ಜ್ಞಾತೃ ಜ್ಞಾನ ಜ್ಞೇಯವೆಂಬ ಮಾತಿನ ಮಾತಿಲ್ಲದೆ
ಇದರ ಧಾತು ಕುಳಿದುತ್ಪತ್ತಿಯನಾರು ಬಲ್ಲರೊ?
ಮನದ ಸಂಚಲವೆ ಜ್ಞಾತೃ,
ಪ್ರಾಣನ ಸಂಚಲವೆ ಜ್ಞಾನ,
ಭಾವದ ಸಂಚಲವೆ ಜ್ಞೇಯ.
ಇಂತೀ ಮನ ಪ್ರಾಣ ಭಾವಂಗಳು ಭೂತಧಾತುವಿನುತ್ಪಿತ್ತಿ,
ಮೊದಲುಗೆಟ್ಟಲ್ಲಿಯೆ ತುದಿಗೆ ಲಯ,
ನಡುವೆ ತೋರುವುದಾವುದೊ?
ಇದು ಕಾರಣ ಅರಿಯಲಿಲ್ಲದೆ ಇರವೆ ಅರಿವಿಂಗೆ ಅರಿವಾಗಿ
ಕುರುಹಿಂಗೆ ತೆರಪಾಗಿರ್ದುದನರಿವ ಪರಿ ಇನ್ನೆಂತೊ?
ಇದನರಿದೆವೆಂಬ ಅರೆಮರುಳುಗಳ
ಅರಿವಿಂಗೆ ಅಭೇದ್ಯನಾದ ನಿಜಗುಣ ನೀನೇ,
ಸಿಮ್ಮಲಿಗೆಯ ಚೆನ್ನರಾಮಾ