ಅಥವಾ

ಒಟ್ಟು 61 ಕಡೆಗಳಲ್ಲಿ , 22 ವಚನಕಾರರು , 60 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೃಷ್ಟಿಯ ಮೇಲಣ ಕಣಿಯ ತಂದು ಇಷ್ಟಲಿಂಗವೆಂದು ಮಾಡಿ ಅಷ್ಟತನುವಿನ ಕೈಯಲ್ಲಿ ಕೊಟ್ಟು ಆ ಅಷ್ಟತನುವಿನ ಕಯ್ ತಪ್ಪಿ ಸೃಷ್ಟಿಯ ಮೇಲೆ ಬಿದ್ದಡೆ ಮೆಟ್ಟಿ ಮೆಟ್ಟಿ ಹೂಳಿಸಿಕೊಂಬ ಗುರುದ್ರೋಹಿಗಳ ಮುಖವ ನೋಡಲಾಗದು, ಅವರ ನುಡಿಯ ಕೇಳಲಾಗದು. ಇದಕ್ಕೆ ದೃಷ್ಟಾಂತ, ಗಾರುಡ ಪುರಾಣೇ: ಲಿಂಗಮಧ್ಯೇ ಜಗತ್‍ಸರ್ವಂ ತ್ರೈಲೋಕ್ಯಂ ಸಚರಾಚರಂ ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮಾಲ್ಲಿಂಗಂ ಪ್ರಪೂಜಯೇತ್ ಇಂತೆಂದುದಾಗಿ, ಇಷ್ಟಲಿಂಗ ಬಿದ್ದಡೆ ಆಚಾರಲಿಂಗ ಬಿದ್ದಿತೆ ? ಆಚಾರಲಿಂಗ ಬಿದ್ದಡೆ ಗುರುಲಿಂಗ ಬಿದ್ದಿತೆ ? ಗುರುಲಿಂಗ ಬಿದ್ದಡೆ ಶಿವಲಿಂಗ ಬಿದ್ದಿತೆ ? ಶಿವಲಿಂಗ ಬಿದ್ದಡೆ ಜಂಗಮಲಿಂಗ ಬಿದ್ದಿತೆ ? ಜಂಗಮಲಿಂಗ ಬಿದ್ದಡೆ ಪ್ರಸಾದಲಿಂಗ ಬಿದ್ದಿತೆ ? ಪ್ರಸಾದಲಿಂಗ ಬಿದ್ದಡೆ ಮಹಾಲಿಂಗ ಬಿದ್ದಿತೆ ? ಅಕಟಕಟ ಷಡ್ವಿಧಲಿಂಗದ ಭೇದವನರಿಯದೆ ಕೆಟ್ಟ ಕೇಡ ನೋಡಾ ! ಅಭ್ಯಾಸವ ಮಾಡುವಲ್ಲಿ ಕೋಲು ಬಿದ್ದಡೆ ತನ್ನ ತಾನೆ ಇರಿದುಕೊಂಡು ಸಾಯಬಹುದೆ ? ಆ ಕೋಲಿನಲ್ಲಿ ಅಭ್ಯಾಸವನೆ ಮಾಡಿ ಸುರಗಿಯ ಮೊನೆಯನೆ ಗೆಲಿಯಬೇಕಲ್ಲದೆ ? ಇದು ಕಾರಣ:ಜಲ ಅಗ್ನಿ ನೇಣು ವಿಷ ಅಸಿಪತ್ರ ಸಮಾಧಿ ಇಂತವರಿಂದ ಪ್ರಾಣಹಿಂಸೆಯ ಮಾಡುವರನು ಅಘೋರನರಕದಲ್ಲಿ ಅದ್ದಿ ಅದ್ದಿ ಇಕ್ಕುವ ನಮ್ಮ ಕೂಡಲಸಂಗಮದೇವ.
