ಅಥವಾ

ಒಟ್ಟು 119 ಕಡೆಗಳಲ್ಲಿ , 38 ವಚನಕಾರರು , 100 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಗಮ್ಯ, ಅಗೋಚರವಾದ ಪರಬ್ರಹ್ಮವನು ಪ್ರಮಾಣಕ್ಕೆ ತಂದು ಹೇಳುವಿರಯ್ಯಾ. ಪ್ರಮಾಣಕ್ಕತೀತವಾಗಿರ್ಪುದು ಪರಬ್ರಹ್ಮವು. ಹಳದಿ, ಹಸಿರು, ಕೆಂಪು, ಬಿಳಿದು, ನೀಲ, ಮಾಣಿಕ್ಯವೆಂಬ ಷಡ್ವರ್ಣಗಳಿಂದ ವರ್ಣಿಸಿ ಹೇಳುವಿರಯ್ಯಾ; ವರ್ಣಾತೀತವಾದ ವಸ್ತುವನು ವರ್ಣಿಸುವ ಪರಿಯಿನ್ನೆಂತು ಹೇಳಿರಯ್ಯಾ ! ಜಪ-ತಪ-ಮಂತ್ರ-ಸ್ತೋತ್ರಂಗಳಿಂದ ವಾಚ್ಯಕ್ಕೆ ತಂದು ಹೇಳುವಿರಯ್ಯಾ; ವಾಚಾತೀತವಾದ ವಸ್ತುವನು ವಾಚ್ಯಕ್ಕೆ ತರುವುದಿನ್ನೆಂತು ಹೇಳಿರಯ್ಯಾ ! ಇಂತೀ ಎಲ್ಲವನು ತನ್ನ ಪರಮಜ್ಞಾನದೃಷ್ಟಿಗೆ ಮಿಥ್ಯವೆಂದು ತಿಳಿಯುವುದೇ ಶಿವಜ್ಞಾನ. ಆ ಶಿವಜ್ಞಾನವೆಂಬರುಹೇ ತಾನೆಂಬ ತನು. ತನ್ನಲ್ಲಿ ತಾನೇ ತಿಳಿಯುವುದೀಗ ಅದೇ ಬ್ರಹ್ಮಜ್ಞಾನವಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವ ತಾನೆಂಬ ವಿವೇಕವಿಲ್ಲದೆ, ಶಿವನಲ್ಲಿ ತಾನಡಗಿ, ತನ್ನಲ್ಲಿ ಶಿವನಡಗಿ, ತಾನು ತಾನೇಕವಾದಾತಂಗೆ ಸಂದು ಸಂಶಯಂಗಳುಂಟೆ? ತೃಪ್ತಿ ಸಂಕೋಚವೆಂಬವಡಗಿದ ಬಳಿಕ ಮತ್ತೆ ಘನಕ್ಕೆ ಘನವಾದೆನೆಂಬ ನೆನಹುಂಟೆ? ನಿಜವೆಂತಿಪ್ಪುದಂತಿಪ್ಪನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಲಿಂಗೈಕ್ಯನು.
--------------
ಸ್ವತಂತ್ರ ಸಿದ್ಧಲಿಂಗ
ತನ್ನ ತಾನರಿತೆನೆಂಬಲ್ಲಿ ತಾನಾರು ? ಅರಿತುದೇನಯ್ಯಾ ? ತನ್ನ ಮರೆದು ಇದಿರಿಂಗೆ ಅರಿವ ಹೇಳುವಲ್ಲಿ ಆ ಮರೆದ ಅರಿವಿಂಗೆ ಕುರುಹುಂಟೆ ? ಇಂತೀ ಉಭಯದಲ್ಲಿ ತಿಳಿದು ಮತ್ತೆ ವಚನ ನಿರ್ವಚನವೆಂಬುದು ಎಲ್ಲಿ ಅಡಗಿತ್ತು ಹೇಳಾ ? ತನ್ನಲ್ಲಿ ತೋರಿದ ಸ್ವಪ್ನ ತನಗೆ ಭೀತಿ ನಿರ್ಭೀತಿಯಾದಂತೆ ಇದಿರ ಘಟ್ಟಕ್ಕೆ ಪಡಿಪುಚ್ಚವುಂಟೆ ? ಇಂತೀ ಭಾವವ ತಿಳಿದಲ್ಲಿ ಆ ವಸ್ತು ತನಗೆ ಅನ್ಯಭಿನ್ನವಿಲ್ಲ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವು.
