ಅಥವಾ

ಒಟ್ಟು 13 ಕಡೆಗಳಲ್ಲಿ , 8 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ ಪಂಚತತ್ವಂಗಳ ಪಡೆವ ತತ್ವ ಪ್ರತ್ಯಕ್ಷವಾಗದ ಮುನ್ನ, ಪದ್ಮಜಾಂಡವ ಧರಿಸಿಪ್ಪ ಕಮಠ-ದಿಕ್ಕರಿಗಳಿಲ್ಲದ ಮುನ್ನ, ನಿರ್ಮಲಾಕಾಶವೇ ಸಾಕಾರವಾಗಿ ನಿರಂಜನವೆಂಬ ಪ್ರಣವವಾಯಿತ್ತಯ್ಯ ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ, ಹ್ರೂಂಕಾರ ಮಂಟಪದಲ್ಲಿ ಮೂರ್ತಿಗೊಂಡಿತಯ್ಯ. ಆ ನಿರಂಜನ ಪ್ರಣವವೆಂಬ ಮರುಜೇವಣಿಯ ಬೀಜ, ತನ್ನ ನಿರಂಜನ ಶಕ್ತಿಯ ನಸುನೆನಹಿಂದ ಹಂಕಾರ ಚಕ್ಷುವೆಂಬ ಕುಹರಿಯಲ್ಲಿ ಶುದ್ಧಪ್ರಸಾದವೆಂಬ ಮೊಳೆದೋರಿತ್ತಯ್ಯ. ಆ ಶುದ್ಧ ಪ್ರಸಾದವೆಂಬ ಮೊಳೆ ತನ್ನ ಶೂನ್ಯಶಕ್ತಿಯ ಸೆಜ್ಜೆಯಿಂದ ಕರ್ಣಿಕಾಪ್ರಕಾಶ ಪಂಚನಾದವನುಳ್ಳ ಷೋಡಶ ಕಲಾಪುಂಜರಂಜಿತವಪ್ಪ ಹನ್ನೊಂದನೂರುದಳದ ಪತ್ರದಲ್ಲಿ ಪ್ರಣವಚಿತ್ರವೊಪ್ಪಿತ್ತಿಪ್ಪ ಹ್ರೀಂಕಾರ ಸಿಂಹಾಸನದ ಮೇಲೆ ಸಿದ್ಧಪ್ರಸಾದವೆಂಬ ಎಳವೆರೆ ತಳಿರಾಯಿತ್ತಯ್ಯ. ಆ ಸಿದ್ಧಪ್ರಸಾದವೆಂಬ ಎಳವೆರೆ ತನ್ನ ಶಾಂತಶಕ್ತಿಯ ಚಲನೆಯಿಂದ ಮೂರುಬಟ್ಟೆಯ ಮೇಲಿಪ್ಪ ಎರಡುಮಂಟಪದ ಮಧ್ಯದಲ್ಲಿ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ಬೀಗಿ ಬೆಳೆಯಿತ್ತಯ್ಯ. ಆ ಪ್ರಸಿದ್ಧಪ್ರಸಾದವೆಂಬ ಮಹಾವೃಕ್ಷ ತನ್ನ ಚಿಚ್ಛಕ್ತಿಯ ಲೀಲಾವಿನೋದದಿಂದ ಪಂಚಶಕ್ತಿಗಳೆಂಬ ನಾಲ್ಕೊಂದು ಹೂವಾಯಿತು. ಆ ಹೂಗಳ ಮಹಾಕೂಟದಿಂದ ಪಂಚಲಿಂಗಗಳೆಂಬ ಪಂಚಪ್ರಕಾರದ ಮೂರೆರಡು ಹಣ್ಣಾಯಿತು. ಆ ಹಣ್ಣುಗಳ ಆದ್ಯಂತಮಂ ಪಿಡಿದು ಸದ್ಯೋನ್ಮುಕ್ತಿಯಾಗಬೇಕೆಂದು ಸದಾಕಾಲದಲ್ಲಿ ಬಯಸುತ್ತಿಪ್ಪ ಮಹಾಶಿವಶರಣನು ತಿಳಿದು ನೋಡಿ ಕಂಡು ಆರುನೆಲೆಯ ನಿಚ್ಚಣಿಗೆಯ ಆ ತರುಲತೆಗೆ ಸೇರಿಸಿ ಜ್ಞಾನ ಕ್ರೀಗಳೆಂಬ ದೃಢದಿಂದೇರಿ ನಾಲ್ಕೆಲೆಯ ಪೀತವರ್ಣದ ಹಣ್ಣ ಸುಚಿತ್ತವೆಂಬ ಹಸ್ತದಲ್ಲಿ ಪಿಡಿದು ಆರೆಲೆಯ ನೀಲವರ್ಣದ ಹಣ್ಣ ಸುಬುದ್ಧಿಯೆಂಬ ಹಸ್ತದಲ್ಲಿ ಪಿಡಿದು ಹತ್ತೆಲೆಯ ಸ್ಫಟಿಕವರ್ಣದ ಹಣ್ಣ ನಿರಹಂಕಾರವೆಂಬ ಹಸ್ತದಲ್ಲಿ ಪಿಡಿದು ಹನ್ನೆರೆಡೆಲೆಯ ಸುವರ್ಣವರ್ಣದ ಹಣ್ಣ ಸುಮನನೆಂಬ ಹಸ್ತದಲ್ಲಿ ಪಿಡಿದು ಹದಿನಾರೆಲೆಯ ಮಿಂಚುವರ್ಣದ ಹಣ್ಣ ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು ಆಸನಸ್ಥಿರವಾಗಿ ಕಣ್ಮುಚ್ಚಿ ಜ್ಞಾನಚಕ್ಷುವಿನಿಂ ನಿಟ್ಟಿಸಿ ಕಟ್ಟಕ್ಕರಿಂ ನೋಡಿ ರೇಚಕ ಪೂರಕ ಕುಂಭಕಂಗೈದು ಪೆಣ್ದುಂಬಿಯ ನಾದ ವೀಣಾನಾದ ಘಂಟನಾದ ಭೇರೀನಾದ ಮೇಘನಾದ ಪ್ರಣವನಾದ ದಿವ್ಯನಾದ ಸಿಂಹನಾದಂಗಳಂ ಕೇಳಿ ಹರುಷಂಗೊಂಡು ಆ ಫಲಂಗಳಂ ಮನವೆಂಬ ಹಸ್ತದಿಂ ಮಡಿಲುದುಂಬಿ ಮಾಯಾಕೋಲಾಹಲನಾಗಿ ಪಂಚಭೂತಂಗಳ ಸಂಚವ ಕೆಡಿಸಿ ದಶವಾಯುಗಳ ಹೆಸಗೆಡಿಸಿ ಅಷ್ಟಮದಂಗಳ ಹಿಟ್ಟುಗುಟ್ಟಿ ಅಂತಃಕರಣಂಗಳ ಚಿಂತೆಗೊಳಗುಮಾಡಿ ಮೂಲಹಂಕಾರವ ಮುಂದುಗೆಡಿಸಿ ಸಪ್ತವ್ಯಸನಂಗಳ ತೊತ್ತಳದುಳಿದು ಜ್ಞಾನೇಂದ್ರಿಯಂಗಳ ನೆನಹುಗೆಡಿಸಿ ಕರ್ಮೇಂದ್ರಿಯಂಗಳ ಕಾಲಮುರಿದು ತನ್ಮಾತ್ರೆಯಂಗಳ ತೋಳಕೊಯ್ದು, ಅರಿಷಡ್ವರ್ಗಂಗಳ ಕೊರಳನರಿದು ಸ್ಫಟಿಕದ ಪುತ್ಥಳಿಯಂತೆ ನಿಜಸ್ವರೂಪಮಾಗಿ- ಎರಡೆಸಳ ಕಮಲಕರ್ಣಿಕಾಗ್ರದಲ್ಲಿಪ್ಪ ಪರಬ್ರಹ್ಮದ ಶ್ವೇತಮಾಣಿಕ್ಯವರ್ಣದ ದ್ವಿಪಾದಮಂ ಸುಜ್ಞಾನವೆಂಬ ಹಸ್ತದಲ್ಲಿ ಪಿಡಿದು ಓಂಕಾರವೆಂಬ ಮಂತ್ರದಿಂದ ಸಂತೈಸಿ ನೀರ ನೀರು ಕೂಡಿದಂತೆ ಪರಬ್ರಹ್ಮವನೊಡಗೂಡಿ ಆ ಪರಬ್ರಹ್ಮವೆ ತಾನೆಯಾಗಿ ಬ್ರಹ್ಮರಂಧ್ರವೆಂಬ ಶಾಂಭವಲೋಕದಲ್ಲಿಪ್ಪ ನಿಷ್ಕಲ ಪರಬ್ರಹ್ಮದ ನಿರಾಕಾರಪಾದಮಂ ನಿರ್ಭಾವವೆಂಬ ಹಸ್ತದಿಂ ಪಿಡಿದು ಪಂಚಪ್ರಸಾದವೆಂಬ ಮಂತ್ರದಿಂ ಸಂತೈಸಿ ಕ್ಷೀರಕ್ಷೀರವ ಕೂಡಿದಂತೆ ನಿಷ್ಕಲಬ್ರಹ್ಮವನೊಡಗೂಡಿ ಆ ನಿಷ್ಕಲಬ್ರಹ್ಮವೇ ತಾನೆಯಾಗಿ ಮೂರುಮಂಟಪದ ಮಧ್ಯದ ಕುಸುಮಪೀಠದಲ್ಲಿಪ್ಪ ಶೂನ್ಯಬ್ರಹ್ಮದ ಶೂನ್ಯಪಾದಮಂ ನಿಷ್ಕಲವೆಂಬ ಹಸ್ತದಿಂ ಪಿಡಿದು ಕ್ಷಕಾರವೆಂಬ ಮಂತ್ರದಿಂ ಸಂತೈಸಿ ಘೃತಘೃತವ ಕೂಡಿದಂತೆ ಶೂನ್ಯಬ್ರಹ್ಮವನೊಡಗೂಡಿ ಆ ಶೂನ್ಯಬ್ರಹ್ಮವೇ ತಾನೆಯಾಗಿ- `ನಿಶಬ್ದಂ ಬ್ರಹ್ಮ ಉಚ್ಯತೇ' ಎಂಬ ಒಂಬತ್ತು ನೆಲೆಯ ಮಂಟಪದೊಳಿಪ್ಪ ನಿರಂಜನಬ್ರಹ್ಮದ ನಿರಂಜನಪಾದಮಂ ಶೂನ್ಯವೆಂಬ ಹಸ್ತದಿಂ ಪಿಡಿದು ಹ್ರೂಂಕಾರವೆಂಬ ಮಂತ್ರದಿಂ ಸಂತೈಸಿ ಬಯಲ ಬಯಲು ಬೆರಸಿದಂತೆ ನಿರಂಜನಬ್ರಹ್ಮವೇ ತಾನೆಯಾಗಿ- ಮಹಾಗುರು ಸಿದ್ಧಲಿಂಗಪ್ರಭುವಿನ ಗರ್ಭಾಬ್ಧಿಯಲ್ಲಿ ಜನಿಸಿದ ಬಾಲಕಿಯಯ್ಯ ನಾನು. ಎನ್ನ ಹೃದಯಕಮಲೆಂಟು ಮಂಟಪದ ಚತುಷ್ಪಟ್ಟಿಕಾ ಮಧ್ಯದ ಪದ್ಮಪೀಠದಲ್ಲಿ ಎನ್ನ ತಂದೆ ಸುಸ್ಥಿರವಾಗಿ ಎನಗೆ ಷಟ್ಸ ್ಥಲಮಾರ್ಗ-ಪುರಾತರ ವಚನಾನುಭಾವ- ಭಕ್ತಿ ಜ್ಞಾನ ವೈರಾಗ್ಯವೆಂಬ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಿದನಯ್ಯ. ಆ ಜೇನುಸಕ್ಕರೆ ಪರಮಾಮೃತವ ತಣಿಯಲುಣಿಸಲೊಡನೆ ಎನ್ನ ಬಾಲತ್ವಂ ಕೆಟ್ಟು ಯೌವನಂ ಬಳೆದು ಬೆಡಗು ಕುಡಿವರಿದು ಮೀಟು ಜವ್ವನೆಯಾದೆನಯ್ಯ ನಾನು. ಎನಗೆ ನಿಜಮೋಕ್ಷವೆಂಬ ಮನ್ಮಥವಿಕಾರವು ಎನ್ನನಂಡಲೆದು ಆಳ್ದು ನಿಂದಲ್ಲಿ ನಿಲಲೀಸದಯ್ಯ. ಅನಂತಕೋಟಿ ಸೋಮಸೂರ್ಯ ಪ್ರಕಾಶವನುಳ್ಳ ಪರಂಜ್ಯೋತಿಲಿಂಗವೆ ಎನಗೆ ಶಿವಾನಂದ ಭಕ್ತಿಯೆಂಬ ತಾಲಿಬಂದಿಯ ಕಟ್ಟು ಸುಮಂತ್ರವಲ್ಲದೆ ಕುಮಂತ್ರವ ನುಡಿಯೆನೆಂಬ ಕಂಠಮಾಲೆಯಂ ಧರಿಸು. ಅರ್ಪಿತವಲ್ಲದೆ ಅನರ್ಪಿತವ ಪರಿಮಳಿಸೆನೆಂಬ ಮೌಕ್ತಿಕದ ಕಟ್ಟಾಣಿ ಮೂಗುತಿಯನಿಕ್ಕು. ಸುಶಬ್ಧವಲ್ಲದೆ ಅಪಶಬ್ದವ ಕೇಳೆನೆಂಬ ರತ್ನದ ಕರ್ಣಾಭರಣಂಗಳಂ ತೊಡಿಸು. ಶರಣತ್ವವನಲ್ಲದೆ ಜೀವತ್ವವನೊಲ್ಲೆನೆಂಬ ತ್ರಿಪುಂಡ್ರಮಂ ಧರಿಸು. ಕ್ರೀಯಲ್ಲದೆ ನಿಷ್ಕಿ ್ರೀಯ ಮಾಡೆನೆಂಬ ಮೌಕ್ತಿಕದ ಬಟ್ಟನಿಕ್ಕು. ನಿಮ್ಮವರಿಗಲ್ಲದೆ ಅನ್ಯರಿಗೆರಗೆನೆಂಬ ಕನಕಲತೆಯ ಬಾಸಿಂಗಮಂ ಕಟ್ಟು. ಸಮ್ಯಜ್ಞಾನವಲ್ಲದ ಅಜ್ಞಾನವ ಹೊದ್ದೆನೆಂಬ ನವ್ಯದುಕೂಲವನುಡಿಸು. ಲಿಂಗಾಣತಿಯಿಂದ ಬಂದುದನಲ್ಲದೆ ಅಂಗಗತಿಯಿಂದ ಬಂದುದಂ ಮುಟ್ಟೆನೆಂಬ ರತ್ನದ ಕಂಕಣವಂ ಕಟ್ಟು. ಶರಣಸಂಗವಲ್ಲದೆ ಪರಸಂಗಮಂ ಮಾಡೆನೆಂಬ ಪರಿಮಳವಂ ಲೇಪಿಸು. ಶಿವಪದವಲ್ಲದೆ ಚತುರ್ವಿಧಪದಂಗಳ ಬಯಸೆನೆಂಬ ಹಾಲು ತುಪ್ಪಮಂ ಕುಡಿಸು. ಪ್ರಸಾದವಲ್ಲದೆ ಬ್ಥಿನ್ನರುಚಿಯಂ ನೆನೆಯೆನೆಂಬ ತಾಂಬೂಲವನಿತ್ತು ಸಿಂಗರಂಗೆಯ್ಯ. ನಿನ್ನ ಕರುಣಪ್ರಸಾದವೆಂಬ ವಸವಂತ ಚಪ್ಪರದಲ್ಲಿ ಪ್ರಮಥಗಣಂಗಳ ಮಧ್ಯದಲ್ಲಿ ಎನ್ನ ಮದುವೆಯಾಗಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಗುರುವಿನಲ್ಲಿ ಗುಣ ವಿದ್ಯೆ ಕುಲ ಬಾಲ್ಯ ಯೌವನ ವೃದ್ಧನೆಂದು ಅರಸಲುಂಟೇ ? ಅರಸಿದರೆ ಮಹಾಪಾತಕ. ಸಾಕ್ಷಿ :`` ಆಚಾರ್ಯೇ ಬಾಲಬುದ್ಧಿಶ್ಚ ನರಬುದ್ಧಿಸ್ತಥೈವ ಚ | ಅಸಿಷ್ಟ ಬುದ್ಧಿಭಾವೇನ ರೌರವಂ ನರಕಂ ವ್ರಜೇತ್ || '' ಎಂದುದಾಗಿ, ಎನ್ನ ಗುರು ಬಾಲನೂ ಅಲ್ಲ, ಯೌವನನೂ ಅಲ್ಲ, ವೃದ್ಧನೂ ಅಲ್ಲ. ಮೃತರಹಿತ ಪರಶಿವ. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗೆ ಇದೇ ನರಕ.
