ಅಥವಾ

ಒಟ್ಟು 155 ಕಡೆಗಳಲ್ಲಿ , 46 ವಚನಕಾರರು , 140 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮೃಡನನೊಂದು ದೈವಕ್ಕೆ ಪಡಿಗಟ್ಟಿ ನುಡಿವನ ಬಾಯಲ್ಲಿ, ಬಿಡದೆ ನೆಟ್ಟುವೆನೈದಾರು ಗೆಜ್ಜೆಯ ಗೂಟಗಳನು. ಭೂಮಂಡಲದೊಳಗೆ ಕಲಿದೇವಂಗೆ ಹುಲುದೈವವ ಸರಿಯೆಂದು ನುಡಿವನ ಬಾಯ, ಎಡದ ಕಾಲ ಕೆರಹಿಂದ ಬಡಿಯೆಂದ, ಮಡಿವಾಳ ಮಾಚಯ್ಯ.
--------------
ಮಡಿವಾಳ ಮಾಚಿದೇವ
ಅಯ್ಯ! ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿಗಳೆಂದು ಒಪ್ಪವಿಟ್ಟು ನಿಚ್ಚ ನಿಚ್ಚ ನುಡಿವ ಅಣ್ಣಗಳಿರ! ನೀವು ಅಚ್ಚಪ್ರಸಾದ, ನಿಚ್ಚಪ್ರಸಾದ, ಸಮಯಪ್ರಸಾದವಾದ ವಿಚಾರವ ಹೇಳಿರಣ್ಣ! ಅರಿಯದಿರ್ದಡೆ ಕೇಳಿರಣ್ಣ! ಸಮಸ್ತಪದಾರ್ಥವ ಗುರುಲಿಂಗಜಂಗಮದಿಂದ ಪವಿತ್ರವ ಮಾಡಿ ಅವರವರ ಪದಾರ್ಥವ ಅವರವರಿಗೆ ವಂಚಿಸದೆ ನಿರ್ವಂಚಕತ್ವದಿಂದ ಸಮರ್ಪಿಸುವದೆ ತ್ರಿವಿಧಪ್ರಸಾದಸ್ವರೂಪು ನೋಡ! ಕ್ರಿಯಾಮುಖದಲ್ಲಿ ಇಷ್ಟಲಿಂಗಕ್ಕೆ ಸಮರ್ಪಿಸುವ ಪೃಥ್ವಿಸಂಬಂಧವಾದ, ಅಷ್ಟತನುಗಳಿಂದುದಯವಾದ, ಗಂಧರಸರೂಪುಸ್ಪರ್ಶನಶಬ್ದ ಮೊದಲಾದ ಸಮಸ್ತಪದಾರ್ಥಂಗಳ ಆ ಕ್ರಿಯಾಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುಮಿಕ್ಕ ರೂಪುರುಚಿತೃಪ್ತಿಪ್ರಸಾದವ ಭೋಗಿಸುವಾತನೆ ತ್ರಿವಿಧಪ್ರಸಾದಿ ನೋಡ! ಜ್ಞಾನಮುಖದಲ್ಲಿ ಪ್ರಾಣಲಿಂಗಕ್ಕೆ ಸಮರ್ಪಿಸುವ ಮನಸಂಬಂಧವಾದ ಸ್ತ್ರೀಯಳೆಂಬ ರೂಪುರುಚಿತೃಪ್ತಿ ಮೊದಲಾದ ಪದಾರ್ಥಂಗಳ ಸತ್ಕ್ರೀಯಾಗುರುಲಿಂಗಜಂಗಮವನೆ ಜ್ಞಾನಗುರುಲಿಂಗಜಂಗಮವೆಂದು ಭಾವಿಸಿ ತನ್ನ ವಿವಾಹಸಮಯದಲ್ಲಿ ಗುರುಲಿಂಗಜಂಗಮಕ್ಕೆ ಭಕ್ತಗಣಸಾಕ್ಷಿಯಾಗಿ ತನ್ನ ಕೂಟದ ಶಕ್ತಿಯ ಗುರುಲಿಂಗಜಂಗಮಕ್ಕೆ ಕೊಡುವ ಭಕ್ತಿ ಮೊದಲಾಗಿ, ಆ ಶಕ್ತಿಯರ ಅಂತರಂಗದಲ್ಲಿ ಬೆಳಗುವ ಪರಂಜ್ಯೋತಿರ್ಲಿಂಗವ ಬಹಿಷ್ಕರಿಸಿ ಸದ್ಗುರುಮುಖದಿಂ ಹಸ್ತಮಸ್ತಕಸಂಯೋಗವ ಮಾಡಿಸಿ, ಆ ಲಿಂಗಾಂಗಕ್ಕೆ ಪಾಣಿಗ್ರಹಣವ ಮಾಡಿಸಿ, ಮಂತ್ರದೀಕ್ಷೆಯ ಬೋದ್ಥಿಸಿ, ಪಾದೋದಕಪ್ರಸಾದವ ಕೊಡಿಸಿ, ಸದಾಚಾರ-ಸದ್ಭಕ್ತಿ-ಸತ್ಕ್ರೀಯಾ-ಸಮ್ಯಜ್ಞಾನವ ಬೋಧಿಸಿ, ಶಕ್ತಿಭಾರವಳಿದು ಕ್ರಿಯಾಶಕ್ತಿಯರೆಂದು ಭಾವಿಸಿ, ಪ್ರಥಮದಲ್ಲಿ ಗುರುಲಿಂಗಜಂಗಮಕ್ಕೆ ಆ ಕ್ರಿಯಾಶಕ್ತಿಯ ಭಕ್ತಗಣಸಾಕ್ಷಿಯಾಗಿ ಪ್ರಮಾಣದಿಂದ ಕಂಕಣವ ಕಟ್ಟಿ, ಶರಣಾರ್ಥಿಯೆಂದು ಒಪ್ಪದಿಂದ ಒಪ್ಪಿಸಿ, ಅದರಿಂ ಮೇಲೆ, ಆ ಗುರುಲಿಂಗಜಂಗಮದ ಕರುಣವ ಹಡೆದು, ಆ ಕ್ರಿಯಾಶಕ್ತಿಯ ಭಕ್ತಗಣಮಧ್ಯದಲ್ಲಿ ಕೂಡಿ, ಸೆರಗ ಹಿಡಿದು ಗಣಪದಕ್ಕೆ ಶರಣೆಂದು ವಂದಿಸಿ ಅವರ ಕರುಣವ ಹಾರೈಸಿ ನಿಜಭಕ್ತಿಜ್ಞಾನವೈರಾಗ್ಯವ ಬೆಸಗೊಂಡು ಸಚ್ಚಿದಾನಂದಲಿಂಗನಿಷ್ಠಾಪರತ್ವದಿಂದ ಗುರುಲಿಂಗಜಂಗಮಶಕ್ತಿ ಮೊದಲಾಗಿ ಗುರುಭಕ್ತಿಯಿಂದ ಆಚರಿಸುವರೆ ತ್ರಿವಿಧಪ್ರಸಾದಿಗಳು ನೋಡ! ಮಹಾಜ್ಞಾನಮುಖದಲ್ಲಿ ಭಾವಲಿಂಗಕ್ಕೆ ಸಮರ್ಪಿಸುವ ಧನಸಂಬಂಧವಾದ ದ್ರವ್ಯವನ್ನು ಆ ಕ್ರಿಯಾಜ್ಞಾನಯುಕ್ತವಾದ ಗುರುಲಿಂಗಜಂಗಮವನೆ ಮಹಾಜ್ಞಾನಗುರುಲಿಂಗಜಂಗಮವೆಂದು ಭಾವಿಸಿ, ತಾ ಧರಿಸುವಂಥ ವಸ್ತ್ರಾಭರಣರಕ್ಷೆ ಮೊದಲಾಗಿ ಪ್ರತಿಪದಾರ್ಥವ ವಿಚಾರಮುಖದಲ್ಲಿ ಪಾತ್ರಾಪಾತ್ರವ ತಿಳಿದು ಸಮರ್ಪಿಸಿ, ನಿಜನೈಷ್ಠೆಯಿಂದ, ಪರದ್ರವ್ಯವ ತಂದು ಗುರುಲಿಂಗಜಂಗಮವ ಒಡಗೂಡಿ ಋಣಭಾರಕ್ಕೊಳಗಾಗದೆ ನಡೆ ನುಡಿ ಒಂದಾಗಿ ಆಚರಿಸುವರೆ ತ್ರಿವಿಧಪ್ರಸಾದಿಗಳು ನೋಡ! ಈ ವಿಚಾರವ ಸದ್ಗುರುಮುಖದಿಂದ ಬೆಸಗೊಂಡು