ಅಥವಾ

ಒಟ್ಟು 405 ಕಡೆಗಳಲ್ಲಿ , 47 ವಚನಕಾರರು , 310 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಕ್ಷೆ ಭಕ್ತನ ಸೋಂಕು. ಮುಖಸಜ್ಜೆ ಮಾಹೇಶ್ವರನ ಸೋಂಕು. ಕರಸ್ಥಲ ಪ್ರಾಣಲಿಂಗಿಯ ಸೋಂಕು. ಉತ್ತಮಾಂಗ ಶರಣನ ಸೋಂಕು. ಅಮಳೋಕ್ಯ ಐಕ್ಯನ ಸೋಂಕು. ಭಕ್ತಂಗೆ ಆಚಾರಲಿಂಗ, ಮಾಹೇಶ್ವರಂಗೆ ಸದಾಚಾರಲಿಂಗ, ಪ್ರಸಾದಿಗೆ ವಿಚಾರಲಿಂಗ, ಪ್ರಾಣಲಿಂಗಿಗೆ ಸರ್ವವ್ಯವಧಾನ ಸನ್ನದ್ಧಲಿಂಗ, ಶರಣಂಗೆ ಅವಿರಳ ಸಂಪೂರ್ಣಲಿಂಗ, ಐಕ್ಯಂಗೆ ಪರಮ ಪರಿಪೂರ್ಣಲಿಂಗ ಇಂತೀ ಆರುಸ್ಥಲ ಷಟ್ಕರ್ಮ ಷಡ್ವಿಧಲಿಂಗ ಭೇದಂಗಳಲ್ಲಿ ಮುಂದಣ ವಸ್ತುವೊಂದುಂಟೆಂದು ಸಂಗವ ಮಾಡುವುದಕ್ಕೆ ಆರಂಗದ ಪಥಗೂಡಿ ಕಾಬಲ್ಲಿ ವಸ್ತುವನೊಡಗೂಡುವುದೊಂದೆ ಭೇದ. ಇಂತೀ ಸ್ಥಲವಿವರ ಕೂಟಸಂಬಂಧ. ಏಕಮೂರ್ತಿ ತ್ರಿವಿಧಸ್ಥಲವಾಗಿ, ತ್ರಿವಿಧಮೂರ್ತಿ ಷಡುಸ್ಥಲವಾಗಿ ಮಿಶ್ರಕ್ಕೆ ಮಿಶ್ರ ತತ್ವಕ್ಕೆ ತತ್ವ ಬೊಮ್ಮಕ್ಕೆ ಪರಬ್ರಹ್ಮವನರಿತಡೂ, ಹಲವು ಹೊಲಬಿನ ಪಥದಲ್ಲಿ ಬಂದಡೂ ಪಥ ಹಲವಲ್ಲದೆ ನಗರಕ್ಕೆ ಒಂದೆ ಒಲಬು. ಇಂತೀ ಸ್ಥಲವಸ್ತುನಿರ್ವಾಹ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು.
--------------
ದಾಸೋಹದ ಸಂಗಣ್ಣ
ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರಾಳವಾಯಿತ್ತು. ನಿರಾಳದಿಂದ ನಿರವಯವಾಯಿತ್ತು, ನಿರವಯದಿಂದ ಅನಾದಿಯಾಗಿತ್ತು. ಅನಾದಿಯಲ್ಲಿ ಮೂರ್ತಿಯಾದನೊಬ್ಬ ಶರಣ. ಆ ಶರಣನ ಮೂರ್ತಿಯಿಂದ ಸದಾಶಿವನಾದ, ಆ ಸದಾಶಿವನ ಮೂರ್ತಿಯಿಂದ ಶಿವನಾದ, ಆ ಶಿವನ ಮೂರ್ತಿಯಿಂದ ರುದ್ರನಾದ, ಆ ರುದ್ರನ ಮೂರ್ತಿಯಿಂದ ವಿಷ್ಣುವಾದ. ಆ ವಿಷ್ಣುವಿನ ಮೂರ್ತಿಯಿಂದ ಬ್ರಹ್ಮನಾದ. ಆ ಬ್ರಹ್ಮನ ಮೂರ್ತಿಯಿಂದಾದವು ಸಕಲ ಜಗತ್ತುಗಳೆಲ್ಲಾ_ ಇವರೆಲ್ಲ ನಮ್ಮ ಗುಹೇಶ್ವರನ ಕರಸ್ಥಲದ ಹಂಗಿನಲ್ಲಿ ಹುಟ್ಟಿ ಬೆಳೆದರು
--------------
ಅಲ್ಲಮಪ್ರಭುದೇವರು
ಇಷ್ಟಲಿಂಗದಲ್ಲಿ ವಿಶ್ವಾಸ ಬಲಿದರೆ ಆಯತಲಿಂಗ. ಆ ಇಷ್ಟಲಿಂಗದಲ್ಲಿ ಭಾವಮನೋವೇದ್ಯವಾದಲ್ಲಿ ಸ್ವಾಯತಲಿಂಗ. ಆ ಇಷ್ಟಲಿಂಗದ ಭಾವ ಮನೋವೇದ್ಯವಾದ ಸುಖವು ಭಿನ್ನವಾಗಿ ತೋರದೆ, ಅನುಪಮ ಪರಿಣಾಮ ಭರಿತವಾದಲ್ಲಿ ಸನ್ನಹಿತಲಿಂಗ. ಇಂತು, ಇಷ್ಟಲಿಂಗ ಪ್ರಾಣಲಿಂಗ ತೃಪ್ತಿಯ ಭಾವಲಿಂಗಂಗಳೆಂಬ ಲಿಂಗತ್ರಯಂಗಳು, ತನುತ್ರಯಂಗಳ ಮೇಲೆ ಆಯತ ಸ್ವಾಯತ ಸನ್ನಹಿತಂಗಳಾದ ಶರಣನ ಪಂಚಭೂತಂಗಳಳಿದು ಲಿಂಗ ತತ್ವಂಗಳಾಗಿ, ಆತನ ಜೀವ ಭಾವವಳಿದು ಪರಮಾತ್ಮನೆನಿಸಿದಲ್ಲಿ ಷಡಂಗಯೋಗವಾದುದು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆರರಿಂದತ್ತತ್ತ ಮೀರಿದ ಮಹಾಮಹಿಮನ ಸಂಗದಿಂದ ಸಕಲನಿಃಕಲವ ನೋಡಿ, ಮೂರು ಮಂದಿರವ ದಾಂಟಿ, ಮಹಾಮಹಿಮನ ಕೂಡಿ, ನಿಃಪ್ರಿಯವಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಖಂಡಿತವಿಲ್ಲಾಗಿ ಸರ್ವಾಂಗವೂ ನಾಸಿಕವಾಯಿತ್ತು. ತಾನಲ್ಲದೆ ಅನ್ಯವಾಸನೆಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಪೃಥ್ವಿಯಡಗಿತ್ತು. ಖಂಡತವಿಲ್ಲಾಗಿ ಸರ್ವಾಂಗವೂ ಜಿಹ್ವೆಯಾಯಿತ್ತು. ತಾನಲ್ಲದೆ ಅನ್ಯ ರುಚಿಯಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಪ್ಪುವಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ನೇತ್ರವಾಯಿತ್ತು. ತಾನಲ್ಲದೆ ಅನ್ಯ ರೂಪಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ಅಗ್ನಿಯಡಗಿತ್ತು. ಖಂಡಿತವಿಲ್ಲಾಗಿ ಸರ್ವಾಂಗವೂ ಮಹಾತ್ವಕ್ಕಾಯಿತ್ತು. ತಾನಲ್ಲದೆ ಅನ್ಯಸ್ಪರ್ಶವಿಲ್ಲಾಗಿ, ಅಲ್ಲಿಯೆ ಮಹತ್ತಪ್ಪ ವಾಯುವಡಗಿತ್ತು ಖಂಡಿತವಿಲ್ಲಾಗಿ ಸರ್ವಾಂಗವೂ ಶ್ರೋತ್ರವಾಯಿತ್ತು ತಾನಲ್ಲದೆ ಅನ್ಯ ಶಬ್ದವಿಲ್ಲಾಗಿ ಅಲ್ಲಿಯ ಮಹತ್ತಪ್ಪ ಆಕಾಶವಡಗಿತ್ತು. ಇಂತು ಬ್ರಹ್ಮಾಂಡವೆ ಪಂಚಭೂತಮಯವಾದಡೆ, ಶರಣನ ಸರ್ವಾಂಗದಲ್ಲಿ ಪಂಚಬ್ರಹ್ಮಮಯವಡಗಿತ್ತು. ಅದೆ ಪಂಚವರ್ಣಾತೀತವಾದ ಮಹಾಬಯಲೊಳಗೆ ನಿಂದ ಭೇದವು. ಅದರಲ್ಲಿ ಜಗತ್ತು ಅಡಗಿದ ಭೇದವ, ಮಹತ್ತು ಮಹತ್ತನೊಳಕೊಂಡ ಭೇದವ ಏನೆಂದುಪಮಿಸುವೆನಯ್ಯಾ, ಕೂಡಲಚೆನ್ನಸಂಗಯ್ಯಾ !
