ಅಥವಾ

ಒಟ್ಟು 128 ಕಡೆಗಳಲ್ಲಿ , 43 ವಚನಕಾರರು , 111 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನು ಆಧಾರ ಧಾರಣವೆಂತೆಂದಡೆ : ಪುಣ್ಯ-ಪಾಪ ಸ್ವರ್ಗ-ನರಕಾದಿಗಳಿಗೆ ಹೇತುಭೂತವಾಗಿಹ ಅನ್ನ ಪಾನಾದಿಗಳಂ ಬಿಟ್ಟು-ಸಿದ್ಧಾಸನದಲ್ಲಿ ಕುಳ್ಳಿರ್ದು, ಮೂಲಬಂಧ ಒಡ್ಡ್ಯಾಣಬಂಧ ಜಾಳಾಂದರಬಂಧಮಂ ಮಾಡಿ ಜಾಗ್ರ ಸ್ವಪ್ನ ಸುಷುಪ್ತಿ ತಲೆದೋರದೆ ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಚೇಂದ್ರಿಯಂಗಳಲ್ಲಿ ಮನ ಪವನಮಂ ಸೂಸಲೀಯದೆ, ಏಕಾಗ್ರಚಿತ್ತನಾಗಿ ಮೂಲವಾಯುವಂ ಪಿಡಿದು ಆಕುಂಚನಂ ಮಾಡಿ, ಮೂಲಾಗ್ನಿಯನೆಬ್ಬಿಸಿ, ಆಧಾರಚಕ್ರ ಚತುರ್ದಳಪದ್ಮವ ಪೊಕ್ಕು ಸಾದ್ಥಿಸಿ, ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು, ಅಲ್ಲಿ ಪಚ್ಚೆವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ ಅಗ್ನಿಯಂ ಪಟುಮಾಡಿ, ಮನಮಂ ಏಕೀಕರಿಸಿ, ಅಲ್ಲಿಂದ ಮೇಲೆ ಸ್ವಾದ್ಥಿಷ್ಠಾನಚಕ್ರದ ಷಡುದಳಪದ್ಮವ ಪೊಕ್ಕನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಕ್ಕಿ ಬೇಳೆ ಬೆಲ್ಲ ಉಪ್ಪು ಮೆಣಸು ಅಡಕೆ ಫಲ ರಸ ದ್ರವ್ಯ ಮುಂತಾದ ದ್ರವ್ಯಕ್ಕೆ ವ್ರತವೊ ? ಮುಟ್ಟುವ ತಟ್ಟುವ ಸೋಂಕುವ ಚಿತ್ತಕ್ಕೆ ವ್ರತವೊ ? ಇವು ಬಾಹ್ಯದಲ್ಲಿ ಮಾಡುವ ಸೌಕರಿಯವಲ್ಲದೆ ವ್ರತಕ್ಕೆ ಸಲ್ಲ. ವ್ರತವಾವುದೆಂದಡೆ ತನ್ನಯ ಸ್ವಪ್ನದಲ್ಲಿ ತನಗಲ್ಲದುದ ಕಂಡಡೆ, ತಾ ಮುಟ್ಟದುದ ಮುಟ್ಟಿದಡೆ, ತಾ ಕೊಳ್ಳದುದ ಕೊಂಡಡೆ, ಆ ಸೂಕ್ಷ್ಮತನುವಿನಲ್ಲಿ ಆ ತನುವಂ ಬಿಟ್ಟು ನಿಂದುದು ವ್ರತ. ಸ್ಥೂಲತನುವಿನಲ್ಲಿ ಸರ್ವರ ನಿಂದೆಗೊಡಲಾಗದೆ, ಮಾಡಿಕೊಂಡ ನೇಮಕ್ಕೆ ಕೇಡುಬಂದಲ್ಲಿ ಆ ಅಂಗಕ್ಕೆ ಓಸರಿಸದೆ ನಿಂದುದು ಆಚಾರ. ಇಂತೀ ಅಂತರಂಗದಲ್ಲಿ ವ್ರತ, ಬಹಿರಂಗದಲ್ಲಿ ಆಚಾರ, ಇಂತೀ ಉಭಯ ಸಿದ್ಭವಾಗಿ ನಡೆವುದೆ ವ್ರತ ಆಚಾರz ಇಂತಿವನರಿದು ಮರೆದಲ್ಲಿ, ತಾ ಮಾಡಿಕೊಂಡ ಕುತ್ತಕ್ಕೆ ಹಾಡಿ ಮದ್ದನರೆದಂತೆ, ಜಗಕ್ಕೆ ಭಕ್ತನಾಗಿ ಆತ್ಮಂಗೆ ಅನುಸರಣೆಯಾದಲ್ಲಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಸಲ್ಲದ ನೇಮ.
--------------
ಅಕ್ಕಮ್ಮ
ಅಂಗಲಿಂಗ ಸಹವಾಗಿ, ಆತ್ಮನರಿವು ಸಹವಾಗಿ, ಇಷ್ಟಪದಾರ್ಥವ ಇಷ್ಟ ಲಿಂಗಸಹವಾಗಿ, ರುಚಿಪದಾರ್ಥವ ಆತ್ಮಲಿಂಗಸಹವಾಗಿ, ರಸ ಗಂಧ ರೂಪ ಶಬ್ದ ಸ್ಪರ್ಶ ಪಂಚೇಂದ್ರಿಯಗಳಲ್ಲಿ ದೃಷ್ಟಪದಾರ್ಥವ ಇಷ್ಟಲಿಂಗಸಹವಾಗಿ, ಸ್ಥೂಲ ಸೂಕ್ಷ್ಮ ಕಾರಣದಲ್ಲಿ ಒಳಗು ಹೊರಗು ಸಹವಾಗಿ, ಅಳಿವು ಉಳಿವು ಸಹವಾಗಿ, ಕಾಬುದು ಕಾಣಿಸಿಕೊಂಬುದು ಸಹವಾಗಿ, ರಸವ ಕೊಂಡವನಂತೆ,ಅಸಿಯ ಮೊನೆ ಹರಿದಲ್ಲಿ ರಸ ಬಂದು ನಿಂತಂತೆ, ಎಲ್ಲಿ ಅರ್ಪಿತಕ್ಕೆ ಅಲ್ಲಿ ವಸ್ತು ಸಹವಾಗಿ ಎಲ್ಲಾ ಎಡೆಯಲ್ಲಿ ಪರಿಪೂರ್ಣ ಸಹವಾಗಿ, ಇಪ್ಪುದು ಸಹಭೋಜನಸ್ಥಲ. ಹೀಗಲ್ಲದೆ ಓಗರ ಮೇಲೋಗರವ ಲಾಗುಲಾಗಿಗೆ ತೋರುತ್ತ ಸಕಲಸಂಸಾರದ ಸಾಗರದಲ್ಲಿ ಮುಳುಗುತ್ತ, ಮರವೆ ಅಜ್ಞಾನದಲ್ಲಿ ಮರಳಿ ತಿರುಗುತ್ತ ನಾನಾವಿಕಾರತ್ರಯಗಳಿಂದ ಹುಟ್ಟುತ್ತ ಸಾವುತ್ತ, ಮತ್ತೆ ಸಾವಧಾನ ಸಹಭೋಜನವೆಂದಡೆ ನಾಚಿತ್ತು ಎನ್ನ ಮನ. ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಉಭಯವನಳಿದು ಏಕವಾದುದು ಸಹಭೋಜನಸ್ಥಲ.
--------------
ಅಕ್ಕಮ್ಮ
ಕಾಯ ಸೊನೆಯರತಲ್ಲದೆ ಹಣ್ಣಿನ ರಸ ಚಿಹ್ನದೋರದು. ಕಾಯ ಕರ್ಮವ ಮಾಡಿ, ಜೀವ ಜ್ಞಾನವನರಿದು, ವಿವಿಧಭಾವ ಶುದ್ಧಿಯಾದಲ್ಲದೆ ಮೇಲೆ ಕಾಣಲಿಲ್ಲ, ಕಪಿಲಸಿದ್ಧಮಲ್ಲಿಕಾರ್ಜುನ ಲಿಂಗª
--------------
ಸಿದ್ಧರಾಮೇಶ್ವರ
ರಸ ಉಂಬಲ್ಲಿ, ಗಂಧ ವಾಸಿಸುವಲ್ಲಿ, ರೂಪು ನಿರೀಕ್ಷಣೆಯಲ್ಲಿ, ಶಬ್ದ ಗೋಚರದಲ್ಲಿ, ಸ್ಪರ್ಶ ತ್ವಕ್ಕಿನಲ್ಲಿ, ಪಂಚಪುಟ ಭೇದಂಗಳಲ್ಲಿ, ಅಷ್ಟಗುಣ ಮದಂಗಳ ಪಟ್ಟಣದ, ಷೋಡಶದ ರೂಡ್ಥಿಯ ಷಡ್ಚಕ್ರದ ಆಧಾರದ, ಪಂಚವಿಂಶತಿಯ ನಿಳೆಯದ ಸಂಚಾರದ, ನವಕವಾಟದ, ತ್ರಿಶಕ್ತಿ ಸಂಪದದ, ತ್ರಿಗುಣಾತ್ಮನ ತ್ರಿಗುಣ ಓಹರಿಯಲ್ಲಿ ಬಳಸಿಪ್ಪ ಬಂಧದಲ್ಲಿ ಮಗ್ನವಾಗದೆ, ಜಾಗ್ರ [ಸ್ವಪ್ನ] ಸುಷುಪ್ತಿ ತ್ರಿವಿಧ ಘಟಪಟಲ ತತ್ವನಿರಸನ ನಿರ್ವಿಕಾರನಾಗಿ, ಇಂತಿವರಲ್ಲಿ ಅವಘಾನವಾಗಿ ಮುಳುಗದೆ, ನೀರನಿರಿದ ಕೈದಿನಂತೆ ಕಲೆದೋರದೆ, ಆವ ಸುಖಂಗಳಲ್ಲಿ ಅಬ್ಥಿನ್ನವಾಗಿ, ಜಲದೊಳಗಣ ಶಿಲೆ, ಶಿಲೆಯೊಳಗಣ ವಹ್ನಿ ಸುಳುಹುದೋರದ ತೆರ, ಮಥನಕ್ಕೆ ಕಂಡು, ಕಾಣದಡಗಿಪ್ಪ ತೆರ, ಲಿಂಗಾಂಗಿಯ ಇರವು. ಇದು ಸಿದ್ಧವಾಗಬೇಕು, ಶರೀರದ ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿವುದಕ್ಕೆ. ಇದೇ ಅಂಜನಸಿದ್ಧಿ.
--------------
ಮನುಮುನಿ ಗುಮ್ಮಟದೇವ
ಆರು ಇಲ್ಲದ ಅರಣ್ಯದಲ್ಲೊಂದು ಬೀಜವಿಲ್ಲದ ವೃಕ್ಷ ಪುಟ್ಟಿತ್ತು. ಆ ವೃಕ್ಷಕ್ಕೆ ಹೂವಿಲ್ಲದೆ ಕಾಯಿಯಾಯಿತ್ತು; ಕಾಯಿಯಿಲ್ಲದೆ ಹಣ್ಣಾಗಿತ್ತು. ಗಾಳಿಯಿಲ್ಲದೆ ಗಂಧವ ತೋರಿತ್ತು. ಆ ವಾಸನಕ್ಕೆ ಪಕ್ಕವಿದಲ್ಲದ ಹಕ್ಕಿ ಹಾರಿಹೋಗಿ ಹಣ್ಣನೆ ಕಚ್ಚಿತ್ತು. ಆ ಹಣ್ಣಿನ ರಸ ಭೂಮಿಯಮೇಲೆ ಸುರಿಯಲು ಭೂಮಿ ಬೆಂದು, ಸಮುದ್ರ ಬತ್ತಿ, ಅರಸನ ಮಾರ್ಬಲವೆಲ್ಲ ಪ್ರಳಯವಾಗಿ, ಅರಸು ಪ್ರಧಾನಿ ಸತ್ತು ಅರಸಿ ಅರಮನೆಯಲ್ಲಿ ಬಯಲಾಗಿ, ಎತ್ತ ಹೋದರೆಂದರಿಯಬಲ್ಲರೆ ಗುಹೇಶ್ವರಲಿಂಗವು ತಾನೆಯೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅನ್ಯರು ಮಾಡಿದುದ ಮುಟ್ಟದೆ ತನ್ನ ತಾ ಮಾಡಿಕೊಂಡು ನಡೆವುದು ಸೌಕರಿಯವಲ್ಲದೆ, ವ್ರತಕ್ಕೆ ಸಂಬಂಧವಲ್ಲ. ಅದೆಂತೆಂದಡೆ ರಸ ಗಂಧ ರೂಪು ಶಬ್ದ ಸ್ಪರ್ಶವೆಂಬ ಪಂಚೇಂದ್ರಿಯವ ಶುದ್ಧತೆಯ ಮಾಡಿ ಪಂಚಾಚಾರವೆಂಬುದನರಿತು, ರಸವ ರುಚಿಸುವಲ್ಲಿ ಬಹುದಕ್ಕೆ ಮುನ್ನವೆ ಭೇದವನರಿತು, ನಾಸಿಕ ವಾಸನೆಯ ಕೊಂಬಲ್ಲಿ ಸೋಂಕುವುದಕ್ಕೆ ಮುನ್ನವೆ ಸುಗುಣ ದುರ್ಗುಣವನರಿತು, ಕಾಂಬುದಕ್ಕೆ ಮುನ್ನವೆ ರೂಪ ನಿರೂಪೆಂಬುದನರಿತು, ನುಡಿಯುವುದಕ್ಕೆ ಮುನ್ನವೆ ಮೃದು ಕoಣವೆಂಬುದನರಿತು, ಇಂತೀ ಭೇದಂಗಳಲ್ಲಿ ಅರ್ಪಿತದ ಲಕ್ಷಣವ ಕಂಡು, ದೃಷ್ಟದಿಂದ ಕಟ್ಟುಮಾಡುವುದೆ ವ್ರತ ; ಆ ಗುಣ ತಪ್ಪದೆ ನಡೆವುದೆ ಆಚಾರ. ಇಂತೀ ವ್ರತಾಚಾರಂಗಳಲ್ಲಿ ಸರ್ವಶೀಲಸನ್ನದ್ಧನಾಗಿ, ಸರ್ವಮುಖ ಲಿಂಗಾವಧಾನಿಯಾಗಿ ಇಪ್ಪ ಅಂಗವೆ, ಆಚಾರವೆ ಪ್ರಾಣವಾಗಿಪ್ಪ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಅಯ್ಯಾ, ಮತ್ತೊಂದು ವೇಳೆ ಸಪ್ತಧಾತು ಸಪ್ತವ್ಯಸನವಕೂಡಿ ವರ್ತಿಸಿತಯ್ಯ. ಅದೆಂತೆಂದಡೆ, ರಸ ರುಧಿರ ಮಾಂಸ ಮೇದಸ್ಸು ಅಸ್ಥಿ ಮಜ್ಜೆ ಶುಕ್ಲವೆಂಬ ಧಾತುಗಳ ಅನ್ನ ನೀರಿನಿಂದ ಪೋಷಿಸಿಕೊಂಡು, ತನುವ್ಯಸನ, ಮನವ್ಯಸನ, ಧನವ್ಯಸನ, ರಾಜವ್ಯಸನ, ಉತ್ಸಾಹವ್ಯಸನ, ವಿಶ್ವವ್ಯಸನ, ಸೇವಕವ್ಯಸನವೆಂಬ ಸಪ್ತವ್ಯಸನಿಯಾಗಿ ಷಡೂರ್ಮೆ-ಷಡ್ಭಾವವಿಕಾರದಿಂದ ಎನ್ನ ತೊಳಲಿಬಳಲಿಸಿ ಅಳಲಿಸಿತಯ್ಯ ಕುಲಗೇಡಿ ಜೀವಮನವು. ಈ ಜೀವಮನದ ಸಂಗವ ತೊಲಗಿಸಿ ರಕ್ಷಿಸಯ್ಯ. ದುರಿತಹರ ಪಾಪಹರ ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಶ್ರೀಗುರುಸಿದ್ಧಲಿಂಗೇಶ್ವರ !
--------------
ಬಸವಲಿಂಗದೇವ
ಅನಲನ ತಾಹಲ್ಲಿ, ಅನಿಲನ ಗಂಧ ಒಡಗೂಡಿ ಸೋಂಕುವಲ್ಲಿ, ಅಲ್ಲಿ ವ್ರತದಾಯತದ ಲಕ್ಷಣವನರಿಯಬೇಕು; ಮಿಕ್ಕಾದ ತಿಲ, ತೈಲ, ಫ್ಸೃತ, ಕ್ಷೀರ, ದದ್ಥಿ, ಮಧುರ, ಇಕ್ಷುದಂಡ, ಕ್ರಮುಕ, ಪರ್ಣ, ಚೂರ್ಣ, ರಸ, ದ್ರವ್ಯ ಮುಂತಾದವಿಂತು ಮಿಕ್ಕಾದ ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ ಸಕಲಸುಯಿಧಾನಂಗಳಲ್ಲಿ ಲಿಂಗವ್ಯವಧಾನದಲ್ಲಿ ತಂದು ಸತ್ಕ್ರೀ ತಪ್ಪದೆ, ವ್ರತಕ್ಕೆ ಭಂಗವಿಲ್ಲದೆ, ನಾಣ್ಣುಡಿಗೆ ಇದಿರೆಡೆಯಾಗದೆ, ವಿಶ್ವಲಕ್ಷಣ ಶಸ್ತ್ರ ಅಭ್ಯಾಸಿಯಂತೆ, ಆವೆಡೆಯಲ್ಲಿ ಇದಿರಿಂಗೆ ತೆರಪಿಲ್ಲದೆ, ತಾ ಮುಟ್ಟುವಲ್ಲಿ ಒಳಗೆ ಕೊಂಡಂತೆ ಇರಬೇಕು. ಇಷ್ಟನರಿತು ಆಚರಣೆಯಲ್ಲಿ ಆದರಿಸಿ ನುಡಿವುದೆ ಸದ್ಭಕ್ತನ ಸ್ಥಲ. ಆತ ಸರ್ವಶೀಲಸಂಪನ್ನ ಸರ್ವಾಂಗಲಿಂಗ ಸನ್ನದ್ಧ ಆತ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ರಸ ಗಂಧ ರೂಪು ಶಬ್ದ ಸ್ಪರ್ಶ ಪಂಚೇಂದ್ರಿಯಂಗಳಲ್ಲಿ ಅರ್ಪಿಸುವನ್ನಕ್ಕ ಭಕ್ತ. ರೂಪು ರುಚಿಯ ಕಂಡರ್ಪಿಸುವನ್ನಕ್ಕ ಮಾಹೇಶ್ವರ. ಇಚ್ಫೆಯನರಿತು ಸಾಕು ಬೇಕೆಂಬನ್ನಕ್ಕ ಪ್ರಸಾದಿ. ಕಂಡಲ್ಲಿ ಮುಟ್ಟದೆ ಕಾಣಿಸಿಕೊಂಡು ಮುಟ್ಟಿಹೆನೆಂಬಲ್ಲಿ ಪ್ರಾಣಲಿಂಗಿ. ವಂದನೆ ನಿಂದೆಗೆ ಒಳಗಹನ್ನಕ್ಕ ಶರಣ. ಮುಟ್ಟುವ ತಟ್ಟುವ ತಾಗುವ ಸೋಂಕುವ ಸುಖವನರಿದು ಕೂಡಬೇಕೆಂಬನ್ನಕ್ಕ ಐಕ್ಯ. ಆ ಗುಣ ಪರುಷವ ಸೋಂಕಿದ ಲೋಹದಂತಾದುದು ಷಟ್‍ಸ್ಥಲ. ಇಂತೀ ಆರನವಗವಿಸಿ ಬೇರೊಂದು ತೋರದಿಪ್ಪುದು ಐಕ್ಯಸ್ಥಲಲೇಪಭೇದ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಕಂಗಳು ನೋಡಿದ ಪದಾರ್ಥ ಲಿಂಗಕ್ಕರ್ಪಿತವಲ್ಲ, ಕಿವಿಗಳು ಕೇಳಿದ ಪದಾರ್ಥ ಲಿಂಗಕ್ಕರ್ಪಿತವಲ್ಲ, ನಾಸಿಕ ಮುಟ್ಟಿದ ಪದಾರ್ಥ ಲಿಂಗಕ್ಕರ್ಪಿತವಲ್ಲ, ಜಿಹ್ವೆ ಸೋಂಕಿದ ಪದಾರ್ಥ ಲಿಂಗಕ್ಕರ್ಪಿತವಲ್ಲ, ಕೈಗಳು ಮುಟ್ಟಿದ ಪದಾರ್ಥ ಲಿಂಗಕ್ಕರ್ಪಿತವಲ್ಲ, ರೂಪು ರಸ ಗಂಧ ರುಚಿ ಸ್ಪರ್ಶವನು ಕೂಡಲಚೆನ್ನಸಂಗಯ್ಯಾ ನೀನರಿಯಲು ಪ್ರಸಾದವೆನಗೆ.
