ಅಥವಾ

ಒಟ್ಟು 370 ಕಡೆಗಳಲ್ಲಿ , 63 ವಚನಕಾರರು , 349 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತ್ಯನಲ್ಲ, ಅಸತ್ಯನಲ್ಲ. ಕರ್ಮಿಯಲ್ಲ, ಧರ್ಮಿಯಲ್ಲ, ನಿಃಕರ್ಮಿಯಯ್ಯ ಭಕ್ತನು. ಆಚಾರನಲ್ಲ ಅನಾಚಾರನಲ್ಲ; ಪುಣ್ಯ ಪಾಪ ವಿರಹಿತನಾಗಿ ನಿಷ್ಪಾಪಿಯಯ್ಯ ಭಕ್ತನು. ವ್ರತ ನೇಮ ಮಂತ್ರ ತಂತ್ರ ಭವಿ ಭಕ್ತನೆಂಬುವುದಿಲ್ಲ ನೋಡಾ, ಲಿಂಗೈಕ್ಯಂಗೆ. ಸವಿಕಲ್ಪನಲ್ಲ. ನಿರ್ವಿಕಲ್ಪನಲ್ಲ. ಸೀಮನಲ್ಲ. ನಿಸ್ಸೀಮನಲ್ಲ. ಪರಮ ನಿರಂಜನನು ತಾನೆ ನೋಡಾ ಭಕ್ತನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಪ್ರಸಾದವ ಕೊಂಡ ಶರಣನ ಸರ್ವಾಂಗವೆಲ್ಲ ಪ್ರಸಾದ ತಾನಾಯಿತ್ತು. ಕಾರಣ ಅಸ್ಥಿ ಸೌಮ್ಯವಾಯಿತ್ತು. ಮಾಂಸ[ಪಿಂಡ] ಮಂತ್ರರೂಪವಾಯಿತ್ತು. ಚರ್ಮ ಚಿದ್ರೂಪವಾಯಿತ್ತು, ನಾಡಿ ನಿರಂಜನವಾಯಿತ್ತು, ರೋಮ ಓಂ ರೂಪವಾಯಿತ್ತು. ಇಂತೀ ಪಂಚಭೂತಕಾಯ ಪ್ರಸಾದ[ಕಾಯ]ವಾಯಿತ್ತು. ಮಾಂಸಪಿಂಡ ಮಂತ್ರಪಿಂಡವಾಯಿತ್ತು. ವಾಯು ಪ್ರಾಣಲಿಂಗ ಪ್ರಾಣವಾಯಿತ್ತು. ನರರೂಪ ಹರರೂಪವಾಯಿತ್ತು. ಹರರೂಪ ಗುರು ಚರ ಪರಮ ಪ್ರಸಾದವಾಯಿತ್ತು. ದೇವಭಕ್ತನ ಪ್ರಸಾದವೆ ಭಕ್ತಿ ಮುಕ್ತಿಪ್ರಸಾದ ತಾನೆ, ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಜಯ ಜಯ ನಿರುಪಮ ನಿರವಯ ನಿಷ್ಕಲ ಜಯ ಜಯ ನಿಶ್ಚಲ ನಿರ್ಮಲ ನಿರ್ಗುಣ ಜಯ ಜಯ ಪರಮ ನಿರಂಜನ ಸದ್ಗುರು ಮಹಾಂತ ಶರಣಾರ್ಥಿ. | ಪಲ್ಲ | ಸುಳ್ಳೆ ನಿರ್ಬೈಲೆನಿಸಿ ಮೆರೆದಿ ಸುಳ್ಳೆ ಮಹಾಬೈಲಾಗಿ ತೋರಿದಿ ಸುಳ್ಳೆ ಚಿದ್ಬೈಲವಾಗಿ ಸಾರಿದಿ ಸುಳ್ಳೆ ಪರಬ್ರಹ್ಮಾ ಸುಳ್ಳೆ ಪರಶಿವ ಚಿತ್ತಬ್ಥಿತ್ತಿಯು ಸುಳ್ಳೆ ಇಚ್ಛೆಯ ನೆನವಕೊನರಿಸಿ ಸುಳ್ಳೆ ಮನಘನವೃಕ್ಷ ಮಾಡಿದಿ ಮಹಾಂತ ಶರಣಾರ್ಥಿ. | 1 | ಸುಳ್ಳೆ ನೆಲ ಜಲ ಅಗ್ನಿ ವಾಯು ಸುಳ್ಳೆ ಗಗನಾತ್ಮಾರ್ಕ ಚಂದ್ರಮ ಸುಳ್ಳೆ ತಾರಕ ಕಠೋರ ಮಹಾಮಹತ್ವಣುವಿಗಣು ಮಾಯೆ ಸುಳ್ಳೆ ಬೀಜದ ಸಸಿಯ ಫಲರಸ ಸುಳ್ಳೆ ಶೋಣಿತ ಶುಕ್ಲ ಶರೀರ ಸುಳ್ಳೆ ಹಮ್ಮು ಮತ್ತಾಶೆ ಮಾಡಿದೆ ಮಹಾಂತ ಶರಣಾರ್ಥಿ. | 2 | ಸುಳ್ಳೆ ತ್ರಿಜಗ ಸಚರಾಚರಗಳು ಸುಳ್ಳೆ ತನ್ನನು ತಾನೆ ಎಂಬುದು ಸುಳ್ಳೆ ಕುಲ ಛಲ ಸುಳ್ಳೆ ಮತಿ ತತಿ ಸುಳ್ಳೆ ವ್ರತಶೀಲಾ ಸುಳ್ಳೆ ತಾ ಸತ್ಕರ್ಮ ಸದ್ಗುಣ ಸುಳ್ಳೆ ತಾ ದುಷ್ಕರ್ಮ ದುರ್ಗುಣ ಸುಳ್ಳೆ ಸರ್ವವ್ಯಾಪಾರ ಮಾಡಿದೆ ಮಹಾಂತ ಶರಣಾರ್ಥಿ. | 3 | ಸುಳ್ಳೆ ಕಾಮ ಶೀಮ ನೇಮವು ಸುಳ್ಳೆ ಭೋಗ ತ್ಯಾಗ ಯೋಗವು ಸುಳ್ಳೆ ಜಪ ತಪ ಧ್ಯಾನ ಮೌನವು ಸುಳ್ಳೆ ಪದಫಲವು ಸುಳ್ಳೆ ಇಹಪರ ಪಾಪ ಪುಣ್ಯವು ಸುಳ್ಳೆ ಸ್ವರ್ಗ ನರಕ ಸುಖ ದುಃಖ ಸುಳ್ಳೆ ನೋವು ಸಾವು ಮಾಡಿದೆ ಮಹಾಂತ ಶರಣಾರ್ಥಿ. | 4 | ಸುಳ್ಳೆ ಭಾವದ ಭ್ರಮಿಗೆ ಭವಭವ ಸುಳ್ಳೆ ತಾ ತಿರುತಿರುಗಿ ಬಳಲುತೆ ಸುಳ್ಳೆ ಉತ್ಪತ್ತಿ ಸ್ಥಿತಿ ಲಯಂಗಳಾಗಿ ಮಣ್ಣಾಯಿತು ಸುಳ್ಳೆ ತಾ ಮಹಾಮೇರು ಮಹತ್ವವು ಸುಳ್ಳೆ ಈ ಮಾಯಾ ಗಮನವು ಸುಳ್ಳೆ ಶರಣರ ಐಕ್ಯ ಮಾಡಿದಿ ಮಹಾಂತ ಶರಣಾರ್ಥಿ | 5 | ಸುಳ್ಳೆ ಅಷ್ಟಾವರಣದರ್ಚನೆ ಸುಳ್ಳೆ ತಾ ಅಷ್ಟಾಂಗಯೋಗವು ಸುಳ್ಳೆ ಬೆಳಗಿನ ಬೆಳಗು ಅದ್ವೆ ೈತಾದಿ ನಿಜಮುಕ್ತಿ ಸುಳ್ಳೆ ಖರೇ ಮಾಡಿ ಸಲೆ ಕಾಡಿದಿ ಸುಳ್ಳೆ ಸುಳ್ಳೆನಿಸುತ್ತೆ ಹಬ್ಬಿದಿ ಸುಳ್ಳೆ ಆಟವನಾಡಿ ಮೆರೆಯುವ ಮಹಾಂತ ಶರಣಾರ್ಥಿ. | 6 | ಸುಳ್ಳೆ ತಾ ಶಿವ ಸುಳ್ಳೆ ನೀ ಗುರು ಸುಳ್ಳೆ ನಾ ಶಿಷ್ಯಾಗಿ ಈ ಭವಕರ ಸುಳ್ಳೆ ಲಿಂಗವ ಕಂಡು ಜಂಗಮತೀರ್ಥಪ್ರಸಾದ ಸುಳ್ಳೆ ಭಸ್ಮ ಶಿವೇಕ್ಷಮಣಿ ಮಂತ್ರ ಸುಳ್ಳೆ ಅನುಗೊಳಿಸ್ಯಾತ್ಮ ತತ್ವವ ಸುಳ್ಳೆ ಧ್ಯಾನವ ಹುಡುಕಿ ಮಾಡಿದಿ ಮಹಾಂತ ಶರಣಾರ್ಥಿ | 7 | ಸುಳ್ಳೆ ಹುಡುಕಿ ನಾ ನನ್ನ ಮರೆದೆ ಸುಳ್ಳೆ ಹುಡುಕಿ ನಾ ನಿನ್ನ ಅರಿದೆ ಸುಳ್ಳೆ ಹುಡುಕಿ ಮುಕ್ತಿ ಮೆರೆದೆನು ಸುಳ್ಳೆ ತಾನಾಯಿತು ಸುಳ್ಳೆ ಬಂದಿತು ಸುಳ್ಳೆ ನಿಂದಿತು ಸುಳ್ಳೆ ಹೊಂದಿತು ಸುಳ್ಳೆ ಹೋಯಿತು ಸುಳ್ಳೆ ಖರೆ ಮಾಡಿಸದೆ ಕಾಡಿದಿ ಮಹಾಂತ ಶರಣಾರ್ಥಿ | 8 | ಸುಳ್ಳೆ ಇಪ್ಪತ್ತೈದು ನಿಜಪದ ಸುಳ್ಳೆ ಹತ್ತೊಂಬತ್ತು ವಚನಗಳು ಸುಳ್ಳೆ ಈ ಪರಿವದ್ರ್ಥಿನೊಂಬತ್ತೆಂದೆನು ಹಾಡು ಸುಳ್ಳೆ ಹಾಡುವದಾಯ್ತು ಹಾಡು ಸುಳ್ಳೆ ಹದಿನೇಳ್ನೂರೈವತ್ತು ಸರ್ವಕೆ ಸುಳ್ಳೆ ತಿಳಿದರೆಡುಳ್ಳೆ ಮಾಡಿದಿ ಮಹಾಂತ ಶರಣಾರ್ಥಿ | 9 |
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇನ್ನುಮಷ್ಟವಿಧ ಸಕೀಲದೊಳೊಲಿದರ್ಪಿತ ಪ್ರಸಾದಂಗಳೊಂದರೊಳಾರಾರಾಗಲವಂ ಕೂಡಲೆಪ್ಪತ್ತೆರಡಾಗಲಾ ಪಿಂದಣರುವೆರಕ್ಕೆಗಳಂ ಕೂಡಿ ಗಣಿಸಲ್ ಸಾವಿರದೇಳ್ನೊರಿಪ್ಪತ್ತೆಂಟಾದುದೆಲ್ಲಂ ನೀನೆಯಯ್ಯಾ, ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ ಅಣ್ಣಗಳು ನೀವು ಕೇಳಿರೆ. ಈ ಬಣ್ಣದ ಪರಿಯಾಯಕ್ಕೆ ಕಣ್ಣುಗೆಟ್ಟು ಬಿದ್ದಿರಲ್ಲಾ. ಈ ಹೆಣ್ಣಿನ ಸಂಗ ನಿಮಗೇತಕಣ್ಣಾ. ತನ್ನಲ್ಲಿ ಹೆಣ್ಣುಂಟು, ತನ್ನಲ್ಲಿ ಹೊನ್ನುಂಟು, ತನ್ನಲ್ಲಿ ಮಣ್ಣುಂಟು. ಇಂತಿವ ನಿಮ್ಮಲ್ಲಿ ನೀವು ತಿಳಿದು ನೋಡಲಿಕ್ಕೆ, ತನ್ನಲ್ಲಿ ತಾನೆ ಕಾಣಬಹುದು. ತನ್ನ ತಾನರಿಲ್ಲದೆ ಇದಿರನರಿಯಬಾರದು. ಇದಿರನರಿದಲ್ಲದೆ ಪರವನರಿಯಬಾರದು. ಪರವನರಿದಲ್ಲದೆ ಸ್ವಯವನರಿಯಬಾರದು. ಸ್ವಯವನರಿದಲ್ಲದೆ ಅರಿವು ತಲೆದೋರದು ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಮಾಯ ಹಿಂಗಿದಲ್ಲದೆ ಮದವಳಿಯದು. ಮದವಳಿದಲ್ಲದೆ ಮತ್ಸರ ಹೆರೆಸಾರದು. ಮತ್ಸರ ಹೆರೆಸಾರಿದಲ್ಲದೆ ಮಹಾಘನವಳವಡದು. ಮಹಾಘನವಳವಟ್ಟಲ್ಲದೆ ಮಹಾಲಿಂಗವ ಕಾಣಬಾರದು. ಮಹಾಲಿಂಗವ ಕಂಡಲ್ಲದೆ ಮಹಾಪ್ರಕಾಶವ ಕಾಣಬಾರದು. ಮಹಾಪ್ರಕಾಶವ ಕಂಡಲ್ಲದೆ ನಿತ್ಯವ ಕಾಣಬಾರದು. ನಿತ್ಯವ ಕಂಡಲ್ಲದೆ ನಿಜವ ಕಾಣಬಾರದು. ನಿಜವ ಕಂಡಲ್ಲದೆ ನಿರ್ಣಯವನರಿಯಬಾರದು. ನಿರ್ಣಯವನರಿದಲ್ಲದೆ ಗುರುಲಿಂಗಜಂಗಮವನರಿಯಬಾರದು. ಗುರುಲಿಂಗಜಂಗಮವನರಿದಲ್ಲದೆ ಪಾದತೀರ್ಥಪ್ರಸಾದವನರಿಯಬಾರದು. ಪಾದತೀರ್ಥಪ್ರಸಾದವನರಿದಲ್ಲದೆ ಸಹಜ ಶರಣರ ಸಂಗವನರಿಯಬಾರದು. ಇಂತಪ್ಪ ಶರಣರ ಸಂಗವನರಿದಲ್ಲದೆ ಸರ್ವನಿರ್ಣಯವನರಿಯಬಾರದು. ಸರ್ವನಿರ್ಣಯವನರಿದಲ್ಲದೆ ಸಹಜಸದ್ಭಕ್ತರು ಮೆಚ್ಚರು. ಸಹಜಸದ್ಭಕ್ತರು ಕೂಡಿ ನಡೆಯಬಲ್ಲಡೆ ಇದೇ ಸುಖವು. ಸಂಗದೊಳಗೆ ಶರಣರ ಸಂಗವೆ ಸಂಗವು ಕೇಳಿರಯ್ಯಾ. ಇಂತು ಸಾಯದೆ ನೋಯದೆ ಸ್ವಯವನರಿದು, ಸದ್ಭಕ್ತರ ಸಂಗವ ಮಾಡಬಲ್ಲಾತನೆ ಲಿಂಗೈಕ್ಯನು. ಅವ ತಾನೆ ಘನಲಿಂಗವು. ಹೀಂಗಲ್ಲದೆ ಹಿಂದೆ ಮೆಟ್ಟಿಹೋಹ ಸಂದೇಹಿ ಮಾನವರೆಲ್ಲರೂ ಜಗದ ಜಂಗುಳಿಗಳ ದಂದುಗದೊಳಗಾಗಿಪ್ಪರು. ಆ ಗುಣವ ಬಿಟ್ಟು, ಶರಣರ ಸಂಗ ಸಹಜವೆಂದರಿದು, ನಿಜವಾಗಿ ಬಂದಬಳಿಕ ಪೂರ್ವಭಾಗೆಗೆ ಬಾರೆನೆಂಬ ನಿಶ್ಚಯದಿಂ ಪರಮ ಪ್ರಸಾದವನರಿದು, ಜಗದ ಹಂಗ ಹರಿದ ಶರಣನು ಎನ್ನ ತಂದೆಯಾಗಿಪ್ಪನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ಈ ಬಂದ ಪರಿಯಾಯವರಿದು, ತಾಮಸವ ಹಿಂಗಿ, ಸಹಜ ನಿಜನಿತ್ಯವನರಿದು ಹೋದ ಶರಣರ ನಿಲವಿನ ಪರಿಯ, ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ
--------------
ಮರುಳಶಂಕರದೇವ
ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾದ್ಥಿ ಎಂದು ಈಯೆಂಟು ಅಷ್ಟಾಂಗಯೋಗಂಗಳು. ಈ ಯೋಗಂಗಳೊಳಗೆ ಉತ್ತರಭಾಗ, ಪೂರ್ವಭಾಗೆಯೆಂದು ಎರಡು ಪ್ರಕಾರವಾಗಿಹವು. ಯಮಾದಿ ಪಂಚಕವೈದು ಪೂರ್ವಯೋಗ; ಧ್ಯಾನ, ಧಾರಣ, ಸಮಾದ್ಥಿಯೆಂದು ಮೂರು ಉತ್ತರಯೋಗ. ಇವಕ್ಕೆ ವಿವರ: ಇನ್ನು ಯಮಯೋಗ ಅದಕ್ಕೆ ವಿವರ: ಅನೃತ, ಹಿಂಸೆ, ಪರಧನ, ಪರಸ್ತ್ರೀ, ಪರನಿಂದೆ ಇಂತಿವೈದನು ಬಿಟ್ಟು ಲಿಂಗಪೂಜೆಯ ಮಾಡುವುದೀಗ ಯಮಯೋಗ. ಇನ್ನು ನಿಯಮಯೋಗ- ಅದಕ್ಕೆ ವಿವರ: ಬ್ರಹ್ಮಚಾರಿಯಾಗಿ ನಿರಪೇಕ್ಷನಾಗಿ ಆಗಮಧರ್ಮಂಗಳಲ್ಲಿ ನಡೆವವನು. ಶಿವನಿಂದೆಯ ಕೇಳದಿಹನು. ಇಂದ್ರಿಯಂಗಳ ನಿಗ್ರಹವ ಮಾಡುವವನು. ಮಾನಸ, ವಾಚಸ, ಉಪಾಂಶಿಕವೆಂಬ ತ್ರಿಕರಣದಲ್ಲಿ ಪ್ರಣವ ಪಂಚಾಕ್ಷರಿಯ ಸ್ಮರಿಸುತ್ತ ಶುಚಿಯಾಗಿಹನು. ಆಶುಚಿತ್ತವ ಬಿಟ್ಟು ವಿಭೂತಿ ರುದ್ರಾಕ್ಷೆಯ ಧರಿಸಿ ಶಿವಲಿಂಗಾರ್ಚನತತ್ಪರನಾಗಿ ಪಾಪಕ್ಕೆ ಬ್ಥೀತನಾಗಿಹನು. ಇದು ನಿಯಮಯೋಗ. ಇನ್ನು ಆಸನಯೋಗ- ಅದಕ್ಕೆ ವಿವರ: ಸಿದ್ಧಾಸನ, ಪದ್ಮಾಸನ, ಸ್ವಸ್ತಿಕಾಸನ, ಅರ್ಧಚಂದ್ರಾಸನ, ಪರ್ಯಂಕಾಸನ ಈ ಐದು ಆಸನಯೋಗಂಗಳಲ್ಲಿ ಸ್ವಸ್ಥಿರಚಿತ್ತನಾಗಿ ಮೂರ್ತಿಗೊಂಡು ಶಿವಲಿಂಗಾರ್ಚನೆಯ ಮಾಡುವುದೀಗ ಆಸನಯೋಗ. ಇನ್ನು ಪ್ರಾಣಾಯಾಮ- ಅದಕ್ಕೆ ವಿವರ: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ, ನಾಗ, ಕೂರ್ಮ, ಕೃಕರ, ದೇವದತ್ತ, ಧನಂಜಯವೆಂಬ ದಶವಾಯುಗಳು. ಇವಕ್ಕೆ ವಿವರ: ಪ್ರಾಣವಾಯು ಇಂದ್ರ ನೀಲವರ್ಣ. ಹೃದಯಸ್ಥಾನದಲ್ಲಿರ್ದ ಉಂಗುಷ್ಠತೊಡಗಿ ವಾ[ಣಾ]ಗ್ರಪರಿಯಂತರದಲ್ಲಿ ಸತ್ಪ್ರಾಣಿಸಿಕೊಂಡು ಉಚ್ಛಾಸ ನಿಶ್ವಾಸನಂಗೆಯ್ದು ಅನ್ನ ಜೀರ್ಣೀಕರಣವಂ ಮಾಡಿಸುತ್ತಿಹುದು. ಅಪಾನವಾಯು ಹರಿತವರ್ಣ. ಗುಧಸ್ಥಾನದಲ್ಲಿರ್ದು ಮಲಮೂತ್ರಂಗಳ ವಿಸರ್ಜನೆಯಂ ಮಾಡಿಸಿ ಆಧೋದ್ವಾರಮಂ ಬಲಿದು ಅನ್ನರಸ ವ್ಯಾಪ್ತಿಯಂ ಮಾಡಿಸುತ್ತಿಹುದು. ವ್ಯಾನವಾಯು ಗೋಕ್ಷಿರವರ್ಣ. ಸರ್ವಸಂದಿಗಳಲ್ಲಿರ್ದು ನೀಡಿಕೊಂಡಿರ್ದುದನು ಮುದುಡಿಕೊಂಡಿರ್ದುದನು ಅನುಮಾಡಿಸಿ ಅನ್ನಪಾನವ ತುಂಬಿಸುತ್ತಿಹುದು. ಉದಾನವಾಯ ಎಳೆಮಿಂಚಿನವರ್ಣ. ಕಂಠಸ್ಥಾನದಲ್ಲಿರ್ದು ಸೀನುವ, ಕೆಮ್ಮುವ, ಕನಸ ಕಾಣುವ, ಏಳಿಸುವ ಛರ್ದಿ ನಿರೋಧನಂಗಳಂ ಮಾಡಿ ಅನ್ನ ರಸವ ಆಹಾರಸ್ಥಾನಂಗೆಯಿಸುತ್ತಿಹುದು. ಸಮಾನವಾಯು ನೀಲವರ್ಣ. ನಾಬ್ಥಿಸ್ಥಾನದಲ್ಲಿರ್ದು ಅಪಾದಮಸ್ತಕ ಪರಿಯಂತರ ದೇಹಮಂ ಪಸರಿಸಿಕೊಂಡಂಥಾ ಅನ್ನರಸವನು ಎಲ್ಲಾ[ಲೋ] ಮನಾಳಂಗಳಿಗೆ ಹಂಚಿಕ್ಕುವುದು. ಈ ಐದು ಪ್ರಾಣಪಂಚಕ. ಇನ್ನು ನಾಗವಾಯು ಪೀತವರ್ಣ. [ಲೋ] ಮನಾಳಂಗಳಲ್ಲಿರ್ದು ಚಲನೆಯಿಲ್ಲದೆ ಹಾಡಿಸುತ್ತಿಹುದು. ಕೂಮವಾಯುವ ಶ್ವೇತವರ್ಣ. ಉದರ ಲಲಾಟದಲ್ಲಿರ್ದು ಶರೀರಮಂ ತಾಳ್ದು [ದೇಹಮಂ] ಪುಷ್ಟಿಯಂ ಮಾಡಿಕೊಂಡು ಬಾಯ ಮುಚ್ಚುತ್ತ ತೆರೆವುತ್ತ ನೇತ್ರದಲ್ಲಿ ಉನ್ಮೀಲನ ನಿಮೀಲನವಂ ಮಾಡಿಸುತ್ತಿಹುದು. ಕೃಕರವಾಯು ಅಂಜನವರ್ಣ. ನಾಸಿಕಾಗ್ರದಲ್ಲಿರ್ದು ಕ್ಷುಧಾದಿ ಧರ್ಮಂಗಳಂ ನೆಗಳೆ ಗಮನಾಗಮನಂಗಳಂ ಮಾಡಿಸುತ್ತಿಹುದು. ದೇವದತ್ತವಾಯು ಸ್ಫಟಿಕವರ್ಣ. ಗುಹ್ಯ[ಕಟಿ] ಸ್ಥಾನದಲ್ಲಿರ್ದು ಕುಳ್ಳಿರ್ದಲ್ಲಿ ಮಲಗಿಸಿ, ಮಲಗಿರ್ದಲ್ಲಿ ಏಳಿಸಿ ನಿಂದಿರಿಸಿ ಚೇತರಿಸಿ ಒರಲಿಸಿ ಮಾತಾಡಿಸುತ್ತಿಹುದು. ಧನಂಜಯವಾಯು