ಅಥವಾ
(7) (2) (0) (1) (3) (0) (0) (0) (4) (3) (0) (1) (0) (0) ಅಂ (3) ಅಃ (3) (11) (0) (2) (1) (0) (1) (0) (2) (0) (0) (0) (0) (0) (0) (0) (6) (0) (0) (0) (7) (6) (0) (10) (5) (4) (0) (0) (0) (2) (6) (6) (0) (6) (8) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಪಾಪಿ ನಾನೊಂದು ಪಾಪವ ಮಾಡಿದೆ. ಆ ಪಾಪವೆನಗೆ ಸತಿಸುತರಾಗಿ ಕಾಡುತ್ತಿದೆ. ಪಾಪವನೆ ಬಿತ್ತಿ, ಕೋಪವನೆ ಬೆಳೆದು, ಈ ಪರಿಯಲಿ ದಿನಂಗಳು ಹೋದವಲ್ಲ. ಎನಗಿನ್ನೇನು ಪರಿ ಹೇಳಾ, ದೇವರಾಯ ಸೊಡ್ಡಳಾ ?
--------------
ಸೊಡ್ಡಳ ಬಾಚರಸ
ಪರಶಿವಶಕ್ತಿಗಳಿಂದಾದ ಲಿಂಗ. ಲಿಂಗೋದ್ಭವ ಶಿವ, ಶಿವ ಮೂರ್ತಿತತ್ವ. ತತ್ವಮೂರ್ತಿ ಮುಖದಿಂದ ಲೋಕ. ಲೋಕದಿಂದ ಭೋರನೆ ಹುಟ್ಟಿದ ವೇದ. ವೇದಾಗಮನದಿಂದ ಹುಟ್ಟಿದ ಶಿವವಿದ್ಯೆ. ಶಿವವಿದ್ಯೆಯಿಂದ ಹುಟ್ಟಿದ ಶಿವದೀಕ್ಷೆ. ಶಿವದೀಕ್ಷೆಯಿಂದಾದ ನಿಃಪತಿತತ್ವದ ಕುಳವಾರು. ಆ ದೀಕ್ಷೆಯಿಂದ ಭಾವಹುಟ್ಟಿ, ಭಾವಕ್ಕೆ ಸ್ಥಾವರ ಹುಟ್ಟಿ, ಜಂಗಮಮುಖದಿಂದ ಪ್ರಸಾದ ಉದಯವಾಯಿತ್ತು. ಪ್ರಸಾದದಿಂದ ಲಿಂಗಾಚಾರವಾಯಿತ್ತು. ಆಚಾರದಿಂದ ಗುರು. ಅಂತು ನಿಃಪತಿಗಾದ ಪ್ರತಿತತ್ವವೆಂಬ ಷಡುಸ್ಥಲವು. ಗುರುವಿಂದ ಸಮಾಧಿ, ಸಮಾಧಿಗೆ ಧ್ಯಾನ ಹುಟ್ಟಿ, ಧ್ಯಾನದಿಂದಾದ ಜ್ಞಾನ, ಜ್ಞಾನದಿಂದರ್ಪಣ. ಅರ್ಪಣಕ್ಕೆ ನಿಯಮ, ನಿಯಮಕ್ಕೆ ಭಕ್ತಿ. ಭಕ್ತಿ ಉಂಟಾದಲ್ಲಿ ಸಕೀಲವೆಂಬ ಷಡುಸ್ಥಲವು. ಭಕ್ತಿಯಿಂದಾದ ಮನ, ಮನದಿಂದಾದ ಮತಿ, ಮತಿಯಿಂದಾದ ಅಭ್ಯಾಸ, ಅಭ್ಯಾಸದಿಂದಾದ ಧನ, ಧನದಿಂದಾದ ತನು, ತನುವಿನಿಂದಾದ ಮೋಹ. ಮೋಹವೆಂಬಿವು ಅಸಾಧ್ಯವೆಂಬ ಷಡುಸ್ಥಲವು. ಆ ಮೋಹದಿಂದ ಶಕ್ತಿ ಹುಟ್ಟಲು, ಅದರಿಂದಾದ ಬಾವಶುದ್ಧಿ, ಭಾವಶುದ್ಧಿಯಿಂದ ನಿರಾಲಸ್ಯವಾಗಿ, ಅಲ್ಲಿ ಶಿವಧರ್ಮ, ಆ ಶಿವಧರ್ಮದಲ್ಲಿ ನೀರಜತ್ವ. ನೀರಜತ್ವವೆ ನಿರುಪಾಧಿ. ನಿರುಪಾಧಿಕವೆಂಬ ಷಡುಸ್ಥಲವು, ನಿರುಪಾಧಿಯಿಂದೈಕ್ಯ, ಐಕ್ಯನ ಶಿಶು ಶರಣ. ಶರಣರ ಶಿಶು ಪ್ರಾಣಲಿಂಗಿ, ಪ್ರಾಣಲಿಂಗಿಯ ಶಿಶು ಪ್ರಸಾದಿ. ಪ್ರಸಾದಿಯ ಶಿಶು ಮಹೇಶ್ವರ, ಮಹೇಶ್ವರನ ಶಿಶು ಭಕ್ತ. ಇಂತು ಸಾಕಾರ ಷಡುಸ್ಥಲ. ಶಂಭು ಸೊಡ್ಡಳ ಮಹಾಮಹಂತರುಮಪ್ಪ ಮೂವತ್ತಾರು ಕುಳವರಿದಂಗೆ ಶರಣು, ಶರಣೆಂಬೆ.
