವಾತನೆ ಹಿರಿಯನಯ್ಯಾ. ತಾ ಹುಟ್ಟಿದಂದೆ ಯುಗಜುಗಂಗಳು ಹುಟ್ಟಿದವು, ತಾನಳಿದಲ್ಲೆ ಯುಗಜುಗಂಗಳಳಿದವು. ತನ್ನ ನೇತ್ರಕ್ಕಿಂಪಾದುದೆ ಸುವರ್ಣಸುವಸ್ತು, ತನ್ನ ಶ್ರೋತಕ್ಕೆ ಸೊಂಪಾದುದೆ ವೇದಶಾಸ್ತ್ರ, ಪುರಾಣ. ತನ್ನ ಘ್ರಾಣಕ್ಕಿಂಪಾದುದೆ ಪರಿಮಳ, ತನ್ನ ಜಿಹ್ವೆಗಿಂಪಾದುದೆ ರುಚಿ, ತನ್ನ ಮನ ಮುಳುಗಿದುದೆ ಲಿಂಗ. ತನ್ನ ನೆತ್ತಿಯಲ್ಲಿ ಸತ್ಯರ್ಲೋಕ, ಪಾದದಲ್ಲಿ ಪಾತಾಳಲೋಕ, ನಡುವೆ ಹನ್ನೆರಡು ಲೋಕ. ಅಂಡಜ ಪಿಂಡಜ ಉದ್ಭಿಜ ಜರಾಯುಜವೆಂಬ ಎಂಬತ್ತು ನಾಲ್ಕುಲಕ್ಷ ಜೀವರಾಶಿಗಳು. ತನ್ನಲ್ಲಿ ಕಾಯವು, ತನ್ನಲ್ಲಿ ಜೀವವು, ತನ್ನಲ್ಲಿ ಪುಣ್ಯವು, ತನ್ನಲ್ಲಿ ಪಾಪವು, ತನ್ನಲ್ಲಿ ಶಬ್ದವು, ತನ್ನಲ್ಲಿ ನಿಶ್ಯಬ್ದವು. ಒಂದು ಒಡಲೆಂಬ ಊರಲ್ಲಿ ಒಂಬತ್ತು ಶಿವಾಲಯವು ಆ ಶಿವಾಲಯದ ಶಿಖರದ ಮೇಲೆ ಶಿವಲಿಂಗದೇವರು ಪೂರ್ವಭಾಗದಲ್ಲಿ ಚಂದ್ರಾದಿತ್ಯರು, ಪಶ್ಚಿಮ ಭಾಗದಲ್ಲಿ ಪರಶಿವನು ಉತ್ತರ ಭಾಗದಲ್ಲಿ ಮಹೇಶ್ವರನು, ದಕ್ಷಿಣ ಭಾಗದಲ್ಲಿ ರುದ್ರನು ಇಂತೀ ಪಂಚೈವರ ಮನದ ಕೊನೆಯ ಕೀಲಿನ ಸಂಚವನರಿದು ತುರ್ಯಾವಸ್ಥೆಯಲ್ಲಿ ನಿಲಿಸಿ ಒಡಲುವಿಡಿದು ಕಾಂಬುದೆ ಉಪಮೆ. ಈ ಘಟದೇವತೆಯ ಸಟೆಯೆಂದು ಬಿಸುಟು ಮುಂದೆ ತಾ ದಿಟವಪ್ಪುದಿನ್ನೆಲ್ಲಿಯದೊ ? ಪೃಥ್ವಿಯಳಿದಂದೆ ಭೋಗಾದಿ ಭೋಗಂಗಳಳಿದವು. ಅಪ್ಪುವಳಿದಂದೆ ಮಾಯಾಮೋಹಾದಿಗಳಳಿದವು. ತೇಜವಳಿದಂದೆ ಹಸಿವು ತೃಷೆಗಳಳಿದವು. ವಾಯುವಳಿದಂದೆ ನಡೆನುಡಿ ಚೈತನ್ಯಂಗಳಳಿದವು. ಆಕಾಶವಳಿದಂದೆ ಅವು ಅಲ್ಲಿಯೆ ಲೀಯವಾಯಿತ್ತು. ಇದು ಕಾರಣ ಉರಿಕೊಂಡ ಕರ್ಪುರದ ಕರಿ ಕಂಡವರುಂಟೆ ? ಅಪ್ಪುವುಂಡ ಉಪ್ಪಿನ ಹರಳ ಮರಳಿ ಹೊರೆಯ ಕಟ್ಟಿ ಹೊತ್ತವರುಂಟೆ ? ವಾಯುಕೊಂಡ ಜ್ಯೋತಿಯ ಬೆಳಗ ಕಂಡವರುಂಟೆ ? ಹರಿ ಬ್ರಹ್ಮಾದಿಗಳ್ಗೆಯು ಕಾಣಬಾರದಾಗಿ. ಮಣ್ಣಿನ ಸಾರಾಯದಿಂದ ಮರನುತ್ಪತ್ಯ. ಮರದ ಸಾರಾಯದಿಂದ ಎಲೆಯುತ್ಪತ್ಯ ಎಲೆಯ ಸಾರಾಯದಿಂದ ಹೂವ ಉತ್ಪತ್ಯ ಹೂವ ಸಾರಾಯದಿಂದ ಕಾಯಿ ಉತ್ಪತ್ಯ ಕಾಯ ಸಾರಾಯದಿಂದ ಹಣ್ಣು ಉತ್ಪತ್ಯ ಹಣ್ಣಿನ ಸಾರಾಯದಿಂದ ರುಚಿ ಉತ್ಪತ್ಯ ರುಚಿಯಿಂದತ್ತ ಇಲ್ಲವೆಂಬ ತತ್ವ. ಮಣ್ಣು ಮರನು ಅಳಿದ ಬಳಿಕ ಬೇರೆ ರುಚಿಯಿಪ್ಪಠಾವುಂಟೆ ? ದೇಹವಳಿದ ಬಳಿಕ ಪ್ರಾಣವಿಪ್ಪುದಕ್ಕೆ ಠಾವುಂಟೆ ? ಇಲ್ಲವಾಗಿ; ಇದು ಕಾರಣ, ಗುಹೇಶ್ವರನೆಂಬ ಲಿಂಗವ ಒಡಲು ವಿಡಿದು ಕಂಡೆ ಕಾಣಾ. ಸಿದ್ಧರಾಮಯ್ಯ.
--------------
ಅಲ್ಲಮಪ್ರಭುದೇವರು
ಯುಗಜುಗಂಗಳು ಮಹಾಪ್ರಳಯವಾದಲ್ಲಿ ಉಳಿಯಿತ್ತೊಂದು ಮಲಯಜದ ಬೇರು. ಬೇರಿನಲ್ಲಿ ಮಣ್ಣು ಸಿಕ್ಕಿ, ಮಣ್ಣಿನ ಸಾರಕ್ಕೆ ಬೇರು ಚಿಗಿತು, ಮೂರು ಕೊನರಾಯಿತ್ತು. ಮೂರು ಕೊನರು ಬಲಿದು, ಐದು, ಕೊಂಬಾಯಿತ್ತು. ಐದು ಕೊಂಬಿನ ತುದಿಯಲ್ಲಿ ಆರೆಲೆ ಚಿಗಿತು, ಆರೆಲೆಯ ಅಡಿಯಲ್ಲಿ ಮೂರು ಹೂದೋರಿತ್ತು. ಹೂ ಮೀರಿ ಬಲಿವುದಕ್ಕೆ ಮೊದಲೆ, ಮರ ಬಲಿದು ಹಣ್ಣಾಯಿತ್ತು. ಹಣ್ಣಿನ ಬೀಜ ರಸವನುಂಡು, ಕಾದಿದ ಅಣ್ಣಂಗೆ ಇಲ್ಲವಾಯಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ನಿಃಪತಿಯನೈದಿದ ಕಾರಣ.