ನೀಲವರ್ಣ. ಬ್ರಹ್ಮರಂಧ್ರದಲ್ಲಿರ್ದು ಕರ್ಣದಲ್ಲಿ ಸಮುದ್ರಘೋಷಮಂ ಘೋಷಿಸಿ ಮರಣಗಾಲಕ್ಕೆ ನಿರ್ಘೋಷಮಪ್ಪುದು. ಈ ಪ್ರಕಾರದಲ್ಲಿ ಮೂಲವಾಯುವೊಂದೇ ಸರ್ವಾಂಗದಲ್ಲಿ ಸರ್ವತೋಮುಖವಾಗಿ ಚರಿಸುತ್ತಿಹುದು. ಆ ಪವನದೊಡನೆ ಪ್ರಾಣ ಕೂಡಿ ಪ್ರಾಣದೊಡನೆ ಪವನ ಕೂಡಿ ಹೃದಯ ಸ್ಥಾನದಲ್ಲಿ ನಿಂದು ಹಂಸನೆನಿಸಿಕೊಂಡು ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಗ್ನೇಯ ಎಂಬ ಷಡುಚಕ್ರದಳಂಗಳಮೇಲೆ ಸುಳಿದು ನವನಾಳಂಗಳೊಳಗೆ ಚರಿಸುತ್ತಿಹುದು. ಅಷ್ಟದಳಂಗಳೇ ಆಶ್ರಯವಾಗಿ ಅಷ್ಟದಳಂಗಳ ಮೆಟ್ಟಿ ಚರಿಸುವ ಹಂಸನು ಅಷ್ಟದಳಂಗಳಿಂದ ವಿಶುದ್ಧಿಚಕ್ರವನೆಯ್ದಿ ಅಲ್ಲಿಂದ ನಾಸಿಕಾಗ್ರದಲ್ಲಿ ಹದಿನಾರಂಗುಲ ಪ್ರಮಾಣ ಹೊರಸೂಸುತ್ತಿಹುದು; ಹನ್ನೆರಡಂಗುಲ ಪ್ರಮಾಣ ಒಳಗೆ ತುಂಬುತ್ತಿಹುದು. ಹೀಂಗೆ ರೇಚಕ ಪೂರಕದಿಂದ ಮರುತ ಚರಿಸುತ್ತಿರಲು ಸಮಸ್ತ್ರ ಪ್ರಾಣಿಗಳ ಆಯುಷ್ಯವು ದಿನ ದಿನಕ್ಕೆ ಕುಂದುತ್ತಿಹುದು. ಹೀಂಗೆ ಈಡಾ ಪಿಂಗಳದಲ್ಲಿ ಚರಿಸುವ ರೇಚಕ ಪೂರಕಂಗಳ ಭೇದವನರಿದು ಮನ ಪವನಂಗಳ ಮೇಲೆ ಲಿಂಗವ ಸಂಬಂದ್ಥಿಸಿ ಮನ ಪವನ ಪ್ರಾಣಂಗಳ ಲಿಂಗದೊಡನೆ ಕೂಡಿ ಲಿಂಗ ಸ್ವರೂಪವ ಮಾಡಿ ವಾಯು ಪ್ರಾಣತ್ವವ ಕಳೆದು ಲಿಂಗ ಪ್ರಾಣಿಯ ಮಾಡಿ ಹೃದಯ ಕಮಲ ಮಧ್ಯದಲ್ಲಿ ಪ್ರಣವವನುಚ್ಚರಿಸುತ್ತ ಪರಶಿವ ಧ್ಯಾನದಲ್ಲಿ ತರಹರವಾಗಿಪ್ಪುದೀಗ ಪ್ರಾಣಾಯಾಮ. ಇನ್ನು ಪ್ರತ್ಯಾಹಾರಯೋಗ-ಅದಕ್ಕೆ ವಿವರ: ಆಹಾರದಿಂ ನಿದ್ರೆ, ನಿದ್ರೆಯಿಂ ಇಂದ್ರಿಯಂಗಳು, ಇಂದ್ರಿಯಂಗಳಿಂದ ವಿಷಯಂಗಳು ಘನವಾಗುತ್ತಿಹುವು ನೋಡಾ. ಆ ವಿಷಯದಿಂದ ದುಃಕರ್ಮಗಳ ಮಿಗೆ ಮಾಡಿ ಜೀವಂಗೆ ಭವ ಭವದ ಬಂಧನವನೊಡಗೂಡಿ ಆಯಸಂ ಬಡುತ್ತಿಪ್ಪರಜ್ಞ್ಞಾನ ಕರ್ಮಿಗಳು; ಈ ಅವಸ್ಥೆಯ ಹೊಗದಿಹರು ಸುಜ್ಞಾನಿ ಧರ್ಮಿಗಳು. ಅದರಿಂದಲಾಹಾರಮಂ ಕ್ರಮ ಕ್ರಮದಿಂದ ಉದರಕ್ಕೆ ಹವಣಿಸುತ್ತ ಬಹುದು. ಗುರು ಕೃಪೆಯಿಂದ ಈ ಪ್ರಕಾರದಲ್ಲಿ ಸರ್ವೇಂದ್ರಿಯಂಗಳನು ಲಿಂಗಮುಖದಿಂದ ಸಾವಧಾನವ ಮಾಡಿಕೊಂಡಿಪ್ಪುದೀಗ ಪ್ರತ್ಯಾಹಾರಯೋಗ. ಈ ಐದು ಪೂರ್ವಯೋಗಂಗಳು. ಇನ್ನು ಧ್ಯಾನ, ಧಾರಣ, ಸಮಾದ್ಥಿಯೆಂದು ಮೂರು ಉತ್ತರಯೋಗಂಗಳು. ಇನ್ನು ಧ್ಯಾನಯೋಗ- ಅದಕ್ಕೆ ವಿವರ: ಅಂತರಂಗದ ಶುದ್ಧ ಪರಮಾತ್ಮ ಲಿಂಗವನೇ ಶಿವಲಿಂಗ ಸ್ವರೂಪವ ಮಾಡಿ ಕರಸ್ಥಲಕ್ಕೆ ಶ್ರೀಗುರು ತಂದು ಕೊಟ್ಟನಾಗಿ ಆ ಕರಸ್ಥಲದಲ್ಲಿದ್ದ ಶಿವಲಿಂಗವೇ ಪರಮಾರ್ಥಚಿಹ್ನವೆಂದರಿದು ಆ ಲಿಂಗವನೇ ಆಧಾರ, ಸ್ವಾದ್ಥಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೇಯ, ಬ್ರಹ್ಮರಂಧ್ರ ಮುಖ್ಯವಾದ ಸ್ಥಾನಂಗಳಲ್ಲಿ ಆ ಶಿವಲಿಂಗಮೂರ್ತಿಯನೆ ಆಹ್ವಾನ ವಿಸರ್ಜನೆಯಿಲ್ಲದೆ ಧ್ಯಾನಿಪುದೀಗ ಧ್ಯಾನಯೋಗ. ಆ ಲಿಂಗವ ಭಾವ, ಮನ, ಕರಣ ಮುಖ್ಯವಾದ ಸರ್ವಾಂಗದಲ್ಲಿ ಧರಿಸುವುದೀಗ ಧಾರಣಯೋಗ. ಆ ಸತ್ಕಿ ್ರಯಾ ಜ್ಞಾನಯೋಗದಿಂದ ಪ್ರಾಣಂಗೆ ಶಿವಕಳೆಯ ಸಂಬಂದ್ಥಿಸಿ ಇಷ್ಟ, ಪ್ರಾಣ, ಭಾವವೆಂಬ ಲಿಂಗತ್ರಯವನು ಏಕಾಕಾರವ ಮಾಡಿ ಅಖಂಡ ಪರಿಪೂರ್ಣ ಕೇವಲ ಪರಂಜ್ಯೋತಿ ಸ್ವರೂಪವಪ್ಪ ಮಹಾಲಿಂಗದೊಳಗೆ ಸಂಯೋಗವಾಗಿ ಬ್ಥಿನ್ನವಿಲ್ಲದೆ ಏಕಾರ್ಥವಾಗಿಹುದೀಗ ಸಮಾದ್ಥಿಯೋಗ. ಇಂತೀ ಅಷ್ಟಾಂಗಯೋಗದಲ್ಲಿ ಶಿವಲಿಂಗಾರ್ಚನೆಯ ಮಾಡಿ ಶಿವತತ್ವದೊಡನೆ ಕೂಡುವುದೀಗ ಲಿಂಗಾಂಗಯೋಗ. ಇನ್ನು ಕರ್ಮಕಾಂಡಿಗಳು ಮಾಡುವ ಕರ್ಮಯೋಗಂಗಳು- ಅವಾವವೆಂದಡೆ: ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರವೆಂಬ ಈ ಐದನು ಲಿಂಗವಿರಹಿತವಾಗಿ ಮಾಡುತ್ತಿಪ್ಪರಾಗಿ ಈ ಐದು ಕರ್ಮಯೋಗಂಗಳು. ಅವರು ಲಕ್ಷಿಸುವಂಥಾ ವಸ್ತುಗಳು ಉತ್ತರಯೋಗವಾಗಿ ಮೂರು ತೆರ. ಅವಾವವೆಂದಡೆ: ನಾದಲಕ್ಷ ್ಯ, ಬಿಂದುಲಕ್ಷ ್ಯ, ಕಲಾಲಕ್ಷ ್ಯವೆಂದು ಮೂರು ತೆರ. ನಾದವೇ ಸಾಕ್ಷಾತ್ ಪರತತ್ವವೆಂದೇ ಲಕ್ಷಿಸುವರು. ಬಿಂದುವೇ ಆಕಾರ, ಉಕಾರ, ಮಕಾರ, ಈ ಮೂರು ಶುದ್ಧಬಿಂದು ಸಂಬಂಧವೆಂದೂ. ಆ ಶುದ್ಧ ಬಿಂದುವೇ ಕೇವಲ ದಿವ್ಯ ಪ್ರಕಾಶವನುಳ್ಳದೆಂದೂ ಲಕ್ಷಿಸುವರು. ಕಲೆಯೇ ಚಂದ್ರನ ಕಲೆಯ ಹಾಂಗೆ, ಸೂರ್ಯನ ಕಿರಣಂಗಳ ಹಾಂಗೆ, ಮಿಂಚುಗಳ ಪ್ರಕಾಶದ ಹಾಂಗೆ, ಮುತ್ತು, ಮಾಣಿಕ್ಯ, ನವರತ್ನದ ದೀಪ್ತಿಗಳ ಹಾಂಗೆ, ಪ್ರಕಾಶಮಾಯವಾಗಿಹುದೆಂದು ಲಕ್ಷಿಸುವುದೀಗ ಕಲಾಲಕ್ಷ ್ಯ. ಈ ಎಂಟು ಇತರ ಮತದವರು ಮಾಡುವ ಯೋಗಂಗಳು. ಇವ ಲಿಂಗವಿರಹಿತವಾಗಿ ಮಾಡುವರಾಗಿ ಕರ್ಮಯೋಗಂಗಳು. ಈ ಕರ್ಮಕೌಶಲ್ಯದಲ್ಲಿ ಲಿಂಗವಿಲ್ಲ ನೋಡಾ. ಅದುಕಾರಣ ಇವ ಮುಟ್ಟಲಾಗದು. ಇನ್ನು ವೀರಮಾಹೇಶ್ವರರುಗಳ ಲಿಂಗಸಂಧಾನವೆಂತೆಂದರೆ: ಬ್ರಹ್ಮರಂಧ್ರದಲ್ಲಿಪ್ಪ ನಾದ ಚೈತನ್ಯವಪ್ಪ ಪರಮ ಚಿತ್ಕಲೆಯನೇ ಭಾವ, ಮನ, ಕರದಲ್ಲಿ ಶ್ರೀಗುರು ತಂದು ಸಾಹಿತ್ಯವ ಮಾಡಿದನಾಗಿ ಭಾವದಲ್ಲಿ ಸತ್ತ್ವರೂಪವಪ್ಪ ಭಾವಲಿಂಗವೆನಿಸಿ, ಪ್ರಾಣದಲ್ಲಿ ಚಿತ್ ಸ್ವರೂಪವಪ್ಪ ಪ್ರಾಣಲಿಂಗವೆನಿಸಿ, ಕರಸ್ಥಲದಲ್ಲಿ ಆನಂದ ಸ್ವರೂಪವಪ್ಪ ಇಷ್ಟಲಿಂಗವೆನಿಸಿ, ಒಂದೇ ವಸ್ತು ತನು, ಮನ, ಭಾವಂಗಳಲ್ಲಿ ಇಷ್ಟ, ಪ್ರಾಣ, ಭಾವವಾದ ಭೇದವನರಿದು ಇಷ್ಟಲಿಂಗವ ದೃಷ್ಟಿಯಿಂದ ಗ್ರಹಿಸಿ ಪ್ರಾಣಲಿಂಗವ ಮನಜ್ಞಾನದಿಂದ ಗ್ರಹಿಸಿ ತೃಪ್ತಿಲಿಂಗವ ಭಾವಜ್ಞಾನದಿಂದ ಗ್ರಹಿಸಿ ಈ ಲಿಂಗತ್ರಯವಿಡಿದಾಚರಿಸಿ ಲಿಂಗದೊಡನೆ ಕೂಡಿ ಲಿಂಗವೇ ತಾನು ತಾನಾಗಿ ವಿರಾಜಿಸುತ್ತಿಪ್ಪುದೀಗ ಶಿವಯೋಗ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮತ್ತಂ, ಶಿವನೆ ಜೀವನಾದೊಡೆ ಜೀವಂಗುಂಟಾದ ಜನನಾದಿ ದೋಷಂಗಳಿವಂಗುಂಟಾದಪುದಲಾಯೆನೆ ಸಾಗರತರಂಗನ್ಯಾಯದಂತಭೇದಂ. ಕಡಲುದಕಂ ತೃಣ ಕಣ ಜಲಮುಮೇಕಮಾದೊಡಂ ಕಡಲ ಗಂಬ್ಥೀರತೆ ತೃಣ ಕಣ ಜಲಕ್ಕಿಲ್ಲಮಂತೆ ಶಿವಂಗುಂಟಾದ ಗಂಬ್ಥೀರ ಮಹತ್ವಂಗಳ್ಬ ್ರಹ್ಮಾದಿ ಸ್ತಂಭಪರ್ಯಂತಮಾದ ಕಲ್ಪಿತಜೀವಜಾಲಕ್ಕಿಲ್ಲಮೆಂಬುದೆ ನಿಶ್ಚಿತಾರ್ಥಮಕ್ಕು- ಮದಾದೊಡಂ ಶಿವಂ ಪರಿಪೂರ್ಣನಪ್ಪುದರಿಂ ಮುನ್ನಿನಂತೆ ಸಾಗರತರಂಗನ್ಯಾಯದಿಂ ಜೀವನಾದನದು ಕಾರಣದಿಂ ಸದಾಶಿವಾದ್ಯವನಿಪರ್ಯಂತಮಾದ ಜಗತ್ತೇ ದೇಹವನುಳ್ಳ ಕಾರಣಂ ದೇಹಿಯಾ ಫೇನೂರ್ಮಿಕಣಗಳ್ತನ ಗಿರ್ದೊಡುಲುಹಿಲ್ಲದ ಸಮುದ್ರದಂತೆ, ಶಿವಂ ದೇಹವಿರ್ದೊಡಂ ದೇಹವಿಲ್ಲದವನೆಂದೇ ಬೋದ್ಥಿಸಿದೆಯಯ್ಯಾ, ಪರಮ ಶಿವಲಿಂಗ ಸ್ಫಟಿಕರುಚಿ ಸನ್ನಿಭಾಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಬಳಿಕ್ಕೆಯುಮಗ್ನಿಮಂಡಲದ ವಾಯುದಿಕ್ಕಿನೇಕದಳದಲ್ಲಿ ರಕಾರಮ ನದರಾಚೆಯ ಚಂದ್ರಮಂಡಲದ ವಾಯುದಿಕ್ಕಿನ ದಳದ್ವಯದಲ್ಲಿ ವಾಯುದಳದೊಳಗೆ ಎಕಾರಮಂ, ವಾಯು ಕುಬೇರರಪದಿಕ್ಕಿನ ದಳದ್ವಯದಲ್ಲಿ ಐಕಾರಮ ನದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ ವಾಯುದಳದೊಳಗೆಕಾರಮಂ, ವಾಯು ಕುಬೇರರಪದಿಕ್ಕಿನ ದಳದ್ವಯದಲ್ಲಿ ಥಕಾರ ದಕಾರಂಗಳಂ ಬರೆದು ಭಾವಿಪುದೆಂದೆಯಯ್ಯಾ, ಪರಮ ಶಿವಲಿಂಗೇಶ್ವರ ಪ್ರಚುರ ಕಲ್ಯಾಣ ಗುಣಾಕರ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
``ಮೂರ್ಖತ್ವೇನ ಸಕ್ವೀಯಾನಿ ಕರ್ಮಾಣಿ ಚ ದಿನೇ ದಿನೇ|| ಯಃ ಕರೋತಿ ಸ ಮೂಢಸ್ತು ಶತಜನ್ಮವಿಮೋಚಕಃ||' ಎಂಬವನು ಕರ್ಮಿಯಯ್ಯಾ. ``ಜಗತ್ಸತ್ಯಂ ಮತ್ವಾ ಜಗ್ಕ ನಿರತಃ ಕರ್ಮಕುಶಲಃ| ತೃತೀಯೇನ ಪ್ರಾಪ್ತಿಃ ಪರಮ ಸುಪದಂ ಶಾಂಕರಿ ಶಿವೇ||' ಎಂಬವನು ಮುಮುಕ್ಷು ಕಂಡಯ್ಯಾ. ``ಪ್ರಪಂಚಂ ಸ್ವಪ್ನವನ್ಮತ್ವಾ ಧ್ಯಾನಕರ್ಮಪರಾಯಣಃ| ದಿಜನ್ಮತಾಂ ಸ ಮೋಕ್ಷಂ ಚ ಪ್ರಯಾತಿ ಗಿರಿನಂದನೇ||' ಎಂಬವನು ಅಭ್ಯಾಸಿ ಕಂಡಯ್ಯಾ. ``ವ್ಯವಹಾರಾನ್ಸಮಸ್ತಾಂಶ್ಚ ಉಪೇಕ್ಷ್ಯ ಪರಮೇಶ್ವರಿ| ವಿವೇಕತತ್ಪರೋಭೂತ್ವಾ ಏಕಜನ್ಮವಿಮೋಚಕಃ||' ಎಂಬವನು ಅನುಭಾವಿ ನೋಡಯ್ಯಾ. ``ಅದೃಷ್ಟಾ ್ಯ ವಿಶ್ವವಿಕೃತಿಂ ಸ್ವಾತ್ಮಜ್ಞಾನೇನ ಯೋ ನರಃ| ಭಾತಿ ತಸ್ಯ ಮಹಾದೇವಿ ವಿದೇಹಂ ವಪುರೀರಿತಂ||' ಎಂಬವನು ಆರೂಢ ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಬಳಿಕ್ಕಮಾ ಬಾಹ್ಯದ ಸೂರ್ಯಮಂಡಲದ ಬಹಿರ್ವಳಯದಲ್ಲಿ ಮೊದಲ ವರ್ಣದಿಂ ತರವಿಡಿದೆರಳ್ಪದಿನಾರಕ್ಕೆ ಮೂವತ್ತೆರಡೆಸಳ್ಗಳಂ ಬರೆದದರ ಮುಂದಣ ಚಂದ್ರಮಂಡಲದಲ್ಲಿ ಮೊದಲ ಮಂಡಲದೊಳೊಂ[ದೊಂ]ದು ಪಾಲಾದೊಳ್ದಳೋಪದಳಂ- ಗಳಾದ ಪದಿನಾರೆಸಳ್ಗಳಂ ಬರೆದಂತೆಯೆ ಅಗ್ನಿಮಂಡಲದೊಳೆಂಟೆಸಳ್ಗಳಂ ಲಿಖಿಸುತ್ತಂತೆಯೆ ಸೂಕ್ಷ್ಮ ಕರ್ಣಿಕೆಯಂ ಬಳಸಿ ಚೌದಳದ ನ್ಯಾಸಮಂ ತಿಳಿಯೆಂದೆಯಯ್ಯಾ, ಪರಮ ಶಿವಲಿಂಗ ಪ್ರಕಟಿತ ಸುಜ್ಞಾನಪ್ರಸಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ವೇದಾಂತ ಸಿದ್ಧಾಂತವಪ್ಪ ತರ್ಕಮರ್ಕಟ ವಿದ್ಥಿಯ ದರ್ಶನವಾದಿಗಳ ಪರಿ ವರ್ತನೆಯಲ್ಲ; ಶರಣನ ವರ್ತನೆ ಬೇರೆ. ವೀರಶೈವ ಸಿದ್ಧಾಂತ ನಿರ್ಣಯ ನಿಜಭಕ್ತಿ. ನಿಜ ಶಿವಜ್ಞಾನ, ಪರಮ ವೈರಾಗ್ಯವನುಳ್ಳ ಸರ್ವಾಚಾರ ಸಂಪನ್ನ ಶರಣ. ಲಿಂಗಾತ್ಮಕ, ಲಿಂಗೇಂದ್ರಿಯ, ಲಿಂಗಾಂಗಸಂಗಿ, ಘನಲಿಂಗಯೋಗಿ. ಪ್ರಾಣಮುಕ್ತ, ಮನೋಮುಕ್ತ, ಶರೀರಮುಕ್ತ. ಅನಾದಿ ಕೇವಲ ಮುಕ್ತರಯ್ಯಾ ನಿಮ್ಮ ಶರಣರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರುವಿಂದಾದ ಬಯಲು, ಬಯಲಿಂದಾದ ಬ್ರಹ್ಮವೆ ಲಿಂಗ ಆ ಲಿಂಗದಿಂದೊಗೆದ ಅವಯವಂಗಳೆ ಜಂಗಮ ಆ ಜಂಗಮದ ಪರಮಾನಂದವೆ ಪಾದೋದಕ . ಆ ಪಾದೋದಕ ಪರಿಣಾಮದ ಸುಖ ಪರಮ ಪ್ರಸಾದ ಮತ್ತಾ ಪ್ರಸಾದದ ಪ್ರಚುರವೆ ಪ್ರಣಮಾನಂದ ಪರಂಜ್ಯೋತಿ ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ.
--------------
ಹಡಪದ ಅಪ್ಪಣ್ಣ
ತನ್ನೊಳಿಹ ಮೂರು ಲೋಕವ ನುಂಗಿ ಮುಂದೆ ತೋರುತಿಹ ಪರಬ್ರಹ್ಮ ಕಿರಣವು ಆ ಕಿರಣದೊಳು ನೆನವನಡಗಿಸಿ ಸುಷುಪ್ತಿಯ ನಿಲವ ಕಾಣಬಲ್ಲಾತನೆ ಪರಮ ಲಿಂಗೈಕ್ಯ ಕಾಣಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಕಮಲ ಸಿಂಹಾಸನದ ವಿಮಲಾತ್ಮನನು ಮಾಡಿ ಸುಮನ ಗುರುಲಿಂಗ ಜಂಗಮವನೊಂದುಮಾಡಿ ಪರಮ ಜ್ಞಾನೋದಯದ ಚೇತನದೊಳಿಟ್ಟ ಶ್ರೀಗುರು ಚೆನ್ನಬಸವಣ್ಣ ಪರಂಜ್ಯೋತಿರ್ಮಯನಯ್ಯ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಳಿಕ್ಕಂ ಪ್ರಸಾದಿಸ್ಥಲಮೆ, ಪ್ರಸಾದಿಸ್ಥಲ ಗುರುಮಹಾತ್ಮೆಸ್ಥಲ ಲಿಂಗಮಹಾತ್ಮೆಸ್ಥಲ ಜಂಗಮಮಹಾತ್ಮೆಸ್ಥಲ ಭಕ್ತಮಹಾತ್ಮೆಸ್ಥಲ ಶರಣಮಹಾತ್ಮೆಸ್ಥಲ ಪ್ರಸಾದಮಹಾತ್ಮೆಸ್ಥಲಂಗಳೆಂದೇಳ್ತೆರನಾಗಿರ್ಪುದದುಂ ನಿನ್ನೊಡಲಾದಪುದಯ್ಯಾ, ಷಟ್ತ್ರಿಂಶ ತತ್ವಸಾರ ಸದ್ಭಕ್ತ ಹೃದಯಾಬ್ಜಸೂರ ಪರಮ ಶಿವಲಿಂಗೇಶ್ವರಾ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಇನ್ನಷ್ಟು ... -->