ಅಥವಾ
(72) (27) (20) (4) (23) (10) (0) (0) (10) (5) (2) (14) (3) (1) ಅಂ (17) ಅಃ (17) (107) (1) (34) (2) (0) (10) (0) (23) (0) (0) (0) (0) (1) (0) (0) (39) (0) (11) (4) (48) (42) (1) (39) (52) (58) (3) (11) (0) (18) (22) (9) (0) (49) (46) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಬ್ರಹ್ಮನ ಡಾಗು ಬೆನ್ನಮೇಲೆ, ವಿಷ್ಣುವಿನ ಡಾಗು ಕೈಯ ಮೇಲೆ. ರುದ್ರನ ಡಾಗು ತಲೆಯ ಮೇಲೆ. ಇಂತೀ ಡಾಗಿನ ಪಶುಗಳಿಗೇಕೆ ಅನಾಗತನ ಸುದ್ದಿ ? ಇದು ನಿಮಗೆ ಸಾ[ದ್ಥಿ]ಸದೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಸವಣ್ಣ ಮೊದಲಾದ ಮಹಾಭಕ್ತರೆಲ್ಲರೂ ಕಂಡರಯ್ಯಾ. ಮಹಾ ಕೈಲಾಸವೆಂಬ ಬೆಳ್ಳಿಯ ಬೆಟ್ಟವನೇರಿ, ಒಳ್ಳೆಯ ಪದದಲ್ಲಿ ತಲ್ಲೀಯರಾದಿಹೆವೆಂದು, ಬಲ್ಲತನವ ಮಚ್ಚಿ ಇರಲಾಗಿ, ಆ ಬೆಳ್ಳಿಯ ಬೆಟ್ಟ ಕಲ್ಲೋಲವಾಗಲಾಗಿ, ಅಲ್ಲಿರ್ದವರನೆಲ್ಲಿಯೂ ಕಾಣೆ. ಇವರಿಗಿನ್ನೆಲ್ಲಿಯ ಮುಕ್ತಿ ? ಜಲ್ಲೆಯನಡರ್ದು ಎಲ್ಲೆಯ ಪಾಯಿಸುವನಂತೆ, ಇವರೆಲ್ಲರೂ ಬಲ್ಲಹರೆ, ಬಲ್ಲಹ ಚೆನ್ನಬಸವಣ್ಣನಲ್ಲದೆ ? ಇವರೆಲ್ಲರನೊಲ್ಲೆನೆಂದೆ, ಬಲ್ಲರ ಬಲ್ಲಹನೆ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಂದ ಬಟ್ಟೆಯಂ ಮರೆದು, ಪೂರ್ವಾಶ್ರಯವನಳಿದು, ಭೋಗ ಭೋಜ್ಯಂಗಳಂ ಪರಿದು, ಪರಕ್ಕೆ ಪರಾಙ್ಮುಖನಾಗಿ, ವಿರಳವಿಲ್ಲದೆ ಅವಿರಳನಾಗಿ, ಬಿಡುಮುಡಿಯಲ್ಲಿ ನಿಂದ ನಿರುತಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಲ್ಲಂದಟ್ಟು ಅದೆಲ್ಲಿದ್ದರೂ ತನ್ನ ವೇದನೆಯ ಬಿಡದು. ಭಾವಜ್ಞರ ಮನೆಯ ಬಾಗಿಲಲ್ಲಿದ್ದರೂ, ಸ್ವಜಾತಿಯ ಗುಣವಲ್ಲದೆ ನೀತಿಯ ಗುಣವಿಲ್ಲ. ಇಂತಿವರುಗಳ ಮಾತೇಕೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಬೋಧೆನೆಯ ಬೋದ್ಥಿಸಿ ಉಂಬವರೆಲ್ಲರೂ ಸಾಧಾರಣಕ್ಕೆ ಈಡಾದರು. ನಿರ್ಬೋಧೆಯ ಹೇಳುವ ಹಿರಿಯಲ್ಲರೂ ಬಾಗಿಲ ಕಾಯ್ವುದಕ್ಕೊಳಗಾದರು. ಈಜಲರಿಯದವನೊಂದಾಗಿ ಹೊಳೆಯ ಹಾಯ್ದು, ಪ್ರಾಣಕ್ಕೆ ಆಸೆ ಮಾಡುವನಂತೆ, ಇಷ್ಟವನರಿಯದವರ ಮಾತ ಕೇಳಿ, ತಾ ಮುಕ್ತನಾದೆಹೆನೆಂಬ ಧೂರ್ತರ ನೋಡಾ, ನಿಃಕಳಂಕ ಮಲ್ಲಿಕಾರ್ಜುನಾ. || 549 ||
--------------
ಮೋಳಿಗೆ ಮಾರಯ್ಯ
ಬಳ್ಳಿ ಮರನ ಸುತ್ತಿ, ಅದು ಸಾಲದೆ ಮತ್ತೊಂದಕ್ಕೆ ಅಲ್ಲಾಡುವಂತೆ, ನಿಲ್ಲದು ಮನ ಕ್ರೀಯಲ್ಲಿ, ಸಲ್ಲದು ಮನ ನಿಶ್ಚಯದಲ್ಲಿ. ಬೆಲ್ಲವ ಮೆಲಿದ ಕೋಡಗದಂತೆ, ಕಲ್ಲಿನೊಳಗಾದ ಮತ್ಸ್ಯದಂತೆ, ಅಲ್ಲಿಗೆ ಹೊಲಬು ಕಾಣದೆ, ಇಲ್ಲಿಗೆ ನೆಲೆಯ ಕಾಣದೆ, ತಲ್ಲಣಗೊಳ್ಳುತ್ತಿದ್ದೇನೆ. ಎನ್ನ ಭಾವದಲ್ಲಿ ನೀನಿರು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಯಲೊಳಗಣ ಬಯಲಿನಲ್ಲಿ ಒಂದು ಕಲ್ಪತರು ಹುಟ್ಟಿ, ಫಲವಿಲ್ಲದೆ ಬಂಜೆಮರನಾದುದ ಕಂಡೆ. ಇದ ತಿಳಿದುನೋಡಲಿಕ್ಕಾಗಿ ಬಯಲು ಬಯಲ ಕೂಡಿ, ಕಲ್ಪತರು ಫಲವು ಎಡಬಿಡವಿಲ್ಲದುದ ಕಂಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಲಾಗಿ.
--------------
ಮೋಳಿಗೆ ಮಾರಯ್ಯ
ಬಿಂದು ನಾದವ ನುಂಗಿತ್ತೆಂಬರು, ನಾದ ಬಿಂದುವ ನುಂಗಿತ್ತೆಂಬರು. ಕಳೆ ಬಿಂದುವ ನುಂಗಿತ್ತೆಂಬರು, ಬಿಂದು ಕಳೆಯ ನುಂಗಿತ್ತೆಂಬರು. ಈ ಮೂರರ ಅಂದವ ಅತೀತ ತಿಂದಿತ್ತು, ತಿಂದವನ ತಿಂದ ಅಂದವ ನೋಡಾ. ಇದಕ್ಕೊಂದೂ ಇಲ್ಲಾ ಎಂದೆ, ಸಂದನಳಿದ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೆಳಗಿನಲ್ಲಿದ್ದು ಬೆಳಗ ಕಾಬುದು ತಾನೊ, ಇದಿರೊ ? ಇಷ್ಟದ ಮರೆಯಲ್ಲಿರ್ದ ದೃಷ್ಟವ ಕಂಡೆಹೆನೆಂದಡೆ, ಕಾಬುದು, ಕಾಣಿಸಿಕೊಂಬುದು ಅದನೇನೆಂದರಿಯಬೇಕು. ಅರಿದಲ್ಲದೆ ಇಷ್ಟ ಪ್ರಾಣ ಸಮರ್ಪಣವಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ಬಡವಂಗೆ ನಿಧಾನ ಕಡವರ ಕೈಸಾರಿತ್ತಯ್ಯಾ. ಕಾಣಬಾರದ ಬಯಲು ರೂಪುಗೊಂಡಿತ್ತಯ್ಯಾ. ನಿರಾಳ ನಿರ್ಣಯದ ಮೇಲೆ ನಿಂದಿತ್ತಯ್ಯಾ. ಎನ್ನ ಭಾವದ ಕೊನೆಯ ಮೊನೆಯ ಮೇಲೆ, ಮನೆಯ ಮಾಡಿಕೊಂಡಿಪ್ಪ ಪ್ರಭುವ ಕಂಡು, ಬದುಕಿದೆನು ಕಾಣಾ, ನಿಃಕಳಂಕ ಮಲ್ಲಿಕಾರ್ಜುನ.
--------------
ಮೋಳಿಗೆ ಮಾರಯ್ಯ
ಬಲ್ಲವರೆಂದು ಎಲ್ಲಕ್ಕೂ ಹೇಳಿ, ಅಲ್ಲಿ ಎಲ್ಲಿಯೂ ಬೋದ್ಥಿಸಬಲ್ಲವ ನಾನೆಂದು ನುಡಿವ ಕಲ್ಲೆದೆಯವನೆ ಕೇಳಾ. ಲಿಂಗವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ? ಜಂಗಮವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ? ಪ್ರಸಾದವ ಕುರಿತಲ್ಲಿ ಒಳ್ಳಿತ್ತು, ಹೊಲ್ಲೆಹವುಂಟೆ ? ಸಾಮ್ಯಸಂಬಂಧಕ್ಕೆ ಕರ್ತೃಭೃತ್ಯತ್ವವಲ್ಲದೆ, ಜ್ಞಾನಾತೀತಂಗೆ ಸಾಮ್ಯಸಂಬಂಧವ ಭಾವಿಸಲಿಲ್ಲ. ಇಕ್ಕಿದ ಕರುವಿಂಗೆ ಲೆಪ್ಪಣವಲ್ಲದೆ, ಮನಸ್ಸಿನಲ್ಲಿ ಒಪ್ಪವುಂಟೆ ಅಯ್ಯಾ ? ಇದು ತಪ್ಪದು. ಕ್ರಿಯಾನಿರತವಾದ ಭಕ್ತಂಗೆ ನಮೋ ನಮೋ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೆಣ್ಣೆಯ ಮಡಕೆಯಲ್ಲಿ ಕಿಚ್ಚು ತುಂಬಿ, ಉರಿವುತ್ತಿದ್ದುದ ಕಂಡೆ. ಕಿಚ್ಚು ಕರಗಿ, ಬೆಣ್ಣೆ ಉಳಿಯಿತ್ತು. ಉಳಿದ ಉಳುಮೆಯ ಒಡಗೂಡಬಲ್ಲಡೆ, ನಿಃಕಳಂಕ ಮಲ್ಲಿಕಾರ್ಜುನಲಿಂಗವ [ಅರಿ].
--------------
ಮೋಳಿಗೆ ಮಾರಯ್ಯ
ಬ್ರಹ್ಮನ ಕಲ್ಪಿತವ ಕಳೆಯನಾಗಿ, ಗುರು ಲಿಂಗವ ಕೊಟ್ಟುದು ಹುಸಿ. ಆ ಲಿಂಗ ಬಂದು ತನುವನಿಂಬುಗೊಳ್ಳದಾಗಿ, ವಿಷ್ಣುವಿನ ಸ್ಥಿತಿ ಬಿಟ್ಟುದು ಹುಸಿ. ಆ ವಿಷ್ಣುವಿನ ಹಂಗಿನಲ್ಲಿ ಉಂಡುಹೋಹ ಕಾರಣ, ಜಂಗಮದ ಮಾಟ ಹುಸಿ. ಇದು ಕಾರಣ, ರುದ್ರನ ಹಂಗಿನಲ್ಲಿ ಜಗವೆಲ್ಲ ಲಯವಾಗುತ್ತಿರ್ಪ ಕಾರಣ, ಪ್ರಾಣಲಿಂಗಿಗಳೆಂಬುದು ಹುಸಿ. ಇಂತಿವು ನಿರ್ಲೇಪವಾಗಿಯಲ್ಲದೆ ಸಹಜಭರಿತನಲ್ಲ, ಇಹ ಪರಕ್ಕೆ ಸಲ್ಲ. ಸೊಲ್ಲಿಗಭೇದ್ಯ ನಿಃಕಳಂಕ ಮಲ್ಲಿಕಾರ್ಜನ ಬಲ್ಲರ ಬಲ್ಲಹ.
