ಅಥವಾ

ಒಟ್ಟು 13 ಕಡೆಗಳಲ್ಲಿ , 9 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ: ಜಾತಿ ಘನವೊ ಗುರುದೀಕ್ಷೆ ಘನವೊ ? ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ ಗುರುದೀಕ್ಷೆ ಪಡೆದು, ಗುರುಕರಜಾತರಾಗಿ ಜಾತಕವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ ? ಜಾತಿವಿಡಿದು ಕಳೆಯಿತ್ತೆ ಜಾತಿತಮವು ? ಅಜಾತಂಗೆ ಆವುದು ಕುಲಳ ಆವ ಕುಲವಾದಡೇನು ದೇವನೊಲಿದಾತನೆ ಕುಲಜ. ಅದೆಂತೆಂದಡೆ; ದೀಯತೇ ಜಾÕನಸಂಬಂಧಃ ಕ್ಷೀಯತೇ ಚ ಮಲತ್ರಯಂ ದೀಯತೇ ಕ್ಷೀಯತೇ ಯೇನ ಸಾ ದೀಕ್ಷೇತಿ ನಿಗದ್ಯತೇ ಎಂಬುದನರಿದು, ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು ಅವನೊಡಗೂಡಿಕೊಂಡು ನಡೆದು ಜಾತಿ ಎಂಜಲುಗಳ್ಳರಾಗಿ ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ ಹಂದಿ-ನಾಯಂತೆ ಒಡಲ ಹೊರೆವ ದರುಶನಜಂಗುಳಿಗಳು ಜಂಗಮಪಥಕ್ಕೆ ಸಲ್ಲರಾಗಿ. ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ, ಜಂಗಮವಿಲ್ಲ ಜಂಗಮಪ್ರಸಾದವಿಲ್ಲ. ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗ? ಸ್ವಯ-ಚರ-ಪರವೆಂದಾರಾಧಿಸಿ ಪ್ರಸಾದವ ಕೊಳಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಮತ್ತಮಾ, ಸಹಸ್ರಕಮಲದ ವಿಭಾಗೆಯಂ ಋಗ್ವೇದದಲ್ಲಿ ತೋರ್ದಪೆನೆಂತೆನೆ- `ಆಪ್ಮಾನಂ ತೀರ್ಥಂ ಕ ಇಹ ಪ್ರಾಚಥ್ಯೇನಪಥಾ ಪ್ರಪಿಬಂತಿಸುತಸ್ಯ ವದ್ಯಾವಾಪೃಥುವೀ ತಾವದಿತ್ತತ್ ಸಹಸ್ರಥಾ ಪಂಚದಶಾನ್ಯುಕ್ಥೌ ಯಾ- ಸಹಸ್ರಥಾ ಮಹಿಮಾನಃ ಸಹಸ್ರಃ ಯಾವದ್ಬ ್ರಹ್ಮಾದ್ಥಿಷ್ಠಿತಂ ತಾವತೀ ವಾಕ್' ಟೀಕೆ|| ಸಹಸ್ರಥಾ- ಸಾವಿರ ಪ್ರಕಾರವಾದ ಮಹಿಮಾನಃ- ಮಹಿಮರೂಪರಾದ ಚಿದಾನಂದಾತ್ಮರುಗಳು ಬ್ರಹ್ಮಾದ್ಥಿಷ್ಠಿತಂ- `ಬ್ರಹ್ಮಾತ್ಮನಾಂ ಬ್ರಹ್ಮಮಹದ್ಯೋನಿರಹಂ ಬೀಜಪ್ರದಃ ಪಿತಾ' ಎಂದುಂಟಾಗಿ, ಬ್ರಹ್ಮವೆಂದು ಪ್ರಕೃತಿ- ಆ ಪ್ರಕೃತಿಯಿಂದೆ ಅದ್ಥಿಷ್ಠಿತಂ- ಅದ್ಥಿಷ್ಠಿಸಲ್ಪಟ್ಟುದಾಗಿ ಸಹಸ್ರಃ- ಸಾವಿರಗಣನೆಯನುಳ್ಳುದಾಗಿ ಇತ್- ಲಯಾದ್ಥಿಷ್ಠಾನ ರೂಪವಾದ ತತ್- ಆ ಬ್ರಹ್ಮವು, ಯಾವತ್- ಎಷ್ಟು ಪ್ರಮಾಣವುಳ್ಳುದು ತಾವತ್- ಅಷ್ಟು ಪ್ರಮಾಣವಾಗಿ ಆಪ್ಮಾನಂ- ಪಾದೋದಕರೂಪವಾದ, ತೀರ್ಥಂ- ತೀರ್ಥವನು ಯೇನ ಪಥಾ- ಆವಮಾರ್ಗದಿಂದೆ, ಸು- ಚೆನ್ನಾಗಿ ಪ್ರ ಪಿಬಂತಿ- ಪಾನವ ಮಾಡುವರು ತಸ್ಯ- ಆ ಮಾರ್ಗದ, ಉಕ್ಥಾ- ನಿಲುಕಡೆಯಾದ ವಾಕ್- ಶಬ್ದಬ್ರಹ್ಮವು ಸಹಸ್ರಥಾ- ಸಾವಿರ ಪ್ರಕಾರವುಳ್ಳದಾಗಿ ದ್ಯಾವಾ ಪೃಥಿವೀ- ದ್ಯಾವಾಪೃಥುಗಳ ವ್ಯಾಪಿಸಿಕೊಂಡುದಾಗಿ ಪಂಚ ದಶಾನಿ- ಐವತ್ತು ವರ್ಣಂಗಳಾಕಾರವುಳ್ಳುದಾಗಿ ತಾವತಿ- ಅಷ್ಟಾಗಿಹುದೆಂದು, ಕಃ- ಚತುರ್ಮುಖದ ಬ್ರಹ್ಮನು ಇಹ- ಈರ್ಣಾಧ್ರ್ವದಲ್ಲಿ ಪ್ರಾವೋಚತ್- ನುಡಿದನೆಂದು- ನಿರವಿಸಿದೆಯಯ್ಯಾ ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ತನಗೊಬ್ಬರು ಮುನಿದರು ತಾನಾರಿಗೂ ಮುನಿಯಲಾಗದು. ಮನೆಯ ಕಿಚ್ಚು ಮೊದಲೊಮ್ಮೆ ಮನೆಯ ಸುಡುವಂತೆ ತನ್ನ ಕೋಪ ತನ್ನನೆ ಸುಡುವುದು ನೋಡಯ್ಯ. ಸವಿಮಾತುಗಳು ಬೇಗದಿಂದ ಆ ಕ್ರೋಧವ [ಗೆಲಿದಿರ್ಪುದು] ಸಾಕ್ಷಿ: ಸಶ್ರುತಃ ಸಾತ್ವಿಕೋ ವಿದ್ವಾನ್ ಸ ತಪಸ್ವೀ ಜಿತೇಂದ್ರಿಯಃ ಯೇನ ಶಾಂತೇನ ಖಡ್ಗೇನ ಕ್ರೋಧಶತ್ರುರ್ನಿಪಾದಿತಃ ಇಂತೆಂದುದಾಗಿ ಆ ಕ್ರೋಧ ದುರ್ಜನರ ಗೆಲುವುದು. ಇಂತೀ ಸೋತುದಕ್ಕೆ ಸೋತವರ ಕೂಡೆ ಎತ್ತಣ ವಿರೋಧವಯ್ಯ? ಸೌರಾಷ್ಟ್ರ ಸೋಮೇಶ್ವರನ ಶರಣರು ಸಚರಾಚರಪ್ರಾಣಿಗಳಲ್ಲಿ ವಿರೋಧವಿಲ್ಲದಿರಬೇಕು.