--------------
ಪ್ರಸಾದಿ ಭೋಗಣ್ಣ
ಪಂಚಶಕ್ತಿಯನು ಪಂಚಸಾದಾಖ್ಯವನು ಪಂಚಕಲೆಗಳನು ಪಂಚಾಕ್ಷರಂಗಳನು ಪಂಚಭೂತಾತ್ಮವನು ತನ್ನಲ್ಲಿ ಗರ್ಭೀಕರಿಸಿಕೊಂಡು ತಾನು ಚಿದ್ಭ ್ರಹ್ಮಾಂಡಾತ್ಮಕನಾಗಿ, ಚಿನ್ಮಯನಾಗಿ, ಚಿದ್ರೂಪನಾಗಿ, ಚಿತ್ಪ್ರಕಾಶನಾಗಿ, ಚಿದಾನಂದನಾಗಿ ಸುಖ ದುಃಖ ಮೋಹ ಭಯಂಗಳ ಹೊದ್ದದೆ, ಸರ್ವವ್ಯಾಪಕನಾಗಿ, ಸರ್ವಚೈತನ್ಯಮಯನಾಗಿಪ್ಪ ಪರಂಜ್ಯೋತಿರ್ಲಿಂಗವು ಎನ್ನ ಪ್ರಾಣಲಿಂಗವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪೃಥ್ವಿಯೇ ಶೂದ್ರನು, ಜಲವೇ ವೈಶ್ಯನು, ಅಗ್ನಿಯೇ ಕ್ಷತ್ರಿಯನು, ವಾಯುವೇ ಬ್ರಾಹ್ಮಣನು. ಸ್ಥೂಲಶರೀರವೇ ಶೂದ್ರನು, ಸೂಕ್ಷ್ಮಶರೀರವೇ ವೈಶ್ಯನು, ಕಾರಣಶರೀವೇ ಕ್ಷತ್ರಿಯನು, ಜೀವನೇ ಬ್ರಾಹ್ಮಣನು. ಬ್ರಾಹ್ಮಣರಿಗೆ ಋಗ್ವೇದವು, ಕ್ಷತ್ರಿಯರಿಗೆ ಯಜುರ್ವೇದವು, ವೈಶ್ಯರಿಗೆ ಸಾಮವೇದವು, ಶೂದ್ರರಿಗೆ ಅಥರ್ವಣವೇದವು. ಶೂದ್ರರಿಗೆ ಧರ್ಮವು, ವೈಶ್ಯರಿಗೆ ಅರ್ಥವು, ಕ್ಷತ್ರಿಯರಿಗೆ ಕಾಮವು, ಬ್ರಾಹ್ಮಣರಿಗೆ ಮೋಕ್ಷವು, ಬ್ರಾಹಣರಿಗೆ ಪೀತವರ್ಣವು, ಕ್ಷತ್ರಿಯರಿಗೆ ಅರುಣವರ್ಣವು, ವೈಶ್ಯರಿಗೆ ಶ್ಯಾಮವರ್ಣವು, ಶೂದ್ರರಿಗೆ ನೀಲವರ್ಣವು. ಬ್ರಾಹ್ಮಣರಿಗೆ ಸಾಮವು, ಕ್ಷತ್ರಿಯರಿಗೆ ಭೇದವು, ವೈಶ್ಯರಿಗೆ ದಾನವು, ಶೂದ್ರರಿಗೆ ದಂಡವು, ಬ್ರಾಹ್ಮಣರಿಗೆ ಇಂದ್ರನಧಿದೇವತೆಯು, ಕ್ಷತ್ರಿಯರಿಗೆ ಕಾಲನಧಿದೇವತೆಯು, ಶೂದ್ರರು ಭಕ್ತರನ್ನೂ, ವೈಶ್ಯರು ಗುರುವನ್ನೂ, ಕ್ಷತ್ರಿಯರು ಲಿಂಗವನ್ನೂ, ಬ್ರಾಹ್ಮಣರು ಅತಿಥಿಗಳನ್ನೂ ಪೂಜಿಸಬೇಕು. ಶಿವಭಕ್ತನೇ ಬ್ರಾಹ್ಮಣನು, ವಿಷ್ಣುಭಕ್ತನೇ ಕ್ಷತ್ರಿಯನು, ನಿಜವಸ್ತುವು ಉತ್ಕøಷ್ಟತ್ವವಂ ಹೊಂದಿದಲ್ಲಿ ಶ್ರೇಷ*ವಪ್ಪುದು; ಉತ್ಕøಷ್ಟ ವಸ್ತುವು ನಿಜವಂ ಹೊಂದಿದಲ್ಲಿ ಅದೇ ಪರತತ್ವವು. ಇಂತಪ್ಪ ಜಾತಿಧರ್ಮಂಗಳನ್ನು ತನ್ನಲ್ಲಿ ತಾನೇ ತಿಳಿದು ಭಕ್ತನಾಗಿ, ಶೂದ್ರತ್ವಮಂ ಕಳೆದು ಮಾಹೇಶ್ವರನಾಗಿ, ವೈಶ್ಯತ್ವಮಂ ಕಳೆದು ಪ್ರಸಾದಿಯಾದಿ, ಕ್ಷತ್ರಿಯತ್ವಮಂ ಕಳೆದು ಪ್ರಾಣಲಿಂಗಿಯಾಗಿ, ಬ್ರಹ್ಮತ್ವಮಂ ಪಡೆದು ಅಜಾತಮಾಗಿ, ಆಕಾಶರೂಪಮಾಗಿ, ಶುದ್ಧಸ್ಫಟಿಕಸಂಕಾಶಮಪ್ಪ. ಪ್ರಸಾದಲಿಂಗದಲ್ಲಿ ಪರಿಣಾಮಿಸುತ್ತಾ. ಲಿಂಗವೇ ಪತಿ ತಾನೇ ಸತಿಯಾಗಿರ್ಪನೇ ಶರಣನು. ಈ ಸತಿಪತಿನ್ಯಾವಳಿದು ವರ್ಣಾತೀತನೂ ವಾಗತೀತನೂ ಆಗಿ, ತಾನುತಾನಾಗಿರ್ಪುದೇ ಐಕ್ಯವು. ಇಂತಪ್ಪ ಕೇವಲನಿರ್ವಾಣಲಿಂಗೈಕ್ಯಪದವೆನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ತನ್ನಲ್ಲಿ ತಾನು ಪ್ರತ್ಯಕ್ಷಾನುಭಾವದಿಂದ ತಿಳಿದುನೋಡಿ, ಆ ತಿಳಿದ ತಿಳಿವಿನೊಳಗೆ, ಲಿಂಗದ ನಿಜವ ಕಂಡು ಕಾಂಬ ಜ್ಞಾನ ತಾನೆಂದರಿದು, ಕಾಂಬುದು ಕಾಣಿಸಿಕೊಂಬು[ದು] ಎರಡೊಂದಾದ ನಿಲವು ತಾನೆ ನಿಮ್ಮ ನಿಲುವು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ತನ್ನಲ್ಲಿ ಅನಂತಕೋಟಿ ಬ್ರಹ್ಮರುತ್ಪತ್ಯ ಸ್ಥಿತಿ ಲಯ ನೋಡಾ. ತನ್ನಲ್ಲಿ ಅನಂತಕೋಟಿ ವಿಷ್ಣ್ವಾದಿಗಳುತ್ಪತ್ಯ ಸ್ಥಿತಿ ಲಯ ನೋಡಾ. ತನ್ನಲ್ಲಿ ಅನಂತಕೋಟಿ ಇಂದ್ರಾದಿಗಳುತ್ಪತ್ಯ ಸ್ಥಿತಿ ಲಯ ನೋಡಾ. ತನ್ನಲ್ಲಿ ಅನಂತಕೋಟಿ ದೇವರ್ಕಳುತ್ಪತ್ಯ ಸ್ಥಿತಿ ಲಯ ನೋಡಾ. ತಾನೆ ಅಖಂಡ ಅಪ್ರಮೇಯ ಅಗಮ್ಯ ಅಗೋಚರಕ್ಕತ್ತತ್ತಲಾದ ಮಹಾಘನಲಿಂಗ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬೆಳಗಿನ ತುದಿಯಲ್ಲಿ ತಮ ಸೇರಿಪ್ಪಂತೆ ಬೆಳಗಿನ ಬುಡವು ತಮದ ಒಡಲೆಂದು ಅರಿತಲ್ಲಿ ಅರಿವು ಮರವೆಯಲ್ಲಿಂದ ಬಂದಿತ್ತೆಂದು ಆರಡಿಗೊಳಲೇತಕ್ಕೆ ? ಈ ದ್ವಂದ್ವವ ತಿಳಿದು ನಿಜವೊಂದರಲ್ಲಿ ನಾಶವಾಗಲಿಕ್ಕೆ ಸದ್ಯೋಜಾತಲಿಂಗವು ತನ್ನಲ್ಲಿ ವಿನಾಶವಪ್ಪನು.
