ಅಥವಾ

ಒಟ್ಟು 129 ಕಡೆಗಳಲ್ಲಿ , 32 ವಚನಕಾರರು , 98 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಾತ್ಮನದೊಂದು ಅರಸುತನದ ಅನ್ಯಾಯವ ಕೇಳಯ್ಯ ಗುರುವೆ. ಪಂಚಭಕ್ಷ ್ಯ ಪರಮಾಮೃತವ ಸದಾ ದಣಿಯಲುಂಡು ಒಂದು ದಿನ ಸವಿಯೂಟ ತಪ್ಪಿದರೆ ಹಲವ ಹಂಬಲಿಸಿ ಹಲುಗಿರಿದು, ಎನ್ನ ಕೊಂದು ಕೂಗುತ್ತಿದೆ ನೋಡಾ. ಶ್ವಪಚನನುತ್ತಮನ ಕೂಡೆ ಸಂಕಲೆಯನಿಕ್ಕುವರೆ ಅಯ್ಯ?. ಕಲಸಿ ಕಲಸಿ ಕೈಬೆರಲು ಮೊಂಡಾದವು. ಅಗಿದಗಿದು ಹಲ್ಲುಚಪ್ಪಟನಾದವು. ಉಂಡುಂಡು ಬಾಯಿ ಜಡ್ಡಾಯಿತು. ಹೇತು ಹೇತು ಮುಕುಳಿ ಮುರುಟುಗಟ್ಟಿತ್ತು. ಸ್ತ್ರೀಯರ ಕೂಡಿಕೂಡಿ ಶಿಶ್ನ ಸವೆದು ಹೋಯಿತ್ತು. ತನುಹಳದಾಗಿ ಅಲ್ಲಲ್ಲಿಗೆ ಕಣ್ಣು ಪಟ್ಟಿತ್ತು. ಮನ ಹೊಸದಾಗಿ ಹನ್ನೆರಡುವರ್ಷದ ರಾಜಕುಮಾರನಾದೆನು. ಇನ್ನೇವೆನಿನ್ನೇವೆನಯ್ಯ ಎನ್ನ ಕೇಡಿಂಗೆ ಕಡೆಯಿಲ್ಲ. ಕಾಯವಿಕಾರವೆಂಬ ಕತ್ತಲೆ ಕವಿಯಿತು. ಮನೋವಿಕಾರವೆಂಬ ಮಾಯೆ ಸೆರೆವಿಡಿದಳು. ಇಂದ್ರಿಯವಿಕಾರವೆಂಬ ಹುಚ್ಚುನಾಯಿಗಳು ಕಚ್ಚಿ ಕಚ್ಚಿ ಒದರುತ್ತಿವೆ. ಕಾಮ ವಿಕಾರವೆಂಬ ಕಾಳರಕ್ಕಸಿ ಅಗಿದಗಿದು ನುಂಗುತಿಹಳು. ಕಾಯಾಲಾಗದೆ ದೇವ?. ಸಾವನ್ನಬರ ಸರಸವುಂಟೆ ಲಿಂಗಯ್ಯ?. ಅನ್ಯಸಮಯದ ಗುಮ್ಮಟನ ಕೈವಿಡಿದೆತ್ತಿಕೊಂಡೆ. ನಿನ್ನ ಸಮಯದ ಶಿಶು ಬಾವಿಯಲ್ಲಿ ಬೀಳ್ವುದ ನೋಡುತ್ತಿಪ್ಪರೆ ಕರುಣಿ?. ಮುಕ್ತಿಗಿದೇ ಪಯಣವೋ ತಂದೆ?. ನೀನಿಕ್ಕಿದ ಮಾಯಾಸೂತ್ರಮಂ ಹರಿದು, ದಶೇಂದ್ರಿಯಂಗಳ ಗುಣವ ನಿವೃತ್ತಿಯಂ ಮಾಡಿ, ಅಂಗಭೋಗ-ಆತ್ಮಭೋಗಂಗಳನಡಗಿಸಿ, ಲಿಂಗದೊಳು ಮನವ ನೆಲೆಗೊಳಿಸಿ, ಎನ್ನ ಪಟದೊಳಗಣ ಚಿತ್ರದಂತೆ ಮಾಡಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ನೀರ ನೆಳಲನೆ ಕಡಿದು, ಮೇರುವೆಂಬುದ ನುಂಗಿ, ಶಾರದೆಯೆಂಬವಳ ಬಾಯ ಕಟ್ಟಿ, ಕಾರ ಮೇಘದ ಬೆಳಸ ನೀರ ಹರಿ ನುಂಗಲು ದಾರಿ ಮೃತ್ಯುವ ನುಂಗಿ ನಗುತ್ತಿದ್ದಿತು. ನಾರಿಯ ಬೆನ್ನ ಮೇಲೆ ಗಂಡ ಬಂದು ಕುಳ್ಳಿರಲು, ನೀರ ಹೊಳೆಯವರೆಲ್ಲರ ಕೊಡನೊಡೆದವು. ಕಾರೆಯ ಮುಳ್ಳೆರ್ದು ಕಲಿಗಳನಟ್ಟಿ ಸದೆವಾಗ, ಸೋರುಮುಡಿಯಾಕೆ ಗೊರವನ ನೆರೆದಳು. ಬಳ್ಳು ಆನೆಯ ನುಂಗಿ, ಹೊಳೆ (ಒಳ್ಳೆ ?) ಸಮುದ್ರವ ಕುಡಿದು, ಕುಳ್ಳಿರ್ದ ಶಿಶು ಹಲಬರನೆಯ್ದೆ ನುಂಗಿ, ಅತ್ತೆ ಅಳಿಯನ ಕೂಡಿ ಕೋಡಗವ ಹಡೆದಲ್ಲಿ, ಹತ್ತಿರಿರ್ದ ಹಾವಾಡಿಗನನು ಅದು ನುಂಗಿತ್ತು! ಕಪ್ಪೆ ಸರ್ಪನ ಹಿಡಿದು ಒತ್ತಿ ನುಂಗುವಾಗ, ಕಪ್ಪೆಯ ಕೊರಳಲ್ಲಿ ಬಿಳಿದು ಕೆಂಪಡರಲು, ನಿಶ್ಚಿಂತವಾಯಿತ್ತು ಗುಹೇಶ್ವರನ ಶರಣಂಗೆ, ಕಟ್ಟಿದಿರ ಕರ್ಪುರದ ಜ್ಯೋತಿಯಂತೆ!
--------------
ಅಲ್ಲಮಪ್ರಭುದೇವರು
ಮನೆಯೊಳಗಣ ಜ್ಯೋತಿ ಮನೆಯ ಮುಟ್ಟದಂತೆ, ಬಸುರೊಳಗಣ ಶಿಶು ಬಸುರ ಮುಟ್ಟದಂತೆ, ಕಕ್ಷೆ, ಕರಸ್ಥಳ, ಅಂಗಸೋಂಕು ಮುಖಸೆಜ್ಜೆ ಕಂಠ ಉತ್ತಮಾಂಗ, ಇವೆಲ್ಲ ಆಯತಂಗಳಲ್ಲದೆ ಪ್ರಾಣಲಿಂಗಸ್ಥಳ ಬೇರೆ. ಇದು ಕಾರಣ ಕೂಡಲಚೆನ್ನಸಂಗಾ ನಿಮ್ಮ ಶರಣನ ಪರಿ ಬೇರೆ.