--------------
ಹೇಮಗಲ್ಲ ಹಂಪ
ಪೃಥಿವ್ಯಪ್ತೇಜೋವಾಯ್ವಾಕಾಶಂಗಳಲ್ಲಿ ಪೃಥಿವ್ಯಪ್ತೇಜಸ್ಸುಗಳು ಸಾಕರಾಗಳೂ ವಾಯ್ವಾಕಾಶಂಗಳು ನಿರಾಕಾರಗಳೂ ಆಗಿ, ಸ್ಥೂಲ ಸೂಕ್ಷ್ಮಕಾರಣಂಗಳಾಗಿಹವು. ಪೃಥ್ವಿಯಲ್ಲೈದು ಗುಣಗಳೂ ಜಲದಲ್ಲಿ ನಾಲ್ಕು ಗುಣಗಳೂ ಅಗ್ನಿಯಲ್ಲಿ ಮೂರು ಗುಣಗಳೂ ವಾಯುವಿನಲ್ಲಿರಡು ಗುಣಗಳೂ ಇರ್ಪವು. ಆಕಾಶದಲ್ಲೊಂದು ಗುಣವಿರ್ಪುದು. ಆತ್ಮನು ನಿರ್ಗುಣಮಾಗಿ ಸಕಲಗುಣಂಗಳಿಗೂ ತಾನು ಕಾರಣಮಾಗಿಹನು. ಅದೆಂತೆಂದೊಡೆ : ನಿರ್ಗುಣಮಾದ ಬಿಂದುಪದಾರ್ಥವು ಸಗುಣರೂಪಮಾದ ಮನುಷ್ಯರಿಗೆ ತಾನು ಕಾರಣಮಾಗಿರ್ಪಂದದಿ ಆತ್ಮನಿಹನು. ಪಂಚವರ್ಣಂಗಳು ಸತ್ವರಜಸ್ತಮೋಗುಣಂಗಳು. ನಾದ ಬಿಂದು ಕಲೆಗಳು ಬಾಲ್ಯ ಯೌವನ ಕೌಮಾರ ವಾರ್ಧಕ್ಯಂಗಳು. ಇವೆಲ್ಲವೂ ಪ್ರಪಂಚಕ್ಕೆ ಗುಣಂಗಳಲ್ಲದೆ ಆತ್ಮನ ಗುಣವಲ್ಲ. ಅಂತಪ್ಪ ಆತ್ಮನೇ ಶಿವನು, ಆಕಾಶವೇ ವಿಷ್ಣು, ವಾಯುವೇ ಬ್ರಹ್ಮನು. ಸಾಕಾರದಲ್ಲಿ ಅಗ್ನಿಯೇ ರುದ್ರನು, ಜಲವೇ ವಿಷ್ಣು. ಪೃಥ್ವಿಯೇ ಬ್ರಹ್ಮನು. ಇವು ಒಂದಕ್ಕೊಂದು ಸೃಷ್ಟಿ ಸ್ಥಿತಿ ಸಂಹಾರಹೇತುಗಳಾಗಿ, ಎಲ್ಲವೂ ಆತ್ಮನಲ್ಲಿ ಲಯವನೈದುತ್ತಿಹವು. ಅಂತಪ್ಪ ಆತ್ಮಸ್ವರೂಪಮೆತೆಂದೊಡೆ : ದೃಷ್ಟಿಗೋಚರಮಲ್ಲ, ಒಂದು ವಸ್ತುವಿನಲ್ಲಿ ಸಾಮ್ಯಗೋಚರಮಲ್ಲ. ಅದೆಂತೆಂದೊಡೆ : ವಾಯ್ವಾಕಾಶಾತ್ಮಸ್ವರೂಪಿಗಳಾದ ತ್ರಿಮೂರ್ತಿಗಳು. ವಾಯುರೂಪಮಾದ ಬ್ರಹ್ಮನೇ ಲಕ್ಷ್ಮಿಯು, ಆಕಾಶರೂಪಮಾದ ವಿಷ್ಣುವೇ ಮಹಾದೇವಿಯು, ಆv್ಮÀರೂಪಮಾದ ಶಿವನೇ ಶಾರದೆಯು. ವಾಯುರೂಪಮಾದ ಬ್ರಹ್ಮನು ಆತ್ಮರೂಪಮಾದ ಶಾರದೆಯನ್ನು ಕೂಡಿಹನು. ಆಕಾಶರೂಪಮಾದ ವಿಷ್ಣುವು ವಾಯುರೂಪಮಾದ ಲಕ್ಷ್ಮಿಯಂ ಕೂಡಿಹನು. ಆತ್ಮÀರೂಪಮಾದ ಶಿವನು ಆಕಾಶರೂಪಮಾದ ಮಹಾದೇವಿಯಂ ಕೂಡಿಹನು. ಆತ್ಮನೇ ವಿವೇಕವೆಂದು ತಿಳಿವುದು, ವಿವೇಕವೇ ಸತ್ಯಜ್ಞಾನಾಂದಸ್ವರೂಪು, ವಿವೇಕದಿಂದ ಸಕಲಪ್ರಪಂಚವೆಲ್ಲಾ ಮಿಥ್ಯೆಯಾಗಿಹುದು. ಅಂತಪ್ಪ ಸಕಲಪ್ರಪಂಚಮೆಲ್ಲವೂ ಮಿಥ್ಯವೆಂದು ತಿಳಿದು ಆ ಪ್ರಪಂಚದಲ್ಲಿ ಹೊಂದಿರ್ಪ ವಿವೇಕವೇ ಮುಕ್ತಿಯು, ಆಮುಕ್ತಿಯೇ ಶಿವನು. ಅಂತಪ್ಪ ವಿವೇಕದಲ್ಲಿನಾಹಂಭಾವವಡಗಿ, ಅಂತಪ್ಪ ವಿವೇಕವೇ ಮಹಾಲಿಂಗವು, ಅಂತಪ್ಪ ವಿವೇಕಮಿರ್ದಲ್ಲಿ ಪಾಪಗಳು ಹೊಂದದೇ ಇಹವು. ಅದುಕಾರಣ, ತಾನು ತಾನಾಗಿರ್ಪ ನಿಜಾನಂದಸುಖದೊಳೋಲಾಡುತಿರ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಗುರುವೇ, ನಿನ್ನ ಕರದಲ್ಲೆನ್ನಂ ಪುಟ್ಟಿಸಿ, ಮಂತ್ರವೆಂಬ ಜನನಿಯ ವಿವೇಕವೆಂಬ ಸ್ತನಗಳೊಳ್ ತುಂಬಿರ್ಪ ಅನುಭವಾಮೃತರಸವನೆರೆದು, ಆಚಾರಕ್ಷೇತ್ರದಲ್ಲಿ ಬೆಳೆಸುತ್ತಿರಲು, ಅನೇಕ ಕಳೆಗಳಿಂ ಕೂಡಿದ ದಿವ್ಯಜ್ಞಾನವೆಂಬ ಯೌವನಂ ಪ್ರಾದುರ್ಭವಿಸಿ, ಸತ್ಕರ್ಮವಾಸನೆಯಿಂ ಪೋಷಿತನಾಗಿರ್ಪೆನಗೆ ಮಹಾಲಿಂಗಮೊಲಿದು, ನಿನ್ನ ಭಾವದಲ್ಲಿ ಬಂದು, ಹೃದಯದಲ್ಲಿ ನಿಂದು ಕೇಳಲು, ನೀನು ಆ ಲಿಂಗಕ್ಕೆ ಮಂಗಳಸೂತ್ರಮಂ ಕಟ್ಟಿ, ಕಲಶಕನ್ನಡಿಗಳನ್ನಿಕ್ಕಿ ಪಾಣಿಗ್ರಹಣಮಂ ಮಾಡಿ ಕೊಟ್ಟಬಳಿಕ, ರತಿಯನನುಭವಿಸಿ, ಲಿಂಗಸುಖವಂ ತನಗೀವುತ್ತಿರ್ಪನಯ್ಯಾ. ಆ ಮೇಲೆ ತನ್ನ ಮನದ ಹೆದರಿಕೆಯಂ ಬಿಡಿಸಿ, ಅಂತರಂಗಕ್ಕೆ ಕರೆದುಕೊಂಡುಬಂದು, ನಿಜಪ್ರಸಾದ ರಸದಂಬುಲವಿತ್ತು, ತನ್ನೊಡನೆ ಕೂಡುವ ಚಾತುರ್ಯಮಾರ್ಗಂಗಳಂ ಕಲಿಸುತ್ತ, ಆ ಲಿಂಗಂ ತಾನೇ ತನಗೆ ಗುರುವಾದನಯ್ಯಾ. ಆ ಮೇಲೆ ಭಾವದಲ್ಲಿ ನನ್ನ ಕೂಡಣ ಚಲ್ಲಾಟದಿಂದ ಸಂಚರಿಸುತ್ತಾ, ತಾನೇ ಜಂಗಮವಾದನಯ್ಯಾ. ತನ್ನ ಭಾವದಲ್ಲಿರ್ಪ ಇಂದ್ರಿಯವಿಷಯಂಗಳೆಲ್ಲಾ ಪುಣ್ಯಕ್ಷೇತ್ರಂಗಳಾದವಯ್ಯಾ. ಶರೀರವೇ ವಿಶ್ವವಾಯಿತ್ತಯ್ಯಾ, ತಾನೇ ವಿಶ್ವನಾಥನಯ್ಯಾ. ಪಂಚಭೂತಂಗಳೇ ಪಂಚಕೋಶವಾಯಿತ್ತಯ್ಯಾ. ಆ ಲಿಂಗಾನಂದವೇ ಭಾಗೀರಥಿಯಾಯಿತ್ತಯ್ಯಾ. ಆ ಲಿಂಗದೊಳಗಣ ವಿನಯವೇ ಸರಸ್ವತಿಯಾಗಿ, ಆ ಲಿಂಗದ ಕರುಣವೇ ಯಮುನೆಯಾಗಿ, ತನ್ನ ಶರೀರವೆಂಬ ದಿವ್ಯ ಕಾಶೀಕ್ಷೇತ್ರದಲ್ಲಿ ಹೃದಯವೆಂಬ ತ್ರಿವೇಣೀ ಮಣಿಕರ್ಣಿಕಾಸ್ಥಾನದಲ್ಲಿ ನೆಲಸಿ, ಸಕಲ ಗುಣಂಗಳೆಂಬ ಪುರುಷ ಋಷಿಗಳಿಂದ ಅರ್ಚಿಸಿಕೊಳ್ಳುತ್ತಾ ನಮ್ಮೊಳಗೆ ನಲಿದಾಡುತ್ತಿರ್ದನಯ್ಯಾ. ತನ್ನ ನಿಜಮತದಿಂ ವಿಶ್ವಸ್ವರೂಪ ಕಾಶೀಕ್ಷೇತ್ರವನು ರಕ್ಷಿಸುತಿರ್ಪ ಅನ್ನಪೂರ್ಣಾಭವಾನಿಗೂ ತನಗೂ ಮತ್ಸರಮಂ ಬಿಡಿಸಿ, ತನಗೆ ಅನ್ನಪೂರ್ಣಭವಾನಿಯೇ ಆಸ್ಪದಮಾಗಿ, ಆ ಅನ್ನಪೂರ್ಣೆಗೆ ತಾನೇ ಆಸ್ಪದಮಾಗಿರ್ಪಂತನುಕೂಲವಿಟ್ಟು ನಡಿಸಿದನಯ್ಯಾ. ಇಂತಪ್ಪ ದಿವ್ಯಕ್ಷೇತ್ರದಲ್ಲಿ ನಿಶ್ಚಿಂತಮಾಗಿ ಆ ಪರಮನೊಳಗೆ ಅಂತರಂಗದರಮನೆಯಲ್ಲಿ ನಿರ್ವಾಣರತಿಸುಖವನನುಭವಿಸುತ್ತಾ ಆ ಲಿಂಗದಲ್ಲಿ ಲೀನಮಾಗಿ ಪುನರಾವೃತ್ತಿರಹಿತ ಶಾಶ್ವತ ಪರಮಾನಂದರತಿಸುಖದೊಳೋಲಾಡುತ್ತಿರ್ದೆನಯ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಜ್ಞಾನ ಉಪಾಸ್ಥೆಪಶುಜ್ಞಾನವ ಬಲ್ಲ ಮಾತ ನುಡಿಯಲಾಗದು, ಉತ್ಪತ್ತಿ ಸ್ಥಿತಿ ಲಯವೆಂಬ ಕಾಲತ್ರಯದಲ್ಲಿ ಬೀಳದೆ, ಜಾಗ್ರತ ಸ್ವಪ್ನ ಸುಷುಪ್ತಿಯೆಂಬ ವ್ಯಾಪಾರತ್ರಯದ ಅನುಮಾನವರಿತು, ಆಧ್ಯಾತ್ಮಿಕ ಆಧಿಭೌತಿಕ ಆಧಿದೈವಿಕವೆಂಬ ತಾಪತ್ರಯವಂ ಕೊಳಲಾಗದೆ, ಅರ್ಥೇಷಣ ಪುತ್ರೇಷಣ ದಾರೇಷಣವೆಂಬ ಈಷಣತ್ರಯದ ಭ್ರಾಂತಿಯಡಗಿ, ಅಭಾವ ಸ್ವಭಾವ ನಿರ್ಭಾವದಲ್ಲಿ ಶುದ್ಧವಾಗಿ, ದೀಕ್ಷೆ ಶಿಕ್ಷೆ ಸ್ವಾನುಭಾವವೆಂಬ ದೀಕ್ಷಾತ್ರಯದಲ್ಲಿ ಅನುಮಾನವನ್ನರಿತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಲಿಂಗವೆಂಬ ಲಿಂಗತ್ರಯದ ಭೇದವಂ ಭೇದಿಸಿ, ಶುದ್ಧ ಸಿದ್ಧ ಪ್ರಸಿದ್ಧವೆಂಬ ಪ್ರಸಾದತ್ರಯವಂ ಭೇದಿಸಿ, ಸ್ವರ್ಗಮತ್ರ್ಯ ಪಾತಾಳವೆಂಬ ಲೋಕತ್ರಯವನತಿಗಳದು, ಇಹ ಪರ ಸ್ವಯವೆಂಬ ಮುಕ್ತಿತ್ರಯದ ಹಂಗು ಹಿಂಗಿ, ಮಥನ ನಿರ್ಮಥನ ಸಮ್ಮಥನವೆಂಬ ಮಥನತ್ರಯದಲ್ಲಿ ನಿರತನಾಗಿ, ರಾಜಸ ತಾಮಸ ಸಾತ್ವಿಕವೆಂಬ ಗುಣತ್ರಯದ ಹಮ್ಮ ಬಿಟ್ಟು, ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯವನೊರಸಲೀಯದೆ, ಆಣವಮಲ ಮಾಯಾಮಲ ಕಾರ್ಮಿಕಮಲವೆಂಬ ಮಲತ್ರಯಂಗಳಂ ನಿರ್ಮಲವಂ ಮಾಡಿ, ಗುರುನಿಂದೆ ಶಿವನಿಂದೆ ಭಕ್ತನಿಂದೆಯೆಂಬ ನಿಂದಾತ್ರಯಂಗಳಂ ಕೇಳದೆ, ಚಂದ್ರ ಸೂರ್ಯ ಅಗ್ನಿ ಎಂಬ ನೇತ್ರತ್ರಯದ ಹೊಲಬನರಿದು, ಪ್ರಾಹ್ನ ಮಧ್ಯಾಹ್ನ ಅಪರಾಹ್ನವೆಂಬ ವೇಳಾತ್ರಯವಂ ಮೀರಿ, ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ ಅಗ್ನಿತ್ರಯಕ್ಕೆ ಇಂಬುಗೊಡದೆ, ಅಧೋನಿರಾಳ ಮಧ್ಯನಿರಾಳ ಊಧ್ರ್ವನಿರಾಳವೆಂಬ ನಿರಾಳತ್ರಯದಲ್ಲಿ ನಿರತನಾಗಿ, ಅನುಭಾವ ಮಹಾನುಭಾವ ಸ್ವಾನುಭಾವವೆಂಬ ಅನುಭಾವತ್ರಯಂಗ?ಲ್ಲಿ ಬೀಸರಹೊಂದದೆ, ಬಾಲ್ಯ ಯೌವನ ವೃದ್ಧಾಪ್ಯವೆಂಬ ತನುತ್ರಯಂ ಮರೆದು, ತನು ಮನ ಧನದಲ್ಲಿ ಶುದ್ಧನಾಗಿ, ಆಗಮತ್ರಯದಲ್ಲಿ ಅನುವರಿತು, ಇಂತೀ ತ್ರಯ ಸಂಪಾದನೆಯಂ ಮೀರಿದ ನಿಜಶರಣನೆ ಕೂಡಲಚೆನ್ನಸಂಗಯ್ಯನೆಂದರಿದು ಸುಖಿಯಾದೆ£ಯ
--------------
ಚನ್ನಬಸವಣ್ಣ
ಹಸ್ತಮಸ್ತಕಸಂಯೋಗವಾಗದ ಮುನ್ನ ಯೌವನ ಮಥನವಾಯಿತ್ತು ಆವುದ ಅಂತರಂಗವೆಂಬೆನು ? ಆವುದ ಬಹಿರಂಗವೆಂಬೆನು ? ಆವುದ ಆತ್ಮಸಂಗವೆಂಬೆನು ? ಹಸ್ತಮಸ್ತಕಸಂಯೋಗವೆ ಬಹಿರಂಗ, ಮನಸಂಯೋಗವೆ ಅಂತರಂಗ. ಕೂಡಲಚೆನ್ನಸಂಗಯ್ಯನಲ್ಲಿ ಆತ್ಮಸಂಗವಾಯಿತ್ತು.