ಆಚರಿಸುವರೆ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ ನೋಡ! ಈ ವಿಚಾರವನರಿಯದೆ, ಶ್ರುತಿ-ಗುರು-ಸ್ವಾನುಭಾವವ ತಿಳಿಯದೆ, ವಾಚಾಳಕತ್ವದಿಂದ ನುಡಿದು, [ತಾವು] ಗುರುಲಿಂಗಜಂಗಮಪ್ರಸಾದಿಗಳೆಂಬ ಮೂಳರ ಬಾಯ ಮೇಲೆ ಗಣಂಗಳು ಮೆಟ್ಟಿದ ಚಮ್ಮಾವಿಗೆಯ ತೆಗೆದುಕೊಂಡು ಪಟಪಟನೆ ಹೊಡೆಯೆಂದಾತನಂಬಿಗರ ಚೌಡಯ್ಯನು ನೋಡ, ಸಂಗನ ಬಸವೇಶ್ವರ.
--------------
ಅಂಬಿಗರ ಚೌಡಯ್ಯ
ಇಲ್ಲದಲ್ಲಿ ಇಲ್ಲವಿದ್ದಿತ್ತು. ಇಲ್ಲವೆಂಬುದು ಉಂಟು ನೋಡಾ. ಉಂಟೆಂದಲ್ಲಿ `ಇಲ್ಲ' ಉಂಟಾಯಿತ್ತು. ಉಂಟೆಂದು ತಿಳಿದಡೆ ಅದೆ `ಇಲ್ಲ'. ಆ `ಇಲ್ಲ'ದಲ್ಲಿ ಒಂದು ತಲೆ ಉದಿಸಿತ್ತು. ಆ ತಲೆಯೊಳಗೆ ಮೂರು ಲಿಪಿಯ ಕಂಡೆ. ಲಿಪಿಯೊಳಗೊಂದು ಧ್ವನಿಯ ಕಂಡೆ. ಧ್ವನಿಯ ಬಣ್ಣ ತಲೆಯೆತ್ತದ ಮುನ್ನ, ಐದು ಬಾಯ ರಕ್ಕಸಿ ಆಗುಳಿಸಿ ನುಂಗಿದಳು. ಆ ರಕ್ಕಸಿಗೆ ಕೋಡಗ ಹುಟ್ಟಿ, ಕೋಣನ ಕೊರಳ ಕಚ್ಚಿತ್ತ ಕಂಡೆ. ಕೋಣನ ಕೋಡಗ ಮುರಿದು ಈಡಾಡಿದಡೆ ಕೋಡಗ ಸಿಕ್ಕಿತ್ತು. ಅಡವಿಯ ಸುಟ್ಟು ಆಕಾಶವ ಹೊಕ್ಕು ಗುಹೇಶ್ವರಲಿಂಗದಲ್ಲಿ ಗುರುಕಾರುಣ್ಯವ ಪಡೆದನು
--------------
ಅಲ್ಲಮಪ್ರಭುದೇವರು
ಯುಗ ಜುಗವ ಬಲ್ಲೆನೆಂಬವರು, ನಿಚ್ಚಕ್ಕೆ ನಿಚ್ಚ ಬಪ್ಪ ಚಿಕ್ಕುಟು ಸಾವನರಿಯರು. ಬಾಯ ಬಾಗಿಲ [ಉಲುಹು], ತಲೆಹೊಲದ ಹುಲ್ಲೊಣಗಿತ್ತು. ನಿಮ್ಮನುವಿನಲ್ಲಿರ್ದೆ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಕೆಸರಲ್ಲಿ ಬಿದ್ದ ಪಶುವಿನಂತೆ ಆನು ದೆಸೆದೆಸೆಗೆ ಬಾಯ ಬಿಡುತ್ತಿದ್ದೇನೆ, ಅಯ್ಯಾ. ಆರೈವವರಿಲ್ಲ, ಅಕಟಕಟ ! ಪಶುವೆಂದೆನ್ನ ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ.
--------------
ಬಸವಣ್ಣ
ಅರ್ಥವುಂಟೆಂದು ಅಹಂಕರಿಸಿ ಮಾಡುವನ ಭಕ್ತಿ ತೊತ್ತಿನ ಕೂಟ, ತೊರೆಯನ ಮೇಳದಂತೆ. ತನು-ಮನ-ಧನದಲ್ಲಿ ವಂಚನೆಯುಳ್ಳ ಪ್ರಪಂಚಿಯ ಮನೆಯ ಕೂಳು ಶುನಕನ ಬಾಯ ಎಲುವ ಪ್ರತಿಶುನಕ ತಿಂದಂತೆ ಕಾಣಾ ! ರಾಮನಾಥ.
--------------
ಜೇಡರ ದಾಸಿಮಯ್ಯ
ಎನ್ನ ನಾನರಿಯದಂದು ಮುನ್ನ ನೀನೇನಾಗಿರ್ದೆ ಹೇಳಾ? ಮುನ್ನ [ನೀ] ಬಾಯ ಮುಚ್ಚಿಕೊಂಡಿರ್ದೆ ಎಂಬುದ, ನಾ ನಿನ್ನ ಕಣ್ಣಿಂದ ಕಂಡೆನು, ಎನ್ನ ನಾನರಿದ ಬಳಿಕ ಇನ್ನು ನೀ ಬಾಯಿದೆರೆದು ಮಾತನಾಡಿದಡೆ ಅದನೆನ್ನ ಕಣ್ಣಿಂದ ಕಂಡು ನಾಚಿದೆ ನೋಡಾ. ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ, ಸಂಬಂಧ ಒಂದೇ ನೋಡಾ! ಗುಹೇಶ್ವರಾ ನಿನ್ನ ಬೆಡಗಿನ ಬಿನ್ನಾಣವ ನಾನರಿದೆ ನೋಡಾ.
--------------
ಅಲ್ಲಮಪ್ರಭುದೇವರು
ಕಂಥೆ ತೊಟ್ಟವ ಗುರುವಲ್ಲ, ಕಾವಿ ಹೊತ್ತವ ಜಂಗಮವಲ್ಲ, ಶೀಲ ಕಟ್ಟಿದವ ಶಿವಭಕ್ತನಲ್ಲ, ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ. ಹೌದೆಂಬವನ ಬಾಯ ಮೇಲೆ ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಅದ್ವೆ ೈತವ ನುಡಿವ ಬದ್ಧಭವಿಗಳಿರಾ ಮನದ ಕ್ಷುದ್ರವಡಗದು ಕಾಣಿ ಭೋ. ತತ್ತ್ವಾರ್ಥವ ನುಡಿವ ವ್ಯರ್ಥಕಾಯರುಗಳಿರಾ ವಿಕಾರದ ಕತ್ತಲೆ ಹರಿಯದು ಕಾಣಿ ಭೋ. ಶಿವಾನುಭಾವ ನಿಮಗೇಕೆ? ಸತ್ತ ಹಾಂಗಿರಿ ಭೋ. ತತ್ತ್ವವತ್ತಲೆಯಾಗಿ ನೀವಿತ್ತಲೆಯಾಗಿ ಮೃತ್ಯುವಿನ ಬಾಯ ತುತ್ತಾದಿರಲ್ಲಾ. ತತ್ತ್ವವಿತ್ತುಗಳು ವೃಥಾ ಸತ್ತುದ ಕಂಡು ಮೃತ್ಯುಂಜಯನ ಶರಣರು ನಗುತಿಪ್ಪರು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಾಯೆ ಮಹಾಸಂಚಲವೆಂಬ ಸುಳಿಗಾಳಿಯೊಳು ಸಿಕ್ಕಿದ ತರಗೆಲೆಯಂತೆ, ತಳಹಳಗೊಳ್ಳುತ್ತಿದಿತೀ ಜಗವೆಲ್ಲವು ಎನಗಿನ್ನೆಂತೊ, ಎನಗಿನ್ನೆಂತಯ್ಯಾ. ಬಲ್ಲೆನೆಂಬವರ ಬಾಯ ಟೊಣೆಯಿತ್ತು ಮಾಯೆ. ಆಗಮಿಕರ ಮೂಗ ಕೊಯ್ಯಿತ್ತು ಮಾಯೆ. ಅನುಭಾವಿಗಳೆಲ್ಲರೂ ಮನವಿಕಾರಕ್ಕೆ ಒಳಗಾದರು. ಅರಿದೆನೆಂಬವರೆಲ್ಲರೂ ಮರಹಿಂಗೆ ಬೀಜವಾದರು. ಬ್ರಹ್ಮಿಗಳೆಲ್ಲರೂ ಹಮ್ಮಿಂದ ಹಗರಣದ ಮರುಳಂಗಳಾದರು ವಿರಕ್ತರೆಲ್ಲರೂ ಯುಕ್ತಿಗೆಟ್ಟು ಭವಮಾಲೆಗೊಳಗಾದರು. ನಿರ್ವಾಣಿಗಳೆಲ್ಲರೂ ಸೆರೆಸಂಕಲೆಗೊಳಗಾದರು. ಯೋಗಿಗಳೆಲ್ಲರೂ ವಿಕಳವೆಂಬ ರೋಗಕ್ಕೆ ಒಳಗಾದರು. ತಪಸಿಗಳೆಲ್ಲರೂ ಕಪಟ ಕಳವಳಕ್ಕೊಳಗಾದರು. ಧ್ಯಾನ ಮೌನ ವ್ರತ ನಿತ್ಯ ನೇಮ ಕರ್ಮ ಕ್ರಿಯೆಗಳು ವಸ್ತುವ ಮರೆದು, ಮಾಯಾಧೂಳಿನೊಳಗೆ ಸಿಕ್ಕಿ ವಿಕಳತೆಗೊಂಡು, ನೆನೆವ ಮನ, ವಾಸಿಸುವ ಘ್ರಾಣ, ನೋಡುವ ನೇತ್ರ, ನುಡಿವ ನಾಲಗೆ, ನಡೆವ ಪಾದದ್ವಯಗಳೆಲ್ಲ ಭ್ರಮೆಗೊಳಗಾಯಿತ್ತಯ್ಯ. ಶಿವಶಿವಾ ಮಹಾದೇವಾ, ಇದೆಲ್ಲಿಯ ಮಾರಿ ಬಂದಿತ್ತಯ್ಯ. ಈ ಜಗವನೆತ್ತಿ ಕೊಂದು ಕೂಗುವ ಮಾರಿಯ ಗೆಲುವವರನಾರೊಬ್ಬರನೂ ಕಾಣೆ. ಎನಗಿನ್ನೆಂತಯ್ಯ, ಎನಗಿನ್ನೆಂತಯ್ಯಾ ! ಭಕ್ತಿಜ್ಞಾನವೈರಾಗ್ಯವನಿತ್ತು ಸಲಹಯ್ಯಾ. ಎನ್ನ ಕರಣಂಗಳಿಗೆ ಸಮಸ್ತ ಪ್ರಸಾದವನಿತ್ತು ಸಲಹಯ್ಯಾ, ನಿಃಕಳಂಕ ಚೆನ್ನಮಲ್ಲಿಕಾರ್ಜುನಪ್ರಭುವೆ.