--------------
ಚನ್ನಬಸವಣ್ಣ
ಜಂಗಮಪ್ರಸಾದ ಮುಂತಾಗಿಯಲ್ಲದೆ ಒಲ್ಲೆನೆಂಬ ಭಕ್ತನ ಕಟ್ಟಳೆಯ ವಿವರ: ಶಿಶು, ಬಂಧುಗಳು, ಚೇಟಿ, ಬೆವಸಾಯವ ಮಾಡುವವರು ಮುಂತಾದ ಇವರಿಗೆಲ್ಲಕ್ಕೂ ಒಡೆಯರಿಗೆ ಸಲುವುದಕ್ಕೆ ಮುನ್ನವೆ ಸೀತಾಳ ಶಿವದಾನವೆಂದು ಇಕ್ಕಬಹುದೆ? ಒಡೆಯರ ಕಟ್ಟಳೆಯಠಾವಿನಲ್ಲಿ ನಿಮ್ಮ ಕೃತ್ಯಕ್ಕೆ ನಿಮ್ಮ ಮನವೆ ಸಾಕ್ಷಿ. ಇದು ದಂಡವಲ್ಲ, ನೀವು ಕೊಂಡ ಅಂಗದ ನೇಮ. ಇದಕ್ಕೆ ನಿಮ್ಮ ಏಲೇಶ್ವರಲಿಂಗವೆ ಸಾಕ್ಷಿ.
--------------
ಏಲೇಶ್ವರ ಕೇತಯ್ಯ
ಪೃಥ್ವಿಯೆ ಬೀಜವ ನುಂಗಿದಡುತ್ಪತ್ತಿಯಾಗಬಲ್ಲುದೆ? ಶಿಶುವೆ ಬಸುರಿನಲ್ಲಿ ತಾಯಿ ಅಸುವ ನುಂಗಿದ ಮತ್ತೆ ಶಿಶು ತಾಯ ಉಭಯನಾಮವಡಗಿತ್ತು. ಕ್ರೀಯೆ ತಾಯಿ, ಅರಿವೆ ಶಿಶುವಾಗಿ ಮೂರು ಮೊರದ ಗೋಟಿನಲ್ಲಿ ತಿರುಗಾಡುತ್ತಿದ್ದೇನೆ ಆ ಮರವೆಗೆ ತೆರನ ಹೇಳಾ, ಕಾಲಾಂತಕ ಬ್ಥೀಮೇಶ್ವರಲಿಂಗವೆ.
--------------
ಡಕ್ಕೆಯ ಬೊಮ್ಮಣ್ಣ
ಶಿಶುವಿನ ಬಸುರಿನಲ್ಲಿ ತಾಯಿ ಹುಟ್ಟಿ, ತಾಯಿ ಅಳಿದು, ಶಿಶು ಉಳಿಯಿತ್ತು. ಉಳಿದುಳುಮೆಯ ತಿಳಿಯಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನೊಡಗೂಡ ಬಲ್ಲವ.
--------------
ಮೋಳಿಗೆ ಮಾರಯ್ಯ
ಅಂಗವಿಲ್ಲದ ಪುರುಷನ ಸಂಗವಿಲ್ಲದ ಸ್ತ್ರೀ ಗರ್ಭವಿಲ್ಲದೆ ಬಸುರಾದುದ ಕಂಡೆ. ದಿನ ವಾರ ಮಾಸವಿಲ್ಲದೆ ಬೇನೆತೋರದೆ ಒಂದು ಶಿಶು ಹಡೆದುದ ಕಂಡೆ. ಆ ಶಿಶು ಮಂಡಲಾದ್ಥಿಪತಿಯ ಕೊಂದು ಮಂಡಲವೆಲ್ಲ ಸುಡುವುದ ಕಂಡೆ. ಕಂಡವರ ನುಂಗಿ ಸೂಲಗಿತ್ತಿಯ ಕೊಲ್ಲುವದ ಕಂಡೆ. ತಾಯಿಸಂಗವ ಮಾಡಿ ತಂದೆಯಲ್ಲಿ ಸತ್ತು ಕೂಡಲಚನ್ನಸಂಗಯ್ಯನ ಪಾದದಲ್ಲಿ ಅಡಗಿ ಬಯಲಾದುದ ಕಂಡೆ. ಅದು ಅಡಗಿದಲ್ಲಿ ತಾನಡಗಬಲ್ಲರೆ ಪ್ರಳಯವಿರಹಿತ ಪರಶಿವಮೂರ್ತಿ ತಾನೆಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆದಿಯ ಲಿಂಗ ನಿನ್ನಿಂದ ಎನಗಾಯಿತ್ತು. ಅನಾದಿಯ ಜ್ಞಾನ ನಿನ್ನ ನೆನೆದಡೆ ಎನಗಾಯಿತ್ತು. ನಿನ್ನ ಕೃಪೆಯಿಂದ ಪ್ರಾಣ ಲಿಂಗವೆಂದರಿದೆನೆಂಬುದ, ನಿಮ್ಮ ಪ್ರಮಥರೆ ಬಲ್ಲರು. ಗುಹೇಶ್ವರ ಸಾಕ್ಷಿಯಾಗಿ, ಸಂಗನಬಸವಣ್ಣ ನಿನ್ನ ಪ್ರಸಾದದ ಶಿಶು ನಾನು ನೋಡಯ್ಯಾ.
--------------
ಅಲ್ಲಮಪ್ರಭುದೇವರು
ತಾಯಿಯಿಲ್ಲದ ಶಿಶುವಿಂಗೆ, ಶಿಶುವಿಲ್ಲದ ತಾಯಿ ಮೊಲೆಯನೂಡಿದಳು. ಮೊಲೆವಾಲನುಂಡ ಶಿಶು ತಾಯ ತಕ್ಕೈಸಿದಡೆ ತಾಯಿ ಆ ಶಿಶುವಿಂಗೆ ಸತಿಯಾದಳಲ್ಲಾ ! ಸತಿಯ ಸಂಗದ ಸುಖವ ಪತಿಯಿಲ್ಲ (ಯಿಂ?)ದರಿದಲ್ಲಿ ಸತಿ ಪತಿ ಎಂಬೆರಡೂ ಅಳಿಯಿತ್ತು ನೋಡಾ ! ಈ ನಿಜದ ನಿರ್ಣಯವ ಎನಗೆ ತೋರಿದ ಗುಹೇಶ್ವರನ ಶರಣ ಮಡಿವಳ ಮಾಚಿತಂದೆಗಳ ಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಅಲ್ಲಮಪ್ರಭುದೇವರು
ಅಘಟಿತ ಘಟಿತನ ಒಲವಿನ ಶಿಶು ಕಟ್ಟಿದೆನು ಜಗಕ್ಕೆ ಬಿರಿದನು. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳಿಗೆ ಇಕ್ಕಿದೆನು ಕಾಲಲಿ ತೊಡರನು. ಗುರುಕೃಪೆಯೆಂಬ ತಿಗುರನಿಕ್ಕಿ ಮಹಾಶರಣೆಂಬ ತಿಲಕವನಿಕ್ಕಿ ನಿನ್ನ ಕೊಲುವೆ ಗೆಲುವೆ ಶಿವಶರಣೆಂಬ ಅಲಗ ಕೊಂಡು. ಬಿಡು ಬಿಡು ಕರ್ಮವೆ, ನಿನ್ನ ಕೊಲ್ಲದೆ ಮಾಣೆನು. ಕೆಡಹಿಸಿಕೊಳ್ಳದೆನ್ನ ನುಡಿಯ ಕೇಳಾ. ಕೆಡದ ಶಿವಶರಣೆಂಬ ಅಲಗನೆ ಕೊಂಡು ನಿನ್ನ ಕೊಲುವೆ ಗೆಲುವೆ ನಾನು. ಬ್ರಹ್ಮಪಾಶವೆಂಬ ಕಳನನೆ ಸವರಿ, ವಿಷ್ಣು ಮಾಯೆಯೆಂಬ ಎಡೆಗೋಲನೆ ನೂಕಿ, ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿ ಕಾದುವೆನು ನಾನು.