--------------
ಮೋಳಿಗೆ ಮಾರಯ್ಯ
ಬೆಂಕಿಗೆ ಶೈತ್ಯ ಕೊಂಡು, ಉದಕಕ್ಕೆ ಉರಿ ಹುಟ್ಟಿ ಮತ್ತುದಕವನರಸುವುದ ಕಂಡೆ. ಮಡಕೆ ನಿಂದುರಿದು, ಅಕ್ಕಿ ಉಳಿಯಿತ್ತು, ನಿಃಕಳಂಕ ಮಲ್ಲಿಕಾರ್ಜುನಲಿಂಗವ ಮರೆಯಲಾಗಿ.
--------------
ಮೋಳಿಗೆ ಮಾರಯ್ಯ
ಬಂದ ಪದಾರ್ಥವ ಸವಿದು ಚಪ್ಪರಿದು, ಆಹಾ ಲಿಂಗಕ್ಕೆ ಅರ್ಪಿತವಾಯಿತ್ತೆಂದು ಕಂಗಳ ಮುಚ್ಚಿ, ಅಂಗವ ತೂಗಿ, ಮಹಾಲಿಂಗವೆ ನೀನೇ ಬಲ್ಲೆ ಎಂದು ಕಂಡವರು ಕೇಳುವಂತೆ, ಹಿಂಗದ ಲಿಂಗಾಂಗಿ ಇವನೆಂದು ವಂದಿಸಿಕೊಳ್ಳಬೇಕೆಂದು, ಅಂದಗಾರಿಕೆಯಲ್ಲಿ ನಡೆವ ಭಂಡರಿಗೆಲ್ಲಿಯದೊ ಲಿಂಗಾರ್ಪಿತ ? ಲಿಂಗಕ್ಕೆ ಸಂದ ಸವಿಯ, ಹಿಂದೆ ಮುಂದೆ ಇದ್ದವರು ಕೇಳುವಂತೆ ಲಿಂಗಾರ್ಪಿತವುಂಟೆ ? ಭ್ರಮರ ಕೊಂಡ ಕುಸುಮದಂತೆ, ವರುಣ ಕೊಂಡ ಕಿರಣದಂತೆ, ವಾರಿ ಕೊಂಡ ಸಾರದಂತೆ, ತನ್ನಲ್ಲಿಯೇ ಲೇಪ ಅರ್ಪಿತ ಅವಧಾನಿಗೆ. ಹೀಂಗಲ್ಲದೆ ಕೀಲಿನೊಳಗಿಪ್ಪ ಕೀಲಿಗನಂತೆ, ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೇಡ ಬಿಲ್ಲ ಹಿಡಿದು, ರೂಡ್ಥಿಯಲ್ಲಿ ತಿರುಗಾಡುತ್ತಿರಲಾಗಿ, ಬೇಡನ ಬಿಲ್ಲ ಬೇಡಿ ಕಾಡಿಹರೆಲ್ಲರು. ಆ ಬಿಲ್ಲು ರೂಡ್ಥಿಯದಲ್ಲ, ಇನ್ನಾರು ಕೊಟ್ಟರೊ. ಕೊಟ್ಟವರ ಕೊಂಡು, ಕೊಡದವರ ಹಿಂಗಿ, ಬಟ್ಟೆಯ ಹಂಗಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೀಜದ ಮೊಳೆಯ ಮುರಿದ ಮತ್ತೆ, ಅದು ಸಾಗಬಲ್ಲುದೆ ? ಸುನಾದದ ಭೇದವನರಿದ ಮತ್ತೆ, ಅದು ವೇದ್ಥಿಸಬಲ್ಲುದೆ ? ಆದಿಯವರೆಲ್ಲರೂ ಹೋದರು ಹೊಲಬುಗೆಟ್ಟು. ಎನಗಿನ್ನಾದವರಾರೋ, ಭೇದಕ್ಕತೀತ, ಚೋದ್ಯಮಯ ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಬೀಜದೊಳಗಣ ವೃಕ್ಷ ಉಲಿಯಬಲ್ಲುದೆ ? ರತ್ನದೊಳಗಣ ಉರಿ ಹೊತ್ತಬಲ್ಲುದೆ ? ಭಿತ್ತಿಯ ಮೇಲಣ ಚಿತ್ರ ಬಟ್ಟೆಯಲ್ಲಿ ನಡೆಯಬಲ್ಲುದೆ ? ಇದರಚ್ಚುಗವ ಕಂಡು ಮತ್ತೆ ಹಿರಿಯರೆಂದಡೆ, ಅದೆತ್ತಣ [ಭೀತಿ] ಎನಗೆ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಬಲ್ಲೆಬಲ್ಲೆನೆಂದು ಎಲ್ಲರೊಳಗೆ ಗೆಲ್ಲಸೋಲವೇತಕ್ಕೆ? ಬಲ್ಲತನ ಅಲ್ಲಿಯೇ ಉಳಿಯಿತ್ತು. ಮಿಥ್ಯ ತಥ್ಯವ ತಲೆಯಲ್ಲಿ ಹೊತ್ತು ಹೋರಬೇಡ. ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೆಲ್ಲದ ಗೋಟು ಕುಬ್ಜವಾದಡೇನು, ಅದರ ಸಿಹಿಯೆಲ್ಲಕ್ಕೂ ಗುಡ್ಡನೆ ? ಮುಕುರದ ಸಾಕಾರ ಚಿಕ್ಕದಾದಡೇನು, ಅದರ ಪ್ರತಿಬಿಂಬ ಚಿಕ್ಕದೆ ಅಯ್ಯಾ ? ಸಕಲರೊಳು ತನು ಕೂಡಿರ್ದಡೇನು, ವಿಕಳನಾಗದಿರ್ದಡೆ ಸಾಲದೆ ? ಆತನಿರವು ಘೃತಕ್ಷೀರದಂತೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬೆಟ್ಟದ ಮೇಲಣ ಗುಂಡು, ಬೆಟ್ಟವ ನುಂಗಿತ್ತು. ಸೃಷ್ಟಿಯ ಮೇಲಣ ಜಗ, ಪೃಥ್ವಿಯ ನುಂಗಿತ್ತು. ಹಸುವಿನ ಗರ್ಭದ ವತ್ಸ, ಹಸುವ ನುಂಗಿತ್ತು. ಹೆಸರಿಡುವುದಿನ್ನೇನೊ ? ಕಣ್ಣೊಳಗಣ ಎರಳೆ ಬಣ್ಣವ ನುಂಗಿದ ಮತ್ತೆ ಬಣ್ಣಿಸಿ ಪೂಜಿಸಿಕೊಂಬುದಿನ್ನೇನೊ ? ಕಣ್ಣಾವಗಾಲದ ಹೊಳೆಯಲ್ಲಿ ಮುಳುಗಿ ಚೆನ್ನುಗೆಟ್ಟಿರಲ್ಲಾ. ಅಣ್ಣಗಳೆಲ್ಲರೂ ಮುಕ್ಕಣ್ಣನ ಪೂಜಿಸಿ ಮೂರುಬಟ್ಟೆಯ ಸುತ್ತಿ, ಊರ ಹೊಕ್ಕು ಆರೈದಿರಯ್ಯಾ, ನೀವಾರಾಧಿಸುವ ಲಿಂಗವ. ಆ ಲಿಂಗದಲ್ಲಿ ಲೀಯವಾದರೆ ಸಂಗಕ್ಕೆ ಒಳಗಾದರು. ನಮ್ಮ ನಿಸ್ಸಂಗಿ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ದಿಕ್ಕುಗೆಟ್ಟೆನಯ್ಯಾ.