--------------
ಚನ್ನಬಸವಣ್ಣ
ಅಂಗೈಯೊಳಗೊಂದು ಅರಳ್ದ ತಲೆಯ ಹಿಡಿದುಕೊಂಡು ಕಂಗಳ ಮುತ್ತ ಪವಣಿಸುವಾಕೆ ನೀನಾರು ಹೇಳಾ ? ಸಂದ ಸಂಪಿಗೆಯರಳ ತುಂಬಿ ಬಂದುಂಬ ಭೇದವನರಿಯದೆ ಹಂಬಲಿಸುವ ಪರಿತಾಪವೇನು ಹೇಳಾ ? ಒಂದೆಂಬೆನೆ ಎರಡಾಗಿದೆ ಎರಡೆಂಬೆನೆ ಒಂದಾಗಿದೆ ಅರಿವಿನೊಳಗಣ ಮರಹಿದೇನು ಹೇಳಾ ? ದುಃಖವಿಲ್ಲದ ಅಕ್ಕೆ, ಅಕ್ಕೆಯಿಲ್ಲದ ಅನುತಾಪ ನಮ್ಮ ಗುಹೇಶ್ವರಲಿಂಗದಲ್ಲಿ ತೋರುತ್ತಿದೆ. ನೀನಾರೆಂದು ಹೇಳಾ ಎಲೆ ಅವ್ವಾ ?
--------------
ಅಲ್ಲಮಪ್ರಭುದೇವರು
ಬೇರು ಒಣಗಿದಲ್ಲಿ ಅಂಕುರವುಂಟೆ ? ಆರನರಿಯದೆ ಮೂರ ಪ್ರಮಾಣಿಸದೆ, ಮೀರಿ ಇಪ್ಪಾತನ ಭೇದವನರಿಯದೆ, ಮತ್ತೆ ತೋರಿಕೆಗೆ ಇನ್ನಾವುದು ಹೇಳಾ ? ಯುಗ ಪ್ರಮಾಣಿಸುವುದಕ್ಕೆ ಮುನ್ನ, ಆಚೆಯಲ್ಲಿ ನಾನರಿಯೆ, ಈಚೆಯಲ್ಲಿ ನಾ ಬಲ್ಲ ಇಷ್ಟ, ಆವ ಸ್ಥಲದಲ್ಲಿಯೂ ಸ್ಥಲಭರಿತನಾಗಿ, ಹಿಡಿವಲ್ಲಿ ಕ್ರೀ ಶುದ್ಧವಾಗಿ, ಅರಿವಲ್ಲಿ ಆತ್ಮಶುದ್ಧವಾಗಿ. ಇಂತೀ ಉಭಯದ ಒಡಲನರಿದು ಒಡಗೂಡಬೇಕು, ನಿಃಕಳಂಕ ಮಲ್ಲಿಕಾರ್ಜುನಲಿಂಗವನರಿಯಬಲ್ಲಡೆ.
--------------
ಮೋಳಿಗೆ ಮಾರಯ್ಯ
ಕಾಲಿಲ್ಲದೆ ನಡೆಯಬಲ್ಲಡೆ ಶಿವಯೋಗಿಯೆಂಬೆನಯ್ಯಾ. ಕೈಯಿಲ್ಲದೆ ಮುಟ್ಟಬಲ್ಲಡೆ ಶಿವಯೋಗಿಯೆಂಬೆನಯ್ಯಾ. ಕಣ್ಣಿಲ್ಲದೆ ನೋಡಬಲ್ಲಡೆ ಶಿವಯೋಗಿಯೆಂಬೆನಯ್ಯಾ. ಕಿವಿ ಇಲ್ಲದೆ ಕೇಳಬಲ್ಲಡೆ ಶಿವಯೋಗಿಯೆಂಬೆನಯ್ಯಾ. ನಾಲಿಗೆ ಇಲ್ಲದೆ ಸವಿಯಬಲ್ಲಡೆ ಶಿವಯೋಗಿಯೆಂಬೆನಯ್ಯಾ. ನಾಸಿಕವಿಲ್ಲದೆ ವಾಸಿಸಬಲ್ಲಡೆ ಶಿವಯೋಗಿಯೆಂಬೆನಯ್ಯಾ. ಮನವಿಲ್ಲದೆ ನೆನೆಯಬಲ್ಲಡೆ ಶಿವಯೋಗಿಯೆಂಬೆನಯ್ಯಾ. ತಾನಿಲ್ಲದೆ ಕೂಡಬಲ್ಲಡೆ ಶಿವಯೋಗಿಯೆಂಬೆನಯ್ಯಾ. ಇಂತೀ ಭೇದವನರಿಯದೆ ವೇಷವ ಧರಿಸಿ ತಿರುಗುವರೆಲ್ಲರು ಭವರೋಗಿಗಳೆಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕೃತಯುಗದಲ್ಲಿ ಕುಂಜರಯಾಗಕ್ಕೆ, ತ್ರೇತಾಯುಗದಲ್ಲಿ ಅಶ್ವಯಾಗಕ್ಕೆ, ದ್ವಾಪರದಲ್ಲಿ ಮಹಿಷಯಾಗಕ್ಕೆ, ಕಲಿಯುಗದಲ್ಲಿ ಅಜಯಾಗಕ್ಕೆ, ಇಂತೀ ವೇದಗಳಿಂದ ವೇದವೇದ್ಯರೆ ನೀವು ? ವೇದಯಾಗಕ್ಕೆ ವಧೆಯುಂಟೆ ? ಇಂತೀ ಭೇದವನರಿಯದೆ ಶಾಪಹತರುಗಳಿಗೆ ಸರ್ವಜ್ಞಾತೃದೃಷ್ಟವಪ್ಪುದೆ ? ಇಂತೀ ವೇದವೇದ್ಯರು ಶಾಸ್ತ್ರಸಂಪನ್ನರು. ಪುರಾಣಪೂರ್ವಜ್ಞಾನಯುತರು, ಸಕಲಾಗಮಕ್ಕತೀತರು ಎಮ್ಮವರು, ಲಲಾಮ ಭೀಮಸಂಗಮೇಶ್ವರಲಿಂಗದೊಳಗಾದ ಶರಣರು.
--------------
ವೇದಮೂರ್ತಿ ಸಂಗಣ್ಣ
ಆಚಾರಸಹಿತ ಲಿಂಗಭಕ್ತನಾದರೆ, ದೈವವೆಂಬುದ ತನ್ನಲ್ಲಿಯೆ ಅರಿಯಬೇಕು. ಇದಿರ ಅನ್ಯಭವಿಯ (ದೈವವ), ಕೊಂಡ ಕಾರಣವೇನಯ್ಯಾ ? ಲಿಂಗೈಕ್ಯಂಗೆ ಅರಿಷಡ್ವರ್ಗ ಮಲತ್ರಯಂಗಳೆಂಬ ಭವಿಗಳರಿಯಬೇಕು. ಅರಿದರಿದು ಆನಂದವೆಂಬ ಗುರುವಿನ ಕರದಿಂದ ಇವರ ಭಕ್ತರ ಮಾಡಿ, ದೀಕ್ಷೆ ಶಿಕ್ಷೆ ಸ್ವಾನುಭಾವದಿಂದ ತನ್ನನೇ ಅರಿಯಬೇಕು. ತ್ರಿಕರಣ ಘುಟಿಕೆಯಿಂದ ಜೀವಕಳೆಯನಿಕ್ಕಿ ಇವರ ಭಕ್ತರಂ ಮಾಡಿ ಶಿವಲಿಂಗಾರ್ಚನೆಯ ಮಾಡುವಾತನೀಗ ಶೀಲವಂತ. ಅವರಿಂ ಮತ್ತನಾಗಿ ವಿಸಟಂಬರಿದು, ಅವು ಹೇಂಗೆ ಪ್ರಯೋಗಿಸಿದವು ಹಾಗೆ ಅವರಿಚ್ಛೆಗೆ ತಾನು