--------------
ಅವಸರದ ರೇಕಣ್ಣ
ರಸವನುಗುಳ್ದು ಕಸವನಗಿವವನಂತೆ, ಕೈಯ ಪಿಂಡವ ಬಿಟ್ಟು ಒಣಗೈಯ್ಯ ನೆಕ್ಕುವನಂತೆ, ತಾಯ ಮೊಲೆವಾಲನೊಲ್ಲದೆರೆವಾಲಿಂಗೆಳಸುವನಂತೆ, ಅಮೃತಾಹಾರ ಮುಂದಿಟ್ಟಿರಲು ಮನ ಹೇವರಿಕೆಯ ಬಿಡದವನಂತೆ, ದೀಪವ ಹಿಡಿದು ಮುಂದುಗಾಣದಿಹ ಪರಿಯ ನೋಡಾ ಅಯ್ಯಾ. ತನ್ನಲ್ಲಿ ಗುರುಲಿಂಗಜಂಗಮವಿರಲನ್ಯವಿಟ್ಟರಸುವ ಭಿನ್ನಜ್ಞಾನವ ನೋಡಾ. ಸೌರಾಷ್ಟ್ರ ಸೋಮೇಶ್ವರಲಿಂಗಸಂಗ ಹಿಂಗದಿರಲು ವೇಷಭೂಷಣಂಗಳಾಸೆಯ ನೋಡಾ.
--------------
ಆದಯ್ಯ
ವ್ಯಾಪ್ತಾವ್ಯಾಪ್ತಿಯೆಂಬುದು ಲಿಂಗಭಾವ, ತನ್ನಲ್ಲಿ ತಾ ನಿಂದುದು, ದೃಷ್ಟವಾಗಿ, ಮೋಹವಾಗಿ, ತನ್ನಲ್ಲಿ, ತಾ ನಿಂದುದು, ಅರಸುವ ಬೆರಸುವ ಭೇದವು ತಾನಾಗಿ ನಿಂದುದು, ಮಹಾಘನಸೋಮೇಶ್ವರನೆಂಬ ಶಬ್ದವನೊಳಕೊಂಡಿತ್ತು.
--------------
ಅಜಗಣ್ಣ ತಂದೆ
ಘನವ ನೆನೆವ ಮನದಲ್ಲಿ ತನುವಿನಾಸೆ ಮುನ್ನಿಲ್ಲ, ನೆನೆವ ಮನವನೊಳಕೊಂಡ ಘನವನೇನೆಂಬೆನಯ್ಯಾ ! ತನ್ನಲ್ಲಿ ತಾನೆಯಾಗಿತ್ತು ! ನೆನಹಳಿದ ನಿರಾಳವ ಕಂಡು ಬೆರಗಾದೆ ! ಅಂತು ಇಂತು ಎನಲಿಲ್ಲ. ಚಿಂತೆಯಿಲ್ಲದ ಘನಗುಹೇಶ್ವರಯ್ಯನ ಬೆರಸಲಿಲ್ಲ.