--------------
ನಿಃಕಳಂಕ ಚೆನ್ನಮಲ್ಲಿಕಾರ್ಜುನ ಪ್ರಭುವೆ
ಕಲ್ಲಿನ ಹೋಳ ಬೆಲ್ಲವೆಂದು ಮಕ್ಕಳ ಕೈಯಲ್ಲಿ ಕೊಟ್ಟಡೆ, ಹಲ್ಲಿನಲ್ಲಿ ಕಡಿದು, ನಾಲಗೆಯಲ್ಲಿ ನಂಜಿ, ಬೆಲ್ಲವಲ್ಲಾ ಎಂದು ಹಾಕಿ ಮನೆಯವರೆಲ್ಲರ ಕಾಡುವಂತೆ, ನಾನರಿಯದೆ ಕುರುಹ ಹಿಡಿದು, ಅದು ಎನ್ನ ಮರವೆಯ ಮನಕ್ಕೆ ತೆರಹಾಗದು. ನಾನರಿವಡೆ ಎನ್ನ ಒಡಗೂಡಿದ ತುಡುಗುಣಿ ಬೆನ್ನಬಿಡದು. ಒಡೆಯ ಸತುವಿಲ್ಲದೆ ಬಡವನ ಬಂಟನಾದ ಮತ್ತೆ ಬಾಯ ಹೊಡೆಯಿಸಿಕೊಂಬುದಕ್ಕೆ ಅಂಜಲೇಕೆ ? ಬಿಡು ಬಡವೊಡೆಯನ, ಬಿಡದಿದಡೆ ಕಲ್ಲೆದೆಯಾಗು. ಇವರೆಲ್ಲರ ವಿಧಿ ಎನಗಾಯಿತ್ತು, ಕೈಯಲ್ಲಿದ ಕಠಿಣವ ನಂಬಿ. ಇದರ ಬಲ್ಲತನವ ಹೇಳಾ, ಅಲೇಖನಾದ ಶೂನ್ಯ ಕಲ್ಲಿನ ಮರೆಯಾದವನೆ
--------------
ವಚನಭಂಡಾರಿ ಶಾಂತರಸ
ಒಂದಾಡಿನ ಕಣ್ಣಿನಲ್ಲಿ ಬಂದವು ಮೂರು ಸಿಂಹ. ಆ ಸಿಂಹದ ಬಾಯ ಸೀಳಿ ಹುಟ್ಟಿದವೈದು ಮದಗಜ. ಗಜದೊಡಲೊಡೆದು ಬರಿ ಕೈಯಲ್ಲಿ ನರಿ ಹುಟ್ಟಿತ್ತು. ನರಿಯ ಉದರದಲ್ಲಿ ಮೊಲ ಹುಟ್ಟಿ, ಆ ಮೊಲ ಮೂವರ ಮೊಲೆಯ ತಿಂದಿತ್ತು. ಮೊಲೆ ಹಲುದಾಗಿ ಮೊಲೆ ಮೊದಲುಗೆಟ್ಟಿತ್ತು, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು, ಜಗದೊಡಲು ತಾನಾದ ಕಾರಣ.
--------------
ಸಗರದ ಬೊಮ್ಮಣ್ಣ
ಇನ್ನು ಮಾಯಾವಿಡಂಬನಸ್ಥಲವದೆಂತೆಂದಡೆ : ಮಾಯೆಗಂಜಿ ಕೌಪವ ಕಟ್ಟಿದವರು ಕೋಟಾನುಕೋಟಿ. ಮಾಯೆಗಂಜಿ ತಪೋವನವ ಹೊಕ್ಕವರು ಕೋಟಾನುಕೋಟಿ. ಮಾಯೆಗಂಜಿ ಪವನಾಶನವಾಗಿಹರು ಕೋಟಾನುಕೋಟಿ. ಮಾಯೆಗಂಜಿ ಗಿರಿಗಹ್ವರಂಗಳ ಹೊಕ್ಕವರು ಕೋಟಾನುಕೋಟಿ. ಮಾಯೆಗಂಜಿ ತರಗೆಲೆಗಳ ಮೆದ್ದವರು ಕೋಟಾನುಕೋಟಿ. ಇವರೆಲ್ಲರು ಮಾಯೆಯ ಬಾಯ ತುತ್ತಾದರು. ನಾನು ಮತ್ರ್ಯಕ್ಕೆ ಬಂದು ಪ್ರಭು ಬಸವಣ್ಣ ಮೊದಲಾದ ಅಸಂಖ್ಯಾತ ಗಣಂಗಳ ಪ್ರಸಾದವ ಕೊಂಡೆನಾಗಿ ಮಾಯಾತೀತನಾದೆ ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ವಿರತಿ ವಿರತಿಯೆಂದು ವಿರತಿಯ ಹೊಲಬನರಿಯದೆ ಹಂಬಲಿಸಿ ಹಲಬುತಿಪ್ಪರಣ್ಣ. ಕಠಿಣ ಪದಾರ್ಥವ ಸವಿದೊಡೆ ವಿರತಿಯೆ? ಕಠಿಣ ಪದಾರ್ಥವನೊಲ್ಲೆನೆಂದು ಕಳೆದೊಡೆ ವಿರತಿಯೆ? ವೃಕ್ಷದಡಿಯ ಫಲಂಗಳನೆತ್ತಿ ಮೆದ್ದೊಡೆ ವಿರತಿಯೆ? ಬಿದ್ದ ಫಲಂಗಳ ಮುಟ್ಟೆನೆಂದು ಭಾಷೆಯ ಮಾಡಿದೊಡೆ ವಿರತಿಯೆ? ಕ್ರೀಯೆಲ್ಲಿ ಮುಳುಗಿದೊಡೆ ವಿರತಿಯೆ? ನಿಷ್ಕಿ ್ರೀಯ ಮಾಡಿದೊಡೆ ವಿರತಿಯೆ? ಮೌನಗೊಂಡಡೆ ವಿರತಿಯೆ? ನಿರ್ಮೌನವಾದಡೆ ವಿರತಿಯೆ? ಕ್ರೀಯನಾಚರಿಸಿ, ಅರಿವಿನಮಾತ ಬಣ್ಣವಿಟ್ಟು ನುಡಿದರೆ ವಿರತಿಯೆ? ಇಂತಿವೆಲ್ಲವು ವಿರತಿಯ ನೆಲೆಯನರಿಯದೆ ತಲೆಬಾಲಗೆಟ್ಟು ಹೋದವು. ಇನ್ನು, ಮುಕ್ತಿಪಥವ ತೋರುವ ವಿರತಿಯ ಬಗೆಯಾವುದೆಂದರೆ- ಷಟ್ಸ ್ಥಲಕ್ಕೆ ಒಪ್ಪವಿಟ್ಟು ಎತ್ತಿದ ಮಾರ್ಗವನಿಳುಪದೆ ಹಿಡಿದ ವ್ರತನೇಮಂಗಳಲ್ಲಿ ನೈಷೆ*ಯಾಗಿ ಈಷಣತ್ರಯಂಗಳ ಘಾಸಿಮಾಡಿ ಬಹಿರಂಗಮದಂಗಳ ಬಾಯ ಸೀಳಿ ಅಂತರಂಗಮದಂಗಳ ಸಂತೋಷಮಂ ಕೆಡಿಸಿ ಅಷ್ಟಮೂರ್ತಿ ಅಷ್ಟಮದಂಗಳ ನಷ್ಟವ ಮಾಡಿ ಎಂಟೆರಡುದಿಕ್ಕಿನಲ್ಲಿ ಹರಿವ ದಶವಾಯುಗಳ ಗಂಟಲ ಮುರಿದು ಸುಗುಣ ದುರ್ಗುಣಂಗಳ ನಗೆಗೊಳಗುಮಾಡಿ ನವನಾಳಂಗಳ ಮುಂಬಾಗಿಲಲ್ಲಿ ನವಲಿಂಗಂಗಳ ಸಿಂಗರಿಸಿ ತನು ಮನವ ಸೋಂಕಿದ ಸಾಕಾರ ನಿರಾಕಾರವೆಂಬ ಪದಾರ್ಥಂಗಳ ವಂಚಿಸದೆ ಆಯಾಯ ಲಿಂಗಂಗಳಿಗೆ ತೃಪ್ತಿಯಂ ಮಾಡಿ ನಡೆವಲ್ಲಿ ನುಡಿವಲ್ಲಿ ಮಂತ್ರಂಗಳಲ್ಲಿ ಮೈಮರೆದಿರದೆ ಆಚಾರಾದಿ ಮಹಾಲಿಂಗಗಳ ಷಡುವರ್ಣದ ಬೆಳಗಂ ಧ್ಯಾನ ಮೌನದಲ್ಲಿಯೇ ಕಣ್ಣಿಲ್ಲದೆ ಕಂಡು ಗಂಗೆ ಯಮುನೆ ಸರಸ್ವತಿಯೆಂಬ ಮೂರು ಗಂಗೆ ಕೂಡಿದ ಮಧ್ಯವೀಗ ಸಂಗಮಕ್ಷೇತ್ರ. ಆ ಸಂಗಮಕ್ಷೇತ್ರದ ರತ್ನಮಂಟಪದಲ್ಲಿ ನೆಲೆಸಿಪ್ಪ ತೋಂಟದ ಅಲ್ಲಮನೆಂಬ ಪರಬ್ರಹ್ಮದ ಬೆಳಗಿನ ಪ್ರಭೆಯ ಮೊತ್ತಮಂ ಕಂಡು ಆ ತೋಂಟದ ಅಲ್ಲಮನೆಂಬ ಪರಬ್ರಹ್ಮದ ದಿವ್ಯ ಶ್ರೀಚರಣಮಂ ಭಾವಪುಷ್ಪಂಗಳೆಂಬ ಜಾಜಿ ಮಲ್ಲಿಗೆ ಕೆಂದಾವರೆಯಲ್ಲಿ ಪೂಜೆಯಂ ಮಾಡಿ ಜೀವನ್ಮುಕ್ತಿಯಾದುದೀಗ ನಿಜ ವಿರಕ್ತಿ. ಇಂತಪ್ಪ ವಿರಕ್ತಿಯನಳವಡಿಸಿಕೊಳ್ಳದೆ ಮಾತಿಂಗೆ ಮಾತು ಕೊಟ್ಟು ಮತಿಮರುಳಾಗಿಪ್ಪವರಿಗಂಜಿ ನಾನು ಶರಣೆಂಬೆನಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ವಾರಿ ಬಲಿದು ವಾರಿಕಲ್ಲಾದಂತೆ ಶೂನ್ಯವೆ ಸ್ವಯಂಭುವಾಯಿತ್ತು. ಆ ಸ್ವಯಂಭುಲಿಂಗದಿಂದಾಯಿತ್ತು ಮೂರ್ತಿವತ್ತು, ಆ ಮೂರ್ತಿಯಿಂದಾಯಿತ್ತು ವಿಶ್ವೋತ್ಪತ್ತಿ, ಆ ವಿಶ್ವೋತ್ಪತ್ತಿಯಿಂದಾಯಿತ್ತು ಸಂಸಾರ, ಆ ಸಂಸಾರದಿಂದಾಯಿತ್ತು ಮರವೆ. ಆ ಮರವೆಯೆಂಬ ಮಹಾಮಾಯೆ ವಿಶ್ವವ ಮುಸುಕಿದಲ್ಲಿ ನಾ ಬಲ್ಲೆ, ಬಲ್ಲಿದರೆಂಬ ಅರುಹಿರಿಯರೆಲ್ಲಾ ತಾಮಸಕ್ಕೊಳಗಾಗಿ ಮೀನಕೇತನನ ಬಲೆಗೆ ಸಿಲುಕಿ ಮಾಯೆಯ ಬಾಯ ತುತ್ತಾದರಲ್ಲಾ ! ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಇನ್ನಷ್ಟು ... -->