ಅಥವಾ

ಒಟ್ಟು 417 ಕಡೆಗಳಲ್ಲಿ , 68 ವಚನಕಾರರು , 307 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಗುರುಕರುಣಕಟಾಕ್ಷದಲ್ಲಿ ಉತ್ಪತ್ಯವಾದ ಅಜಾತಂಗೆ ಜಾತಿಸೂತಕ, ಜನನಸೂತಕ, ಪ್ರೇತಸೂತಕ, ರಜಸ್ಸೂತಕವುಂಟೆಂಬವಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲವಯ್ಯಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಕಷೃಜಾತಿಗಳು ಲಿಂಗವ ಮುಟ್ಟಿ ಪೂಜಿಸಲಾಗದು. ಮುಟ್ಟಿದಡೆ ಮುಟ್ಟಿದಂತಿರಬೇಕು. ನಿಮ್ಮ ಮುಟ್ಟಿಯೂ ಹಿಂದಣ ಕುಲವ ಕೂಡಿದರಾದಡೆ ಮುಂದೆ ಹೊಲೆಯರ ಮನೆಯ ಹುಳಿತ ನಾಯ ಬಸುರಲಿ ಬಪ್ಪುದು ತಪ್ಪದು ಕಾಣಾ! ರಾಮನಾಥ.
--------------
ಜೇಡರ ದಾಸಿಮಯ್ಯ
ಮನದಲ್ಲಿ ಮಹವನರಿದು ಮನ ನಿರ್ದೇಶವಾಗಿ ದೇಶಾಂತರಿಯಾಗದೆ, ಮನ ವಿಕಳವಾಗಿ ಹೊರಹೊಂಟುದು ವೇಷಾಂತರವಯ್ಯಾ. ಕಂಡವರ ಕಾಡಿ, ನಿಂದವರ ಬೇಡಿ, [ಜಾತಿ ಎನ್ನದೆ] ಅಜಾತಿ ಎನ್ನದೆ, ಆಚಾರವೆನ್ನದೆ, ಅನಾಚಾರವೆನ್ನದೆ, ತಿರಿದುಂಡು ವೇಷಡಂಭಕತ್ವದಿಂ ಲಾಂಛನವ ಹೊತ್ತು ಕಂಡಲ್ಲಿ ಲಜ್ಜೆಗೆಡುವುದು ತನ್ನ ಮುನ್ನಿನ ದುಷ್ಕೃತ ಪೂರ್ವಕರ್ಮದ ಫಲವಯ್ಯ. ಮತ್ತೆಂತೆಂದಡೆ : ಮನ ನಿರ್ವಾಣವಾಗಿ ವಿವೇಕಜ್ಞಾನಪರಮಾರ್ಥದಲ್ಲಿ ಪರಿಣಾಮಿಯಾಗಿ ಸುಳಿದು ಸೂತಕಿಯಲ್ಲದೆ, ನಿಂದು ಬದ್ಧನಲ್ಲದೆ, ಸುಜ್ಞಾನದಲ್ಲಿ ಸುಳಿದು, ನಿರ್ಮಲದಲ್ಲಿ ನಿಂದವರು ಅವರು ಪರದೇಶಾಂತರಿಗಳು, ಅವರು ನಿಜನಿವಾಸಿಗಳು, ಅವರುಗಳಿಗೆ ನಮೋ ಎಂಬೆ, ಉರಿಲಿಂಗಿಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ; ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು, ನಿಂದ ಬೊಂಬೆ ಮಹಾರುದ್ರ; ರುದ್ರನ ಬೆಂಬಳಿಯವೆರಡು ಸೂತ್ರಕರ್ಣ. ಅರಿವೆಂಬ ಕದಿರು, ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ, ಸುತ್ತಿತ್ತು ನೂಲು ಕದಿರು ತುಂಬಿತ್ತು. ರಾಟೆಯ ತಿರುಹಲಾರೆ ಎನ್ನ ಗಂಡ ಕುಟ್ಟಿಹ; ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರಾ ?
