ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ಗುರುವೆ ಸುರತರುವೆ ಸಕಲಾಗಮದಿರವೆ ಮುಕ್ತಿಯಾಗರವೆ ಚಿದ್ಘನಗುರುವೆ ಚಿತ್ಪ್ರಕಾಶಮೂರ್ತಿಗುರುವೆ. ಶ್ರೀಗುರುವೆ ಶಾಂತಿಕಳಾ ಗುರುವೆ ವಿದ್ಯಾಗುರುವೆ ಮದ್ಗುರುವೆ ಜ್ಞಾನಗುರುವೆ ಪರಬ್ರಹ್ಮಗುರುವೆ ಪರಮಾನಂದಗುರುವೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ, ನಿಮ್ಮಡಿದಾವರೆಯೊಳಗೆನ್ನ ಮನವ ಭೃಂಗವ ಮಾಡಾ.
--------------
ಹೇಮಗಲ್ಲ ಹಂಪ
ಗುರುವಿನಲ್ಲಿ ಗುಣ ವಿದ್ಯೆ ಕುಲ ಬಾಲ್ಯ ಯೌವನ ವೃದ್ಧನೆಂದು ಅರಸಲುಂಟೇ ? ಅರಸಿದರೆ ಮಹಾಪಾತಕ. ಸಾಕ್ಷಿ :`` ಆಚಾರ್ಯೇ ಬಾಲಬುದ್ಧಿಶ್ಚ ನರಬುದ್ಧಿಸ್ತಥೈವ ಚ | ಅಸಿಷ್ಟ ಬುದ್ಧಿಭಾವೇನ ರೌರವಂ ನರಕಂ ವ್ರಜೇತ್ || '' ಎಂದುದಾಗಿ, ಎನ್ನ ಗುರು ಬಾಲನೂ ಅಲ್ಲ, ಯೌವನನೂ ಅಲ್ಲ, ವೃದ್ಧನೂ ಅಲ್ಲ. ಮೃತರಹಿತ ಪರಶಿವ. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗೆ ಇದೇ ನರಕ.
--------------
ಹೇಮಗಲ್ಲ ಹಂಪ
ಗುರುಲಿಂಗಜಂಗಮವ ನೆರೆ ನಂಬಿಪ್ಪಾತನೆ ಶಿವಭಕ್ತ. ಗುರುಲಿಂಗಜಂಗಮವೆ ಶಿವನೆಂದು ಅರ್ಥ ಪ್ರಾಣ ಅಬ್ಥಿಮಾನವ ಸೇವಿಸುತ್ತಿಪ್ಪಾತನೆ ಶಿವಭಕ್ತ. ಸಾಕ್ಷಿ :`ಅರ್ಥಪ್ರಾಣಬ್ಥಿಮಾನಂ ಚ ಗುರೌ ಲಿಂಗೇ ತು ಜಂಗಮೇ |' ತಲ್ಲಿಂಗ ಜಂಗಮದಲ್ಲಿ ಧನವಂಚಕನಾಗಿ ಮಾಡುವ ಭಕ್ತಿಯ ತೆರನೆಂತೆಂದರೆ : ನರಿಯ ಕೂಗು ಸ್ವರ್ಗಕ್ಕೆ ಮುಟ್ಟುವುದೆ ? ಹರಭಕ್ತಿಯಲ್ಲಿ ನಿಜವನರಿಯದೆ ಮಾಡಿದ ಭಕ್ತಿ ಸಯಿಧಾನದ ಕೇಡು ಕಾಣಾ ಪರಮ[ಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ].
--------------
ಹೇಮಗಲ್ಲ ಹಂಪ
ಗುರುದೀಕ್ಷೆಯಿಲ್ಲದ ಶಿಲೆಯ ಕೊರಳಲ್ಲಿ ಕಟ್ಟಿಕೊಂಡು ಲಿಂಗವೆಂದು ನುಡಿವ ಚಾಂಡಾಲಿ ನೀ ಕೇಳಾ. ಗುರುದೀಕ್ಷೆಯಿಲ್ಲದುದು ಶಿಲೆಯಲ್ಲದೆ, ಲಿಂಗವಲ್ಲ. ಅದು ಎಂತೆಂದರೆ : ಬ್ಥಿತ್ತಿಯ ಮೇಲಣ ಚಿತ್ರಕ್ಕೆ ಚೈತನ್ಯವುಂಟೇನಯ್ಯಾ ? ಗುರುದೀಕ್ಷವಿಲ್ಲದ ಲಿಂಗಕ್ಕೆ ಪ್ರಾಣಕಳೆಯುಂಟೇನಯ್ಯಾ ? ಪ್ರೇತಲಿಂಗವ ಕೊರಳಲ್ಲಿ ಕಟ್ಟಿ ಭೂತಪ್ರಾಣಿಗಳಾಗಿ ಲಿಂಗವಂತರೆಂಬ ಪಾಷಂಡಿಗಳ ನೋಡಾ ! ಸಾಕ್ಷಿ :``ಪ್ರೇತಲಿಂಗ ಸಂಸ್ಕಾರಿ ಭೂತಪ್ರಾಣೀ ನ ಜಾನಾತಿ'' ಎಂದುದಾಗಿ, ಹೆಸರಿನ ಲಿಂಗ, ಹೆಸರಿನ ಗುರುವಾದರೆ ಅಸಮಾಕ್ಷನ ನೆನಹು ನೆಲೆಗೊಳ್ಳದು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗಗನದ ತಮವ ಕಳೆವರೆ ರವಿ ಅದ್ಥಿಕ ನೋಡಾ. ವಿಪಿನದ ತರುಗಿರಿಕಾಷ್ಠವೆಲ್ಲಕೆಯು ಸುರತರು ಅದ್ಥಿಕ ನೋಡಾ. ನವರತ್ನ ಮಾಣಿಕ್ಯ ಮೌಕ್ತಿಕ ವಜ್ರ ಪುಷ್ಯರಾಗ ಅರ್ಥಭಾಗ್ಯವೆಲ್ಲಕ್ಕೆಯಾ ಪರುಷವದ್ಥಿಕ ನೋಡಾ. ಧರೆಮೂರುಲೋಕದ ಗೋವುಗಳಿಗೆಲ್ಲ ಸುರಬ್ಥಿಯದ್ಥಿಕ ನೋಡಾ. ಈರೇಳು ಭುವನ ಹದಿನಾಲ್ಕು ಲೋಕವೆಲ್ಲಕ್ಕೆಯಾ ಗುರುವಿಂದದ್ಥಿಕವಿಲ್ಲ ನೋಡಾ. ಸಾಕ್ಷಿ :``ನ ಗುರೋರದ್ಥಿಕಂ ನ ಗುರೋರದ್ಥಿಕಂ ನ ಗುರೋರದ್ಥಿಕಂ | ವಿದಿತಂ ವಿದಿತಂ ವಿದಿತಂ ವಿದಿತಂ ಶಿವಶಾಸನಂ ||'' ಎಂದುದಾಗಿ, ಗುರುವಿಂದದ್ಥಿಕವಿಲ್ಲ, ಗುರುವಿಂದದ್ಥಿಕವಿಲ್ಲ, ಗುರುವೆ ಪರಮಾತ್ಮ. ಎನ್ನ ಮಾನವಜನ್ಮದ ಹೊಲೆಯ ಕಳೆದು ಶಿವದೇಹಿಯ ಮಾಡಿದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗೆ ಇದೇ ನರಕ.
--------------
ಹೇಮಗಲ್ಲ ಹಂಪ
ಗೂಡಿನೊಳಗಿಪ್ಪ ಪಕ್ಷಿಗೆ ಗೂಡಿನ ಹೊರಗೆ ಪಕ್ಕ ಬಂದಿವೆ. ನೋಡಿದರೆ ಪಕ್ಷಿ ಒಳಗೆ, ರೆಕ್ಕೆ ಹೊರಗೆ. ಪಕ್ಷಿಯ ಎರಡು ರೆಕ್ಕೆಯೊಳು, ಒಂದು ರೆಕ್ಕೆಯೊಳು ಚಂದ್ರನಡಗಿಪ್ಪ, ಒಂದು ರೆಕ್ಕೆಯೊಳು ಸೂರ್ಯನಡಗಿಪ್ಪ. ಪಕ್ಷಿಯ ಕೊಂದು ಗೂಡಿನ ಹೊರಗಣ ರೆಕ್ಕೆಯೊಳಿಪ್ಪ ಚಂದ್ರ ಸೂರ್ಯರ ಶೀತ ಉಷ್ಣವ ತೆಗೆಸಿ ರೆಕ್ಕೆಯ ಮುರಿದಾತನಲ್ಲದೆ ಶಿವಶರಣನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುಕೃಪೆಯಿಲ್ಲದವನ ಕರ್ಮಹರಿಯದು. ಲಿಂಗ ಸೋಂಕದವನ ಅಂಗ ಚಿನ್ನವಡಿಯದು. ಜಂಗಮದರುಶನವಿಲ್ಲದವಂಗೆ ಮೋಕ್ಷಾರ್ಥಬಟ್ಟೆ ದೊರೆಯದು. ವಿಭೂತಿಯ ಧರಿಸದವ[ಂಗೆ] ದುರಿತಲಿಖಿತಂಗಳು ತೊಡೆಯವು. ರುದ್ರಾಕ್ಷಿಯ ಧರಿಸದವಂಗೆ ರುದ್ರಪದ ಸಾಧ್ಯವಾಗದು. ಪಂಚಾಕ್ಷರಿಯ ಜಪಿಸದವನ ಪಂಚಭೂತದ ಹೊಲೆಯಳಿಯದು. ಪಾದೋದಕವ ಕೊಳದವನ ಪರಿಭವಂಗಳು ಅಳಿಯವು. ಪ್ರಸಾದ ಸೋಂಕದವಂಗೆ ಮುಕ್ತಿ ಸಾಧ್ಯವಾಗದು. ಇಂತೀ ಅಷ್ಟಾವರಣದಲ್ಲಿ ನೈಷೆ*ವಾರಿಯಾಗದನ್ನಕ್ಕರ ದೇವನಲ್ಲ ಭಕ್ತನಲ್ಲ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುವಾದಾತನು ಪರಶಿವ ತಾನೆ ನೋಡಾ ! ಲಿಂಗವಾದಾತನು ಪರಶಿವ ತಾನೆ ನೋಡಾ ! ಜಂಗಮವಾದಾತನು ಪರಶಿವ ತಾನೆ ನೋಡಾ ! ವಿಭೂತಿಯಾದಾತನು ಪರಶಿವ ತಾನೆ ನೋಡಾ ! ರುದ್ರಾಕ್ಷಿಯಾದಾತನು ಪರಶಿವ ತಾನೆ ನೋಡಾ ! ಪಾದೋದಕವಾದಾತನು ಪರಶಿವ ತಾನೆ ನೋಡಾ ! ಪ್ರಸಾದವಾದಾತನು ಪರಶಿವ ತಾನೆ ನೋಡಾ ! ಪಂಚಾಕ್ಷರಿಯಾದಾತನು ಪರಶಿವ ತಾನೆ ನೋಡಾ ! ಇಂತು ಅಷ್ಟಾವರಣಮುಖದಲ್ಲಿ ನಿಂತು ಅಂತಕನ ಪಾಶವ ಸುಟ್ಟುರುಹಿದೆಯಲ್ಲ ಉರಗಧರ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುವರಿಯದವನೆಂದುದಾಸೀನವ ಮಾಡಿ ನೆರೆ ಬಲ್ಲವರನರಸಿ, ಭಕ್ತಿಯ ಮಾಡುವ ಪಾಪಿ ಮಾನವ ನೀ ಕೇಳು. ಸಾಕ್ಷಿ :``ಗುರೌ ಸನ್ನಿಹಿತೇ ಯಸ್ತು ಪೂಜಾಯಾಮನ್ಯಮಾನಸಃ | ಸ ಪಾಪೀ ನರಕಂ ಯಾತಿ ಕಾಲಸೂತ್ರಮಿವೋತ್ಸರೇತ್ ||'' ಎಂದುದಾಗಿ, ಗುರುವರಿಯದವನೂ ಅಲ್ಲ, ಬಲ್ಲವನೂ ಅಲ್ಲ. ಗುರು ನಿರಂಜನ, ಗುರು ಪರಶಿವ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗಳಿಗೆಯ ಮೇಲೆ ಗಾಳಿ ಹರಿಯದ ಮುನ್ನ ಕೊಳಗ ರಾಶಿಯ ನುಂಗುವುದ ಕಂಡೆ. ಮುಂಡವೆದ್ದು ಭೂಮಂಡಲವ ನುಂಗಿ ಆಲಿಯ ಮರೆಗೊಂಬುದ ಕಂಡೆನು. ಹಗಲೆಗತ್ತಲೆಯಾಗಿ ಆಗ ಗಿಡಿಯ ಮಂಜಿನ ಹೊಗೆಯ ದಾಳಿಯ ಕಂಡೆನು. ಅಂಬುಧಿಯೊಳು ಮುಳುಗಿ ಲೋಕ ತೇಲಾಡುವುದ ಕಂಡೆನು. ಇದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುದೈವದ ಮುಂದೆ ಪರದೈವವ ಹೊಗಳುವ ಕರ್ಮಿ ನೀ ಕೇಳಾ. ಗುರುದೈವವಿದ್ದ ಮೇಲೆ ಪರದೈವ ಸಲ್ಲದು. ಪರದೈವವಿದ್ದ ಮೇಲೆ ಗುರುದೈವ ಸಲ್ಲದು. ಪರದೈವವಿದ್ದು ಗುರುದೈವವೆಂದು ನುಡಿದುಕೊಂಡು ನಡೆದರೆ ನೆರೆ ನರಕದಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುದೀಕ್ಷೆಯ ಪಡೆದು, ಗುರುಲಿಂಗವ ಶಿರದಲ್ಲಿ ಧರಿಸಿ, ಗುರುಮಂತ್ರವ ಕರ್ಣದಲ್ಲಿ ಕೇಳಿ, ಗುರುಕುಮಾರ ತಾನಾಗಿ, ಮುಂಡೆಗೆ ಮುತ್ತೈದೆತನ ಬಂದಂತೆ ಭವದಂಡಲೆಯ ಕಳೆದು, ಶಿವಭಕ್ತನ ಮಾಡಿದ ಗುರುದೈವವನರಿಯದೆ, ಅನ್ಯದೈವವ ಹೊಗಳುವ ಕುನ್ನಿ ಮಾನವ ನೀ ಕೇಳಾ ! ಗರುದೇವರಲ್ಲದನ್ಯದೇವರ ಹೊಗಳಿದರೆ ನರಕವೆಂಬುದನರಿಯಾ. ಗುರುವೆ ಪರಬ್ರಹ್ಮ, ಪರಶಿವ. ಗುರುವಿನಿಂದ ಪರಮಾತ್ಮನ ನೆನಹು ಅಂಗದೊಳು ನೆಲೆಗೊಂಡಿತಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರು ಕರುಣಿಸೆ ಇಷ್ಟಲಿಂಗವೆನ್ನ ಕರವ ಸೇರಲು ಸರ್ವಾಂಗವೆಲ್ಲ ಲಿಂಗಮಯವಾದುದು ನೋಡಾ ! ಅದು ಎಂತೆಂದರೆ : ಇಷ್ಟಲಿಂಗದಿಂದ ಪ್ರಾಣಲಿಂಗ, ಪ್ರಾಣಲಿಂಗದಿಂದ ಭಾವಲಿಂಗತ್ರಯಗಳಾದವು. ಒಂದೊಂದು ಲಿಂಗದಲ್ಲಿ ಎರಡು ಲಿಂಗ ಹುಟ್ಟಿದವು : [ಇಷ್ಟಲಿಂಗದಿಂದ ಆಚಾರಲಿಂಗ ಗುರುಲಿಂಗ ಹುಟ್ಟಿದವು. ಪ್ರಾಣಲಿಂಗದಿಂದ ಶಿವಲಿಂಗ ಜಂಗಮಲಿಂಗ ಹುಟ್ಟಿದವು. ಭಾವಲಿಂಗದಿಂದ ಪ್ರಸಾದಲಿಂಗ ಮಹಾಲಿಂಗವೆಂಬೆರಡು ಲಿಂಗ ಹುಟ್ಟಿದವು.] ಇಂತೀ ಷಡ್ವಿಧಲಿಂಗದಲ್ಲಿ ಷಡ್ವಿಧಸಂಬಂಧ : ಘ್ರಾಣದಲ್ಲಿ ಆಚಾರಲಿಂಗ ಸಂಬಂಧ. ಜಿಹ್ವೆಯಲ್ಲಿ ಗುರುಲಿಂಗ ಸಂಬಂಧ. ನೇತ್ರದಲ್ಲಿ ಶಿವಲಿಂಗ ಸಂಬಂಧ. ತ್ವಕ್ಕಿನಲ್ಲಿ ಜಂಗಮಲಿಂಗ ಸಂಬಂಧ. ಶ್ರೋತ್ರದಲ್ಲಿ ಪ್ರಸಾದಲಿಂಗ ಸಂಬಂಧ. ಹೃದಯದಲ್ಲಿ ಮಹಾಲಿಂಗ ಸಂಬಂಧ. ಆಚಾರಲಿಂಗದರಿವು ಗಂಧ, ಗುರುಲಿಂಗದರಿವು ರಸ, ಶಿವಲಿಂಗದರಿವು ರೂಪು, ಜಂಗಮಲಿಂಗದರಿವು ಸ್ಪರುಶನ, ಪ್ರಸಾದಲಿಂಗದರಿವು ಶಬ್ದ, ಮಹಾಲಿಂಗದರಿವು ಪರಿಣಾಮ. ಒಂದೊಂದು ಲಿಂಗದಲ್ಲಿ ಆರುಲಿಂಗವಾದವು : ಆಚಾರಲಿಂಗದಲ್ಲಿ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಗುರುಲಿಂಗದಲ್ಲಿ ಆಚಾರಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಶಿವಲಿಂಗWದಲ್ಲಿಘೆ ಆಚಾರಲಿಂಗ ಗುರುಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಪ್ರಸಾದಲಿಂಗದಲ್ಲಿ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಮಹಾಲಿಂಗವೆಂಬೈದು ಲಿಂಗವುಂಟು. ಇಂತಿವೆಲ್ಲ ಕೂಡಲ್ಕೆ ಮೂವತ್ತಾರು ಲಿಂಗ. ಆ ಮೂವತ್ತಾರು ಲಿಂಗದಲ್ಲಿ ಒಂದೊಂದು ಲಿಂಗದಲ್ಲಿ ಆರುಲಿಂಗ ಕೂಡಲ್ಕೆ ಇನ್ನೂರ ಹದಿನಾರು ಲಿಂಗವಾದವು. ಅಂಗಪ್ರಭೆಯಲ್ಲಿ ಲಿಂಗಪ್ರಭೆಯಾಗಿ, ಲಿಂಗಪ್ರಭೆಯಲ್ಲಿ ಅಂಗಪ್ರಭೆಯಾಗಿ, ಅಂಗಲಿಂಗಸಂಬಂಧಿಯಾಗಿದ್ದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುವ ನರನೆಂದು ನುಡಿವ ಕುರಿಮಾನವರ ನೆರೆಹೊರೆಯಲ್ಲಿರಲಾಗದು. ದೊರೆಸಂಗವಾದರೂ ನುಡಿಸಲಾಗದು. ನುಡಿಸಿದರೆ ಮಹಾನರಕವಯ್ಯಾ ! ಗುರುವೆ ಪರಶಿವನು, ಗುರುವೆ ಪರಬ್ರಹ್ಮ, ಗುರುವು ಹರನಿಂದಲಧಿಕ. ಗುರುವಿನಿಂದ ಹರನ ಕಾಣ್ಬರಲ್ಲದೆ, ಹರನಿಂದ ಗುರುವ ಕಾಣಬಾರದು. ಅದು ಎಂತೆಂದರೆ : ಮತ್ರ್ಯಲೋಕಕ್ಕೆನ್ನ ಮಾನವಶರೀರಿಯ ಮಾಡಿ ಕಳುಹಿ, ಎನ್ನ ಮಾನವಜನ್ಮದ ಬಂಧನ ಕಳೆದು, ಗುರುವಾಗಿ ಬಂದು ಮುಕ್ತಿಯ ತೋರಿಸಿ ಕೈಲಾಸಕೆನ್ನ ಯೋಗ್ಯನ ಮಾಡಿದ. ಇಹದಲ್ಲಿ ಪುಣ್ಯ, ಪರದಲ್ಲಿ ಮುಕ್ತಿಯೆಂಬ ಇವನೆರಡು ಗುರುಪಾದದಲ್ಲಿಯೆ ಕಂಡೆನಯ್ಯಾ, ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರು ಸಂಸಾರಿ, ಶಿಷ್ಯ ಯತಿಯಾದರೇನಯ್ಯಾ ! ಗುನುವಿನೆಡೆಗೆ ಶಿಷ್ಯ ಭಕ್ತಿ ಕಿಂಕುರ್ವಾಣವಿರಬೇಕಯ್ಯಾ. ಇಲ್ಲದ ಅಹಂಕಾರದಲ್ಲಿ `ನಾ ಯತಿ, ಗುರು ಸಂಸಾರಿ ' ಎಂಬ ಭಾವ ಅಂಗದೊಳು ಹೊಳೆದರೆ ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುವೆಂಬೆರಡಕ್ಷರವು ಹರನಾಮವಲ್ಲದೆ ನರನಾಮವೇನಯ್ಯಾ ? ನರರ ನಾಮವೆನಲಾಗದು. ಗಿರಿಜೆಗೆ ಪರಮಾತ್ಮ ಹೇಳಿದ ವಾಕ್ಯವ ಕೇಳಿ ಅರಿಯಾ ಮನುಜ. ಸಾಕ್ಷಿ :``ಗುಕಾರಂ ಮಮ ರೂಪಂಚ ರುಕಾರಂ ತವ ರೂಪಕಂ | ಉಭಯೋಃ ಸಂಗಮೋ ದೇವಃ ಗುರುರೂಪೇ ಮಹೇಶ್ವರಿ ||'' ಎಂದುದಾಗಿ, ಪಾಷಾಣದಮುಖದಲ್ಲಿ ಮರುಜೇವಣಿಗೆ ಉದಯವಾದಂತೆ, ನರಜನ್ಮಮುಖದಿ ಬಂದು ಎನ್ನ ಸರ್ವಜನ್ಮವ ಕಳೆದು ಪುನರ್ಜಾತನ ಮಾಡಿದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವೆ ಎನ್ನ ಪ್ರಾಣ.
