ಅಥವಾ

ಒಟ್ಟು 28 ಕಡೆಗಳಲ್ಲಿ , 14 ವಚನಕಾರರು , 22 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಚಾರಲಿಂಗಾನುಭಾವದಿಂದ ಪೃಥ್ವಿಯ ಪೂರ್ವಾಶ್ರಯವನಳಿದ ಸದಾಚಾರನಿಷ್ಠನ ನೋಡಾ! ಸದ್ಗುರುರತಿಯಿಂದ ಅಪ್ಪುತತ್ವದ ಪೂರ್ವಾಶ್ರಯವನಳಿದು ಸದ್ಗುರುನಿಷ್ಠನ ನೋಡಾ! ಶಿವಲಿಂಗದ ಸಂಗದಿಂದ ಅಗ್ನಿಯ ಪೂರ್ವಾಶ್ರಯವನಳಿದ ಶಿವಲಿಂಗಪ್ರೇಮಿಯಾದ ಶಿವಾಚಾರನಿಷ್ಠನ ನೋಡಾ! ಚರಲಿಂಗದ ಸಂಗದಿಂದ ವಾಯುವಿನ ಪೂರ್ವಾಶ್ರಯವನಳಿದ ಜಂಗಮಲಿಂಗಗ್ರಾಹಕನ ನೋಡಾ! ಪ್ರಸಾದಲಿಂಗದ ಸೇವಕತ್ವದಿಂದ ಕರ್ಮತ್ರಯವನಳಿದ ನಿರ್ಮಲ ನಿರಾವರಣನ ನೋಡಾ! ಮಹಾಲಿಂಗದ ಸಂಗದಿಂದ ಜೀವಭಾವವಳಿದ ಮಹಾಮಹಿಮನ ನೋಡಾ! ಲಿಂಗನಿಷ್ಠೆಯಿಂದ ಅಂಗಗುಣಂಗಳೆಲ್ಲವ ಕಳೆದುಳಿದ ನಿರಂಗಸಂಗಿಯ ನೋಡಾ! ಇಂತಪ್ಪ ಮಹೇಶ್ವರಂಗೆ ನಮೋನಮೋಯೆಂಬೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶ್ರೀಗುರುಕರುಣ ಕಟಾಕ್ಷಮಾತ್ರದಿಂದ ಶಿವಲಿಂಗದ ಒಲುಮೆ. ಆ ಶಿವಲಿಂಗದ ಒಲುಮೆಗೆ ಗುರುಕರುಣವೇ ಮುಖ್ಯ. ಅದು ಕಾರಣ, ಗುರುಪೂಜೆಯ ಮಾಡಿ, ಗುರು ಕೃಪೆಯನೆ ಪಡೆದಿಹುದಯ್ಯ. ಉಪಮಿಸಬಾರದ ಮಹಾದೇವನು, ಪ್ರತ್ಯಕ್ಷವಾಗಿ, ಗುರುರೂಪಿಂದ ಇಹನೆಂದರಿದು, ಗುರುಭಕ್ತಿಯನೆ ಮಾಡುವುದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂದು ಶಿವಲಿಂಗದ ಮೇಲೆ ಪಂಚವಕ್ತ್ರವ ಸ್ಥಾಪಿಸುವ ಅನಾಚಾರಿಯ ಮಾತ ಕೇಳಲಾಗದು. ಇಂತಪ್ಪ ಲಿಂಗದ್ರೋಹಿಯ ತೋರದಿರಯ್ಯಾ, ಸಕಲ ನಿಃಕಲದಂತಹನೆ ಲಿಂಗವು ? ಕೂಡಲಚೆನ್ನಸಂಗಯ್ಯನಲ್ಲಿ ಸರ್ವಾಂಗಲಿಂಗಿ ಬಸವಣ್ಣ ಬಲ್ಲ.
--------------
ಚನ್ನಬಸವಣ್ಣ
ಆ ಐಕ್ಯನಲ್ಲಿಯ ಪ್ರಸಾದಿಗೆ ಆತ್ಮನಲ್ಲಿಯ ಅಗ್ನಿಯೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ನಿರಹಂಕಾರವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಶಿವಲಿಂಗವೇ ಲಿಂಗ. ಆ ಶಿವಲಿಂಗದ ಮುಖದಲ್ಲಿ ರೂಪತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯ, ಕುಂಡಲಾಕೃತಿ, ಶಿಕಾರಪ್ರಣಮ, ಭೇರಿನಾದ, ಮಣಿಪೂರಚಕ್ರ, ಹರಿತವರ್ಣ, ಪ್ರಸಾದಿಸ್ಥಲ, ಕಾರಣತನು, ನಿರಹಂಕಾರಹಸ್ತ, ಶಿವಲಿಂಗ, ನೇತ್ರಮುಖ, ಸಾವಧಾನಭಕ್ತಿ, ಸುರೂಪುಪದಾರ್ಥ, ಸುರೂಪಪ್ರಸಾದ, ರುದ್ರಪೂಜಾರಿ, ರುದ್ರನಧಿದೇವತೆ, ಮೂರ್ತಿಸಾದಾಖ್ಯ, ಆನಂದವೆಂಬ ಲಕ್ಷಣ, ಶರೀರಸ್ಥವೆಂಬ ಸಂಜ್ಞೆ, ಉತ್ತರದಿಕ್ಕು, ಸಾಮವೇದ, ಅಗ್ನಿಯ ಅಂಗ, ಪರಮಾತ್ಮ, ಇಚ್ಛಾಶಕ್ತಿ, ವಿದ್ಯಾಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕುಂಡು ಎನ್ನ ಮಣಿಪೂರಕಚಕ್ರವೆಂಬ ಪಂಪಾಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ನಿರೀಕ್ಷಣಸ್ವರೂಪವಾದ ಶಿವಲಿಂಗನೆ ಶ್ರೀವಿರೂಪಾಕ್ಷಲಿಂಗವೆಂದು ಆತ್ಮತ್ರಯನ ಮಡಿಮಾಡಿ, ಪರಮಾನಂದವೆಂಬ ಜಲದಿಂ ಮಜ್ಜನಕ್ಕೆರದು, ಅಗ್ನಿ ನಿವೃತ್ತಿಯಾದ ಗಂಧವ ಧರಿಸಿ, ಅಹಂಕಾರ ನಿರಹಂಕಾರವಾದಕ್ಷತೆಯನಿಟ್ಟು, ಅಲ್ಲಿಹ ದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಹರಿತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ಸುಷುಪ್ತಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ, ನಿರ್ಲೋಭವೆಂಬಾಭರಣವ ತೊಡಿಸಿ, ಸುರೂಪವೆಂಬ ನೈವೇದ್ಯವನರ್ಪಿಸಿ, ಸಾವಧಾನವೆಂಬ ತಾಂಬೂಲವನಿತ್ತು, ಇಂತು ಶಿವಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಶಿವಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು ಆ ಶಿವಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ಶಿಂ ಶಿಂ ಶಿಂ ಶಿಂ ಶಿಂ ಶಿಂ ಎಂಬ ಶಿಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಶಿವಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿಃಕಳಂಕನಾಗಿ ಆಚರಿಸಬಲ್ಲಾತನೆ ಸಾವಧಾನಭಕ್ತಿಯನುಳ್ಳ ಶಿವಪ್ರಸಾದಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಬಳಿಕ್ಕಂ, ಶಿವಲಿಂಗದಲ್ಲಿ ಪಂಚಪ್ರಸಾದಮಂತ್ರ ನ್ಯಾಸಮಂ ಪೇಳ್ವೆನೆಂತೆನೆ- ಶಿವಲಿಂಗದ ಮಸ್ತಕದ ಮೇಲೆ ಹ ಎಂಬ ಶುದ್ಧ ಪ್ರಸಾದಮಂತ್ರಮಂ ನ್ಯಾಸಂಗೆಯ್ವುದು. ಸೂತ್ರ ಮಧ್ಯದಲ್ಲಿ ಹ್ರೌಂ ಎಂಬ ಮೂಲಪ್ರಸಾದಮಂತ್ರಮಂ ನ್ಯಾಸಂಗೆಯ್ವುದು. ಬಲದಭಾಗದಲ್ಲಿ ಹಂ ಎಂಬ ತತ್ವಪ್ರಸಾದಮಂ ನ್ಯಾಸಂಗೆಯ್ವು- ದೆಡದಭಾಗದಲ್ಲಿ ಹೌಂ ಎಂಬಾದಿಪ್ರಸಾದಮಂ ನ್ಯಾಸಂಗೆಯ್ವುದು. ಮಧ್ಯಸೂತ್ರದ ಬುಡದಲ್ಲಿ ಹಂಸ ಎಂಬಾತ್ಮಪ್ರಸಾದಮಂತ್ರಮಂ ನ್ಯಾಸಂಗೆಯ್ವುದಿಂತು `ಹ ಹ್ರೌಂ ಹಂ ಹೌಂ[ಹಂಸ]' ಎಂಬ ಪಂಚಪ್ರಸಾದಮಂತ್ರಂಗಳ ನ್ಯಾಸಂಗಳಂ ಶಿವಲಿಂಗದ ಪಂಚಸ್ಥಾನಂಗಳಲ್ಲಿ ನ್ಯಾಸೀಕರಿಸಿದೆಯಯ್ಯಾ, ಪರಮಗುರು ಪರಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಶೈವರು ಕಟ್ಟಿದ ಗುಡಿಯ ಹೊಗದ ಭಾಷೆ, ಶೈವರು ನಟ್ಟ ಲಿಂಗವ ಪೂಜಿಸದ ಭಾಷೆಯ ವಿವರವನೆನಗೆ ಪಾಲಿಸಯ್ಯಾ ! ದೇಹದ ದೇವಾಲಯದ ಮಧ್ಯದಲ್ಲಿ ಭಾವಿಸುತಿಪ್ಪ ಶಿವಲಿಂಗದ ಗೊತ್ತಿನ ಸುಖದ ಪರಿಣಾಮದ ಭಕ್ತಿಯ ನಿರಾವಲಂಬವನೆನಗೆ ಕೃಪೆಮಾಡಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಆಚಾರಲಿಂಗದ ಪ್ರಸನ್ನತ್ವದಿಂದ ಭಕ್ತ ಬಯಲಾದನು. ಗುರುಲಿಂಗದ ಪ್ರಸನ್ನತ್ವದಿಂದ ಮಹೇಶ್ವರ ಬಯಲಾದನು. ಶಿವಲಿಂಗದ ಪ್ರಸನ್ನತ್ವದಿಂದ ಪ್ರಸಾದಿ ಬಯಲಾದನು. ಜಂಗಮಲಿಂಗದ ಪ್ರಸನ್ನತ್ವದಿಂದ ಪ್ರಾಣಲಿಂಗಿ ಬಯಲಾದನು. ಪ್ರಸಾದಲಿಂಗದ ಪ್ರಸನ್ನತ್ವದಿಂದ ಶರಣ ಬಯಲಾದನು. ಮಹಾಲಿಂಗದ ಪ್ರಸನ್ನತ್ವದಿಂದ ಐಕ್ಯ ಬಯಲಾದನು. ಈ ಷಡ್ವಿಧಲಿಂಗದ ಪ್ರಸನ್ನೇತಿ ಪ್ರಸಾದದಲ್ಲಿ ಷಡಂಗವು ಸಮರಸವಾದವು. ಈ ಷಡ್ವಿಧಲಿಂಗದ ಪ್ರಸನ್ನೇತಿ ಪ್ರಸಾದವನ್ನೇ ಪದಾರ್ಥವ ಮಾಡಿ ಬ್ರಹ್ಮರಂಧ್ರದ ಸಹಸ್ರದಳಕಮಲಕರ್ಣಿಕಾಮಧ್ಯದಲ್ಲಿಪ್ಪ ಸಚ್ಚಿದಾನಂದ ನಿತ್ಯ ಪರಿಪೂರ್ಣವಪ್ಪ ಘನ ಚೈತನ್ಯವೆಂಬ ಪರಮ ಚರಲಿಂಗಕ್ಕೆ ಸಮರ್ಪಣವ ಮಾಡಿ ಆ ಪರಮ ಚರಲಿಂಗದ ಪ್ರಸನ್ನ ಪ್ರಸಾದದೊಳಗೂಡಿ ನಿರವಯವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗಿನಾ ಸಹವರ್ತಿತ್ವಂ ಲಿಂಗಿನಾ ಸಹ ವಾದಿತಾ ಲಿಂಗಿನಾ ಸಹಚಿಂತಾ ಚ ಲಿಂಗಯೋಗೋ ನ ಸಂಶಯಃ ಶಿವಲಿಂಗದ ಮಹಾತ್ಮೆಯನು ಶಿವಲಿಂಗದ ಮರ್ಮವನು ಶಿವಲಿಂಗದ ನಿಶ್ಚಯವನು ಇದಾರಯ್ಯ ಬಲ್ಲವರು ? ಆರಯ್ಯ ಅರಿವವರು, ಶ್ರೀಗುರು ಕರುಣಿಸಿ ತೋರಿ ಕೊಡದನ್ನಬರ ? `ಸರ್ವೈಶ್ವರ್ಯಸಂಪನ್ನಃ ಸರ್ವೇಶತ್ವಸಮಾಯುತಃ' ಎಂದುದಾಗಿ, `ಅಣೋರಣೀಯಾನ್ ಮಹತೋ ಮಹಿಮಾನ್' ಎಂದುದಾಗಿ, `ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂದುದಾಗಿ, ವೇದಪುರುಷರಿಗೂ ಅರಿಯಬಾರದು, ಅರಿಯಬಾರದ ವಸ್ತುವ ಕಾಣಿಸಬಾರದು, ಕಾಣಿಸಬಾರದ ವಸ್ತುವ ರೂಪಿಸಲೆಂತೂ ಬಾರದು, ರೂಪಿಸಬಾರದ ವಸ್ತುವ ಪೂಜಿಸಲೆಂತೂ ಬಾರದು. ಪೂಜೆಯಿಲ್ಲಾಗಿ ಭಕ್ತಿ ಇಲ್ಲ, ಭಕ್ತಿ ಇಲ್ಲಾಗಿ ಪ್ರಸಾದವಿಲ್ಲ, ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಮುಕ್ತಿ ಇಲ್ಲಾಗಿ ದೇವದಾನವಮಾನವರೆಲ್ಲರೂ ಕೆಡುವರು. ಕೆಡುವವರನು ಕೆಡದಂತೆ ಮಾಡಿ ರಕ್ಷಿಸಿದನು ಸದ್ಗುರು ಮದ್ಗುರು ಶ್ರೀಗುರು. `ನ ಗುರೋರಧಿಕಂ ನ ಗುರೋರಧಿಕಂ ಎಂದುದಾಗಿ, ಮಹಾಗುರು ಶಾಂತಮೂರ್ತಿ ಕೃಪಾಮೂರ್ತಿ ದಯಾಮೂರ್ತಿ ಲಿಂಗಪ್ರತಿಷೆ*ಯ ಮಾಡಿದನು. ಅದೆಂತೆನಲು ಕೇಳಿರೆ : ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಸಹ ನಾದಬಿಂದುಕಳಾತೀತಂ ಗುರುಣಾ ಲಿಂಗಮುದ್ಭವಂ ಎಂದುದಾಗಿ, ಸದ್ಗುರೋರ್ಭಾವಲಿಂಗಂ ತು ಸರ್ವಬ್ರಹ್ಮಾಂಡಗಂ ಶಿವಂ ಸರ್ವಲೋಕಸ್ಯ ತ್ರಾಣತ್ವಾತ್ ಮುಕ್ತಿಕ್ಷೇತ್ರಂ ತದುಚ್ಯತೇ ಎಂದುದಾಗಿ, `ಗುರುಣಾ ದೀಯತೇ ಲಿಂಗಂ' ಸರ್ವಲೋಕಕ್ಕೆಯೂ ಸರ್ವರಿಗೆಯೂ ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು ಅರೂಪೇ ಭಾವನಂ ನಾಸ್ತಿ ಯದ್ದೃಶ್ಯಂ ತದ್ವನಶ್ಯತಿ ಅದೃಶ್ಯಸ್ಯ ತು ರೂಪತ್ವೇ ಸಾದಾಖ್ಯಮಿತಿ ಕಥ್ಯತೇ ಎಂದುದಾಗಿ, ನಿಷ್ಕಳರೂಪ ನಿರವಯ ಧ್ಯಾನಪೂಜೆಗೆ ಅನುವಲ್ಲ. ಸಕಲತತ್ತ್ವ ಸಾಮಾನ್ಯವೆಂದು `ಸಕಲಂ ನಿಷ್ಕಲಂ ಲಿಂಗಂ ಎಂದುದಾಗಿ, `ಲಿಂಗಂ ತಾಪತ್ರಯಹರಂ ಎಂದುದಾಗಿ, `ಲಿಂಗಂ ದಾರಿದ್ರ್ಯನಾಶನಂ ಎಂದುದಾಗಿ, `ಲಿಂಗಂ ಪ್ರಸಾದರೂಪಂ ಚ ಲಿಂಗಂ ಸರ್ವಾರ್ಥಸಾಧನಂ ಎಂದುದಾಗಿ, `ಲಿಂಗಂ ಪರಂಜ್ಯೋತಿಃ ಲಿಂಗಂ ಪರಬ್ರಹ್ಮಂ ಎಂದುದಾಗಿ, ಲಿಂಗವನು ಪೂಜಿಸಿ ಭಕ್ತಿಪ್ರಸಾದ ಮುಕ್ತಿಯ ಪಡೆಯಲೆಂದು ಮಹಾದಾನಿ ಗುರುಲಿಂಗವು ಲಿಂಗಪ್ರತಿಷೆ*ಯಂ ಮಾಡಿಕೊಟ್ಟನು. ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ ಸರ್ವೇ ಲಿಂಗಾರ್ಚನಂ ಕೃತ್ವಾ ಜಾತಾಸ್ತೇ ಲಿಂಗಪೂಜಕಾಃ ಗೌರೀಪತಿರುಮಾನಾಥೋ ಅಂಬಿಕಾಪಾರ್ವತೀ ಪತಿಃ ಗಂಗಾಪತಿರ್ಮಹಾದೇವೋ ಸತತಂ ಲಿಂಗಪೂಜಕಾಃ ಎಂದುದಾಗಿ, ಈ ಮಹಾಪುರುಷರಪ್ಪ ದೇವಗಣ ರುದ್ರಗಣ ಪ್ರಮಥಗಣಂಗಳು ಬ್ರಹ್ಮವಿಷ್ಣ್ವಾದಿ ದೇವದಾನವಮಾನವರುಗಳು ಮಹಾಲಿಂಗವ ಧ್ಯಾನಿಸಿ ಪೂಜಿಸಿ ಪರಮಸುಖ ಪರಿಣಾಮವ ಪಡೆಯಲೆಂದು ಮಾಡಿದನು ಕೇವಲ ಸದ್ಭಕ್ತಜನಕ್ಕೆ. `ಇಷ್ಟಂ ಪ್ರಾಣಸ್ತಥಾ ಭಾವಸ್ತ್ರಿಧಾ ಏಕಂ' ಎಂದುದಾಗಿ, ಆ ಸದ್ಗುರು, ಆ ಪರಶಿವನನು ಆ ಸತ್ಪ್ರಾಣವನು ಏಕೀಭವಿಸಿ ಸದ್ಭಾವದಿಂ ಲಿಂಗಪ್ರತಿಷೆ*ಯ ಮಾಡಿ ಪ್ರಾಣಲಿಂಗವಾಗಿ ಕರಸ್ಥಲದಲ್ಲಿ ಬಿಜಯಂಗೈದು ಅಂತರಂಗ ಬಹಿರಂಗ ಭರಿತನಾಗಿ ಪೂಜೆಗೊಳಲೆಂದು ಕರುಣಿಸಿದನು. `ಏಕಮೂರ್ತಿಸ್ತ್ರಿಧಾ ಭೇದೋ' ಎಂದುದಾಗಿ, ಶ್ರೀಗುರುಲಿಂಗ ಪರಶಿವಲಿಂಗ ಜಂಗಮಲಿಂಗ ಒಂದೇ; `ದೇಶಿಕಶ್ಯರಲಿಂಗೇ ಚ ತ್ರಿವಿಧಂ ಲಿಂಗಮುಚ್ಯತೇ' ಎಂದುದಾಗಿ, ಲಿಂಗದ ಮರ್ಮವನು, ಲಿಂಗದ ಸಂಜ್ಞೆಯನು, ಲಿಂಗದ ನಿಶ್ಚಯವನು ಆದಿಯಲ್ಲೂ ಧ್ಯಾನ ಪೂಜೆಯ ಮಾಡಿದವರನೂ ಭಕ್ತಿಪ್ರಸಾದ ಮುಕ್ತಿಯ ಪಡೆದವರನೂ ವೇದ ಶಾಸ್ತ್ರ ಪುರಾಣ ಆಗಮಂಗಳು ಹೇಳುತ್ತಿವೆ, ಶಿವನ ವಾಕ್ಯಂಗಳಿವೆ. ಇದು ನಿಶ್ಚಯ, ಮನವೇ ನಂಬು ಕೆಡಬೇಡ. ಮಹಾಸದ್ಭಕ್ತರನೂ ನಂಬುವುದು, ಶಿವಲಿಂಗಾರ್ಚನೆಯ ನಿರಂತರ ಮಾಡುವುದು, ಇದು ನಿಶ್ಚಯ, ಶಿವನು ಬಲ್ಲನಯ್ಯಾ. ಈ ಕ್ರೀಯಲ್ಲಿ ಲಿಂಗವನರಿದು ವಿಶ್ವಾಸಂ ಮಾಡಿ ಕೇವಲ ಸದ್ಭಕ್ತಿಯಿಂದ ಪೂಜಿಸುವುದು ನಿರ್ವಂಚಕತ್ವದಿಂದ ತನು ಮನ ಧನವನರ್ಪಿಸುವುದು, ಕ್ರೀಯರಿದು ಮರ್ಮವರಿದು ಸದ್ಭಾವದಿಂ ಲಿಂಗಾರ್ಚನೆಯಂ ಮಾಡುವುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಆ ಶರಣನಲ್ಲಿಯ ಪ್ರಸಾದಿಗೆ ಆಕಾಶದಲ್ಲಿಯ ಅಗ್ನಿಯೇ ಅಂಗ. ಆ ಅಂಗಕ್ಕೆ ಸುಜ್ಞಾನದಲ್ಲಿಯ ನಿರಹಂಕಾರವೇ ಹಸ್ತ. ಆ ಹಸ್ತಕ್ಕೆ ಪ್ರಸಾದಲಿಂಗದಲ್ಲಿಯ ಶಿವಲಿಂಗವೇ ಲಿಂಗ. ಆ ಶಿವಲಿಂಗದ ಮುಖದಲ್ಲಿ ಕುರುಹುವಿಡಿದು ಹುಟ್ಟಿದ ಶಬ್ದದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪಿಂಡಬ್ರಹ್ಮಾಂಡಗಳಿಲ್ಲದಂದು ಅಷ್ಟದಿಕ್ಪಾಲಕರ ಹುಟ್ಟಿಲ್ಲದಂದು ನಿಷ್ಕಳ ಪರಂಜೋತಿ ತಾನೊಂದೆ ನೋಡಾ. ಅದು ತನ್ನ ಚಿತ್ಕಾಂತೆಯ ಸಂಗಸಮರಸದಿಂದ ಮಹಾಲಿಂಗವೆನಿಸಿತು. ಆ ಮಹಾಲಿಂಗವೇ ತನ್ನ ಪರಮಾನಂದದಿಂದ ಪ್ರಸಾದಲಿಂಗವೆಂದು ಜಂಗಮಲಿಂಗವೆಂದು ಶಿವಲಿಂಗವೆಂದು ಗುರುಲಿಂಗವೆಂದು ಆಚಾರಲಿಂಗವೆಂದು ಹೀಂಗೆ ಪಂಚಲಿಂಗವೆನಿಸಿತು. ಆ ಪಂಚಲಿಂಗಂಗಳ ಪ್ರಾಣ ಅಂಗ ಮುಖ ಪದಾರ್ಥಂಗಳಾವುವೆಂದರೆ- ಆಚಾರಲಿಂಗಕ್ಕೆ ಗುರುಲಿಂಗವೇ ಪ್ರಾಣ. ಆ ಪ್ರಾಣಕ್ಕೆ ಆಚಾರಲಿಂಗವೇ ಅಂಗ. ಆ ಅಂಗಕ್ಕೆ ಆಚಾರಲಿಂಗದ ಆಚಾರಾದಿ ಪ್ರಸಾದಲಿಂಗಂಗಳೇ ಪಂಚಮುಖ. ಆ ಮುಖಂಗಳಿಗೆ ಪಂಚಪ್ರಕಾರದ ಗಂಧಂಗಳೇ ದ್ರವ್ಯಪದಾರ್ಥ. ಗುರುಲಿಂಗಕ್ಕೆ ಶಿವಲಿಂಗವೇ ಪ್ರಾಣ. ಆ ಪ್ರಾಣಕ್ಕೆ ಗುರುಲಿಂಗವೇ ಅಂಗ. ಆ ಅಂಗಕ್ಕೆ ಶಿವಲಿಂಗದ ಆಚಾರಾದಿ ಪ್ರಸಾದಲಿಂಗಗಳೇ ಪಂಚಮುಖ. ಆ ಮುಖಂಗಳಿಗೆ ಪಂಚಪ್ರಕಾರದ ರೂಪಂಗಳೇ ದ್ರವ್ಯಪದಾರ್ಥ. ಜಂಗಮಲಿಂಗಕ್ಕೆ ಪ್ರಸಾದಲಿಂಗವೇ ಪ್ರಾಣ ಆ ಪ್ರಾಣಕ್ಕೆ ಜಂಗಮಲಿಂಗವೇ ಅಂಗ ಆ ಅಂಗಕ್ಕೆ ಜಂಗಮಲಿಂಗದ ಆಚಾರಾದಿ ಪ್ರಸಾದಲಿಂಗಗಳೇ ಪಂಚಮುಖ. ಆ ಮುಖಂಗಳಿಗೆ ಪಂಚಪ್ರಕಾರದ ಸ್ಪರ್ಶಂಗಳೇ ದ್ರವ್ಯಪದಾರ್ಥ. ಪ್ರಸಾದಲಿಂಗಕ್ಕೆ ಮಹಾಲಿಂಗವೇ ಪ್ರಾಣ. ಆ ಪ್ರಾಣಕ್ಕೆ ಪ್ರಸಾದಲಿಂಗವೇ ಅಂಗ ಆ ಅಂಗಕ್ಕೆ ಪ್ರಸಾದಲಿಂಗದ ಆಚಾರಾದಿ ಪ್ರಸಾದಲಿಂಗಂಗಳೇ ಪಂಚಮುಖ. ಆ ಮುಖಂಗಳಿಗೆ ಪಂಚಪ್ರಕಾರದ ಶಬ್ದಂಗಳೇ ದ್ರವ್ಯಪದಾರ್ಥ ಈ ಪ್ರಕಾರದಲ್ಲಿ ಪಂಚಲಿಂಗಂಗಳ ಪ್ರಾಣ ಅಂಗ ಮುಖ ಪದಾರ್ಥ ಇಂತಿವರ ನೆಲೆಯ ತಿಳಿದು ತಟ್ಟುವ ಮುಟ್ಟುವ ಸುಖಂಗಳ ಆಯಾ ಮುಖಂಗಳಿಗೆ ಕೊಟ್ಟು ತೃಪ್ತಿಯ ಭಾವದಿಂದ ಮಹಾಲಿಂಗಕ್ಕೆ ಸಮರ್ಪಿಸುವ ಅವಧಾನ ನಿಮ್ಮ ಶರಣರಿಗಲ್ಲದೆ ಮಿಕ್ಕ ಜಡಜೀವಿಗಳೆತ್ತ ಬಲ್ಲರೋ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಇನ್ನೀ ಲಿಂಗಮುಖಕ್ಕೆ ಅರ್ಪಿಸುವ ಅವಧಾನವಾವುದೆಂದೊಡೆ: ಪೃಥ್ವಿಯೇ ಅಂಗವಾದ ಭಕ್ತನು ಸುಚಿತ್ತವೆಂಬ ಹಸ್ತದಿಂದ ಆಚಾರಲಿಂಗಕ್ಕೆ ಘ್ರಾಣವೆಂಬ ಮುಖದಲ್ಲಿ ಗಂಧವ ಸಮರ್ಪಣವ ಮಾಡಿ ಆಚಾರಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಜಲವೇ ಅಂಗವಾದ ಮಾಹೇಶ್ವರನು ಸುಬುದ್ಧಿಯೆಂಬ ಹಸ್ತದಿಂದ ಗುರುಲಿಂಗಕ್ಕೆ ಜಿಹ್ವೆಯೆಂಬ ಮುಖದಲ್ಲಿ ರಸವನು ಸಮರ್ಪಣವ ಮಾಡಿ ಗುರುಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಅಗ್ನಿಯೇ ಅಂಗವಾದ ಪ್ರಸಾದಿಯು ನಿರಹಂಕಾರವೆಂಬ ಹಸ್ತದಿಂದ ಶಿವಲಿಂಗಕ್ಕೆ ನೇತ್ರವೆಂಬ ಮುಖದಲ್ಲಿ ರೂಪವ ಸಮರ್ಪಣವ ಮಾಡಿ ಶಿವಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ವಾಯುವೇ ಅಂಗವಾದ ಪ್ರಾಣಲಿಂಗಿಯು ಸುಮನವೆಂಬ ಹಸ್ತದಿಂದ ಜಂಗಮಲಿಂಗಕ್ಕೆ ತ್ವಕ್ಕೆಂಬ ಮುಖದಲ್ಲಿ ಸ್ಪರ್ಶನ ಸಮರ್ಪಣವಮಾಡಿ ಜಂಗಮಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಆಕಾಶವೇ ಅಂಗವಾದ ಶರಣನು ಸುಜ್ಞಾನವೆಂಬ ಹಸ್ತದಿಂದ ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ ಶಬ್ದವ ಸಮರ್ಪಣವ ಮಾಡಿ ಪ್ರಸಾದಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಆತ್ಮನೇ ಅಂಗವಾದ ಐಕ್ಯನು ಸದ್ಭಾವವೆಂಬ ಹಸ್ತದಿಂದ ಮಹಾಲಿಂಗಕ್ಕೆ ಮನೆವೆಂಬ ಮುಖದಲ್ಲಿ ತೃಪ್ತಿಯ ಸಮರ್ಪಣವ ಮಾಡಿ ಮಹಾಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಈ ಅರ್ಪಿತ ಅವಧಾನದ ಭೇದವನರಿದು ಭೋಗಿಸುವ ಭೋಗವಲ್ಲವು ಲಿಂಗಭೋಗ ಪ್ರಸಾದ, ಅಂಗಭೋಗ ಅನರ್ಪಿತ; ಅನಪಿರ್ತವೇ ಕರ್ಮದ ತವರುಮನೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನೊಮ್ಮೆಯೂ ಮುಟ್ಟವು.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅವಿಚಾರತೆಯಿಂ ಲೋಕದ ಜಡಮಾನವರಿಗೆ ಎರಗದಿಹುದುಳ್ಳೊಡೆ, ಶಿವಲಿಂಗದ ಮಸ್ತಕದಲ್ಲಿ ಧರಿಸುವದೀ ಕ್ರಮವರಿದು. ಧರಿಸಿದವರು ಶಿವತತ್ತ್ವದ ಮೂಲಜ್ಞಾನದ ಸಂಭವಸಂಧಿಗಳೆನಿಸುವರಾ ನಿಜಮಹಿಮರ ಚರಣಕೆ ಶರಣೆಂಬೆನು ಸದ್ಗುರುವೆ, ಪುರದ ಮಲ್ಲಯ್ಯಾ.
--------------
ಗುರುಪುರದ ಮಲ್ಲಯ್ಯ
ನವನಾಳಂಗಳ ಬಲಿದು ಶಿವಧ್ಯಾನದಲ್ಲಿ ಕುಳ್ಳಿರ್ದು ಭಾವದ ದೃಕ್ಕಿನಿಂದ ನವಲಿಂಗಗಳ ನೋಡಿ ಪೂಜಿಸಿ, ಕದಡುವ ಭೇದವೆಂತೆಂದೊಡೆ : ಆಧಾರಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಆಚಾರಲಿಂಗಕ್ಕೆ ಶಿವಾನಂದ ಜಲದಿಂ ಮಜ್ಜನಕ್ಕೆರೆದು ಪೃಥ್ವಿ ನಿವೃತ್ತಿಯಾದ ಗಂಧವ ಧರಿಸಿ, ಚಿತ್ತ ಸುಚಿತ್ತವಾದ ಅಕ್ಷತೆಯನಿಟ್ಟು, ಅಲ್ಲಿಯ ಚತುರ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಯ ಪೀತವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ, ಅಲ್ಲಿಯ ಜಾಗ್ರಾವಸ್ಥೆಯೆಂಬ ನವೀನ ವಸ್ತ್ರವ ಹೊದಿಸಿ, ನಿಷ್ಕಾಮವೆಂಬ ಆಭರಣವ ತೊಡಿಸಿ, ಸುಗಂಧವೆಂಬ ನೈವೇದ್ಯವನರ್ಪಿಸಿ, ಶ್ರದ್ಧೆಯೆಂಬ ತಾಂಬೂಲವನಿತ್ತು, ಇಂತು ಆಚಾರಲಿಂಗದ ಅಷ್ಟವಿಧಾರ್ಚನೆಯ ಮಾಡಿ, ಕೋಟಿಸೂರ್ಯಪ್ರಭೆಯಂತೆ ಬೆಳಗುವ ಆಚಾರಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಆಚಾರಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ನಂ ನಂ ನಂ ನಂ ನಂ ನಂ ಎಂಬ ನಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಆಚಾರಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ, ಸ್ವಾಧಿಷಾ*ನಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಗುರುಲಿಂಗಕ್ಕೆ ಪರಿಣಾಮವೆಂಬ ಜಲದಿಂ ಮಜ್ಜನಕ್ಕೆರೆದು, ಅಪ್ಪು ನಿವೃತ್ತಿಯಾದ ಗಂಧವ ಧರಿಸಿ ಬುದ್ಧಿ ಸುಬುದ್ಧಿಯಾದ ಅಕ್ಷತೆಯನಿಟ್ಟು ಅಲ್ಲಿಯ ಷಡುದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲ ಸದ್ವಾಸನೆಯ ಧೂಪವ ಬೀಸಿ, ಅಲ್ಲಿಯ ನೀಲವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ ಅಲ್ಲಿಯ ಸ್ವಪ್ನಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿಃಕ್ರೋಧವೆಂಬ ಆಭರಣವ ತೊಡಿಸಿ ಸುರುಚಿಯೆಂಬ ನೈವೇದ್ಯವನರ್ಪಿಸಿ, ನಿಷೆ*ಯೆಂಬ ತಾಂಬೂಲವನಿತ್ತು, ಇಂತು ಗುರುಲಿಂಗದ ಅಷ್ಟವಿಧಾರ್ಚನೆಯ ಮಾಡಿ, ಕೋಟಿಸೂರ್ಯಪ್ರಭೆಯಂತೆ ಬೆಳಗುವ ಗುರುಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಗುರುಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ, ಓಂ ಮಂ ಮಂ ಮಂ ಮಂ ಮಂ ಮಂ ಎಂಬ ಮಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಗುರುಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ ಮಣಿಪೂರಕವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಶಿವಲಿಂಗಕ್ಕೆ ಪರಮಾನಂದವೆಂಬ ಜಲದಿಂ ಮಜ್ಜನಕ್ಕೆರೆದು, ಅಗ್ನಿನಿವೃತ್ತಿಯಾದ ಗಂಧವ ಧರಿಸಿ ಅಹಂಕಾರ ನಿರಹಂಕಾರವಾದ ಅಕ್ಷತೆಯನಿಟ್ಟು ಅಲ್ಲಿಯ ದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ ಅಲ್ಲಿ ಕಮಲ ಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಕೆಂಪುವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ ಅಲ್ಲಿಯ ಸುಷುಪ್ತಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಲೋಭವೆಂಬ ಆಭರಣವ ತೊಡಿಸಿ ಸುರೂಪವೆಂಬ ನೈವೇದ್ಯವನರ್ಪಿಸಿ ಸಾವಧಾನವೆಂಬ ತಾಂಬೂಲವನಿತ್ತು, ಇಂತು ಶಿವಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿಸೂರ್ಯಪ್ರಭೆಯಂತೆ ಬೆಳಗುವ ಶಿವಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತಸಂಗೊಂಡು ಆ ಶಿವಲಿಂಗದ ಪೂಜೆಯ ನಿರ್ಮಾಲ್ಯಮಂ ಮಾಡದೆ, ಓಂ ಶಿಂ ಶಿಂ ಶಿಂ ಶಿಂ ಶಿಂ ಶಿಂ ಎಂಬ ಶಿಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಶಿವಲಿಂಗವನು ಕೂಡಿ ಎಡರಳಿದು, ಅಲ್ಲಿಂದ ಮುಂದಕ್ಕೆ ಹೋಗಿ ಅನಾಹತಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಜಂಗಮಲಿಂಗಕ್ಕೆ ಶಾಂತಿಯೆಂಬ ಜಲದಿಂ ಮಜ್ಜನಕ್ಕೆರೆದು ವಾಯುನಿವೃತ್ತಿಯಾದ ಗಂಧವ ಧರಿಸಿ ಮನ ಸುಮನವಾದ ಅಕ್ಷತೆಯನಿಟ್ಟು ಅಲ್ಲಿಯ ದ್ವಾದಶದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲ ಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಮಾಂಜಿಷ್ಟವರ್ಣವನೆ ಕರ್ಪುರದಜ್ಯೋತಿಯೆಂದು ಬೆಳಗಿ, ಅಲ್ಲಿಯ ತೂರ್ಯಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮೋಹವೆಂಬ ಆಭರಣವ ತೊಡಿಸಿ ಸುಸ್ಪರ್ಶನವೆಂಬ ನೈವೇದ್ಯವನರ್ಪಿಸಿ ಅನುಭಾವವೆಂಬ ತಾಂಬೂಲವನಿತ್ತು ಇಂತು ಜಂಗಮಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡಿ, ಕೋಟಿಸೂರ್ಯಪ್ರಭೆಯಂತೆ ಬೆಳಗುವ ಜಂಗಮಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಜಂಗಮಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ವಾಂ ವಾಂ ವಾಂ ವಾಂ ವಾಂ ವಾಂ ಎಂಬ ವಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಜಂಗಮಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ ವಿಶುದ್ಧಿಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಪ್ರಸಾದಲಿಂಗಕ್ಕೆ ಕ್ಷಮೆಯೆಂಬ ಜಲದಿಂ ಮಜ್ಜನಕ್ಕೆರೆದು ಗಗನನಿವೃತ್ತಿಯಾದ ಗಂಧವ ಧರಿಸಿ, ಜ್ಞಾನ ಸುಜ್ಞಾನವಾದ ಅಕ್ಷತೆಯನಿಟ್ಟು, ಅಲ್ಲಿಯ ಷೋಡಶದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಯ ಕೃಷ್ಣವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ, ಅಲ್ಲಿಯ ತೂರ್ಯಾತೀತಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮದವೆಂಬ ಆಭರಣವ ತೊಡಿಸಿ ಸುಶಬ್ದವೆಂಬ ನೈವೇದ್ಯವನರ್ಪಿಸಿ ಆನಂದವೆಂಬ ತಾಂಬೂಲವನಿತ್ತು, ಇಂತು ಪ್ರಸಾದಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿ ಸೂರ್ಯಪ್ರಭೆಯಂತೆ ಬೆಳಗುವ ಪ್ರಸಾದಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಪ್ರಸಾದಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ಯಂ ಯಂ ಯಂ ಯಂ ಯಂ ಯಂ ಎಂಬ ಯಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಪ್ರಸಾದಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ ಆಜ್ಞಾಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಮಹಾಲಿಂಗಕ್ಕೆ ಸಂತೋಷವೆಂಬ ಜಲದಿಂ ಮಜ್ಜನಕ್ಕೆರೆದು ಆತ್ಮನಿವೃತ್ತಿಯಾದ ಗಂಧವ ಧರಿಸಿ, ಭಾವ ಸದ್ಭಾವವಾದ ಅಕ್ಷತೆಯನಿಟ್ಟು, ಅಲ್ಲಿಯ ದ್ವಿದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಮಾಣಿಕ್ಯವರ್ಣವನೆ ಕರ್ಪುರದಜ್ಯೋತಿಯೆಂದು ಬೆಳಗಿ, ಅಲ್ಲಿಯ ನಿರಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮಲವೆಂಬ ಆಭರಣವ ತೊಡಿಸಿ ಸುತೃಪ್ತಿಯೆಂಬ ನೈವೇದ್ಯವನರ್ಪಿಸಿ ಸಮರಸವೆಂಬ ತಾಂಬೂಲವನಿತ್ತು, ಇಂತು ಮಹಾಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿಸೂರ್ಯಪ್ರಭೆಯಂತೆ ಬೆಳಗುವ ಮಹಾಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಮಹಾಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ, ಓಂ ಒಂ ಒಂ ಒಂ ಒಂ ಒಂ ಒಂ ಎಂಬ ಓಂಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಮಹಾಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ ಬ್ರಹ್ಮರಂಧ್ರವೆಂಬ ಸಹಸ್ರದಳಮಂಟಪದಲ್ಲಿ ಮೂರ್ತಿಗೊಂಡಿರ್ದ ನಿಷ್ಕಳಲಿಂಗಕ್ಕೆ ಅನುಪಮವೆಂಬ ಜಲದಿಂ ಮಜ್ಜನಕ್ಕೆರೆದು ಅನಾದಿಯೆಂಬ ಗಂಧವ ಧರಿಸಿ, ಅಗಮ್ಯವೆಂಬ ಅಕ್ಷತೆಯನಿಟ್ಟು ಅವಿರಳವೆಂಬ ಪುಷ್ಪದ ಮಾಲೆಯ ಧರಿಸಿ, ಅಪ್ರಮಾಣವೆಂಬ ಧೂಪವ ಬೀಸಿ ಅಖಂಡವೆಂಬ ಜ್ಯೋತಿಯ ಬೆಳಗಿ ಸತ್ಯವೆಂಬ ವಸ್ತ್ರವ ಹೊದಿಸಿ ಸದಾನಂದವೆಂಬ ಆಭರಣವ ತೊಡಿಸಿ ನಿತ್ಯವೆಂಬ ನೈವೇದ್ಯವನರ್ಪಿಸಿ ನಿರುಪಮವೆಂಬ ತಾಂಬೂಲವನಿತ್ತು, ಇಂತು ನಿಷ್ಕಲಲಿಂಗದ ಅಷ್ಟವಿಧಾರ್ಚನೆಯ ಮಾಡಿ ಅನಂತಕೋಟಿಸೂರ್ಯಪ್ರಭೆಯಂತೆ ಬೆಳಗುವ ನಿಷ್ಕಲಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ನಿಷ್ಕಲಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಅಗಣಿತವೆಂಬ ನಮಸ್ಕಾರಮಂ ಮಾಡಿ, ಆ ನಿಷ್ಕಲಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ ಶಿಖಾಚಕ್ರವೆಂಬ ತ್ರಿದಳಮಂಟಪದಲ್ಲಿ ಮೂರ್ತಿಗೊಂಡಿರ್ದ ಶೂನ್ಯಲಿಂಗಕ್ಕೆ ನಿರ್ಭಾವವೆಂಬ ಜಲದಿಂ ಮಜ್ಜನಕ್ಕೆರೆದು, ನಿರ್ಜಾತವೆಂಬ ಗಂಧವ ಧರಿಸಿ ನಿರ್ಜಡವೆಂಬ ಅಕ್ಷತೆಯನಿಟ್ಟು ನಿಧ್ರ್ವಂದ್ವವೆಂಬ ಪುಷ್ಪದಮಾಲೆಯ ಧರಿಸಿ ನಿರ್ಲಜ್ಜೆಯೆಂಬ ಧೂಪವ ಬೀಸಿ ನಿರಾಭಾರವೆಂಬ ಜ್ಯೋತಿಯ ಬೆಳಗಿ ನಿರಾಮಯವೆಂಬ ವಸ್ತ್ರವ ಹೊದಿಸಿ ನಿಸ್ಪೃಹವೆಂಬ ಆಭರಣವ ತೊಡಸಿ ನಿರಾಳವೆಂಬ ನೈವೇದ್ಯವನರ್ಪಿಸಿ ನಿರಾಲಂಬವೆಂಬ ತಾಂಬೂಲವನಿತ್ತು, ಇಂತು ಶೂನ್ಯಲಿಂಗದ ಅಷ್ಟವಿಧಾರ್ಚನೆಯಂ ಮಾಡಿ, ಅಗಣಿತ ಕೋಟಿಸೂರ್ಯ ಪ್ರಭೆಯಂತೆ ಬೆಳಗುವ ಶೂನ್ಯಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಶೂನ್ಯಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ನಿರ್ಭೇದ್ಯವೆಂಬ ನಮಸ್ಕಾರಮಂ ಮಾಡಿ ಆ ಶೂನ್ಯಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ, ಪಶ್ಚಿಮಚಕ್ರವೆಂಬ ಏಕದಳಮಂಟಪದಲ್ಲಿ ಮೂರ್ತಿಗೊಂಡಿರ್ದ ನಿರಂಜನಲಿಂಗಕ್ಕೆ ನಿರ್ನಾಮವೆಂಬ ಜಲದಿಂ ಮಜ್ಜನಕ್ಕೆರೆದು ನಿಷ್ಕಾರಣವೆಂಬ ಗಂಧವ ಧರಿಸಿ ನಿಃಸಂಗವೆಂಬ ಅಕ್ಷತೆಯನಿಟ್ಟು ನಿಸ್ಸಾರವೆಂಬ ಪುಷ್ಪವ ಧರಿಸಿ ನಿರುಪಾಧಿಕವೆಂಬ ಧೂಪವ ಬೀಸಿ ನಿಷ್ಕಳೆಯೆಂಬ ಜ್ಯೋತಿಯ ಬೆಳಗಿ ನಿಶ್ಚಲವೆಂಬ ವಸ್ತ್ರವ ಹೊದಿಸಿ ನಿರ್ವಾಸನೆಯೆಂಬ ಆಭರಣವ ತೊಡಿಸಿ ನಿಃಶೂನ್ಯವೆಂಬ ನೈವೇದ್ಯವನರ್ಪಿಸಿ ನಿರವಯವೆಂಬ ತಾಂಬೂಲವನಿತ್ತು, ಇಂತು ನಿರಂಜನಲಿಂಗದ ಅಷ್ಟವಿಧಾರ್ಚನೆಯ ಮಾಡಿ ತೆರಹಿಲ್ಲದೆ ಬೆಳಗಿನ ಮಹಾಬೆಳಗನೊಳಕೊಂಡು ಬೆಳಗುವ ನಿರಂಜನಲಿಂಗವನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು ಆ ನಿರಂಜನಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ, ನಿಃಶಬ್ದವೆಂಬ ನಮಸ್ಕಾರಮಂ ಮಾಡಿ ಆ ನಿರಂಜನಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದೆ ನೋಡಲು ಬಚ್ಚಬರಿಯ ಬಯಲಿರ್ಪುದ ಕಂಡು ಆ ಬಯಲೆ ತನ್ನ ನಿಜನಿವಾಸವೆಂದು ತಿಳಿದು ಆ ನಿಜವಾಸದಲ್ಲಿ ತಾ ನಿಂದು ತನ್ನಿಂದ ಕೆಳಗಣ ನವಚಕ್ರಂಗಳಲ್ಲಿರ್ದ ನವಲಿಂಗಗಳ ಪೂಜೆಯ ನಿರಂತರದಲ್ಲಿ ಮಾಡುವ ಶಿವಯೋಗಿಗೆ ಭವಬಂಧನವಿಲ್ಲ. ಆ ಭವಬಂಧನವಿಲ್ಲವಾಗಿ ಜೀವಕಲ್ಪಿತವು ಮುನ್ನವೇ ಇಲ್ಲ. ಆ ಜೀವಕಲ್ಪಿತವಿಲ್ಲವಾಗಿ ಆತನು ಪರಿಪೂರ್ಣನಾಗಿ ಪರಾತ್ಪರನಾಗಿ ಪರಶಿವಬ್ರಹ್ಮವೇ ಆಗಿ ಇರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನಿಃಕಲ ಶಿವನ ಮಧ್ಯದಲ್ಲಿ ಚಚ್ಛಕ್ತಿ ಉದಯಿಸಿದಳು. ಆ ಚಿಚ್ಛಕ್ತಿಯ ಮಧ್ಯದಲ್ಲಿ ಶಾಂತ್ಯತೀತೋತ್ತರೆಯೆಂಬ ಕಲೆ. ಆ ಶಾಂತ್ಯತೀತೋತ್ತರೆಯೆಂಬ ಕಲೆಯ ಮಧ್ಯದಲ್ಲಿ ಮಹಾಲಿಂಗ. ಆತ ಮಹಾಲಿಂಗದ ಮಧ್ಯದಲ್ಲಿ ನಿರ್ಮುಕ್ತಸಾದಾಖ್ಯ. ಆ ನಿರ್ಮುಕ್ತಸಾದಾಖ್ಯದ ಮಧ್ಯದಲ್ಲಿ ಪಶುಪತಿಯೆಂಬ ಕಲಾಮೂರ್ತಿ. ಆ ಪಶುಪತಿಯೆಂಬ ಕಲಾಮೂರ್ತಿಯ ಮಧ್ಯದಲ್ಲಿ ಶಿವನೆಂಬ ಐಕ್ಯನು. ಆ ಶಿವನೆಂಬ ಐಕ್ಯನ ಮಧ್ಯದಲ್ಲಿ ಉಪಮಾತೀತನು. ಆ ಉಪಮಾತೀತನ ಮಧ್ಯದಲ್ಲಿ ಆತ್ಮನು. -ಇಂತು ಮಹಾಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಪರಾಶಕ್ತಿ; ಆ ಪರಾಶಕ್ತಿಯ ಮಧ್ಯದಲ್ಲಿ ಶಾಂತ್ಯಾತೀತೆಯೆಂಬ ಕಲೆ. ಆ ಶಾಂತ್ಯಾತೀತೆಯೆಂಬ ಕಲೆಯ ಮಧ್ಯದಲ್ಲಿ ಪ್ರಸಾದಲಿಂಗ. ಆ ಪ್ರಸಾದಲಿಂಗದ ಮಧ್ಯದಲ್ಲಿ ಶಿವಸಾದಾಖ್ಯ. ಆ ಶಿವಸಾದಾಖ್ಯದ ಮಧ್ಯದಲ್ಲಿ ಮಹಾದೇವನೆಂಬ ಕಲಾಮೂರ್ತಿ. ಆ ಮಹಾದೇವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಕ್ಷೇತ್ರಜ್ಞನೆಂಬ ಶರಣ. ಆ ಶರಣನ ಮಧ್ಯದಲ್ಲಿ ಸದಾಶಿವನು. ಆ ಸದಾಶಿವನ ಮಧ್ಯದಲ್ಲಿ ಆಕಾಶ. ಇಂತು ಶಿವಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಆದಿಶಕ್ತಿ. ಆ ಆದಿಶಕ್ತಿಯ ಮಧ್ಯದಲ್ಲಿ ಶಾಂತಿಯೆಂಬ ಕಲೆ. ಆ ಶಾಂತಿಯೆಂಬ ಕಲೆಯ ಮಧ್ಯದಲ್ಲಿ ಜಂಗಮಲಿಂಗ. ಆ ಜಂಗಮಲಿಂಗದ ಮಧ್ಯದಲ್ಲಿ ಅಮೂರ್ತಿಸಾದಾಖ್ಯ. ಆ ಅಮೂರ್ತಿಸಾದಾಖ್ಯದ ಮಧ್ಯದಲ್ಲಿ ಭೀಮೇಶ್ವರನೆಂಬ ಕಲಾಮೂರ್ತಿ. ಆ ಭೀಮೇಶ್ವರನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಕರ್ತಾರನೆಂಬ ಪ್ರಾಣಲಿಂಗಿ. ಆ ಕರ್ತಾರನೆಂಬ ಪ್ರಾಣಲಿಂಗಿಯ ಮಧ್ಯದಲ್ಲಿ ಈಶ್ವರ. ಆ ಈಶ್ವರನ ಮಧ್ಯದಲ್ಲಿ ವಾಯು. -ಇಂತು ಅಮೂರ್ತಿಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಇಚ್ಛಾಶಕ್ತಿ. ಆ ಇಚ್ಛಾಶಕ್ತಿಯ ಮಧ್ಯದಲ್ಲಿ ವಿದ್ಯೆಯೆಂಬ ಕಲೆ. ಆ ವಿದ್ಯೆಯೆಂಬ ಕಲೆಯ ಮಧ್ಯದಲ್ಲಿ ಶಿವಲಿಂಗ. ಆ ಶಿವಲಿಂಗದ ಮಧ್ಯದಲ್ಲಿ ಮೂರ್ತಿಸಾದಾಖ್ಯ. ಆ ಮೂರ್ತಿಸಾದಾಖ್ಯದ ಮಧ್ಯದಲ್ಲಿ ಮಹಾರುದ್ರನೆಂಬ ಕಲಾಮೂರ್ತಿ. ಆ ಮಹಾರುದ್ರನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಭಾವನೆಂಬ ಪ್ರಸಾದಿ. ಆ ಭಾವನೆಂಬ ಪ್ರಸಾದಿಯ ಮಧ್ಯದಲ್ಲಿ ರುದ್ರನು. ಆ ರುದ್ರನ ಮಧ್ಯದಲ್ಲಿ ಅಗ್ನಿ. -ಇಂತು ಮೂರ್ತಿಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಪ್ರತಿಷೆ*ಯೆಂಬ ಕಲೆ. ಆ ಪ್ರತಿಷೆ*ಯೆಂಬ ಕಲೆಯ ಮಧ್ಯದಲ್ಲಿ ಗುರುಲಿಂಗ. ಆ ಗುರುಲಿಂಗದ ಮಧ್ಯದಲ್ಲಿ ಕರ್ತುಸಾದಾಖ್ಯ. ಆ ಕರ್ತುಸಾದಾಖ್ಯದ ಮಧ್ಯದಲ್ಲಿ ಸರ್ವನೆಂಬ ಕಲಾಮೂರ್ತಿ. ಆ ಸರ್ವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಚೈತನ್ಯವೆಂಬ ಮಾಹೇಶ್ವರ. ಆ ಚೈತನ್ಯನೆಂಬ ಮಾಹೇಶ್ವರನ ಮಧ್ಯದಲ್ಲಿ ವಿಷ್ಣು. ಆ ವಿಷ್ಣುವಿನ ಮಧ್ಯದಲ್ಲಿ ಅಪ್ಪು. -ಇಂತು ಕರ್ತುಸಾದಾಖ್ಯದ ಸೃಷ್ಟಿ. ಆ ನಿಃಕಲ ಶಿವನ ಮಧ್ಯದಲ್ಲಿ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಮಧ್ಯದಲ್ಲಿ ನಿವೃತ್ತಿಯೆಂಬ ಕಲೆ. ಆ ನಿವೃತ್ತಿಯೆಂಬ ಕಲೆಯ ಮಧ್ಯದಲ್ಲಿ ಆಚಾರಲಿಂಗ. ಆ ಆಚಾರಲಿಂಗದ ಮಧ್ಯದಲ್ಲಿ ಕರ್ಮಸಾದಾಖ್ಯ. ಆ ಕರ್ಮಸಾದಾಖ್ಯದ ಮಧ್ಯದಲ್ಲಿ ಭವನೆಂಬ ಕಲಾಮೂರ್ತಿ. ಆ ಭವನೆಂಬ ಕಲಾಮೂರ್ತಿಯ ಮಧ್ಯದಲ್ಲಿ ಅಂತರ್ಯಾಮಿಯೆಂಬ ಭಕ್ತ. ಆ ಅಂತರ್ಯಾಮಿಯೆಂಬ ಭಕ್ತನ ಮಧ್ಯದಲ್ಲಿ ಬ್ರಹ್ಮ. ಆ ಬ್ರಹ್ಮನ ಮಧ್ಯದಲ್ಲಿ ಪೃಥ್ವಿ. ಆ ಬ್ರಹ್ಮನಿಂದ ನರರು ಸುರರು ಅಸುರರು ಅಂಡಜ ಸ್ವೇದಜ ಉದ್ಭಿಜ ಜರಾಯುಜವೆಂಬ ಸಕಲ ಚರಾಚರಂಗಳೆಲ್ಲವೂ ಹುಟ್ಟಿದವು. ಇಂತಿವೆಲ್ಲವು ಶಿವನ ನೆನಹುಮಾತ್ರದಿಂದಲಾದವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->