ಅಥವಾ

ಒಟ್ಟು 92 ಕಡೆಗಳಲ್ಲಿ , 27 ವಚನಕಾರರು , 83 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ವಿಷಯಕೆ ಮನೆಯ ನೋಡಿ ಮಾಡುವರು ತನುಗುಣವ ತಪ್ಪಿಸಿ ತರಲರಿಯದವರು. ಒಂದು ವಿಷಯಕೆ ಧನವ ನೋಡಿ ಮಾಡುವರು ಪ್ರಾಣನಗುಣವ ತಪ್ಪಿಸಿ ತರಲರಿಯದವರು. ಒಂದು ವಿಷಯಕೆ ನೆರವಿಯ ನೋಡಿ ಮಾಡುವರು ಭಾವದಗುಂಜ ತಪ್ಪಿಸಿ ತರಲರಿಯದವರು. ಈ ಸಂಬೋಧೆಯ ಆಸೆಗಿಕ್ಕಿ ಹೇಸದೆ ಘಾಸಿಯಾಗುವ ಪ್ರಾಣಿಗಳು ತಮಗೆ ಗುರುತ್ವ ಸಹಜವೆ ಅಲ್ಲ. ಮತ್ತೆಂತೆಂದೊಡೆ : ಭೂಷಣವಿಲ್ಲದ ಶಿಷ್ಯಂಗೆ ಗುಣವಿಲ್ಲದ ಗುರುವು ಅಣಕದನುಗ್ರಹ ಎಣಿಕೆಗೆಬಾರದು ನಮ್ಮ ಗುರುನಿರಂಜನ ಚನ್ನಬಸವಲಿಂಗದ ಶರಣಚಾರಿತ್ರದೊಳಗೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕೈಯ ಧನವ ಕೊಂಡಡೆ, ಮೈಯ ಭಾಷೆಯ ಕೊಳಬಹುದೆ ? ಉಟ್ಟ ಉಡುಗೆಯ ಸೆಳೆದುಕೊಂಡರೆ, ಮುಚ್ಚಿ ಮುಸುಕಿದ ನಿರ್ವಾಣವ ಸೆಳೆಯಬಹುದೆ ? ನೋಡುವಿರಿ ಎಲೆ ಅಣ್ಣಗಳಿರಾ, ಕುಲವಳಿದು ಛಲವಳಿದು ಭವಗೆಟ್ಟು ಭಕ್ತೆಯಾದವಳ. ಎನ್ನನೇಕೆ ನೋಡುವಿರಿ ಎಲೆ ತಂದೆಗಳಿರಾ, ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದು ಛಲವುಳಿದವಳನು.
--------------
ಅಕ್ಕಮಹಾದೇವಿ
ಉರು ಬಡತನಕ್ಕೆ ವಾಳಿ (?) ಧನಿಕನಾಗುವುದ ಕಂಡೆ. ಧನವ ಬೇಡುವ ಧನಿಕನ ನುಂಗುವುದ ಕಂಡೆನು. ರಾಜ್ಯ[ವ]ನಾಳೇನೆಂಬ ಅರಸು ತೇಜಿಯ ಕಡಿವಾಣದೊಳಡಗುವುದ ಕಂಡೆ. ಉತ್ಸಾಹವ ಬೇಡುವ ಹೆಣ್ಣು ಉಮ್ಮತ್ತದಕಾಯೊಳಡಗಿದ್ದುದ ಕಂಡೆನು. ವಿಶ್ವಾಸದಿಂದ ಕುಡಿದ ಅಮೃತ ವಿಷವಾಗುವುದ ಕಂಡೆನು. ಸೇವಕ ಒಡೆಯನ ಕಾಣದೆ ಬಟ್ಟೆಬಟ್ಟೆಯಲರಸುವುದ ಕಂಡೆನು. ಇದೇನು ಚೋದ್ಯ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮಹಾಬೆಳಗ ನೋಡಿ ಮನವ ನಿಮ್ಮ ವಶವ ಮಾಡಿ, ತನುವ ಮರೆದು ಧನವ ಜಂಗಮಕಿತ್ತು, ತಾನು ಬಯಲದೇಹಿಯಾದಲ್ಲದೆ ನಿಜಮುಕ್ತಿ ಇಲ್ಲವೆಂದರು