ಅಥವಾ

ಒಟ್ಟು 21 ಕಡೆಗಳಲ್ಲಿ , 12 ವಚನಕಾರರು , 20 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಚನದ ರಚನೆಯ ನುಡಿವ ಬಯಲುರಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ? ವಚನ ತನ್ನಂತಿರದು, ತಾನು ವಚನದಂತಿರ. ಅದೆಂತೆಂದಡೆ: ತನುಮನಧನವನೆಲ್ಲ ಹಿಂದಿಟ್ಟುಕೊಂಡು, ಮಾತಿನ ಬಣಬೆಯ ಮುಂದಿಟ್ಟುಕೊಂಡು, ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ, ಆ ತೆರನಾಯಿತೆಂದ ಕಲಿದೇವರದೇವಯ್ಯ.
--------------
ಮಡಿವಾಳ ಮಾಚಿದೇವ
ವಚನದ ರಚನೆಯ ನುಡಿವ ಬರುಬಾಯ ಭುಂಜಕರೆಲ್ಲ ಭಕ್ತರಪ್ಪರೆ ಅಯ್ಯಾ ? ಮಾಡುವ ದಾಸೋಹದಿಂದ ಭಕ್ತಂಗೆ ಅವಗುಣಂಗಳಿಲ್ಲದಿರಬೇಕು. ಕೋಪದ ಕೆಚ್ಚಂ ಕಡಿದು, ಲೋಭಲಂಪಟಮಂ ಕೆದರಿ, ಮೋಹದ ಮುಳ್ಳುಮೊನೆಯ ತೆಗೆದು, ಮದದಚ್ಚಂ ಮುರಿದು, ಮಚ್ಚರಿಪ ಸರ್ಪನಂ ಸಮತೆಯೆಂಬ ಗಾರುಡದಲ್ಲಿ ಗಾರುಡಿಸಿ, ಕರಣಾದಿ ಗುಣಂಗಳಿಚ್ಛೆಗೆ ಹರಿಯಲೀಯದೆ, ವಿಶ್ರಮಿಸಿಪ್ಪ ಭಕ್ತನ ಕಾಯವೆ ಕೈಲಾಸ. ಅಂತಲ್ಲದೆ ಬರಿಯಮಾತಿಂಗೆ ಮಾತನೆ ಕೊಟ್ಟು, ತಾನಾಡಿದುದೆ ನೆಲೆಯೆಂಬಾತ ಭಕ್ತನೆ ? ಅಲ್ಲ, ಉಪಜೀವಿ. ಹೇಮದಿಚ್ಛೆಗೆ ಹರಿದು ಕಾಮರತಿಗಳುಪವ, ಕೋಪದುರಿಯ ಹೊದ್ದುಕೊಂಬ, ಲೋಭಮೋಹದ ಕೆಚ್ಚ ಕೂಡಿಕೊಂಡು, ನರಕದೊಳಗೋಲಾಡುವಾತ ಭಕ್ತನೆ ? ಅಲ್ಲ. ಆದಿಯಲ್ಲಿ ನಮ್ಮವರು ಹೊನ್ನು ಹೆಮ್ಣು ಮಣ್ಣು, ಈ ತ್ರಿವಿಧವ ಬಿಟ್ಟಿದರೆ ? ಇಲ್ಲ. ಆವ ತಲೆಯೆತ್ತಲೀಯರಾಗಿ, ಅನ್ಯಸಂಗವ ಹೊದ್ದರು. ಭವಿಮಿಶ್ರವ ಮುಟ್ಟರು, ಹಮ್ಮುಬಿಮ್ಮುಯಿಲ್ಲದಿಪ್ಪ ಇಂತಪ್ಪರೆ ನಮ್ಮ ಭಕ್ತರು. ನಮ್ಮ ಭಕ್ತರ ನೆಲೆಯ, ಮಹಾದಾನಿ ಸೊಡ್ಡಳಾ, ನೀನೆ ಬಲ್ಲೆಯಲ್ಲದೆ, ಉಳಿದ ಜಡಜೀವಿಗಳೆತ್ತ ಬಲ್ಲರು ?