--------------
ಅಲ್ಲಮಪ್ರಭುದೇವರು
ಅಯ್ಯ ಲಿಂಗಾಂಗ ಸಮರಸ ಹೇಗುಂಟೆಂದರೆ: ಸುಚಿತ್ತಕಮಲ ಮೊದಲಾಗಿ ಆಯಾಯ ಕರಸ್ಥಲದಲ್ಲಿ ಮೂರ್ತಗೊಂಡಿರುವ ಸುಜ್ಞಾನಜಂಗಮ ಸ್ವರೂಪನಾದ ಇಷ್ಟ ಮಹಾಲಿಂಗದ ಗರ್ಭದಲ್ಲಿ ತನ್ನಂಗವ ಬಿಟ್ಟು; ಎರಡು ನೇತ್ರ ಒಂದಾದ ಲಲಾಟನೇತ್ರದಲ್ಲಿ ಇಷ್ಟಲಿಂಗವನು ಮುಳುಗಿಸುವುದೀಗ ಲಿಂಗಾಂಗಸಂಗಸಮರಸವು ನೋಡಾ. ಆ ಇಷ್ಟ ಮಹಾಲಿಂಗ ನೇತ್ರದರ್ಪಣದಲ್ಲಿ ಪ್ರತಿಬಿಂಬವಾಗಿ ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಡುವುದೀಗ ಪ್ರಾಣಲಿಂಗವು. ಆ ಪ್ರಾಣಲಿಂಗಹಸ್ತಂಗಳೆಂಬ ಎರಡರಲ್ಲಿ ನೇತ್ರದ್ವಯವೆಂಬ ಕುಚಂಗಳೆರಡ ಹಿಡಿವುದೀಗ ಲಿಂಗಾಂಗಸಂಗಸಮರಸವು [ನೋಡಾ] ರೂಪು ರೇಖೆವಿಭ್ರಮ ವಿಲಾಸಕಳಾಲಾವಣ್ಯಸ್ವರೂಪವಾದ ಹರಶಿವ ಬ್ರಹ್ಮಮೂರ್ತಿಯ ಮುದ್ದು ಮುಖದ ಆಧಾರದಲ್ಲಿ ಓಂಕಾರನಾದಾಮೃತವ ತಾ ಚುಂಬನ ಮಾಡಲ್ಕೆ ಚಿತ್‍ಶಕ್ತಿಸ್ವರೂಪಮಪ್ಪ ತನ್ನ ಮುದ್ದುಮುಖದ ಆಧಾರದಲ್ಲಿ ಹುಟ್ಟಿದ ನಕಾರಾದಿ ಪಂಚಪ್ರಣಮಂಗಳು ಆ ಪಂಚಬ್ರಹ್ಮ ಚುಂಬನವ ಮಾಡಲ್ಕೆ ಇದು ಲಿಂಗಾಂಗ ಸಮರಸವು. ಇದು ಶರಣಸತಿ ಲಿಂಗಪತಿ ನ್ಯಾಯವು. ಇದು ಶ್ರೀ (ತ್ರಿ?)ತನುವ ಲಿಂಗಕ್ಕರ್ಪಿಸುವ ಕ್ರಮವು. ತನ್ನಲ್ಲಿ ತನ್ನ ತೋರಿ ನನ್ನಲ್ಲಿ ನನ್ನ ತೋರಿದನಾಗಿ ನಾನು ನೀನೆಂಬುದಿಲ್ಲ ನೀನು ನಾನೆಂಬುದಿಲ್ಲ, ತಾನೆ ತಾನಾದುದು. ಬಯಲು ಬಯಲು ಕೂಡಿದ ಹಾಗೆ, ಮಾತು ಮಾತ ಕಲಿವ ಹಾಗೆ ಪರಶಿವಲಿಂಗದಲ್ಲಿ ನಿಜದೃಷ್ಟಿ ಕರಿಗೊಂಡ ಮೇಲೆ ಗುಹ್ಯಕ್ಕೆ ಗುಹ್ಯ ಗೋಪ್ಯಕ್ಕೆ ಗೋಪ್ಯ ರಹಸ್ಯಕ್ಕೆ ರಹಸ್ಯ. ಇದ ಗುಹೇಶ್ವರನೆ ಬಲ್ಲನಲ್ಲದೆ, ಕಣ್ಣುಗೆಟ್ಟಣ್ಣಗಳೆತ್ತ ಬಲ್ಲರು ನೋಡಾ ?
