ಅಥವಾ

ಒಟ್ಟು 195 ಕಡೆಗಳಲ್ಲಿ , 54 ವಚನಕಾರರು , 180 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಡುವಿನ ಕಣ್ಣು, ಪಡಿಯ ಅಡಿ, ಕೀಟಕನ ಮುಟ್ಟು, ಘಾತಕನ ಸ್ನೇಹ, ವೇಸಿಯ ಮೋಹದ ಆಸೆ, ಸುಜಾತಿಯಲ್ಲದವನ ಕೊಳುಕೊಡೆ, ನಿರಾಸೆಯಿಲ್ಲದವನ ಮಾತಿನ ಮಾಲೆ ಅದೇತಕ್ಕೆ ಬಾ[ತೆ]ಯೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆರುವರ್ಣದ ಪಕ್ಷಿ ಮೂರುವರ್ಣದ ಗೂಡನಿಕ್ಕಿ, ತಲೆಯಿಲ್ಲದ ಮರಿಯನೀದು ಕಾಲಿಲ್ಲದೆ ನಡೆದಾಡುತಿರ್ಪುದ ಕಂಡೆ! ಆ ಮರಿ ಹಾಲನೊಲ್ಲದು. ಬೆಲ್ಲ ಕಹಿಯೆಂದು ಬೇವಿನ ರಸವ ಕುಡಿದು, ಮಲವ ತಿಂದು ಬದುಕೇನೆನುತಿರ್ಪುದ ಕಂಡೆ. ಆ ಮರಿಗೆ ಅಗ್ನಿವರ್ಣದ ಕೋಳಿ ಗುಟುಕನಿಕ್ಕಿ, ಗೂಗಿ ಆರೈಕೆಯ ಮಾಡಲು, ತಲೆ ಬಂದು, ಕಣ್ಣು ತೆರೆದು, ಪಕ್ಕವಿಲ್ಲದೆ ಹಾರಿಹೋಗಿ, ಕೊಂಕಣದೇಶದಲ್ಲಿ ಸತ್ತುದ ಕಂಡು ಬೆರಗಾದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ನನ್ನ ಕಾಲು ನನ್ನ ಕೈ ನನ್ನ ಕಣ್ಣು ನನ್ನ ಮೂಗು ನನ್ನ ಬಾಯಿ ನನ್ನ ಮೈ ನನ್ನ ಮನ ನನ್ನ ಪ್ರಾಣ ಇವು ಮೊದಲಾದ ಸಮಸ್ತವು ನನ್ನದೆಂಬುದು ಅದಾವುದದು ? ಆವುದು ಅಕೊ ಅದೇ ತಾನಾದನಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಬೆಣ್ಣೆ ಕೆಚ್ಚಲ ನುಂಗಿ, ಕಣ್ಣು ತಲೆಯ ನುಂಗಿ, ತುದಿ ಬೇರಿನಲ್ಲಿ ಅಡಗಿತ್ತು. ಏಣಾಂಕಧರ ಸೋಮೇಶ್ವರಲಿಂಗವೆಂಬುದು ಅಲ್ಲಿಯೇ ಅಡಗಿತ್ತು.
--------------
ಬಿಬ್ಬಿ ಬಾಚಯ್ಯ
ನಿಮ್ಮ ಶರಣನು ಲಿಂಗಭರಿತನು, ವಿಚಾರಿಸಿ, ಅರಿದು, ಧ್ಯಾನದಿಂದ ಜಪಿಸಿ, ಆ ಮಹಾವಸ್ತುವನು ಕಂಡು ಒಲಿದೊಲಿಸಿ, ಕೂಡಿ ಸುಖಿಸಿಹೆನೆಂಬನ್ನೆವರ ಶ್ರೀಗುರುಸ್ವಾಮಿಯ ಕರುಣಾಮೃತಸಾಗರ ಮೇರೆವರಿದು ವಿಚಾರಿಸಿ ಶಿವನಾಯಿತ್ತು, ಅರಿವು ಶಿವನಾಯಿತ್ತು; ಜ್ಞಾತೈ ಜ್ಞಾನ ಜ್ಞೇಯ ಶಿವನಾಯಿತ್ತು, ಜಪಮಂತ್ರ ಶಿವನಾಯಿತ್ತು, ಜಪಿಸುವ ಜಿಹ್ವೆ ಶಿವನಾಯಿತ್ತು, ಕಂಡೆಹೆನೆಂಬ ಕಣ್ಣು ಶಿವನಾಯಿತ್ತು. ಈ ಪರಿ ನೋಡ ನೋಡಲು ಮತ್ತೆ ಚೋದ್ಯ ಪ್ರಾಣಲಿಂಗವಾಗಿ ಸದ್ಗುರು ತಾನೆ ಕೃಪೆಮಾಡಿ ಕರಸ್ಥಲಕ್ಕೆ ಬಿಜಯಂಗೈದು ಪ್ರಾಣಲಿಂಗವಾದನು, ಕಾಯಲಿಂಗವಾದನು. ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನ ಭಾವವೆಲ್ಲ ಲಿಂಗವಾಯಿತ್ತು. ಸರ್ವಾಂಗಲಿಂಗವಾಗಿ ಸಲಹಿದನು. ಶ್ರೀಗುರುಲಿಂಗವು ಒಲಿದೊಲಿಸಿ ಕೂಡುವ ಪರಿ ಎಂತಯ್ಯಾ? ಒಲಿಸುವ ಪರಿ ದಾಸೋಹ, ಒಲಿದ ಪರಿ ಪ್ರಸಾದ, ಕೂಟದ ಪರಿ ನಿರ್ವಂಚಕತ್ವ, ಒಲಿದೊಲಿಸಿ ಕೂಡಿದ ಪರಿ ಪರಿಣಾಮವಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಮಾಡುವ ಕೈ ಉಚ್ಫಿಷ್ಟ, ನೋಡುವ ಕಣ್ಣು ಉಚ್ಫಿಷ್ಟ, ಕೊಡುವ ಭಾವ ಉಚ್ಫಿಷ್ಟವಾಗಿರ್ದು, ಮಾಡಿದರೇನು ನೋಡಿದರೇನು ಕೊಟ್ಟರೇನು ಕಳ್ಳನ ಉದ್ಯೋಗಕೆ ಜನ ಮೆಚ್ಚದು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಣ್ಣು ಕಳೆದ ಮತ್ತೆ ಅಂಜನಕ್ಕೆ ತಿಳಿವುದೆ ? ಆತ್ಮನಿದ್ದಲ್ಲಿ ಅರಿಯದೆ ಹಸು ಸತ್ತ ಮತ್ತೆ ಮೋಕ್ಷವನರಸಲುಂಟೆ ? ಎಚ್ಚರಿಕೆ ತನಗಿದ್ದಲ್ಲಿ ನಾನೊಂದು ನಿಶ್ಚಯದ ಮದ್ದ ತಂದೆ. ಆ ಮದ್ದಿನ ಭೇದ ಘಟಕ್ಕೆ ಕೇಡಿಲ್ಲ. ಆತ್ಮಂಗೆ ಭವವಿಲ್ಲ. ಅರಿವಿಂಗೆ ತುದಿಮೊದಲಿಲ್ಲ. ಇದು ನಿರಿಗೆ ಕೊಳಬಲ್ಲಡೆ, ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ. ರೋಗ ಹೋಯಿತ್ತು, ಬೇಗ ಅರಿದುಕೊಳ್ಳಿ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ವೈದ್ಯ ಸಂಗಣ್ಣ
ಮನೆಯೊಳಗಣ ಜ್ಯೋತಿ ಮನೆಯ ಸುಟ್ಟು, ಮನೆ ಉಳಿದಿತ್ತು, ಅರಣ್ಯಸುಟ್ಟು ಅರಣ್ಯದ ಪಕ್ಷಿಯ ಕಾಲು ಸುಟ್ಟು ನಡೆಯಿತ್ತು, ತಲೆ ಸುಟ್ಟು ಕಣ್ಣು ಉಳಿದಿತ್ತು. ಮೈಸುಟ್ಟು ಪ್ರಾಣ ಉಳಿದಿತ್ತು, ಉಭಯ ರೆಕ್ಕೆ ಸುಟ್ಟು ಉರಿಯ ನುಂಗಿ ಗಗನಕ್ಕೆ ಹಾರಿ, ಮೇಲುಗಿರಿಯಲ್ಲಿ ಅಡಗಿತ್ತು. ಅದು ಅಡಗಿದ ಠಾವಿನಲ್ಲಿ ಅಡಗಬಲ್ಲರೆ ಭಕ್ತನೆಂಬೆ. ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬ್ರಹ್ಮನ ಬಾಯಲ್ಲಿ ಅದೆ, ವಿಷ್ಣುವಿನ ಕೈಯಲ್ಲಿ ಅದೆ, ರುದ್ರನ ಶಿರದಲ್ಲಿ ಅದೆ. ತಲೆ ಬಾಯ ನುಂಗಿ, ಕೈ ತಲೆಯೊಳಡಗಿ, ಕಣ್ಣು ಕಾಲಾಯಿತ್ತು, ಅರ್ಕೇಶ್ವರಲಿಂಗನನರಿವ ಭೇದದಿಂದ.
--------------
ಮಧುವಯ್ಯ
ತಲೆಯಲ್ಲಿ ಹುಟ್ಟಿದ ಕಣ್ಣು ನೆಲದೊಡೆಯನ ನುಂಗಿತ್ತು ನೋಡಾ. ತಲೆಯಳಿಯಿತ್ತು:ನೆಲ ಬೆಂದಿತ್ತು. ತಲೆಯೊಳಗಣ ಕಣ್ಣು ತ್ರಿಜಗದಾದ್ಥಿಪತಿಯ ತಾನೆಂದು ನೋಡುತ್ತ ನೋಡುತ್ತ ಅಡಗಲು ನೆಲದೊಡೆಯ ಸತ್ತುದ ಕಂಡು ನಿರ್ವಯಲ ಸಮಾದ್ಥಿಸ್ಥಲವಾಗಿ ಕುರುಹಳಿದ ಲಿಂಗೈಕ್ಯನಯೇನೆಂದುಪಮಿಸುವೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶಿವತತ್ವ ಐದು ಅವಾವೆಂದಡೆ; ಶಿವ, ಶಕ್ತಿ, ಸಾದಾಖ್ಯ, ಈಶ್ವರ, ಶುದ್ಧ ವಿದ್ಯೆ- ಇಂತು ಶಿವತತ್ವ ಐದು. ಇನ್ನು ವಿದ್ಯಾತತ್ತ್ವವೆಂತೆಂದಡೆ: ಕಲೆ, ರಾಗ, ನಿಯತಿ, ವಿದ್ಯೆ, ಪುರುಷ, ಪ್ರಕೃತಿ - ಇಂತು ವಿದ್ಯಾತತ್ತ್ವ ಏಳು. ಇನ್ನು ಕರಣಂಗಳೆಂತೆಂದಡೆ: ಚಿತ್ತ, ಬುದ್ಧಿ, ಅಹಂಕಾರ, ಮನ - ಇವು ಕರಣತತ್ತ್ವ ನಾಲ್ಕು. ಇನ್ನು ಇಂದ್ರಿಯಂಗಳೆಂತೆಂದಡೆ: ಶ್ರೋತ್ರ, ತ್ವಕ್ಕು, ನೇತ್ರ, ಜಿಹ್ವೆ, ಘ್ರಾಣ - ಇಂತು ಬುದ್ಧೀಂದ್ರಯಂಗಳು ಐದು. ಇನ್ನು ಕರ್ಮೇಂ್ರಯಂಗಳೆಂತೆಂದಡೆ: ವಾಕ್ಕು, ಪಾದ, ಪಾಣಿ, ಗುಹ್ಯ, ಪಾಯು - ಇಂತು ಕರ್ಮೇಂ್ರಯಂಗಳು ಐದು. ಇನ್ನು ತನ್ಮಾತ್ರಂಗಳೆಂತೆಂದಡೆ: ಶಬ್ದ, ಸ್ಪರ್ಶ, ರೂಪು, ರಸ ಗಂಧ - ಇಂತು ಜ್ಞಾನೇಂದ್ರಿಯ ವಿಷಯ ಐದು. ಇನ್ನು ಕರ್ಮೇಂ್ರಯ ವಿಷಯವೆಂತೆಂದಡೆ: ವಚನ, ಗಮನ, ಆದಾನ, ಆನಂದ, ವಿಸರ್ಜನ ಇಂತು ಕರ್ಮೇಂ್ರಯ ವಿಷಯ ಐದು. ಇನ್ನು ವಾಕ್ಕುಗಳಾವುವೆಂದಡೆ: ಪರಾ, ಪಶ್ಯಂತಿ, ಮಧ್ಯಮೆ, ವೈಖರಿ - ಇಂತು ವಾಕ್ಕು ನಾಲ್ಕು. ಸಾತ್ಪಿ, ರಾಜಸ, ತಾಮಸ - ಇಂತು ಗುಣ ಮೂರು. ರಾಜಸಹಂಕಾರ, ವೈಖರಿಯಹಂಕಾರ, ಭೂತಾಯಹಂಕಾರ -ಇಂತು ಅಹಂಕಾರ ಮೂರು. ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ - ಇಂತು ಭೂತಂಗಳು ಐದು. ಭೂತಕಾರ್ಯ ಇಪ್ಪತ್ತೈದು - ಅವಾವೆಂದಡೆ: ಅಸ್ಥಿ, ಮಾಂಸ, ತ್ವಕ್, ನಾಡಿ, ರೋಮ - ಈ ಐದು ಪೃಥ್ವೀಪಂಚಕ. ಲಾಲಾ, ಮೂತ್ರ, ಸ್ವೇದ, ಶುಕ್ಲ, ಶೋಣಿಕ - ಈ ಐದು ಅಪ್ಪುವಿನ ಪಂಚಕ. ಕ್ಷುಧೆ, ತೃಷೆ, ನಿದ್ರೆ, ಆಲಸ್ಯ, ಸ್ತ್ರೀಸಂಗ - ಈ ಐದು ಅಗ್ನಿಪಂಚಕ. ಪರಿವ, ಪಾರುವ, ಸುಳಿವ, ನಿಲುವ, ಅಗಲುವ - ಈ ಐದು ವಾಯುಪಂಚಕ. ರಾಗ, ದ್ವೇಷ, ಭಯ, ಲಜ್ಜೆ, ಮೋಹ - ಈ ಐದು ಆಕಾಶವಂಚಕ. ಇಂತೀ ಇಪ್ಪತ್ತೈದು ಭೂತಕಾರ್ಯ ಪಂಚೀಕೃತಗಳು. ಇನ್ನು ದಶವಾಯುಗಳು: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯ - ಈ ಹತ್ತು ವಾಯುಗಳು, ಇನ್ನು ದಶನಾಡಿಗಳು: ಇಡಾ, ಪಿಂಗಳಾ, ಸುಷುಮ್ನಾ, ಗಾಂಧಾರಿ, ಹಸ್ತಿ, ಜಿಹ್ವೆ, ಪುಷ್ಕರ, ಪಯಸ್ವಿನಿ, ಆಲಂಬು, ಲಕುಹ, ಶಂಕಿನಿ - ಇಂತೀ ಹತ್ತು ನಾಡಿಗಳು. ಇಂತು ತತ್ವ ತೊಂಬತ್ತಾರು ಕೂಡಿಕೊಂಡು ಆತ್ಮನು ಭೂಮಧ್ಯದಲ್ಲಿರ್ದು ಅವಸ್ಥೆಬಡುವುದನು ಹೇಳಿಹೆನು. ಅದೆಂತೆಂದಡೆ ಅವಸ್ಥೆಯ ಕ್ರಮ: ಪ್ರೇರಕಾವಸ್ಥೆ ಒಂದು, ಅಧೋವಸ್ಥೆ ಐದು, ಊಧ್ರ್ವಾವಸ್ಥೆ ಐದು, ಮಧ್ಯಾವಸ್ಥೆ ಐದು, ಕೇವಲಾವಸ್ಥೆ ಒಂದು, ಸಕಲಾವಸ್ಥೆ ಒಂದು, ಶುದ್ಧಾವಸ್ಥೆ ಒಂದು, ನಿರ್ಮಲಾವಸ್ಥೆ ಐದು, ಅಂತೂ ಅವಸ್ಥೆ ಇಪ್ಪತ್ತನಾಲ್ಕು, ಅವರಲ್ಲಿ ಪ್ರೇರಕಾವಸ್ಥೆಯೆಂತೆಂದಡೆ: ತತ್ತ್ವಸಮೂಹಂಗಳನು ಕೂಡಿಕೊಂಡು ಇರ್ದಲ್ಲಿ ಆ ಪುರುಷನು ಪಂಚೇಂ್ರಯಂಗಳಲ್ಲಿ ವಿಷಯಂಗಳು ಅತಿ ಚಮತ್ಕಾರದಲ್ಲಿ ಅರಿವವೇಳೆ ಪ್ರೇರಕಾವಸ್ಥೆಯೆಂದು. ಅದಕ್ಕೆ ಪ್ರೇರಿಸುವ ತತ್ತ್ವಂಗಳಾವುವೆಂದಡೆ- ಶಿವತತ್ತ್ವ ಐದು, ವಿದ್ಯಾತತ್ತ್ವ ಏಳು, ಕರಣಂಗಳು ನಾಲ್ಕು, ಭೂತಂಗಳಲ್ಲಿ ಒಂದು, ಇಂದ್ರಿಯಂಗಳಲ್ಲಿ ಒಂದು -ಇಂತೀ ಹದಿನೆಂಟು ತತ್ವಂಗಳಲ್ಲಿ ವಿಷಯಂಗಳನರಿವನು. ಅದು ಹೇಗೆಂದಡೆ - ಶಿವತತ್ತ್ವ ಐದು, ವಿದ್ಯಾತತ್ತ್ವ ಏಳು, ಕರಣಂಗಳು ನಾಲ್ಕು - ಇಂತು ಹದಿನಾರು ತತ್ತ್ವ. ಆಕಾಶಭೂತವೂ ಶ್ರೋತ್ರೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಶಬ್ದವನದಲ್ಲಿರಿವ; ವಾಯುಭೂತವೂ ತ್ವಗೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಶಬ್ದವನರಿವ; ವಾಯುಭೂತವೂ ತ್ವಗೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಸೋಂಕನರಿವ; ತೇಜಭೂತವೂ ನಯನೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ರೂಪವನರಿವ; ಅಪ್ಪುಭೂತವೂ ಜಿಹ್ವೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ರಸವನರಿವ; ಪೃಥ್ವಿಭೂತವೂ ಪ್ರಾಣೇಂದ್ರಿಯವೂ ಕೂಡಿ ಹದಿನೆಂಟು ತತ್ತ್ವದಲ್ಲಿ ಗಂಧವನರಿವ. ಇಂತೀ ವಿಷಯಂಗಳನರಿವುದು. ಇದು ಪ್ರೇರಕಾವಸ್ಥೆಯೆಂದೆನಿಸುವದು. ಇನ್ನು ಅಧೋವಸ್ಥೆ ಐದಕ್ಕೆ ವಿವರ: ಪ್ರಥಮದಲ್ಲಿ ಜಾಗ್ರಾವಸ್ಥೆ ಅದಕ್ಕೆ ಪ್ರೇರಿಸುವ ತತ್ತ್ವಂಗಳು ಬಿಟ್ಟಿಹವಾವುವೆಂದಡೆ: ಶಿವತತ್ತ್ವ ಐದು, ಮಾಯಾತತ್ತ್ವ ಒಂದು, ವಿದ್ಯಾತತ್ತ್ವ ಆರು, ಭೂತಂಗಳು ಐದು ಇಂತು ಹದಿನೇಳು ಬಿಟ್ಟಿಹುದು. ಇನ್ನು ಜಾಗ್ರಾವಸ್ಥೆಯಲ್ಲಿಹ ತತ್ತ್ವಗಳೆಷ್ಟೆಂದಡೆ: ಕರಣ ನಾಲ್ಕು, ಬುದ್ಧೀಂದ್ರಿಯ ಐದು, ಕರ್ಮೇಂದ್ರಿಯ ಐದು, ವಿಷಯ ಹತ್ತು, ವಾಯು ಹತ್ತು. ಇಂತು ಮೂವತ್ತನಾಲ್ಕು ತತ್ತ್ವಂಗಳಲ್ಲಿ ಆ ತನು ಕೇಳದೆ ಕೇಳುವ, ಮಾತಾಡದ ಹಾಂಗೆ ಆಲಸ್ಯದಲ್ಲಿ ಮಾತನಾಡುತ್ತಿಹನು, ಇಂತು ಜಾಗ್ರಾವಸ್ಥೆ. ಇನ್ನು ಸ್ವಪ್ನಾವಸ್ಥೆ. ಅದಕ್ಕೆ ಹತ್ತು ತತ್ತ್ವಂಗಳು ಬಿಟ್ಟಿಹವು. ಅವಾವುವೆಂದಡೆ:ಬುದ್ಧೀಂ್ರಯ ಐದು, ಕರ್ಮೇಂದ್ರಿಯ ಐದು. ಲಲಾಟದಲ್ಲಿ ನಿಲುವು ಕಂಠಸ್ಥಾನದಲ್ಲಿ ಇಪ್ಪತ್ತೈದು ತತ್ತ್ವಂಗಳು ಕೂಡಿಕೊಂಡಿಹುದು. ಅದೆಂತೆಂದಡೆ:ಮಾಯೆ ಒಂದು, ವಾಯು ಹತ್ತು, ವಿಷಯ ಹತ್ತು, ಕರಣ ನಾಲ್ಕು ಇಂತು ಇಪ್ಪತ್ತೈದು ತತ್ತ್ವಂಗಳು ಕೂಡಿಕೊಂಡು ಸ್ವಪ್ನಂಗಳ ಕಾಣುತಿಹನು. ಇದು ಸ್ವಪ್ನಾವಸ್ಥೆ. ಇನ್ನು ಸುಷುಪ್ತಾವಸ್ಥೆಗೆ ಬಹಲ್ಲಿ ಕಂಠಸ್ಥಾನದಲ್ಲಿ ನಿಂದ ತತ್ತ್ವಂಗಳಾವಾವವೆಂದಡೆ- ಮಾಯೆ ಒಂದು, ವಾಯು ಒಂಬತ್ತು ವಿಷಯ ಹತ್ತು, ಕರಣ ಮೂರು- ಇಂತು ಇಪ್ಪತ್ತಮೂರು ತತ್ತ್ವ. ಇನ್ನು ಹೃದಯಸ್ಥಾನದಲ್ಲಿ ಕೂಡಿಹ ತತ್ತ್ವ ಆವಾವೆಂದಡೆ: ಪ್ರಾಣವಾಯು ಒಂದು, ಪ್ರಕೃತಿ ಒಂದು, ಚಿತ್ತ ಒಂದು -ಇಂತು ಸುಷುಪ್ತಾವಸ್ಥೆಯಲ್ಲಿ ತತ್ತ್ವ. ಇನ್ನು ತೂರ್ಯಾವಸ್ಥೆಗೆ ಬಹಾಗ ಹೃದಯದಲ್ಲಿ ನಿಂದ ತತ್ತ್ವ ಚಿತ್ತ ಒಂದು. ನಾಬ್ಥಿಸ್ಥಾನದಲ್ಲಿ ತೂರ್ಯಾವಸ್ಥೆಯಲ್ಲಿಹ ತತ್ತ್ವ ಪ್ರಾಣವಾಯು ಒಂದು, ಪ್ರಕೃತಿ ಒಂದು. ಅತೀತಾವಸ್ಥೆಗೆ ಹೋಹಾಗ ನಾಬ್ಥಿಸ್ಥಾನದಲ್ಲಿ ತೂರ್ಯಾವಸ್ಥೆಯಲ್ಲಿ ಪ್ರಾಣವಾಯುವುಳಿದು ಅತೀತಾವಸ್ಥೆಯಲ್ಲಿ ಪ್ರಕೃತಿಗೂಡಿ ಮೂಲಾಧಾರದಲ್ಲಿ ಆಣವಮಲಯುಕ್ತವಾಗಿ ಏನೆಂದರಿಯದೆ ಇಹುದು, ಇಂತಿದು ಅಧೋವಸ್ಥೆ. ಇನ್ನು ಊಧ್ರ್ವಾವಸ್ಥೆ, ಅತೀತದಲ್ಲಿ ಪ್ರಕೃತಿಕಾರ್ಯಂಗಳೆಲ್ಲವನೂ ಬಿಟ್ಟು, ತತ್ತ್ವಂಗಳೊಂದೂ ಇಲ್ಲದೆ, ಅಣವಮಲಸ್ವರೂಪವಾಗಿ ಮೂಲಾಧಾರದಲ್ಲಿ ಬ್ದಿರ್ದ ಆತ್ಮನಿಗೆ ಪರಮೇಶ್ವರನ ಕರುಣದಿಂದ ಕ್ರಿಯಾಶಕ್ತಿ, ಶಕ್ತಿತತ್ತ್ವಮಂ ಪ್ರೇರಿಸುವುದು. ಆ ಶಕ್ತಿ ಕಲೆ, ಕಾಲ, ನಿಯತಿಗಳಂ ಪ್ರೇರಿಸುವುದು. ಆ ವೇಳೆಯಲ್ಲಿ ಸೂಕ್ಷೆ ್ಮಯೆಂಬ ವಾಕ್ಕು ಕೂಡುವುದು. ಇಂತು ಅತೀತದಲ್ಲಿ ಅರುಹಿಸುವ ತತ್ತ್ವಂಗಳು: ಶಕ್ತಿತತ್ತ್ವ, ಕಲೆ, ಕಾಲ, ನಿಯತಿ, ಸೂಕ್ಷೆ ್ಮ ಇಂತು ತತ್ತ್ವಂಗಳು ಐದು. ಇನ್ನು ತೂರ್ಯಾವಸ್ಥೆಗೆ ಬಹಾಗ ಹಿಂದೆ ಹೇಳಿದ ತತ್ತ್ವ ಐದು, ಪಶ್ಯಂತಿಯೆಂಬ ವಾಕ್ಕು, ಪ್ರಾಣವಾಯು ಕೂಡಿ ತತ್ತ್ವ ಏಳು ತೂರ್ಯಾವಸ್ಥೆಯಲ್ಲಿ ಪ್ರೇರಿಸುವುದು: ಹಿಂದೆ ಹೇಳಿದ ತತ್ತ್ವ ಏಳು ಕೂಡಿ, ಹೃದಯಸ್ಥಾನದಲ್ಲಿ ಮಧ್ಯಮೆ, ಚಿತ್ತ - ಎರಡು ಕೂಡುತ್ತಿಹವು. ಆ ವೇಳೆಯಲ್ಲಿ ಜ್ಞಾನಶಕ್ತಿ ಶುದ್ಧವಿದ್ಯಾತತ್ತ್ವಮಂ ಪ್ರೇರಿಸುವುದು. ಆ ಶುದ್ಧವಿದ್ಯಾತತ್ತ್ವ ಆತ್ಮಂಗೆ ಅರಿವನೆಬ್ಬಿಸುವುದು. ಇಚ್ಛಾಶಕ್ತಿ ಈಶ್ವರತತ್ತ್ವಮಂ ಪ್ರೇರಿಸುವುದು; ಈಶ್ವರತತ್ತ್ವ ರಾಗತತ್ತ್ವಮಂ ಪ್ರೇರಿಸುವುದು; ರಾಗತತ್ತ್ವ ಆತ್ಮಂಗೆ ಇಚ್ಛೆಯನೆಬ್ಬಿಸುವುದು. ಆಶಕ್ತಿ ಸಾದಾಖ್ಯತತ್ತ್ವಮಂ ಪ್ರೇರಿಸುವುದು; ಸಾದಾಖ್ಯತತ್ತ್ವ ಪ್ರಕ್ಕೃತಿತ್ತ್ವಮಂ ಪ್ರೇರಿಸುವುದು; ಪರಾಶಕ್ತಿ ಶಿವತತ್ತ್ವಮಂ ಪ್ರೇರಿಸುವುದು; ಶಿವತತ್ತ್ವ ಗುಣತತ್ತ್ವಮಂ ಪ್ರೇರಿಸುವುದು. ಇಂತು ಹದಿನೆಂಟು ತತ್ತ್ವ ಆವಾವವೆಂದಡೆ: ಪಂಚಶಕ್ತಿ ಹೊರಗಾಗಿ ಶಿವತತ್ತ್ವ ಐದು, ವಿದ್ಯಾತತ್ತ್ವ ಐದು, ಪ್ರಾಣವಾಯು ಒಂದು, ಪ್ರಕೃತಿ ಒಂದು, ಗುಣ ಮೂರು, ಚಿತ್ತ ಒಂದು, ಪುರುಷ ಒಂದು. ಇಂತು ತತ್ತ್ವ ಹದಿನೇಳು ಸುಷುಪ್ತಾವಸ್ಥೆಯಲ್ಲಿ ಅರುಹಿಸುವುವು. ಇನ್ನು ಸ್ವಪ್ನಾವಸ್ಥೆಯ ಕಂಠದಲ್ಲಿಹ ತತ್ತ್ವ: ಜ್ಞಾನೇಂದ್ರಿಯ ವಿಷಯ ಹತ್ತು, ಕರ್ಮೇಂದ್ರಿಯ ವಿಷಯ ಹತ್ತು, ಪ್ರಾಣವಾಯು ಉಳಿಯೆ, ವಾಯುಚಿತ್ತ ಉಳಿಯೆ, ತ್ರಿಕರಣ ಅಹಂಕಾರ ಮೂರು, ವೈಖರಿಯ ವಾಕ್ಕು ಒಂದು ಇಂತು ಇಪ್ಪತ್ತನಾಲ್ಕು ತತ್ತ್ವ. ಸುಷುಪ್ತಾವಸ್ಥೆಯಲ್ಲಿ ಹಿಂದೆ ಹೇಳಿದ ತತ್ತ್ವ ಹದಿನೇಳು ಕೂಡಿ ತತ್ತ್ವ ನಲವತ್ತೊಂದು ಸ್ವಪ್ನಾವಸ್ಥೆಯಲ್ಲಿ ಕೂಡಿಹವು. ಆಗ ತನ್ನೊಳಗೆ ಅರುಹಿಸುವ ಪ್ರಕಾರವೆಂತೆಂದಡೆ: ಚಿತ್ತ, ಬುದ್ಧಿ, ಅಹಂಕಾರ, ಮನ, ಹೃದಯ ಈ ಐದು. ಚಿತ್ತವನು ಆಕಾರ ಪ್ರೇರಿಸುವುದು. ಆ ಅಕಾರವನು ಬ್ರಹ್ಮ ಪ್ರೇರಿಸುವನು, ಬುದ್ಧಿಯನು ಉಕಾರ ಪ್ರೇರಿಸುವುದು; ಉಕಾರವನು ವಿಷ್ಣು ಪ್ರೇರಿಸುವನು, ಅಹಂಕಾರವನು ಮಕಾರ ಪ್ರೇರಿಸುವುದು; ಮಕಾರವನು ರುದ್ರ ಪ್ರೇರಿಸುವನು, ಮನವನು ಬಿಂದು ಪ್ರೇರಿಸುವುದು; ಬಿಂದುವನು ಈಶ್ವರ ಪ್ರೇರಿಸುವನು; ಹೃದಯವನು ನಾದ ಪ್ರೇರಿಸುವುದು; ನಾದವನು ಸದಾಶಿವ ಪ್ರೇರಿಸುವನು. ಈ ಹದಿನೈದು ತನ್ನೊಳಗೆ ಸೂಕ್ಷ ್ಮಶರೀರದಲ್ಲಿಹುದು. ...........