--------------
ಸಗರದ ಬೊಮ್ಮಣ್ಣ
ಅಷ್ಟತನುಮೂರ್ತಿ ಶಿವನೆಂಬ ಕಷ್ಟಜೀವಿಗಳನೇನೆಂಬೆನಯ್ಯಾ? ಯುಗಜುಗಂಗಳು ಪ್ರಳಯವಹಲ್ಲಿ ಧರೆ ಜಲದಲ್ಲಿ ಅಡಗಿತ್ತು, ಜಲ ಅಗ್ನಿಯಲ್ಲಿ ಅಡಗಿತ್ತು, ಅಗ್ನಿ ವಾಯುವಿನಲ್ಲಿ ಅಡಗಿತ್ತು, ವಾಯು ಆಕಾಶದಲ್ಲಿ ಅಡಗಿತ್ತು, ಆಕಾಶ ಅತೀತನಲ್ಲಿ ಅಡಗಿತ್ತು, ಅತೀತ ಆದಿಯೊಳಗಡಗಿತ್ತು, ಆದಿ ಅನಾದಿಯೊಳಡಗಿತ್ತು, ಅನಾದಿ ನಿಜದೊಳಡಗಿತ್ತು. ಇಂತೀ ಅಷ್ಟತನು ಒಂದರೊಳಗೊಂದಳಿವಲ್ಲಿ, ಒಂದರೊಳಗೊಂದು ಹುಟ್ಟುವಲ್ಲಿ, ಎಂದಳಿದನೆಂದು, ಹುಟ್ಟಿದನೆಂದು ಬಲ್ಲವರುಂಟೆ? ಹುಟ್ಟಿದನಳಿದವನೆಂಬ ಶಬ್ದವ ನುಡಿಯಲಾಗದು. ಇದು ಕಾರಣ, ನಮ್ಮ ಮಹಾಘನ ಸೋಮೇಶ್ವರನು ಮಾಡಿದಡಾದವು, ಬೇಡಾ ಎಂದಡೆ ಮಾದವು.
--------------
ಅಜಗಣ್ಣ ತಂದೆ
ಪೃಥ್ವಿ ಅಪ್ಪು ತೇಜ ವಾಯು ಆಕಾಶಂಗಳು ತಲೆದೋರುವುದಕ್ಕೆ ಮುನ್ನವೆ, ಯುಗಜುಗಂಗಳು ಪ್ರಮಾಣಿಸುವುದಕ್ಕೆ ಮುನ್ನವೆ, ನಾಲ್ಕು ವೇದ ಹದಿನಾರುಶಾಸ್ತ್ರ ಇಪ್ಪತ್ತೆಂಟು ದಿವ್ಯಪುರಾಣಂಗಳು ಕುರುಹುಗೊಳ್ಳುವುದಕ್ಕೆ ಮುನ್ನವೆ, ನಿರಾಳ ಸುರಾಳವೆಂಬ ಬಯಲು ಅವಗವಿಸುವುದಕ್ಕೆ ಮುನ್ನವೆ, ಬ್ರಹ್ಮಾಂಡವೆಲ್ಲಿ ಆಯಿತ್ತು ? ವಿಷ್ಣುವಿನ ಚೇತನ ಎಲ್ಲಿ ಹುಟ್ಟಿತ್ತು ? ಮಹಾರುದ್ರನ ದ್ವೇಷ ಎಲ್ಲಿ ಹುಟ್ಟಿ, ಎಲ್ಲಿ ಅಡಗಿತ್ತು ಹೇಳಾ ? ನಾದಬಿಂದುಕಳೆಗೆ ಅತೀತವಪ್ಪ ಲಿಂಗವ ಭೇದಿಸಿ ವೇಧಿಸಲರಿಯದೆ, ಭಾವಭ್ರಮೆಯಿಂದ ನಾನಾ ಸಂದೇಹಕ್ಕೆ ಒಳಗಾಗಿ, ಜೀವ ಪರಮನ ನೆಲೆಯ ಕಂಡೆಹೆನೆಂದು ಆವಾವ ಠಾವಿನಲ್ಲಿ ಕರ್ಕಶಗೊಂಬವಂಗೆ, ಪ್ರಾಣಲಿಂಗಿಯೆಂಬ ಭಾವ ಒಂದೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹಗಲಿರುಳ್ಗಳಿಲ್ಲದಂದು, ಯುಗಜುಗಂಗಳು ಮರಳಿ ಮರಳಿ ತಿರುಗದಂದು, ಗಗನ ಮೇರು ಕೈಲಾಸಂಗಳಿಲ್ಲದಂದು, ಖಗ ಮೃಗ ಶೈಲ ವೃಕ್ಷಂಗಳಿಲ್ಲದಂದು, ಅಜಹರಿಸುರಾಸುರ ಮನುಮುನಿಗಳಿಲ್ಲದಂದು, ಜಗದ ಲೀಲಾವೈಭವಂಗಳೇನೂ ಇಲ್ಲದಂದು, ಅಖಂಡೇಶ್ವರಾ, ನಿಮ್ಮ ನೀವರಿಯದೆ ಅನಂತಕಾಲವಿರ್ದಿರಂದು.
--------------
ಷಣ್ಮುಖಸ್ವಾಮಿ
ಬ್ರಹ್ಮ ಮಡಕೆಯಾಗಿ, ವಿಷ್ಣು ಮಂತಾಗಿ, ಯುಗಜುಗಂಗಳು ಮೊಸರಾಗಿ, ಅಹುದಲ್ಲಯೆಂಬ ಎರಡು ಕಡೆಗುಣಿಯ ನೇಣು; ನೆಟ್ಟ ಸ್ಥಾಣು ರುದ್ರಮುರ್ತಿ, ಹಿಡಿದು ಕಡೆವ ಕಣ್ಣ ಕಂಗಳ ನೋಟ ಇದು ಅತಿ ಮಥನವಾಗಿದೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಮೊರನ ಹೊಲಿವ ಗವರ ನಾನೆತ್ತ ಬಲ್ಲೆನು? ಕಟ್ಟಿಕೊಂಡಾತ ಭಕ್ತನಪ್ಪನೆ, ಕೆಡಹಿದಾತ ದ್ರೋಹಿಯಪ್ಪನೆ? ಆ ಲಿಂಗವು ಕಟ್ಟಲಿಕೆ, ತನ್ನ ಕೈಯಲ್ಲಿಪ್ಪುದೆ? ಕೆಡಹಲಿಕೆ, ಬೀಳಲು ಬಲ್ಲುದೆ? ಆ ಲಿಂಗ ಬಿದ್ದ ಬಳಿಕ, ಜಗತ್ತು ಉಳಿಯಬಲ್ಲುದೆ. ಆ ಪ್ರಾಣಲಿಂಗ ಬಿದ್ದಬಳಿಕ, ಆ ಪ್ರಾಣ ಉಳಿಯಬಲ್ಲುದೆ. ಆ ಲಿಂಗ ಬಿದ್ದಿತ್ತೆಂಬ ಸೂತಕದ ಶಬ್ದ ಭ್ರಾಂತುವಿನ ಪುಂಜ ಅಂತು ಅದ ಕೇಳಲಾಗದು. ಯುಗಜುಗಂಗಳು ಗತವಹವಲ್ಲದೆ, ಲಿಂಗಕ್ಕೆ ಗತ ಉಂಟೆ? ಲಿಂಗ ಬಿದ್ದಿತ್ತೆಂದು ನಿಂದಿಸಿ ನುಡಿವ ದ್ರೋಹಿಗಳ ಮಾತ ಕೇಳಲಾಗದು, ಗವರೇಶ್ವರಾ.