--------------
ಕದಿರರೆಮ್ಮವ್ವೆ
ಆವಾವ ಜಾತಿ ಯೋನಿಗಳಲ್ಲಿ ಹುಟ್ಟಿದ ಪ್ರಾಣಿಗಳು ಆ ಜಾತಿಯಂತಹವಲ್ಲದೆ ಮತ್ತೊಂದು ಜಾತಿಯಹವೆ ಹೇಳಾ. ``ಯಥಾ ಬೀಜಸ್ತಥಾ ವೃಕ್ಷಃ' ಎಂಬ ನ್ಯಾಯದಂತೆ, ಲಿಂಗದಿಂದೊಗೆದ ಶರಣ ಲಿಂಗವಹನಲ್ಲದೆ, ಮಾನವನಾಗಲರಿಯನೆಂಬುದಕ್ಕೆ ಗುರುವಚನವೇ ಪ್ರಮಾಣು. ಇಂತಿದನರಿಯದೆ, ನಾನು ಮಾನವನು ದೇಹಿ ಸಂಸಾರಬದ್ಧನು ಎಂಬವಂಗೆ, ಎಂದೆಂದು ಮುಕ್ತಿಯಿಲ್ಲ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ಶರಣ ಮಾನವನಲ್ಲ.
--------------
ಸ್ವತಂತ್ರ ಸಿದ್ಧಲಿಂಗ
ಎಂಟುಲಕ್ಷದ ಮೇಲೆ ಐನೂರು ದೇವರಿಗೆ ಮಾಡಿದ ಬೋನವ ಒಬ್ಬ ಜಂಗಮನಾರೋಗಣೆಯ ಮಾಡುವನಲ್ಲದೆ, ಹದಿನಾರು ಲಕ್ಷದ ಮೇಲೆ ಐನೂರು ದೇವರು ಕೂಡಿಕೊಂಡು ಒಬ್ಬ ಜಂಗಮಕ್ಕೆ ಮಾಡಿದ ಬೋನವನಾರೋಗಿಸಲರಿಯವು. ಅಂತಪ್ಪ ದೇವರಿಗಿಂತಲೂ ಜಂಗಮವೆ ಘನ. ಕೃತಯುಗದಲ್ಲಿ ಸುವರ್ಣದ ಲಿಂಗಾವಾದಲ್ಲಿ ನಿನ್ನ ಹೆಸರೇನು ? ತ್ರೇತಾಯುಗದಲ್ಲಿ ಬೆಳ್ಳಿಯ ಲಿಂಗವಾದಲ್ಲಿ ನಿನ್ನ ತಾಯಿ-ತಂದೆ ಯಾರು ? ದ್ವಾಪರದಲ್ಲಿ ತಾಮ್ರದಲಿಂಗವಾದಲ್ಲಿ ಹದಿನೆಂಟು ಜಾತಿಯ ಕೈಯ ಕಿಲುಬು ಹೋಯಿತ್ತು. ಕಲಿಯುಗದಲ್ಲಿ ಕಲ್ಲ ದೇವರಾದರೆ ಇಕ್ಕಿದೋಗರವನುಣ್ಣದೇಕೊ ? ಹಿಂದೊಮ್ಮೆ ನಾಲ್ಕುಯುಗದಲ್ಲಿ ಅಳಿದು ಹೋದುದನರಿಯಾ ? ಇನ್ನೇಕೆ ದೇವತನಕ್ಕೆ ಬೆರತಹೆ ? ``ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ _ಇದು ಕಾರಣ ಕೂಡಲಚೆನ್ನಸಂಗಯ್ಯಾ, ತಪ್ಪದೆ ನಾಲ್ಕುಯುಗದಲ್ಲಿ ಜಂಗಮವೆ ಪ್ರಾಣಲಿಂಗವಾದ ಕಾರಣ ಸ್ಥಾವರವೆ ಜಂಗಮಪ್ರಸಾದಕ್ಕೆ ಯೋಗ್ಯವಾಯಿತ್ತು.
--------------
ಚನ್ನಬಸವಣ್ಣ
ಜಾತಿಜಂಗಮ ಒಂದು ಕೋಟಾನುಕೋಟಿ, ನೀತಿಜಂಗಮ ಒಂದು ಕೋಟಾನುಕೋಟಿ, ಸಿದ್ಧಜಂಗಮ ಒಂದು ಕೋಟಾನುಕೋಟಿ, ಜ್ಞಾನಜಂಗಮ ತ್ರೈಲೋಕ ದುರ್ಲಭ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಬಸವೇಶ್ವರದೇವರು ತೃಣಪುರುಷನ ಮಾಡಿ `ಮೀಮಾಂಸಕಂಗೆ ಉತ್ತರವ ಕೊಡು ಹೋಗು' ಎನಲು ಆ ತೃಣಪುರುಷನು ಮಹಾಪ್ರಸಾದವೆಂದು ಕೈಕೊಂಡು, ಮೀಮಾಂಸಕಂಗೆ ಉತ್ತರವ ಕೊಟ್ಟು ಶಿವವಿರಹಿತವಾದ ಕಾಳ್ಪುರಾಣವೆಲ್ಲವ ಬಯಲು ಮಾಡಿ ನುಡಿಯಲು ಆತಂಗೆ ಶಿವಜ್ಞಾನ ತಲೆದೋರಿ, ಆ ಬಸವೇಶಂಗೆ ವಂದನಂಗೈದು ಉಪದೇಶವ ಮಾಡಬೇಕೆನಲು, ಆತಂಗೆ ವೀರಶೈವದೀಕ್ಷೆಯ ಮಾಡಿ ಷಟ್‍ಸ್ಥಲಮಾರ್ಗ ಕ್ರೀಯ ನಿರೂಪಿಸಿ ತಿಳುಹಲು `ಎಲೆ ಬಸವೇಶ್ವರಾ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟುಕೊಳಬಹುದೆರಿಱ ಎಂದು ಕೇಳಲು, ಕೇಳೈ ಮೀಮಾಂಸಕಾ, ಪೂರ್ವದಲ್ಲಿ ಪರಮೇಶ್ವರನು ಸಮಸ್ತ ದೇವತೆಗಳು ಒಡ್ಡೋಲಗದಲ್ಲಿರಲು ಸೂತ್ರಿಕನೆಂಬ ಶೈವಾಚಾರ್ಯನು `` ಎಲೆ ಪರಮೇಶ್ವರಾ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಡಬಹುದೆರಿ' ಎನಲು `ಎಲೆ ಸೂತ್ರಿಕನೆ ಕೇಳು ನಾನೆಂದಡೆಯೂ ಜಂಗಮವೆಂದಡೆಯೂ ಬೇರಿಲ್ಲ ಅದು ಕಾರಣ ಜಂಗಮವೆ ಅಧಿಕ. ನೀನಾ ಜಂಗಮಲಿಂಗದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಡಬಾರದೆಂದು ನಿಂದಿಸಿ ನುಡಿದ ವಾಗ್ದೋಷಕ್ಕೆ ಮತ್ರ್ಯಕ್ಕೆ ಹೋಗಿ ಹೊಲೆಯನ ಮನೆಯ ಸೂಕರನ ಬಸುರಲ್ಲಿ ಹುಟ್ಟಿ ಹದಿನೆಂಟು ಜಾತಿಯ ಅಶುದ್ಧವನು ನಾಲಗೆಯಲಿ ಭುಂಜಿಸಿ ನರಕಜೀವಿಯಾಗಿರುಱಱ ಎಂದುದೆ ಸಾಕ್ಷಿ. ಇದನರಿದು ಮತ್ತೆ ಜಂಗಮದ ಪಾದತೀರ್ಥಪ್ರಸಾದವ ಲಿಂಗಕ್ಕೆ ಕೊಟ್ಟು ಕೊಳಲಾಗದೆಂಬ ಪಂಚಮಹಾಪಾತಕರ ಮಾತ ಕೇಳಲಾಗದು. ಅದೆಂತೆಂದಡೆ:ವೀರಾಗಮದಲ್ಲಿ, ಜಂಗಮಾನಾಮಹಂ ಪ್ರಾಣೋ ಮಮ ಪ್ರಾಣೋ ಹಿ ಜಂಗಮಃ ಜಂಗಮೇನ ತ್ವಹಂ ಪೂಜ್ಯೋ ಮಯಾ ಪೂಜ್ಯೋ ಹಿ ಜಂಗಮಃ ಪರಸ್ಪರಮಭೇದತ್ವಾಜ್ಜಂಗಮಸ್ಯ ಮಮಾಪಿ ಚ ಪಾದೋದಕಪ್ರಸಾದಾಭ್ಯಾಂ ವಿನಾ ತೃಪ್ತಿರ್ನ ಜಾಯತೇ ಇಂತೆಂಬ ಶಿವನ ವಾಕ್ಯವನರಿದು, ಜಂಗಮದ ಪಾದತೀರ್ಥವ ಲಿಂಗಕ್ಕೆ ಮಜ್ಜನಕ್ಕೆರೆದು ಪ್ರಸಾದವ ಲಿಂಗಕ್ಕೆ ನೈವೇದ್ಯವ ಸಮರ್ಪಿಸಿ ಭೋಗಿಸುವಾತನೆ ಸದ್ಭಕ್ತ, ಆತನೆ ಮಾಹೇಶ್ವರ, ಆತನೆ ಪ್ರಸಾದಿ, ಆತನೆ ಪ್ರಾಣಲಿಂಗಿ, ಆತನೆ ಶರಣ, ಆತನೆ ಐಕ್ಯನು. ಇಂತಪ್ಪ ಷಟ್‍ಸ್ಥಲಬ್ರಹ್ಮಿಗೆ ನಮೋ ನಮೋ ಎಂಬೆ. ಇಂತಲ್ಲದೆ ಜಂಗಮದ ಪಾದತೀರ್ಥಪ್ರಸಾದರಹಿತನಾಗಿ ಆವನಾನೊಬ್ಬನು ತನ್ನ ಇಷ್ಟಲಿಂಗಕ್ಕೆ ಅರ್ಷವಿಧಾರ್ಚನೆ ಷೋಡಶೋಪಚಾರಕ್ರೀಯಿಂದ ಪೂಜೆಯ ಮಾಡುವಲ್ಲಿ ಅವನು ಶುದ್ಧಶೈವನು, ಅವನಿಗೆ ಮುಕ್ತಿಯಿಲ್ಲ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಬಕಧ್ಯಾನಿ ಜಪಧ್ಯಾನ ಉಂಟೆ? ಜೂಜುವೇಂಟೆ ಚದುರಂಗ ನೆತ್ತ ಪಗಡೆ ಪಗುಡಿ ಪರಿಹಾಸಕರ ಕೂಡು ಕೆಲವಂಗೆ ಶಿವಮೂರ್ತಿಧ್ಯಾನ ಉಂಟೆ? ಕುಕ್ಕುರಂಗೆ ಪಟ್ಟೆಮಂಚ ಸುಪ್ಪತ್ತಿಗೆ ಅಮೃತಾನ್ನವನನಿಕ್ಕಿ ಸಲಹಿದಡೂ ಹಡುಹಿಂಗೆ ಚಿತ್ತವನಿಕ್ಕುವುದೇ ದಿಟ. ಇಂತೀ ಜಾತಿಮತ್ತರ ಲಕ್ಷಣಭೇದ. ಇಂತೀ ಗುರುಚರ ಅಜ್ಞಾಪಿಸಿದ ಆಜ್ಞೆಯ ಮೀರಿದವಂಗೆ ಕುಕ್ಕುರನಿಂದತ್ತಳ ಕಡೆ. ಗುರುವಾದಡಾಗಲಿ, ಲಿಂಗವಾದಡಾಗಲಿ, ಚರವಾದಡಾಗಲಿ ವರ್ತನೆ ತಪ್ಪಿ ನಡೆದವಂಗೆ ಭಕ್ತಿವಿರಕ್ತಿ, ಮೋಕ್ಷಮುಮುಕ್ಷತ್ವವಿಲ್ಲ. ಸಂಗನಬಸವಣ್ಣ ಸಾಕ್ಷಿಯಾಗಿ, ಚನ್ನಬಸವಣ್ಣನರಿಕೆಯಾಗಿ, ಪ್ರಭು ಸಿದ್ಧರಾಮೇಶ್ವರ ಮರುಳುಶಂಕರ ನಿಜಗುಣ ಇಂತಿವರೊಳಗಾದ ನಿಜಲಿಂಗಾಂಗಿಗಳು ಮುಂತಾಗಿ ಎನ್ನ ಕಾಯಕಕ್ಕೆ ಸಾರು ಹೋಗೆಂದಿಕ್ಕಿದ ಕಟ್ಟು. ನಾ ಭಕ್ತನೆಂದು ನುಡಿದಡೆ ಎನಗೊಂದು ತಪ್ಪಿಲ್ಲ, ಅದು ನಿಮ್ಮ ಚಿತ್ತದ ಎಚ್ಚರಿಕೆ, ಶುದ್ಧಸಿದ್ಧಪ್ರಸಿದ್ಧಪ್ರಸನ್ನ ಕುರುಂಗೇಶ್ವರಲಿಂಗ ಸಾಕ್ಷಿಯಾಗಿ.