--------------
ಚನ್ನಬಸವಣ್ಣ
ಶರಣನ ಬರವದು ಸಕಲಸನ್ನಿಹಿತ, ಶರಣ ನಿಂದುದು ಸಕಲನಿಃಕಳ, ಶರಣು ಶರಣಸಂಬಂಧವಾದುದು ಗುರುನಿರಂಜನ ಚನ್ನಬಸವಲಿಂಗೈಕ್ಯ.
--------------
ದೇಶಿಕೇಂದ್ರ ಸಂಗನಬಸವಯ್ಯ
ಆಯತದಲ್ಲಿ ಅಂಗಭೋಗಿಯಾಗಿರಬೇಕು. ಸ್ವಾಯತದಲ್ಲಿ ಸನ್ನಹಿತನಾಗಿರಬೇಕು. ಸನ್ನಹಿತದಲ್ಲಿ ಸದಾಚಾರಿಯಾಗಿರಬೇಕು. ಇಂತೀ ತ್ರಿವಿಧದಲ್ಲಿ ಏಕವಾಗಿರಬಲ್ಲಡೆ, ಅದು ವರ್ಮ, ಅದು ಸಂಬಂಧ, ಅದು ನಿಯತಾಚಾರವೆಂದೆಂಬೆನು. ಅದಲ್ಲದೆ ಲಿಂಗವ ಮರೆದು, ಅಂಗ[ವ]ಭೋಗಿಸಿ, ಅಂಗಸಂಗದಲ್ಲಿರ್ದು, ಅಂಗವೆ ಪ್ರಾಣವಾಗಿಹರಿಗೆಲ್ಲರಿಗೆಯೂ ಲಿಂಗದ ಶುದ್ಧಿ ನಿಮಗೇಕೆ ಕೇಳಿರಣ್ಣಾ. ಲಿಂಗವಂತನು ಅಂಗಸೂತಕಿಯಲ್ಲ. ಅಲಗಿನ ಕೊನೆಯ ಮೊನೆಯ ಮೇಲಣ ಸಿಂಹಾಸನದ ಮೇಲೆ ಲಿಂಗದ ಪ್ರಾಣವ ತನ್ನಲ್ಲಿ ಕೂಡಿಕೊಂಡು, ತನ್ನ ಪ್ರಾಣವ ಲಿಂಗದಲ್ಲಿ ಕೂಡಿಕೊಂಡು, ಏಕಪ್ರಾಣವ ಮಾಡಿಕೊಂಡಿಪ್ಪ ಶರಣನ ಜ್ಯೋತಿರ್ಮಯನೆಂಬೆನು, ಜಗದ ಕರ್ತನೆಂಬೆನು, ಜಗದಾರಾಧ್ಯನೆಂದೆಂಬೆನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ನಿಮ್ಮ ಸಂಗಿಯ ನಿಲವಿನ ಪರಿಯ ನೀವೇ ಬಲ್ಲಿರಲ್ಲದೆ, ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಮರುಳಶಂಕರದೇವ
ಸರ್ವಾಂಗಲಿಂಗಿಯಾದ ಶರಣನ ಲಿಂಗ ಬ್ಥಿನ್ನವಾಗಿ ಹೋಗಲು ಆ ಲಿಂಗದೊಡನೆ ತನ್ನ ಪ್ರಾಣವ ಬಿಡುವದು. ಇದಲ್ಲದೆ ಜೀವಕಾಸೆ ಮಾಡಿ ಪುನಃ ಲಿಂಗವ ಧರಿಸಿದನಾದಡೆ ಶುನಿಯ ಬಸುರಲ್ಲಿ ಬಂದು ಅನೇಕಕಾಲ ನಾಯಕನರಕದಲ್ಲಿರ್ಪನಯ್ಯಾ ನೀ ಸಾಕ್ಷಿಯಾಗಿ ಅಮರಗುಂಡದ ಮಲ್ಲಿಕಾರ್ಜುನಾ.