--------------
ಹೇಮಗಲ್ಲ ಹಂಪ
ಗಜಾಸುರಸಂಹರ ಗಗನಾತ್ಮ ಘನಗುರು ಗರುಡಗಂಧರ್ವರೊಂದ್ಯ ಘನಶಿವ ಗರಳಧರ ಘಟಾತ್ಮಜ್ಯೋತಿಪ್ರಕಾಶ
--------------
ಹೇಮಗಲ್ಲ ಹಂಪ
ಗುರುಹಸ್ತದಿಂದ ಹುಟ್ಟಿದ ಮೇಲೆ ಶಿವಭಕ್ತನೆಂಬ ನಾಮವಾದೀತಯ್ಯಾ ! ಗುರುಹಸ್ತದಿಂದ ಹುಟ್ಟದಿದ್ದರೆ ಶಿವಭಕ್ತನೆಂಬ ನಾಮವೆಲ್ಲಿಯದಯ್ಯಾ ? ತಮ್ಮ ಪೂರ್ವಜನ್ಮವನು ಗುರುವಿಂಗೊಪ್ಪಿಸಿ ಪುನರ್ಜಾತರಾಗಿ ಗುರುವಿನ ಕರುಣ ಕೃಪೆಯ ಪಡೆದ ಮೇಲೆ ಅನ್ಯಜೀವಿಯ ಹೊಗಳುವ ನರಕಜೀವಿಯನೆನಗೊಮ್ಮೆ ತೋರದಿರಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುದದಲ್ಲಿ ಆಧಾರಚಕ್ರ, ಪೃಥ್ವಿಯೆಂಬ ಮಹಾಭೂತ, ಚತುಃಷ್ಕೋಣ, ಚೌದಳಪದ್ಮ, ಅಲ್ಲಿಯ ಅಕ್ಷರ ವಶಷಸವೆಂಬ ನಾಲ್ಕು ಅಕ್ಷರ, ಅದರ ವರ್ಣ[ಪೀತ], ಅದಕ್ಕೆ ಅಧಿದೇವತೆ[ಬ್ರಹ್ಮ], ಭಕ್ತ ಮುಖ, ಕ್ರಿಯಾಶಕ್ತಿ, ಆಚಾರಲಿಂಗ, ನಕಾರ ಸ್ವಾಯತ. ಲಿಂಗಸ್ಥಾನದಲ್ಲಿ ಸ್ವಾಧಿಷಾ*ನಚಕ್ರ, ಅಪ್ಪುವೆಂಬ ಮಹಾಭೂತ, ಧನುರ್ಗತಿ, ಷಡುದಳಪದ್ಮ, ಅಲ್ಲಿಯ ಅಕ್ಷರವಾರು ಬ ಭ ಮ ಯ ರ ಲ ; ಅದರ ವರ್ಣ [ಶ್ವೇತ], ಅಧಿದೇವತೆ [ವಿಷ್ಣು], ಮಹೇಶ ಮುಖ, ಜ್ಞಾನಶಕ್ತಿ, ಗುರುಲಿಂಗ, ಅಲ್ಲಿ ಮಕಾರ ಸ್ವಾಯತ. ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ, ತೇಜವೆಂಬ ಮಹಾಭೂತ, ತ್ರಿಕೋಣ, ದಶದಳಪದ್ಮ, ಅಲ್ಲಿಯ ಅಕ್ಷರ ಹತ್ತು ; ಡಢಣ ತಥದಧನ ಪಫ, ಅದಕ್ಕೆ [ಹರಿತ]ವರ್ಣ, ಅಧಿದೇವತೆ [ರುದ್ರ], ಪ್ರಸಾದಿ ಮುಖ, ಇಚ್ಚಾಶಕ್ತಿ , ಶಿವಲಿಂಗ, ಶಿಕಾರ ಸ್ವಾಯತ. ಹೃದಯಸ್ಥಾನದಲ್ಲಿ ಅನಾಹತಚಕ್ರ, ವಾಯುವೆಂಬ ಮಹಾಭೂತ, ಷಟ್ಕೋಣ, ದ್ವಿದಶದಳಪದ್ಮ, ಅಲ್ಲಿಯ ಅಕ್ಷರ ಹನ್ನೆರಡು : ಕ ಖ ಗ ಘ ಙ ಚ ಛ ಜ ಝ ಞ ಟ ಠ ಅದರ ವರ್ಣ [ಮಾಂಜಿಷ್ಟ], ಅದಕ್ಕೆ ಅಧಿದೇವತೆ [ಈಶ್ವರ], ಪ್ರಾಣಲಿಂಗಿ ಮುಖ, Wಆದಿಘೆಶಕ್ತಿ, ಜಂಗಮಲಿಂಗ, ಅಲ್ಲಿ ವಕಾರ ಸ್ವಾಯತ. ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ, ಆಕಾಶವೆಂಬ ಮಹಾಭೂತ, ವರ್ತುಳಾಕಾರ, ಷೋಡಷದಳಪದ್ಮ, ಅಲ್ಲಿಯ ಅಕ್ಷರ ಹದಿನಾರು :ಅ ಆ ಇ ಈ ಉ ಊ ಋ Iೂ ಲೃ ಲೃೂ ಏ ಐ ಓ ಔ ಅಂ ಅಃ, ಅದಕ್ಕೆ ವರ್ಣ [ಕಪೋತ], ಅಧಿದೇವತೆ ಸದಾಶಿವನು, ಶರಣ ಮುಖ, [ಪರಾ]ಶಕ್ತಿ , [ಪ್ರಸಾದಲಿಂಗ, ಯಕಾರ ಸ್ವಾಯತ. ಭ್ರೂಮಧ್ಯದಲ್ಲಿ ಆಜ್ಞಾಚಕ್ರ, ಮನವೆಂಬ ಮಹಾಭೂತ, ದ್ವಿದಳಪದ್ಮ,] ಅಲ್ಲಿಯ ಅಕ್ಷರವೆರಡು :ಹ ಷ ವೆಂಬ [ಅಕ್ಷರ], ಮಾಣಿಕ್ಯ ವರ್ಣ, [ಅದಕ್ಕೆ ಅಧಿದೇವತೆ ಮಹೇಶ್ವರ], ಐಕ್ಯ ಮುಖ, ಕ್ರಿಯಾಶಕ್ತಿ, ಮಹಾಲಿಂಗ, ಓಂಕಾರ ಸ್ವಾಯತ. ಇಂತೀ ಷಡುಚಕ್ರದ, ಷಡುಸ್ಥಳದ, ಷಡುಲಿಂಗದ, ಷಡುಶಕ್ತಿಯರಿಗೆ ಷಡಕ್ಷರವೆ ಪ್ರಾಣವಾಗಿ ವಿರಾಜಿಸುತ್ತಿದ್ದಿತಯ್ಯ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುಕರುಣದ ಇಷ್ಟಲಿಂಗವ ಜರಿದನ್ಯದೈವಕ್ಕೆರಗುವ ಕುರಿಗಳ ಶಿವಭಕ್ತರೆನಬಹುದೆ ? ಪದ :ಪತಿಯಿರಲು ಪರಪುರುಷಗೆ ಗತಿಯಾಗಿ ತಿರುಗುವ ಹೊಲತಿಯ ಮತಿಯಂತೆ ಸಜ್ಜನೆಯೆನಬಹುದೆ ? ಸಿತಕಂಠಲಿಂಗ ಕರದೊಳಿರೆ ಪರ ಪ್ರತುಮೆಗೆರಗುವ ಹೊಲೆಯನ ಕ್ಷಿತಿಯೊಳು ಶಿವಭಕ್ತನೆನಬಹುದೆ ? | 1 | ಮಾರಿ ಮಸಣಿ ಮೈಲಾರನ ಬಳಿ ನೀರ ಕುಡಿದು ಅವರೆಂಜಲ ಮಾರಾರಿಲಿಂಗಕ್ಕೆ[ರೆದುಂ]ಬ ಸಮ ಗಾರನ ಯಮರಾಜ ಬಾಧಿಸಿ ರೌರವ ನರಕದೊಳಿಕ್ಕುವನಿದ ಧರಣಿಯೊಳು ತಿಳಿದು ನೋಡಿರೌ. | 2 | ತಲೆಯೊಳು ಕಿಚ್ಚು ತಳಿಗೆ ಶಸ್ತ್ರ ಸಲೆ ಬೇವಿನುಡುಗೆ ಬೆನ್ನಲಿ ಸಿಡಿ ಹಲವು ಹರಕೆಯನು ಪರದೈವ ಗಳಿಗೆ ಮಾಡುವ ಕ್ಷೀಣ ಅಜ್ಞಾನಿ ಹೊಲೆಯ ತಾ ಶಿವಭಕ್ತನೆಂದೆನೆ ಮುಂದೆ ಕುಲಕೋಟಿ ನರಕದೊಳಿಕ್ಕುವ ನೇಮ. | 3 | ಗುರುಲಿಂಗಜಂಗಮವೆಂಬವು ಪರಶಿವನ ಚಿದ್ರೂಪವೆಂಬುದ ನರಿಯದ ಹಲವು ದೈವಗಳಿ ಗೆರಗಿ ಸೂಳೆಯಂತೆ ತಿರುಗುವ ನರನ ಲಿಂಗವಂತನೆಂದೆನ್ನೆ ಮುಂದೆ ಹರ ಶಿಕ್ಷೆಯ ಮಾಡುವ ನನಗೆ. | 4 | ಶಿವನೆ ದೈವ ಲಿಂಗಾಂಗಿಯೆ ಕುಲಜ ಭವಿಗಳೆಲ್ಲರು ಅಕುಲಜರೊ ಬವರ ಧರೆಯೊಳುಸುರಿದೆ ಹವಿನೇತ್ರ ಪಡುವಿಡಿ ಸಿದ್ಧಮಲ್ಲನೆಂ ಬುವನ ಸರ್ವಕನೆಂದು ನಂಬಿದ ಅವ ನಿತ್ಯ ಸತ್ಯ ಸಜ್ಜನನೆಂಬೆ. | 5 |
--------------
ಹೇಮಗಲ್ಲ ಹಂಪ
ಗುರು ನರನೆಂದು, ಸತ್ತನುಕೆಟ್ಟನುಯೆಂಬ ನರಕಜೀವಿ ನೀ ಕೇಳಾ. ಗುರು ಸತ್ತರೆ ಜಗವುಳಿಯಬಲ್ಲುದೆ ? ಗುರು ಅಳಿವವನೂ ಅಲ್ಲ, ಉಳಿವವನೂ ಅಲ್ಲ. ಸಾಕ್ಷಿ :``ಸ್ಥಾವರ ಜಂಗಮಾದರಂ ನಿರ್ಮಾಲ್ಯೇ ಸ್ಥಿರಮೇವ ಚ | (?) ಜ್ಞಾನವಂದಿತಪಾದಾಯ ತಸ್ಮೆ ೈ ಶ್ರೀಗುರುವೇ ನಮಃ ||'' ಎಂದುದಾಗಿ, ಗುರು ಸತ್ತ, ಕೆಟ್ಟ ಎಂದು ಬಸುರ ಹೊಯಿದುಕೊಂಡು ಅಳುತಿಪ್ಪ ಕುರಿಮಾನವರಿಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕ ಪ್ರಸಾದವಿಲ್ಲವಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುಶಿಷ್ಯ ಸಂಬಂಧಕೆ ಹೋರಾಡಿ, ಧರೆಯೆಲ್ಲ ಬಂಡಾದರು ನೋಡಾ. ಗುರುವಿನ ಭವವ ಶಿಷ್ಯನರಿಯ, ಶಿಷ್ಯನ ಭವವ ಗುರುವರಿಯ. ಜ್ಞಾನಹೀನ ಗುರುವಿಂಗೆ ಜ್ಞಾನಹೀನ ಶಿಷ್ಯನಾದರೆ ಅವರ ಪಾತಕಕೆ ಕಡೆ ಏನಯ್ಯಾ ? ಸಾಕ್ಷಿ :``ಜ್ಞಾನಹೀನಗುರೋ ಪ್ರಾಪ್ತಂ ಶಿಷ್ಯಜ್ಞಾನಂ ನ ಸಿದ್ಧತಿ | ಮೂಲಚ್ಛಿನ್ನೇ ಯಥಾವೃಕ್ಷೇ ಗಂಧಃ ಪುಷ್ಪಂ ಫಲಂ ತಥಾ ||'' ಎಂದುದಾಗಿ, ಹೀಗೆಂಬುದನರಿಯದೆ, ಹೊನ್ನು ವಸ್ತ್ರದಾಸೆಗೆ ಲಿಂಗವ ಮಾರಿಕೊಂಡುಂಬ ಗುರು ಶಿವದ್ರೋಹಿ, ಲಿಂಗವ ಕೊಂಬ ಶಿಷ್ಯ ನರದ್ರೋಹಿ. ಇಂತಪ್ಪ ಗುರು ಶಿಷ್ಯ ಸಂಬಂಧವ ನೋಡಿ ನೋಡಿ ನಗುತಿದ್ದ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರು ಕರುಣಾಕರ ಪರಶಿವ ಪರಮ ಗುರು ಭವಹರ ಚಿನ್ಮಯ ಚಿದ್ರೂಪ ಗುರುವೆ ನಿರಂಜನ ನಿರ್ಮಳ ನಿಃಖಳಗುರುವೆ ಸುರತುರವೆ. ಪದ :ವಹ್ನಿ ವಿಪಿನ ತರು ಕಾಷ*ವ ಸುಡುವಂ ತೆನ್ನ ಭವದ ಗೊಂಡಾರಣ್ಯವ ನೆನ್ನಯ ಗುರುಕರುಣಗ್ನಿಯಲ್ಲಿ ಉರುಹಿ ಮುನ್ನಿನ ಸುಕೃತದ ದೆಸೆಯಲಿ ಗುರುಕೃಪೆ ಅನ್ಯಥಾ ಭಾಗ್ಯವ ಪಡೆದೆನು ಪರುಷದ ಸನ್ನಿಧಿಯಲಿಹ ಲೋಹ ಪರಿಗು ಸಯುಕ್ತ. | 1 | ಅಂಗಾತ್ಮನ ಪ್ರಾಣನ ಭವಿತನಗಳ ಹಿಂಗಿಸಿ ಅವಿರಳ ಪರಬ್ರಹ್ಮದ ಮಹಾ ಲಿಂಗವ ಕರ ಉರ ಶಿರ ಮನ ಭಾವದಲ್ಲಿ ಸಂಗವ ಮಾಡಿಯೆ ಪ್ರಕೃತಿ ವಿಕೃತಿ ವಿಷ ಯಂಗಳನೆಲ್ಲವ ತೊರಸಿ ಗಣಂಗಳ ಡಿಂಗರಿಗನ ಮಾಡಿದೆನ್ನಯ ಗುರುಮಹಿಮೆ. | 2 | ದುರ್ಲಿಖಿತಂಗಳ ತೊಡೆದು ವಿಭೂತಿ ಧರಿಸ ಕಲಿಸಿ ಫಣಿಯೊಳು ರುದ್ರಾಕ್ಷಿಯ ಸರಮಾಲೆಯ ತೊಡಕಲಿಸಿ ಷಡ ಕ್ಷರಿಯ ಸ್ಮರಿಸ ಕಲಿಸಿ `ಶಿವಧ್ಯಾನವ ಹಿಂಗದ ಲಿರು ನೀ ಕಂದಾ' ಯೆಂದು ಅಭಯಕರ ಶಿರದೊಳು ಮಡುಗಿಯೆ ಸಲುಹಿದ ಗುರು ನಿತ್ಯ. | 3 | ರಂಬಿಸಿ ನಿಲ್ಲದಳುವಿಂಗೆ ಕಂದೆಗೆ ಮೇಣ್ ರಂಭೆ ಸ್ತನವನೂಡಿಯೆ ಸಲಹುವ ತೆರ ಹಂಬಲಿಸಿ ಭಯಪಡುತಿಹಗೆ ಸೂರ್ಯ ನೀನೆ ಶಂಭು ಚರಣತೀರ್ಥಪ್ರಸಾದವ ನುಂಬಕಲಿಸಿಯೆ ಅನ್ಯಹಾರದ ಬೆಂಬಳಿಗಳ ಕೆಡಿಸಿದೆನ್ನಯ ಗುರು ಮಹಿಮೆ. | 4 | ಮಾಡಕಲಿಸಿದ ಲಿಂಗದ ಸೇವೆಯ ಸದಾ ನೀಡಕಲಿಸಿದ ಜಂಗಮಕಮೃತಾನ್ನವ ಬೇಡಕಲಿಸಿ ಮುಕ್ತಿಯ ಫಲಪದವ ಗೂಡಕಲಿಸಿ ಶಿವಾನಂದದಾ ಲೀಲೆಯೊ ಳಾಡಕಲಿಸಿ ನಿಜ ನಿತ್ಯ ನಿರ್ಮಳನ ಮಾಡಿದ ಗುರುವರ ಸಿದ್ಧಮಲ್ಲೇಶಾ | 5 |
--------------
ಹೇಮಗಲ್ಲ ಹಂಪ
ಗುರುವಿನಲ್ಲಿ ಲಿಂಗವುಂಟು, ಜಂಗಮವುಂಟೆಂದು ಗುರುಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ. ಲಿಂಗದಲ್ಲಿ ಜಂಗಮವುಂಟೆಂದು, ಗುರುವುಂಟೆಂದು ಲಿಂಗಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ. ಜಂಗಮದಲ್ಲಿ ಗುರುವುಂಟು, ಲಿಂಗವುಂಟು ಜಂಗಮ ಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ. ಒಂದೇ ಮೂರ್ತಿ ಮೂರೆಂದಾತ ನಮ್ಮ ಬಸವಣ್ಣನಯ್ಯಾ. `ಏಕಮೂರ್ತಿ ತ್ರಯೋರ್ಭಾಗಾಃ' ಎಂದುದಾಗಿ, ಗುರು ಲಿಂಗಜಂಗಮವಾದಾತ ಒಬ್ಬನೆ ಶಿವನೆಂದು ಪ್ರಸಾರ ಮಾಡಿ ಭಕ್ತಿಯ ಬೆಳಸಿದಾತ ನಮ್ಮ ಬಸವಣ್ಣನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಗುರುವೆ ಬೇರೆ ಹರ ಬೇರೆಯೆಂಬ ಕುನ್ನಿ ಮಾನವ ನೀ ಕೇಳು. ಗುರು ಬೇರಲ್ಲ, ಹರ ಬೇರಲ್ಲ ; ಗುರುವೂ ಹರನೂ ಒಂದೇ. ಗುರು ಕಿರಿದ ಮಾಡಿ, ಹರನ ಹಿರಿದು ಮಾಡಬಾರದು. ಹರನ ಕಿರಿದು ಮಾಡಿ, ಗುರುವ ಹಿರಿದು ಮಾಡಬಾರದು. ಪಾರ್ವತಿಯೊWಳುಘೆ ಪರಮೇಶ ಗುರುವಿನ ಮಹಿಮೆ ಹೇಳಿದ. ಕೇಳರಿಯಾ ಮನುಜ ? ಅದು ಎಂತೆಂದರೆ. ಗುರುದೇವನು ಮಹಾದೇವನು, ಗುರುದೇವನೆ ಸದಾಶಿವನು, ಗುರುವಿಂದ ಪರವಿನ್ನಾವುದೂ ಇಲ್ಲ. ಸಾಕ್ಷಿ :``ಗುರುದೇವೋ ಮಹಾದೇವೋ ಗುರುದೇವಃ ಸದಾಶಿವಃ | ಗುರುದೈವಾತ್ ಪರನ್ನಾಸ್ತಿ ತಸ್ಮೆ ೈ ಶ್ರೀಗುರುವೇ ನಮಃ ||'' ಎಂದುದಾಗಿ, ಹೀಗೆಂಬ ಗುರುವ ಮರೆದಾಗಳೆ ಭವಮಾಲೆ ತಪ್ಪದಯ್ಯಾ, [ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ].
--------------
ಹೇಮಗಲ್ಲ ಹಂಪ

ಇನ್ನಷ್ಟು ...