--------------
ಚನ್ನಬಸವಣ್ಣ
ಕುಲವುಳ್ಳನ್ನಕ್ಕ ಭಕ್ತನಲ್ಲ, ಛಲವುಳ್ಳನಕ್ಕ ಮಹೇಶ್ವರನಲ್ಲ, ಫಲವುಳ್ಳನ್ನಕ್ಕ ಪ್ರಸಾದಿಯಲ್ಲ. ಕುಲ ಗುರುಕೃಪೆಯ ಕೆಡಿಸಿತ್ತು, ಛಲ ಲಿಂಗಾರ್ಚನೆಯ ಕೆಡಿಸಿತ್ತು. ಫಲ ದುಃಖಂಗಳಿಗೆ ಗುರಿ ಮಾಡಿತ್ತು. ಕುಲಂ ಛಲಂ ಧನಂ ಚೈವ ಯೌವನಂ ರೂಪಮೇವ ಚ | ವಿದ್ಯಾ ರಾಜ್ಯಂ ತಪಶ್ಚೈವ ತೇ ಚಾಷ್ಟಮದಾ ಸ್ಮøತಾಃ || ಎಂದುದಾಗಿ, ಒಂದು ಸುರೆಯ ಕುಡಿದವರು ಬಂಧುಬಳಗವನರಿಯರು. ಎಂಟು ಸುರೆಯ ಕುಡಿದವರು ನಿಮ್ಮನೆತ್ತಬಲ್ಲರಯ್ಯಾ, ಬಸವಪ್ರಿಯ ಕೂಡಲಚೆನ್ನಸಂಗಮದೇವಾ ?
--------------
ಸಂಗಮೇಶ್ವರದ ಅಪ್ಪಣ್ಣ
ತಿಷ*ತೀತಿ ಸ್ಥಾಣುಃ ಎಂಬ ಅರ್ಥದಿಂದ ಸತ್ತೆಂಬ ನಿಜತತ್ವವೇ ಸ್ಥಾಣುರೂಪದಮಾದ ಶಿವನು. ಅಂತಪ್ಪ ಪರಶಿವನ ಸ್ವಭಾವದಲ್ಲಿ ನಿಜಕ್ರೀಡಾಪ್ರಕೃತಿಯು ಉತ್ಪನ್ನಮಾಗಿ, ಪರಮಶಿವತತ್ವಮಂ ತನ್ನ ಶಕ್ತಿಗೆ ತಕ್ಕಂತೆ ಗ್ರಹಿಸಲು, ಆ ಪ್ರಕೃತಿಘಟಬಂಧದಿಂ ಭಿನ್ನವಾಗಿ ತೋರುತ್ತಿರ್ಪ ತತ್ತತ್ವವೇ ಚಿದ್ರೂಪಮಪ್ಪ ಜೀವಕೋಟಿಗಳಾಯಿತ್ತು. ಅದೆಂತೆಂದೊಂಡೆ: ಮನದಲ್ಲಿ ಹುಟ್ಟಿದ ಕಾಮವು ಆಮನವನ್ನೇ ಗ್ರಹಿಸಿ, ಕರ್ಮಕ್ಕೆ ತಂದು, ಮುಖದಲ್ಲಿ ಆ ಮನೋರೂಪಮಪ್ಪ ತದ್ಗುಣಂಗಳೇ ಅನೇಕವಾಗುದಿಸಿ, ಆ ಕಾಲದಲ್ಲಿ ಸೃಷ್ಟಿಸ್ಥಿತಿಸಂಹಾರಸುಖದುಃಖಂಗಳಿಗೊಳಗಾಗಿ ಆ ನಾಮವಳಿಯಲು, ಉಳಿದ ಮನವೊಂದೇ ಆಗಿರ್ಪಂತೆ, ಲೀಲಾಶಕ್ತಿವಶದಿಂ ಪರಶಿವತತ್ವದಲ್ಲಿ ತತ್ವರೂಪಮಪ್ಪ ಅನಂತಕೋಟಿ ಜೀವಂಗಳು ಬಹುವಿಧಮಾಗಿ ತೋರಿದಲ್ಲಿ ಜಡಮಯನಾಗಿ, ಅವಿದ್ಯಾರೂಪಮಪ್ಪ ಶರೀರವಸ್ತ್ರಂಗಳು ಸೃಷ್ಟಿಸುತ್ತಿರಲೀ ಜೀವಂಗಳು ವಸ್ತ್ರಧಾರಣಕಾರಣ ಪರಶಿವನಿಂದಾ ಕೊಂಡು ಜ್ಞಾನಜೀವಿತಾರ್ಥವನ್ನು ಆ ಕಾಮನಿಗೆ ಕೊಟ್ಟು, ಅವನಿಂದಾ ಶರೀರವಸ್ತ್ರಮಂ ತರಿಸಿಕೊಂಡು, ದರಿಸುತ್ತಾ ತನ್ನನುಭದಿಂದಲೇ ಬಾಲ್ಯ ಯೌವನ ಕೌಮಾರ ವಾರ್ಧಕ್ಯಗಳೆಂಬವಸ್ಥೆಗಳಿಂದ ಮಲಿನವಾಗಿ, ಕಾಲನೆಂಬ ರಜಕನ ಕರಫೂತದಿಂ ಜೀರ್ಣವಾಗಿಪೋದ ವಸ್ತ್ರಮಂ ಕಂಡು ದುಃಖಪಟ್ಟು, ತಿರಿಗಿ ಸಂಧಿಸುವ ಕೋಟಲೆಯೇ ಭವವು. ಇಂತಪ್ಪ ಭವಕ್ಕೊಳಪಟ್ಟ ಎಲ್ಲಾ ಜೀವರು ಸ್ಥೂಲಸೂಕ್ಷ್ಮಕಾರಣ ಶರೀರಗಳೆಂಬ ವಸ್ತ್ರಗಳಂ ಧರಿಸಿಹರು. ನೀನು ಶರೀರವೆಂಬ ವಸ್ತ್ರವ ಧರಿಸಿಬಿಡುವ ಕೋಟಲೆಯನೊಲ್ಲದೆ ದಿಗಂಬರಾಗಿರ್ಪೆ. ಅಬ್ಧಿಗಂಭೀರತ್ವವೇ ನಿರ್ವಾಣ, ನಿರ್ವಾಣವೇ ಮುಕ್ತಿ. ಅಂತಪ್ಪ ನಿರ್ವಾಣಸುಖದೊಳಗೆ ನನ್ನಂ ಕೂಡಿಸಿ, ಜನ್ಮವಸ್ತ್ರಧಾರಣಜಾಡ್ಯಮಂ ಬಿಡಿಸಿ ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಮತ್ತಮೀ ಮಂತ್ರಜಾತಮೆಂತೆನೆ- ಆದಿವಾಲವೊಂದು, ಸವಾಲವೆರಡು, ಕೌಮಾರಂ ಮೂರು, ಯೌವನಂ ನಾಲ್ಕು, ಬ್ರಹ್ಮಣನೈದು, ಕ್ಷತ್ರಿಯನಾರು, ವೈಶ್ಯನೇಳು, ಶೂದ್ರನೆಂಟು, ಸ್ತ್ರೀಯೊಂಬತ್ತು, ಪುರುಷಂ ಪತ್ತು, ನಪುಂಸಕಂ ಪನ್ನೊಂದು, ಮಂತ್ರಜಾತಂ ಪನ್ನೆರಡು, ಶುದ್ಧಂ ಪದಿಮೂರು, ಮಿಶ್ರಂ ಪದಿನಾಲ್ಕು, ಸಂಕೀರ್ನಂ ಪದಿನೈದು, ಮಂತ್ರರೂಪಂ ಪದಿನಾರು, ಪ್ರಕೃತಿ ಪದಿನೇಳು, ವಿಕೃತಿ ಪದಿನೆಂಟು- ವಿವೆಲ್ಲಕ್ಕುವಾದಿಯಾದ ಪೂರ್ಣ ಚಿದ್ಗುಹ್ಯ ಪತ್ತೊಂಬತ್ತಿಂತೀ ಪತ್ತೊಂಬತ್ತರಿಂ ಮಂತ್ರನಿರ್ಣಯಮೆಂದು ನಿರವಿಸಿದೆಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಆತ್ಮಸ್ಥಿತಿ ಶಿವಯೋಗ ಸಂಬಂಧವ ಅರಿದೆನೆಂದಡೆ ಹೇಳಿರಣ್ಣ ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವದ ವಿವರಮಂ ಪೇಳ್ವೆ; ಅಸ್ಥಿ ಮಾಂಸ ಚರ್ಮ ರುಧಿರ ಶುಕ್ಲ ಮೇಧಸ್ಸು ಮಜ್ಜೆ ಎಂಬ ಸಪ್ತಧಾತುವಿನ ಇಹವು, ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಎಂಬ ಪಂಚಜ್ಞಾನೇಂದ್ರಿಯಂಗಳಿಂದ ಶರೀರವೆನಿಸಿಕೊಂಬುದು. ಶಬ್ದ ಸ್ಪರ್ಶ ರೂಪು ರಸ ಗಂಧವೆಂಬಿವು ಪಂಚೇಂದ್ರಿಯಗಳು, ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬ ಪಂಚಕರ್ಮೇಂದ್ರಿಯಂಗಳಿವರು ಪರಿಚಾರಕರು, ಇಡಾ ಪಿಂಗಲಾ ಸುಷುಮ್ನಾ ಗಾಂಧಾರಿ ಹಸ್ತಿಜಿಹ್ವಾ ಪೂಷಾ ಅಲಂಬು ಲಕುಹಾ ಪಯಸ್ವಿನಿ ಶಂಖಿನಿಯೆಂಬ ದಶನಾಡಿಗಳಂ ಭೇದಿಸುತ್ತಂ. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುವಿನ ಸ್ಥಾನಂಗಳನರಿದು, ಆಧ್ಯಾತ್ಮಿಕ ಆಧಿದೈವಿಕ ಆದಿ¨sõ್ಞತಿಕವೆಂಬ ತಾಪತ್ರಯಂಗಳನರಿದು, ರಾಜಸ ತಾಮಸ ಸಾತ್ವಿಕವೆಂಬ ಗುಣತ್ರಯಂಗಳನಳಿದು, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಂಗಳು ತಿಳಿದು, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಂಗಳ ಗೆಲಿದು, ಜಾಯತೆ ಅಸ್ತಿತೆ ವರ್ಧತೆ ಪರಿಣಮತೆ ಅಪಕ್ಷೀಯತೆ ವಿನಶ್ಯತೆ ಎಂಬ ಷಡ್ಬಾವ ವಿಕಾರಂಗಳಂ ಬಿಟ್ಟು, ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣವೆಂಬ ಷಡೂರ್ಮಿಗಳ ವರ್ಮವ ತಿಳಿದು, ಜಾತಿ ವರ್ಣ ಆಶ್ರಮ ಕುಲ ಗೋತ್ರ ನಾಮವೆಂಬ ಷಡ್‍ಭ್ರಮೆಗಳಂ ತಟ್ಟಲೀಯದೆ. ಅನ್ನಮಯ ಪ್ರಾಣಮಯ ಮನೋಮಯ ಆನಂದಮಯವೆಂಬ ಪಂಚಕೋಶಂಗಳ ಸಂಬಂಧವನರಿದು, ಕುಲ ಛಲ ದಾನ ಯೌವನ ರೂಪು ರಾಜ್ಯ ವಿದ್ಯೆ ತಪವೆಂಬ ಅಷ್ಟಮದಂಗಳಂ ಕೆಡಿಸಿ, ಧರ್ಮ ಅರ್ಥ ಕಾಮ ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಂಗಳಂ ಕೆಡಿಸಿ, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧ ಮುಕ್ತಿಯ ಬಯಸದೆ, ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರರೆಂಬ ನಾಲ್ಕು ಜಾತಿಯಲ್ಲಿ ಭೇದವೆಂತೆಂದರಿದು ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ ಎಂಬ ಷಡುಚಕ್ರಂಗಳಂ ಭೇದಿಸಿ, ಕೃತಯುಗ ದ್ವಾಪರಯುಗ ಕಲಿಯುಗಂಗ?ಡಗಿ, ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮವೆಂಬ ಅಷ್ಟತನು ಮದಂಗಳ ಭೇದಾಭೇದಂಗಳ ಭೇದಿಸಿ, ಸ್ಥೂಲತನು ಸೂಕ್ಷ್ಮತನು ಕಾರಣತನು ಚಿದ್ರೂಪತನು ಚಿನ್ಮಯತನು ಆನಂದತನು ಅದ್ಭುತತನು ಶುದ್ಧತನುವೆಂಬ ಅಷ್ಟತನುವ ಏಕಾರ್ಥವಂ ಮಾಡಿ, ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ ಪೀತವರ್ಣ ಕಪ್ಪುವರ್ಣ ಗೌರವರ್ಣ ಶ್ವೇತವರ್ಣವೆಂಬ ಸಪ್ತಧಾತುಗಳ ಸ್ವಸ್ಥಾನವಂ ಮಾಡಿ, ಜಾಗ್ರ ಸ್ವಪ್ನ ಸುಷುಪ್ತಿ ಎಂಬ ಅವಸ್ಥಾತ್ರಯಂಗಳಂ ಮೀರಿ, ಜೀವಾತ್ಮ ಅಂತರಾತ್ಮ ಪರಮಾತ್ಮನೆಂಬೀ ಆತ್ಮತ್ರಯಂಗಳನೊಂದು ಮಾಡಿ, ಅಣಿಮಾ ಮಹಿಮಾ ಗರಿಮಾ ಲಘಿಮಾ ಪ್ರಾಪ್ತಿ ಪ್ರಾಕಾಮ್ಯ ವಶಿತ್ವ ಈಶತ್ವವೆಂಬ ಅಷ್ಟಸಿದ್ಧಿಗಳಂ ಬಿಟ್ಟು, ಅಂಜನಸಿದ್ಧಿ ಘುಟಿಕಾಸಿದ್ಧಿ ರಸಸಿದ್ಧಿ ತ್ರಿಕಾಲಜ್ಞಾನಸಿದ್ಧಿ ಎಂಬ ಅಷ್ಟಮಹಾಸಿದ್ಧಿಗಳಂ ತೃಣೀಕೃತಮಂ ಮಾಡಿಕೊಂಬುದು. ತನುವ್ಯಸನ ಮನವ್ಯಸನ ಧನವ್ಯಸನ ರಾಜ್ಯವ್ಯಸನ ವಿಶ್ವವ್ಯಸನ ಉತ್ಸಾಹವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನಂಗಳಂ ಬಿಟ್ಟು, ವಡಬಾಗ್ನಿ ಮಂದಾಗ್ನಿ ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ ಪಂಚಾಗ್ನಿಯಂ ಕಳೆದು, ಶರೀರಾರ್ಥ ಪರಹಿತಾರ್ಥ ಯೋಗಾರ್ಥ ಪರಮಾರ್ಥ ತತ್ವಾರ್ಥಂಗಳಲ್ಲಿ ಅವಧಾನಿಯಾಗಿ, ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬ ಷಡುಸ್ಥಲಂಗ?ಂ ಭೇದಿಸಿ, ದಾಸ ವೀರದಾಸ ಭೃತ್ಯ ವೀರಭೃತ್ಯ ಸಜ್ಜನಸಮಯಾಚಾರ ಸಕಲಾವಸ್ತೀಯರ್ಚನೆಯೆಂಬ ಷಡ್ವಿಧ ದಾಸೋಹದಿಂದ ನಿರಂತರ ತದ್ಗತವಾಗಿ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಯೋಗ ಸಮಾಧಿ ಎಂಬ ಅಷ್ಟಾಂಗ ಯೋಗದಲ್ಲಿ ಮುಕ್ತವಾಗಿ, ಬಾಲ ಬೋಳ ಪಿಶಾಚ ರೂಪಿಗೆ ಬಾರದ ದೇಹಂಗಳನರಿದು ಅನಿತ್ಯವಂ ಬಿಡುವುದು. ಲಯಯೋಗವನರಿದು ಹಮ್ಮ ಬಿಡುವುದು. ಮಂತ್ರಯೋಗವನರಿದು ಆಸೆಯಂ ಬಿಡುವುದು. ಮರೀಚಿಕಾಜಲದಂತೆ ಬೆಳಗುವ ಶರಣ ಆತ ರಾಜಯೋಗಿ, ಆತಂಗೆ ನಮೋ ನಮೋ ಎಂಬೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಜಾತಿಬ್ರಾಹ್ಮಣಂಗೆ ಕರಸ್ಥಲದಲ್ಲಿ ಲಿಂಗ, ಉರಸ್ಥಲದಲ್ಲಿ ರುದ್ರಾಕ್ಷಿಮಾಲೆ, ಉಪನಯನ ನೊಸಲಕಣ್ಣು, ಕಾಯ ಧೋತ್ರ, ಗಾಯತ್ರಿಮಂತ್ರ ಪುರುಷಪ್ರಮಾಣ ದಂಡ, `ಭವತಿಭಿಕ್ಷಾಂದೇಹಿ'ಯೆಂದು ಪರಬ್ರಹ್ಮವನಾಚರಿಸಿಕೊಂಡಿಪ್ಪಾತನೆ ಬ್ರಾಹ್ಮಣ. ಇಂತಲ್ಲದೆ ಮಿಕ್ಕವರೆಲ್ಲ ಶಾಪಹತ ವಿಪ್ರರು ನೀವು ಕೇಳಿರೊ. ಕೃತಯುಗ ಮೂವತ್ನಾಲ್ಕು ಲಕ್ಷದ ಐವತ್ಮೂರು ಸಾವಿರ ವರುಷಂಗಳಲ್ಲಿ ಗಜಾಸುರನೆಂಬ ಆನೆಯ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನಹೇಳಿತ್ತೇ ವೇದರಿ ಅಹುದು ತಿನ್ನ ಹೇಳಿತ್ತು. ಅದೆಂತೆಂದಡೆ: ಕುಲ ಚಲ ಯೌವನ ರೂಪು ವಿದ್ಯಾ ರಾಜ್ಯ ತಪವೆಂಬ ಅಷ್ಟಮದಂಗಳ ಕೊಲ್ಲ ಹೇಳಿತ್ತಲ್ಲದೆ ಆನೆಯ ತಿಂಬ ಹೀನ ಹೊಲೆಯರ ಮುಖವ ನೋಡಲಾಗದು. ತ್ರೇತಾಯುಗದ ಹದಿನೇಳು ಲಕ್ಷದ ಇಪ್ಪತ್ತೆಂಟು ಸಾವಿರ ವರುಷಂಗಳಲ್ಲಿ ಅಶ್ವನೆಂಬ ಕುದುರೆಯ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನಹೇಳಿತ್ತೇ ವೇದ? ಅಹುದು ತಿನ್ನಹೇಳಿತ್ತು ವೇದ. ಅದೆಂತೆಂದಡೆ: ಪ್ರಾಣ ವ್ಯಾನ ಅಪಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ಕುದುರೆಯ ತಿಂಬ ತಿನ್ನ ಹೇಳಿತ್ತಲ್ಲದೆ, ಕುದುರೆಯ ತಿಂಬ ಜಿನುಗು ಹೊಲೆಯರ ಮುಖವಂ ನೋಡಲಾಗದು. ದ್ವಾಪರ ಎಂಟು ಲಕ್ಷದ ಐವತ್ಕಾಲ್ಕು ಸಾವಿರ ವರುಷಂಗಳಲ್ಲಿ ಮಹಿಷಾಸುರನೆಂಬ ಕೋಣನ ಕೊಂದು ಹೋಮಕ್ಕಿಕ್ಕಿ ಮಾಂಸವ ತಿನ್ನ ಹೇಳಿತ್ತೇ ವೇದ? ಅಹುದು ತಿನ್ನ ಹೇಳಿತ್ತು. ಅದೆಂತೆಂದಡೆ: ಜಾತಿ ವರ್ಣ ಆಶ್ರಮ ಕುಲಗೋತ್ರ ನಾಮವೆಂಬ ಕೋಣನ ಕೊಲ್ಲ ಹೇಳಿತ್ತಲ್ಲದೆ, ಕೋಣನ ತಿಂಬ ಕುನ್ನಿ ಹೊಲೆಯರ ಮುಖವ ನೋಡಲಾಗದು. ಕಲಿಯುಗದ ನಾಲ್ಕು ಲಕ್ಷ ಮೂವತ್ತೆರಡು ಸಾವಿರ ವರುಷಂಗಳಲ್ಲಿ ಮಾಂಸವ ತಿನ್ನ ಹೇಳಿತ್ತೇ ವೇದ? ಅಹುದು ತಿನ್ನ ಹೇಳಿತ್ತು, ಅದೆಂತೆಂದಡೆ, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಹೋತನ ಕೊಲ್ಲ ಹೇಳಿತ್ತಲ್ಲದೆ, ಹೋತನ ಕೊಂದು ತಿಂಬ ಹೊಲೆಯರ ಮುಖವ ನೋಡಲಾಗದು. ಇಂತೀ ನಾಲ್ಕು ಯುಗದಲ್ಲಿ ಮಾಂಸವ ತಿಂಬ ಅನಾಚಾರಿ ಹೊಲೆಯರ ಮುಖವಂ ನೋಡಲಾಗದು ಅಜಂಗೆ ದ್ವಿಜನೆ ಗುರು, ದ್ವಿಜಂಗೆ ಹರಿಯೆ ಗುರು. ಹರಿ ಹರಿಣಾವತಾರವಾದಲ್ಲಿ ಎರಳೆಯ ತಿಂಬುದಾವಾಚಾರ? ಹರಿ ಮತ್ಸ್ಯಾವತಾರವಾದಲ್ಲಿ ಮೀನ ತಿಂಬುದಾವಾಚಾರ? ಇಂತೀ ಹೊನ್ನಗೋವ ತಿಂಬ ಕುನ್ನಿಗಳ ತೋರದಿರಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಮತ್ತಮೀ, ಪತ್ತೊಂಬತ್ತಕ್ಕೆ ತರದಿಂದೊಂದಕ್ಕೆ ವಿಭಾಗೆಯಂ ಪೇಳ್ವೆನೆಂತೆನೆ- ಅಕಾರಾನ್ವಿತವಾದ ಶುದ್ಧ ಮಂತ್ರವೆ ಆದಿವಾಲವೆನಿಕು- ಮಷ್ಟಬೀಜಾನ್ವಿತ ಮಂತ್ರವೆ ಸವಾಲವೆನಿಕುಂ. ಪಂಚಸ್ವರಾನ್ವಿತ ಮಂತ್ರವೆ ಕೌಮಾರವೆನಿಕುಂ. ಸರ್ವದೇವತಾ ಮಂತ್ರಜಾತವೆ ಯೌವನಮೆನಿಕುಂ. ಶಿವಾಕ್ಷರವೆ ಬ್ರಹ್ಮಣನೆನಿಕುಂ. ಪಂಚಾಕ್ಷರವೆ ಕ್ಷತ್ರಿಯನೆನಿಕುಂ. ಷಡಕ್ಷರವೆ ವೈಶ್ಯನೆನಿಕುಂ. ಮತ್ತೆಯುಮದೆ ಶೂದ್ರನೆನಿಕುಂ. ಸ್ವಾಹಾ ಪಲ್ಲವಾಂತವೆ ಸ್ತ್ರೀಯೆನಿಕುಂ. ನಮಃ ಪಲ್ಲವಾಂತವೆ ಪುರುಷನೆನಿಕುಂ. ಷಟ್ಕಾರವಷಟ್ಕಾರ ಪಲ್ಲವಾಂತಗಳೆ ನಪುಂಸಕವೆನಿಕುಂ. ಮತ್ತಂ, ಸ್ವಾಹಾ ಪಲ್ಲವಾಂತವಾದೀ ಕ್ಷತ್ರಿಯ ವೈಶ್ಯ ಶೂದ್ರ ಸಹಿತ ವಿಪ್ರಮಂತ್ರವು ಇಂದ್ರಾದಿ ಶಯನಸ್ಥಾ [ನ] ಮುಂ ಕೂಡಿ ಮಂತ್ರಜಾತವೆನಿಕು- ಮೇಕಾಕ್ಷರ ಮಂತ್ರವೆ ಶುದ್ಧಮೆನಿಕುಂ. ಚತುರಕ್ಷರ ಮಂತ್ರವೆ ಮಿಶ್ರಮೆನಿಕುಂ. ಬವಿದಾಕ್ಷರಮಂತ್ರವೆ ಸಂಕೀರ್ಣವೆನಿಕುಂ. ಇಂತೀಯಾದಿವಾಲವೊಂದು, ಸವಾಲವೆರಡು, ಕೌಮಾರಂ ಮೂರು, ಯೌವನಂ ನಾಲ್ಕು, ಬ್ರಹ್ಮಣನೈದು, ಕ್ಷತ್ರಿಯನಾರು, ವೈಶ್ಯನೇಳು, ಶೂದ್ರನೆಂಟು, ಸ್ತ್ರೀಯೊಂಬತ್ತು ಪುರುಷಂ ಪತ್ತು, ನಪುಂಸಕಂ ಪನ್ನೊಂದು, ಮಂತ್ರಜಾತಂ ಪನ್ನೆರಡು, ಶುದ್ಧಂ ಪದಿಮೂರು, ಮಿಶ್ರಂ ಪದಿನಾಲ್ಕು, ಸಂಕೀರ್ನಂ ಪದಿನೈದುಮಿವರ ವಿವರಮಂ ನಿರೂಪಿಸಿದೆಯಯ್ಯಾ, ಪರಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಗಮ್ಯಾಗಮ್ಯಗಳಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು, ಬೀಜಕ್ಷೇತ್ರಗಳಿಲ್ಲದಂದು, ನಾದದ ಮೊದಲಂಕುರ ತಲೆದೋರದಂದು, ಪಂಚಬ್ರಹ್ಮರ ಜನನವಿಲ್ಲದಂದು, ಪಂಚಾಕಾಶ ತಲೆದೋರದಂದು, ಪಂಚಭೂತಿಕ ಸಪ್ತಸಾಗರ ಅಷ್ಟಕುಲಪರ್ವತ ಚತುರ್ದಶಭುವನ ರಚನೆಗೆ ಬಾರದಂದು, ಇವರೆಲ್ಲರ ತಾಯಿ ತಂದೆ ಹುಟ್ಟದ ಮುನ್ನವೆ ಹುಟ್ಟಿಪ್ಪಳೆಮ್ಮವ್ವೆ. ಆಕೆಯ ಭಾವದ ಕೊನೆಯ ಮೊನೆಯ ಮೇಲೆ ಇಲ್ಲದೆಯಿಪ್ಪ ಎಮ್ಮಯ್ಯನು. ಇವರಿಬ್ಬರಿಗೆ ಸಂಗವಿಲ್ಲದಲ್ಲಿ ಹುಟ್ಟಿದೆ ನಾನು. ಅವರಿಬ್ಬರಿಗೂ ಮದುವೆಯ ಮಾಡಿದನಯ್ಯಾ. ಅವರಿಬ್ಬರ ಸಂಗದಿಂದ ಹುಟ್ಟು ಹೊಂದು, ಕಣ್ಣು ಕಾಲಿಲ್ಲದ, ಕಿವಿ ಮೂಗಿಲ್ಲದ, ಕೈ ಬಾಯಿಲ್ಲದ ಒಂದು ಶಿಶು ಹುಟ್ಟಿತ್ತು. [ಆ] ಮಗನನೆನಗೆ ಮದುವೆಯ ಮಾಡಿದರಯ್ಯಾ. ಅದ ನಾ ನೋಡುವಲ್ಲಿ ನೋಡಿಸಿದೆ, ನಾ ಕೇಳುವಲ್ಲಿ ಕೇಳಿಸಿದೆ, ನಾ ನುಡಿವಲ್ಲಿ ನುಡಿಸಿದೆ, ನಾನುಂಬಲ್ಲಿ ಉಣಿಸಿದೆ, ನಾ ವಾಸಿಸುವಲ್ಲಿ ವಾಸಿಸಿದೆ, ನಾ ಸೋಂಕುವಲ್ಲಿ ಸೋಂಕಿಸಿದೆ, ನಾ ನೆನೆವಲ್ಲಿ ನೆನೆಸಿದೆ. ಎನ್ನ ತೋಳು ತೊಡೆಯ ಮೇಲೆ ಬೆಳೆದು, ಯೌವನ ಪ್ರಾಯವಾಗಿ, ಎನ್ನ ದಶಾವಸ್ಥೆಯ ಮೋಹದಿಂದ, ಎನ್ನ ನೆರೆವ ಭರವಸದಿಂದ ಹೆಣ್ಣು ಗಂಡಾಗಿ, ಎನ್ನನವಗವಿಸಿಕೊಂಡಿತ್ತಯ್ಯಾ. ನಾ ನೋಡದ ಮುನ್ನವೇ ನೋಡಿತ್ತು. ನಾ ಕೇಳದ ಮುನ್ನವೇ ಕೇಳಿತ್ತು. ನಾ ನುಡಿಯದ ಮುನ್ನವೇ ನುಡಿಯಿತ್ತು. ನಾನುಣ್ಣದ ಮುನ್ನವೇ ಉಂಡಿತ್ತು. ನಾ ವಾಸಿಸದ ಮುನ್ನವೇ ವಾಸಿಸಿತ್ತು. ನಾ ಸೋಂಕದ ಮುನ್ನವೇ ಸೋಂಕಿತ್ತು. ನಾ ನೆನೆಯದ ಮುನ್ನವೇ ನೆನೆಯಿತ್ತು. ಇಂತೀ ಎನ್ನ ಸರ್ವಾಂಗವ ಶಿಖಿ ಕರ್ಪುರವನೊಳಕೊಂಡಂತೆ, ನಿಜಗುರು ಭೋಗೇಶ್ವರನು ಒಳಕೊಂಡನಾಗಿ ನಾನು ಸುಖಿಯಾದೆನು.
--------------
ಭೋಗಣ್ಣ
-->