ಅಥವಾ

ಒಟ್ಟು 70 ಕಡೆಗಳಲ್ಲಿ , 22 ವಚನಕಾರರು , 57 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನಮಂಡಲದೊಳಗೆ ಕಿರಣವಡಗಿಪ್ಪಂತೆ, ಫಲವಹ ಬೀಜದಲ್ಲಿ ವೃಕ್ಷವಡಗಿಪ್ಪಂತೆ, ಇಂದುಕಾಂತ ರವಿಕಾಂತದಲ್ಲಿ ಜಲಬಿಂದು ಅಗ್ನಿ ಇಪ್ಪಂತೆ, ಸಂದ ಕ್ಷೀರದಲ್ಲಿ ಹೊಂದಿದ ದಧಿ ತಕ್ರ ನವನೀತ ಘೃತವಿಪ್ಪಂತೆ ಅಂಗದ ಮೇಲೆ ಲಿಂಗ ಸಾಹಿತ್ಯವಾಗಿ, ತನ್ನೊಳಗೆ ಆ ಲಿಂಗವ ಕಂಡು, ಲಿಂಗದೊಳೆಗೆ ತನ್ನ ಕಂಡು, ತನ್ನೊಳಗೆ ಸಮಸ್ತ ವಿಸ್ತಾರವನೆಲ್ಲವ ಕಂಡು, ಜಂಗಮಮುಖ ಲಿಂಗವೆಂಬ ಭೇದವರು, ಲಿಂಗಕ್ಕೆ ಜಂಗಮವೆ ಪ್ರಾಣವಾಗಿಪ್ಪ ಭೇದವನು, ಅಂಗದೊಳಗೆ ಲಿಂಗವೆ ಆಚಾರವಾಗಿ ಅಳವಟ್ಟ ವಿವರವಾಗಿ ಇದ್ದತೆಂಬುದನು, ಕಂಗಳ ನೋಟಕ್ಕೆ ಗುರಿಯಾದ ಲಿಂಗವೆ ಅಂಗವನೊಳಕೊಂಬ ಭೇದವನು, ಸಂಗನ ಬಸವಣ್ಣ ಚೆನ್ನಬಸವಣ್ಣನಿಂದ ಕೃಪೆಮಾಡಿಸಿ ಎನ್ನನುಳುಹು, ಪ್ರಭುವೆ, ಕಪಿಲಸಿದ್ಧಮಲ್ಲಿಕಾರ್ಜುನದೇವಯ್ಯಾ.
--------------
ಸಿದ್ಧರಾಮೇಶ್ವರ
ಜಲದೊಳಗೆ ಭವಿಸಿತ್ತು ಜಲಕೆ ನಂದದ ಕಿಚ್ಚು. ಆ ಜಲಂಗಳು ಹಲವು:ಮತ್ತೆ ತನ್ನೊಳಗೆ ಜನನವು ಆ ಸ್ಥಳ. ಜಲಕೆ ನೆಲೆಯಾದ ಸೀಮೆ ತಾನೆ ಆ ಸ್ಥಳವು. ಸೀಮೆಯ ಮೀರಿ, ಒಲವೆ ಒಡಮನೆಯಾದ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಲಿಂಗಾಂಗಸಂಗಸಮರಸದ ವಿವರವ ಕರುಣಿಸು ಸ್ವಾಮಿ. ಕೇಳೈ ಮಗನೆ : ಮುಖಪ್ರಕ್ಷಾಲನ ಮಾಡುವಾಗ ಲಿಂಗಕ್ಕೆ ಮಜ್ಜನವ ನೀಡಿದುದು ಇಷ್ಟಲಿಂಗದ ಮಜ್ಜನ. ಲಿಂಗಾರ್ಚನೆ ಮಾಡುವಾಗ ಕ್ರಿಯೆಯಿಟ್ಟು ಲಿಂಗಕ್ಕೆ ಮಜ್ಜನವ ನೀಡಿದುದು ಪ್ರಾಣಲಿಂಗದ ಮಜ್ಜನ. ಲಿಂಗಾರ್ಚನೆ ಮುಗಿದ ಬಳಿಕ ಮಜ್ಜನ ನೀಡಿದುದು ಭಾವಲಿಂಗದ ಮಜ್ಜನವೆಂದರಿವುದು. ಇನ್ನು ವಿಭೂತಿಯ ಧರಿಸುವ ಕ್ರಮವು : ಸ್ನಾನ ಧೂಳನ ಧಾರಣ. ಸ್ನಾನ ಮಾಡಿದುದು ಇಷ್ಟಲಿಂಗದಲ್ಲಿ ; ಧೂಳನವ ಮಾಡಿದುದು ಪ್ರಾಣಲಿಂಗದಲ್ಲಿ ; ಧಾರಣವ ಮಾಡಿದುದು ಭಾವಲಿಂಗದಲ್ಲಿ. ಇನ್ನು ಲಿಂಗಪೂಜೆ ; ಹೊರಗಣ ಪುಷ್ಪ ಇಷ್ಟಲಿಂಗಕ್ಕೆ ; ಒಳಗಣ ಕಮಲದ ಪುಷ್ಪ ಪ್ರಾಣಲಿಂಗಕ್ಕೆ ; ಬಯಲ ಪುಷ್ಪ ಭಾವಲಿಂಗಕ್ಕೆಂದರಿವುದು. ಇನ್ನು ಜಪದ ಕ್ರಮ ; ಹನ್ನೆರಡು ಪ್ರಣವ ಮಾಡಲಾಗಿ ಪಂಚತತ್ತ್ವವಡೆದ ಜಪ ಇಷ್ಟಲಿಂಗಕ್ಕೆ ; ಒಳಗಣ ಜಪ ಇಪ್ಪತ್ತೊಂದು ಸಾವಿರದಾರುನೂರು ಪ್ರಾಣಲಿಂಗಕ್ಕೆ ; ಬಯಲ ಜಪ ಭಾವಲಿಂಗಕ್ಕೆಂದರಿವುದು. ಇನ್ನು ತ್ರಿಕಾಲಪೂಜೆ : ಉದಯಕಾಲದ ಪೂಜೆ ಇಷ್ಟಲಿಂಗಕ್ಕೆ ; ಮಧ್ಯಾಹ್ನದ ಪೂಜೆ ಪ್ರಾಣಲಿಂಗಕ್ಕೆ ; ಸಾಯಂಕಾಲದ ಪೂಜೆ ಭಾವಲಿಂಗಕ್ಕೆಂದರಿವುದು. ಇನ್ನು ಪ್ರಸಾದತ್ರಯದ ವಿವರ : ಶುದ್ಧಪ್ರಸಾದ ಇಷ್ಟಲಿಂಗಕ್ಕೆ ; ಸಿದ್ಧಪ್ರಸಾದ ಪ್ರಾಣಲಿಂಗಕ್ಕೆ ; ಪ್ರಸಿದ್ಧಪ್ರಸಾದ ಭಾವಲಿಂಗಕ್ಕೆಂದರಿವುದು. ಇನ್ನು ಭೋಗತ್ರಯದ ವಿವರ : ಭೋಜನಸುಖವು ಇಷ್ಟಲಿಂಗಕ್ಕೆ ; ತನ್ನ ಸ್ತ್ರೀಸಂಗದಸುಖವು ಪ್ರಾಣಲಿಂಗಕ್ಕೆ ; ವಸ್ತ್ರಾಭರಣದ ಸುಖವು ಭಾವಲಿಂಗಕ್ಕೆಂದರಿವುದು. ಲಿಂಗಾಂಗಿಯ ಚರಿತ್ರದ ವಿವರ ; ನಿಂತಿರ್ದುದು ಇಷ್ಟಲಿಂಗಕ್ಕೆ ; ಕುಂತಿರ್ದುದು ಪ್ರಾಣಲಿಂಗಕ್ಕೆ ಮಲಗಿರ್ದುದು ಭಾವಲಿಂಗಕ್ಕೆಂದರಿವುದು. ಇನ್ನು ನಡೆವುದು ಇಷ್ಟಲಿಂಗವು ; ನುಡಿವುದು ಪ್ರಾಣಲಿಂಗವು ; ಪಿಡಿದುನೋಡುವ ಸುಖವು ಭಾವಲಿಂಗವು ಎಂದರಿವುದು. ಇನ್ನು ಇಷ್ಟಲಿಂಗದ ಗರ್ಭದಲ್ಲಿ ತನ್ನ ಶರೀರವನಿಟ್ಟು ಬ್ರಹ್ಮರಂಧ್ರದಲ್ಲಿರ್ದ ಸಹಸ್ರದಳ ಕಮಲದೊಳಗೆ ಆ ಇಷ್ಟಲಿಂಗವ ಮುಳುಗಿಸುವುದೀಗ ಲಿಂಗಾಂಗವು. ಇನ್ನು ನೇತ್ರಸ್ಥಾನದಲ್ಲಿರ್ದ ವಿಶ್ವಜೀವನ ಜಾಗ್ರಾವಸ್ಥೆ ಸ್ಥೂಲತನುವಿನ ವ್ಯವಹರಣೆ ಇಷ್ಟಲಿಂಗವೆಂದರಿವುದು. ಕಂಠಸ್ಥಾನದಲ್ಲಿರ್ದ ತೈಜಸಜೀವನ ಸ್ವಪ್ನಾವಸ್ಥೆ ಸೂಕ್ಷ್ಮತನುವಿನ ವ್ಯವಹರಣೆ ಪ್ರಾಣಲಿಂಗವೆಂದರಿವುದು. ಹೃದಯಸ್ಥಾನದಲ್ಲಿರ್ದ ಪ್ರಾಜ್ಞಜೀವನ ಸುಷುಪ್ತಾವಸ್ಥೆ ಕಾರಣತನುವಿನ ವ್ಯವಹರಣೆ ಭಾವಲಿಂಗವೆಂದರಿವುದು. ಇನ್ನು ಆಯತ ಇಷ್ಟಲಿಂಗವು ಸ್ವಾಯತ ಪ್ರಾಣಲಿಂಗವು ಸನ್ನಹಿತ ಭಾವಲಿಂಗವು ಎಂದರಿವುದು. ಇನ್ನು ಪಾತಾಳಲೋಕವನೊಳಕೊಂಡದ್ದು ಇಷ್ಟಲಿಂಗವಹುದು ; ಮತ್ರ್ಯಲೋಕವನೊಳಕೊಂಡದ್ದು ಪ್ರಾಣಲಿಂಗವಹುದು ; ಸ್ವರ್ಗಲೋಕವನೊಳಕೊಂಡದ್ದು ಭಾವಲಿಂಗವಹುದು. ಈರೇಳುಲೋಕವನೊಳಕೊಂಡದ್ದು ಪ್ರಾಣಲಿಂಗವು ; ಚರ್ಮಚಕ್ಷುವಿಗೆ ಅಗೋಚರವು, ಮನೋನೇತ್ರಕ್ಕೆ ಒಂದೆರಡಾಗಿ ಕಾಣಲ್ಪಟ್ಟುದೀಗ ಪ್ರಾಣಲಿಂಗವು. ಆ ಪ್ರಾಣಲಿಂಗಕ್ಕೆ ಎರಡು ನೇತ್ರಂಗಳು ಪುಷ್ಪವಾಗಿಪ್ಪುದೆ ಲಿಂಗಾಂಗಸಂಗವು. ಇನ್ನು ರೂಪಾಗಿ ಬಂದ ಪದಾರ್ಥವನು ಭೋಗಿಸುವದು ಇಷ್ಟಲಿಂಗವು ತಾನೆ. ರುಚಿಯಾಗಿ ಬಂದ ಪದಾರ್ಥವನು ಭೋಗಿಸುವದು ಪ್ರಾಣಲಿಂಗವು ತಾನೆ. ತೃಪ್ತಿಯಾಗಿ ಬಂದ ಪದಾರ್ಥವನು ಭೋಗಿಸುವದು ಭಾವಲಿಂಗವು ತಾನೆ. ಸಾಕ್ಷಿ : 'ಇಷ್ಟಲಿಂಗಾರ್ಪಿತಂ ಅಂಗಂ ಪ್ರಾಣಲಿಂಗಾರ್ಪಿತಂ ಮನಂ | ಭಾವಲಿಂಗಾರ್ಪಿತಂ ತೃಪ್ತಿರಿತಿ ಭೇದೋ ವರಾನನೇ ||' ಎಂದುದಾಗಿ, ಅಂಗವೆಂದರೆ ರೂಪು, ಮನವೆಂದರೆ ರುಚಿ, ಸಂತೋಷವೆಂದರೆ ತೃಪ್ತಿ ಎಂದರಿವುದು. ಕ್ರಿಯೆವಿಡಿದು