--------------
ಪುರದ ನಾಗಣ್ಣ
ಅಂತರಂಗ ಬಹಿರಂಗ ಶುದ್ಧನಾದ ಶರಣನ ದಿಟಪುಟವ ನೋಡಿರಯ್ಯ. ಅಂತಪ್ಪ ಶರಣನ ಕಂಡು ನಮೋ ನಮೋ ಎನುತಿರ್ದೆಯಯ್ಯಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಭಕ್ತನಾದಲ್ಲಿ ಭಕ್ತಿಸ್ಥಲ ಅಳವಟ್ಟು. ಮಾಹೇಶ್ವರನಾದಲ್ಲಿ ಆ ಸ್ಥಲ ಅಳವಟ್ಟು. ಪ್ರಸಾದಿಯಾದಲ್ಲಿ ಆ ಸ್ಥಲ ಅಳವಟ್ಟು. ಪ್ರಾಣಲಿಂಗಿಯಾದಲ್ಲಿ ಆ ಸ್ಥಲ ಅಳವಟ್ಟು. ಶರಣನಾದಲ್ಲಿ ಆ ಸ್ಥಲ ಅಳವಟ್ಟು. ಐಕ್ಯನಾದಲ್ಲಿ ಆ ಸ್ಥಲ ಅಳವಟ್ಟು. ಆರು ಲೇಪವಾಗಿ, ಮೂರು ಮುಗ್ಧವಾಗಿ, ಒಂದೆಂಬುದಕ್ಕೆ ಸಂದಿಲ್ಲದೆ, ಲಿಂಗವೆ ಅಂಗವಾಗಿಪ್ಪ ಶರಣನ ಇರವು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ ತಾನು ತಾನಾದ ಶರಣ.
--------------
ಮನುಮುನಿ ಗುಮ್ಮಟದೇವ
ಮೂರುಕಾಲ ಮಣಿಯನೇರಿ ಹತ್ತಿಯನರೆವ ಹೆಂಗಳೆಯ ಚಿತ್ತ ಕಾಲವಿಡಿದು, ಕಾಳವಿಸರ್ಜಿಸಿ ಅರಳೆಯ ತನ್ನತ್ತಲೆಳಹುವದು. ಕ್ರಿಯಾಪಾದ ಜ್ಞಾನಪಾದ ಚರ್ಯಾಪಾದವೆಂಬ ಪಾದತ್ರಯದಮೇಲಿರ್ದ ಶರಣನ ಚಿತ್ತ, ಸೂಕ್ಷ್ಮಸುವಿಚಾರವಿಡಿದು ಕರಣೇಂದ್ರಿಯ ವಿಷಯಕಾಠಿಣ್ಯ ಪ್ರಕೃತಿಯ ದೂಡುತ್ತ ಸ್ವಚ್ಫ ಸೂಕ್ಷ್ಮತರಭಾವವೇದಿ ಮಹಾಘನ ಪ್ರಕಾಶವ ನೆರೆಯಲೆಳಹುವುದು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮನೆಯೊಳಗಣ ಜ್ಯೋತಿ ಮನೆಯ ಮುಟ್ಟದಂತೆ, ಬಸುರೊಳಗಣ ಶಿಶು ಬಸುರ ಮುಟ್ಟದಂತೆ, ಕಕ್ಷೆ, ಕರಸ್ಥಳ, ಅಂಗಸೋಂಕು ಮುಖಸೆಜ್ಜೆ ಕಂಠ ಉತ್ತಮಾಂಗ, ಇವೆಲ್ಲ ಆಯತಂಗಳಲ್ಲದೆ ಪ್ರಾಣಲಿಂಗಸ್ಥಳ ಬೇರೆ. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣನ ಪರಿ ಬೇರೆ.