ಪ್ರಯೋಗಿಸದೆ, ಪರಿಣಾಮದಿಂದ ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿಕೊಂಬಾತನೀಗ ಲಿಂಗಸುಯಿಧಾನಿ, ಭವಿಪಾಕವ ಬಿಟ್ಟಾತ. ``ಅರ್ಪಯೇದ್ಯಃ ಸ್ವಯಂ ಪಾಕಂ ಪರಪಾಕಂ ವಿವರ್ಜಯೇತ್ ವ್ಯಾಪಾರಂ ಸಕಲಂ ತ್ಯಕ್ತ್ವಾ ಸ ರುದ್ರೋ ನಾತ್ರ ಸಂಶಯಃ ಇಂತಪ್ಪಾತನೀಗ ಲಿಂಗೈಕ್ಯನು. ಇನ್ನು ಅನ್ಯದೈವವೆಂಬವು; ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ, ಕೂರ್ಮ, ಕ್ರಕರ, ದೇವದತ್ತ, ಧನಂಜಯವೆಂಬ ದಶವಾಯುಗಳುಂಟಾಗಿ ತನ್ನ ತಾನರಿದ ಪುರುಷಂಗೆ ಇವೇ ಅನ್ಯದೈವ ಕಾಣಿಭೋ ! ``ಭೂತಲಿಂಗಮಿದಂ ಜ್ಞೇಯಂ ಪ್ರೇತಲಿಂಗಂ ಶಿವಾರ್ಚಕಃ ಭೂತಪ್ರೇತಪಿಶಾಚಾಂಶ್ಚ ದೂರತಃ ಪರಿವರ್ಜಯೇತ್ ಇಂತಪ್ಪ ಭವಿ-ಭಕ್ತರೆಂಬ ಭೇದವನರಿಯದೆ ಇದಿರಲ್ಲಿ ಅನ್ಯದೈವವುಂಟೆಂಬ ಶೀಲರೆಲ್ಲ ಶೀಲವಂತರೆ ? ಅವರಂತಿರಲಿ. ತನ್ನ ಮನದ ತಮಂಧವ ಕಳೆದು, ತನ್ನೊಳಗಿದ್ದ ಭವಿಗಳ ಭಕ್ತರ ಮಾಡಿ ತನ್ನ ವಾಯುಭೂತಂಗಳ ಅನ್ಯದೈವವೆಂದೆನಿಸದೆ, ಶಿವಸಂಸ್ಕಾರಿಗಳೆಂದೆನಿಸಿ ನಿತ್ಯ ಲಿಂಗಾರ್ಚನೆಯ ಮಾಡಬಲ್ಲ ಮಹಾಪುರುಷನ, ಶ್ರೀಹಸ್ತಂಗಳಲ್ಲಿ ಪೊಗಳುತ್ತಿದ್ದವೈ ವೇದ. ``ಅಯಂ ಮೇ ಹಸ್ತೋ ಭಗವಾನ್ ಅಯಂ ಮೇ ಭಗವತ್ತರಃ ಅಯಂ ಮೇ ವಿಶ್ವಭೇಷಜಃ ಅಯಂ ಶಿವಾಭಿಮರ್ಶನಃ, ಅಯಂ ಮಾತಾ ಅಯಂ ಪಿತಾ ಇಂತಪ್ಪ ಲಿಂಗಾರ್ಚನೆಯ ಮಾಡಬಲ್ಲಾತ ಸಂಬಂಧಿಯೆನಿಸಿಕೊಳ್ಳಬಲ್ಲಾತ. ಕೂಡಲಚೆನ್ನಸಂಗಯ್ಯಾ, ನಿಮ್ಮ ಶರಣ, ಬಸವಣ್ಣಂಗೆ ಸುಲಭವಾಯಿತ್ತು ಮಿಕ್ಕಿನವರಿಗೆಲ್ಲ ಅಸುಲಭ.
