ಅಥವಾ

ಒಟ್ಟು 32 ಕಡೆಗಳಲ್ಲಿ , 15 ವಚನಕಾರರು , 31 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತೆಂದ ಭೂಮಿಯ; ಇಂತೆಂದ ಗಗನವ. ಇಂತೆಂದ ಸಪ್ತಸಾಗರವ. ಇಂತೀ ಲೋಕದೊಳಗೆ ತಿಂಥಿಣಿಯಾಗಿಪ್ಪ ಅಚಿಂತನನವರಾರು ಬಲ್ಲರೈ ರಾಮನಾಥ.
--------------
ಜೇಡರ ದಾಸಿಮಯ್ಯ
ಸಾಗರದ ತಡಿಯಲ್ಲಿ ಒಂದು ಆರವೆ. ಆರವೆಯ ಬೇರಿನಲ್ಲಿ ಮೂರುಲೋಕ. ಲೋಕದೊಳಗೆ ಹೊತ್ತು ಬೆವಹಾರ ಮಾಡುವ ಅಣ್ಣಗಳೆಲ್ಲರೂ ಹೇರಿನ ಮೂಲೆಗೆ ತೋಳಕೊಟ್ಟು, ಅಳೆವ ಕೊಳಗಕ್ಕೆ ಕೈಯನಿಕ್ಕಿದರು. ಗಡಿವಾಡದ ಸುಂಕವ ಕದ್ದು ಹೋಗಲರಿಯದೆ ಬಂಕೇಶ್ವರಲಿಂಗವನರಿಯಿರಣ್ಣಾ.
--------------
ಸುಂಕದ ಬಂಕಣ್ಣ
ವೇದ್ಥಿಸಿದ ವೇದಂಗಳೆಲ್ಲ ಉರಿದುಲಿದು ನಿಂದವು. ಸಾದ್ಥಿಸಿದ ಶಾಸ್ತ್ರಂಗಳೆಲ್ಲ ಸೋಹೋ ಎಂದಡಗಿದವು. ವಿದ್ಯಾಮುಖ ಪ್ರಣಮವು ಸಿದ್ಧ ಸಿದ್ಧ ಎಂದು ಕದ್ದ ಕಳ್ಳರಂತೆ ತಡವಡಿಸುತ್ತಿರ್ದವು ನೋಡಾ. ಅರ್ಧನಾರೀಶ್ವರನ ರೂಪು ಇಂತೆಂದು ಶುದ್ಧವಾಯಿತ್ತೀ ಲೋಕದೊಳಗೆ. ಜಡೆಯಿಲ್ಲ ಎಮ್ಮ ದೇವಂಗೆ, ಮುಡಿಯಿಲ್ಲ ಎಮ್ಮ ದೇವಂಗೆ. ಮಡದಿಯರಿಬ್ಬರಿಲ್ಲ ಎಮ್ಮ ದೇವಂಗೆ. ಬೆಡಗ ನುಡಿವವರಿಲ್ಲ, ನುಡಿಯಲಮ್ಮದ ಕಾರಣ ಅರಸುತ್ತಿದ್ದಾರು. ಎಡೆಯ ಮಧ್ಯದಲ್ಲಿ ನುಡಿಯ ನುಂಗಿದ ಬೆಡಗ ಹಿಡಿತಂದು ಅರ್ಪಿತವ ಮಾಡಿ ; ನಡೆಸಿ ತೋರಿದ ಭಕ್ತರ ತನುವಿನೊಳಗೆ ಕಡೆಯಿಲ್ಲದ ಲಿಂಗವ ಖಂಡಿತವ ಮಾಡಿ ತೋರಿದ ರೇಕಣ್ಣಪ್ರಿಯ ನಾಗಿನಾಥ, ಇಬ್ಬರಿಂದ ಬದುಕಿತೀ ಲೋಕವೆಲ್ಲಾ.
--------------
ಬಹುರೂಪಿ ಚೌಡಯ್ಯ
ಇಕ್ಷುವಿನೊಳಗೆ ಶರ್ಕರವ ಕಾಣಬಹುದಲ್ಲದೆ, ಶರ್ಕರದೊಳಗೆ ಇಕ್ಷುವಿನ ಕಂಡವರುಂಟೆ ? ಕ್ಷೀರದೊಳಗೆ ಘೃತವ ಕಾಣಬಹುದಲ್ಲದೆ, ಘೃತದೊಳಗೆ ಕ್ಷೀರವ ಕಂಡವರುಂಟೆ ? ಶುಕ್ತಿಯೊಳಗೆ ಮೌಕ್ತಿಕವ ಕಾಣಬಹುದಲ್ಲದೆ, ಮೌಕ್ತಿಕದೊಳಗೆ ಶುಕ್ತಿಯ ಕಂಡವರುಂಟೆ ? ಸಂಸಾರದೊಳಗೆ ಶರಣನ ಕಾಣಬಹುದಲ್ಲದೆ, ಶರಣನೊಳಗೆ ಸಂಸಾರವ ಕಂಡವರುಂಟೆ? ಮೂರು ಲೋಕದೊಳಗೆ ಇಲ್ಲ ಇಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗ ಸಂಸಾರ ಶರಣ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಯಿತ್ತೆ ಉದಯಮಾನ, ಹೋಯಿತ್ತೆ ಅಸ್ತಮಾನ. ಅಳಿದವಲ್ಲಾ ನೀರಲಾದ ನಿರ್ಮಿತಂಗಳೆಲ್ಲವು ! ಕತ್ತಲೆಗವಿಯಿತ್ತು ಮೂರು ಲೋಕದೊಳಗೆ. ಇದರಚ್ಚುಗವೇನು ಹೇಳಾ ಗುಹೇಶ್ವರಾ ?
--------------
ಅಲ್ಲಮಪ್ರಭುದೇವರು
ಉತ್ತರ, ದಕ್ಷಿಣ , ಪೂರ್ವ, ಪಶ್ಚಿಮ ನಾಲ್ಕು ಪಥವನು ಏಕವ ಮಾಡಿ, ಊಧ್ರ್ವಮುಖವ ಮಾಡಿ, ಈಡಾ ಪಿಂಗಳ ನಾಳಮಂ ಕಟ್ಟಿ, ಸುಷಮ್ನನಾಳವಂ ಎತ್ತಿ , ಮನ ಪವನ ಬಿಂದು ಒಡಗೂಡಿ, ಚಂದ್ರ ಸೂರ್ಯ ಶಿಖಿಯರಂ ಮುಪ್ಪುರಿಯ ಮಾಡಿ, ಒಡಗೂಡಿ ಏಕವಾಗಿ ಹುರಿಗೂಡಿ, ಮತ್ರ್ಯಲೋಕವ ಬಿಟ್ಟು, ದೇವಲೋಕವ ಮೆಟ್ಟಿನಿಂದು, ಭಾವ ಬಯಲಾಗಿ, ಬಯಕೆ ಸವೆದು, ಇನ್ನು ಈ ಲೋಕದೊಳಗೆ ಬಂದು ಬದುಕಿದೆನೆಂಬುದನಕ್ಕೆ ಹೇಯ ಹುಟ್ಟಿ, ಇದಾವುದನೂ ಒಲ್ಲದಿರ್ಪರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಶಿವಶಿವಾ, ಮತ್ತೊಂದು ಪರಿಯ ಪೇಳ್ವೆ. ಅದೆಂತೆಂದಡೆ: ಈ ಲೋಕದೊಳಗೆ ಗುರುವೆಂಬಾತನು ಭಕ್ತರಿಗೆ ದೀಕ್ಷೆಯ ಮಾಡಿ ಪೂರ್ವಜನ್ಮವಳಿದು ಪುನರ್ಜಾತನ ಮಾಡಿದೆವೆಂಬರು. ಜಂಗಮಲಿಂಗಿಗಳಿಗೆ ಚರಂತಿಹಿರಿಯರು ಗುರುವೆಂಬಾತನು ಉಭಯರು ಕೂಡಿ, ಅಯ್ಯತನ ಮಾಡಿದೆವು ಎಂಬರು. ಅವರೇನು ಪೂರ್ವದಲ್ಲಿ ಕಪ್ಪಾಗಿದ್ದರೆ ? ಈಗೇನು ಕೆಂಪಗಾದರೆ ? ಅವರೇನು ಪೂರ್ವದಲ್ಲಿ ಬಿಳುಪಾಗಿದ್ದರೆ ? ಈಗೇನು ಕಪ್ಪಾದರೆ ? ಎಲಾ ದಡ್ಡಪ್ರಾಣಿಗಳಿರಾ, ಇದೇನು ವೀರಶೈವಮಾರ್ಗವಲ್ಲ; ಇದು ಶೈವಮಾರ್ಗ. ಇನ್ನು ವೀರಶೈವಮಾರ್ಗದಾಚಾರವ ಬಲ್ಲರೆ ಹೇಳಿರಿ, ಅರಿಯದಿದ್ದರೆ ಕೇಳಿರಿ. ಆರೂರವರ ಉಲುಹ ಮಾಣಿಸಿ, ಮೂರೂರವರ ಮೂಲಿಗೆ ಹಾಕಿ, ಬೇರೊಂದೂರವರ ತೋರಬಲ್ಲರೆ ವೀರಶೈವರೆಂಬೆ. ಆರು ಮಂದಿಯನಟ್ಟಿ, ಮೂರು ಮಂದಿಯ ಕುಟ್ಟಿ, ಬಟ್ಟಬಯಲಿನ ಘಟ್ಟಿಯ ತೋರಬಲ್ಲರೆ ವೀರಶೈವರೆಂಬೆ. ಆರು ಬಟ್ಟೆಯನೇ ಮೆಟ್ಟಿ, ಮೂರು ಬಟ್ಟೆಯನೇ ದಾಂಟಿ, ಮೇಲುಬಟ್ಟೆಯಲ್ಲಿ ನಿಂದು ನಿಟಿಲಲೋಚನನ ತೋರಬಲ್ಲರೆ ವೀರಶೈವರೆಂಬೆ. ಆರು ಬಾಗಿಲ ಹಾಕಿ, ಮೂರು ಬಾಗಿಲ ಮುಚ್ಚಿ, ಇನ್ನೊಂದು ಕದವ ತೆಗೆದು ತೋರಬಲ್ಲರೆ ವೀರಶೈವರೆಂಬೆ. ಇಂತೀ ಕ್ರಮವನರಿದು ದೀಕ್ಷೆಯ ಮಾಡಬಲ್ಲರೆ ಗುರುವೆಂಬೆ, ಇಲ್ಲದಿದ್ದರೆ ನರಗುರಿಗಳೆಂಬೆ. ಈ ಭೇದವ ತಿಳಿದು ಅಯ್ಯತನ ಮಾಡಬಲ್ಲರೆ ಚರಮೂರ್ತಿಗಳೆಂಬೆ. ಇಲ್ಲದಿದ್ದರೆ ಮತಿಭ್ರಷ್ಟ ಮರುಳಮಾನವರೆಂಬೆ. ಇಂತೀ ವಿಚಾರವನು ಅರಿಯದೆ ದೀಕ್ಷೆಯ ಮಾಡಬೇಕೆಂಬವರ, ಇಂತೀ ಭೇದವ ತಿಳಿಯದೆ ದೀಕ್ಷೆ ಪಡೆಯಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಅಘೋರನರಕದಲ್ಲಿಕ್ಕೆಂದ ಕಾಣಾ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಮುತ್ತುಂಡ ಉದಕವ ತಂದು ಕಾಣಲುಂಟೆ ? ಉರಿಯುಂಡ ಕರ್ಪುರವ ತಂದು ಕಾಣಲುಂಟೆ ? ಗುರುನಿರಂಜನ ಚನ್ನಬಸವಲಿಂಗಾ ನೀನುಂಡ ಶರಣನ ತಂದು ಕಾಣಲುಂಟೆ ಮೂರು ಲೋಕದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೆಸರಲ್ಲಿ ಬಿದ್ದ ಪಶುವಿನ ದೇಹವ ತೊಳೆವರಲ್ಲದೆ, ಲೋಕದೊಳಗೆ ಗಂಜಳದೊಳಗಣ ಹಂದಿಯ ದೇಹವನಾರೂ ತೊಳೆಯರು. ಗುರುಕಾರುಣ್ಯವುಳ್ಳ ಭಕ್ತರ ನಡೆವ ಗುಣದಲ್ಲಿ ಎಡಹಿದ ಶಬ್ದಕ್ಕೆ ಪ್ರಾಯಶ್ಚಿತವಂ ಕೊಟ್ಟು, ವಿಭೂತಿಯನಿಟ್ಟು, ಒಡಗೂಡಿಕೊಂಡು ನಡೆಸುವದೆ ಸದಾಚಾರ. ಗುರುಚರಲಿಂಗವನರಿಯದ ದುರಾಚಾರಿಗಳಿಗೆ ಪ್ರಾಯಶ್ಚಿತವಂ ಕೊಟ್ಟು, ವಿಭೂತಿಯನಿಟ್ಟು, ಒಡಗೂಡಿಕೊಂಡ ತೆರನೆಂತೆಂದಡೆ, ಶೂಕರನ ದೇಹವ ತೊಳೆದಡೆ, ಕೂಡೆ ಪಾಕುಳದೊಳಗೆ ಹೊರಳಿದ ತೆರನಾಯಿತ್ತೆಂದ ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ಗಂಡನಿಂದ ಗಳಿಸಿದರ್ಥವನು ಹಗಲಿರುಳಗೂಡಿ, ಮಂಡಲದೊಳಗುಳ್ಳ ಮಿಂಡರ ನೋಡಿ ನೋಡಿಯಿತ್ತಡೆ ಗಂಡನೈಶ್ವರ್ಯದ ಬೆಳಗು ಘನವಾಯಿತ್ತು ಮೂರು ಲೋಕದೊಳಗೆ ; ವಿನಯವಾಯಿತ್ತು ಸಕಲಸನ್ನಿಹಿತರಿಗೆ ; ಸನುಮತವಾಯಿತ್ತು ಗುರುನಿರಂಜನ ಚನ್ನಬಸವಲಿಂಗಕ್ಕೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ‍ಈ ಲೋಕದೊಳಗೆ ಮತ್ತೆ ಅನಂತಲೋಕ ‍‍ಶಿವಲೋಕ, ಶಿವಾಚಾರವಯ್ಯಾ. ‍‍‍ಶಿವಭಕ್ತನಿದ್ದಠಾವೆ ದೇವಲೋಕ, ‍‍ಭಕ್ತನಂಗಳವೆ ವಾರಣಾಸಿ, ಕಾಯಕವೆ ಕೈಲಾಸ, ಇದು ಸತ್ಯ, ಕೂಡಲಸಂಗಮದೇವಾ.