--------------
ಸೊಡ್ಡಳ ಬಾಚರಸ
ಪ್ರಣವದ ಪ್ರಣವವೆ ನಕಾರ, ಪ್ರಣವದ ದಂಡಕವೆ ಮಕಾರ, ಪ್ರಣವದ ಕುಂಡಲಿಯೆ ಶಿಕಾರ, ಪ್ರಣವದ ಅರ್ಧಚಂದ್ರವೆ ವಕಾರ, ಪ್ರಣವದ ಬಿಂದುವೆ ಯಕಾರ. ನಕಾರದ ದಂಡಕವೆ ಮಕಾರ, ನಕಾರದ ಬಲದ ಕೋಡೆ ಶಿಕಾರ, ನಕಾರದ ಎಡದ ಕೋಡೆ ವಕಾರ, ನಕಾರದ ಬಿಂದುವೆ ಯಕಾರ, ನಕಾರದ ತಾರಕವೆ ಒಂಕಾರ. ಮಕಾರದ ದಂಡಕವೆ ನಕಾರ, ಮಕಾರದ ಬಲದ ಕೋಡೆ ಶಿಕಾರ, ಮಕಾರದ ಎಡದ ಕೋಡೆ ವಕಾರ, ಮಕಾರದ ಬಿಂದುವೆ ಯಕಾರ, ಮಕಾರದ ತಾರಕವೆ ಒಂಕಾರ. ಶಿಕಾರದ ದಂಡಕವೆ ನಕಾರ, ಶಿಕಾರದ ಬಲದ ಕೋಡೆ ಮಕಾರ, ಶಿಕಾರದ ಎಡದ ಕೋಡೆ ವಕಾರ, ಶಿಕಾರದ ಬಿಂದುವೆ ಯಕಾರ, ಶಿಕಾರದ ತಾರಕವೆ ಒಂಕಾರ. ವಕಾರದ ದಂಡಕವೆ ನಕಾರ, ವಕಾರದ ಬಲದ ಕೋಡೆ ಮಕಾರ, ವಕಾರದ ಎಡದ ಕೋಡೆ ಶಿಕಾರ, ವಕಾರದ ಬಿಂದುವೆ ಯಕಾರ, ವಕಾರದ ತಾರಕವೆ ಒಂಕಾರ. ಯಾಕಾರದ ದಂಡಕವೆ ನಕಾರ, ಯಕಾರದ ಬಲದ ಕೋಡೆ ಮಕಾರ, ಯಕಾರದ ಎಡದ ಕೋಡೆ ಶಿಕಾರ, ಯಕಾರದ ಬಿಂದುವೆ ವಕಾರ, ಯಕಾರದ ತಾರಕವೆ ಒಂಕಾರ. ಇಂತಪ್ಪ ಮೂವತ್ತಾರು ಮೂಲಪ್ರಣವಂಗಳೆ, ಪ್ರಥಮಗುರು ಬಸವಣ್ಣನಾದುದಂ, ಸೊಡ್ಡಳ ಲಿಂಗದಲ್ಲಿ ಕಂಡು ಸುಖಿಯಾಗಿ, ನಾನು ಬಸವಾ ಬಸವಾ ಎಂದು ಜಪಿಸುತಿರ್ದೆನಯ್ಯಾ.
--------------
ಸೊಡ್ಡಳ ಬಾಚರಸ
ಪಂಚಮಹಾಪಾತಕವ ಮಾಡಿ[ದೆ]ನಾದಡೆ, ಒಮ್ಮೆ ಹಂಚಿನಲ್ಲಿ ತಿರಿದುಂಡಡೆ, ಪಾಪದಂಜನವನು ಕೊಂಡಡೆ, ಕರ್ಮನಿರ್ಮಳ. ಇಹದಲ್ಲಿ ಸುಖ, ಪರದಲ್ಲಿ ಗತಿ. ಬ್ರಹ್ಮನ ಶಿರವ ಚಿವುಟಿ, ಬ್ರಹ್ಮೇತಿ ಮುಖ ತಾಗಿದಡೆ, ಸದ್ಗುರು ಸೊಡ್ಡಳ ತಿರಿದುಂಡ ಪರಿ.
--------------
ಸೊಡ್ಡಳ ಬಾಚರಸ
ಪಡೆದ ಕಾಣಿಭೋ ಕಾಲನಂ ಸಂಹರಿಸಿ, ಕಾಲಹರನೆಂಬ ನಾಮವ. ಪಡೆದ ಕಾಣಿಭೋ ಕಾಮನಂ ಸಂಹರಿಸಿ, ತ್ರಿಪುರಹರನೆಂಬ ನಾಮವ. ಪಡೆದ ಕಾಣಿಭೋಮತ್ಸ್ಯಕಶ್ಯಪನರಸಿಂಹಾದಿಗಳ ಸಂಹರಿಸಿ, ವೀರಭದ್ರನೆಂಬ, ಪೆಸರ. `ಸರ್ವಂ ವಿಷ್ಣುಮಯಂ ಜಗತ್' ಎಂಬ ಶ್ರುತಿಯ ಮತದಿಂ, ತೋರ್ಪ ಸಮಸ್ತ ಜಗತ್ತನು ಉರಿಗಣ್ಣ ಬಿಟ್ಟು ಸುಟ್ಟು, ಹರಿಹರನೆಂಬ ಪೆಸರ ಪಡೆದ ಕಾಣಿಭೋ. ಹರನು ಹರಿಯನು ಕೊಂದನೆಂದು ಸಲೆ ಸಾರುತ್ತಿದೆ ಯಜುರ್ವೇದ. ಒಂ ಹರಿಹರಂತಂ ಮನುಮಾತಿಂ ದೇವಾಃ | ವಿಶ್ವಸ್ಯಶಾನಂ ವೃಷಭಂ ಮತಿನಾಂ || ಇಂತೆಂದುದಾಗಿ, ಕಾಲಹರ ಕರ್ಮಹರ ತ್ರಿಪುರಹರ, ದುರಿತಹರ ಮಖಹರ ಹರಿಹರ ಸಕಲಹರ ಶರಣು ಸೊಡ್ಡಳಾ.
--------------
ಸೊಡ್ಡಳ ಬಾಚರಸ
ಪಕ್ಷಿ ಜನಿಸಿ ಅಮೃತವನರಿಯದಂತೆ, ಶಿವನಲ್ಲದೆ ಅನ್ಯದೈವ ಭಜನೆಯುಳ್ಳವರೇತಕ್ಕೆ ಬಾತೆ ? ಅನ್ಯಾಯಿತ ವಧೆಯ ಮಾಡುವ ಅರ್ತಿಕಾರ ದೋಷವನರಿಯ. ಪಾಪಿಯ ಕೈಯ ದಾರ, ಗಾಳದ ಕೊನೆಗೆ ಬಂದುಂಡ ಮತ್ಸ್ಯದ ಲಕ್ಷಣದಂತೆ, ಮನುಷ್ಯ ಜನ್ಮದಲ್ಲಿ ಹುಟ್ಟಿ, ಶಿವಾಚಾರವನರಿಯದೆ ದುರಾಚಾರಕ್ಕೆರಗುವರು, ಹಿರಿಯದೈವವನರಿಯದೆ, ಕಿರುಕುಳದೈವವಂ ಪಿಡಿವರು. ಕೇಶವಂಗೆ ದಾಸತ್ವಮಂ ಮಾಡಿದಡೆ ಪ್ರತ್ಯಕ್ಷ ಮುಡುಹ ಸುಡಿಸನೆ ? ಮೈಲಾರದೇವರೆಂಬವರ ನಾಯಾಗಿ ಬಗುಳಿಸನೆ ? ಜಿನ ದೈವವೆಂಬವರ ತಲೆಯ ತರಿಸನೆ ? ಹುಲುದೈವವ ಪೂಜಿಸಿದವರು ಕೈಲಾಸದ ಬಟ್ಟೆಯ ಹೊಲಬುದಪ್ಪಿದರು. ಮುನ್ನ ಮಾಡಿದವರಿಗಿದಿಯಾಯಿತ್ತು. ಇನ್ನು ಮಾಡುವರಿಗೆ ವಿಧಿಯಹುದೊ. ನಮ್ಮ ದೇವರಾಯ ಸೊಡ್ಡಳಂಗೆ ಒಂದರಳನೇರಸಿದವ, ಕೈಲಾಸಕ್ಕೆ ಹೋದನು.
--------------
ಸೊಡ್ಡಳ ಬಾಚರಸ