--------------
ಆದಯ್ಯ
ಉದಾಸೀನವ ಮಾಡದ[ಮಾಡಿದ?] ಭಕ್ತರ ಮಂದಿರದಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವ ಜಂಗಮದ ಪರಿಯಾಯವೆಂತೆಂದಡೆ; ಆ ಭಕ್ತನ ಗೃಹದಲ್ಲಿ ಕರ್ತನಾಗಿ ನಿಂದು ಭಾಂಡಭಾಜನಂಗಳ ಮುಟ್ಟಿ ಸೇವೆಯ ಮಾಡುವ ಆ ಭಕ್ತನ ಸತಿಸುತಮಾತೆ ಸಹೋದರ ಬಂಧುಜನ ಭೃತ್ಯ ದಾಸಿಯರು ಮೊದಲಾದ ಸರ್ವರೂ ಲಿಂಗಾರ್ಚಕ ಶ್ರೇಷ*ರು ಪಾದೋದಕ ಪ್ರಸಾದ ವಿಶ್ವಾಸ ಭಕ್ತಿಯುಕ್ತರೆಂಬುದನರಿದು ಅಂದಂದಿಂಗವರ ಹೊಂದಿ ಮುಂದುಗೊಂಡಿರ್ಪ ತಾಮಸಗಳನ್ನು ಹಿಂದುಗಳವುತ್ತ ಸತ್ಯ ಭಕ್ತಿಯನು ಬಂದ ಪದಾರ್ಥವನು ಪ್ರಸಾದವೆಂದೇ ಕಂಡು ಕೈಕೊಂಡು ಲಿಂಗಾರ್ಪಿತ ಘನಪ್ರಸಾದಭೋಗಿಯಾಗಿ ತನ್ನ ಒಕ್ಕುದ ಮಿಕ್ಕುದನಾ ಭಕ್ತಜನಕಿಕ್ಕಿ ತನ್ನಲ್ಲಿ ಒಡಗೂಡಿಕೊಂಡು ಸಲುಹಬಲ್ಲ ಜಂಗಮವೇ ಜಗತ್‍ಪಾವನ. ಇನಿತಲ್ಲದೆ ಅವರು ನಡೆದಂತೆ ನಡೆಯಿಲಿ, ಅವರು ಕೊಂಡ ಕಾರಣ ನಮಗೇಕೆಂದು ಆ ಭಕ್ತಜನಂಗಳಲ್ಲಿ ಹೊದ್ದಿರ್ದ ತಾಮಸಂಗಳನು ಪರಿಹರಿಸದೆ ತನ್ನ ಒಡಲುಕಕ್ಕುಲತೆಗೆ ಉಪಾಧಿಯ ನುಡಿದು ತಮ್ಮ ಒಡಲ ಹೊರೆವ ದರುಶನಜಂಗುಳಿಗಳೆಲ್ಲರೂ ಜಂಗಮಸ್ಥಲಕ್ಕೆ ಸಲ್ಲರು. ಅದೆಂತೆಂದೊಡೆ; ತಾಮಸಂ ಭಕ್ತಗೇಹಾನಾಂ ಶ್ವಾನಮಾಂಸಸಮಂ ಭವೇತ್ ಇತಿ ಸಂಕಲ್ಪ್ಯ ಭುಂಜಂತಿ ತೇ ಜಂಗಮಾ ಬಹಿರ್ನರಾಃ ಶ್ವಾಪಿಂಡಂ ಕುರುತೇ ಯೇನ ಲಾಂಗೂಲೇ ಚಾಲನಂ ಯಥಾ. ಉಪಾಧಿಜಂಗಮಂ ಯಸ್ಯ ತಸ್ಯ ಜೀವೇಶ್ಚ ಗಚ್ಛಯೇತ್ ಇಂತೆಂದುದಾಗಿ ಇದು ಕಾರಣ ತಾಮಸವಿಡಿದು ಮಾಡುವಾತ ಭಕ್ತನಲ್ಲ. ಆ ತಾಮಸ ಮುಖದಿಂದ ಮಾಯೋಚ್ಛಿಷ*ವ ಕೊಂಡಾತ ಜಂಗಮವಲ್ಲ ಅವರೀರ್ವರನ್ನು ಕೂಡಲಚೆನ್ನಸಂಗಯ್ಯ ಇಪ್ಪತ್ತೆಂಟುಕೋಟಿ ನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಶ್ರೀಗುರುಸ್ವಾಮಿ ಕರುಣಿಸಿಕೊಟ್ಟು ಪ್ರಾಣಲಿಂಗವು ಪಂಚಬ್ರಹ್ಮಮುಖವುಳ್ಳ ವಸ್ತುವೆಂದರಿವುದು. ಆ ಪಂಚಬ್ರಹ್ಮಮುಖಸಂಜ್ಞೆಯ ಭೇದವೆಂತೆಂದಡೆ: ಆವುದಾನೊಂದು ಶಿವಸಂಬಂಧವಾದ ಪರಮತೇಜೋಲಿಂಗವು ತನ್ನ ಭೋಗಾದಿಕಾರಣ ಮೂರ್ತಿಗಳಿಂದುದಯವಾದ ಬ್ರಹ್ಮಾದಿತೃಣಾಂತವಾದ ದೇಹಿಗಳಿಂದಲೂ ವೋಮಾದಿಭೂತಂಗಳಿಂದಲೂ ಇತ್ಯಾದಿ ಸಮಸ್ತತತ್ತ್ವಂಗಳಿಂದಲೂ ಮೇಲಣ ತತ್ತ್ವವುಪ್ಪುದೇ ಕಾರಣವಾಗಿ ಪರವೆಂಬ ಸಂಜ್ಞೆಯದುಳ್ಳುದಾಗಿಹುದು. ಅನಂತಕೋಟಿಬ್ರಹ್ಮಾಂಡಗಳ ತನ್ನೊಳಡಗಿಸಿಕೊಂಡು ಸಮಸ್ತಜಗಜ್ಜನಕ್ಕೆ ತಾನೇ ಕಾರಣವಾಗಿ ಅವ್ಯಕ್ತಲಕ್ಷಿತವಾದ ನಿಮಿತ್ತಂ ಗೂಢವೆಂಬ ಸಂಜ್ಞೆಯದುಳ್ಳುದಾಗಿಹುದು. ತಾನು ಶೂನ್ಯ ಶಿವತತ್ತ್ವಭೇದವಾಗಿ ಆಯಸ್ಕಾಂತ ಸನ್ನಿಧಿಯಿಂದ ಲೋಹವೇ ಹೇಗೆ ಭ್ರಮಿಸುವುದೋ ಹಾಗೆ ಬ್ರಹ್ಮಾದಿಗಳ ಹೃತ್ಕಮಲಮಧ್ಯದಲ್ಲಿದ್ದು ತನ್ನ ಚಿಚ್ಛಕ್ತಿಯ ಸನ್ನಿಧಿಮಾತ್ರದಿಂದ ಅಹಮಾದಿಗಳಿಂ ವ್ಯೋಮಾದಿಭೂತಂಗಳಂ ಸೃಷ್ಟಿಸುವುದಕ್ಕೆ ತಾನೇ ಕಾರಣವಪ್ಪುದರಿಂದ ಶರೀರಸ್ಥವೆಂಬ ಸಂಜ್ಞೆಯದುಳ್ಳುದಾಗಿಹುದು. ತನ್ನ ಸೃಷ್ಟಿಶಕ್ತಿಯಿಂದುದಯವಾದ ಸಮಸ್ತಸಂಸಾರಾದಿ ಪ್ರಪಂಚವು ತನ್ನಿಂದಲೇ ಕಾರಣವಪ್ಪುದರಿಂ ಅನಾದಿವತ್ತೆಂಬ ಸಂಜ್ಞೆಯದುಳ್ಳುದಾಗಿಹುದು. ತನ್ನ ಮಾಯಾಶಕ್ತಿಯಿಂದುದಯವಾದ ಸ್ತ್ರೀಲಿಂಗ ಪುಲ್ಲಿಂಗ ನಪುಸಕಲಿಂಗವೆಂಬ ತ್ರಿಲಕ್ಷಿತವಾದ ಸಮಸ್ತಪ್ರಪಂಚವು ವರ್ತಿಸುವುದಕ್ಕೆ ತಾನೇ ಕ್ಷೇತ್ರವಾದ ಕಾರಣ ಲಿಂಗಕ್ಷೇತ್ರವೆಂಬ ಸಂಜ್ಞೆಯದುಳ್ಳುದಾಗಿಹುದು. ಈ ಪ್ರಕಾರದಿಂ ಪರಬ್ರಹ್ಮಲಿಂಗವು ಪಂಚಮುಖಸಂಜ್ಞೆಯ ನುಳ್ಳುದಾಗಿಹುದೆಂದರಿವುದು. ಅದೆಂತೆಂದಡೆ:ಅದಕ್ಕೆ ವಾತುಳಾಗಮದಲ್ಲಿ, ಅಖಿಳಾರ್ಣವಲಯಾನಾಂ ಲಿಂಗತತ್ತ್ವಂ ಪರಂ ತತಃ ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ ಯದಾದ್ಯಮೈಶ್ವರಂ ತೇಜಸ್ತಲ್ಲಿಂಗಂ ಪಂಚಸಂಜ್ಞಕಂ ಎಂದೆನಿಸುವ ಲಿಂಗವು. ಮತ್ತಂ, ವಾಶಿಷ*ದಲ್ಲಿ: ಪಿಂಡಬ್ರಹ್ಮಾಂಡಯೋರೈಕ್ಯಂ ಲಿಂಗಸೂತ್ರಾತ್ಮನೋರಪಿ ಸ ಬಾಹ್ಯಾಂತರಯೋರೈಕ್ಯಂ ಕ್ಷೇತ್ರಜ್ಞಪರಮಾತ್ಮನೋಃ ಎಂದೆನಿಸುವ ಲಿಂಗವು. ಮತ್ತಂ ಬ್ರಹ್ಮಾಂಡಪುರಾಣದಲ್ಲಿ, ಅಧಿಷಾ*ನಂ ಸಮಸ್ತಸ್ಯ ಸ್ಥಾವರಸ್ಯ ಚರಸ್ಯ ಚ ! ಜಗತೋ ಯದ್ಭವೇತ್‍ತತ್ತ್ವಂ ತದ್ದಿವ್ಯಂ ಸ್ಥಲಮುಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಶಿವರಹಸ್ಯದಲ್ಲಿ, ಮಹಾಲಿಂಗಮಿದಂ ದೇವಿ ಮನೋ[s]ತೀತಮಗೋಚರಂ ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ ಎಂದೆನಿಸುವ ಲಿಂಗವು. ಮತ್ತಂ ಉತ್ತರವಾತುಳದಲ್ಲಿ, ಆದ್ಯಂತಶೂನ್ಯಮಮಲಂ ಪರಿಪೂರ್ಣಮೇಕಂ ಸೂಕ್ಷ್ಮಂ ಪರಾತ್ಪರಮನಾಮಯಮಪ್ರಮೇಯಂ ಚಿಚ್ಛಕ್ತಿಸಂಸ್ಫುರಣರೂಢಮಹಾತ್ಮಲಿಂಗಂ ಭಾವೈಕಗಮ್ಯಮಜಡಂ ಶಿವತತ್ತ್ವಮಾಹುಃ ಎಂದೆನಿಸುವ ಲಿಂಗವು. ಮತ್ತಂ ಅಥರ್ವಣವೇದದಲ್ಲಿ, ಶಿವಂ ಪರಾತ್ಪರಂ ಸೂಕ್ಷ್ಮಂ ನಿತ್ಯಂ ಸರ್ವಗತಾವ್ಯಯಂ ಅನಿಂದಿತಮ£õ್ಞಪಮ್ಯಮಪ್ರಮಾಣಮನಾಮಯಮ್ ಶುದ್ಧತ್ವಾಚ್ಛಿವಮುದ್ದಿಷ್ಟಂ ಪರಾದೂಧ್ರ್ವಂ ಪರಾತ್ಪರಂ ಎಂದೆನಿಸುವ ಲಿಂಗವು. ಮತ್ತಂ ಸಾಮವೇದದಲ್ಲಿ, ಅನಂತಮವ್ಯಕ್ತ ಮಚಿಂತ್ಯಮೇಕಂ ಹರಂ ತಮಾಶಾಂಬರಮಪ್ರಮೇಯಂ ಲೋಕೈಕನಾಥಂ ಭುಜಗೇಂದ್ರಹಾರಂ ಅಜಂ ಪುರಾಣಂ ಪ್ರಣಮಾಮಿ ನಿತ್ಯಂ `ಅಣೋರಣೀಯಾನ್ ಮಹತೋ ಮಹೀಯಾನ್' ಎಂದೆನಿಸುವ ಲಿಂಗವು. ಮತ್ತಂ ಶಿವಧರ್ಮಪುರಾಣದಲ್ಲಿ, ಆಕಾಶಂ ಲಿಂಗಮಿತ್ಯಾಹುಃ ಪೃಥ್ವೀ ತಸ್ಯಾದಿಪೀಠಿಕಾ ಆಲಯಸ್ಸರ್ವಭೂತಾನಾಂ ಲಯನಾಲ್ಲಿಂಗಮುಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಗಾರುಡಪುರಾಣದಲ್ಲಿ, ಲಿಂಗಮಧ್ಯೇ ಜಗತ್‍ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ಎಂದೆನಿಸುವ ಲಿಂಗವು. ಮತ್ತಂ ಯಜುರ್ವೇದದಲ್ಲಿ, ವಿಶ್ವತಶ್ಚಕ್ಷುರುತ ವಿಶ್ವತೋಮುಖೋ ವಿಶ್ವತೋಬಾಹುರುತ ವಿಶ್ವತಸ್ಪಾತ್ ಸಂಬಾಹುಭ್ಯಾಂಧಮತಿ ಸಂಪತತ್ರೈದ್ರ್ಯಾವಾಭೂಮೀ ಜನಯನ್ ದೇವ ಏಕಃ ಎಂದೆನಿಸುವ ಲಿಂಗವು. ಮತ್ತಂ ಗಾಯತ್ರಿಯಲ್ಲಿ, `ಓಂ ಭೂಃ ಓಂ ಭುವಃ ಓಂ ಸುವಃ ಓಂ ಮಹಃ ಓಂ ಜನಃ ಓಂ ತಪಃ ಓಂ ಸತ್ಯಂ ಓಂ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್ ಎಂದೆನಿಸುವ ಲಿಂಗವು. ಮತ್ತಂ ಸ್ಕಂದಪುರಾಣದಲ್ಲಿ ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ ತದೇವ ಲಿಂಗಮಿತ್ಯಕ್ತಂ ಲಿಂಗತತ್ತ್ವಪರಾಯಣೈಃ ಎಂದೆನಿಸುವ ಲಿಂಗವು. ಮತ್ತಂ ಜ್ಞಾನವೈಭವಖಂಡದಲ್ಲಿ, ಲಕಾರಂ ಲಯಸಂಪ್ರೋಕ್ತಂ ಗಕಾರಂ ಸೃಷ್ಟಿರುಚ್ಯತೇ ಲಯನಾದ್ಗಮನಾಚ್ಚೈವ ಲಿಂಗಶಬ್ದಮಿಹೋಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಮಹಿಮ್ನದಲ್ಲಿ, 'ಚಕಿತಮಭಿಧತ್ತೇ ಶ್ರುತಿರಪಿ' ಎಂದೆನಿಸುವ ಲಿಂಗವು. ಮತ್ತಂ ಶಿವಧರ್ಮೋತ್ತರದಲ್ಲಿ, 'ನ ಜಾನಂತಿ ಪರಂ ಭಾವಂ' ಯಸ್ಯ ಬ್ರಹ್ಮಸುರಾದಯಃ ಎಂದೆನಿಸುವ ಲಿಂಗವು. ಮತ್ತಂ ಪುರುಷಸೂಕ್ತದಲ್ಲಿ, `ಅತ್ಯತಿಷ*ದ್ದಶಾಂಗುಲಂ ಎಂದೆನಿಸುವ ಲಿಂಗವು. ಮತ್ತಂ ಉಪನಿಷತ್ತಿನಲ್ಲಿ, 'ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂದೆನಿಸುವ ಲಿಂಗವು. ಮತ್ತಂ ಕೂರ್ಮಪುರಾಣದಲ್ಲಿ, 'ವಾಚಾತೀತಂ ಮನೋತೀತಂ ಭಾವಾತೀತಂ ನಿರಂಜನಂ ಅವರ್ಣಮಕ್ಷರಂ ಬ್ರಹ್ಮ ನಿತ್ಯಂ ಧ್ಯಾಯಂತಿ ಯೋಗಿನಃ ' ಎಂದೆನಿಸುವ ಲಿಂಗವು. ಮತ್ತಂ ಋಗ್ವೇದದಲ್ಲಿ, 'ಆಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ ಅಯಂ ಮೇ ವಿಶ್ವಭೇಷಜೋ[s]ಯಂ ಶಿವಾಭಿಮರ್ಶನಃ ಅಯಂ ಮಾತಾ ಅಯಂ ಪಿತಾ ಅಯಂ ಜೀವಾತುರಾಗಮ್ ಎಂದೆನಿಸುವ ಲಿಂಗವು. ಮತ್ತಂ ಉತ್ತರವಾತುಳದಲ್ಲಿ, ಸ ಬಾಹ್ಯಾಭ್ಯಂತರಂ ಸಾಕ್ಷಾಲ್ಲಿಂಗಜ್ಯೋತಿಃ ಪರಂ ಸ್ವಕಂ ತಿಲೇ ತೈಲಮಿವಾಭಾತಿ ಅರಣ್ಯಾಮಿವ ಪಾವಕಃ ಕ್ಷೀರೇ ಸರ್ಪಿರಿವ ಸ್ರೋತಸ್ಯಂಬುವತ್ ಸ್ಥಿತಮಾತ್ಮನಿ ಏಕೋ[s]ಯಂ ಪುರುಷೋ ವಿಶ್ವತೈಜಸಪ್ರಾಜ್ಞರೂಪತಃ ಸದಾ ಸ್ವಾಂಗೇಷು ಸಂಯುಕ್ತಮುಪಾಸ್ತೇ ಲಿಂಗಮದ್ವಯಂ ಎಂದೆನಿಸುವ ಲಿಂಗವು. ಮತ್ತಂ ಲೈಂಗ್ಯದಲ್ಲಿ, ಅನಯೋರ್ದೃಷ್ಟಿಸಂಯೋಗಾಜ್ಞಾಯತೇ ಜ್ಞಪ್ತಿರೂಪಿಣೀ ವೇಧಾದೀಕ್ಷಾ ತು ಸೈವಸ್ಯಾನ್ಮಂತ್ರರೂಪೇಣ ತಾಂ ಶ್ರುಣು ಎಂದೆನಿಸುವ ಲಿಂಗವು. ಮತ್ತಂ ¸õ್ಞರಪುರಾಣದಲ್ಲಿ, ಹಸ್ತಮಸ್ತಕಸಂಯೋಗಾತ್ಕಲಾ ವೇಧೇತಿ ಗೀಯತೇ ಗುರುಣೋದೀರಿತಾ ಕರ್ಣೇ ಸಾ ಮಂತ್ರೇತಿ ಕಥ್ಯತೇ ಶಿಷಾಣಿತಲೇದತ್ತಾ ಸಾ ದೀಕ್ಷಾ ತು ಕ್ರಿಯೋಚ್ಯತೇ ಎಂದೆನಿಸುವ ಲಿಂಗವು. ಮತ್ತಂ ಕಾಳಿಕಾಖಂಡದಲ್ಲಿ, ಅಂಗಂ ಚ ಲಿಂಗಂ ಚ ಮುಖಂ ಚ ಹಸ್ತಂ ಶಕ್ತಿಶ್ಚ ಭಕ್ತಶ್ಚ ತಥಾರ್ಪಣಂ ಚ ಆನಂದಮೇವ ಸ್ವಯಮರ್ಪಣಂ ಚ ಪ್ರಸಾದರೂಪೇಣ ಭವೇತ್ರಿತತ್ತ್ವಂ ಎಂದೆನಿಸುವ ಲಿಂಗವು. ಮತ್ತಂ ಶಂಕರಸಂಹಿತೆಯಲ್ಲಿ, ತದೇವ ಹಸ್ತಾಂಬುಜಪೀಠಮಧ್ಯೇ ನಿಧಾಯ ಲಿಂಗಂ ಪರಮಾತ್ಮಚಿಹ್ನಂ ಸಮರ್ಚಯೇದೇಕಧಿಯೋಪಚಾರರೈರ್ನರಶ್ಚ ಬಾಹ್ಯಾಂತರಭೇದಭಿನ್ನಂ ಎಂದೆನಿಸುವ ಲಿಂಗವು. ಮತ್ತಂ ವೀರಾಗಮದಲ್ಲಿ, ಭಾವಪ್ರಾಣಶರೀರೇಷು ಲಿಂಗಂ ಸಂಸಾರಮೋಚಕಂ ಧಾರಯೇದವಧಾನೇನ ಭಕ್ತಿನಿಷ*ಸ್ಸುಬುದ್ಧಿಮಾನ್ ಎಂದೆನಿಸುವ ಲಿಂಗವು. ಮತ್ತಂ ಶಿವರಹಸ್ಯದಲ್ಲಿ, ಕರ್ಣದ್ವಾರೇ ಯಥಾವಾಕ್ಯಂ ಗುರುಣಾ ಲಿಂಗಮೀರ್ಯತೇ ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಚೈಕಂ ವರಾನನೇ ಎಂದೆನಿಸುವ ಲಿಂಗವು ಮತ್ತಂ ಶಿವರಹಸ್ಯದಲ್ಲಿ, ಏಕಮೂರ್ತಿಸ್ತ್ರಯೋಭಾಗಾಃ ಗುರುರ್ಲಿಂಗಂ ತು ಜಂಗಮಃ ಜಂಗಮಶ್ಚ ಗುರುರ್ಲಿಂಗಂ ತ್ರಿವಿಧಂ ಲಿಂಗಮುಚ್ಯತೇ ಎಂದೆನಿಸುವ ಲಿಂಗವು. ಗುರುಲಿಂಗಜಂಗಮರೂಪಾಗಿ ಎನ್ನ ಕರಸ್ಥಲಕ್ಕೆ ಬಿಜಯಂಗೈದು ಕರತಲಾಮಲಕವಾಗಿ ತೋರುತ್ತೈದಾನೆ. ಆಹಾ ಎನ್ನ ಪುಣ್ಯವೇ, ಆಹಾ ಎನ್ನ ಭಾಗ್ಯವೇ, ಆಹಾ ಎನ್ನ ಸತ್ಯವೇ, ಆಹ ಎನ್ನ ನಿತ್ಯವೇ, ಶಿವ ಶಿವ, ಮಹಾದೇವ, ಮಹಾದೇವ, ಮಹಾದೇವ ನೀನೇ ಬಲ್ಲೆ, ನೀನೇ ಬಲ್ಲೆ, ಉರಿಲಿಂಗಪೆದ್ದಿಪ್ರಿಯವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅಜ್ಞಾನ ಕುಕರ್ಮದಿಂದ ಮುಸುಕಿದ ಕತ್ತಲೆಗೆ ಸುಜ್ಞಾನಜ್ಯೋತಿ ಎರೆಯಲ್ಪಟ್ಟ ಪರಮಗುರುವೆಂದಿತ್ತು ರಹಸ್ಯ. ಸಾಕ್ಷಿ : ``ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ | ಚಕ್ಷುರುನ್ಮೀಲಿತಂ ಯೇನ ತಸ್ಮೆ ೈ ಶ್ರೀಗುರವೇ ನಮಃ ||'' ಎಂದೆಂಬ ಗುರು. ``ಆಕಾಶೋ ಲಿಂಗಮೂಲಂ ಚ ಪೃಥ್ವೀ ತಸ್ಯಾದಿ ಪೀಠಕಂ | ಆಲಯಂ ಸರ್ವಭೂತಾನಾಂ ಲಯಂ ಚ ಲಿಂಗಮುಚ್ಯತೇ ||'' ಎಂದೆಂಬ ಲಿಂಗವು. ``ಜಕಾರಂ ಹಂಸವಾಹಸ್ಯ ಗಕಾರಂ ಗರುಢಧ್ವಜಂ | ಮಕಾರಂ ರುದ್ರರೂಪಂ ಚ ತ್ರಿಮೂತ್ರ್ಯಾತ್ಮಕಜಂಗಮಃ ||'' ಎಂದೆಂಬ ಜಂಗಮವು. ``ಶ್ರಾದ್ಧಂ ಯಜ್ಞಂ ಜಪಂ ಹೋಮಂ ವೈಶ್ವದೇವಸುರಾರ್ಚನಂ | ಧೃತತ್ರಿಪುಂಡ್ರಪೂತಾತ್ಮಾ ಮೃತ್ಯುಂ ಜಯತಿ ಮಾನವಃ ||'' ಎಂದೆಂಬ ವಿಭೂತಿ. ``ರುದ್ರಾಕ್ಷಿಧಾರಣಂ ಸರ್ವಂ ಜಟಾಮಂಡಲಧಾರಿಣಿ | ಅಕ್ಷಮಾಲಾರ್ಪಿತಕರ ಕಮಂಡಲಕರಾನ್ವಿತಂ || ತ್ರಿಪುಂಡ್ರಾವಲಿಯುಕ್ತಾಂ | ಆಷಾಡೇನ ವಿರಾಜಿತಂ ಋಗ್ಯಜುಃಸಾಮ ರೂಪೇಣ | ಸೇವ ತಸ್ಮೆ ೈ ಸ್ವರಃ ಇತಿ | ತ್ರೈವ ಗಾಯಿತ್ರೇವ ವರಾನನೇ ||'' (?) ಎಂದೆಂಬ ವಿಭೂತಿ ರುದ್ರಾಕ್ಷಿ. ``ಜ್ಞಾನ ಪ್ರಾಣ ಬೀಜಂ ಚ ನಕಾರಂ ಚ ಆಚಾರಕಂ | ಮಕಾರಂ ಚ ಗುರೋರ್ಬೀಜಂ ಶಿಕಾರಂ ಲಿಂಗಮತ್ರ್ಯಕಂ || ವಕಾರಂ ಚ ಬೀಜಂ ಚ ಯಕಾರಂ ಪ್ರಾಸಕಂ | ಏವಂ ಬೀಜಾಕ್ಷರಂ ಜ್ಞಾತುಂ ದುರ್ಲಭಂ ಕಮಲಾನನೆ ||'' ಎಂದೆಂಬ ಷಡಕ್ಷರಿಮಂತ್ರವು. ``ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನತೇಜಸಃ | ಗುರುಪಾದೋದಕಂ ಪೀತ್ವಾ ಸಂಸಾರದ್ರುಮನಾಶನಂ ||'' ಎಂದೆಂಬ ಪಾದೋದಕವು. ``ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಃ | ವಿಷ್ಣು ಮುಖ್ಯಾದಿದೇವಾನಾಮಗ್ರಾಹ್ಯೋýಯಮಗೋಚರಃ ||'' ಎಂದೆಂಬ ಪ್ರಸಾದವು. ಇನಿತು ತೆರದ ಅಷ್ಟಾವರಣದ ಶ್ರುತ ದೃಷ್ಟವ ಕಂಡು ಘನವೆಂದು ನಂಬಿದಾತನೆ ಸತ್ಯಸದಾಚಾರಿ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶಿವನ ಮಹಿಮೆಯ ಘನವನೇನೆಂಬೆನಯ್ಯ! ಉನ್ನತವಾದ ಮಹಾಗಂಗೆಯ ಜಟಾಗ್ರದಲ್ಲಿ ಧರಿಸಿದನು. ಚರಣಕಮಲದ ಹೆಬ್ಬೆರಳಿಂದೌಂಕಲು, ರಾವಣಾಸುರನು ಮೂರ್ಛಿತನಾಗಿ ಬಿದ್ದನು. ಒಂದು ಬಾಣದಿಂದ ತ್ರಿಪುರವನು ಉರುಹಿದನು. ನೊಸಲಕಣ್ಣ ಅಗ್ನಿಯಿಂದ ಮನ್ಮಥನ ದಹಿಸಿದನು. ತ್ರಿಶೂಲದಿಂದ ಅಂಧಕಾಸುರನ ಇರಿದು ಕೊಂದನು. ಅದೆಂತೆಂದಡೆ : ಜಲೌಘಕಲ್ಲೋಲತರಂಗತುಂಗಗಂಗಾವೃತಾ ಯೇನ ಜಟಾಗ್ರಭಾಗೇ ಪಾದಾಂಬುಜಾಂಗುಷ*ನಿಪೀಡನೇನ ಪಾತ ಲಂಕಾಧಿಪತಿರ್ವಿಸಂಜ್ಞಾಃ | ಏಕೇನ ದಗ್ಧಂ ತ್ರಿಪುರಂ ರೇಣಕಾಯೋ ಲಲಾಟಾಗ್ನಿಹುತಾಶನೇನ | ಭಿನ್ನೋದಕಃ ಶೂಲವರೇಣ ಏನಕಸ್ತೋ ನ ಸಾರ್ಥಂ ಕುರುತೇ ವಿರೋಧಂ | ಇಂತೆಂದುದಾಗಿ, ಶಿವನೊಡನೆ ವೈರವ ಮಾಡುವವರಾರುಂಟು ? ಭಾಪು, ಭಾಪು ನಿನಗೆ ಸರಿಯುಂಟೆ, ದೇವರಾಯ ಸೊಡ್ಡಳಾ ?
--------------
ಸೊಡ್ಡಳ ಬಾಚರಸ
ಇನ್ನು ಲಿಂಗೋತ್ಪತ್ಯವದೆಂತೆಂದಡೆ : ಆ ಅಖಂಡ ಮಹಾಜ್ಯೋತಿಪ್ರಣಮದ ತಾರಕಸ್ವರೂಪ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಉತ್ಪತ್ಯವಾದ ಅಕಾರ ಉಕಾರ ಮಕಾರ- ಈ ಮೂರು ಬೀಜಾಕ್ಷರ. ಅಕಾರವೇ ಶಿವನು, ಉಕಾರವೇ ಶಿವತತ್ವ, ಮಕಾರವೇ ಪರವು. ಅಕಾರವೇ ನಾದವು, ಉಕಾರವೇ ಬಿಂದು, ಮಕಾರವೇ ಕಲೆ. ಈ ಆರೂ ನಾಮಂಗಳು ನಿಃಕಲತತ್ವ. ಆ ಪರಶಿವಶಕ್ತಿಯ ಸಂಕಲ್ಪದಿಂದ ನಾದ-ಬಿಂದು- ಕಲೆಸಂಯುಕ್ತವಾಗಿ ಅಖಂಡಲಿಂಗವಾಯಿತ್ತು. ಅದಕ್ಕೆ ಕರ ಚರಣ ಅವಯವಂಗಳೆಲ್ಲ ಅಖಂಡಸ್ವರೂಪ. ಇದಕ್ಕೆ ಚಿತ್ಪಿಂಡಾಗಮೇ : ``ಓಂಕಾರ ತಾರಕಾರೂಪಂ ಅಕಾರಂ ಚ ಪ್ರಜಾಯತೇ | ಓಂಕಾರಂ ಕುಂಡಲಾಕಾರಂ ಉಕಾರಂ ಚ ಪ್ರಜಾಯತೇ || ಓಂಕಾರಂ ಜ್ಯೋತಿರೂಪಂ ಚ ಮಕಾರಂ ಚ ಪ್ರಜಾಯತೇ | ಇತ್ಯಕ್ಷರತ್ರಯಂ ದೇವೀ ಸ್ಥಾನಸ್ಥಾನೇಷು ಜಾಯತೇ || ಅಕಾರೇ ಚ ಉಕಾರೇ ಚ ಮಕಾರೇ ಚಾಕ್ಷರತ್ರಯಂ | ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ || ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ | ನಾದಬಿಂದುಕಲಾಮಧ್ಯೇ ವೇದಲಿಂಗಸಮುದ್ಭವಃ || ಅಖಂಡಗೋಳಕಾಕಾರಂ ವೇದಪಂಚಕಸಂಜ್ಞಕಂ | ಅಖಿಲಾರ್ಣವ ಲಯಾನಾಂ ಲಿಂಗಮುಖ್ಯಂ ಪರಂ ತಥಾ || ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ | ಯದೀದಮೀಶ್ವರಂ ತೇಜಃ ತಲ್ಲಿಂಗಂ ಪಂಚಸಂಜ್ಞಕಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರ ಉವಾಚ : ``ಅಕಾರೋಕಾರ ಸಂಯೋಗ ತನ್ಮಧ್ಯೇ ಲಿಂಗರೂಪಕಂ | ಅವ್ಯಕ್ತ ಲಿಂಗಮಕಲ್ಪಂ ಗೋಳಕಾಕಾರಸಂಜ್ಞಕಂ || ನಾದೋಲಿಂಗಮಿತಿ ಜ್ಞೇಯಂ ಬಿಂದುಃ ಪಿಂಡಮುದಾಹೃತಂ | ನಾದಬಿಂದು ಯುಕ್ತರೂಪಂ ಜಗತ್ಸ ೃಷ್ಟ್ಯರ್ಥಕಾರಣಂ || ಚಿದ್ವ್ಯೋಮಲಿಂಗಮಿತ್ಯಾಹ ಚಿದ್ಭೂಮಿಸ್ತಸ್ಯ ಪೀಠಿಕಾ | ಆಲಯಂ ಸರ್ವಭೂತಾನಾಂ ಲಯನಾಂ ಲಿಂಗಮುಚ್ಯತೇ || ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇಲ್ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ || ಲಿಂಗಃ ಶಂಭುರಿತಿ ಜ್ಞೇಯಂ ಶಕ್ತಿಃ ಪೀಠಮುದಾಹೃತಂ | ಶಿವೇನ ಶಕ್ತಿಸಂಯೋಗಃ ಸೃಷ್ಟಿಸ್ಥಿತಿಲಯಾವಹಃ || ಲಿಂಗೇನ ಜಾಯತೇ ತತ್ರ ಜಗತ್ಸ್ಥಾವರಜಂಗಮಂ | ತಸ್ಮಾಲ್ಲಿಂಗೇ ವಿಶೇಕ್ಷೀಣ ಲಿಂಗರೂಪಮುದಾಹೃತಂ || ಅಸಂಖ್ಯಾತಮಹಾವಿಷ್ಣು ಅಸಂಖ್ಯಾತಪಿತಾಮಹಃ | ಅಸಂಖ್ಯಾತಾ ಸುರೇಂದ್ರಾಶ್ಚ ಲೀಯಂತೇ ಸರ್ವದೇವತಾಃ || ವಿಷ್ಣು ಸಂಜ್ಞಾ ಅಸಂಖ್ಯಾತಾಃ ಅಸಂಖ್ಯಾತ ಕವಿಕಾಮಃ | ಅಸಂಖ್ಯಾ ದೇವಮುನಯೋ ಗಮ್ಯತೇ ಸರ್ವದೇವತಾಃ || ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇತಲ್ಲಿಂಗಮಿತ್ಯಾಹುರ್ಲಿಂಗತತ್ವಪರಾಯಣೈಃ ||'' ಇಂತೆಂದುದಾಗಿ, ಇದಕ್ಕೆ ಪ್ರಣವಾನಂದ ಸೂಕ್ತಿ :ಶ್ರೀ ಮಹಾದೇವ ಉವಾಚ- ``ಆದಿ ಓಂಕಾರಪೀಠಂ ಚ ಅಕಾರಂ ಕಂಠ ಉಚ್ಯತೇ | ಉಕಾರಂ ಗೋಮುಖಂ ಚೈವ ಮಕಾರಂ ವರ್ತುಲಂ ತಥಾ || ನಾದಬಿಂದುಮಹಾತೇಜಂ ನಾದಂ ಅಖಂಡಲಿಂಗಕಃ | ಆದಿಮಧ್ಯಾಂತರಹಿತಂ ಅಪ್ರಮೇಯಂ ಅನಾಮಯಂ || ಅಸಂಖ್ಯಾತಸೂರ್ಯಚಂದ್ರಾಗ್ನಿ ಅಸಂಖ್ಯಾತ ತಟಿತ್ಕೋಟಿ ಪ್ರಭಃ | ಅವ್ಯಕ್ತಂ ಅಮಲಂ ಶೂನ್ಯಂ ಅಪ್ರಮಾಣಮಗೋಚರಂ || ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ | ಇತಿ ಲಿಂಗಸ್ಥಲಂತು ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಮಾಯೆ. ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಮರವೆ. ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಪ್ರಪಂಚು. ಶ್ರೀಗುರು ಕರುಣಿಸಲೊಡನೆ ಬಿಟ್ಟಿತ್ತು ಎನ್ನ ಸುತ್ತಿರ್ದ ಮಾಯಾಪಾಶ. ಅದೆಂತೆಂದಡೆ: ``ಗುಶಬ್ದಸ್ತ್ವಂಧಕಾರಃ ಸ್ಯಾತ್ ರುಶಬ್ದಸ್ತು ನಿರೋಧಕಃ ಅಂಧಕಾರನಿರೋಧತ್ವಾತ್ ಗುರುರಿತ್ಯ್ಕಭಿಧೀಯತೇ||' ಎಂದುದಾಗಿ, ಇದನರಿದು, ಕಣ್ಣಿಂಗೆ ಸತ್ತ್ವ ರಜ ತಮವೆಂಬ ತಿಮಿರ ಕವಿದು ಅಜ್ಞಾನವಶನಾದಲ್ಲಿ ಸದ್ಗುರುವನುಪಧಾವಿಸಿ ಕಣ್ಗೆ ಔಷಧಿಯ ಬೇಡಲೊಡನೆ ``ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೆ ೈ ಶ್ರೀಗುರುವೇ ನಮಃ' ಎಂದುದಾಗಿ, ಶಿವಜ್ಞಾನವೆಂಬ ಅಂಜನವನೆಚ್ಚಿ, ಎನ್ನ ಕಣ್ಣ ಮುಸುಂಕಿದ ಅಜ್ಞಾನ ಕಾಳಿಕೆಯ ಬೇರ್ಪಡಿಸಿ ತನ್ನ ಶ್ರೀಪಾದವನರುಹಿಸಿಕೊಂಡನಯ್ಯಾ, ಕಪಿಲಸಿದ್ಧಮಲ್ಲಿನಾಥಾ.
--------------
ಸಿದ್ಧರಾಮೇಶ್ವರ
ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪದ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಉತ್ಪತ್ಯವಾದ ಅಕಾರ ಉಕಾರ ಮಕಾರ ಇವು ಮೂರು ಬೀಜಾಕ್ಷರ. ಅಕಾರವೆ ಶಿವನು, ಉಕಾರವೆ ಶಕ್ತಿ , ಮಕಾರವೆ ಪರವು. ಅಕಾರವೆ ನಾದ, ಉಕಾರವೆ ಬಿಂದು, ಮಕಾರವೆ ಕಲೆ. ಈ ಆರು ನಾಮಂಗಳು ನಿಃಕಲತತ್ವ. ಆ ಪರಶಿವಶಕ್ತಿಯ ಸಂಕಲ್ಪದಿಂದ ನಾದ ಬಿಂದು ಕಲೆ ಯುಕ್ತವಾಗಿ ಅಖಂಡಲಿಂಗವಾಯಿತ್ತು . ಅದಕ್ಕೆ ಕರಚರಣ ಅವಯವಂಗಳಿಲ್ಲ ; ಅಖಂಡಸ್ವರೂಪು. ಇದಕ್ಕೆ ಚಿತ್ಪಿಂಡಾಗಮೇ : ``ಓಂಕಾರಂ ತಾರಕಾರೂಪಂ ಅಕಾರಂ ಸೋýಜಾಯತ | ಓಂಕಾರ ಕುಂಡಲಾಕಾರೇ ಉಕಾರಂ ಚಾತ್ರ ಜಾಯತೇ || ಓಂಕಾರ ಜ್ಯೋತಿರೂಪೇ ಚ ಮಕಾರಂ ಚಾಪಿ ಜಾಯತೇ | ಇತಿ ತ್ರ್ಯಕ್ಷರಂ ದೇವಿ ಸ್ಥಾನಸ್ಥಾನೇಷು ಜಾಯತೇ || ಅಕಾರೇಚ ಉಕಾರೇಚ ಮಕಾರೇಚಕ್ಷರತ್ರಯಂ | ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ | ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ | ನಾದಬಿಂದುಕಲಾಮಧ್ಯೇ ವೇದಲಿಂಗ ಸಮುದ್ಭವಂ | ಅಖಂಡಗೋಳಕಾಕಾರಂ ವೇದಪಂಚಕಸಂಜ್ಞಕಂ ||'' ಇಂತೆಂದುದಾಗಿ, ಇದಕ್ಕೆ ಈಶ್ವರೋýವಾಚ : ``ಅಕಾರೋಕಾರ ಸಂಯೋಗಾತ್ತನ್ಮಧ್ಯೇ ಲಿಂಗರೂಪಕಂ | ಅವ್ಯಕ್ತಲಿಂಗಮಾಕಲ್ಯ ಗೋಳಕಾಕಾರಸಂಜ್ಞಕಃ || ನಾದೋ ಲಿಂಗಮಿತಿ ಜ್ಞೇಯಂ ಬಿಂದುಪೀಠಮುದಾಹೃತಂ | ನಾದಬಿಂದುಯುತಂ ರೂಪಂ ಜಗಸ್ಸೃಷ್ಟ್ಯರ್ಥಕಾರಣಂ || ಚಿದ್ವ್ಯೋಮ ಲಿಂಗಮಿತ್ಯಾಹುಃ ಚಿದ್ಭೂಮಿಸ್ತಸ್ಯ ಪೀಠಿಕಾ | ಆಲಯಂ ಸರ್ವದೇವಾನಾಂ ಲಯಾನಾಂ ಲಿಂಗಮುಚ್ಯತೇ || ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇವಂ ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ || ಲಿಂಗಂ ಶಂಭುರಿತಿಜ್ಞೇಯಂ ಪೀಠಂ ಶಕ್ತಿರುದಾಹೃತಂ | ಶಿವಶಕ್ತಿಸಮಾಯೋಗಂ ಸೃಷ್ಟಿಸ್ಥಿತಿ ಲಯಾವಹಂ || ಲಿಂಗೇನ ಜಾಯತೇ ತತ್ರ ಜಗತ್‍ಸ್ಥಾವರ ಜಂಗಮಂ | ತಸ್ಮಾಲ್ಲಿಂಗಮಶೇಷೇಣ ಲಿಂಗರೂಪಮುದಾಹೃತಂ || ಅಸಂಖ್ಯಾತ ಮಹಾವಿಷ್ಣುಃ ಅಸಂಖ್ಯಾತ ಪಿತಾಮಹಾಃ | ಅಸಂಖ್ಯಾತ ಸುರೇಂದ್ರಾಣಾಂ ಲೀಯತೇ ಸರ್ವದೇವತಾ ಃ || ಅಸಂಖ್ಯಾತ ದೇವಮುನಯೋ ಗಮ್ಯತೇ ಸರ್ವದೇವತಾಃ | ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ | ತದೇವ ಲಿಂಗಮಿತ್ಯಾಹುಃ ಲಿಂಗತತ್ವ ಪರಾಯಣಾಃ ||'' ಇಂತೆಂದುದಾಗಿ, ಇದಕ್ಕೆ ಪ್ರಣವಾನಂದ ಸೂಕ್ತೇ : ``ಆದಿಯೋಂಕಾರಪೀಠಂಚ ಅಕಾರಂ ಕಂಠರುಚ್ಯತೇ | ಉಕಾರಂ ಗೋಮುಖಂ ಚೈವ ಮಕಾರಂ ವರ್ತುಲಂ ತಥಾ || ನಾಳಂ ಬಿಂದು ಮಹಾತೇಜ ನಾದಮಖಂಡಲಿಂಗಯೋಃ | ಆದಿಮಧ್ಯಾಂತರಹಿತಂ ಅಪ್ರಮೇಯಮನಾಮಯಂ || ಅಸಂಖ್ಯ ಸೂರ್ಯಚಂದ್ರಾಗ್ನಿಃ ಅಸಂಖ್ಯಾತತಟಿತ್ಪ್ರಭಂ | ಅವ್ಯಕ್ತಂ ಅಮಲಂ ಶೂನ್ಯಂ ಅಪ್ರಮಾಣಂ ಅಗೋಚರಂ || ನಿರ್ನಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ | ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಕಮಲಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇಹದ ಪೂರ್ವವ ಜರೆದು, ಪರದ ಪೂರ್ವವನರಿದು, ಗುರುಕಾರುಣ್ಯವ ಪಡೆದು, ಅಂತರ್ಬಾಹ್ಯದ ಭವಿಯ ತೊರೆದು ಭಕ್ತಿಪರಾಯಣರಾಗಿ ನಿಂದುದೆ ಲಿಂಗದ ನಿಜದಂಗ. ಅದೆಂತೆಂದಡೆ; ತ್ರಿಗುಣಂ ಪಂಚಕಂ ಚೈವ ಚತ್ವಾರಿ ಷಡ್ವಿಧೈವ ಚ ಸಘಾತಂ ವ್ಯಸನಂ ಚೈವ ಇತ್ಯಾದಿ ಭವಿಮಿಶ್ರಿತಂ ಎಂದುದಾಗಿ, ಅಂತರಂಗದ ಭವಿಯನು ಹಿಂಗಿ, ಅನೃತಮಸ್ಥಿರಂ ವಾಕ್ಯಂ ವಂಚನಂ ಪಙ್ತಭೇದನಂ ಔದಾಸೀನಂ ನಿರ್ದಯತ್ವಂ ಷಡ್ವಿಧಂ ಭವಿಮಿಶ್ರಿತಂ ಎಂಬೀ ಮಾನವರಂಗದ ಭವಿಯನು ಕಳೆದು, ಅರ್ಚನಾದಿ ಕ್ರಿಯಾಕಾಲೇ ಪ್ರಚ್ಛನ್ನಂ ಪಟಮುತ್ತಮಂ ಪಾಪೀ ಕೋಪೀ ಪರಿಭ್ರಷ್ಟೋನಾಸ್ತಿಕೋ ವ್ರತದೂಷಕಃ ದುರ್ಜನಶ್ಚ ದುರಾಚಾರೀ ದುರ್ಮುಖಶ್ಚಾಪ್ಯದೀಕ್ಷಿತಃ ಪ್ರಮಾದಾದ್ದೃಶ್ಯತೇ ಯೇನ ತಸ್ಯ ಪೂಜಾ ತು ನಿಷ್ಫಲಂ ಎಂಬೀ ಬಹಿರಂಗದ ಭವಿಯನ್ನು ತೊಲಗಿಸಿ, ಇಂತೀ ತ್ರಿವಿಧಭವಿಯನು ದೂರಮಾಡಿ, ಶಿವಭಕ್ತಿಯೆ ಅಂಗವಾದ ಲಿಂಗೈಕ್ಯ ಲಿಂಗಪೂಜಕರಿಗೆ ಪೂರ್ವವರ್ಣಾಶ್ರಮಾದಿ ಸೂತಕವಿಲ್ಲ, ಕೂಡಲಸಂಗಯ್ಯಾ.
--------------
ಬಸವಣ್ಣ
-->