ನಮ್ಮ ಅಪ್ಪಣ್ಣಪ್ರಿಯ ಚೆನ್ನಬಸವಣ್ಣ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಕೂಟದ ಲಕ್ಷಣವುಳ್ಳನ್ನಕ್ಕ ಐಕ್ಯಸ್ಥಲ. ಭಾವದ ಕಲ್ಪಿತಂಗಳುಳ್ಳನ್ನಕ್ಕ ಶರಣಸ್ಥಲ. ಕೊಂಡೆಹೆ ಕೊಟ್ಟೆಹನೆಂಬನ್ನಕ್ಕ ಪ್ರಾಣಲಿಂಗಿಸ್ಥಲ. ಉಂಡೆಹೆ ಕೊಟ್ಟೆಹೆನೆಂಬನ್ನಕ್ಕ ಪ್ರಸಾದಿಸ್ಥಲ. ಅರಿದೆಹೆ ಅರಿದೆಹೆನೆಂಬನ್ನಕ್ಕ ಮಾಹೇಶ್ವರಸ್ಥಲ. ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನವ ಕೊಟ್ಟೆಹೆನೆಂಬನ್ನಕ್ಕ ಭಕ್ತಸ್ಥಲ. ಇವ ನಿಶ್ಚಯಿಸಿ ನಿಜಐಕ್ಯವೆಂದರಿತಲ್ಲಿ, ಷಟ್ಸ್ಥಲಲೇಪ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನುವ ಬಂದು ಅಲೆವರಯ್ಯಾ ಎನ್ನ, ಮನವ ಬಂದು ನೋಡುವರಯ್ಯಾ ಎನ್ನ, ಧನವ ಬಂದು ಸೂರೆಗೊಂಬರಯ್ಯಾ ಜಂಗಮವನವರತ. ಕೂಡಲಸಂಗಮದೇವಾ, ನಿಮ್ಮ ಬಯ್ಕೆಯ ಭಂಡಾರಕ್ಕೆ ನಾನು ಶುದ್ಧನಯ್ಯಾ.
--------------
ಬಸವಣ್ಣ
ಇಂತೀ ಕ್ರಮದಲ್ಲಿ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನ ನೀಡಿದ ಭಕ್ತಗಣಂಗಳಿಗೆ ಮೋಕ್ಷವೆಂಬುದು ಕರತಳಾಮಳಕವಾಗಿರ್ಪುದು. ಇಂತಪ್ಪ ವಿಚಾರವ ತಿಳಿಯದೆ ಮೂಢಮತಿಯಿಂದ ಗುರು-ಲಿಂಗ-ಜಂಗಮಕ್ಕೆ ತನು-ಮನ-ಧನವ ನೀಡಿದಾತನೇ ಭಕ್ತನೆಂದು ವೇದಾಗಮಶ್ರುತಿ ಪ್ರಮಾಣವಾಕ್ಯಂಗಳು ಸಾರುತ್ತಿರ್ಪವು. ಆ ಶ್ರುತಿ ಸಾರಿದ ವಾಕ್ಯಗಳು ಪ್ರಮಾಣ. ಅದೆಂತೆಂದಡೆ: ಅಂತಪ್ಪ ಶ್ರುತಿವಾಕ್ಯಂಗಳ ಕೇಳಿ ಸ್ವಾನುಭಾವಗುರುಮುಖದಿಂದ ವಿಚಾರಿಸಿಕೊಳ್ಳಲರಿಯದೆ, ತಮ್ಮಲ್ಲಿ ಸ್ವಯಂಜ್ಞಾನೋದಯವಾಗಿ ತಾವು ತಿಳಿಯದೆ ಮೂಢಮತಿಯಿಂದ ಅಜ್ಞಾನ ಎಡೆಗೊಂಡು ಗುರುವಿಗೆ ತನುವ ನೀಡಬೇಕೆಂದು, ಆ ಗುರುವಿನ ಸೇವಾವೃತ್ತಿಯಿಂದ ತನುವ ದಂಡನೆಯ ಮಾಡುವರು. ಅದೇನು ಕಾರಣವೆಂದಡೆ: ಗುರುವಿನ ನಿಲುಕಡೆಯನರಿಯದ ಕಾರಣ. ಲಿಂಗಕ್ಕೆ ಮನವ ನೀಡಬೇಕೆಂದು ಧೂಪ-ದೀಪ-ನೈವೇದ್ಯ-ತಾಂಬೂಲ ಮೊದಲಾದ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡಿ, ಹಸ್ತದಲ್ಲಿರುವ ಇಷ್ಟಲಿಂಗದಲ್ಲಿ ಮನವ ನಿಲ್ಲಿಸಬೇಕೆಂದು ಎವೆಗೆ ಎವೆ ಹೊಡೆಯದೆ ಸತ್ತ ಮಲದ ಕಣ್ಣಿನಂತೆ ಕಣ್ಣು ತೆರೆದು ನೋಡಿದಡೆ ಆ ಕಲ್ಲಲಿಂಗದಲ್ಲಿ ಮನವು ನಿಲ್ಲಬಲ್ಲುದೆ ? ನಿಲ್ಲಲರಿಯದು. ಅದೇನು ಕಾರಣವೆಂದಡೆ : ಆ ಇಷ್ಟಬ್ರಹ್ಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತೀ ಪರಿಯಲ್ಲಿ ಮನವ ಬಳಲಿಸುವರು. ಜಂಗಮಕ್ಕೆ ಧನವ ನೀಡಬೇಕೆಂದು ಅನ್ನ-ವಸ್ತ್ರ ಮೊದಲಾದ ಹದಿನೆಂಟು ಧಾನ್ಯ ಜೀನಸು ಸಹವಾಗಿ ನಾನಾ ಧಾವತಿಯಿಂದ ಗಳಿಸಿ ಸಕಲ ಪದಾರ್ಥವನು ಜಂಗಮಕ್ಕೆ ನೀಡಿ, ಆತ್ಮನ ಬಳಲಿಸುವರು. ಅದೇನು ಕಾರಣವೆಂದಡೆ, ಆ ಜಂಗಮದ ನಿಜನಿಲುಕಡೆಯ ಸ್ವರೂಪ ತಾವೆಂದರಿಯದ ಕಾರಣ. ಇಂತಿವೆಲ್ಲವು ಹೊರಗಣ ಉಪಚಾರ. ಈ ಹೊರಗಣ ಉಪಚಾರವ ಮಾಡಿದವರಿಗೆ ಪುಣ್ಯಫಲಪ್ರಾಪ್ತಿ ದೊರಕೊಂಬುವದು. ಆ ಪುಣ್ಯಫಲ ತೀರಿದ ಮೇಲೆ ಮರಳಿ ಭವಬಂಧನವೇ ಪ್ರಾಪ್ತಿ. ಅದೆಂತೆಂದಡೆ : ಪುಣ್ಯವೇ ತೈಲ, ಫಲವೇ ಜ್ಯೋತಿ. ತೈಲವು ತೀರಿದ ಹಾಗೆ ಆ ಜ್ಯೋತಿಯ ಪ್ರಕಾಶ ಅಡಗುವದು. ಪುಣ್ಯ ತೀರಿದ ಮೇಲೆ ಫಲಪದ ನಾಶವಾಗುವದು ನೋಡೆಂದ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಎನ್ನ ತನುವ ಕಡಿವುದು ಬಸವಣ್ಣನ ಧರ್ಮವಯ್ಯಾ, ಎನ್ನ ಮನವನೊರೆದು ನೋಡುವುದು ಬಸವಣ್ಣನ ಧರ್ಮವಯ್ಯಾ, ಎನ್ನ ಧನವ ಸೂರೆಮಾಡುವುದು ಬಸವಣ್ಣನ ಧರ್ಮವಯ್ಯಾ, ಕಪಿಲಸಿದ್ಧಮಲ್ಲಿನಾಥಯ್ಯಾ.
--------------
ಸಿದ್ಧರಾಮೇಶ್ವರ
ತನುವ ಗುರುವಿಂಗಿತ್ತ, ಮನವ ಲಿಂಗಕಿತ್ತ, ಧನವ ಜಂಗಮಕಿತ್ತ, ಎನ್ನ ಬಸವರಾಜನಯ್ಯ. ಗುರುವಿನಲ್ಲಿ ಶುದ್ಧ, ಲಿಂಗದಲ್ಲಿ ಸಿದ್ಧ, ಜಂಗಮದಲ್ಲಿ ಪ್ರಸಿದ್ಧ ಪ್ರಸಾದಿಯಯ್ಯಾ, ಎನ್ನ ಬಸವರಾಜನ[ಯ್ಯ] ಲಿಂಗದಲ್ಲಿ ದೀಕ್ಷೆ ಶಿಕ್ಷೆ ಸ್ವಾನುಭಾವ ಆಯತ ಸ್ವಾಯತ ಸನ್ನಹಿತ, ಎನ್ನ ಬಸವರಾಜನಯ್ಯ. ಮಹಾಲಿಂಗ ಕಲ್ಲೇಶ್ವರಾ, ನಿಮ್ಮ ಶರಣ ಬಸವರಾಜನಯ್ಯ.
--------------
ಹಾವಿನಹಾಳ ಕಲ್ಲಯ್ಯ
ತ್ರಿವಿಧವನಿತ್ತು, ರೂಹು ಮಾತು ಬಳಿಕುಂಟೆ ಅಯ್ಯಾ ತನುವ ಕೊಡೆನಾಗಿ ಇದಿರುತ್ತರವಿದೆ, ಮನವ ಕೊಡೆನಾಗಿ ಆನೆಂಬಹಂಕಾರವಿದೆ, ಧನವ ಕೊಡೆನಾಗಿ ಪ್ರಪಂಚಿನ ಬಳಕೆಯಿದೆ. ಕೂಡಲಸಂಗಮದೇವಯ್ಯಾ, ಎಂತು ಭಕ್ತನಪ್ಪೆನು !
--------------
ಬಸವಣ್ಣ
ತನುವ ಬೇಡಿದಡೀವೆ, ಮನವ ಬೇಡಿದಡೀವೆ, ಧನವ ಬೇಡಿದಡೀವೆ, ಬೇಡು, ಬೇಡೆಲೆ ಹಂದೆ. ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ, ಕೂಡಲಸಂಗಮದೇವಾ, ನಿಮಗಿತ್ತು ಶುದ್ಧನಾಗಿಪ್ಪೆ, ನಿಮ್ಮ ಪುರಾತರ ಮನೆಯಲ್ಲಿ.
--------------
ಬಸವಣ್ಣ
ತನುವಿಲ್ಲದ ಘನಕ್ಕೆ ತನುಸಂಬಂಧಿಸಿದರೆ ಒಂದನೆಯ ಪಾತಕ. ಮನವಿಲ್ಲದ ಘನಕ್ಕೆ ಮನವ ಸಂಬಂಧಿಸಿದರೆ ಎರಡನೆಯ ಪಾತಕ. ಧನವಿಲ್ಲದ ಘನಕ್ಕೆ ಧನವ ಸಂಬಂಧಿಸಿದರೆ ಮೂರನೆಯ ಪಾತಕ. ಭಾವವಿಲ್ಲದ ಘನಕ್ಕೆ ಭಾವ ಸಂಬಂಧಿಸಿದರೆ ನಾಲ್ಕನೆಯ ಪಾತಕ. ತಾನಿಲ್ಲದ ಘನಕ್ಕೆ ತನ್ನ ಸಂಬಂಧಿಸಿದರೆ ಐದನೆಯ ಪಾತಕ. ಇಂತು ಪಂಚವಿಧವನರಿಯದೆ ಪಂಚಬ್ರಹ್ಮ ಗುರುನಿರಂಜನ ಚನ್ನಬಸವಲಿಂಗದಲ್ಲಡಗಿರ್ದ ನಿಜಕ್ಕೆ ಗಜಬಜೆಯಗಲಸಿದರೆ ಪಂಚಮಹಾಪಾತಕದೊಳಗಾಗುವರು.
--------------
ದೇಶಿಕೇಂದ್ರ ಸಂಗನಬಸವಯ್ಯ
ಧನವ ಗಳಿಸಿದವ ಹೆಣನಾದ. ಧರೆಯ ಗಳಿಸಿದವ ಅರಿಗಳಿಗೆ ಒಡಲಾದ. ಕನ್ಯೆಯ ಗಳಿಸಿದವ ಕುಕ್ಕುರಯೋನಿಯಲ್ಲಿ ಸಿಕ್ಕಿದಂತಾದ. ಅಟ್ಟುವ ವಾಸಿಯಲ್ಲಿ ಕುಕ್ಕುಳಗುದಿಯಬೇಡ. ಸತ್ಯಕ್ಕೆ ಹೊರಗಾಗು, ಅಸತ್ಯಕ್ಕೆ ಒಳಗಾಗು, ಐಘಟದೂರ ರಾಮೇಶ್ವರಲಿಂಗವನರಿವುದಕ್ಕೆ.