--------------
ಅಲ್ಲಮಪ್ರಭುದೇವರು
ಮನ ಮನವ (ಘನವ?) ಬೆರಸಿದನುಭಾವ ಘನಕ್ಕೆ ಘನ ಒಂದಾಯಿತ್ತು ನೋಡಾ ! ಅದು ತನ್ನಲ್ಲಿ ತಾನು ತೃಪ್ತಿಯಾದ ನಿಜವು (ನಿಲವು?) ನಿರ್ಣಯದ ಮೇಲೆ ನಿರ್ಧರವಾಯಿತ್ತು ನೋಡಾ. ಗುಹೇಶ್ವರಲಿಂಗದಲ್ಲಿ, ಚನ್ನಬಸವಣ್ಣನಿಂದ ಸುಖಿಯಾದೆನು.
--------------
ಅಲ್ಲಮಪ್ರಭುದೇವರು
ತನಿರಸವ ತುಂಬಿರ್ದ ಫಳವು ತನ್ನ ಸಾರವನ್ನು ಸರಿಯಿಟ್ಟು ಹೇಳಿಕೊಳ್ಳದು. ಶಿವಾನುಭಾವಭರಿತ ಸ್ವಯಾನಂದಸುಖಿ ಇದಿರಿಡಲರಿಯ ಕಾಣಿಸಿಕೊಳ್ಳಲರಿಯ. ತನ್ನಲ್ಲಿ ತಾನು ತರಹರವಾದನಾಗಿ, ಗುರುನಿರಂಜನ ಚನ್ನಬಸವಲಿಂಗವಿಡಿದು ಲಿಂಗವನರಿಯ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪರಶಕ್ತಿ ಶಾಂತಿಯೆನಲು ಪರಶಿವಶಕ್ತಿಯ ನಾಮವೀಗ. ನಾದ ಬಿಂದು ಕಳೆ ಕಳಾನ್ವಿತ ಈ ನಾಲ್ಕು ನಿಃಕಲತತ್ವಯೋಗಿಗಳ ಧ್ಯಾನ, ಭಕ್ತರ ಪೂಜೆ, ವೇದಾಗಮಂಗಳ ಶ್ರುತಕ್ಕೆ ಅತೀತವಾಗಿ, ವಾಙ್ಮನಾತೀತವಾಗಿ, ಆ ವಾಙ್ಮನಕ್ಕಗೋಚರವಾದ ನಿಃಕಲತತ್ವವೇ ಸಕಲ ನಿಃಕಲವಾಗಿ ತೋರಿತ್ತದೆಂತೆಂದೊಡೆ ಸದಾಶಿವತತ್ವ, ಈಶ್ವರತತ್ವ, ಮಹೇಶ್ವರತತ್ವ ಈ ಮೂರು ಸಕಲ ನಿಃಕಲತತ್ವಯೋಗಿಗಳ ಧ್ಯಾನವ ಕೈಕೊಂಡು, ಭಕ್ತರ ಪೂಜೆಯ ಕೈಕೊಂಡು, ಜಪ ತಪ, ನೇಮ ನಿತ್ಯ, ವೇದಾಗಮಂಗಳ ಸ್ತುತಿಯನು ಕೈಕೊಂಡು, ಜಗದುತ್ಪತ್ತಿಕಾರಣ ಪರಶಿವನ ಸಂಕಲ್ಪದಿಂದ, ನಾದ ಬಿಂದು ಕಳೆ ಸಮೇತವಾಗಿ ಲಿಂಗವೆನಿಸಿತ್ತು. ಅದಕ್ಕೆ ಕರ ಚರಣಾದ್ಯವಯವಂಗಳಿಲ್ಲ. ಅಖಂಡ ಪರಿಪೂರ್ಣ ಗೋಳಕಾಕಾರ ತೇಜೋಮೂರ್ತಿ ಸ್ವರೂಪನುಳ್ಳದು. ವ್ಯಕ್ತ ಅವ್ಯಕ್ತ ಆನಂದ ಸುಖಮಯವಾಗಿದ್ದಂತಾದು. ಅನಂತಕೋಟಿ ಬ್ರಹ್ಮಾಂಡಗಳ ತನ್ನಲ್ಲಿ ಗರ್ಭೀಕರಿಸಿಕೊಂಡು, ಅನಂತಕೋಟಿ ಸೋಮ ಸೂರ್ಯಪ್ರಕಾಶವನುಳ್ಳ ಪರಂಜ್ಯೋತಿರ್ಲಿಂಗವು ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->