--------------
ಮೋಳಿಗೆ ಮಾರಯ್ಯ
ಬೇಟದಲ್ಲಿ ಸುಖಿಯಾದ ಮತ್ತೆ ಕೂಟದ ಆಟವೇಕೆ ? ಜಂಗಮದಲ್ಲಿ ಕೂಟ ಕೂಡಿದ ಮತ್ತೆ, ವಸ್ತುವಿನಲ್ಲಿ ಕೂಡಿಹೆನೆಂಬ ಆತುರವೇಕೆ? ನಿತ್ಯಸುಖಿಯಾದ ಮತ್ತೆ ಬಚ್ಚೊತ್ತಿಗೊಂದು ಪರಿಯಾಗಲೇಕೊ? ಈ ಸಚ್ಚಿದಾನಂದನವರಿದಡೆ, ಭಕ್ತಿ ಮುಕ್ತಿಗೆ ದೂರ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಾಲಲೀಲೆಯಲ್ಲಿ ಕಟ್ಟಿದ ಲಿಂಗವನೇನೆಂದರಿಯದಿರ್ದಲ್ಲಿ, ಜ್ಞಾನಭಾವ ತಲೆದೋರಿದಲ್ಲಿ ಇದೇನೆಂದರಿಯಬೇಕು. ಮಕ್ಕಳ ಮದುವೆಯ ಚಿಕ್ಕಂದು ಮಾಡಿದಡೆ, ಯೌವನದೋರೆ, ಆ ವಿಷಯಕ್ಕೆ ಹೊಕ್ಕು, ಹೋರಟೆಗೊಂಬುದ ಮರೆದಡೆ, [ಇಷ್ಟವ ಮರೆ]ಯಬೇಕು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಧಿರನೊಂದಾಗಿ ಮದವಳಿಗ ಕೂಡಿದ. ಮದವಳಿಗನ ಹಿಂದುಗಡೆದು ಕಳಶ ಕನ್ನಡಿ ಮದವಳಿಗನ ಮುಂದೆ ಸಾಯು[ವೆಡೆ], ಮೂದೇವರು ಮುಂದೆ ಅಳುತ್ತಿಪ್ಪುದ ಕಂಡೆ. ಶಕುನ ಹೊಲ್ಲಾ ಎಂದು ಮದವಳಿಗ ತಿರುಗಿದ. ಮದುವೆ ಉಳಿಯಿತ್ತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಲುಗೈಯನೊಡನೆ ಹಗೆವಡೆದು ಕೊಲೆಗಂಜಲೇಕೆ? ಭವಸಾಗರದ ಬಲೆಗೆ ಸಿಕ್ಕಿ, ನಿರ್ಗುಣದ ಒಲುಮೆಯ ಮಾತ ನಟಿಸಲೇಕೆ? ತ್ರಾಸಿಂಗೆ ಒಲವರವುಂಟೆ? ಭಾಷೆಗೆ ನುಡಿ ಎರಡುಂಟೆ? ಪರಮೇಶ್ವರನನರಿದವಂಗೆ ಜಗದಾಸೆಯ ಮುಖವಿಲ್ಲವೆಂದೆ. ಅವ ಈಷಣತ್ರಯಕ್ಕೆ ಹೊರಗೆಂದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ

ಇನ್ನಷ್ಟು ...