ಕಾಯಾರ್ಪಣ ಮಾಡುವ ಷಡ್ವಿಧಲಿಂಗದಸುಖವ ಭೋಗಿಸುವಾತ ಇಷ್ಟಲಿಂಗವು ತಾನೆ. ಜ್ಞಾನವಿಡಿದು ಕರಣಾರ್ಪಣವ ಮಾಡುವ ಛತ್ತೀಸಲಿಂಗದ ಸುಖವ ಭೋಗಿಸುವಾತ ಪ್ರಾಣಲಿಂಗ ತಾನೆ. ಭಾವವಿಡಿದು ಪರಿಣಾಮಾರ್ಪಣ ಮಾಡುವ ಇನ್ನೂರ ಹದಿನಾರು ಲಿಂಗದ ಸುಖವ ಭೋಗಿಸುವಾತ ಭಾವಲಿಂಗವು ತಾನೆ. ಸಾವಿರದ ಇನ್ನೂರಾ ತೊಂಬತ್ತಾರು ಲಿಂಗ ಇಂತಪ್ಪ ಬಯಲಲಿಂಗವು ಲೆಕ್ಕಕ್ಕೆ ನಿಲುಕದು. ಬಯಲ ಹಸ್ತದಿಂದ ಪೂಜಿಸಿ ಆ ಬಯಲಲಿಂಗದೊಳಗೆ ತಾನಾಗಿ ತನ್ನೊಳಗೆ ಬಯಲ ಲಿಂಗವು ಬೆರದುದು ಇದು ಲಿಂಗಾಂಗಸಂಗ ಸಮರಸವು. ಇದು 'ಶರಣಸತಿ ಲಿಂಗಪತಿ' ನ್ಯಾಯವು. ಇದು ತ್ರಿವಿಧ ತನುವ ತ್ರಿಲಿಂಗಕ್ಕೆ ಅರ್ಪಿಸುವ ಕ್ರಮವು. ಇಂತಿವೆಲ್ಲ ಕ್ರಮವನೊಳಕೊಂಡು ಇಷ್ಟಬ್ರಹ್ಮವು ತಾನೆಯೆಂದರಿದಾತ ನಮ್ಮ ಶಾಂತಕೂಡಲಸಂಗಮದೇವ ಬಲ್ಲನಲ್ಲದೆ ಅಂಗಸಂಗಿಗಳೆತ್ತಬಲ್ಲರು ನೋಡಾ.
--------------
ಗಣದಾಸಿ ವೀರಣ್ಣ
ಜಗದೊಳಗೆ ಹುಟ್ಟಿ ಜಗದಪ್ರಪಂಚ ಹಿಂಗಿ, ಜಂಗಮದೊಳಗಾಡುತ್ತ, ಲಿಂಗದೊಳಗೆ ನೋಡುತ್ತ, ಅಂಗನೆಯರ ಸಂಗವ ಮಾಡಿಹೆನೆಂಬಿರಿ. ಅದೆಂತೆಂದಡೆ, ನೋಟಕಿಲ್ಲದ ಘನದ ಕೂಟವ ಕೂಡುವ ಪರಿಯೆಂತಯ್ಯಾ ? ರೂಪಿಲ್ಲದುದ ರೂಪಿಗೆತರುವ ಪರಿಯೆಂತಯ್ಯಾ ? ಹೇಳಬಾರದ ಘನವ ಕೇಳುವ ಪರಿಯೆಂತಯ್ಯಾ ? ಅತ್ಯತಿಷ್ಠದ್ದಶಾಂಗುಲಂ ಎಂಬ ವಸ್ತು ಹಿಡಿದಡೆ ಹಿಡಿಗಿಲ್ಲ, ನುಡಿದಡೆ ನುಡಿಗಿಲ್ಲ. ಒಡಲೊಳಗಿಲ್ಲ; ಹೊರಗಿಲ್ಲ, ಒಳಗಿಲ್ಲ. ವಾಚಾತೀತ ಮನೋತೀತ ಭಾವಾತೀತವಾಗಿದ್ದ ವಸ್ತು ತನ್ನೊಳಗೆ ತಾನೆ ತನ್ಮಯವಾಗಿ ಇರುವುದ ತಿಳಿಯಲರಿಯದೆ ಭಿನ್ನವಿಟ್ಟರಸುವಿರಿ. ಅದೆಂತೆಂದಡೆ : ಪುಷ್ಪಪರಿಮಳದಂತೆ, ತುಪ್ಪಕಂಪಿನಂತೆ, ಅಲೆನೀರಿನಂತೆ, ಕಣ್ಣುಕಪ್ಪಿನಂತೆ, ಚಿನ್ನಬಣ್ಣದಂತೆ, ಸಿಪ್ಪೆಹಣ್ಣಿನಂತೆ, ಒಪ್ಪಚಿತ್ರದಂತೆ, ಕರ್ಪೂರ ಜ್ಯೋತಿಯೊಳಡಗಿದಂತೆ ನೆನಹು ನಿಷ್ಪತ್ತಿಯಾದ ಶರಣ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ ತಾನೆ ನೋಡಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಅರಿದರಿದು ಎನಗಿಂದು ಕಣ್ಗೆ ಮಂಗಳವಾಯಿತ್ತು, ಒಂದಹುದು ಒಂದಾಗದೆಂಬ ಭ್ರಮೆಯವನಲ್ಲ, ಬೇಕು ಬೇಡೆಂಬ ಜಂಜಡದವನಲ್ಲ, ಎಡೆವರಿಯದ ನೋಟ, ನುಡಿಯ ಸಡಗರವರತು ಎಡೆಯಾಟ ಕೋಟಲೆಯ ಕಳೆಯ ಬಂದನು, ನೋಡುವರ ಮನದ ಸುಖದ ಸಾಗರನಿಧಿಯನೇನೆಂದುಪಮಿಸುವೆನು ಎನ್ನ ಉಭಯಕರ್ಮವ ಕಳೆದು ತನ್ನೊಳಗೆ ಇಂಬಿಟ್ಟುಕೊಳಬಂದನು, ಕೂಡಲಸಂಗಮದೇವ, ಕೃಪಾಮೂರ್ತಿ.
--------------
ಬಸವಣ್ಣ
ನಿಮ್ಮಲ್ಲಿ ನೀವು ತಿಳಿದು ನೋಡಿದರೆ:ಅನ್ಯವಿಲ್ಲ ಕಾಣಿರಣ್ಣಾ. ಅರಿವು ನಿಮ್ಮಲ್ಲಿಯೆ ತದ್ಗತವಾಗಿಯದೆ. ಅನ್ಯಭಾವವ ನೆನೆಯದೆ ತನ್ನೊಳಗೆ ತಾನೆಚ್ಚರಬಲ್ಲಡೆ ತನ್ನಲ್ಲಿಯೆ ತನ್ಮಯವು ಗುಹೇಶ್ವರಲಿಂಗವು.
--------------
ಅಲ್ಲಮಪ್ರಭುದೇವರು
ಪ್ರಥಮಸ್ಥಲ ಸೂತಕದಲ್ಲಿ ಹೊಲೆ, ದ್ವಿತೀಯಸ್ಥಲ ಜನನದಲ್ಲಿ ಹೊಲೆ, ತೃತೀಯಸ್ಥಲ ಮರಣದಲ್ಲಿ ಹೊಲೆ, ಇಂತೀ ಹೊಲೆಯ ತನ್ನೊಳಗೆ ಇಂಬಿಟ್ಟು ಮುಂದಿನವರ ಹೊಲೆಯನರಸುವ ಅನ್ಯಾಯಿಗಳ ಮಾತ ಕೇಳಲಾಗದು ಕೇಳಲಾಗದು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಸ್ಥೂಲ ಸೂಕ್ಷ ್ಮ ಕಾರಣನೆಂದೆಂಬರಲ್ಲಾ ನಿನ್ನನು. ಅದರ ಹಿಂದು ಮುಂದನರಿಯರು:ಬಂದ ಹಾಂಗೆ ನುಡಿವರು. ಸ್ಥೂಲಕ್ಕೆ ನೆಲೆ ಯಾವುದು, ಹೇಳಿಹೆ ಕೇಳಿರಾ ಮನುಜರಿರಾ. ಸ್ಥೂಲವದು ಅನೇಕ ಬ್ರಹ್ಮಾಂಡಗಳ ಮೀರಿಪ್ಪುದು; ಅದು ಸ್ಥೂಲವೆ? ಅಲ್ಲ, ಹಾಂಗಿರಲಿ. ಶ್ರೀ ಗುರುಸ್ವಾಮಿ ವಿಸ್ತಾರ ವಿಸ್ತಾರ ವಿಸ್ತಾರವೆಂದು ಕೊಟ್ಟ ಲಿಂಗವೀಗ ಸ್ಥೂಲ. ಆ ಲಿಂಗವು ಸಕಲ ವ್ಯಾಪ್ತಿಯ ತನ್ನೊಳಗೆ ಇಂಬಿಟ್ಟುಕೊಂಡ ಕಾರಣ ಸೂಕ್ಷ ್ಮವಾದ. ಶಿಷ್ಯಕಾರಣ ಪರಶಿವಮೂರ್ತಿಯಾದ ಕಾರಣ ಕಾರಣವಾದ. ಎಲೆ ಗುರುವೆ, ಲಿಂಗವೆ, ಜಂಗಮವೆ, ನೀವು ಒಂದಾದ ಭೇದವ ಲೋಕದ ಜಡರೆತ್ತ ಬಲ್ಲರು? ಬಸವಣ್ಣ ಬಲ್ಲ. ಆ ಬಸವಣ್ಣ ಅವ್ವೆಯ ಮನೋನಾಥ. ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ, ಬಸವಣ್ಣನ ಪ್ರಸಾದವ ಕೊಂಡು ಭವಂ ನಾಸ್ತಿಯಾಗಿ ಬದುಕಿದೆನು.
--------------
ಸಿದ್ಧರಾಮೇಶ್ವರ
ಸತ್ತು ಚಿತ್ತಾನಂದ ನಿತ್ಯ ಪರಿಪೂರ್ಣ ವಸ್ತು ತನ್ನ ವಿನೋದಕ್ಕೆ ತಾನೆ ಕರ್ತೃ ಭೃತ್ಯನಾದ ಭೇದಮಂ ಪೇಳ್ವೆ, ಅದೆಂತೆಂದಡೆ : ಒಂದು ಎರಡಾದ ಭೇದಮಂ ತಿಳುಹುವೆ. ಅದು ತಾನೆ ಸಂಗನಬಸವಣ್ಣನೆಂದು, ಚೆನ್ನಬಸವಣ್ಣನೆಂದು ಎರಡು ನಾಮ ಅಂಗ-ಪ್ರಾಣದ ಹಾಂಗೆ. ಚನ್ನಬಸವಣ್ಣನಿಂದ ಸಂಗನಬಸವಣ್ಣ ಧನ್ಯನಪ್ಪನು. ಈ ಎರಡು ವಸ್ತುವನೊಳಕೊಂಡು ಆಚರಿಸುವ ಜ್ಞಾನಿಜಂಗಮದ ನಿಲವೆಂತೆಂದೊಡೆ : ಆವನಾನೊಬ್ಬನು ಭಸಿತಮಂ ಪಿಡಿದು ಅಯ್ಯಾ ಶರಣಾರ್ಥಿ ಎಂದು ಕರೆಯಲು, ಒಯ್ಯನೆ ನಿರೀಕ್ಷಿಸುವುದೆ ಜ್ಞಾನಿಜಂಗಮಕ್ಕೆ ಕರ್ತೃತ್ವ. ಇದಲ್ಲದೆ, ನಡೆಯದೆ ಜಂಗಮ ಎಲವೋ ಎಂದು ಕರೆವುತ್ತಿರಲು ನಸುಗೆಂಪಿನ ಭಾವವೇರಿ ಹೋದರೆ ಭಸಿತಕ್ಕೆ ದೂರ. ಸಾಕ್ಷಿ : ವರ್ಣಿ ವಕಾಪೋಸೋವಾಸಿ ಶೂದ್ರೋಪಿ ಯದಿ ಭೂತಿದಃ| ಸಾ ಭೂತಿಃ ಸರ್ವಥಾ ಗ್ರಾಹ್ಯಾ ನೋ ಚೇದ್ಧ್ರೋಹಿ ಮಮೈವ ನಃ || ದುರಾಯ ಲೆಕ್ಕಕ್ಕೆ ಹರಣವ ಕೊಟ್ಟವರುಂಟು. ವಿಶ್ವಾಸಕ್ಕೆ ಅಂಗಕ್ಕೆ ಅರಿವನರಸುವ ಪರಿಯಂತರ ಇದೇ ದೃಷ್ಟ. ಲಿಂಗದೇವನು ಮನವ ನೋಡಬೇಕೆಂದು ಭಕ್ತಿಯೆಂಬ ಭಿನ್ನಹಕ್ಕೆ ಅವಿಶ್ವಾಸದಿಂದ ಅಡ್ಡಬರಲು ಇದರ ವಿಶ್ವಾಸವನರಿದು ವಿಚಾರಿಸಬೇಕು. ಕಿಚ್ಚು ಹತ್ತಿದಲ್ಲಿ ಊರಡವಿ ಕಾಡಡವಿಯೆಂದುಂಟೆ? ಚಿದಗ್ನಿ ಸ್ವರೂಪಮಪ್ಪ ಶ್ರೀಭಸಿತವ ಕಂಡಲ್ಲಿ ಹೋಗಲಮ್ಮೆನು, ಆವನಾದರಾಗಲಿ ಶ್ರೀ ಮಹಾದೇವನ ನೆನವನೆ ದೇವನೆಂದುದಾಗಿ, ಭವಿಯಾದರಾಗಲಿ ಹೋಗಲಮ್ಮೆನು. ಇದು ಎನಗೆ ಚೆನ್ನಬಸವಣ್ಣನಿಕ್ಕಿದ ಕಟ್ಟು. ಭವಿಯಾದರೆ ಕರೆದು ಒಡಂಬಡಿಸೂದು. ಭಕ್ತನಾದರೆ ಬಿನ್ನಹವ ಕೈಕೊಂಬುದು. ಆವನಾದರಾಗಲಿ ಶ್ರೀ ಮಹಾದೇವನ ನೆನವವನೆ ದೇವನೆಂದುದಾಗಿ, ಭವಿಯಾದರೆ ಹಾಲು ಹಣ್ಣು ಕಾಯಿ ವಸ್ತ್ರವ ಕೈಕೊಂಬುದು. ಮತ್ತಾ ಭಸಿತಕ್ಕೆ ಶರಣೆಂದು ಅವನ ಕಳುಹುವುದು. ಭಕ್ತನಾದರೆ ಬಿನ್ನಹವ ಕೈಕೊಂಡು ಆತನ ತ್ರಿವಿಧಕ್ಕೆ ತಾ ಕರ್ತನಾಗಿ ಆತನ ತನ್ನೊಳಗೆ ಇಂಬಿಟ್ಟುಕೊಂಬುದು ಜ್ಞಾನಜಂಗಮದ ಲಕ್ಷಣ. ಇನ್ನು ಕ್ರಿಯಾಮಾಹೇಶ್ವರ ಭೇದಮಂ ಪೇಳ್ವೆ : ಶಿವಭಕ್ತರು ಬಂದು ಬಿನ್ನಹವ ಕೈಕೊಳ್ಳಿಯೆಂದು ಉದಾಹರಣೆಯಿಂದ ಬಿನ್ನವಿಸುತ್ತಿರಲ ಅದಕ್ಕೆ ಒಡಂಬಟ್ಟು ಕೈಕೊಂಬುದು ; ಅಲ್ಲದಿರ್ದಡೆ ಕಳುಹುವುದು. ಇದಲ್ಲದೆ ಬಾಯಿಗೆ ಬಂದಂತೆ ನುಡಿದು ಅಡ್ಡ ಮೋರೆಯ ಹಾಕೋದು ಜಂಗಮಕ್ಕೆ ಕರ್ತೃತ್ವವಲ್ಲ. ಜ್ಞಾನಿಜಂಗಮ ತ್ರಿವಿಧಪದಾರ್ಥವ ಕೈಕೊಂಬುದು. ಕ್ರಿಯಾಜಂಗಮ ಎರಡು ಪದಾರ್ಥವಂ ಬಿಟ್ಟು ಒಂದು ಪದಾರ್ಥವ ಕೈಕೊಂಬುದು. ಭಾವಜಂಗಮ ಇಂತೆರಡ ಮೀರಿ ತ್ರಿವಿಧರಹಿತವಾಗಿ ತೋರ್ಪುದು. ಗೋಣಿಯ ಮರೆಯ ಕೇಟೇಶ್ವರಲಿಂಗವು ತ್ರಿವಿಧಜಂಗಮದ ನಿಲವಿನ ನಿರುಗೆಯ ನಿರೂಪಿಸಿದರು.
--------------
ಬೊಕ್ಕಸದ ಚಿಕ್ಕಣ್ಣ
ಕಾಯವಿಲ್ಲದ ಪುರುಷನು ಕಸವಿಲ್ಲದ ಭೂಮಿಯಲ್ಲಿ ಕಾಮಿತವಿಲ್ಲದ ಬೀಜವ ಬಿತ್ತಲು ಅದು ಅಂಕುರಿಸಿ ಎಲೆ ಎರಡಾಯಿತ್ತು. ಶಾಖೆ ಮೂರಾಯಿತ್ತು, ತಳಿರು ಆರಾಯಿತ್ತು, ಕುಸುಮ ಮೂವತ್ತಾರಾಯಿತ್ತು, ಕಾಯಿ ಇನ್ನೂರಹದಿನಾರಾಯಿತ್ತು, ಹಣ್ಣು ವಿಶ್ವಪರಿಪೂರ್ಣವಾಯಿತ್ತು . ಅದು ಅಖಂಡ ರಸತುಂಬಿ ಬಟ್ಟಬಯಲಲ್ಲಿ ತೊಟ್ಟುಬಿಟ್ಟಿತ್ತು. ಆ ಹಣ್ಣ ನಾನು ಕಣ್ಣಿಲ್ಲದೆ ನೋಡಿ, ಕೈಯಿಲ್ಲದೆ ಮುಟ್ಟಿ, ಬಾಯಿಲ್ಲದೆ ಸವಿದು, ಮನವಿಲ್ಲದೆ ಪರಿಣಾಮಿಸಿದೆನಾಗಿ, ಅಖಂಡೇಶ್ವರನು ತನ್ನೊಳಗೆ ಇಂಬಿಟ್ಟುಕೊಂಡನು.