--------------
ಬಸವಣ್ಣ
ಗಂಡಿಂಗೆ ಹೆಣ್ಣಲ್ಲದೆ ಹೆಣ್ಣಿಂಗೆ ಹೆಣ್ಣುಂಟೆ ಲೋಕದೊಳಗೆ ಈ ಅರೆಮರುಳ ಶಿವನ ನಾನೇನೆಂಬೆನಯ್ಯ? ಅಪಮಾನವ ಅನ್ಯರಿಗೆ ಕೊಡುವ ದೇವನ ಮರುಳತನವ ನೋಡಾ. ಅದೇನು ಕಾರಣವೆಂದಡೆ: `ಪತಿರ್ಲಿಂಗಸ್ಸತೀ ಚಾಹಮಿತಿಯುಕ್ತಸ್ಸದಾ ತಥಾ ಪಂಚೇಂದ್ರಿಯ ಸುಖಂ ನಾಸ್ತಿ ಶರಣಸ್ಥಲಮುತ್ತಮಂ||' ಎಂದುದಾಗಿ ಮುಕ್ಕಣ್ಣಂಗೆ ನಾ ಹೆಣ್ಣಾದ ಕಾರಣ ಎನ್ನ ಕರಣೋಪಕರಣಗಳೆಲ್ಲವು ಲಿಂಗೋಪಕರಣಂಗಳಾಗಿ ನಿಮ್ಮ ಚರಣವೆ ಹರಣವಾಗಿರ್ದೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸೃಷ್ಟಿಯ ಕಲ್ಪಿಸುವ ಕರ್ತ ಬ್ರಹ್ಮಂಗೆ ಶತಾಯುಗನೆಂಬ ಗಣಿತವಿದೇನು? ಸಕಲಜೀವಿಗಳ ರಕ್ಷಿಸುವ ವಿಷ್ಣುವಿಂಗೆ ದಶಾವತಾರವೆಂಬ ಗಣಿತವಿದೇನು? ಕೋಪಾಗ್ನಿರುದ್ರನೆಂಬ ಜಮದಗ್ನಿಯ ತಲೆಯನರಿದವರಾರುರಿ ಮೂವತ್ತುಮೂರು ಕೋಟಿ ದೇವರ್ಕಳನಾಳಿದ ರಾವಣಂಗೆ ಅಳಿವೆಂಬುದೇನುರಿ ಹರಸಿ ಲಕ್ಷವಿಪ್ರರು ನಿಚ್ಚ ಮಂತ್ರಾಕ್ಷತೆಯನಿಡುತ್ತಿರಲು ದುರ್ಯೋಧನಂಗೆ ಸಾವೆಂಬುದೇನು ? ಹರನೆ ನೀ ಹರಸಿ ಪಟ್ಟವ ಕಟ್ಟಿಕೊಟ್ಟಂತಲ್ಲದೆ ಇಲ್ಲ. ಎಲ್ಲರಿಗೆಯೂ ಮೂರು ಲೋಕದೊಳಗೆ ನೀನೊಬ್ಬನೆ ಒಡೆಯನೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗಂಜಿದಡೆಂತಯ್ಯಾ ? ಸಮುದ್ರದ ತಡಿಯಲೊಂದು ಮನೆಯ ಮಾಡಿ, ನೊರೆತೆರೆಗಳಿಗಂಜಿದಡೆಂತಯ್ಯಾ ? ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ನಾಚಿದಡೆಂತಯ್ಯಾ ? ಚೆನ್ನಮಲ್ಲಿಕಾರ್ಜುನದೇವ ಕೇಳಯ್ಯಾ, ಲೋಕದೊಳಗೆ ಹುಟ್ಟಿದ ಬಳಿಕ ಸ್ತುತಿನಿಂದೆಗಳು ಬಂದಡೆ ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು.
--------------
ಅಕ್ಕಮಹಾದೇವಿ
ಹಾರುವ ಹಾರುವ ಹಾರುವನೆಂದೆಂಬುವರು ಪ್ರಮಥರು. ಊರೊಳಗೆ ಹಾರುವನಲ್ಲ, ಹದಿನಾಲ್ಕು ಲೋಕದೊಳಗೆ ಹಾರುವನಲ್ಲ, ಹೊನ್ನು ಹೆಣ್ಣು ಮಣ್ಣಿಗೆ ಹಾರುವನಲ್ಲ. ಗುರುನಿರಂಜನ ಚನ್ನ ಬಸವಲಿಂಗಕ್ಕಿತ್ತು ನಿತ್ಯ ಹಾರುವನೆಂಬುದು ಸತ್ಯ ಕಾಣಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->