--------------
ಸೊಡ್ಡಳ ಬಾಚರಸ
ಅಯ್ಯಾ, ಏನೂ ಇಲ್ಲದ ಬಯಲ ದೇಹಕ್ಕೆ ತಾಮಸವ ಮುಂದುಮಾಡಿ, ಹೀಗೆ ಕೆಟ್ಟಿತ್ತಲ್ಲಾ ಜಗವೆಲ್ಲ. ಅದೇನು ಕಾರಣವೆಂದಡೆ, ಸುಖದ ಮುಖ ಕಂಡಿತ್ತು; ಜಗದ ರಚನೆಯ ನೋಡಿತ್ತು; ಇಚ್ಫೆಯ ಮೆಚ್ಚಿತ್ತು; ಮನವ ನಿಶ್ಚಯವ ಮಾಡದು; ಅಂಗಸುಖವ ಬಯಸಿತ್ತು; ಕಂಗಳ ಕಾಮವನೆ ಮುಂದುಮಾಡಿತ್ತು ಇದರಿಂದ ಲಿಂಗವ ಮರೆಯಿತ್ತು; ಜಂಗಮವ ತೊರೆಯಿತ್ತು. ಇದು ಕಾರಣದಿಂದ ಜಗದ ಮನುಜರು ಭವಬಂಧನಕ್ಕೊಳಗಾದರು. ಇವೆಲ್ಲವನು ಹಿಂಗಿಸಿ, ನಮ್ಮ ಶಿವಶರಣರು ಲಿಂಗದಲ್ಲಿಯೆ ಬೆರೆದರು. ಜಂಗಮಪ್ರಾಣವೆಂದು ಪಾದೋದಕ ಪ್ರಸಾದವ ಕೊಂಡು, ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣನ ಶರಣರು.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಭಾವದಲ್ಲಿ ಭ್ರಮಿತರಾದವದ ಸೀಮೆಯೇನು ? ನಿಸ್ಸೀಮೆಯೇನು ? ವಚನದ ರಚನೆಯ ರಂಜನೆಯ ಲೀಲೆಯನಾಡುವರು. ಗುಹೇಶ್ವರನಿಪ್ಪ ಗುಪ್ತವೆಂತೆಂದರಿಯರು.
--------------
ಅಲ್ಲಮಪ್ರಭುದೇವರು
ವಚನಾರ್ಥವನರಿದು ನುಡಿದಿಹೆನೆಂದಡೆ, ರಚನೆಯ ರಂಜನೆಗೆ ಒಳಗಾಯಿತ್ತು. ತತ್ವವನಟ್ಟೈಸಿಹೆನೆಂದಡೆ ಆತ್ಮಘಾತಕ ಭೂತಸಿದ್ಧಿಗೊಳಗಾಯಿತ್ತು. ಸರ್ವವೂ ತಾನೆಂದರಿದವಗೆ ಸಂದೇಹಸೂತಕವಿಲ್ಲ. ಅರಿವು ಆತ್ಮನಲ್ಲಿ ವೇದ್ಯವಾದವಗೆ ಆ ಸರ್ವವೂ ಅಹುದಲ್ಲಾಯೆಂದು ನಿಂದ ಮತ್ತೆ ಮಾರ್ಪೊಳಲನೇರಿದ ಧೀರನಂತಿರಬೇಡವೆ ಪರಮವಿರಕ್ತಿ. ಲೋಲಿಯ......ದಂತೆ, ಜೋಲಿಯ ಕೀಲಿನಂತೆ ಗ್ರಂಥಿಯ ಗಸಣದಂತಿಪ್ಪವರ ಕಂಡೆನಗೆ ಹೇಸಿಕೆಯಾಯಿತ್ತು. ಪರತತ್ವಪ್ರಕಾಶ ಚೆನ್ನ ರಾಮೇಶ್ವರಲಿಂಗವನರಿವುದಕ್ಕೆ ಅಹುದೋ, ಅಲ್ಲವೋ ಎನುತಿರ್ದೆನು.