--------------
ಚನ್ನಬಸವಣ್ಣ
ಬಾಯಾರಿ ರಸ ಬತ್ತಿದವಂಗೆ ಪಾಯಸದ ಗಡಿಗೆಯ ತಂದಿರಿಸಿದಡೆ ಬಾಯಾರು ಹಿಂಗುವುದೆ? ಸಕಲ ಸುಖದಲ್ಲಿ ಇಹಂಗೆ ಸಕಳೇಶ್ವರನ ಅಕಲ ಬಲ್ಲನೆ? ಇಂತಿವರೆಲ್ಲರು ಅಖಿಳರೊಳಗೆ ಅಡಗಿ ಸುಖದುಃಖವ ಭೋಗಿಸುವ ಪ್ರಕೃತಿ ವಿಧರಿಗೇಕೆ ಅಕಳಂಕನ ಮಾತು. ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಶಬ್ದ ಸ್ಪರ್ಶ ರೂಪು ರಸ ಗಂಧ ಪಂಚೇಂದ್ರಿಯ ಮೊದಲಾಗಿ ನಡೆದವು ಲಿಂಗದತ್ತತ್ತಲೆ. ಬಂದ ಸುಖ ಲಿಂಗಾರ್ಪಿತವೆಂದು ನಡೆದವು ಲಿಂಗದತ್ತತ್ತಲೆ. ಕೂಡಲಚೆನ್ನಸಂಗಾ ಲಿಂಗ ನೀವಾಗಿ ಶರಣಂಗೆ.
--------------
ಚನ್ನಬಸವಣ್ಣ
ತಿಲದೊಳಗಣ ತೈಲ, ಫಲದೊಳಗಣ ರಸ, ಹೇಮದೊಳಗಣ ಬಣ್ಣ, ಮಾಂಸದೊಳಗಣ ಕ್ಷೀರ, ಇಕ್ಷುದಂಡದ ಸಾರದ ಸವಿ, ಒಳಗು ಹೊರಗಾಗಿಯಲ್ಲದೆ ಕುಲದ ಸೂತಕ ಬಿಡದು. ಇಷ್ಟದಲ್ಲಿ ತೋರುವ ವಿಶ್ವಾಸ ದೃಷ್ಟವಾಗಿಯಲ್ಲದೆ, ಶಿಲೆಕುಲದ ಸೂತಕ ಬಿಡದು. ಬಿಡುವನ್ನಕ್ಕ ಜ್ಞಾನಶೂನ್ಯವಿಲ್ಲ, ಕಾಮಧೂಮ ಧೂಳೇಶ್ವರಾ.
--------------
ಮಾದಾರ ಧೂಳಯ್ಯ
ಒಂದು ಪಕ್ಷಿಗೆ ಐದು ತಲೆ, ಶಿರವೊಂದರಲ್ಲಿಯೆ ಮೂಡಿತ್ತು ನೋಡಾ. ಒಡಲು ಒಂದಾಯಿತ್ತು, ಬಣ್ಣ ಹದಿನಾರಾಯಿತ್ತು. ಅದರ ಚಂದ ಇಪ್ಪತ್ತೈದಾಯಿತ್ತು, ಹುಟ್ಟಿದ ಗರಿ ನೂರೊಂದಾಯಿತ್ತು. ಆ ಹಕ್ಕಿಯ ಜೀವವಿದ್ದಂತೆ ಕೊಂದು, ಸುಡದ ಬೆಂಕಿಯಲ್ಲಿ ಸುಟ್ಟು, ತಲೆಯಿಲ್ಲದ ಕಣ್ಣಿನಲ್ಲಿ ನೋಡಿ, ಬಾಯಿಲ್ಲದ ನಾಲಗೆಯಲ್ಲಿ ಸವಿದು, ಸವಿವುದಕ್ಕೆ ಮೊದಲೆ ರುಚಿಯನರ್ಪಿತವ ಮಾಡಿದ ಜ್ಞಾನಜಂಗಮವ ನೋಡಾ. ಆತನ ಇರವು ತುರುಬೊ? ಜಡೆಯೊ? ಅರಿಯಬಾರದಣ್ಣಾ. ಎಣ್ಣೆ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮಕೊಂಡ ಗಂಧದಂತೆ, ರಸ ಕೊಂಡ ಪಾಷಾಣದಂತೆ, ಹೆಸರಿಡಬಾರದಯ್ಯಾ, ಆ ಜಂಗಮದಿರವ. ಆ ಜಂಗಮ ಬಂದು ಎನ್ನ ಹುಳ್ಳಿಯಂ ಬಿಡಿಸಿ, ತಳ್ಳಿಯಂ ಹರಿದು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ತಲ್ಲೀಯವಾದ.
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->