ಗೀ(?) ಅಷ್ಟತನುವಿನಿಂದ ಸ್ವರ್ಗನರಕವನರಿವನು. ಮುಂದೆ ಜಾಗ್ರಾವಸ್ಥೆಯಲ್ಲಿ ಅರುಹಿಸುವ ತತ್ತ್ವ ಅವಾವವೆಂದಡೆ- ಭೂತ ಐದು, ಉಭಯೇಂದ್ರಿಯ ಹತ್ತು, ಭೂತಕಾರ್ಯ ಇಪ್ಪತ್ತೈದು, ನಾಡಿ ಹತ್ತು, ಅಂತು ತತ್ತ್ವ ನಲವತ್ತೊಂದು. ಅಂತು ಕೂಡಿ ತತ್ತ್ವ ತೊಂಬತ್ತೊಂದು. ಇಂತಿದು ಊಧ್ರ್ವಾವಸ್ಥೆ. ಇನ್ನು ಸಕಲಾವಸ್ಥೆಯೆಂತೆಂದಡೆ: ತೊಂಬತ್ತೊಂದು ತತ್ತ್ವ ಅವರಲ್ಲಿ ಪ್ರೇರಕತತ್ವವೊಂದು ಪ್ರೇರಿಸುವಲ್ಲಿ ಸಕಲಾವಸ್ಥೆ. ಅದು ಶಿವನನೂ ತನ್ನನೂ ಪಾಶಪಂಚಕವನು ಅರಿಯದೆ ಎಲ್ಲ ವಿಷಯಂಗಳನು ಅರಿವುತ್ತಿಹುದು. ಇನ್ನು ಮಧ್ಯಮಾವಸ್ಥೆಯೆಂತೆಂದಡೆ- ಹಿಂದೆ ಕಂಡವನ ಈಗಲೆಂದು ಅರಿಯಹುದೀಗ ಜಾಗ್ರ ಅತೀತ. ಹಿಂದೆ ಕಂಡವನ ಅರಿದ ಹಾಂಗಿಹುದೀಗ ಜಾಗ್ರ ತುರೀಯ. ಹಿಂದೆ ಕಂಡವನ ಮೆಲ್ಲನೆಚ್ಚತ್ತು ಅರಿವುದು ಜಾಗ್ರದ ಸುಷುಪ್ತಿ. ಹಿಂದೆ ಕಂಡವನ ಕಂಡಾಗಲೆ ಅರಿವುದು ಜಾಗ್ರದ ಸ್ವಪ್ನ. ಹಿಂದೆ ಕಂಡವನ ಹೆಸರು, ಇದ್ದ ಸ್ಥಲ, ಅವನ ಕಾಯಕ ಮುಂತಾಗಿ ಚೆನ್ನಾಗಿ ಅರಿವುದು ಜಾಗ್ರದ ಜಾಗ್ರ. ಅದೆಂತೆಂದಡೆ, ಜಾಗ್ರದಲ್ಲಿ ಪುರುಷತತ್ತ್ವದಲ್ಲಿ ಎಲ್ಲ ತತ್ತ್ವಗಳು ಕೂಡಿದ ಕಾರಣಂದ ತಾನೇನ ನೆನೆದಿದ್ದುದನು ಮರೆವುದು ಜಾಗ್ರ ಅತೀತ. ಆ ಪುರುಷತತ್ತ್ವದಲ್ಲಿ ಪ್ರಾಣವಾಯು ಕೂಡಲು ನೆನೆದುದನು ಹೇಳಿಹೆನೆಂದಡೆ ತೋರುವ ಹಾಂಗೆ ಇಹುದು ತೋರದಿಹುದು ಜಾಗ್ರದ ತುರೀಯ. ಆ ಪುರುಷತತ್ತ್ವದಲ್ಲಿ ಪ್ರಾಣವಾಯು ಚಿತ್ತವು ಕೂಡಲು ನೆನೆದುದನು ಮೆಲ್ಲನೆಚ್ಚತ್ತು ಅರಿದು ಹೇಳುವುದು ಜಾಗ್ರದ ಸುಷುಪ್ತಿ, ಆ ಪುರುಷತತ್ತ್ವದಲ್ಲಿ ಕರಣ ನಾಲ್ಕು, ಇಂದ್ರಿಯ ಹತ್ತು, ವಾಯು ಹತ್ತು, ವಿಷಯ ಹತ್ತು ಅಂತೂ ತತ್ತ್ವ ಮೂವತ್ತನಾಲ್ಕು ಕೂಡಲಾಗಿ, ತಾ ನೆನೆದುದನು ಇದ್ದುದನು ಚೆನ್ನಾಗಿ ಅರಿದು ವಿವರದಿಂದ ಹೇಳುವುದು ಇದು ಜಾಗ್ರದ ಜಾಗ್ರ. ಇಂತಿದು ಮಾಧ್ಯಮಾವಸ್ಥೆ. ಇನ್ನು ಕೇವಲಾವಸ್ಥೆಯೆಂತೆಂದಡೆ: ಶುದ್ಧತತ್ತ್ವ ವಿದ್ಯಾತತ್ತ್ವವನೆಲ್ಲವ ಬಿಟ್ಟು ಆಣವಮಲದಲ್ಲಿ ಆಣವಸ್ವರೂಪಾಗಿ ಕಣ್ಗತ್ತಲೆಯಲ್ಲಿ ಏನೂ ಕಾಣದ ಕಣ್ಣಿನ ಹಾಂಗೆ ಇದ್ದುದೀಗ ಕೇವಲಾವಸ್ಥೆ. ಇನ್ನು ಶುದ್ಧಾವಸ್ಥೆಯೆಂತೆಂದಡೆ: ಕರ್ಮಸಮಾನದಲ್ಲಿ ಶಕ್ತಿಪಾತವಾಗಿ,ತ್ರಿಪದಾರ್ಥಜ್ಞಾನವಾಗಿ, ದಿಟವೆಂಬಂತೆ ತೋರುತ್ತಿಹ ದೇಹಾಪ್ರಪಂಚುವನು ಸಟೆಯೆಂದು ಕಸವ ಕಳೆವ ಹಾಂಗೆ ಕಳೆದು, ತತ್ತ್ವಂಗಳೊಳಗೆ ಇದ್ದು ತತ್ತ್ವಂಗಳಿಗೆ ಅನ್ಯವಾಗಿ, ಆ ತತ್ತ್ವಂಗಳನು ಅರಿದ ಸಕಲಾವಸ್ಥೆಯೆಂಬ ಕೇವಲಾವಸ್ಥೆಯೆಂಬ ಈ ಎರಡು ಅವಸ್ಥೆಗಳೂ ತನ್ನನು ಶಿವನನು ಅರಿವುದಕ್ಕೆ ಪ್ರಯೋಜನವಲ್ಲವೆಂದು ಎರಡವಸ್ಥೆಯನೂ ಬಿಟ್ಟು ಸಕಲವನೂ ಹೊದ್ದದೆ ಕೇವಲವನೂ ಹೊದ್ದದೆ ತ್ರಾಸಿನ ಮುಳ್ಳು ನಿಂದ ಹಾಂಗೆ ನಿಂದುದು ಶುದ್ಧಾವಸ್ಥೆ. ಇದು ಶಿವನ ಶರಣರಿಗಲ್ಲದೆ ಇಲ್ಲ. ಇನ್ನು ನಿರ್ಮಲಾವಸ್ಥೆ ಎಂತೆಂದಡೆ- ಶಿವಜ್ಞಾನದಲ್ಲಿ ಬೋಧವನಳಿದು ಜ್ಞೇಯದೊಳು ಕೂಡಿಹ ಜೀವನ್ಮುಕ್ತರಿಗೆ ಪಂಚಾವಸ್ಥೆಗಳು. ಆ ಅವಸ್ಥೆಗಳಲ್ಲಿ ತತ್ತ್ವಗಳಾವಾವೆಂದಡೆ: ಶಿವತತ್ತ್ವ, ಶಕ್ತಿತತ್ತ್ವ, ಸಾದಾಖ್ಯತತ್ತ್ವ, ಈಶ್ವರತತ್ತ್ವ, ಶುದ್ಧ ವಿದ್ಯಾತತ್ತ್ವ ಈ ಐದು ಮೊದಲಾಗಿ ಪರಾ, ಆದಿ, ಇಚ್ಛೆ, ಜ್ಞಾನ, ಕ್ರಿಯೆಯೆಂಬ ಶಕ್ತಿ ಪಂಚಕಗಳು ಉಸುರಾಗಿ ಜಾಗ್ರಾವಸ್ಥೆಯಲ್ಲಿ ಅರಿವುತ್ತಿಹನು. ಕ್ರಿಯಾಶಕ್ತಿ ಶಕ್ತಿತತ್ತ್ವಮಂ ಬಿಟ್ಟು ಉಳಿದ ಶಕ್ತಿ ನಾಲ್ಕು ಒಡಲುಸುರಾಗಿ ಅರಿಯೆ ಸ್ವಪ್ನಾವಸ್ಥೆ. ಜ್ಞಾನಶಕ್ತಿ ಶುದ್ಧವಿದ್ಯಾತತ್ತ್ವಮಂ ಬಿಟ್ಟು ಕಳೆದು ಉಳಿದ ಶಕ್ತಿ ಮೂರರಲ್ಲಿ ಅರಿಯೆ ಸುಷುಪ್ತಾವಸ್ಥೆ. ಇಚ್ಛಾಶಕ್ತಿ ಈಶ್ವರತತ್ತ್ವಮಂ ಬಿಟ್ಟು ಕಳೆದು ಉಳಿದ ಶಕ್ತಿ ಎರಡರಲ್ಲಿ ಅರಿವುದು ತೂರ್ಯಾವಸ್ಥೆ. ಆಶಕ್ತಿ ಸಾದಾಖ್ಯತತ್ತ್ವವೂ ಬಿಟ್ಟು ಕಳೆದು ಉಳಿದ ಪರಾಶಕ್ತಿ ಒಂದು ಶಿವತತ್ತ್ವ ಒಂದರಲ್ಲಿ ಅರಿಯೆ ನಿರ್ಮಲದ ಅತೀತಾವಸ್ಥೆ. ಇನ್ನು ಈ ಶಕ್ತಿ ಶಿವತತ್ತ್ವಂಗಳೆ ಒಡಲುಸುರಾಗಿ ಇದ್ದಲ್ಲಿ ಶಿವನಲ್ಲದೆ ಮತ್ತೊಂದು ಏನೂ ತೋರದು. ಅಂಥ ಜೀವನ್ಮುಕ್ತರು ನಿರ್ಮಲಜಾಗ್ರದಲ್ಲಿ ಎಂತು ಅರಿವುತ್ತಿಪ್ಪರೆಂದಡೆ ಆ ಪರಮಾವಸ್ಥೆಯನೂ ಅನುಭವದಲ್ಲಿ ಅರಿವುದು, ಮಲಪಂಚಕಗಳನು ಅರುಹಿಸುವ ಸದಮಲ ಶಿವಜ್ಞಾನ ಪರೆ ಮೊದಲಾದ ಪೂರ್ಣ ಬೋಧದಲ್ಲಿ ಕೂಡಿ ತಾನು ಇಲ್ಲದಿರುವಂಧು ಏನೂ ತೋರದ ಪೂರ್ಣ ಬೋಧವಾಗಿ ನಿಂದುದು ನಿರ್ಮಲಜಾಗ್ರ. ಇನ್ನು ಪರಾಶಕ್ತಿಯನೂ ಶಿವತತ್ತ್ವವನೂ ಮೀರಿ, ಪರದಲಿ ಬೆರೆದು, ಅದ್ವೆ ೈತವೂ ಅಲ್ಲದೆ, ದ್ವೆ ೈತವೂ ಅಲ್ಲದೆ, ದ್ವೆ ೈತಾದ್ವೆ ೈತವೂ ಅಲ್ಲದೆ ಇನತೇಜದಲ್ಲಿ ಕಣ್ಣು ತೇಜ ಕೂಡಿದ ಹಾಂಗೆ ಆಣವದ ಅಣುವಿನ ಹಾಂಗೆ ತಾನು ಇಲ್ಲದೆ ಇಹನು. ಇದು ಶಿವಾದ್ವೆ ೈತ. ಇಂತಲ್ಲದೆ ಆತ್ಮ ಆತ್ಮ ಕೆಟ್ಟಡೆ, ಆತ್ಮವರ್ಗ ಮುಕ್ತಿಸುಖವಿಲ್ಲ, ಅಳಿದ ಠಾವಿನಲ್ಲಿ ಹುಟ್ಟುವುದಾಗಿ, ಶಿವ ತಾನೆ ಆತ್ಮನಾಗಿ ಹುಟ್ಟುವನಹುದು: ಶಿವನಲ್ಲಿ ಹುಟ್ಟಿ ಮಲ ಉಳ್ಳದಹುಲ್ಲ. ಶಿವ ತಾನೆ ಹುಟ್ಟಿಸಿ ನರಕ - ಸ್ವರ್ಗದ ಮಾನವನಹನು, ಪಕ್ಷಪ್ಕಾಯಹನು, ನಿಃಕರುಣಿಯಹನು, ವಿಕಾರಿಯಹನು. ಶಿವನ್ಲ ಕೂಡದೆ ಬೇರಾಗಿ ಇಹನೆಂದಡೆ, ಮುಕ್ತಿಯೆಂಬ ಮಾತು ಇಲ್ಲವಹುದು. ಪಂಚಕೃತ್ಯವ ಮಾಡಲು ಕಾರಣವಿಲ್ಲ ಒಂದಾಗೆ! ಎರಡಾಗದೆ ಭೇದಾಭೇದವಾಗಿಹನೆಂದಡೆ ಶಿವಭಕ್ತಿಯನೂ ಶಿವಕ್ರಿಯೆಗಳನೂ ಮಾಡಿ ಶಿವನ ಕೂಡಿಹನೆಂದೆನ್ನಬೇಡ! ಮುನ್ನವೆ ಒಂದಾಗಿ ಇದ್ದನಾಗಿ, ಈ ಭೇದವ ತಿಳಿಯಬಲ್ಲಡೆ ಆತನೆ ಶರಣ ಕಾಣಾ, ಕಪಿಲಸಿದ್ಧಮಲ್ಲಿಕಾರ್ಜುನಾ
--------------
ಸಿದ್ಧರಾಮೇಶ್ವರ