--------------
ಅಕ್ಕಮಹಾದೇವಿ
ಪರಶಿವತತ್ವದ ಸ್ವರೂಪವ ಬಲ್ಲೆವೆಂಬಿರಿ, ನಿಮ್ಮ ಬಲ್ಲತನವ ಪೇಳಿರಯ್ಯಾ. ಆಗಮ ಪುರುಷರಿರಾ, ನಿಮ್ಮಾಗಮಂಗಳು ನಮ್ಮ ಶಿವನ ನಿಲುಕಡೆಯನರಿಯದೆ, ಅರಸಿ ಅರಸಿ ಆಸತ್ತು ಬಳಲಿ ಹೋದವು ಕೇಳಿರಯ್ಯಾ. ವೇದಪುರುಷರಿರಾ, ನಿಮ್ಮ ವೇದಂಗಳು ವೇದಿಸಲರಿಯದೆ ನಾಯಾಗಿ ಬೊಗಳಿ, ಬೆಂಡಾಗಿ ಹೋದವು ಕೇಳಿರಯ್ಯಾ. ಪುರಾಣಪುರುಷರಿರಾ, ನಿಮ್ಮ ಪುರಾಣಂಗಳು ಪೂರೈಸಿ ಪರಶಿವನ ಕಾಣದೆ ವೀರಶೈವ ಪುಂಡ್ರಮಸ್ತಕದಿಂದ ಮಥನಿಸಿ ಹೋದವು ಕೇಳಿರಯ್ಯಾ. ಶಾಸ್ತ್ರಸಂದ್ಥಿಗಳರಿರಾನಿಮ್ಮಶಾಸ್ತ್ರ ಸಾದ್ಥಿಸಿ ನಮ್ಮ ಪರಶಿವನ ನಿಲುಕಡೆಯ ಕಾಣದೆ ಒರಲಿ ಒರಲಿ ಹೋದವು ಕೇಳಿರಯ್ಯಾ. ತರ್ಕ ತಂತ್ರಗಳ ಕಲಿತು ಹೇಳುವರೆಲ್ಲ ಟಗರು, ಕೋಣ, ಹುಂಜಿನಂತೆ ಹೋರಾಡಿ ಮಥನದಿಂದ ಹೊಡೆದಾಡಿ ಪರಶಿವನ ಕಾಣದೆ ಸತ್ತು ಹೋದರಲ್ಲಾ ! ಇಂತೀ ವೇದ ಶಾಸ್ತ್ರಗಮ ಪುರಾಣ ತರ್ಕ ತಂತ್ರಗಳು ಶಿವನ ನಿಲುಕಡೆಯನೆಂದಿಗೂ ಅರಿಯವು. ಇಂತಿವನೆಲ್ಲವನು ನೋಡಿ ಶಿವನ ಕೂಡಬೇಕೆಂಬಣ್ಣಗಳು ಮುನ್ನವೆ ಅರಿಯರು, ಅದೇನು ಕಾರಣವೆಂದಡೆ- ಪ್ರಸೂತವಾಗದ ಮುನ್ನ ಶಿಶು ಬಯಸಿದರುಂಟೆ ? ಹಸಿಯಿಲ್ಲದ ಭೂಮಿಯಲ್ಲಿ ಬೀಜವ ಬಿತ್ತಿ ಫಲವ ಬಯಸಿದರುಂಟೆ ? ಈ ದೃಷ್ಟಾಂತದಂತೆ ತಿಳಿದು ಇಂತೀ ಎಲ್ಲವನು ವಿಸರ್ಜಿಸಿ ಕಳೆವುದು ಶಿವಜ್ಞಾನ. ಅಂತಪ್ಪ ಶಿವಜ್ಞಾನದ ನಿಲವು ಕರಸ್ಥಳದ ಇಷ್ಟಲಿಂಗ. ಆ ಇಷ್ಟಲಿಂಗಬ್ರಹ್ಮದ ನಿಜವು ತಾನೆಂದು ತಿಳಿದು ಶಿಶುಕಂಡ ಕನಸಿನಂತೆ, ಮೂಕ ಸಕ್ಕರಿಮೆದ್ದಂತೆ ಇರ್ದರಯ್ಯಾ ನಿಮ್ಮ ಶರಣರು ಎಂದನಯ್ಯಾ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆನಂದಸ್ಥಳದಲ್ಲಿ ಊಧ್ರ್ವ ಕಂಜಕನ್ನಿಕೆಗೆ ಇಂದುವಿನ ಕೊಡನ ಹೊತ್ತಾಡುತ್ತೈದಾಳೆ. ಮೂಲಪಟ್ಟಣದಲ್ಲಿ ಮೂವರಿಗೆ ರತಿಯ ಹುಟ್ಟಿಸುತ್ತೈದಾಳೆ. ಅಪರಪಟ್ಟಣದಲ್ಲಿ ಹಲವರಿಗೆ ಆಶ್ರಯವಾಗಿ ಐದಾಳೆ. ಮಧ್ಯಮಪಟ್ಟಣದಲ್ಲಿ ಮಹಾಮಹೀಶ್ವರರಿಗೆ ಮಹಾದಾಶ್ರಯವಾಗಿ ಐದಾಳೆ. ಇಂತು ಪಟ್ಟಣ ಹದಿನೆಂಟಕ್ಕ ಸೀಮೆ ಇಪ್ಪತ್ತೈದು, ಗ್ರಾಮ ಮೂವತ್ತಾರು ಸಂಯೋಗವೆಂಬ ನಗರಿಯಲ್ಲಿ ನಿತ್ಯಸಾನಂದನೆಂಬಾತ ಕುಳ್ಳಿದ್ದು, ಪಟ್ಟಣ ಹನೆಂಟರ ವ್ಯಾಪ್ತಿಯ ತಳವಾರರೆಂಟು ಮಂದಿಯ ಗ್ರಾಮ ಬಂಧನೆಯ ಮಾಡಲೀಯದೆ ಸುಚಿತ್ತದಿಂ ನಡಸುತ್ತೈದಾನೆ. ನೆನೆವ ಮನಸ್ಸಿನಲ್ಲಿ ಅವಿತಥವಿಲ್ಲದೆ ಚಿತ್ತವೃತ್ತಿಯನ್ನರಿತು ಮಹಾಲೋಕದಲಿಪ್ಪ ಮೂನ್ನೂರ ಮೂವತ್ತಮೂರು ಕುಲದುರ್ಗಂಗಳಂ ಪಾಟಿಸಿ ಸುಯಿಧಾನಿಯಾಗಿರುತ್ತೈದಾನೆ. ಅಜಲೋಕದಲ್ಲಿ, ಶುದ್ಧಸಂಯೋಗ ಸಂಗಮನೆಂಬ ಗೃಹದಲ್ಲಿ, ಮೂಲಕ ಮುಕ್ತಕಾ ರುದ್ರಕ ಅನುಮಿಷಕ ಆಂದೋಳಕ ವಿಚಿತ್ರಕ ಸಕಲ ಮುಕ್ತ್ಯಕ್ಕ, ಸಾನಂದ ಸತ್ಯಕ್ಕ ಇಂತಪ್ಪ ಮಹಾಸ್ತ್ರೀಯರ ಚಿತ್ತಕ್ಕೆ ಸಗುಣವಪ್ಪುದನೊಂದನೆ ಕೂಡಿ ಭೋಗಿಸುತ್ತೈದಾನೆ. ಅವರು ಸ್ತ್ರೀಯರು, ತಾ ಪುರುಷನಾಗಿ ಕೂಡುತ್ತೈದಾನೆ, ಅವಿತಥವಿಲ್ಲದೆ ಆ ಕೂಟದ ಸುಖವನು ಶಿಶು ಬಲ್ಲ, ಶಿಶುವಿನ ಜನನವನು ಅವ್ವೆ ಬಲ್ಲಳು. ಅವ್ವೆಯ ಇಚ್ಛಾ ಮಾತ್ರದಲ್ಲಿದ್ದು ಕಪಿಲಸಿದ್ಧಮಲ್ಲಿಕಾರ್ಜುನಯ್ಯನೆಂಬ ತೈಲಿಂಗಕ್ಕೆ ಮೂಲವಾದಳವ್ವೆ.