--------------
ಮೇದರ ಕೇತಯ್ಯ
ಈರೇಳುಲೋಕ, ಹದಿನಾಲ್ಕು ಭುವನವಳಯದಲ್ಲಿ ಜಂಬೂದ್ವೀಪ ನವಖಂಡ ಪೃಥ್ವಿ ಹಿಮಸೇತು ಮಧ್ಯದೊಳಗಾದ ಖಂಡಮಂಡಲ ಯುಗಜುಗಂಗಳು, ಪಂಚಭೌತಿಕ ಪಂಚವಿಂಶತಿತತ್ವ ಸಕಲವಾಸಂಗಳೆಲ್ಲವು ತನ್ನ ಸಾಕಾರದಲ್ಲಿ ತೋರುವುದು. ಉತ್ತಮ ಕನಿಷ* ಮಧ್ಯಮವೆಂಬ ಸುಕ್ಷೇತ್ರವಾಸ, ತನ್ನಂಗದಲ್ಲಿ ಸುಳಿದಾಡುವ ಮಂಗಳಮಯದಿರವ, ಸಕಲೇಂದ್ರಿಯವ ಬಂಧಿಸದೆ ಕೂಡಿ, ಅವರವರ ಅಂಗದ ಮುಖದಲ್ಲಿ ಲಿಂಗಕ್ಕೆ ಕೊಟ್ಟು, ಸುಸಂಗಿಯಾಗಿ ವಸ್ತುವಿನ ಅಂಗದಲ್ಲಿ ಬೆರಸು. ನೀನರಿದನೆಂಬುದಕ್ಕೆ ಬೇರೊಂದು ಕಡೆಯಿಲ್ಲ. ನೀ ಮರೆದನೆಂಬುದಕ್ಕೆ ಬೇರೊಂದು ಮನವಿಲ್ಲ. ವಸ್ತು ದ್ರವ್ಯವ ತೋರಿ ಅಳಿದ ಮತ್ತೆ ವಸ್ತುವ ಕೂಡಿದಂತೆ, ಜಗಕ್ಕೆ ಭಕ್ತಿಯ ತೋರಿ ವಸ್ತು ಲೇಪ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಐಕ್ಯಲೇಪವಾದ.
--------------
ಸಗರದ ಬೊಮ್ಮಣ್ಣ
ಕಟ್ಟಿದಾತ ಭಕ್ತನಪ್ಪನೆ ? ಕೆಡಹಿದಾತ ದ್ರೋಹಿಯಪ್ಪನೆ ? ಲಿಂಗವ ಕಟ್ಟಲಿಕ್ಕೆ ತನ್ನ ಕೈಯೊಳಗಿಪ್ಪುದೆ ? ಕೆಡಹಲಿಕ್ಕೆ ಬೀಳಬಲ್ಲುದೆ ? ಆ ಲಿಂಗವು ಬಿದ್ದ ಬಳಿಕ ಜಗವು ತಾಳಬಲ್ಲುದೆ ? ಪ್ರಾಣಲಿಂಗ ಬಿದ್ದ ಬಳಿಕ ಆ ಪ್ರಾಣ ಉಳಿಯಬಲ್ಲುದೆ ? ಲಿಂಗ ಬಿದ್ದಿತ್ತೆಂಬುದು ಸೂತಕದ ಶಬ್ದ, ಭ್ರಾಂತುವಿನ ಪುಂಜ. ಅಂತು ಅದ ಕೇಳಲಾಗದು. ಯುಗಜುಗಂಗಳು ಗತವಹವಲ್ಲದೆ ಲಿಂಗಕ್ಕೆ ಗತವುಂಟೆ ? ಲಿಂಗವು ಬಿದ್ದಿತ್ತೆಂದು ನಿಂದಿಸಿ ನುಡಿವ ದ್ರೋಹಿಯ ಮಾತ ಕೇಳಲಾಗದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬಯಲು ಬ್ರಹ್ಮಾಂಡಂಗಳಿಲ್ಲದಲ್ಲಿ, ಯುಗಜುಗಂಗಳು ತಲೆದೋರದಲ್ಲಿ, ಅಲ್ಲಿಂದಾಚೆ ಹುಟ್ಟಿತ್ತು. ಕರಚರಣಾದಿ ಅವಯವಂಗಳಿಲ್ಲದ ಶಿಶು. ಬಲಿವುದಕ್ಕೆ ಬಸಿರಿಲ್ಲ, ಬಹುದಕ್ಕೆ ಯೋನಿಯಿಲ್ಲ, ಮಲಗುವುದಕ್ಕೆ ತೊಟ್ಟಿಲಿಲ್ಲ. ಹಿಂದು ಮುಂದೆ ಇಲ್ಲದ, ತಂದೆ ತಾಯಿಯಿಲ್ಲದ ತಬ್ಬಲಿ. ನಿರ್ಬುದ್ಧಿ ಶಿಶುವಿಂಗೆ ಒಸೆದು ಮಾಡಿಹೆನೆಂಬವರು ವಸುಧೆಯೊಳಗೆ ಇದು ಹುಸಿಯೆಂದೆ. ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗದಲ್ಲಿ ಭರಿತನಾದವಂಗಲ್ಲದಿಲ್ಲ.
--------------
ಮನುಮುನಿ ಗುಮ್ಮಟದೇವ
ಶತಕೋಟಿ ಲೋಕಂಗಳೆಲ್ಲ ಬಸವಣ್ಣನ ಕೋಡಿನಲ್ಲಿರ್ದವು ನೋಡಾ. ಅತೀತವಪ್ಪ ಪರಶಿವನು, ಬಸವಣ್ಣನ ಹಿಳಿಲ ಕೆಳಗೆ ಸೂಕ್ಷ್ಮರೂಪಾಗಿರ್ದನು ನೋಡಾ. ಸಕಲ ಶ್ರುತಿ ಸ್ಮೃತಿಗಳೆಲ್ಲ ಬಸವಣ್ಣನ ಹೊಗಳಲರಿಯದೆ ಕೆಟ್ಟವು ನೋಡಾ. ಕರ್ತನಾದನಲ್ಲದೆ ಭೃತ್ಯನಲ್ಲ, ಭಿನ್ನಾಣವ ಹೋಲಲರಿಯೆ ಒಂದೆತ್ತಿಲ್ಲದಿರ್ದಡೆ ಕತ್ತಲೆಯಾಗದೆ ಈ ಜಗವೆಲ್ಲವು ? ಹರಿವ ನದಿಗಳೆಲ್ಲ ಅಮೃತವಾದವು ಕಾಣಾ ಬಸವಣ್ಣ ನಿನ್ನಿಂದ ! ಹರಿಹನ್ನಿಕೋಟಿ ಯುಗಜುಗಂಗಳು ನಿನ್ನ ಉಸಿರಿನಲ್ಲಿ ಒತ್ತಿದಡೆ ಬ್ರಹ್ಮಾಂಡಕ್ಕೆ ಹೋದವು, ಬಿಟ್ಟಡೆ ಬಿದ್ದವು, ಕಾದಡೆ ಬದುಕಿದವು. ನೀನು ಹೊರೆವ ಯುಗಜುಗಂಗಳು ಒಂದು ತೃಣಮಾತ್ರವಾದ ಕಾರಣ ನಿನ್ನ ಹಸುಮಕ್ಕಳವರೆನುತಿರ್ದೆನಯ್ಯಾ. ನಿನ್ನ ಗೋಮಯದ ಷಡುಸಮ್ಮಾರ್ಜನೆಯ ಮೇಲೆ ಕುಳ್ಳಿರ್ದು ಗುಹೇಶ್ವರಲಿಂಗವು ಶುದ್ಧನಾದನು, ಕಾಣಾ ಸಂಗನಬಸವಣ್ಣಾ ನಿನ್ನಿಂದ !
--------------
ಅಲ್ಲಮಪ್ರಭುದೇವರು
-->