ವನಾಂತರದಲ್ಲಿ ಕೋಗಿಲೆ ಸ್ವರಗೈದಿತೆಂದು ಕುಂಬ್ಥಿನಿಯ ಮೇಲೆ ಕಾಗಿ ತಾ ಕರೆದಂತೆ, ಅರಸಿ ಮಂಚವನೇರಿದಳೆಂದು ಕಸ ನೀರು ಹೊರುವ ದಾಸಿ ತಾ ಹೊರಸನೇರುವಂತೆ, ಮಹಾರಾಜಕುಮಾರನು ಆನೆಯನೇರಿದನೆಂದು ಮಣ್ಣು ಹೊರುವ ಉಪ್ಪರಿಗನಮಗ ತಾ ಕೋಣ[ನ]ನೇರುವಂತೆ, ಮಹಾವೀರಕುಮಾರ ಮಹಾತೇಜಿಯನೇರಿದನೆಂದು ಮೈಲಿಗೆಯ ತೊಳೆಯುವ ಮಡಿವಾಳನಮಗ ತಾ ಮೋಳಿಗೆಯ ಹೇರುವ ಕತ್ತೆಯನೇರುವಂತೆ, ಬಾಲಹನುಮನು ಲಂಕೆಗೆ ಹಾರಿದನೆಂದು ಒಂದು ಮರುಳಕೋತಿ ತಾ ಪರ್ವತವನೇರಿ ಕೆಳಕ್ಕೆ ಬಿದ್ದಂತೆ, ಮಹಾಮಲೆಯೊಳಗೆ ಒಂದು ಮಹಾವ್ಯಾಘ್ರನು ಘುಡುಘುಡಿಸಿ ಲಂಘಿಸಿ ಒಂದು ಪಶುವಿಗೆ ಹಾರಿತೆಂದು ಮಹಾ ಶೀಗರಿಮೆಳೆಯೊಳಗೊಂದು ಮರುಳ ನರಿ ತಾ ಒದರಿ ಹಲ್ಲು ಕಿಸಿದು ಕಣ್ಣು ತೆರೆದೊಂದು ಇಲಿಗೆ ತಾ ಲಂಘಿಸಿ ಹಾರುವಂತೆ. ಇಂತೀ ದೃಷ್ಟಾಂತದಂತೆ ಆದಿ ಆನಾದಿಯಿಂದತ್ತತ್ತಲಾದ ಘನಮಹಾಲಿಂಗದೊಳಗೆ ಜ್ಯೋತಿ ಜ್ಯೋತಿ ಕೂಡಿದಂತೆ, ಬೆರಸದ ಶಿವಶರಣರು ಹಾಡಿದ ವಚನವ ಶಿವಾಂಶಿಕರಾದ ಸಜ್ಜೀವಾತ್ಮರು ಹಾಡಿ ನಿರ್ವಯಲಾದರೆಂದು ತ್ರಿಭುವನ ಮೊದಲಾದ ಚತುರ್ದಶಭುವನದಲ್ಲಿರುವ ದೇವ ದಾನವ ಮಾನವರು ಮೊದಲಾದ ಜೀವಾತ್ಮರು ಇಟ್ಟೆಯ ಹಣ್ಣ ನರಿ ತಾ ತಿಂದು ಪಿಟ್ಟೆಸಿಕ್ಕು ಬಾಯಿತೆರೆದು ಒದರುವಂತೆ ಏಕಲಿಂಗ ನಿಷ್ಠಾಪಾರಿಗಳ ವಚನವ ಮಲತ್ರಯವೆಂಬ ಇಟ್ಟೆಯಹಣ್ಣ ತಿಂದು ಪಿಟ್ಟೆಸಿಕ್ಕು ಬಾಯಿ ತೆರೆದು ಬೇನೆಹಾಯ್ದ ಕುರಿಯಂತೆ ಒದರಿ ಒದರಿ ಸತ್ತು ಭವದತ್ತ ಮುಖವಾಗಿ ಹೋದರಲ್ಲದೆ ಇವರು ಲಿಂಗೈಕ್ಯಗಳಾಗಲರಿಯರು ನೋಡೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕಾಲ್ಲದವಂಗೆ ಕಾಲ ಕೊಟ್ಟೆ ಬಸವಾ; ಕಣ್ಣಿಲ್ಲದವಂಗೆ ಕಣ್ಣ ಕೊಟ್ಟೆ ಬಸವಾ; ಎನ್ನ ಕಣ್ಣು ಕಾಲಿಂಗೆ ನೀನೆಯಯ್ಯಾ ಬಸವಾ, ಕಪಿಲಸಿದ್ಧಮಲ್ಲಿನಾಥಯ್ಯಾ
--------------
ಸಿದ್ಧರಾಮೇಶ್ವರ
ಕಾಳ ರಕ್ಕಸಿಗೆ ಮೂರು ಬೆನ್ನು, ಐದು ಬಸುರು, ಆರು ಕಣ್ಣು, ಏಳು ಮೊಲೆ, ಎಂಟು ಭುಜ, ಹತ್ತು ತೋಳು, ಹದಿನಾರು ಪಾದ, ಹದಿನೆಂಟು ತಲೆ, ಮೂವತ್ತಾರು ಬಾಯಿ, ಐವತ್ತೆರಡು ನಾಲಗೆ, ಅರುವತ್ತುನಾಲ್ಕು ಕೋರೆದಾಡೆ. ಈ ಪರಿಯಲ್ಲಿ ಜಗವೆಲ್ಲವನಗಿದಗಿದು ಉಗುಳುತ್ತಿರ್ದಳಯ್ಯಾ, ಸೌರಾಷ್ಟ್ರ ಸೋಮೇಶ್ವರಾ, ನೀ ಮುಟ್ಟೆ ಬಟ್ಟಬಯವಾದಳು.
--------------
ಆದಯ್ಯ
ಅಂಗಾಲಕಣ್ಣವರಾಗಬಹುದಲ್ಲದೆ ಮೈಯೆಲ್ಲ ಕಣ್ಣವರಾಗಬಾರದು. ಮೈಯೆಲ್ಲ ಕಣ್ಣವರಾಗಬಹುದಲ್ಲದೆ ನೂಸಲ ಕಣ್ಣು ಚತುರ್ಭುಜರಾಗಬಾರದು. ನೊಸಲಕಣ್ಣು ಚತುರ್ಭುಜದವರಾಗಹುದಲ್ಲದೆ ಪಂಚವಕ್ತ್ರ ದಶಭುಜದವರಾಗಬಾರದು. ಪಂಚವಕ್ತ್ರ ದಶಭುಜದವರಾಗಬಹುದಲ್ಲದೆ ಸರ್ವಾಂಗಲಿಂಗಿಗಳಾಗಬಾರದು. ಸರ್ವಾಂಗಲಿಂಗಿಗಳಾಗಬಹುದಲ್ಲದೆ, ಕಲಿದೇವಯ್ಯಾ, ನಿಮ್ಮ ಶರಣ ಬಸವಣ್ಣನಾಗಬಾರದೆಂದರಿದು, ಆ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->