ಅಥವಾ

ಒಟ್ಟು 27 ಕಡೆಗಳಲ್ಲಿ , 19 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲದ ಬಂಡುಂಬ ಭೃಂಗ ಭೂಜ ರಜ ಹುಡಿಯ ಸೋಂಕಲಮ್ಮದು ನೋಡಾ. ಐದದು ನಿರಂಜನ ಅಪ್ರತಿಮ ಗಂಬ್ಥೀರ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಹಂಕಾರಗಳಿಲ್ಲದಂದು, ಹಮ್ಮು ಬಿಮ್ಮುಗಳಿಲ್ಲದಂದು, ಸತ್ವ ರಜ ತಮಗಳಿಲ್ಲದಂದು, ಅಂತಃಕರಣಚತುಷ್ಟಯಂಗಳಿಲ್ಲದಂದು, ಪಂಚೇಂದ್ರಿಯಂಗಳಿಲ್ಲದಂದು, ಅರಿಷಡ್ವರ್ಗಂಗಳಿಲ್ಲದಂದು, ಸಪ್ತವ್ಯಸನಂಗಳಿಲ್ಲದಂದು, ಅಷ್ಟಮದಂಗಳಿಲ್ಲದಂದು, ದಶವಾಯುಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ನಿರುಪಮ ಮಹಾಘನ ಅಘಟಿತಘಟಿತ ಅಪರಂಪರ ವಿಶ್ವಂಭರಿತ ನಿರಾಳ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪೃಧ್ವಿಯಗೆಲಿದ ಏಲೇಶ್ವರನ ಕಂಡೆ. ಭಾವಭ್ರಮೆಯ ಗೆಲಿದ ಬ್ರಹ್ಮೇಶ್ವರನ ಕಂಡೆ. ಸತ್ವ ರಜ ತಮ ತ್ರಿವಿಧವ ಗೆಲಿದ ತ್ರಿಪುರಾಂತಕನ ಕಂಡೆ. ಅಂತರಂಗದ ಆತ್ಮಜ್ಞಾನದಿಂದ ಜ್ಯೋತಿಸಿದ್ಧಯ್ಯನ ಕಂಡೆ. ಇವರೆಲ್ಲರ ಮಧ್ಯಮಸ್ಥಾನ ಪ್ರಾಣಲಿಂಗ ಜಂಗಮವೆಂದು ಸುಜ್ಞಾನದಲ್ಲಿ ತೋರಿದ ಬಸವಣ್ಣ ; ಆ ಬಸವಣ್ಣನ ಪ್ರಸಾದದಿಂದ ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯಾ
--------------
ಅಕ್ಕಮಹಾದೇವಿ
ಚಿತ್ತು ಘಟವ ಹೊತ್ತು ಇಹಾಗ, ನಿತ್ಯಾನಿತ್ಯವನರಿದುದಿಲ್ಲ. ಸತ್ವ ರಜ ತಮವ ಹೊತ್ತಾಡುವಲ್ಲಿ, ಭವಲೇಪ ನಿಶ್ಚಯವನರಿಯಬೇಕು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಾ.
--------------
ಸಗರದ ಬೊಮ್ಮಣ್ಣ
ಶಬ್ದ ಸ್ಪರ್ಶ ರೂಪು ರಸ ಗಂಧ ಪಂಚವಿಷಯ ಸಂಗತವಾವುದೆಂದಡೆ: ಶಬ್ದಗುರು, ಸ್ಪರ್ಶಲಿಂಗ, ರೂಪುಜಂಗಮ, ರಸಪ್ರಸಾದ, ಗಂಧ ಅನುಭಾವ. ಇಂತೀ ಪಂಚವಿಂಶತಿಯವನಲ್ಲವೆನಬಲ್ಲನಾಗಿ ಬಸವಣ್ಣನು. ಮನ ಬುದ್ಧಿ ಚಿತ್ತ ಅಹಂಕಾರ ಚತುರ್ವಿಧ ಸ್ಥೂಲವಾವುದೆಂದಡೆ: ಮನ ಧ್ಯಾನ ಬುದ್ಧಿ ವಂಚನೆ ಇಲ್ಲದುದು. ಚಿತ್ತ ದಾಸೋಹ ಅಹಂಕಾರ ಜ್ಞಾನ ಇವರಲ್ಲಿ ಮಾಡಬಲ್ಲನಾಗಿ ಬಸವಣ್ಣನು. ಸತ್ವ ರಜ ತಮವೆಂಬೀ ತ್ರಿಕರಣವಾವುದೆಂದಡೆ: ಸತ್ವಶುದ್ಧ ರಜಸಿದ್ಧ ತಮಪ್ರಸಿದ್ಧ. ಇಂತೀ ತ್ರಿವಿಧ ಸನ್ನಹಿತನಾಗಿ ಬಸವಣ್ಣನು. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವಾವುದೆಂದಡೆ: ಕಾಮ ಪೂಜೆ, ಕ್ರೋಧ ಅನಿಮಿಷ, ಲೋಭ ಭಕ್ತಿ, ಮೋಹ ಅಷ್ಟವಿಧಾರ್ಚನೆ, ಮದ ಷೋಡಶೋಪಚಾರ ಮತ್ಸರ ಭವಂ ನಾಸ್ತಿ ಎಂದೆನಬಲ್ಲನಾಗಿ ಬಸವಣ್ಣನು, ಮಹಾದೇವನು ಬಸವಣ್ಣನು, ಮಹಾಲಿಂಗವು ಬಸವಣ್ಣಂಗೆ ಮತ್ತೇನು ಅಪ್ರತಿಮ ಕಾಣಾ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಪಂಚಾಂಗ ಪಂಚಾಂಗವೆಂದು ಕಳವಳಗೊಂಡು ಜೋಯಿಸನ ಕರೆಯಿಸಿ, ಕೈಮುಗಿದು ಕಾಣಿಕೆಯನಿಕ್ಕಿ ಎಲೆ ಅಡಿಕೆಯಂ ಕೊಟ್ಟು, ಜೋಯಿಸನ ವಾಕ್ಯವು ಸಕಲ ಕಾರ್ಯಕ್ಕೆ ಸಿದ್ಧಿಯೆಂದು, ಅವನ ಬಾಯ ತೊಂಬುಲವ ತಿಂಬ ಹಂದಿಗಳಿರಾ ಎತ್ತ ಬಲ್ಲಿರಯ್ಯಾ ಶಿವಾಚಾರದ ಪದ್ಧತಿಯನು ? ಪಂಚಾಂಗವೆಂಬ ಶಬ್ದಕ್ಕೆ ಅರ್ಥವ ಹೇಳಲರಿಯದೆ ಜೋಯಿಸರು ಕೆಟ್ಟರು ; ಕೇಳಲರಿಯದೆ ಅನಂತ ಹಿರಿಯರು ನರಕಕ್ಕೆ ಇಳಿದರು. ಪಂಚಾಂಗವೆಂದರೆ ಹೇಳಿಹೆ ಕೇಳಿರಣ್ಣಾ. ಪಂಚ ಅಂದರೆ ಐದು ; ಅಂಗವೆಂದರೆ ದೇಹ, ಪೃಥ್ವಿ ಅಪ್ಪು ತೇಜ ವಾಯು ಆಕಾಶ- ಈ ಐದು ಕೂಡಿ ದೇಹವಾಯಿತ್ತು. ಆ ದೇಹದೊಳಗೆ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಚ್ಚು ಮುರಿಯುವುದೇ ಪಂಚಾಂಗ. ಸತ್ವ ರಜ ತಮವೆಂಬ ಅಹಂಕಾರವ ತುಳಿವುದೆ ಪಂಚಾಂಗ. ಆಣವಮಲ ಮಾಯಾಮಲ ಕಾರ್ಮಿಕಮಲವ ಮುಟ್ಟದಿರುವುದೇ ಪಂಚಾಂಗ. ತನ್ನ ಸತಿಯ ಸಂಗವಲ್ಲದೆ ಪರಸತಿಯರ ಮುಟ್ಟದಿರುವುದೇ ಪಂಚಾಂಗ. ತನ್ನ ಇಷ್ಟಲಿಂಗವಲ್ಲದೆ ಭೂಮಿಯ ಮೇಲೆ ಇಟ್ಟು ಪೂಜೆಯ ಮಾಡುವ ದೇವರಿಗೆ ಕೈಮುಗಿಯದಿರುವುದೆ ಪಂಚಾಂಗ. ಜಾತಿಸೂತಕ ಜನನಸೂತಕ ಉಚ್ಫಿಷ್ಟಸೂತಕ ಮೃತ್ಯುಸೂತಕ ರಜಸ್ಸೂತಕ - ಈ ಪಂಚಸೂತಕವ ಶರಣರು ಕಳೆವರಾಗಿ, ನಮ್ಮ ಶಿವಭಕ್ತರಿಗೆ ಸಲ್ಲದೆಂಬುದೆ ಪಂಚಾಂಗ. ಸೂತಕ ನಾಸ್ತಿಯಾದುದೆ ಪಂಚಾಂಗ. ಗುರು ಲಿಂಗ ಜಂಗಮ ಪಾದೋದಕ ಪ್ರಸಾದವೆ ಪಂಚಾಂಗ. ಲಿಂಗಾಚಾರ ಸರ್ವಾಚಾರ ಭೃತ್ಯಾಚಾರ ಶಿವಾಚಾರ ಗಣಾಚಾರವೆ ಪಂಚಾಂಗ. ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ, ಗಣಪ್ರಸಾದ, ಮಹಾಪ್ರಸಾದವ ಕೊಂಬುವುದೆ ಪಂಚಾಂಗ. ಇಂತೀ ಪಂಚಾಂಗದ ನಿಲವನರಿಯದೆ ಪಂಚಸೂತಕದೊಳಗೆ ಹೊಡೆದಾಡುವ ಪಂಚಮಹಾಪಾತಕರ ಎನಗೊಮ್ಮೆ ತೋರದಿರಯ್ಯ ನಿಸ್ಸಂಗ ನಿರಾಳ ನಿಜಲಿಂಗಪ್ರಭುವೆ.
--------------
ನಿರಾಲಂಬ ಪ್ರಭುದೇವ
ಆ ಪರಬ್ರಹ್ಮವೆ ಓಂಕಾರವಪ್ಪ ಪ್ರಣವಸ್ವರೂಪು, ಪರಮಾತ್ಮನೆನಿಸಿ ಪರಶಿವನಾಮದಿಂ ಪರಶಕ್ತಿಸಂಯುಕ್ತವಾಗಿ, ಆಕಾರ ಉಕಾರ ಮಕಾರವೆಂಬ ಬೀಜಾಕ್ಷರಂಗಳಿಂ ನಾದಬಿಂದುಕಳೆಯಾಗಿ, ದಶನಾಡಿ ದಶವಾಯು ದಶವಿಧೇಂದ್ರಿಯ ಸಪ್ತಧಾತು ಷಡುಚಕ್ರ ಷಡುವರ್ಗ ಪಂಚಭೂತ ಚತುರಂತಃಕರಣ, ತ್ರಿದೋಷಪ್ರಕೃತಿ, ತ್ರಯಾವಸ್ಥೆ, ಸತ್ವ ರಜ ತಮ, ಅಂಗ ಪ್ರಾಣ, ಅರಿವು ಭಾವ ಜ್ಞಾನ, ಮೊದಲಾದ ಬಾಹತ್ತರ ವಿನಿಯೋಗಮಂ ತಿಳಿದು ಭೂಲೋಕ ಭುವರ್ಲೋಕ ಸ್ವರ್ಲೋಕ ಮಹರ್ಲೋಕ ಜನಲೋಕ ತಪೋಲೋಕ, ಸತ್ಯಲೋಕ, ಅತಳ, ವಿತಳ, ಸುತಳ, ಮಹಾತಳ, ರಸಾತಳ, ತಳಾತಳ, ಪಾತಾಳಂಗಳೊಳಗಾದ ಚತುರ್ದಶಭುವನಂಗಳೊಳಹೊರಗೆ ಅಂತರ್ಗತ ಬಹಿರ್ಗತವಾಗಿ, ನಾದಮಂ ತೋರಿ ಭರ್ಗೋದೇವನೆಂಬ ನಾಮಮಂ ತಳೆದು ಊಧ್ರ್ವರೇತುವೆನಿಸಿ, ವಿಶ್ವತೋಮುಖ, ವಿಶ್ವತಶ್ಚಕ್ಷು, ವಿಶ್ವತೋ ಬಾಹು, ವಿಶ್ವತಃಪಾದದಿಂ ವಿಶ್ವಗರ್ಭೀಕೃತವಾಗಿ, ಉತ್ಪತ್ತ್ಯಸ್ಥಿತಿಲಯಂಗಳನೆಣಿಕೆಗೆಯ್ಯದೆ ದೇವತಾಂತರದಿಂ ಮಾನಸಾಂತರವನನುಕರಿಸಿ, ಮಾನಸದಲ್ಲಿ ರವಿಕೋಟಿತೇಜದಿಂ ಸಕಲಪಾಪಾಂಧಕೂಪಮಂ ತೊಳೆದು ಸುರಕ್ಷಿತದಿಂ ಪ[ರಾ] ಪಶ್ಯಂತಿ ಸುಮಧ್ಯ ವೈಖರಿಯೆಂಬ ಚತುರ್ವಿಧದಿಂ ದುರಿತ ದುರ್ಮದ ಕಾಲಮೂಲಾದಿಮೂಲಮಂ ಬಗೆಗೊಳ್ಳದೆ, ಚಿತ್ಸುಧಾಮೃತವೆ ಅಂಗವಾಗಿ ಚಿದರ್ಕಪ್ರಭಾಕರವೆ ಪ್ರಾಣವಾಗಿ, ಸೌರಾಷ್ಟ್ರ ಸೋಮೇಶ್ವರನಿಂತಿಂತು ಕರ್ತನು-ಭರ್ತನು ತಾನೆ ಆಗಿ, ಪರಮಸ್ವಯಂಭೂ ಸ್ವತಃಸಿದ್ಧದಿಂ ಸಚ್ಚಿದಾನಂದಸ್ವರೂಪದಿಂ ನಿತ್ಯಪರಿಪೂರ್ಣತ್ವದಿಂದೆಡದೆರಹಿಲ್ಲದಿರ್ಪನಯ್ಯಾ.
--------------
ಆದಯ್ಯ
ಶರಣಸನ್ಮತವಪ್ಪ ನಿಜಗುಣಭರಿತನಪ್ಪಡೆ, ಸತ್ವ ರಜ ತಮ ಕ್ರೋಧ ಬಿಡದನ್ನಕ್ಕ ಅನುಭಾವವೆಲ್ಲಿಯದೊ ಆತ್ಮಸ್ತುತಿ ಪರನಿಂದೆಯ ಬಿಡದನ್ನಕ್ಕ, ಅರಿಷಡ್ವರ್ಗ ದಶವಾಯು ಬೆರೆಸಿಪ್ಪ ಕಳಂಕವಪ್ಪ ತನುವ ಬಿಡದನ್ನಕ್ಕ. ಸಂಸಾರ ಮಾದಲ್ಲದೆ ಶರಣಸಜ್ಜನಿಕೆ, ಸಮಯಾಚಾರ, ನಿಜವ್ರತವು ದುರಾಚಾರಿಗಳಿಗಳವಡದು, ನಮ್ಮ ಕೂಡಲಸಂಗನ ಶರಣರಿಗಲ್ಲದೆ.
--------------
ಬಸವಣ್ಣ
ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ, ಮನೆಯೊಳಗೆ ಮನೆಯೊಡೆಯನಿದ್ದಾನೊ, ಇಲ್ಲವೊ ತನುವಿನಲ್ಲಿ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ ಮನದೊಳಗೆ [ಮನದೊ]ಡೆಯನಿದ್ದಾನೊ, ಇಲ್ಲವೊ ಇಲ್ಲ, ಕೂಡಲಸಂಗಮದೇವಾ. 97
--------------
ಬಸವಣ್ಣ
ಅಷ್ಟಮದಂಗಳ ಘಟ್ಟಿಯನೆ ಕರಗಿಸಿ, ಸತ್ವ ರಜ ತಮಂಗಳ ಬಿಟ್ಟು ಕಳೆದು, ಸುತ್ತುವ ಮನದ ಸುಳಿಯ ತಪ್ಪಿಸಿ ಮುಂದೆ ಹುಟ್ಟದೆ ಹೋಗೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅನಾದಿ ಸದಾಶಿವತತ್ವ, ಅನಾದಿ ಈಶ್ವರತತ್ವ, ಅನಾದಿ ಮಹೇಶ್ವರತತ್ವವೆಂಬ, ಅನಾದಿ ತ್ರಿತತ್ವಂಗಳು ತಾನಲ್ಲ. ಆದಿ ಸದಾಶಿವತತ್ವ, ಆದಿ ಈಶ್ವರತತ್ವ, ಆದಿ ಮಹೇಶ್ವರತತ್ವವೆಂಬ ಆದಿ ತ್ರಿತತ್ವಂಗಳು ತಾನಲ್ಲ. ಶಂಕರ ಶಶಿಧರ ಗಂಗಾಧರ ಗೌರೀಶ ಕಳಕಂಠ ರುದ್ರ, ಕಪಾಲಮಾಲಾಧರ ರುದ್ರ,ಕಾಲಾಗ್ನಿರುದ್ರ, ಏಕಪಾದರುದ್ರ, ಮಹಾಕಾಲರುದ್ರ, ಮಹಾನಟನಾಪಾದರುದ್ರ, ಊಧ್ರ್ವಪಾದರುದ್ರ, ಬ್ರಹ್ಮಕಪಾಲ ವಿಷ್ಣುಕಂಕಾಳವ ಪಿಡಿದಾಡುವ ಪ್ರಳಯಕಾಲರುದ್ರರು, ತ್ರಿಶೂಲ ಖಟ್ವಾಂಗಧರರು ವೃಷಭವಾಹನರು ಪಂಚಮುಖರುದ್ರರು, ಶೂನ್ಯಕಾಯನೆಂಬ ಮಹಾರುದ್ರ, ಅನೇಕಮುಖ ಒಂದುಮುಖವಾಗಿ ವಿಶ್ವರೂಪರುದ್ರ, ವಿಶ್ವಾಧಿಕಮಹಾರುದ್ರ, ಅಂಬಿಕಾಪತಿ ಉಮಾಪತಿ ಪಶುಪತಿ ಮೊದಲಾದ ಗಣಾಧೀಶ್ವರರೆಂಬ ಮಹಾಗಣಂಗಳು ತಾನಲ್ಲ. ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ಸಹಸ್ರಪಾದವನುಳ್ಳ ವಿರಾಟ್ಪುರುಷನು ತಾನಲ್ಲ. ವಿಶ್ವತೋಮುಖ ವಿಶ್ವತೋಚಕ್ಷು ತಾನಲ್ಲ. ವಿಶ್ವತೋಪಾದವನುಳ್ಳ ಮಹಾಪುರುಷ ತಾನಲ್ಲ. ಪತಿ-ಪಶು-ಪಾಶಂಗಳೆಂಬ ಸಿದ್ಧಾಂತಜ್ಞಾನತ್ರಯಂಗಳು ತಾನಲ್ಲ. ತ್ವಂ ಪದ ತತ್‍ಪದ ಅಸಿಪದವೆಂಬ ವೇದಾಂತಪದತ್ರಯ ಪದಾರ್ಥಂಗಳು ತಾನಲ್ಲ. ಜೀವಹಂಸ ಪರಮಹಂಸ ಪರಾಪರಹಂಸನೆಂಬ ಹಂಸತ್ರಯಂಗಳು ತಾನಲ್ಲ. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಂಬ ಪಂಚಮೂರ್ತಿಗಳು ತಾನಲ್ಲ. ಆ ಸದಾಶಿವತತ್ವದಲ್ಲುತ್ಪತ್ಯವಾದ ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯಾತ್ಮರೆಂಬ ಅಷ್ಟತನುಮೂರ್ತಿಗಳು ತಾನಲ್ಲ. ಅಸ್ಥಿ ಮಾಂಸ ಚರ್ಮ ನರ ರೋಮ -ಈ ಐದು ಪೃಥ್ವಿಯಿಂದಾದವು. ಪಿತ್ಥ ಶ್ಲೇಷ್ಮ ರಕ್ತ ಶುಕ್ಲ ಮೂತ್ರ -ಈ ಐದು ಅಪ್ಪುವಿನಿಂದಾದವು. ಕ್ಷುದೆ ತೃಷೆ ನಿದ್ರೆ ಆಲಸ್ಯ ಸಂಗ -ಈ ಐದು ಅಗ್ನಿಯಿಂದಾದವು. ಪರಿವ ಪಾರುವ ಸುಳಿವ ಕೂಡುವ ಅಗಲುವ -ಈ ಐದು ವಾಯುವಿನಿಂದಾದವು. ವಿರೋಧಿಸುವ ಅಂಜಿಸುವ ನಾಚುವ ಮೋಹಿಸುವ ಅಹುದಾಗದೆನುವ -ಈ ಐದು ಆಕಾಶದಿಂದಾದವು. ಇಂತೀ ಪಂಚಭೌತಿಕದ ಪಂಚವಿಂಶತಿ ಗುಣಂಗಳಿಂದಾದ ದೇಹವು ತಾನಲ್ಲ. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಜ್ಞಾನೇಂದ್ರಿಯಂಗಳು ತಾನಲ್ಲ. ವಾಕು ಪಾದ ಪಾಣಿ ಪಾಯು ಗುಹ್ಯವೆಂಬ ಕರ್ಮೇಂದ್ರಿಯಂಗಳು ತಾನಲ್ಲ. ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ಪಂಚವಿಷಯಂಗಳು ತಾನಲ್ಲ, ವಚನ ಗಮನ ದಾನ ವಿಸರ್ಗ ಆನಂದವೆಂಬ ಕರ್ಮೇಂದ್ರಿಯಂಗಳ ತನ್ಮಾತ್ರೆಗಳು ತಾನಲ್ಲ, ಇಡೆ ಪಿಂಗಳೆ ಸುಷುಮ್ನಾ ಗಾಂಧಾರೀ ಹಸ್ತಿಜಿಹ್ವಾ ಪೂಷೆ ಪಯಸ್ವಿನೀ ಅಲಂಬು ಲಕುಹ ಶಂಕಿನೀ-ಎಂಬ ದಶನಾಡಿಗಳು ತಾನಲ್ಲ. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯವೆಂಬ ದಶವಾಯುಗಳು ತಾನಲ್ಲ. ಸ್ಥೂಲತನು, ಸೂಕ್ಷ್ಮತನು, ಕಾರಣತನು, ನಿರ್ಮಲತನು, ಆನಂದತನು, ಚಿನ್ಮಯತನು, ಚಿದ್ರೂಪತನು, ಶುದ್ಧತನುವೆಂಬ ಅಷ್ಟತನುಗಳು ತಾನಲ್ಲ. ಜೀವಾತ್ಮ ಅಂತರಾತ್ಮ ಪರಮಾತ್ಮ ನಿರ್ಮಲಾತ್ಮ ಶುದ್ಧಾತ್ಮ ಜ್ಞಾನಾತ್ಮ ಭೂತಾತ್ಮ ಮಹಾತ್ಮವೆಂಬ ಅಷ್ಟ ಆತ್ಮಂಗಳು ತಾನಲ್ಲ. ಸಂಸ್ಥಿತ ತೃಣೀಕೃತ ವರ್ತಿನಿ ಕ್ರೋಧಿನಿ ಮೋಹಿನಿ ಅತಿಚಾರಿಣಿ ಗಂಧಚಾರಿಣಿ ವಾಸಿನಿಯೆಂಬ ಅಂತರಂಗದ ಅಷ್ಟಮದಂಗಳು ತಾನಲ್ಲ. ಕುಲ ಛಲ ಧನ ರೂಪ ಯೌವ್ವನ ವಿದ್ಯೆ ರಾಜ್ಯ ತಪವೆಂಬ ಬಹಿರಂಗ ಅಷ್ಟಮದಂಗಳು ತಾನಲ್ಲ. ರಸ ರುಧಿರ ಮಾಂಸ ಮೇದಸ್ಸು ಅಸ್ಥಿ ಮಜ್ಜೆ ಶುಕ್ಲವೆಂಬ ಸಪ್ತಧಾತುಗಳು ತಾನಲ್ಲ. ತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ, ವಿಶ್ವವ್ಯಸನ, ಉತ್ಸಾಹವ್ಯಸನ, ಸೇವಕವ್ಯಸನವೆಂಬ ಸಪ್ತವ್ಯಸನಂಗಳು ತಾನಲ್ಲ. ಕ್ಷುತ್ ಪಿಪಾಸೆ ಶೋಕ ಮೋಹ ಜನನ ಮರಣವೆಂಬ ಷಡೂರ್ಮಿಗಳು ತಾನಲ್ಲ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಂಗಳು ತಾನಲ್ಲ. ಜಾತಿ, ವರ್ಣ, ಆಶ್ರಮ, ಕುಲ, ಗೋತ್ರ, ನಾಮಗಳೆಂಬ ಷಟ್‍ಭ್ರಮೆಗಳು ತಾನಲ್ಲ. ಆಸ್ತಿ, ಜಾಯತೇ, ಪರಿಣಮತೇ, ವರ್ಧತೇ, ವಿನಶ್ಯತಿ, ಅಪಕ್ಷೀಯತೇ ಎಂಬ ಷಡ್ಭಾವವಿಕಾರಂಗಳು ತಾನಲ್ಲ. ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯವೆಂಬ ಪಂಚಕೋಶಂಗಳು ತಾನಲ್ಲ. ಸತ್ವ ರಜ ತಮೋಗುಣತ್ರಯಂಗಳು ತಾನಲ್ಲ. ಅಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕವೆಂಬ ತಾಪತ್ರಯಂಗಳು ತಾನಲ್ಲ. ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯಂಗಳು ತಾನಲ್ಲ. ವಾತ ಪಿತ್ಥ ಕಫಂಗಳೆಂಬ ದೋಷತ್ರಯಂಗಳು ತಾನಲ್ಲ. ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳು ತಾನಲ್ಲ. ಸುಖ ದುಃಖ ಪುಣ್ಯ ಪಾಪಂಗಳು ತಾನಲ್ಲ. ಸಂಚಿತ, ಪ್ರಾರಬ್ಧ, ಆಗಾಮಿಯೆಂಬ ಕರ್ಮತ್ರಯಂಗಳು ತಾನಲ್ಲ. ಅಗ್ನಿಮಂಡಲ, ಆದಿತ್ಯಮಂಡಲ, ಚಂದ್ರಮಂಡಲವೆಂಬ ಮಂಡಲತ್ರಯಂಗಳು ತಾನಲ್ಲ. ಆಧಾರ, ಸ್ವಾಧಿಷಾ*ನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೆ ಎಂಬ ಷಡುಚಕ್ರಂಗಳ ದಳ ವರ್ಣ ಅಕ್ಷರಂಗಳು ತಾನಲ್ಲ. ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತಗಳೆಂಬ ಪಂಚಾವಸ್ಥೆಗಳು ತಾನಲ್ಲ. ಜಾಗ್ರದಲ್ಲಿಯ ಜಾಗ್ರ, ಜಾಗ್ರದಲ್ಲಿಯ ಸ್ವಪ್ನ, ಜಾಗ್ರದಲ್ಲಿಯ ಸುಷುಪ್ತಿ, ಜಾಗ್ರದಲ್ಲಿಯ ತೂರ್ಯ, ಜಾಗ್ರದಲ್ಲಿಯ ತೂರ್ಯಾತೀತವೆಂಬ ಜಾಗ್ರಪಂಚಾವಸ್ಥೆಗಳು ತಾನಲ್ಲ. ಸ್ವಪ್ನದಲ್ಲಿಯ ಜಾಗ್ರ, ಸ್ವಪ್ನದಲ್ಲಿಯ ಸ್ವಪ್ನ, ಸ್ವಪ್ನದಲ್ಲಿಯ ಸುಷುಪ್ತಿ, ಸ್ವಪ್ನದಲ್ಲಿಯ ತೂರ್ಯ, ಸ್ವಪ್ನದಲ್ಲಿಯ ತೂರ್ಯಾತೀತವೆಂಬ ಸ್ವಪ್ನಪಂಚಾವಸ್ಥೆಗಳು ತಾನಲ್ಲ. ಸುಷುಪ್ತಿಯಲ್ಲಿಯ ಜಾಗ್ರ, ಸುಷುಪ್ತಿಯಲ್ಲಿಯ ಸ್ವಪ್ನ, ಸುಷುಪ್ತಿಯಲ್ಲಿಯ ಸುಷುಪ್ತಿ , ಸುಷುಪ್ತಿಯಲ್ಲಿಯ ತೂರ್ಯ, ಸುಷುಪ್ತಿಯಲ್ಲಿಯ ತೂರ್ಯಾತೀತವೆಂಬ ಸುಷುಪ್ತಿಯ ಪಂಚಾವಸ್ಥೆಗಳು ತಾನಲ್ಲ. ತೂರ್ಯದಲ್ಲಿಯ ಜಾಗ್ರ, ತೂರ್ಯದಲ್ಲಿಯ ಸ್ವಪ್ನ, ತೂರ್ಯದಲ್ಲಿಯ ಸುಷುಪ್ತಿ, ತೂರ್ಯದಲ್ಲಿಯ ತೂರ್ಯ, ತೂರ್ಯದಲ್ಲಿಯ ತೂರ್ಯಾತೀತವೆಂಬ ತೂರ್ಯಪಂಚಾವಸ್ಥೆಗಳು ತಾನಲ್ಲ. ತೂರ್ಯಾತೀತದಲ್ಲಿಯ ಜಾಗ್ರ, ತೂರ್ಯಾತೀತದಲ್ಲಿಯ ಸ್ವಪ್ನ , ತೂರ್ಯಾತೀತದಲ್ಲಿಯ ಸುಷುಪ್ತಿ, ತೂರ್ಯಾತೀತದಲ್ಲಿಯ ತೂರ್ಯ, ತೂರ್ಯಾತೀತದಲ್ಲಿಯ ತೂರ್ಯಾತೀತವೆಂಬ ತೂರ್ಯಾತೀತಪಂಚಾವಸ್ಥೆಗಳು ತಾನಲ್ಲ. ಸಕಲ-ಶುದ್ಧ-ಕೇವಲಾವಸ್ಥೆಗಳು ತಾನಲ್ಲ. ಸಕಲದಲ್ಲಿಯ ಸಕಲ, ಸಕಲದಲ್ಲಿಯ ಶುದ್ಧ, ಸಕಲದಲ್ಲಿಯ ಕೇವಲವೆಂಬ ಸಕಲತ್ರಿಯಾವಸ್ಥೆಗಳು ತಾನಲ್ಲ. ಶುದ್ಧದಲ್ಲಿಯ ಸಕಲ, ಶುದ್ಧದಲ್ಲಿಯ ಶುದ್ಧ, ಶುದ್ಧದಲ್ಲಿಯ ಕೇವಲವೆಂಬ ಶುದ್ಧತ್ರಿಯಾವಸ್ಥೆಗಳು ತಾನಲ್ಲ. ಕೇವಲದಲ್ಲಿಯ ಸಕಲ, ಕೇವಲದಲ್ಲಿಯ ಶುದ್ಧ, ಕೇವಲದಲ್ಲಿಯ ಕೇವಲವೆಂಬ ಕೇವಲತ್ರಿಯಾವಸ್ಥೆಗಳು ತಾನಲ್ಲ. ಜ್ಞಾತೃ ಜ್ಞಾನ ಜ್ಞೇಯವೆಂಬ ಜ್ಞಾನತ್ರಯಂಗಳು ತಾನಲ್ಲ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಯೆಂಬ ಅಷ್ಟಾಂಗಯೋಗಂಗಳು ತಾನಲ್ಲ. ಧರ್ಮ ಅರ್ಥ ಕಾಮ ಮೋಕ್ಷಂಗಳೆಂಬ ಚತುರ್ವಿಧ ಪುರುಷಾರ್ಥಂಗಳು ತಾನಲ್ಲ. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧಪದಂಗಳು ತಾನಲ್ಲ. ಅಣಿಮಾ ಗರಿಮಾ ಲಘಿಮಾ ಮಹಿಮಾ ಪ್ರಾಪ್ತಿ ಪ್ರಕಾವ್ಯ ಇಶಿತ್ವ ವಶಿತ್ವ ಎಂಬ ಅಷ್ಟಮಹದೈಶ್ವರ್ಯಂಗಳು ತಾನಲ್ಲ. ರಾಜಸಹಂಕಾರ ತಾಮಸಹಂಕಾರ ಸ್ವಹಂಕಾರವೆಂಬ ಅಹಂಕಾರತ್ರಯಂಗಳು ತಾನಲ್ಲ. ಅಂಜನಾಸಿದ್ಧಿ, ಘುಟಿಕಾಸಿದ್ಧಿ, ರಸಸಿದ್ಧಿ, ಪಾದೋದಕಸಿದ್ಧಿ, ಪರಕಾಯ ಪ್ರವೇಶ, ದೂರಶ್ರವಣ, ದೂರದೃಷ್ಟಿ, ತ್ರಿಕಾಲಜ್ಞಾನವೆಂಬ ಅಷ್ಟಮಹಾಸಿದ್ಧಿಗಳು ತಾನಲ್ಲ. ಉದರಾಗ್ನಿ ಮಂದಾಗ್ನಿ ಶೋಕಾಗ್ನಿ ಕ್ರೋಧಾಗ್ನಿ ಕಾಮಾಗ್ನಿಯೆಂಬ ಪಂಚಾಗ್ನಿಗಳು ತಾನಲ್ಲ. ಪ್ರಕೃತಿ, ಪುರುಷ, ಕಾಲ, ಪರ, ವ್ಯೋಮಾಕಾಶಂಗಳು ತಾನಲ್ಲ. ಊಧ್ರ್ವಶೂನ್ಯ, ಅಧಃಶೂನ್ಯ, ಮಧ್ಯಶೂನ್ಯ, ಸರ್ವಶೂನ್ಯವಾಗಿಹ ಸಹಜನಿರಾಲಂಬವೇ ತಾನೆಂದರಿದ ಮಹಾಶರಣಂಗೆ ನಾಮ ರೂಪ ಕ್ರಿಯಾತೀತವಾಗಿಹ ಮಹಾಘನವೇ ತನ್ನ ಶಿರಸ್ಸು ನೋಡಾ. ದಿವ್ಯಜ್ಞಾನವೇ ತನ್ನ ಚಕ್ಷು, ಅಚಲಪದವೇ ತನ್ನ ಪುರ್ಬು, ಅಚಲಾತೀತವೇ ತನ್ನ ಹಣೆ ನೋಡಾ. ನಿರಾಕುಳಪದವೇ ತನ್ನ ನಾಸಿಕ, ನಿರಂಜನಾತೀತವೆ ತನ್ನ ಉಶ್ವಾಸ-ನಿಶ್ವಾಸ ನೋಡಾ. ನಿರಾಮಯವೇ ತನ್ನ ಕರ್ಣ, ನಿರಾಮಯಾತೀತವೇ ತನ್ನ ಕರ್ಣದ್ವಾರ ನೋಡಾ. ಅಮಲ ನಿರ್ಮಲವೇ ತನ್ನ ಗಲ್ಲ, ಅಮಲಾತೀತವೇ ತನ್ನ ಗಡ್ಡಮೀಸೆ ಕೋರೆದಾಡೆ ನೋಡಾ. ನಾದಬಿಂದುಕಳಾತೀತವೆ ತನ್ನ ತಾಳೋಷ*ಸಂಪುಟ ನೋಡಾ. ಅಕಾರ, ಉಕಾರ, ಮಕಾರ, ನಾದ ಬಿಂದು ಅರ್ಧಚಂದ್ರ ನಿರೋದಿನಾದಾಂತ ಶಕ್ತಿವ್ಯಾಪಿನಿ ವ್ಯೋಮರೂಪಿಣಿ ಅನಂತ ಆನಂದ ಅನಾಶ್ರಿತ ಸುಮನೆ ಉನ್ಮನಿ ಇಂತೀ ಪ್ರಣವದಲ್ಲಿ ಉತ್ಪತ್ಯವಾದ ಷೋಡಶಕಳೆ ತನ್ನ ಷೋಡಶ ದಂತಂಗಳು ನೋಡಾ. ಆ ದಂತಂಗಳ ಕಾಂತಿ ಅನೇಕಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ. ತನ್ನ ಕೊರಳೆ ನಿರಾಕುಳ, ತನ್ನ ಭುಜಂಗಳೆ ಅಪ್ರಮಾಣ ಅಗೋಚರ ನೋಡಾ. ತನ್ನ ಹಸ್ತಾಂಗುಲಿ ನಖಂಗಳೆ ಪರತತ್ವ, ಶಿವತತ್ವ, ಗುರುತತ್ವ, ಲಿಂಗತತ್ವಂಗಳು ನೋಡಾ. ಪರಬ್ರಹ್ಮವೇ ತನ್ನ ಎದೆ, ಆ ಪರಬ್ರಹ್ಮವೆಂಬ ಎದೆಯಲ್ಲಿ ನಿರಂಜನಪ್ರಣವ ಅವಾಚ್ಯಪ್ರಣವವೆಂಬ ಸಣ್ಣ ಕುಚಂಗಳು ನೋಡಾ. ಚಿತ್ತಾಕಾಶ ಭೇದಾಕಾಶವೆ ತನ್ನ ದಕ್ಷಿಣ ವಾಮ ಪಾಶ್ರ್ವಂಗಳು ನೋಡಾ. ಬಿಂದ್ವಾಕಾಶವೇ ತನ್ನ ಬೆನ್ನು ನೋಡಾ. ಮಹಾಕಾಶವೇ ತನ್ನ ಬೆನ್ನ ನಿಟ್ಟೆಲವು ನೋಡಾ. ಪಂಚಸಂಜ್ಞೆಯನುಳ್ಳ ಅಖಂಡಗೋಳಕಾಕಾರಲಿಂಗವೆ ತನ್ನ ಗರ್ಭ ನೋಡಾ. ಆ ಗರ್ಭ ಅನೇಕಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದುನೋಡಾ. ಆ ಗರ್ಭದಲ್ಲಿ ಅನೇಕಕೋಟಿತತ್ವಂಗಳು, ಅನೇಕಕೋಟಿ ಸದಾಶಿವರು, ಅನೇಕಕೋಟಿ ಮಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿರುದ್ರರು, ಅನೇಕಕೋಟಿ ವಿಷ್ಣಾ ್ವದಿಗಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಋಷಿಗಳು ಅನೇಕಕೋಟಿ ಚಂದ್ರಾದಿತ್ಯರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ದೇವರ್ಕಗಳು, ಅನೇಕಕೋಟಿ ಬ್ರಹ್ಮಾಂಡಗಳಡಗಿಹವು ನೋಡಾ. ತನ್ನ ನಡುವೆ ವ್ಯೋಮಾತೀತವು, ತನ್ನ ಕಟಿಸ್ಥಾನವೇ ಕಲಾಪ್ರಣವ, ತನ್ನ ಪಚ್ಚಳವೆ ಅನಾದಿಪ್ರಣವ ಆದಿಪ್ರಣವ ನೋಡಾ. ತನ್ನ ಉಪಸ್ಥವೇ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಮೊದಲಾದ ಸಮಸ್ತ ದೇವರ್ಕಗಳಿಗೂ ಜನನಸ್ಥಳವಾಗಿಹ ನಿರ್ವಾಣಪದ ನೋಡಾ. ಶಿವಸಂಬಂಧ, ಶಕ್ತಿಸಂಬಂಧವಾಗಿಹ ಓಂಕಾರವೆ ತನ್ನ ಒಳದೊಡೆ ನೋಡಾ. ಸಚ್ಚಿದಾನಂದ ಪರಮಾನಂದವೆ ತನ್ನ ಒಳಪಾದ ಕಂಬಗಳು ನೋಡಾ. ಚಿದಾತ್ಮ ಪರಮಾತ್ಮನೆ ತನ್ನ ಹರಡು, ಅತಿಸೂಕ್ಷ್ಮಪಂಚಾಕ್ಷರವೆ ತನ್ನ ಪಾದಾಂಗುಷಾ*ಂಗುಲಿಗಳೆಂಬ ಸಾಯುಜ್ಯಪದ ನೋಡಾ. ತನ್ನ ಸ್ವರವೆ ಪರಾಪರ, ತನ್ನ ಮಾತೇ ಮಹಾಜ್ಯೋತಿರ್ಮಯಲಿಂಗ, ಚಿನ್ಮಯ ಚಿದ್ರೂಪ ಚಿತ್ಪ್ರಕಾಶವೆ ತನ್ನ ವಪೆ ನೋಡಾ. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ, ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಮೊದಲಾಗಿ ಇನ್ನೂರ ಹದಿನಾರು ಷಡುಸ್ಥಲಲಿಂಗವೆ ತನ್ನಂತಃಸ್ಥಾನದಲ್ಲಿ ಧರಿಸಿಹ ಆಭೂಷಣಂಗಳು ನೋಡಾ. ಮಹಾಲಿಂಗವೇ ತುರುಬು, ಶಿವಜ್ಞಾನವೆ ಶೃಂಗಾರವಾಗಿಹ ತನ್ನ ತಾನರಿದು ಅಂತಃಶೂನ್ಯ, ಅಧಃಶೂನ್ಯ, ಬಹಿಃಶೂನ್ಯ, ದಶದಿಶಾಶೂನ್ಯ ನಿರಾಕಾರವಾಗಿಹ ತನ್ನ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳ ತಿಳಿದು ಮಹಾಶರಣನು ತಾನೆ ಗುರು, ತಾನೆ ಲಿಂಗ, ತಾನೆ ಜಂಗಮ, ತಾನೆ ಪರಮಪಾದೋದಕಪ್ರಸಾದ ನೋಡಾ. ತಾನೆ ನಾದಬಿಂದುಕಳಾತೀತ ನೋಡಾ. ತಾನೆ ಶೂನ್ಯ ನಿಶ್ಶೂನ್ಯನು, ತಾನೆ ಘನಶೂನ್ಯ, ಮಹಾಘನಶೂನ್ಯ ನೋಡಾ. ತಾನೆ ಬಯಲು ನಿರ್ಬಯಲು, ತಾನೆ ನಿರುಪಮ ನಿರಾಕಾರ ತಾನೆ ನಿರಾಳ ನಿರಾಲಂಬ ನೋಡಾ. ತಾನೆ ಸಚ್ಚಿದಾನಂದ ನಿತ್ಯಪರಿಪೂರ್ಣನು, ತನ್ನಿಂದಧಿಕವಪ್ಪ ಪರಬ್ರಹ್ಮವೊಂದಿಲ್ಲವಾಗಿ ತಾನೆ ಸ್ವಯಂಜ್ಯೋತಿರ್ಲಿಂಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಎನ್ನ ಪ್ರಾಣ ಮನ ಬುದ್ಧಿ ಚಿತ್ತಂಗಳು ನಿಮ್ಮ ತೊತ್ತಿರಯ್ಯಾ. ಸತ್ವ ರಜ ತಮಂಗಳು ನಿಮ್ಮ ಭೃತ್ಯರಯ್ಯಾ. ಅಂತಃಕರಣ ಚತುಷ್ಟಯಂಗಳು ನಿಮ್ಮ ಮಂತ್ರಿಗಳಯ್ಯಾ. ಪಂಚೇಂದ್ರಿಯಂಗಳು ನಿಮ್ಮ ಪಡಿಹಾರರಯ್ಯಾ. ಅರಿಷಡ್ವರ್ಗಂಗಳು ನಿಮ್ಮ ಲೆಂಕರಯ್ಯಾ. ಸಪ್ತಧಾತುಗಳು ನಿಮ್ಮ ಬಾಣಸಿಗರಯ್ಯಾ. ಅಷ್ಟಮದಂಗಳು ನಿಮ್ಮ ಭಂಡಾರಿಗಳಯ್ಯಾ. ನವರಸಂಗಳು ನಿಮ್ಮ ಭಂಡಾರಿಗಳಯ್ಯಾ. ದಶವಾಯಗಳು ನಿಮ್ಮ ಛತ್ರ ಚಾಮರ ಸೀಗುರಿಗಳಯ್ಯಾ. ಷೋಡಶಕಳೆಗಳು ನಿಮ್ಮ ರಾಣಿವಾಸವಯ್ಯಾ. ಶಂಭು ಸೋಮನಾಥಲಿಂಗ, ನಿಮಗೆನ್ನ ಕಾಯ ಮುಂತಾಗಿ ಬಾಹತ್ತರ ಡಿಂಗರಿಗರಯ್ಯಾ!
--------------
ಜೋದರ ಮಾಯಣ್ಣ
ಅಡವಿಗೆ ಹೋಗಿ ಏವೆನು ? ಮನದ ರಜ ತಮ ಬಿಡದು. ಆಡ ಕಾವನ ತೋರಿ, ಗಿಡುವ ಕಡಿವನ ಬಡಿದೆ. ಆಶ್ರಮವ ಕೆಡಿಸಿತ್ತಲ್ಲಾ. ಸಕಳೇಶ್ವರದೇವಾ, ನಿನ್ನ ಮಾಯೆ ಎತ್ತಹೋದಡೂ ಬೆನ್ನಬಿಡದು.
--------------
ಸಕಳೇಶ ಮಾದರಸ
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಪಂಚಭೌತಿಕ, ಮನೋಬುದ್ಧಿ ಚಿತ್ತ ಅಹಂಕಾರ ಚತುಷ್ಟಯ ಕರಣಂಗಳು, ಸತ್ವ ರಜ ತಮದಲ್ಲಿ_ಆತ್ಮನ ಎತ್ತಲೆಂದರಿಯರು! ಇದನರಿದಡೆ; ಸಮತೆ ಸದಾಚಾರ ಆಶ್ರಮಸ್ಥಾನಕ ಸಹಸ್ರದಳಕಮಲದಲ್ಲಿ ಗುಹೇಶ್ವರಲಿಂಗವು.
--------------
ಅಲ್ಲಮಪ್ರಭುದೇವರು
ಅನಂತಕೋಟಿ ದೇವರೆಲ್ಲರೂ ತಂಡತಂಡದಲ್ಲಿ ದಂಡ ಪ್ರಣಾಮಂಗ್ಯಯಲು ಅವರ ಮುಕುಟ ಸಂಘಟ್ಟ ರಜ ಉದುರಲಿಕೆ ಅಲ್ಲಿ ರಜತಗಿಗಲಾದವು, ಕಪಿಲಸಿದ್ಧಮಲ್ಲಿಕಾರ್ಜುನ ದೇವರದೇವಾ, ನಿಮ್ಮ ಮುಂದೆ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->