ಅಥವಾ

ಒಟ್ಟು 39 ಕಡೆಗಳಲ್ಲಿ , 15 ವಚನಕಾರರು , 35 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮರ್ತ್ಯದಲ್ಲಿ ಹುಟ್ಟಿ ಎತ್ತಲೆಂದರಿಯದೆ, ಕತ್ತಲೆಯೊಳು ಮುಳುಗಿ, ಕಾಮನ ಬಲೆಯೊಳಗೆ ಸಿಕ್ಕಿದ ಎಗ್ಗ ಮನುಜರಿರಾ, ನೀವು ಕೇಳಿರೋ. ನಿಮ್ಮ ಇರವು ಎಂತೆಂದಡೆ; ಕಾಯವೆಂದಡೆ ಕಳವಳಕ್ಕೊಳಗಾಯಿತ್ತು; ಜೀವವೆಂದಡೆ ಅರುಹು ಮರವೆಗೊಳಗಾಯಿತ್ತು; ಮನವೆಂದಡೆ ಸಚರಾಚರವನೆಲ್ಲವ ಚರಿಸುವುದಕ್ಕೆ ಒಳಗಾಯಿತ್ತು; ಪ್ರಾಣವೆಂದಡೆ ಇವೆಲ್ಲವನು ಆಡಿಸಿ ನೋಡುವುದಕ್ಕೆ ಒಳಗಾಯಿತ್ತು. ಇವರೊಳಗೆ ಬಿದ್ದು ಏಳಲಾರದ ಬುದ್ಧಿಹೀನರಿರಾ, ನೀವು ಕೇಳಿ, ಹೇಳಿಹೆನು. ನಮ್ಮ ಶರಣರು ಜಗದೊಳಗೆ ಹುಟ್ಟಿ ಜಗವನೆ ಮರೆದು, ಎಚ್ಚತ್ತು ಚಿತ್ತವ ಸುಯಿದಾನವ ಮಾಡಿ, ಕಳವಳಕ್ಕೊಳಗಾಗಿದ್ದ ಕಾಯವನೆ ಸರ್ವಾಂಗಲಿಂಗವ ಮಾಡಿದರು. ಅರುಹು ಮರವೆಯೊಳಗಾಗಿದ್ದ ಜೀವನ ಬುದ್ಧಿಯನೆ ಪರಮನ ಬುದ್ಧಿಯ ಮಾಡಿದರು. ಸಚರಾಚರವ ಚರಿಸುವುದಕ್ಕೊಳಗಾಗಿದ್ದ ಮನವನೆ ಅರುಹು ಮಾಡಿದರು. ಆಡಿಸಿ ನೋಡುವುದಕ್ಕೆ ಒಳಗಾಗಿದ್ದ ಪ್ರಾಣವನೆ ಲಿಂಗವಮಾಡಿದರು. ಈ ಸರ್ವಾಂಗವನು ಲಿಂಗವ ಮಾಡಿ ಆ ಲಿಂಗವನು ಕಂಗಳಲ್ಲಿ ಹೆರೆಹಿಂಗದೆ ನೋಡಿ, ಆ ಮಂಗಳದ ಮಹಾಬೆಳಗಿನಲ್ಲಿ ಬಯಲಾದರಯ್ಯಾ, ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಮಾತಿನ ಮಾಲೆ ಎಷ್ಟಾದಡೆಯೂ ಉಂಟು. ಖ್ಯಾತಿಯ ಮಾಟ ಜಗದೊಳಗೆ ಎಷ್ಟಾದಡೂ ಉಂಟು. ಜಗದೀಶನನರಿವ ಆತನಿದ್ದ ಠಾವೇ, ಭಾಸುರತೇಜಪ್ರಕಾಶ, ಅದರಿಂದಾಚೆಯ ಮಾತು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಸವಣ್ಣ ಮತ್ರ್ಯಲೋಕಕ್ಕೆ ಬಂದು ಮಹಾಮನೆಯ ಕಟ್ಟಿ, ಭಕ್ತಿಜ್ಞಾನವೆಂಬ ಜ್ಯೋತಿಯನೆತ್ತಿ ತೋರಲು ಸುಜ್ಞಾನವೆಂಬ ಪ್ರಭೆ ಪಸರಿಸಿತಯ್ಯಾ ಜಗದೊಳಗೆ. ಬೆಳಗಿನೊಳು ತಿಳಿದು ನೋಡಿ ಹರೆದಿದ್ದ ಶಿವಗಣಂಗಳೆಲ್ಲ ನೆರೆದು ಕೂಡಿತಯ್ಯಾ. ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಬಸವಣ್ಣನ ಕೃಪೆಯಿಂದ ಪ್ರಭುದೇವರ ನಿಜವನರಿದು ನಿಶ್ಚಿಂತರಾದರಯ್ಯಾ ಶಿವಗಣಂಗಳೆಲ್ಲರು
--------------
ಚನ್ನಬಸವಣ್ಣ
ಜಗದೊಳಗೆ ಸೂರ್ಯನಂತಿರ್ಪನಯ್ಯ ಶಿವನು. ಲೋಕಾದಿ ಲೋಕಂಗಳೊಳಗಿರ್ದಡೇನು, ಜಗದ ಪುಣ್ಯ, ಪಾಪ, ಸ್ವರ್ಗ, ನರಕ, ಬಂಧ, ಮೋಕ್ಷಕ್ಕೊಳಗಾದಾತನೇ ಅಲ್ಲ. ಅದೆಂತೆಂದಡೆ, ಜಲದೊಳಗಣ ಪ್ರಕೃತಿ ವಿಕೃತಿಗಳು ಜಲಕ್ಕಲ್ಲದೆ ಸೂರ್ಯಂಗಿಲ್ಲವಾಗಿ, ಲೋಕದ ಸ್ಥಿತಿಗತಿ ಲೋಕಕ್ಕಲ್ಲದೆ, ಶಿವನಿಗಿಲ್ಲವಾಗಿ. ಅನಂತಕೋಟಿ ಬ್ರಹ್ಮಾಂಡಗಳು ತನ್ನ ಒಡಲೊಳಗೆ ಅಡಗಿದವೆಂದಡೆ ತಾ ಹೊರಗಾಗಿ ಅಡಗಲೆಡೆ ಏನುಂಟು? ಇದು ಕಾರಣ, ನಮ್ಮ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನು ವಿಶ್ವದೊಳಗೆ ಹೊದ್ದಿಯೂ ಹೊದ್ದದಿರಬಲ್ಲ, ವಿಶ್ವಾಧಿಪತಿಯಾಗಲೂ ಬಲ್ಲ.
--------------
ಉರಿಲಿಂಗಪೆದ್ದಿ
ನೀನೊಲಿುತ್ತೆ ಪುಣ್ಯ, ನೀನೊಲ್ಲದುವೆ ಪಾಪ, ಸಕಲ ಜಗದೊಳಗೆ ಅನುಶ್ರುತನಾಗಿಪ್ಪೆಯಯ್ಯಾ. ನೀನೊಲಿದವನೆ ನಿಮ್ಮನರಿದವನು. ಪ್ರಸಾದಾದ್ದೇವತಾಭಕ್ತಿಃ ಪ್ರಸಾದೋ ಭಕ್ತಿಸಂಭವಃ ಯಥೈವಾಂಕುರತೋ ಬೀಜಂ ಬೀಜತೋ ವಾ ಯಥಾಂಕುರಃ ನೀನೊಲಿದವನೆ ಧನ್ಯ, ಜಗಕ್ಕೆ ಪಾವನ ಕೂಡಲಸಂಗಮದೇವಾ. 506
--------------
ಬಸವಣ್ಣ
-->