--------------
ಸಿದ್ಧರಾಮೇಶ್ವರ
ಶಿಶು ಕಂಡ ಕನಸು ತಾ ಪಸರಿ ಪರ್ಬಿತು, ಮೂರು ದೆಸೆದೆಸೆಯ ಬಣ್ಣಗಳು ಹಲವಾಗಿ ಆ ಬೆಳಕನೆ ನುಂಗಿ, ಆಲಿಸುತ ಕಂಬನಿಯ ಲೋಲನ್ನ ಕಂಡು ತಾ ಮುಗ್ಧೆಯಿಂದೂ ಸಾನುವಿನ ಕೊಡನ ಹೊತ್ತಾನತದ ಲೋಕದೊಳು ತಾನು ತಾನಾಗಿ, ತತ್ತ್ವದ ತುಯ ಹಮ್ಮಡಗಿದಕ್ಷರದ ಸೊಮ್ಮ ಮೀರಿದ ಬ್ರಹ್ಮಕರ್ಮಿಗಳಿಗದು ತಾನು ವಶವಲ್ಲದೆ ಇನ್ನು ಕಪಿಲಸಿದ್ಧಮಲ್ಲಿನಾಥನೆಂದೆಂಬ ಸೊಮ್ಮಿನ ಬ್ರಹ್ಮಕ್ಕೆ ಸೇರಿತ್ತಯ್ಯ.
--------------
ಸಿದ್ಧರಾಮೇಶ್ವರ
ಎಸವಿನ ಗುರು ಹೋಗಿ ಶಿಶುವಧೆಯ ಮಾಡಿದ. ಶಿಶು ಹೋಗಿ ಮರಳಿ ಗುರುವ ಕೊಂದಡೆಯು, ಹೆಸರುಗೊಂಬ ಅಣ್ಣಗಳು ನೀವು ಕೇಳಿರೋ: ವರಿಬ್ಬರೂ ಸತ್ತಠಾವನೊಬ್ಬರೂ ಅರಿಯರು, ನಿರ್ವಯಲೆಂದಾತನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ತೊರೆಯುದಕವ ಕೆರೆಯುಂಡು ತೃಪ್ತವಾಗಲು ಆ ಕೆರೆಯುದಕವ ಹಲವು ಕೆಲವು ಸ್ಥಾವರ ಜಂಗಮಗಳುಂಡು ತೃಪ್ತಿವಡೆವಂತೆ, ಪ್ರಭುದೇವರ ತೃಪ್ತಿ ಅಸಂಖ್ಯಾತಮಹಾಗಣಂಗಳೆಲ್ಲಕ್ಕೆ ತೃಪ್ತಿಯಾಯಿತ್ತು ನೋಡಾ. ಬಸುರುವೆಂಡತಿ ಉಂಡಲ್ಲಿ ಒಡಲ ಶಿಶು ತೃಪ್ತಿಯಾದಂತೆ, ಸಚರಾಚರವೆಲ್ಲವು ತೃಪ್ತಿಯಾದವು ನೋಡಾ. ಕೂಡಲಸಂಗಮದೇವಾ, ನಿಮ್ಮ ಶರಣ ಪ್ರಭುದೇವರ ಪ್ರಸಾದಮಹಿಮೆಗೆ ನಮೋ ನಮೋ ಎಂಬೆನು.
--------------
ಬಸವಣ್ಣ
ಇನ್ನಷ್ಟು ... -->