--------------
ಚನ್ನಬಸವಣ್ಣ
ಸರ್ವಗತ ಶಿವನೆಂದು ಹೇಳುವ ಮರುಳು ಮಾನವರ ಮಾತ ಕೇಳಲಾಗದು. ಅದೆಂತೆಂದೊಡೆ : ಸರ್ವಜೀವರುಗಳಂತೆ ವನಿತಾದಿ ವಿಷಯಪ್ರಪಂಚಿನಲ್ಲಿ ಮಗ್ನವಾಗಿರ್ಪನೆ ಶಿವನು ? ಸರ್ವಜೀವರುಗಳಂತೆ ತಾಪತ್ರಯಾಗ್ನಿಯಲ್ಲಿ ನೊಂದು ಬೆಂದು ಕಂದಿ ಕುಂದುವನೆ ಶಿವನು ? ಸರ್ವಜೀವರುಗಳಂತೆ ಪುಣ್ಯಪಾಪ ಸುಖದುಃಖ ಸ್ವರ್ಗನರಕಂಗಳೆಂಬ ದ್ವಂದ್ವಕರ್ಮಂಗಳ ಹೊದ್ದಿರ್ಪನೆ ಶಿವನು ? ಸರ್ವಜೀವರುಗಳಂತೆ ಉತ್ಪತ್ತಿ ಸ್ಥಿತಿ ಪ್ರಳಯಂಗಳೆಂಬ ಕಷ್ಟ ಬಂಧನಗಳಲ್ಲಿ ಸಿಲ್ಕಿ ಹೊದಕುಳಿಗೊಂಬನೆ ಶಿವನು ? ಇಂತೀ ಭೇದವನರಿಯದೆ ಸರ್ವಗತ ಶಿವನೆಂದು ನುಡಿದ ಕಡುಪಾತಕ ಜಡಜೀವಿಗಳ ಎನಗೊಮ್ಮೆ ತೋರದಿರಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅರಸಿಕೊಂಡಾಗಿ ಬಂದಲ್ಲಿ ಅರಿದರಿದು ಮಾಡಬೇಕು ಕಾಯದ ಕ್ರಿಯೆಯಿಂದ ಅರಿದರಿದು ಮಾಡಬೇಕು ಮನದ ಕ್ರಿಯೆಯಿಂದ, ಅರಿದರಿದು ಮಾಡಬೇಕು ಭಾವದ ಕ್ರಿಯೆಯಿಂದ. ಗುಣ ತ್ರಿವಿಧ ಈ ಭೇದವನರಿಯದೆ ಒಂದು ಕುರುಹಿಂದೆ ಜರಿದು ಲಿಂಗದಲ್ಲುಂಟೆಂದು ಗುರುವನುಳಿದು ಪರಿಪರಿಯ ಸೊಬಗನೋಲೈಸಿದರೇನು ? ಬೇರುಕಿತ್ತೊಗೆದ ಮರದಂತೆ ಮುಂದೆಯಿಲ್ಲದೆ ವೃರ್ಥವಾಗುವದು. ಕೆಟ್ಟುಬೀಳುವ ಸಂಗವನು ಬಿಟ್ಟುಕಳೆಯುವುದೇ ಸ್ಥಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ವೇದ ಪ್ರಣವದ ಶೇಷ. ಶಾಸ್ತ್ರ ಸಂಕಲ್ಪದ ಸಂದು. ಪುರಾಣ ಪುಣ್ಯದ ತಪ್ಪಲು. ಇಂತೀ ವೇದ ಶಾಸ್ತ್ರ ಪುರಾಣ ಆಗಮಂಗಳಲ್ಲಿ ವಾದಕ್ಕೆ ಹೋರುವ ವಾಗ್ವಾದಿಗಳು ಭೇದವನರಿಯದೆ ಹೋರಲೇಕೆ? ಹೊಲಬುದಪ್ಪಿ ಬೇವಿನ ಮರನ ಹತ್ತಿ ಬೆಲ್ಲವ ಮೆದ್ದಡೆ ಕಹಿಯೊ? ಸಿಹಿಯೊ? ಎಂಬುದನರಿತಾಗ, ಆವ ಬಳಕೆಯಲ್ಲಿದ್ದಡೂ ದೇವನ ಕಲೆಯನರಿತಲ್ಲಿ ಆವ ಲೇಪವೂ ಇಲ್ಲ, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಅತ್ತತ್ತಲಾದ ಅನುಪಮಲಿಂಗ ತನ್ನ ವಿನೋದಕ್ಕೆ ತಾನೇ ಶರಣನಾಗಿ ಜಂಗಮವಾಗಿ ಭಕ್ತನಾಗಿ ಲಿಂಗವಾಗಿ ಶಿಷ್ಯನಾಗಿ ಗುರುವಾಗಿ ಕ್ರಿಯಾಜ್ಞಾನ ಭಾವಾಚಾರವಿಡಿದು, ಪರಿಪೂರ್ಣಾಚಾರದೊಳು ನಿಂದು ವರ್ತಿಸುವ ಪರಮಾನಂದಸುಖಭೋಕ್ತನೆಂಬ ಭೇದವನರಿಯದೆ, ಭಿನ್ನವಿಟ್ಟು ನುಡಿವ ಮರುಳು ಕುನ್ನಿ ಮಾನವರ ಎನ್ನ ಗತಿಮತಿಯತ್ತ ತಾರದಿರಾ, ಗುರುನಿರಂಜನ ಚನ್ನಬಸವಲಿಂಗಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ದೇಶಿಕೇಂದ್ರ ಸಂಗನಬಸವಯ್ಯ
ಶರಣಸ್ಥಲದ ಕುರುಹಿನ ಮಾರ್ಗವನರಿಯದೆ, ನಾನು ಶರಣ ತಾನು ಶರಣನೆಂದು ನುಡಿವ ಕರ್ಮಜೀವಿಗಳ ಮುಖವ ನೋಡಲಾಗದು. ಅದೇನು ಕಾರಣವೆಂದೊಡೆ : ತಾವು ಶರಣರಾದಡೆ ತಮ್ಮ ಚಿತ್ತಿನ ಕೊನೆಯಲ್ಲಿ ಮುಸುಕಿದ ಕತ್ತಲೆಯ ಕಳೆಯಬೇಕು. ತಾವು ಶರಣರಾದಡೆ ತಮ್ಮ ಆತ್ಮನ ಸುತ್ತಿದ ಅಷ್ಟಮದಂಗಳ ಕತ್ತರಿಗಡಿಯಬೇಕು. ತಾವು ಶರಣರಾದಡೆ ತಮ್ಮ ಲಿಂಗದಲ್ಲಿ ಅತ್ತಿತ್ತ ಹರಿದಾಡುವ ಮನವ ನಿಕ್ಷೇಪವ ಮಾಡಬೇಕು. ತಾವು ಶರಣರಾದಡೆ ನಿತ್ಯಾನಿತ್ಯವನರಿದು ತತ್ತಾ ್ವತತ್ತ್ವಂಗಳ ವ್ಯಕ್ತೀಕರಿಸಿ ಮಹಾಜ್ಞಾನದ ಮೊತ್ತದಲ್ಲಿ ಸುಳಿಯಬೇಕು. ಇಂತೀ ಭೇದವನರಿಯದೆ ತುತ್ತು ಸವಿಯೆಂದುಂಡು ಮರ್ತ್ಯದ ವಿಷಯಪ್ರಪಂಚಿನ ಸುಖದಲ್ಲಿ ವ್ಯವಹರಿಸಿ, ಅಜ್ಞಾನದ ಕತ್ತಲೆಯಲ್ಲಿ ಸೆರೆಯ ಸಿಕ್ಕಿ ಮುಂದುಗಾಣದೆ ಮುಕ್ತಿಯ ಹೊಲಬುದಪ್ಪಿ ಹೋಗುವ ವ್ಯರ್ಥಪ್ರಾಣಿಗಳ ಕಂಡು ನಗುತಿರ್ದನು ನೋಡಾ ನಮ್ಮ ಅಖಂಡೇಶ್ವರ.