--------------
ಮೆರೆಮಿಂಡಯ್ಯ
ಅಂಗ ಆಪ್ತ ಸ್ಥಾನ ಸದ್ಭಾವ ಎಂಬ ಚತುರ್ವಿಧಭಕ್ತಿಯಿಂದೆ ಗುರುವಿಂಗೆ ತನುವ ಸವೆಸಿದಡೆ ಆ ತನುವಿನಲ್ಲಿ ದೀಕ್ಷಾ ಶಿಕ್ಷಾ ಸ್ವಾನುಭಾವಜ್ಞಾನಸ್ವರೂಪವಾದ ಶ್ರೀಗುರುದೇವನು ನೆಲೆಗೊಂಬನು ನೋಡಾ. ಮಂತ್ರ ಜ್ಞಾನ ಜಪ ಸ್ತೋತ್ರವೆಂಬ ನಾಲ್ಕು ತೆರದ ಭಕ್ತಿಯಿಂದೆ ಲಿಂಗಕ್ಕೆ ಮನವ ಸವೆಸಿದಡೆ ಆ ಮನದಲ್ಲಿ ಇಷ್ಟ ಪ್ರಾಣ ಭಾವಸ್ವರೂಪವಾದ ಪರಶಿವಲಿಂಗವು ನೆಲೆಗೊಂಬುದು ನೋಡಾ. ಅನ್ನ ವಸ್ತ್ರ ಆಭರಣಾದಿ ಹದಿನೆಂಟು ತೆರದ ಭಕ್ತಿಯಿಂದೆ ಜಂಗಮಕ್ಕೆ ಧನವ ಸವೆಸಿದಡೆ ಆ ಧನದಲ್ಲಿ ಸ್ವಯ ಚರ ಪರಸ್ವರೂಪವಾದ ಮಹಾಘನ ಜಂಗಮವು ನೆಲೆಗೊಂಬುದು ನೋಡಾ. ಇಂತೀ ತ್ರಿವಿಧಸಂಪತ್ತು ನಿಮ್ಮ ಶರಣರಿಗಲ್ಲದೆ ಉಳಿದವರಿಗಳವಡದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗೋಳಕ ಮೂಲಕ ಮುಕ್ತಕ ದಾರುಕ ರುದ್ರಕ ಕರ್ಣಿಕ, ಈ ಷಟ್‍ಶಕ್ತಿಗಳು ಈ ಪಟ್ಟಣದ ಭಕ್ತೆಯರು. ಇವರ ಮನೆಯ ಜಂಗಮ ನಾನು. ಇವರ ಗಂಡನಿಗಾನು ಒಕ್ಕುದನಿಕ್ಕುವೆನು. ಇವರೆನಗೆ ತನು ಮನ ಧನವ ನಿವೇದಿಸುವರು. ಇರ್ದುದ ವಂಚಿಸದೆ ನಿವೇದಿಸುವರು. ನಾ ಸಹಿತ ಸರ್ವಲಿಂಗಾರ್ಚನೆಯ ಮಾಡುವರು. ನಾ ಹಿಡಿದುದನೆ ಹಿಡಿವರು, ನಾ ಬಿಟ್ಟುದನೆ ಬಿಡುವರು. ನಾ ಬಸವಣ್ಣನ ಮನೆಯ ಜಂಗಮವೆಂದು ಏನ ಹೇಳಿತ್ತ ಕೇಳುವರು. ನಾ ಮಹಾದ್ವಾರದಲ್ಲಿ ಬಂದೆನೆಂದಡೆ ಎನ್ನೊಡನೆ ಬಂದರು. ಹಂಸದ್ವಾರದಲ್ಲಿ ಬಂದೆನೆಂದಡೆ ಎನ್ನೊಡನೆ ಬಂದರು. ಪೂರ್ವದ್ವಾರ ಪಶ್ಚಿಮದ್ವಾರ ಉತ್ತರದ್ವಾರ ದಕ್ಷಿಣದ್ವಾರ ಇಂತಿವರೊಳಗೆ ಎನ್ನೊಡನೊಡನೆ ಬಂದರು. ಎನ್ನ ಪ್ರಸಾದವೆ ವಿಶ್ವಾಸವಾಗಿದ್ದರು. ನಾನಿವರ ಮನೆಯ ಜಂಗಮವು ಕಾಣಾ, ಕಲಿದೇವಯ್ಯಾ.
--------------
ಮಡಿವಾಳ ಮಾಚಿದೇವ
ಇನ್ನಷ್ಟು ... -->