--------------
ಜ್ಯೋತಿ ಸಿದ್ಧೇಶ್ವರ
ವೇಷಮಾತಿನ ಬಿನ್ನಾಣಿಗಳಿಗೆ ಗ್ರಾಸ ಉಂಟಲ್ಲದೆ ನಿಜವಿಲ್ಲ. ಇಂತೀ ಉಭಯವನತಿಗಳೆದ ನಿರತಿಶಯ ಲಿಂಗಾಂಗಿಗೆ ಗ್ರಾಸದಾಸೆಯಿಲ್ಲ. ಸರ್ವಸುಖದಾಲಯದ ಪಾಶದ ಕಟ್ಟಿಲ್ಲ. ಅವರವರ ಕಂಡಲ್ಲಿಯೆ ಸುಖಿ, ನಿಧಾನಿಸಿ ಕೂಡಿದಲ್ಲಿಯೆ ತೃಪ್ತ. ಆತ ತ್ರಿವಿಧಮಲದ ಹಂಗಿನವನಲ್ಲ. ಗ್ರಾಮ ನಿಳಯ ಬಂಧಂಗಳಿಲ್ಲ. ಮಾತಿನ ರಚನೆಯ ಪಾಶವನೊಲ್ಲ. ಆತ ಸರ್ವಾಂಗಲಿಂಗ ಸನ್ಮತ. ನಿಃಕಳಂಕ ಮಲ್ಲಿಕಾರ್ಜುನನ ಒಡಗೂಡಿದ ಪರಮವಿರಕ್ತನ ಭೇದ.
--------------
ಮೋಳಿಗೆ ಮಾರಯ್ಯ
ಜಲ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ, ತಾಂಬೂಲ ಪಂಚವರ್ಣದ ಪತ್ರೆ ಪುಷ್ಪದ ಪೂಜೆಯ ರಚನೆಯ ಮಾಡುವೆನಯ್ಯಾ. ಅಷ್ಟವಿಧಾರ್ಚನೆ ಷೋಡಶೋಪಚಾರ ಮುಖ್ಯವಾಗಿ ಮಾಡುವೆನಯ್ಯಾ. ಸಕಲಕ್ಷೇಮದಿಂದ ನಡೆದು ನಿಮ್ಮಲ್ಲಿಗೆ ಸಾರುವೆನು ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಲಿಂಗದ ರಚನೆಯ ಮಾಡುವರೆ ಇಲ್ಲಿಯ ರಚನೆ ಕೆಡಬೇಕು. ರಚನೆ ರಂಜಕ ಭುಂಜಕ ಹೊಂದಿದ ಸಂಗಸೂತಕವಿಲ್ಲ, ಲಿಂಗವಿಯೋಗವಿಲ್ಲ, ಅಂಗದ ನಿಲವ ಸಂಗಕ್ಕೆ ತರಲುಂಟೆ ? ಆನಂದದಿಂದ ವಿಚಾರಿಸಿ ನೋಡಲು ಸಂಗ ನಿಸ್ಸಂಗ ನೋಡಾ ! ಕೂಡಲಚೆನ್ನಸಂಗನೆಂಬ ನಿಶ್ಚಿಂತ ನಿರಾಳವು
--------------
ಚನ್ನಬಸವಣ್ಣ
ಕೂಟದ ರಚನೆಯ ಸಂದಳಿದು ನೋಟ ನಿಮ್ಮ್ಲ ನಟ್ಟು ಸಮಕಳೆ ಎಂದಪ್ಪುದಯ್ಯಾ, ಸಮರತಿ ಎಂದಪ್ಪುದಯ್ಯಾ. ಹಂಗ ಹರಿದು, ದಂದುಗ ಉಡುಗಿ ಎನ್ನನೆಂದಿಂಗೆ ಒಳಕೊಂಬೆಯೊ ಗುರುವೆ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ
--------------
ಸಿದ್ಧರಾಮೇಶ್ವರ
ಶಬ್ದ ಸ್ಪರ್ಶ ರೂಪು ರಸ ಗಂಧ, ಪಂಚ ಇಂದ್ರಿಯ, ಸಪ್ತಧಾತು ಅಷ್ಟಮದದಿಂದ ಮುಂದುಗಾಣದವರು ನೀವು ಕೇಳಿರೆ; ಲಿಂಗದ ವಾರ್ತೆಯ ವಚನದಲ್ಲಿ ರಚನೆಯ ಮಾಡುವ (ವಿ?) ರಯ್ಯಾ, ಸಂಸಾರದ ಮಚ್ಚು ಬಿಡದನ್ನಕ್ಕ, ಸೂಕ್ಷ್ಮ ಶಿವಪಥವು ಸಾಧ್ಯವಾಗದು. ಗುಹೇಶ್ವರಲಿಂಗದಲ್ಲಿ ವಾಕು ಪಾಕವಾದಡೇನೊ, ಮನ ಪಾಕವಾಗದನ್ನಕ್ಕ ?
--------------
ಅಲ್ಲಮಪ್ರಭುದೇವರು
ಕರಿಯ ಮುತ್ತಿನ ಹಾರದ ಪರಿಯೊಂದು ಶೃಂಗಾರ, ಕರದ ಬಣ್ಣದ ನುಡಿಯ ಬೆಡಗಿನೊಳಗಡಗಿತ್ತು. ಸಿಡಿಲ ಬಣ್ಣವನುಟ್ಟು ಮಡದಿ ಒಂದೂರೊಳಗೆ ಕಡುಗಲಿಯ ವಿದ್ಯೆಯನು ನೋಡಿ, ನೋಡದ ನಿರ್ಭಾವ ವೀರವಿತರಣೆಯಿಂದ, ಧಾರುಣಿಯ ರಚನೆಯ, ಗುಹೇಶ್ವರನೆಂಬ ಲಿಂಗವ ಬೆಡಗು ನುಂಗಿ ಅಡಗಿತ್ತು.
--------------
ಅಲ್ಲಮಪ್ರಭುದೇವರು
ವಚನಾರ್ಥವ ಕಂಡಹರೆಂದು ರಚನೆಯ ಮರೆಮಾಡಿ ನುಡಿಯಲೇತಕ್ಕೆ? ದಾರಿಯಲ್ಲಿ ಸರಕು ಮರೆಯಲ್ಲದೆ ಮಾರುವಲ್ಲಿ ಮರೆ ಉಂಟೆ? ತಾನರಿವಲ್ಲಿ ಮರೆಯಲ್ಲದೆ ಬೋಧೆಗೆ ಮರೆಯಿಲ್ಲ, ಎಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಲ್ಲಯ್ಯಗಳ ವಚನ ಎರಡೆಂಬತ್ತು ಕೋಟಿ. ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮೂವತ್ತಾರು ಸಾಸಿರ. ಎಮ್ಮಯ್ಯಗಳ ವಚನ ವಚನಕ್ಕೊಂದು. ನೀಲಮ್ಮನ ವಚನ ಲಕ್ಷದ ಹನ್ನೊಂದು ಸಾಸಿರ. ಗಂಗಾಂಬಿಕೆಯ ವಚನ ಲಕ್ಷದ ಎಂಟು ಸಾಸಿರ. ಎಮ್ಮಕ್ಕ ನಾಗಾಯಿಯ ವಚನ ಮೂರುಲಕ್ಷದ ತೊಂಬತ್ತಾರು ಸಾಸಿರ. ಮಡಿವಾಳಣ್ಣನ ವಚನ ಮೂರು ಕೋಟಿಮುನ್ನೂರು. ಹಡಪದಯ್ಯಗಳ ವಚನ ಹನ್ನೊಂದು ಸಾಸಿರ. ಮರುಳಸಿದ್ಧನ ವಚನ ಅರುವತ್ತೆಂಟು ಸಾಸಿರ. ಇಂತಪ್ಪ ವಚನದ ರಚನೆಯ ಬಿಟ್ಟು, ಹುಡಿಮಣ್ಣ ಹೊಯ್ಯದೆ ಮಾಬನೆ, ಕುತ್ಸಿ ಕಾವ್ಯಾಲಂಕಾರ ನೋಡುವರ ನೋಡಿ, ಮಹಾದೇವ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಗಡ್ಡ ಮಂಡೆಯ ಬೋಳಿಸಿಕೊಂಡವರೆಲ್ಲ ಕಬ್ಬಲಿಗರಮಕ್ಕಳೆಂಬೆ. ಬತ್ತಲೆ ಇಪ್ಪವರೆಲ್ಲ ಕುಂಚಿಗನ ಮಕ್ಕಳೆಂಬೆ. ಪಟ್ಟಣಕ್ಕೆ ಹೋಗಿ ಹೆಸರ ಹೇಳುವ ಜಾತಿಕಾರನಂತೆ ಅರ್ಥ ಅನುಭಾವವ ಬಲ್ಲೆನೆಂದು ಅಗಮ್ಯವ ಬೀರುವ ಅಫ್ಸೋರಿಗಳ ವಿರಕ್ತರೆನ್ನಬಹುದೆ? ಎನಲಾಗದು. ವಚನದ ರಚನೆಯ ಅರಿದೆನೆಂಬ ಅಹಂಕಾರವ ಮುಂದುಗೊಂಡು ತಿರುಗುವ ಆತ್ಮತೇಜದ ಘಾತಕರ ವಿರಕ್ತರೆನಲಾಗದಯ್ಯಾ. ವಿರಕ್ತನ ಪರಿಯ ಹೇಳಿಹೆನು ಕೇಳಿರಣ್ಣಾ ; ವಾಯು ಬೀಸದ ಉದಕದಂತಿರಬೇಕು; ಅಂಬುಧಿಯೊಳಗೆ ಕುಂಭ ಮುಳುಗಿದಂತಿರಬೇಕು; ದರಿದ್ರಗೆ ನಿಧಾನಸೇರಿದಂತಿರಬೇಕು; ರೂಹಿಲ್ಲದ ಮರುತನಂತಿರಬೇಕು; ಹಿಂಡನಗಲಿದ ಮದಗಜ ಹಿಂಡಸೇರಿದಂತಿರಬೇಕು; ಸಂದೇಹ ಸಂಕಲ್ಪ ಮುಂದುಗೊಳ್ಳದೆ ಇರಬೇಕು. ಅಂಗಲಿಂಗಿಗಳಲ್ಲಿ ಲಿಂಗಾರ್ಪಿತಕ್ಕೆ ಹೋಗಿ ಬಂದುದನತಿಗಳೆಯದಿದ್ದಡೆ ವಿರಕ್ತರೆಂಬೆನು. ರೋಗರುಜಿನಂಗಳು ಬಂದಲ್ಲಿ ಕಿಂಕಿಲನಾಗದೆ ಇರಬಲ್ಲಡೆ ಅಮುಗೇಶ್ವರಲಿಂಗವೆಂಬೆನು.
--------------
ಅಮುಗೆ ರಾಯಮ್ಮ
ಷಡುಸಮ್ಮಾರ್ಜನೆಯ ಮಾಡೆನೆ? ರಂಗವಾಲಿಯನಿಕ್ಕೆನೆ? ಹೂ ಅಗ್ಛವಣಿಯ ತಾರೆನೆ? ಪೂಜಾ ರಚನೆಯ ಮಾಡೆನೆ? ಅಷ್ಟವಿಧಾರ್ಚನೆಯ ಮಾಡೆನೆ? ಮಾಡುವವರಿಗೆ ನೀಡಿ ಕೊಡೆನೆ? ವೀಣೆಯ ಬಾರಿಸಿ, ಸಕಳೇಶ್ವರಂಗೊಂದು ಗೀತವ ಪಾಡೆನೆ? ಇಂಥಾ ಪರಿಯಲಿ ಸುಖಿಮಾಡಿ ಸಲಹುವ, ಇಂತಪ್ಪಅಳುದರೊಳರೆ?
--------------
ಸಕಳೇಶ ಮಾದರಸ
ಇನ್ನಷ್ಟು ... -->