--------------
ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ
ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ: ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ. ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ. ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ. ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ. ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ_ ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಲಿಂಗವಂತರ ಲಿಂಗಾಚಾರಿಗಳ ಅಂಗಳಕ್ಕೆ ಹೋಗಿ ಲಿಂಗಾರ್ಪಿತವ ಮಾಡುವಲ್ಲಿ ಸಂದೇಹವಿಲ್ಲದಿರಬೇಕು. ಅದೆಂತೆಂದಡೆ: 'ಭಿಕ್ಷಲಿಂಗಾರ್ಪಿತಂ ಗತ್ವಾ | ಭಕ್ತಸ್ಯ ಮಂದಿರಂ ತಥಾ | ಜಾತಿ ಜನ್ಮ ರಜೋಚ್ಫಿಷ್ಟಂ | ಪ್ರೇತಸ್ಯ ವಿವರ್ಜಿತಃ || ' ಇಂತೆಂದುದಾಗಿ, ಕಾಣದುದನೆ ಚರಿಸದೆ, ಕಂಡುದನು ನುಡಿಯದೆ. ಕಾಣದುದನು ಕಂಡುದನು ಒಂದೆಸಮವೆಂದು ಅರಿಯಬಲ್ಲರೆ ಕುಂಭೇಶ್ವರಲಿಂಗವೆಂಬೆನು.
--------------
ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ
ಉಡುವಿನ ಕಣ್ಣು, ಪಡಿಯ ಅಡಿ, ಕೀಟಕನ ಮುಟ್ಟು, ಘಾತಕನ ಸ್ನೇಹ, ವೇಸಿಯ ಮೋಹದ ಆಸೆ, ಸುಜಾತಿಯಲ್ಲದವನ ಕೊಳುಕೊಡೆ, ನಿರಾಸೆಯಿಲ್ಲದವನ ಮಾತಿನ ಮಾಲೆ ಅದೇತಕ್ಕೆ ಬಾ[ತೆ]ಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅಯ್ಯಾ, ಗುರುದ್ರವ್ಯ, ಗಣದ್ರವ್ಯ, ಭಕ್ತದ್ರವ್ಯ, ಚರದ್ರವ್ಯ, ಪರದ್ರವ್ಯ, ರಾಜದ್ರವ್ಯ, ತಂದೆ-ತಾಯಿ ಬಂಧು-ಬಳಗ ಭಾವ-ಮೈದುನ ನಂಟುತನದ ದ್ರವ್ಯ, ಕುಂತ ನಿಂತ ಸಹಾಸದ್ರವ್ಯ, ನೋಡಕೊಟ್ಟದ್ರವ್ಯ, ನೂರೊಂದುಕುಲ ಹದಿನೆಂಟು ಜಾತಿಯ ದ್ರವ್ಯ, ಬೀದಿ ಬಾಜಾರದಲ್ಲಿ ಬಿದ್ದ ದ್ರವ್ಯ, ಹಾದಿಪಥದಲ್ಲಿ ಬಿದ್ದ ದ್ರವ್ಯ, ಹಕ್ಕಿಪಕ್ಕಿ ತಂದಿಟ್ಟ ದ್ರವ್ಯ, ಮದುವೆ ಶುಭಶೋಭನದಾಸೋಹದ ದ್ರವ್ಯ ಮೊದಲಾಗಿ ಕಳ್ಳಕಾಕರ ಸಂಗದಿಂದ ಚೋರತನದಿಂದಪಹರಿಸಿ, ಜನ್ಮ ಜನ್ಮಾಂತರದಲ್ಲಿ ಭವಪಾತಕಕ್ಕೆ ಗುರಿಯಾಯಿತಯ್ಯ ಎನ್ನ ಪಾಣೇಂದ್ರಿಯವು. ಇಂಥ ಅಜ್ಞಾನದಿಂದ ತೊಳಲುವ ಜನ್ಮ ಜಡತ್ವವನಳಿದುಳಿದು ನಿಮ್ಮ ಸದ್ಭಕ್ತ ನಿಜಶರಣ ದೇವರದಾಸಿಮಯ್ಯನ ದಾಸಿಯ ಪಾದವನೊರಸಿ ಬಾಳುವಂತೆ ಮಾಡಯ್ಯ ಕರುಣಾಳಿ ಎನ್ನಾಧಾರಮೂರ್ತಿ ಶ್ರೀಗುರುಲಿಂಗಜಂಗಮವೆ ಹರಹರ ಶಿವಶಿವ ಜಯಜಯ ಕರುಣಾಕರ, ಮತ್ಪ್ರಾಣನಾಥ ಮಹಾ ಶ್ರೀಗುರುಸಿದ್ಧಲಿಂಗೇಶ್ವರ.
--------------
ಬಸವಲಿಂಗದೇವ
ಶೀಲವಂತರು ಶೀಲವಂತರು ಎಂದು ಶೀಲದಲ್ಲಿ ಆಚರಿಸುವ ಅಣ್ಣಗ[ಳೇ] ನಿಮ್ಮ ಶೀಲವಾವುದು ಹೇಳಿರೋ, ಅರಿಯದಿದ್ದರೆ ಕೇಳಿರೋ: ಶಿರಸ್ಸಿನಲ್ಲಿ ಶಿವನಿಪ್ಪ, ಕಟಿಯಲ್ಲಿ ವಿಷ್ಣುವಿಪ್ಪ, ಆಧಾರದಲ್ಲಿ ಬ್ರಹ್ಮನಿಪ್ಪ, ಲಲಾಟದಲ್ಲಿ ವಿಭೂತಿರುದ್ರಾಕ್ಷಿ, ಜಿಹ್ವೆಯಲ್ಲಿ ಪಂಚಾಕ್ಷರಿಯು. ಇಂತಪ್ಪ ಅಷ್ಟಾವರಣದಲ್ಲಿ ಸವೆಯದೆ, ಸಂಸಾರವೆಂಬ ಶರದ್ಥಿಯಲ್ಲಿ ಮುಳುಗೇಳುವರು ಶೀಲವಂತರಲ್ಲ. ಬರಿದೆ ನಾವು ಶೀಲವಂತರೆಂಬುವ ಮನುಜ ಕೇಳು: ಕಣ್ಣೇ ಕಂಚುಗಾರ, ಕರ್ಣವೇ ಬಣಜಿಗ, ಮೂಗೇ ಈಳಿಗ, ಕೊರಳೇ ಕುಂಬಾರ, ತುಟಿಯೇ ಹೆಂಡಗಾರ, ಹಲ್ಲೆ ಕಲ್ಲುಕುಟಿಗ, ತಲೆಯೇ ಮೋಪುಗಾರ, ಬೆನ್ನೇ ಜೇಡ, ಅಂಗೈಯೇ ಅಕ್ಕಸಾಲಿಗ, ಮುಂಗೈಯೇ ಬಡಿಗ, ಕರವೇ ಕೋಮಟಿಗ, ಕಣಕಾಲೇ ಕಾಳಿಂಗ, ಕುಂಡಿಯೇ ಕುಡುವೊಕ್ಕಲಿಗ, ಒಳದೊಡೆಯೇ ಸಮಗಾರ, ಹೊರದೊಡೆಯೇ ಮಚ್ಚಿಗ, ಮೇಗಾಡಿ ಹೊಲೆಯ, ಬುದ್ಧಿಯೇ ಬಯಲಗಂಬಾರ. -ಇಂತಪ್ಪ ಕುಲ ಹದಿನೆಂಟು ಜಾತಿ ಎಲು ಮಾಂಸವನು ತುಂಬಿಟ್ಟುಕೊಂಡು ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ ಎಂದು ಹೊಡೆದಾಡುವಂತಹ ಅಣ್ಣಗಳನ್ನು ಹಿಡಿತಂದು ಮೂಗನೆ ಸವರಿ ಮೆಣಸಿನ ಹಿಟ್ಟು ತುಪ್ಪವ ತುಂಬಿ ನಮ್ಮ ಪಡಿಹಾರಿ ಉತ್ತಣ್ಣನ ವಾಮಪಾದುಕೆಯಿಂದ ಪಡಪಡನೆ ಹೊಡಿ ಎಂದಾತ, ನಮ್ಮಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ವಿಹಂಗನ ತತ್ತಿಗೆ ಸ್ಪರ್ಶನದಿಂದ ಕೂರ್ಮನ ಶಿಶುವಿಂಗೆ ಕೂರ್ಮೆಯಿಂದ ಚತುಃಪಾದಿ ನರಕುಲಕ್ಕೆ ಕುಚಗಳಿಂದ ಮಿಕ್ಕಾದ ಜೀವಜಾತಿ ಲಕ್ಷಣಕ್ಕೆ ತಮ್ಮ ಸ್ಥಾನದಲ್ಲಿಯೆ ತೃಪ್ತಿ. ಆವ ಸ್ಥಲವ ನೆಮ್ಮಿದಲ್ಲಿಯೂ ಭಾವಶುದ್ಧವಾದಲ್ಲಿಯೆ ಮುಕ್ತಿ. ಉಭಯಕ್ಕೆ ಉಪಮಾತೀತನಾದಾಗಲೇ ನಿರ್ವೀಜ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದಲ್ಲಿ.
--------------
ಪ್ರಸಾದಿ ಭೋಗಣ್ಣ
ಇನ್ನಷ್ಟು ... -->