--------------
ಷಣ್ಮುಖಸ್ವಾಮಿ
ಆರುಸ್ಥಲದಲ್ಲಿ ಅರತೆನೆಂದು ಸಹಭೋಜನದಲ್ಲಿ ಉಂಬುವ ಅಣ್ಣಗಳು ನೀವು ಕೇಳಿರೋ. ಅಂಗದ ಮೇಲೆ ಲಿಂಗವಿರ್ದಡೇನಯ್ಯಾ, ಲಿಂಗವ ಪ್ರಾಣಕ್ಕೆ ಅವಧರಿಸದನ್ನಕ್ಕ? ಲಿಂಗದ ಅಷ್ಟವಿಧಾರ್ಚನೆಯ ಬಲ್ಲ[ರೇ]ನಯ್ಯಾ, ಅಷ್ಟ [ಮದಂಗಳ] ನಷ್ಟವ ಮಾಡಿ, ಪಂಚೇಂದ್ರಿಯಂ[ಗಳ ಬಂಧಿಸಿ], ಲಿಂಗದ ಮುಖ ನೋಡದನ್ನಕ್ಕ? ಇಂತಪ್ಪ ವರ್ಮಾದಿವರ್ಮಂಗಳ ಭೇದವನರಿಯದೆ, ಕರಸ್ಥಲದಿ ಲಿಂಗವ ಪಿಡಿದು ಸಹಭೋಜನವೆಂದು ಒಂದಾಗಿ ಉಂಬುವ ಆ ಲಿಂಗದ್ರೋಹಿಗಳ ನೋಡಿ, ನಗುತಿರ್ದ, ನಮ್ಮ ಗೊಹೇಶ್ವರಪ್ರಿಯ ನಿರಾಳಲಿಂಗ.
--------------
ಗುಹೇಶ್ವರಯ್ಯ
ಕಡೆಯಲ್ಲಿ ಮೊದಲಲ್ಲಿ ಸುವರ್ಣವೊಂದಲ್ಲದೇ ಬೇರಿಲ್ಲ ಕಾಣಿರೋ. ಬಂಗಾರ ಪ್ರಕೃತಿಯಿಂದ ಬೇರಿಟ್ಟು ತೋರಿತ್ತು ಎಂದಡೆ ಬೇರಾಗಬಲ್ಲುದೆ ಅಯ್ಯ ಶುದ್ಧ ಪರಮಾತ್ಮ ತಾನೆ ಒಂದೆರಡಾಗಿ ಜೀವ ಪರಮನೆಂದು ತೋರಿತ್ತೆಂದಡೆ ಆವಾಗ ಜೀವ, ಆವಾಗ ಪರಮನೆಂಬ ಭೇದವನರಿಯದೆ ಅರೆ ಮರುಳಾದಿರಲ್ಲ. ದೇಹಭಾವದ ಉಪಾಧಿವುಳ್ಳನ್ನಕ್ಕರ ಜೀವನು; ದೇಹಭಾವದ ಉಪಾಧಿ ಶಿವಭಾವದಲ್ಲಿ ಅಳಿದ ಬಳಿಕ ಜೀವನೆಂಬವನು ಪರಮನೆಂಬವನು ತೀವಿ ಪರಿಪೂರ್ಣ ಪರವಸ್ತು ತಾನೇ ತಾನೆಂಬಾತ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭು ತಾನೇ ಕಾಣಿರೋ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತಾನೆಂದರಿದ ಶರಣಂಗೆ ಬೇರೇನುಯಿಲ್ಲ ನೋಡಾ ತನಗೆ ಬೇರಾದುದು ಕಾಯ ಮನ ಕರಣ ಭಾವ ಕಾಣಾ. ತನಗೆ ಬೇರಾದುದು ಹೊನ್ನು ಹೆಣ್ಣು ಮಣ್ಣುಗಳ ಮೇಲೆ ಮೋಹವೆಂಬ ಅನಿತ್ಯವದು ಕಾಣಾ. ತನಗೆ ಬೇರಾದುದು