ಅಥವಾ

ಒಟ್ಟು 42 ಕಡೆಗಳಲ್ಲಿ , 14 ವಚನಕಾರರು , 37 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉದಯ ಮುಖದಲ್ಲಿ ಪೂಜಿಸ ಹೋದರೆ, ಹೃದಯ ಮುಖದಲ್ಲಿ ಕತ್ತಲೆಯಾಯಿತ್ತು, ಹಾರಿ ಹೋಯಿತ್ತು ಪ್ರಾಣಲಿಂಗ, ಹರಿದು ಬಿದ್ದಿತ್ತು ಸೆಜ್ಜೆ. ಕಟ್ಟುವ ಬಿಡುವ ಸಂಬಂಧಿಗಳ ಕಷ್ಟವ ನೋಡಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಉತ್ಪತ್ಯ ಉದಯ, ಸ್ಥಿತಿ ಮಧ್ಯಾಹ್ನ, ಲಯ ಅಸ್ತಮಯವೆಂಬ ಬಾರದ ಬಟ್ಟೆಯಲ್ಲಿ ಮೆಟ್ಟಿದ ಹಜ್ಜೆಯಲ್ಲಿ ಮೆಟ್ಟಡೆತ್ತು ಜ್ಞಾನಿ. ಇಂತಿದು ದೃಷ್ಟವಾಯಿತ್ತು. ಅವರಿಗದು ನನಗಿದು ತೂತಿನ ಹಾದಿಯೆ, ಆತುರವೈರಿ ಮಾರೇಶ್ವರಾ.
--------------
ನಗೆಯ ಮಾರಿತಂದೆ
ಜ್ಞಾನಜ್ಯೋತಿಯ ಉದಯ, ಭಾನು ಕೋಟಿಸೂರ್ಯರ ಬೆಳಗು ನೋಡಾ. ತನುತ್ರಯ, ಜೀವತ್ರಯ, ಅವಸ್ಥಾತ್ರಯಾದಿಯಾದ ಎಲ್ಲ ತೋರಿಕೆಯನೊಳಗೊಂಡು ಜ್ಯೋತಿ ಕರ್ಪುರವ[ನು] ನೆರೆದಂತಿದೆ ನೋಡಾ. ಷಡಾಧಾರಂಗಳಲ್ಲಿ ತೊಳಗಿ ಬೆಳಗಿ ಬ್ರಹ್ಮರಂಧ್ರದಲ್ಲಿ ವಿಶ್ರಾಂತಿಯನೆಯ್ದಿದ ಅಖಂಡ ಜ್ಞಾನಜ್ಯೋತಿ ನೋಡಾ. ಆ ಮಹಾಪ್ರಕಾಶದ ಬೆಳಗಿನೊಳಗೆ ಮಹವ ಕಂಡು ಮಹಕೆ ಮಹ, ಪರಕೆ ಪರವಾಗಿ, ಎನ್ನಿಂದನ್ಯವಾಗಿ ಮತ್ತೊಂದು ಪರವಿಲ್ಲದೆ, ನಾನೇ ಪರವಸ್ತುವಾಗಿರ್ದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆನೆಂಬ ಕುಸುಮಕ್ಕೆ ತಾನೆಂಬ ಮಧುಕರನು ಭಾನುವಿನ ಉದಯದಲ್ಲಿ ವಿಕಸವಾಗಿ ಸೋಮವೀಥಿಯ ಬೆಳಗಿ ಹೇಮಶೈಲದ ಉದಯ ಕಾಮದಂಡಿಯ ಹಿಡಿದು ಮನೆಮನೆಗಳ ಸೀಮೆಯನು ಸಂಬಂಧ ಗ್ರಾಮವನು ಮನೆಗಳನು ಆನಳಿದು ಕಂಡೆನೈ ಹವಣು ಹಲವ. ನಿಸ್ಸೀಮನಾ ಕಪಿಲಸಿದ್ಧಮಲ್ಲಿಕಾರ್ಜುನನ ಸೀಮೆಯನು ಕಾಬವರು ಹಲಬರಿಲ್ಲ
--------------
ಸಿದ್ಧರಾಮೇಶ್ವರ
ಹಿಂದನರಿಯದದು ಮುಂದನೇನ ಬಲ್ಲುದೊ? ಉದಯ ಮುಖದಲ್ಲಿ ಹುಟ್ಟಿದ ಪ್ರಾಣಿಗಳು ಅಸ್ತಮಾನಕ್ಕಳಿದರಲ್ಲಾ! ಅಂದಂದಿನ ಘಟಜೀವಿಗಳು, ಬಂದ ಬಟ್ಟೆಗೆ ಹೋದರಲ್ಲಾ. ಗುಹೇಶ್ವರನೆಂಬ ಲಿಂಗ ಅರಿಗೂ ಇಲ್ಲವಯ್ಯಾ.
--------------
ಅಲ್ಲಮಪ್ರಭುದೇವರು
ಹುತ್ತದ ಮೇಲೊಂದು ಕಸ್ತೂರಿಯ ಮೃಗವ ಕಂಡೆ. ಅದಕ್ಕೆ ಉದಯ ಅಸ್ತಮಯವಿಲ್ಲ . ಒದವಿದ ಅಮೃತವನುಂಬುವದು, ಸದಮಲ ವಾಸನೆಯ ತೀಡುವುದು. ಆ ವಾಸನೆಯ ಬೆಂಬಳಿವಿಡಿದು, ನಾನು ಆ ವಾಸಕ್ಕೆ ಹೋಗಿ, ದೇಶದ ಹಂಗು ಮರೆದು, ಸಾಸಿರ ಮುಖವಾಗಿಪ್ಪ ಈಶನೊಳು ಲೇಸಿಂದ ಬೆರೆದು, ವಿೂಸಲಳಿಯದೆ ಐಕ್ಯವಾದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಸುಪ್ರಭಾಕಳೆಯಿಂದ ಚಿತ್ಪ್ರಣಮ ಉದಯ. ಆ ಚಿತ್ಪ್ರಣಮದ ಮುಂದಣ ಚಿದ್ವಿವೇಕವೆ ಚಿದಬ್ಧಿ . ಆ ಚಿದಬ್ಧಿಯೆ ಪಾದೋದಕ, ಚಿದಮೃತವೆ ಪಾದೋದಕ. ನಿಧಿ ನಿಧಾನವೆ ಪಾದೋದಕ, ಸುಧೆ ಸುರರ ತೃಪ್ತಿಯೆ ಪಾದೋದಕ. ಅದಕ್ಕೆ ದೃಷ್ಟ : ಶೋಷಣಂ ಪಾಪಪಂಕಸ್ಯ ದೀಪನಂ ಜ್ಞಾನತೇಜಸಃ | ಗುರುಪಾದೋದಕಂ ಪೀತ್ವಾ ಸಂಸಾರದ್ರುಮನಾಶನಂ || ಇಂತಪ್ಪ ಪಾದೋದಕವ ಕೊಂಡರೆ, ಪಾಶಮುಕ್ತನಾಗಿ, ಪಶುಪತಿಯೆಂಬುಭಯವಳಿದು, ನೀರು ಕ್ಷೀರ ಬೆರೆದಂತಿಪ್ಪ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ . ಮಾಂ ತ್ರಾಹಿ, ತ್ರಾಸಿ ಕರುಣಾಕರನೆ.
--------------
ಹಡಪದ ಅಪ್ಪಣ್ಣ
-->