--------------
ಚನ್ನಬಸವಣ್ಣ
ಹರಿದ ನೀರಿನ ಅಡಿಯ ಕಾಣಬಹುದಲ್ಲದೆ ನಿಂದ ಇಂಗಡಲಿನ ಅಡಿಯ ಕಂಡವರುಂಟೆ? ಚಲನೆಯಿಂದ ತೋರುವ ತೋರಿಕೆಯ ಕಾಣಬಹುದಲ್ಲದೆ ಶಬ್ದ ಮುಗ್ಧವಾದ ಶರಣನ ಚಿತ್ತವ ಭೇದಿಸಬಹುದೆ? ಅದು ಸರಿಹರಿದ ಸಂಬಂಧ. ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳ ನೋಡಾ, ಮಾತುಳಂಗ ಮಧುಕೇಶ್ವರನು. || 99 ||
--------------
ದಾಸೋಹದ ಸಂಗಣ್ಣ
ಇನ್ನು ಶರಣನಲ್ಲಿಯ ಷಡ್ವಿಧ ಷಡುಸ್ಥಲಲಿಂಗ ಮಿಶ್ರಾರ್ಪಣ ಭೇದವೆಂತೆಂದಡೆ : ಆಕಾಶವೆ ಅಂಗವಾದ ಶರಣನ ಸುಜ್ಞಾನವೆಂಬ ಹಸ್ತದಲ್ಲಿ ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ ಪಾತ್ರದಲ್ಲಿ ಹುಟ್ಟಿದ ಸುನಾದಾಳಾಪನೆಯ ಶಬ್ದದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹಸಿವು ತೃಷೆ ನಿದ್ರೆ ರೋಗಾದಿ ಬಾಧೆಗಳು ತನಗಾಗುತ್ತಿಹವೆಂಬ ಜೀವಭಾವವ ಮರೆದು, ಅವು ಲಿಂಗದ ಸದಿಚ್ಛೆಯಿಂದ ಅಂಗಕ್ಕುಂಟಾಗಿಹವೆಂಬ ಶಿವಭಾವವು ಸದಾಸನ್ನಿಹಿತವಾಗಿದ್ದಡೆ ಶರಣನ ಹಸಿವು ತೃಷೆ ಮುಂತಾದ ಸರ್ವಭಂಗವು ಲಿಂಗದಲ್ಲಿ ಲೀನವಾಗಿ, ಹುಟ್ಟುಗೆಟ್ಟು, ಸಾವಿನಸಂತಾಪವಿಲ್ಲದೆ ನಾನು ನನ್ನದೆಂಬಹಂಕಾರ ಮಮಕಾರಗಳು ಮರೆಮಾಜಿ ಸಂಚಿತ ಅಗಾಮಿ ಪ್ರಾರಬ್ಧವೆಂಬ ಕರ್ಮತ್ರಯ ಮುಂತಾದ ಪಾಶಗಳು ನಾಶವಾಗಿ, ನಿತ್ಯಮುಕ್ತಿಯಾಗುತ್ತಿಹುದಯ್ಯಾ. ಕೂಡಲಚೆನ್ನಸಂಗಮದೇವಾ, ಇದು ನಿಮ್ಮ ಭಕ್ತಿದೇವತೆಯ ಚಮತ್ಕೃತಿಯೆಂದರಿದೆನು.
--------------
ಚನ್ನಬಸವಣ್ಣ
ಇನ್ನಷ್ಟು ... -->