ಅಥವಾ
(33) (13) (5) (0) (2) (0) (0) (0) (4) (5) (1) (4) (0) (0) ಅಂ (8) ಅಃ (8) (27) (0) (29) (1) (0) (2) (1) (9) (0) (0) (0) (0) (0) (0) (0) (8) (0) (3) (5) (12) (19) (0) (10) (5) (21) (2) (2) (0) (3) (12) (14) (0) (11) (33) (0)

ಪದದಿಂದ ಪ್ರಾರಂಭವಾಗುವ ವಚನಗಳು:

ತ್ರಿವಿಧ ತನುವಿಗೆ ತ್ರಿವಿಧ ದೀಕ್ಷೆ. ತ್ರಿವಿಧ ದೀಕ್ಷೆಗೆ ತ್ರಿವಿಧ ಲಿಂಗ. ತ್ರಿವಿಧ ಲಿಂಗಕ್ಕೆ ತ್ರಿವಿಧ ಕರವ ತೋರಿದ ಗುರುವೆ ಶರಣು. ಅದು ಎಂತೆಂದರೆ : ಕಾಯದ ಕರದಲ್ಲಿ ಇಷ್ಟಲಿಂಗವ ಕೊಟ್ಟು ಸ್ಥೂಲತನುವಿನ ಪೂರ್ವಾಶ್ರಯವ ಕಳೆದು ಕ್ರಿಯಾದೀಕ್ಷೆಯ ಮಾಡಿದ ಗುರುವೆ ಶರಣು. ಮನದ ಕರದಲ್ಲಿ ಪ್ರಾಣಲಿಂಗವ ಕೊಟ್ಚು ಸೂಕ್ಷ್ಮತನುವಿನ ಪೂರ್ವಾಶ್ರಯವ ಕಳೆದು ಪ್ರಣಮಪಂಚಾಕ್ಷರಿಯ ಕರ್ಣದಲ್ಲಿ ಹೇಳಿ, ಮಂತ್ರದೀಕ್ಷೆಯ ಮಾಡಿದ ಗುರುವೆ ಶರಣು. ಭಾವದ ಕರದಲ್ಲಿ ಭಾವಲಿಂಗವ ಕೊಟ್ಟು ಕಾರಣತನುವಿನ ಪೂರ್ವಾಶ್ರಯವ ಕಳೆದು ಮಸ್ತಕದಲ್ಲಿ ಹಸ್ತವ ಮಡುಗಿ ವೇಧಾದೀಕ್ಷೆಯನಿತ್ತ ಮದ್ಗುರುವೆ ಶರಣು. ನಿಮ್ಮ ಪಾದದಡಿದಾವರೆಯೊಳು ಮನವ ಭೃಂಗನ ಮಾಡಿಸು ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ತನುಲಿಂಗವೆಂದೆಂಬ ಅದ್ವೈತಿಯ ಮಾತ ಕೇಳಲಾಗದು. ಮನಲಿಂಗವೆಂದೆಂಬ ಮೂರ್ಖನ ಮಾತ ಕೇಳಲಾಗದು. ಪ್ರಾಣಲಿಂಗವೆಂದೆಂಬ ಪ್ರಪಂಚಿಗಳ ಮಾತ ಕೇಳಲಾಗದು. ತನುಲಿಂಗವಾದರೆ ಹೊನ್ನು ಹೆಣ್ಣು ಮಣ್ಣು ಮೂರೆಂಬ ಅನ್ಯವಿಷಯಕ್ಕೆ ಸಿಲ್ಕಿ ಅನಂತ ಪಾಡಿಗೆ ಗುರಿಯಾಗಬಹುದೇ ? ಮನಲಿಂಗವಾದರೆ ಮನವಿಕಾರದ ಭ್ರಮೆಯಲ್ಲಿ ತೊಳಲಿ ಬಳಲಿ ಅಜ್ಞಾನಕ್ಕೆ ಗುರಿಯಾಗಬಹುದೇ ? ಪ್ರಾಣಲಿಂಗವಾದರೆ ಪ್ರಳಯಕ್ಕೆ ಗುರಿಯಾಗಿ ಸತ್ತು ಸತ್ತು ಹೂಳಿಸಿಕೊಳಬಹುದೇ ? ತನು ಮನ ಪ್ರಾಣಲಿಂಗವಾದರೆ ಜನನ ಮರಣವೆಂಬ ಅಣಲಿಂಗೆ ಗುರಿಯಾಗಿ ನಾನಾ ಯೋನಿಯಲ್ಲಿ ತಿರುಗಬಹುದೇನಯ್ಯಾ ? ತನು ಮನ ಪ್ರಾಣವಾ ಘನಮಹಾಲಿಂಗಕ್ಕೆ ಸರಿಯೆಂದು ಅಜ್ಞಾನದಿಂದ ತನುವೆ ಲಿಂಗ ಮನವೆ ಲಿಂಗ ಪ್ರಾಣವೆ ಲಿಂಗವೆಂದು ಇಷ್ಟಲಿಂಗವ ಜರಿದು ನುಡಿವ ಭ್ರಷ್ಟ ಬಿನುಗು ದುರಾಚಾರಿ ಹೊಲೆಯರ ನಾಯಕನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ತ್ರಿಪುರಸಂಹರ ತ್ರಿಶೂಲಿ ತ್ರಿನಯನ ತ್ರಿಗುಣಕತೀತ ತ್ರಿದೇವರಾತ್ಮಲಿಂಗ ತ್ರಿಮಲವಿದೂರ ತ್ರಿಲಿಂಗೇಶ ತ್ರಿಪ್ರಸಾದ ತ್ರಿಲೋಕೇಶ ತ್ರಿಣೇಯ ತ್ರಿತನು ಆತ್ಮವಿಲೇಪ ತಿಮಿರಹರದ್ಭಾನು ತ್ರ್ಯಕ್ಷರ ಅWಮಘೆರತ್ರನೀಲಕಂಠ ತ್ರಿಯಾಸ್ಯರುದ್ರ ಪರಮಾರ್ಥ ಪರಬ್ರಹ್ಮ ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ತನುವೆಂಬ ಹೊಲದೊಳು ಜೀವವೆಂಬ ಒಕ್ಕಲಿಗ, ಅಜ್ಞಾನವೆಂಬ ಕೂರಿಗೆ, ಪಂಚೇಂದ್ರಿಯವೆಂಬ ತಾಳುಗಳಿಗೆ, ಪಂಚವಿಷಯವೆಂಬ ಸೆಡ್ಡಿಯಕೋಲನಿಕ್ಕಿ, ಚಿತ್ತವೆಂಬ ಸೆಡ್ಡಿಯಬಟ್ಟಲಿಗೆ ಬುದ್ಧಿಯೆಂಬ ಹಸ್ತದಿಂದ ದಶವಾಯುಗಳೆಂಬ ಬೀಜವ ಬಿತ್ತಿ, ಕರಣಾದಿಗುಣವೆಂಬ ಬೆಳೆಯ ಬೆಳೆವುತ್ತಿರೆ, ಮನವಿಕಾರಭ್ರಮೆಯೆಂಬ ಮೂಷಕನ ಹಿಂಡು ಕವಿಯೆ, ಅದಕ್ಕೆ ರೋಷವೆಂಬ ಬಡಿಗಲ್ಲನೊಡ್ಡಿ, ಆಸೆಯೆಂಬ ಜಂಪವಿಟ್ಟು, ರೋಷವೆಂಬ ಬಡಿಗಲ್ಲು ಮೇಲೆ ಬೀಳೆ, ಒದ್ದಾಡಿ ಒರಲೊರಲಿ ಸಾಯುತಿರೆ, ತನುವೆಂಬ ಹೊಲನ ಕೆಡಿಸಿ, ಜೀವವೆಂಬ ಒಕ್ಕಲಿಗನ ಕೊಂದು, ಅಜ್ಞಾನವೆಂಬ ಕೂರಿಗೆಯನುರುಹಿ, ಪಂಚೇಂದ್ರಿಯವೆಂಬ ತಾಳ ಮುರಿದು, ಪಂಚವಿಷಯವೆಂಬ ಸೆಡ್ಡಿಯಕೋಲ ಸೀಳಿಬಿಟ್ಟು, ಚಿತ್ತವೆಂಬ ಸೆಡ್ಡಿಯಬಟ್ಟಲನೊಡದು, ಬುದ್ಧಿಯೆಂಬ ಹಸ್ತದ ಸಂದ ತಪ್ಪಿಸಿ, ದಶವಾಯುಗಳೆಂಬ ಬೀಜವ ಹುರಿದು, ಕರಣೇಂದ್ರಿಯವೆಂಬ ಬೆಳೆಯ ಕೊಯಿದು ಕೆಡಿಸಿ, ನಿಃಕರಣವಾಗಿ ನಿಜಲಿಂಗಪದವ ಸಾರಿಪ್ಪ ಶರಣಂಗೆ ನಮೋ ನಮೋ ಎಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ತ್ರಿಪುಂಡ್ರ ತ್ರಿದೇವರುತ್ಪತ್ಯಸ್ಥಿತಿಲಯವ ಕೆಡಿಸುವುದೆಂದು ಭಾಳೊಳು ಶ್ರೀ ವಿಭೂತಿಯ ಧರಿಸಕಲಿಸಿದನಯ್ಯಾ ಶ್ರೀಗುರು. ಅದು ಎಂತೆಂದರೆ : ಪ್ರಥಮಪುಂಡ್ರ ಬ್ರಹ್ಮನ ಉತ್ಪತ್ಯವ ಕೆಡಿಸುವುದೆಂದು, ದ್ವಿತೀಯಪುಂಡ್ರ ವಿಷ್ಣುವಿನ ಸ್ಥಿತಿಗತಿಯ ಕೆಡಿಸುವುದೆಂದು ತೃತೀಯಪುಂಡ್ರ ರುದ್ರನ ಲಯದ ಹೊಡೆಗಿಚ್ಚ ಕೆಡಿಸುವುದೆಂದು ಅರುಹಿದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ತೆರಣಿಯ ಹುಳು ತನ್ನ ಮನೆಯೊಳು ತಾನೆ ನುಲಿ ಸುತ್ತಿಕೊಂಡು ಸಾವಂತೆ, ಎನ್ನ ಸಂಸಾರ ಸುಖ ದುಃಖ ಎನ್ನನೆ ಸುತ್ತಿಕೊಂಡು ಕಾಲಮೃತ್ಯುವಿಂಗೆ ಗುರಿಮಾಡಿ ಕಾಡುತಿಪ್ಪುದು ನೋಡಯ್ಯಾ, ಈ ಸಂಸಾರ ಸುಖ ದುಃಖವ ನೀಗಿ ನಿಶ್ಚಿಂತದಲ್ಲಿಪ್ಪುದೆಂದೊಯೆಂದೊ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ತನುವ್ಯಸನವೆತ್ತಿದಲ್ಲಿ ತರಣಿಕೋಟಿತೇಜಪ್ರಕಾಶನ ನೆನೆವೆನು. ಮನವ್ಯಸನವೆತ್ತಿದಲ್ಲಿ ಮನೋಮೂರ್ತಿಯ ನೆನೆವೆನು. ಧನ ವ್ಯಸನವೆತ್ತಿದಲ್ಲಿ ದಯಾಕರುಣಕೃಪಾಲನ ನೆನೆವೆನು. ರಾಜ್ಯವ್ಯಸನವೆತ್ತಿದಲ್ಲಿ ವಿಷಕಂಠನ ನೆನೆವೆನು. [ಉತ್ಸಾಹ ವ್ಯಸನವೆತ್ತಿದಲ್ಲಿ ರಜತಗಿರಿನಿವಾಸನ ನೆನೆವೆನು. ವಿಶ್ವಾಸವ್ಯಸನವೆತ್ತಿದಲ್ಲಿ ಉರ್ವೀಪಾಲನ ನೆನೆವೆನು.] ಸೇವಕವ್ಯಸನವೆತ್ತಿದಲ್ಲಿ ಶರಣಗಣರಕ್ಷಾಮಣಿಯ ನೆನೆವೆನು. ಇಂತೀ ಸಪ್ತವ್ಯಸನಂಗಳ ಮುಖದಲ್ಲಿ ತರಣಿಕೋಟಿಪ್ರಕಾಶ, ಮನೋಮೂರ್ತಿ, ದಯಾಕರುಣಕೃಪಾಲ, ರಜತಗಿರಿನಿವಾಸ, ಉರ್ವೀಪಾಲ, ವಿಷಕಂಠ, ಶರಣಗಣರಕ್ಷಾಮಣಿ ಶಿವಾಯ ಪರಾಯ ಭವಾಯಯೆಂದು ಭವಸಾಗರವ ದಾಂಟಿ ನಿತ್ಯನಾಗಿರ್ದೆ ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ತನುವಿನ ಹಂಬಲವ ಮರೆದಂಗೆ ತನುವ್ಯಸನವೆಲ್ಲಿಯದೋ ? ಮಾಯದ ಬೇಳುವೆಯನೊರಸಿದಾತಂಗೆ ಮನವ್ಯಸನವೆಲ್ಲಿಯದೋ ? ಶಿವಜ್ಞಾನದೊಳಿಂಬುಗೊಂಡಾತಂಗೆ ಧನವ್ಯಸನವೆಲ್ಲಿಯದೋ ? ಶಿವಲಿಂಗ ವಿಶ್ವಾಸದಿ ಅನುಮಿಷದೃಷ್ಟಿಯಿಟ್ಟಾತಂಗೆ ವಿಶ್ವಾಸವ್ಯಸನವೆಲ್ಲಿಯದೋ ? ಶಿವಲಿಂಗ ಸಾಧ್ಯಮಾಡಿ ಕರುಣಕೃಪೆ ಪಡೆದಾತಂಗೆ ಸೇವಕವ್ಯಸನವೆಲ್ಲಿಯದೋ ? ಇಂತೀ ಸಪ್ತವ್ಯಸನಂಗಳಮುಖದಲ್ಲಿ ಶಿವತನು ಶಿವಮನ ಶಿವದ್ರವ್ಯ ಶಿವರಾಜ್ಯ ಶಿವಉತ್ಸಾಹ ಶಿವವಿಶ್ವಾಸ ಶಿವಸೇವಕವೆಂದಿಪ್ಪ ಶರಣರ ಚೆಮ್ಮಾವುಗೆಯ ಕಿರುಗುಣಿಕೆಯ ಮಾಡೆನ್ನನಿರಿಸಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