--------------
ಷಣ್ಮುಖಸ್ವಾಮಿ
ಅಂಗ ಲಿಂಗವೆಂಬ ಸಂದು ಸಂಶಯವಳಿದು ಲಿಂಗಾಂಗದೈಕ್ಯವನರಿದು ಕೂಡಿದ ಶಿವಯೋಗಿಗೆ ನಿಶ್ಚಿಂತತ್ವವೇ ಶಿವಧ್ಯಾನ; ಸಕಲ ಕ್ರೀಗಳು ಲಯವಾದ ಇರವೇ ಶಿವಪೂಜೆ; ಚರಾಚರವನು ವ್ಯಾಪಿಸಿ ನಿಂದ ನಿಶ್ಚಲವೇ ಪ್ರದಕ್ಷಿಣ; ಸೋಹಂ ದಾಸೋಹಂ ಭಾವವಳಿದು ಆ ಶಿವೋಹಂ ಭಾವ ತನ್ನಲ್ಲಿ ನಿಂದುದೇ ನಮಸ್ಕಾರ; ಸ್ವಯ ಪರವೆಂಬ ವಿವೇಕದನುಭಾವವಡಗಿ ನಿಂದ ಮೌನವೇ ಸ್ತೋತ್ರ; ಬಿಂದು ನಾದಾದಿ ಉಪಾಧಿಯ ತೊಲಗಿದ ಪರಿಪೂರ್ಣ ಶಿವನಾಗಿ ತಾ ಶಿವನಾದೆನೆಂಬ ಚಿದಹಂಭಾವವಡಗಿ ವಿಧಿ ನಿಷೇಧಂಗಳನರಿಯದುದೇ ಮಹಾಶೀಲ; ಸರ್ವಜ್ಞತ್ವ ನಿತ್ಯತೃಪ್ತಿ ಅನಾದಿಪ್ರಬೋಧ, ಸ್ವತಂತ್ರ ನಿತ್ಯ ಶಕ್ತಿ ಎಂಬ ಷಡ್ಗುಣೈಶ್ವರ್ಯ ತನಗೂ ಶಿವಂಗೂ ಸಮವಾಗಿ ಶಿವನೊಳಗೆ ತಾನು, ತನ್ನೊಳಗೆ ಶಿವನು ಅಡಗಿ ಸಮರಸವಾದುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಪರಮನಿರ್ವಾಣವೆನಿಸುವುದು.
--------------
ಸ್ವತಂತ್ರ ಸಿದ್ಧಲಿಂಗ
ಆ ಪರಶಿವನ ನಿರ್ಬಯಲವೇ ಮಹಾಬಯಲು, ಚಿದ್ಬಯಲು, ಬಯಲು ಮೂರಾದರೂ ಒಂದೇ. ಚಿನ್ನಾದ ಚಿದ್ಬಿಂದು ಚಿತ್ಕಳೆ, ನಾದ, ಬಿಂದು, ಕಳೆ ಆರಾದರೂ ಒಂದೇ. ಆರು ಮೂರು ಒಂಬತ್ತಾದರೂ ಒಂದೇ. ಒಂದು ಒಂಬತ್ತಾಗಿ, ಆ ನಿರ್ಬಯಲು ತಾನೆ ಹಲವಾಗಿತ್ತು. ಈ ಹಲವಾದರೂ ನಿರ್ಬೈಲೊಂದೇ, ಒಂದೇ ಎಂದರೆ ಒಂದೂ ಇಲ್ಲಾ. ನಿರ್ಬೈಲಿಗೆ ನಾಮ ಉಂಟೇ ? ರೂಪ ಉಂಟೇ ? ಕ್ರೀಯ ಉಂಟೇ ? ನಿರ್ಬೈಲೇ ನಿರ್ಬೈಲೆಂಬುದು ಇದು ಎಲ್ಲಿ ಇದೇ ನಿರ್ಬೈಲು. ಮತ್ತೆ ತಾ ನಿರ್ಬೈಲ ರೂಪಾದರೂ, ಆ ರೂಪ ತಾ ನಿರ್ಬೈಲಲ್ಲವೇ ? ತಾ ಕೂಡಲಿಕ್ಕೆ ಠಾವು ಬ್ಯಾರುಂಟೇ ? ಗಂಧ ರುಚಿ ರೂಪ ಸ್ಪರ್ಶ ಶಬ್ದ ತೃಪ್ತಿ ಇವು ತನ್ನ ತಾನಲ್ಲವೇ ? ಇದ್ದದ್ದು ತಾನೇ ಇಲ್ಲದ್ದು ತಾನೇ, ಹ್ಯಾಂಗಾದರೂ ತಾನೇ ನಿರ್ಬೈಲು. ಇದನರಿಯದೇ ಪೂರ್ವಪುಣ್ಯದಿಂದೆ ಮಾನವ ಜನ್ಮವ ತಾಳಿ, ಅಜ್ಞಾನವಳಿದು ಸುಜ್ಞಾನಿಯಾಗಿ, ಸುಜ್ಞಾನದಿಂದ ಸಾಧುರ ಸಂಗವ ಮಾಡಿ, ಗುರುಕರುಣವ ಪಡೆದು ಲಿಂಗವ ಪೂಜಿಸಿ, ಜಂಗಮಾರಾಧನೆಯ ಮಾಡಿ, ಪಾದೋದಕ ಸಲ್ಲಿಸಿ, ಪ್ರಸಾದವನುಂಡು, ವಿಭೂತಿಯ ಧರಿಸಿ, ರುದ್ರಾಕ್ಷಿಯ ಶೃಂಗರಿಸಿ, ಮಂತ್ರವನೋದಿ, ಯಂತ್ರವ ಕಟ್ಟಿ, ತಂತ್ರವ ತಿಳಿದು, ಸ್ವತಂತ್ರಸಿದ್ಧಲಿಂಗನಾದ ಮೇಲೆ ತನ್ನೊಳಗೆ ತಾನೇ ವಿಚಾರಿಸಿ, ಮತ ಒಂದಾದ ಮತಿಜ್ಞಾನ, ಸ್ತುತಿ ನಿಂದ್ಯ ಒಂದಾದ ತತ್ವಜ್ಞಾನ, ಸರ್ವವೂ ಒಂದಾದ ಸಮ್ಯಜ್ಞಾನ, ಅಂಗ ಒಂದಾದ ತತ್ವಜ್ಞಾನ, ಆ ಪ್ರಾಣ ಒಂದಾದ ಆತ್ಮಜ್ಞಾನ, ಕತ್ತಲೆ ಬೆಳಗು ಒಂದಾದ ಮಹಾಜ್ಞಾನ, ನಿಸ್ಸೀಮವಾದ ಅಖಂಡಜ್ಞಾನ, ಶಬ್ದಮುಗ್ಧವಾದುದ್ದೇ ಸ್ವಯಂಭುಬ್ರಹ್ಮಜ್ಞಾನ, ಅರವಾದದ್ದು ಅರವು, ಮರವಾದದ್ದು ಮರವು. ಈ ಮರವಾದದ್ದು ಮರವಾಗದೆ ಮರವು ಮರಳಿ ಅರವಾಗಿ, ಎಚ್ಚರಗೊಂಡು ಇಚ್ಛೆ ಉಳಿದರೆ ಅದೇ ಭವಮರವು, ಮರವಾಗಿ ಮರವು ಮರವಾದರೆ, ಸಾವಿಗೆ ಸಾವಾಗಿ ಸಾವು ಸತ್ತಿತ್ತು. ಮರವಿನ ಮರವೇ ಸಾವಿನ ಸಾವು; ಸಾವೆಂಬುದೇ ಮಾಯೆ. ಮಾಯೆಯೆಂಬುದೇ ಮರಗಿ, ಮರಗಿಯೆಂಬುದೇ ದುರಗಿ, ದುರಗಿಯೆಂಬುದೇ ಶಕ್ತಿ , ಶಕ್ತಿಯೆಂಬುದೇ ಅಂಗ, ಅಂಗವೆಂಬುದೇ ಲಿಂಗ, ಲಿಂಗವೆಂಬುದೇ ಮನ, ಮನವೆಂಬುದೇ ಘನ, ಘನವೆಂಬುದೇ ಗುರು, ಗುರುವೆಂಬುದೇ ಪರ, ಪರವೆಂಬುದೇ ತಾನು, ತಾನುಯೆಂಬುದೇ ಬೈಲು, ಬೈಲೆಂಬುದೇ ಮುಕ್ತಿ, ಮುಕ್ತಿಯೆಂಬುದೇ ಏನೋ ಏನೋ ಎಂಬುದೇ ಮಾತು, ಮಾತುಯೆಂಬುದೇ ವಚನ, ವಚನಯೆಂಬುದೇ ಅಕ್ಷರ, ಅಕ್ಷರಯೆಂಬುದೇ ಮಂತ್ರ, ಮಂತ್ರಯೆಂಬುದೇ ಪ್ರಣವ, ಪ್ರಣವಯೆಂಬುದೇ ನಾದ, ನಾದಯೆಂಬುದೇನಾದುದೇ ಹೇಳಲಿಕ್ಕೆ ನಿರ್ಬೈಲು. ನಿರ್ಬೈಲೇ ಸುಳ್ಳು, ಈ ಸುಳ್ಳು ಖರೇ ಮಾಡದೆ ಹರಿ ಅಜ ಇಂದ್ರಾದಿ ಮನು ಮುನಿ ನರ ನಾಗ ಸುರ ಸಿದ್ಧ ಸಾಧ್ಯರು, ರುದ್ರ ಈಶ್ವರ ಸದಾಶಿವ ಮಹಾದೇವರು ಮತ್ತೆ ಮಾದೇವರು, ಅಷ್ಟಾಂಗಯೋಗಿಗಳು, ಅಷ್ಟಾವರಣ ನಿಷೆ*ಯುಳ್ಳವರು, ಮಹಾನುಭಾವಿಗಳು, ನಿಜಜ್ಞಾನಿಗಳು, ಮಹಾ ಅರವಿಗಳು, ಸುಳ್ಳು ಸುಳ್ಳು ಮಾಡಿ, ಸುಳ್ಳು ಬ್ಯಾರೆ, ಖರೆಬ್ಯಾರೆ, ಬ್ರಹ್ಮವು ಬ್ಯಾರೆ, ಹಮ್ಮು ಬ್ಯಾರೆ, ಬ್ರಹ್ಮಾಂಡ ಬ್ಯಾರೆ, ಪಿಂಡಾಂಡ ಬ್ಯಾರೆ, ಕಾಯ ಬ್ಯಾರೆ, ಕರಣ ಬ್ಯಾರೆ, ಆತ್ಮ ಬ್ಯಾರೆ, ಪರಮಾತ್ಮ ಬ್ಯಾರೆ, ಭವ ಬ್ಯಾರೆ, ಶಿವ ಬ್ಯಾರೆ, ಬೆಳಗು ಬ್ಯಾರೆ, ಕತ್ತಲು ಬ್ಯಾರೆ, ಪುಣ್ಯ ಬ್ಯಾರೆ, ಪಾಪ ಬ್ಯಾರೆ, ಸತ್ಕರ್ಮ ಬ್ಯಾರೆ, ದುಷ್ಕರ್ಮ ಬ್ಯಾರೆ, ಅಜ್ಞಾನ ಬ್ಯಾರೆ, ಸುಜ್ಞಾನ ಬ್ಯಾರೆ, ಹೆಣ್ಣು ಬ್ಯಾರೆ, ಗಂಡು ಬ್ಯಾರೆ, ಸ್ವರ್ಗ ಬ್ಯಾರೆ, ನರಕ ಬ್ಯಾರೆ, ಸಾವು ಬ್ಯಾರೆ, ಜೀವ ಬ್ಯಾರೆ, ಗುರು ಬ್ಯಾರೆ, ಶಿಷ್ಯ ಬ್ಯಾರೆ, ಮಹಾಂತ ಬ್ಯಾರೆ, ಮಡಿವಾಳ ಬ್ಯಾರೆ, ಮೃತ್ಯು ಬ್ಯಾರೆ, ಮಾತು ಬ್ಯಾರೆ, ಭಕ್ತಿ ಬ್ಯಾರೆ, ಮುಕ್ತಿ ಬ್ಯಾರೆ, ನಾವು ಬ್ಯಾರೆ, ನೀವು ಬ್ಯಾರೆ, ತಾ ಬ್ಯಾರೆ ಬ್ಯಾರೆಯೆಂದು ತಾ ಬ್ಯಾರ್ಯಾಗಿ ಸುಳ್ಳು ಖರೇ ಮಾಡದ, ತುಪ್ಪ ಹಾಲುವ ಮಾಡದೇ ಹಾಲು ತುಪ್ಪವ ಮಾಡಿದಂತೆ ತಾವು ಸುಳ್ಳಾಗದೆ ಸುಳ್ಳು ಸುಳ್ಳೆಂದು ಸುಳ್ಳು ಜೊಳ್ಳಾದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಶೈವನೇಮಸ್ತರ ಕೈಯಲುಪದೇಶವಾದೊಡೇನಯ್ಯಾ, ಅಲ್ಲಿ ಏನೂ ಊನಯವಿಲ್ಲ, ಪಾರಂಪರ್ಯದಲ್ಲಿ ನಡದುತ್ತಾಗಿ. ನದಿಯ ಮೂಲವನೂ ಗುರುವಿನ ಮೂಲವನೂ ಅರಸುವರೆ? ಗುರುಲಿಂಗಜಂಗಮ ಸಾಕ್ಷಿಯಾಗಿ ಷಡಕ್ಷರ ಪ್ರಣವಮಂತ್ರದಿಂ ಲಿಂಗದರ್ಶನವಾಯಿತ್ತಾಗಿ ಕಳೆಯಬಾರದು, ಬೆರಸಿ ತನ್ನೊಳಗೆ ತಾನಚ್ಚೊತ್ತಿ ಕರಿಗೊಂಡಿತ್ತಾಗಿ. ಅಂದು ಬಳ್ಳೇಶ್ವರದ ಮಲ್ಲಯ್ಯಗಳು ಬಳ್ಳವ ಲಿಂಗವ ಮಾಡಿದರೆಂದು ಕಳೆದರೆ ಎಮ್ಮ ಪ್ರಮಥರು? ಕಾಳಹಸ್ತಿಯಲ್ಲಿ ಕಣ್ಣಪ್ಪದೇವರು ಸುಜ್ಞಾನಭಕ್ತಿಯಿಂದ ಸ್ಥಾವರವನೆ ಗುರುರೂಪ ಮಾಡಿ ಪೂಜಿಸಿದರೆಂದು ಕಳೆದರೆ ಎಮ್ಮ ಪುರಾತನರು? ಅಂದು ಕಲ್ಯಾಣದಲ್ಲಿ ಹುಸಿಯನೆ ದಿಟಮಾಡಿ ಬದನೆಕಾಯ ಲಿಂಗವ ಮಾಡಿ ಸಲಿಸನೆ ನಮ್ಮ ಬಸವಣ್ಣನು? ಇವರೆಲ್ಲರೂ ನಿಮ್ಮ ಭಜಿಸಿ ನಿಮ್ಮತ್ತಲಾದರು, ನಾ ನಿನಗೇನ ಮಾಡಿದೆನಯ್ಯಾ ಉಳಿಯುಮೇಶ್ವರಾ?
--------------
ಉಳಿಯುಮೇಶ್ವರ ಚಿಕ್ಕಣ್ಣ
ಸಕಲವನೆಲ್ಲ ಲಿಂಗದೊಳಗೆ ತೋರಿದನು. ಆ ಲಿಂಗದ ಬೆಳಗ ಸಕಲದೊಳಗೆ ತೋರಿದನು. ಎನ್ನ ಮನಕ್ಕೆ ಅತಿಶಯವ ತೋರಿ ತೋರಿ ರಕ್ಷಿಸಿದನು. ಎನ್ನೊಳಗೆ ತನ್ನ ತೋರಿದನು, ತನ್ನೊಳಗೆ ಎನ್ನ ತೋರಿದನು. ಮತ್ತೆ ಎರಡುವನು ಏಕಮಾಡಿ ಎನ್ನೊಳಗೆ ಗುಹೇಶ್ವರನಾದನು ಹೊರಗೆ ಮಹಾಲಿಂಗವಾಗಿ ನಿಂದನು, ಶ್ರೀಗುರುಲಿಂಗ ಬಸವಣ್ಣನು.
--------------
ಅಲ್ಲಮಪ್ರಭುದೇವರು
ಆನಂದ ಬ್ರಹ್ಮನ ತಾನೊಂದು ರೂಪಾಗಿ ತಾನು ತನ್ನೊಳಗೆ ತುರಿಯಾತುರಿಯದ ಭಾನುವಿನ ಉದಯದೊಳು ಆನತವು ಕಮಳಕ್ಕೆ ಸ್ವಾನುಭೂತೈಕ್ಯದೊಳು ತನುಲಿಂಗದ ಸೀಮೆಯನು ಪರದಲ್ಲಿ ಭಾವವನು ಮನದಲ್ಲಿ ಆನತದ ದೀಕ್ಷಿತಾ ತನುತ್ರಯದಲಿ ನಾಮದರ ಕಪಿಲಸಿದ್ಧಮಲ್ಲಿಕಾರ್ಜುನನೆಂಬವನ ಕಾಮ್ಯಾರ್ಥದಲಿ ತಾನು ಕಾಣಲರಿದು.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->