ಷಡೂರ್ಮೆ ಷಡ್ವರ್ಗ ಗುಣತ್ರಯಾದಿ ದುಃಸಂಗದಲಿ ಕೂಟಭ್ರಾಂತಿ ಕಾಣಾ. ತನಗೆ ಬೇರಾದುದು ಸಂಕಲ್ಪ ಸಂಶಯದಿಂದಾದ ಭವತಿಮಿರ ಕಾಣಾ. ಇಂತು ಸಕಲ ಸಂಸ್ಕøತಿಯೆ ನಿತ್ಯವಾಗಿ ತನ್ನ ನಿಜವನ ಬೇರೆ ಮಾಡಿ ನಡೆವ ಭಾವ ಅದು ಬೇರೆ ಕಾಣಾ. ಈ ಭೇದವನರಿಯದೆ ಶಿವನ ಕಾಣಬೇಕು ಕೂಡಬೇಕೆಂಬ ಅವಿವೇಕಿಗಳಿಗೆತ್ತಣ ಶರಣಸ್ಥಲವಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮಹಾಂತನ ಕೂಡಿದ ದೇವರುಗಳೆಂಬ ಭ್ರಾಂತಿಗುಣದ ಭ್ರಷ್ಟರನೇನೆಂಬೆನಯ್ಯಾ. ಮಹಾಂತೆಂದಡೆ, ಗುರುಮಹಾತ್ಮೆ, ಲಿಂಗಮಹಾತ್ಮೆ , ಜಂಗಮಮಹಾತ್ಮೆ , ಪಾದೋದಕಮಹಾತ್ಮೆ , ಪ್ರಸಾದಮಹಾತ್ಮೆ, ವಿಭೂತಿಮಹಾತ್ಮೆ , ರುದ್ರಾಕ್ಷಿಮಹಾತ್ಮೆ, ಮಂತ್ರಮಹಾತ್ಮೆ , ಎಂಬ ಅಷ್ಟಾವರಣದ ಘನಮಹಾತ್ಮೆಯನರಿದು, ಅಷ್ಟಾವರಣವೆ ಅಂಗವಾಗಿ, ಪಂಚಾಚಾರವೆ ಪ್ರಾಣವಾಗಿ, ಅನಂತ ಸ್ಥಳಕುಳಂಗಳನೊಳಕೊಂಡು ಪರಬ್ರಹ್ಮವ ಕೂಡುವ ಸಮರಸಭಾವ ಸಕೀಲದ ಭೇದವನರಿಯದೆ, ಆಶಾಕ್ಲೇಶಂಗಳಲ್ಲಿ ಕಟ್ಟುವಡೆದು ಕಾಸು ವಿಷಯ ಮಠ ಮನೆಗೆ ಬಡಿದಾಡುವ ಭಾಷೆಭ್ರಷ್ಟರಿಗೆ ಮಹಾಂತಿನ ಘನವಿನ್ನೆಲ್ಲಿಯದೊ ? ಇಂತಪ್ಪ ಮಹಾಂತಿನ ಅರುಹು ಕುರುಹಿನ ಘನವನರಿಯದೆ ನಾನು ಮಹಾಂತಿನ ಕೂಡಿದ ದೇವರೆಂದು ಹೊರಗೆ ಆಡಂಬರ ವೇಷವ ತಾಳಿ ಜಡೆಯ ಬಿಟ್ಟಡೇನು ? ಆಲದ ಮರಕ್ಕೆ ಬೇರಿಳಿದಂತೆ. ಸರ್ವಾಂಗಕ್ಕೆ ಭಸ್ಮವ ಹೂಸಿದಡೇನು ? ಚಪ್ಪರದ ಮೇಲೆ ಕಗ್ಗುಂಬಳಕಾಯಿ ಬಿದ್ದಂತೆ. ಸ್ಥಾನ ಸ್ಥಾನಕ್ಕೆ ರುದ್ರಾಕ್ಷಿಯನಲಂಕರಿಸಿದಡೇನು ? ಹೇರಂಡಲಗಿಡ ಗೊನೆಯ ಬಿಟ್ಟಂತೆ ಕಾಣಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->