ಅಥವಾ

ಒಟ್ಟು 177 ಕಡೆಗಳಲ್ಲಿ , 24 ವಚನಕಾರರು , 173 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯಾ, ಭಕ್ತಲಿಂಗಸಮರಸಾಂಗವೆಂತಿರ್ಪುದು ನೋಡಾ ! ಜಲ-ಜಲಗಲ್ಲಿನ ಕೂಟದಂತೆ, ಮುತ್ತುಂಡ ನೀರಿನಂತೆ, ಜ್ಯೋತಿಯೊಳರತ ತೈಲದಂತೆ ಇರ್ದುದು ಮಹದಂಗದ ನಿಲವು, ನಿಶ್ಚಯವದು ಕಾಣಾ ಮಹಾಘನ ಚನ್ನವೃಷಭೇಂದ್ರಲಿಂಗ.
--------------
ದೇಶಿಕೇಂದ್ರ ಸಂಗನಬಸವಯ್ಯ
ಪೃಥಿವ್ಯಪ್ತೇಜೋವಾಯ್ವಾಕಾಶಂಗಳಲ್ಲಿ ಪೃಥಿವ್ಯಪ್ತೇಜಸ್ಸುಗಳು ಸಾಕರಾಗಳೂ ವಾಯ್ವಾಕಾಶಂಗಳು ನಿರಾಕಾರಗಳೂ ಆಗಿ, ಸ್ಥೂಲ ಸೂಕ್ಷ್ಮಕಾರಣಂಗಳಾಗಿಹವು. ಪೃಥ್ವಿಯಲ್ಲೈದು ಗುಣಗಳೂ ಜಲದಲ್ಲಿ ನಾಲ್ಕು ಗುಣಗಳೂ ಅಗ್ನಿಯಲ್ಲಿ ಮೂರು ಗುಣಗಳೂ ವಾಯುವಿನಲ್ಲಿರಡು ಗುಣಗಳೂ ಇರ್ಪವು. ಆಕಾಶದಲ್ಲೊಂದು ಗುಣವಿರ್ಪುದು. ಆತ್ಮನು ನಿರ್ಗುಣಮಾಗಿ ಸಕಲಗುಣಂಗಳಿಗೂ ತಾನು ಕಾರಣಮಾಗಿಹನು. ಅದೆಂತೆಂದೊಡೆ : ನಿರ್ಗುಣಮಾದ ಬಿಂದುಪದಾರ್ಥವು ಸಗುಣರೂಪಮಾದ ಮನುಷ್ಯರಿಗೆ ತಾನು ಕಾರಣಮಾಗಿರ್ಪಂದದಿ ಆತ್ಮನಿಹನು. ಪಂಚವರ್ಣಂಗಳು ಸತ್ವರಜಸ್ತಮೋಗುಣಂಗಳು. ನಾದ ಬಿಂದು ಕಲೆಗಳು ಬಾಲ್ಯ ಯೌವನ ಕೌಮಾರ ವಾರ್ಧಕ್ಯಂಗಳು. ಇವೆಲ್ಲವೂ ಪ್ರಪಂಚಕ್ಕೆ ಗುಣಂಗಳಲ್ಲದೆ ಆತ್ಮನ ಗುಣವಲ್ಲ. ಅಂತಪ್ಪ ಆತ್ಮನೇ ಶಿವನು, ಆಕಾಶವೇ ವಿಷ್ಣು, ವಾಯುವೇ ಬ್ರಹ್ಮನು. ಸಾಕಾರದಲ್ಲಿ ಅಗ್ನಿಯೇ ರುದ್ರನು, ಜಲವೇ ವಿಷ್ಣು. ಪೃಥ್ವಿಯೇ ಬ್ರಹ್ಮನು. ಇವು ಒಂದಕ್ಕೊಂದು ಸೃಷ್ಟಿ ಸ್ಥಿತಿ ಸಂಹಾರಹೇತುಗಳಾಗಿ, ಎಲ್ಲವೂ ಆತ್ಮನಲ್ಲಿ ಲಯವನೈದುತ್ತಿಹವು. ಅಂತಪ್ಪ ಆತ್ಮಸ್ವರೂಪಮೆತೆಂದೊಡೆ : ದೃಷ್ಟಿಗೋಚರಮಲ್ಲ, ಒಂದು ವಸ್ತುವಿನಲ್ಲಿ ಸಾಮ್ಯಗೋಚರಮಲ್ಲ. ಅದೆಂತೆಂದೊಡೆ : ವಾಯ್ವಾಕಾಶಾತ್ಮಸ್ವರೂಪಿಗಳಾದ ತ್ರಿಮೂರ್ತಿಗಳು. ವಾಯುರೂಪಮಾದ ಬ್ರಹ್ಮನೇ ಲಕ್ಷ್ಮಿಯು, ಆಕಾಶರೂಪಮಾದ ವಿಷ್ಣುವೇ ಮಹಾದೇವಿಯು, ಆv್ಮÀರೂಪಮಾದ ಶಿವನೇ ಶಾರದೆಯು. ವಾಯುರೂಪಮಾದ ಬ್ರಹ್ಮನು ಆತ್ಮರೂಪಮಾದ ಶಾರದೆಯನ್ನು ಕೂಡಿಹನು. ಆಕಾಶರೂಪಮಾದ ವಿಷ್ಣುವು ವಾಯುರೂಪಮಾದ ಲಕ್ಷ್ಮಿಯಂ ಕೂಡಿಹನು. ಆತ್ಮÀರೂಪಮಾದ ಶಿವನು ಆಕಾಶರೂಪಮಾದ ಮಹಾದೇವಿಯಂ ಕೂಡಿಹನು. ಆತ್ಮನೇ ವಿವೇಕವೆಂದು ತಿಳಿವುದು, ವಿವೇಕವೇ ಸತ್ಯಜ್ಞಾನಾಂದಸ್ವರೂಪು, ವಿವೇಕದಿಂದ ಸಕಲಪ್ರಪಂಚವೆಲ್ಲಾ ಮಿಥ್ಯೆಯಾಗಿಹುದು. ಅಂತಪ್ಪ ಸಕಲಪ್ರಪಂಚಮೆಲ್ಲವೂ ಮಿಥ್ಯವೆಂದು ತಿಳಿದು ಆ ಪ್ರಪಂಚದಲ್ಲಿ ಹೊಂದಿರ್ಪ ವಿವೇಕವೇ ಮುಕ್ತಿಯು, ಆಮುಕ್ತಿಯೇ ಶಿವನು. ಅಂತಪ್ಪ ವಿವೇಕದಲ್ಲಿನಾಹಂಭಾವವಡಗಿ, ಅಂತಪ್ಪ ವಿವೇಕವೇ ಮಹಾಲಿಂಗವು, ಅಂತಪ್ಪ ವಿವೇಕಮಿರ್ದಲ್ಲಿ ಪಾಪಗಳು ಹೊಂದದೇ ಇಹವು. ಅದುಕಾರಣ, ತಾನು ತಾನಾಗಿರ್ಪ ನಿಜಾನಂದಸುಖದೊಳೋಲಾಡುತಿರ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಷಡ್ವಿಧ ಚಕ್ರಂಗಳಿಲ್ಲದಂದು, ಷಡ್ವಿಧ ಮೂರ್ತಿಗಳಿಲ್ಲದಂದು, ಷಡ್ವಿಧ ಲಿಂಗಂಗಳಿಲ್ಲದಂದು, ಷಡ್ವಿಧ ಶಕ್ತಿಗಳಿಲ್ಲದಂದು, ಷಡ್ವಿಧ ಭಕ್ತಿಯಿಲ್ಲದಂದು, ಷಡ್ವಿಧ ಹಸ್ತಂಗಳಿಲ್ಲದಂದು, ಷಡ್ವಿಧ ಕಲೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಅಕಾರ ಉಕಾರ ಮಕಾರಗಳಿಲ್ಲದಂದು, ನಾದ ಬಿಂದು ಕಲೆಗಳಿಲ್ಲದಂದು, ಗುರು ಲಿಂಗ ಜಂಗಮವಿಲ್ಲದಂದು, ಇಷ್ಟ ಪ್ರಾಣ ಭಾವಂಗಳಿಲ್ಲದಂದು, ಧ್ಯಾನ ಧಾರಣ ಸಮಾದ್ಥಿಗಳಿಲ್ಲದಂದು, ನಾಮ ರೂಪ ಕ್ರಿಯೆಗಳಿಲ್ಲದಂದು, ಇವೇನೇನೂ ಇಲ್ಲದಂದು, ಅತ್ತತ್ತಲೆ. ಮನ ನಿರ್ಮನಂಗಳಿಲ್ಲದಂದು, ಭಾವ ನಿರ್ಭಾವಂಗಳಿಲ್ಲದಂದು, ಜ್ಞಾನ ಮಹಾಜ್ಞಾನಂಗಳಿಲ್ಲದಂದು, ಶಬ್ದ ನಿಃಶಬ್ದಂಗಳಿಲ್ಲದಂದು, ಆತ್ಮ ನಿರಾತ್ಮಂಗಳಿಲ್ಲದಂದು, ನಾನು ನೀನಿಲ್ಲದಂದು, ಅತ್ತತ್ತಲೆ. ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರ್ಭರಿತ ನಿಃಶೂನ್ಯ ಅಪರಂಪರ ನಿಷ್ಕಲಲಿಂಗ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಷಣ್ಮುದ್ರೆಗಳಿಂದತ್ತತ್ತ ಮಹಾಘನ ಪರಾಪರಜ್ಞಾನ, ಅಗೋಚರ ಅಪ್ರಮಾಣ ನಿಷ್ಪತಿ ನಿರಾಳ ನಿರವಯಲಿಂಗವು ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಗುರುವೇ, ನಿನ್ನ ಕರದಲ್ಲೆನ್ನಂ ಪುಟ್ಟಿಸಿ, ಮಂತ್ರವೆಂಬ ಜನನಿಯ ವಿವೇಕವೆಂಬ ಸ್ತನಗಳೊಳ್ ತುಂಬಿರ್ಪ ಅನುಭವಾಮೃತರಸವನೆರೆದು, ಆಚಾರಕ್ಷೇತ್ರದಲ್ಲಿ ಬೆಳೆಸುತ್ತಿರಲು, ಅನೇಕ ಕಳೆಗಳಿಂ ಕೂಡಿದ ದಿವ್ಯಜ್ಞಾನವೆಂಬ ಯೌವನಂ ಪ್ರಾದುರ್ಭವಿಸಿ, ಸತ್ಕರ್ಮವಾಸನೆಯಿಂ ಪೋಷಿತನಾಗಿರ್ಪೆನಗೆ ಮಹಾಲಿಂಗಮೊಲಿದು, ನಿನ್ನ ಭಾವದಲ್ಲಿ ಬಂದು, ಹೃದಯದಲ್ಲಿ ನಿಂದು ಕೇಳಲು, ನೀನು ಆ ಲಿಂಗಕ್ಕೆ ಮಂಗಳಸೂತ್ರಮಂ ಕಟ್ಟಿ, ಕಲಶಕನ್ನಡಿಗಳನ್ನಿಕ್ಕಿ ಪಾಣಿಗ್ರಹಣಮಂ ಮಾಡಿ ಕೊಟ್ಟಬಳಿಕ, ರತಿಯನನುಭವಿಸಿ, ಲಿಂಗಸುಖವಂ ತನಗೀವುತ್ತಿರ್ಪನಯ್ಯಾ. ಆ ಮೇಲೆ ತನ್ನ ಮನದ ಹೆದರಿಕೆಯಂ ಬಿಡಿಸಿ, ಅಂತರಂಗಕ್ಕೆ ಕರೆದುಕೊಂಡುಬಂದು, ನಿಜಪ್ರಸಾದ ರಸದಂಬುಲವಿತ್ತು, ತನ್ನೊಡನೆ ಕೂಡುವ ಚಾತುರ್ಯಮಾರ್ಗಂಗಳಂ ಕಲಿಸುತ್ತ, ಆ ಲಿಂಗಂ ತಾನೇ ತನಗೆ ಗುರುವಾದನಯ್ಯಾ. ಆ ಮೇಲೆ ಭಾವದಲ್ಲಿ ನನ್ನ ಕೂಡಣ ಚಲ್ಲಾಟದಿಂದ ಸಂಚರಿಸುತ್ತಾ, ತಾನೇ ಜಂಗಮವಾದನಯ್ಯಾ. ತನ್ನ ಭಾವದಲ್ಲಿರ್ಪ ಇಂದ್ರಿಯವಿಷಯಂಗಳೆಲ್ಲಾ ಪುಣ್ಯಕ್ಷೇತ್ರಂಗಳಾದವಯ್ಯಾ. ಶರೀರವೇ ವಿಶ್ವವಾಯಿತ್ತಯ್ಯಾ, ತಾನೇ ವಿಶ್ವನಾಥನಯ್ಯಾ. ಪಂಚಭೂತಂಗಳೇ ಪಂಚಕೋಶವಾಯಿತ್ತಯ್ಯಾ. ಆ ಲಿಂಗಾನಂದವೇ ಭಾಗೀರಥಿಯಾಯಿತ್ತಯ್ಯಾ. ಆ ಲಿಂಗದೊಳಗಣ ವಿನಯವೇ ಸರಸ್ವತಿಯಾಗಿ, ಆ ಲಿಂಗದ ಕರುಣವೇ ಯಮುನೆಯಾಗಿ, ತನ್ನ ಶರೀರವೆಂಬ ದಿವ್ಯ ಕಾಶೀಕ್ಷೇತ್ರದಲ್ಲಿ ಹೃದಯವೆಂಬ ತ್ರಿವೇಣೀ ಮಣಿಕರ್ಣಿಕಾಸ್ಥಾನದಲ್ಲಿ ನೆಲಸಿ, ಸಕಲ ಗುಣಂಗಳೆಂಬ ಪುರುಷ ಋಷಿಗಳಿಂದ ಅರ್ಚಿಸಿಕೊಳ್ಳುತ್ತಾ ನಮ್ಮೊಳಗೆ ನಲಿದಾಡುತ್ತಿರ್ದನಯ್ಯಾ. ತನ್ನ ನಿಜಮತದಿಂ ವಿಶ್ವಸ್ವರೂಪ ಕಾಶೀಕ್ಷೇತ್ರವನು ರಕ್ಷಿಸುತಿರ್ಪ ಅನ್ನಪೂರ್ಣಾಭವಾನಿಗೂ ತನಗೂ ಮತ್ಸರಮಂ ಬಿಡಿಸಿ, ತನಗೆ ಅನ್ನಪೂರ್ಣಭವಾನಿಯೇ ಆಸ್ಪದಮಾಗಿ, ಆ ಅನ್ನಪೂರ್ಣೆಗೆ ತಾನೇ ಆಸ್ಪದಮಾಗಿರ್ಪಂತನುಕೂಲವಿಟ್ಟು ನಡಿಸಿದನಯ್ಯಾ. ಇಂತಪ್ಪ ದಿವ್ಯಕ್ಷೇತ್ರದಲ್ಲಿ ನಿಶ್ಚಿಂತಮಾಗಿ ಆ ಪರಮನೊಳಗೆ ಅಂತರಂಗದರಮನೆಯಲ್ಲಿ ನಿರ್ವಾಣರತಿಸುಖವನನುಭವಿಸುತ್ತಾ ಆ ಲಿಂಗದಲ್ಲಿ ಲೀನಮಾಗಿ ಪುನರಾವೃತ್ತಿರಹಿತ ಶಾಶ್ವತ ಪರಮಾನಂದರತಿಸುಖದೊಳೋಲಾಡುತ್ತಿರ್ದೆನಯ್ಯಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಸತ್ಯವೇ ಪರಮನು, ಜ್ಞಾನನವೇ ಜೀವನು, ಆನಂದವೇ ಶರೀರವು. ಅದೆಂತೆಂದೊಡೆ: ಶರೀರಾದಿ ಸಕಲಪ್ರಪಂಚಕ್ಕೂ ಜ್ಞಾನವೇ ಮೂಲವಾಗಿರ್ಪುದು. ಆನಂದಮುಖದೊಳ್ ಬಿಂದು ಜನಿಸಿ, ಆ ಬಿಂದುವೇ ಪೃಥ್ವೀರೂಪದಲ್ಲಿ ಘನೀಭವಿಸಿ, ಪಿಂಡಾಕಾರಮಾಗಿ ಶರೀರಮಪ್ಪಂತೆ, ಜ್ಞಾನಮುಖದಲ್ಲಿ ವಾಯುವು ಜನಿಸಿ, ತೇಜೋರೂಪದಲ್ಲಿ ಘನೀಭವಿಸಿ, ಜೀವನಾರ್ಪುದು. ನಿಜದಲ್ಲಾತ್ಮನು ಜನಿಸಿ, ಆಕಾಶರೂಪದಲ್ಲಿ ಘನೀಭವಿಸಿ ಪರಮನಾಗಿರ್ಪನು. ಆನಂದಬಿಂದುಮುಖದಿಂದ ಅಹಂಕಾರವು ಜನಿಸಿ, ಜ್ಞಾನವಾಯುಗಳ ಸಂಗದಿಂ ಮನವು ಪುಟ್ಟಿತ್ತು. ನಿಜಾತ್ಮಗಳ ಸಂಗದಿಂ ಭಾವವು ಹುಟ್ಟಿತ್ತು. ತತ್ಸಾಧ್ಯಕ್ಕವೇ ಸಾಧನಗಳಾಗಿರ್ಪುದರಿಂ ಇವೇ ಕರಣಂಗಳಾಗಿ, ಅವೇ ಕರಣಂಗಳಾಗಿರ್ಪವು. ಪೃಥ್ವವೀಬೀಜಗಳಸಂಗದಿಂದ ಬೀಜಮಧ್ಯದಲ್ಲಿ ವೃಕ್ಷವು ಜನಿಸಿತ್ತು. ವೃಕ್ಷವು ಬಲಿದಲ್ಲಿ ಬೀಜವು ನಷ್ಟಮಾಗಿ, ತದಗ್ರದಲ್ಲಿರ್ಪ ಫಲಮಧ್ಯದಲ್ಲಿ ಅನೇಕಮುಖಮಾಗಿ ತೋರುತ್ತರ್ಪಂತೆ, ಜ್ಞಾನವಾಯುಗಳಸಂಗದಿಂ ಜ್ಞಾನಮಧ್ಯದಲ್ಲಿ ಮನಸ್ಸು ಹುಟ್ಟಿ, ಅದು ಬಲಿದಲ್ಲಿ. ಆ ಮೂಲಜ್ಞಾನವಳಿದು, ತತ್ಫಲರೂಪಮಾದ ಇಂದ್ರಿಯಮಧ್ಯದಲ್ಲಿ ತೋರುತ್ತಿರ್ಪುದು. ಜಲವು ಆ ಬೀಜವಂ ಭೇದಿಸಿ, ತನ್ಮಧ್ಯದಲ್ಲಿ ವೃಕ್ಷವಂ ನಿರ್ಮಿಸುವಂತೆ, ಮನಸ್ಸೇ ಜಾಗ್ರತ್ಸ್ವರೂಪದಲ್ಲಿ ಜ್ಞಾನಬ್ಥಿನ್ನವಂ ಮಾಡಿ, ತನ್ಮಧ್ಯದಲ್ಲಾನಂದವಂ ನಿರ್ಮಿಸುತ್ತಿರ್ಪುದು. ಆನಂದವೂ ನಿರಾಕಾರವೂ ಬಿಂದುವು ಸಾಕಾರವೂ ಆದುದರಿಂದ ಆನಂದವಂ ಬಿಂದುವು ಬಂದ್ಥಿಸಿರ್ಪಂತೆ, ವಾಯುವು ಜ್ಞಾನವಂ ಬಂದ್ಥಿಸಿರ್ಪುದು. ಆನಂದವು ಜ್ಞಾನದೊಳ್ಬೆರೆದಲ್ಲಿ ಶರೀರವು ಜೀವನಳೈಕ್ಯಮಾಯಿತ್ತು. ಆ ಜ್ಞಾನವು ನಿಜದೊಳ್ಬೆರೆದಲ್ಲಿಜೀವನು ಪರಮನೊಳೈಕ್ಯಮಾಯಿತ್ತು. ನಿಜಾನಂದ ಶಿವಶಕ್ತಿಗಳೇಕಮಾದಲ್ಲಿ ಜ್ಞಾನವದೊರಲಗೆ ಬೆರೆದು, ಭೇದವಡಗಿ ಅವರೆಡರ ಸಂಯೋಗ ವಿಯೋಗಕ್ಕೆ ತಾನೇ ಕಾರಣಮಾಗಿ, ನಿಜಾನಂದವೇ ತೋರುತ್ತಾ, ತಾನೊಪ್ಪುತ್ತಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ರುಚಿಯಲ್ಲಿ ಸಂಹಾರ, ಸ್ಪರುಶನದಲ್ಲಿ ಸೃಷ್ಟಿ, ರೂಪಿನಲ್ಲಿ ಸ್ಥಿತಿ, ಇಂತು ಸಂಹಾರಕ್ಕೆ ನಾದವೇ ಮೂಲವು, ಸೃಷ್ಟಿಗೆ ಬಿಂದುವೇ ಮೂಲವು, ಸ್ಥಿತಿಗೆ ಕಳೆಯೇ ಮೂಲವು. ಸೃಷ್ಟಿಗೆ ಪೃಥ್ವಿಯೇ ಆಧಾರಮಾಯಿತ್ತು ; ಸ್ಥಿತಿಗೆ ಆತ್ಮನೇ ಆಧಾರಮಾಯಿತ್ತು. ಸೃಷ್ಟಿಮೂಲಮಪ್ಪ ಸ್ಪರುಶನದಲ್ಲಿ ಆನಂದವೂ ಸಂಹಾರಮೂಲಮಪ್ಪ ರುಚಿಯಲ್ಲಿ ಜ್ಞಾನವೂ ಸ್ಥಿತಿಮೂಲಮಪ್ಪ ರೂಪಿನಲ್ಲಿ ನಿಜವೂ ನೆಲೆಗೊಂಡು, ಸೃಷ್ಟಿಯೆ ಸ್ಥಿತಿಹೇತುವಾಗಿ, ಸ್ಥಿತಿಯೇ ಸಂಹಾರಹೇತುವಾಗಿ, ಸಂಹಾರವೇ ಸೃಷ್ಟಿಹೇತುವಾಗಿ, ರುಚಿಗೆ ಅಗ್ನಿಯೂ, ಸ್ಪರುಶನಕ್ಕೆ ಜಲವೂ, ರೂಪಿಗೆ ಪೃಥ್ವಿಯೂ ಕಾರಣಮಾಗಿ, ಇಂತು ಅವಸ್ತ್ರಮಾಗಿ ತಿರುಗುತ್ತಿರ್ಪ ಪರಶಿವನಾಜ್ಞಾಚಕ್ರವನ್ನು ಗುರುಮುಖದಿಂದ ವಿಚಾರಿಸಿ ತಿಳಿದ ಮಹಾಪುರುಷನು ಈ ಚಕ್ರಕ್ಕೆ ತಗಲಿರ್ಪ ಮನವೆಂಬ ಕೀಲನ್ನು ಗುರುವಿತ್ತ ಲಿಂಗವೆಂಬ ಪರಶುವಿನಿಂ ಭಾವವೆಂಬ ಹಸ್ತದಲ್ಲಿ ಪಿಡಿದು ಖಂಡಿಸಲು, ಆ ಚಕ್ರದ ಚಲನೆ ನಿಂದಿತ್ತು. ಸ್ಪರ್ಶನದಲ್ಲಿರ್ಪ ಆನಂದರಸಮಂಗದಲ್ಲಿ ಕೂಡಿ, ಸಂಹಾರಾಗ್ನಿಯಂ ನಂದಿಸಿತ್ತು. ಆ ಸಂಹಾರದೊಳಗಿರ್ಪ ಜ್ಞಾನಾಗ್ನಿಯು ಲಿಂಗದೊಳಗೆ ಬೆರದು, ಸೃಷ್ಟಿಸ್ಥಿತಿರೂಪಮಾದ ಪೃಥ್ವಿ ಅಪ್ಪುಗಳಂ ಸಂಹರಿಸಿತ್ತು. ಸ್ಥಿತಿಯಲ್ಲಿರ್ಪ ನಿಜಲಿಂಗದಲ್ಲಿ ನಿಜಮಾಯಿತ್ತು. ಇಂತು ಆ ಚಕ್ರವಳಿಯೆ, ಆತ್ಮಭ್ರಮೆಯಳಿದು, ಆತ್ಮವೇ ಲಿಂಗಮಾಗಿ, ಆಕಾಶವೇ ಅಂಗವಾಗಿ, ವಾಯುವೇ ಆ ಎರಡರ ಸಂಗದಲ್ಲಿ ಬೆರದು ಭೇದದೋರದಿರ್ಪುದೆ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ನೊಸಲಕಣ್ಣು, ಪಂಚಮುಖ, ದಶಭುಜ, ತನುವೇಕ, ದ್ವೀಪಾದ, ಸ್ಫುಟಿಕವರ್ಣ, ಈರೇಳುಭುವನ ಹದಿನಾಲ್ಕುಲೋಕಂಗಳ ಹೊತ್ತವನಯ್ಯ. ರವಿ ಶಶಿಯ ಬೆಳಗನೊಳಕೊಂಡು ಆಕಾಶ ನಿರಾಕಾಶವೆಂಬ ನಿರ್ವಯಲಲ್ಲಿ ನಿಂದು ತೊಳಗಿಬೆಳಗುತಿಪ್ಪನು ನೋಡಾ ! ಆತಂಗೆ ಅತಳಾಧಾರವಿಲ್ಲ, ವಿತಳಾಧಾರವಿಲ್ಲ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನ ನಿರ್ಭರಿತ ನಿರವಯಲಿಂಗ ತಾನೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇಂದ್ರಿಯಗಳಲ್ಲಿ ಸುಷುಪ್ತಿಜ್ಞಾನವು, ಮನದಲ್ಲಿ ಸ್ವಪ್ನಜ್ಞಾನವು, ಭಾವದಲ್ಲಿ ಜಾಗ್ರಜ್ಞಾನವು. ಸುಷುಪ್ತಿಯಂ ಹೊಂದಿದಲ್ಲಿ ಜಾಗ್ರವು ಸ್ವಪ್ನವಾಗಿರ್ಪಂತೆ, ಜ್ಞಾನೇಂದ್ರಿಯಂಗಳಂ ಹೊಂದಿದಲ್ಲಿ ಭಾವವೇ ಮನಸ್ಸಾಗಿರ್ಪುದು. ಜಾಗ್ರವಂ ಹೊಂದಿದಲ್ಲಿ ಸ್ವಪ್ನಸುಷುಪ್ತಿಗಳಿಲ್ಲದಿರ್ಪಂತೆ, ಭಾವಜ್ಞಾನಮುದಯಮಾದಲ್ಲಿ ಮನಸ್ಸಿನಿಂದಿಂದ್ರಿಯಂಗಳಳಿದು, ನಿಶ್ಚಿಂತಮಾಗಿರ್ಪುದೇ ಕಾರಣವು. ಇಂತಪ್ಪ ಜಾಗ್ರತ್ಸ್ವಪ್ನ ಸುಷುಪ್ತಿಜ್ಞಾನಂಗಳನ್ನು ಹೊಂದಿ ಮಹಾಲಿಂಗವು ತಾಂ ತ್ರಿಮೂರ್ತಿಸ್ವರೂಪಮಂ ಧರಿಸಿ ಕ್ರೀಡಿಸುತ್ತಿರ್ಪುದು, ಜಾಗ್ರದಲ್ಲಿ ನಡೆಸುತ್ತಿರ್ಪುದೇ ರುದ್ರಮೂರ್ತಿಯು, ಸುಷುಪ್ತಿಯೋಗದಲ್ಲಿ ಆನಂದಿಸುತ್ತಿರ್ಪುದೇ ವಿಷ್ಣುಮೂರ್ತಿಯು, ಸ್ವಪ್ನದಲ್ಲಿ ಪ್ರಪಂಚಮಂ ಸೃಷ್ಟಿಸುತ್ತಿರ್ಪುದೇ ಬ್ರಹ್ಮಮೂರ್ತಿಯು. ಆ ಸ್ವಪ್ನವಂ ರಕ್ಷಿಸುತ್ತಿರ್ಪುದೇ ಸುಷುಪ್ತಿಯು, ಆ ಸ್ವಪ್ನವಂ ಸಂಹರಿಸುತ್ತಿರ್ಪುದೇ ಜಾಗ್ರವು, ಆ ಸ್ವಪ್ನವಂ ಸೃಷ್ಟಿಸುವುದೇ ಸ್ವಪ್ನವು. ಸ್ವಪ್ನದಲ್ಲಿರ್ಪವರಿಗೆ ಜಾಗ್ರವು ತಿಳಿಯದಿರ್ಪಂತೆ, ಪ್ರಪಂಚದಲ್ಲಿರ್ಪವರಿಗೆ ಪರಮನು ತಿಳಿಯದಿರ್ಪನು. ಸ್ವಪ್ನ ಸುಷುಪ್ತಿಗಳ್ತನ್ನಧೀನಮಾಗಿರ್ಪವು. ಜಾಗ್ರವು ತನ್ನಂ ಮೀರಿರುವಿದರಿಂ ಮರಣದಲ್ಲಿ ಸ್ವಾತಂತ್ರ್ಯಮಿಲ್ಲಮಾಯಿತ್ತು. ಇಂತಪ್ಪ ಅವಸ್ಥಾತ್ರಯಂಗಳಲ್ಲಿ ಹೊಂದಿರ್ಪ ಜ್ಞಾನತ್ರಯಂಗಳಂ ಮೀರಿ, ಜ್ಞಾನ ತೂರ್ಯಾವಸ್ಥೆಯಂ ಹೊಂದಿದಲ್ಲಿ, ಮಹಾಲಿಂಗನಾದ ನೀನೊಬ್ಬನಲ್ಲದೆ ಮತ್ತಾರೂ ಇಲ್ಲದೆ, ನೀನೇ ನೀನಾಗಿರ್ಪ ನಿಜಸುಖವಮೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಪಾದತೀರ್ಥವೆಂದಡೆ ಪರಾತ್ಪರವು ತಾನೆ ನೋಡಾ. ಪಾದತೀರ್ಥವೆಂದಡೆ ಪರಬ್ರಹ್ಮವು ತಾನೆ ನೋಡಾ. ಪಾದತೀರ್ಥವೆಂದಡೆ ಪರಿಪೂರ್ಣ ಮಹಾಜ್ಞಾನವು ತಾನೆ ನೋಡಾ. ಪಾದತೀರ್ಥವೆಂದಡೆ ಪರಾತ್ಪರವಾದ ಪರವಸ್ತುವು ತಾನೆ ನೋಡಾ. ಪಾದತೀರ್ಥವೆಂದಡೆ ನಿತ್ಯನಿರವಯ ನಿರಂಜನಬ್ರಹ್ಮವು ತಾನೆ ನೋಡಾ. ಪಾದತೀರ್ಥವೆಂದಡೆ ಮಹಾಘನ ಪರತರ ಪರಂಜ್ಯೋತಿ ತಾನೆ ನೋಡಾ. ಪಾದತೀರ್ಥವೆಂದಡೆ ಸಾಕ್ಷಾತ್ ಪರಶಿವನು ತಾನೆ ನೋಡಾ. ಇಂತಪ್ಪ ಪಾದತೀರ್ಥದ ಘನವ ಕಂಡು ತನುಕರಗಿ ಮನಹಿಗ್ಗಿ ಹೃದಯ ಪಸರಿಸಿ ಅಂತರಂಗದಲ್ಲಿ ವಿಶ್ವಾಸ ತುಂಬಿ, ಬಹಿರಂಗದ ಭಕ್ತಿಯಿಂದೆ ಸಾಷ್ಟಾಂಗ ನಮಸ್ಕರಿಸಿ, ಆ ಮಹಾಘನ ಪರಾತ್ಪರವಾದ ಪಾದತೀರ್ಥವನು ಹದುಳಿಗಚಿತ್ತನಾಗಿ ಹರ್ಷಾನಂದದಿಂ ಸೇವನೆಯಮಾಡಿ ಭವಸಾಗರವ ದಾಂಟಿ, ಕಾಯಜೀವದ ಸಂಸಾರವ ನೀಗಿ, ಪರಮಪವಿತ್ರ ಶಿವಮಯನಾಗಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಗ್ನಿಯಲ್ಲಿ ಕಾಣಿಸುವ ಛಾಯೆಯು ನಿರಾಕಾರ ತಮೋರೂಪುಳ್ಳದ್ದು, ಜಲದಲ್ಲಿ ಕಾಣಿಸುವ ಛಾಯೆಯು ಸಾಕಾರಸತ್ವಸ್ವರೂಪುಳ್ಳದ್ದು. ಅಗ್ನಿಯಲ್ಲಿ ರೂಪುಮಾತ್ರವೇ, ಜಲದಲ್ಲಿ ರೂಪುರುಚಿಗಳೆರಡೂ ಪ್ರತ್ಯಕ್ಷಮಾಗಿಹವು. ಸಾಕಾರಛಾಯೆ ನಿಜಮಾಗಿ, ಹಾವಭಾವವಿಲಾಸವಿಭ್ರಮ ಕಾರಣಮಾಗಿಹುದು. ನಿರಾಕಾರಛಾಯೆ ಜಡಮಾಗಿ ವೈರಭಿನ್ನಮಾಗಿಹುದು. ಗುರುದತ್ತಲಿಂಗದಿಂದ ತನ್ನ ನಿಜಭಾವಮಂ ತಿಳಿದು, ಲಿಂಗವೂ ತಾನೂ ಏಕಮೆಂಬ ಭಾವವು ಬಲಿದು ಭಿನ್ನಭ್ರಮೆಯಳಿದು ಮನಂಗೊಂಡಿರ್ಪುದೇ ಲಿಂಗೈಕ್ಯ ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಘ್ರಾಣಜಿಹ್ವಾತ್ವಕ್ಫ್ರೋತ್ರಮಾನಸಾದಿ ವಿಷಯೇಂದ್ರಿಗಳಲ್ಲಿ ಪೃಥ್ವಿವ್ಯಪ್ತೇಜೋವಾಯ್ವಾಕಾಶಾತ್ಮಾದಿ ಷಡ್ಭೂತಂಗಳು ವಿಪರೀತಸಂಬಂಧಂಗಳಾಗಿ ತೋರುತ್ತಿರ್ಪವೆಂತೆಂದೊಡೆ: ಮನಸ್ಸಿನ ವಿಷಯದಲ್ಲಿ ಪೃಥ್ವಿಯು ಸೃಷ್ಟಿಕಾರಣಮಾಗಿಹುದು. ಶ್ರೋತ್ರವಿಷಯದಲ್ಲಿ ಜಲವು ಸಂರಕ್ಷಣಕಾರಣಮಾಗಿ ಶುಚಿಯಾಗಿಹುದು. ತ್ವಗ್ವಿಷಯದಲ್ಲಗ್ನಿಯು ಸಂಹಾರಕಾರಣಮಾಗಿಹುದು. ನೇತ್ರವಿಷಯದಲ್ಲಿ ವಾಯುವು ಚಂಚಲಕಾರಣಮಾಗಿಹುದು. ಜಿಹ್ವಾವಿಷಯದಲ್ಲಾಕಾಶವು ಶಬ್ದಕಾರಣಮಾಗಿಹುದು. ನಾಸಿಕ ವಿಷಯದಲ್ಲಾತ್ಮನು ಚೈತನ್ಯಕಾರಣಮಾಗಿಹನು. ವಾಯುವಿನೊಳಗೆ ಬೆರೆದ ಆತ್ಮನೇ ಜೀವನು ; ಆತ್ಮನೊಳಗೆ ಬೆರೆದ ವಾಯುವೆ ಮನಸ್ಸು. ಪಂಚಭೂತರೂಪಮಾದ ಶರೀರಕ್ಕೆ ಜೀವನು ಕರ್ತನಾದಂದದಿ ಪಂಚಭೂತಗುಣಗ್ರಾಹಿಗಳಾದ ಇಂದ್ರಿಯಂಗಳಿಗೆ ಮನಸ್ಸೇ ಕರ್ತೃವಾಗಿ, ಆ ಇಂದ್ರಿಯಂಗಳು ಹೋದಲ್ಲಿಗೆ ಶರೀರವು ಹೋಗುವಂದದಿ, ಆ ಮನಸ್ಸೇ ಜೀವನಾಗಿ, ಆ ಮನಸ್ಸು ಹೋದಲ್ಲಿಗೆ ಜೀವನು ಹೋಗುತ್ತಿಹನು. ಅಂತಪ್ಪ ನಿಜಸ್ವರೂಪಮಾದ ಪರಮಾತ್ಮನಾಯಿತ್ತು ಕಾಣಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಶುದ್ಧ ಸಿದ್ಧ ಪ್ರಸಿದ್ಧ ಪ್ರಸಾದವೆಂತುಟೆಂದು ಹೇಳಿಹೆ ಕೇಳಿರೇ: ಶುದ್ಧಪ್ರಸಾದವು ಗುರುವಿನಲ್ಲಿ, ಸಿದ್ಧಪ್ರಸಾದವು ಲಿಂಗದಲ್ಲಿ, ಪ್ರಸಿದ್ಧಪ್ರಸಾದವು ಜಂಗಮದಲ್ಲಿ. ಇದರೊಳಗಾವುದು ಘನವೆಂಬೆನಾವುದು ಕಿರಿದೆಂಬೆ? ಘನಕ್ಕೆ ಘನ ಮಹಾಘನ ಪ್ರಸಾದವು. ಕೂಡಲಚೆನ್ನಸಂಗನಲ್ಲಿ ತ್ರಿವಿಧಪ್ರಸಾದವನು ಸುಯಿಧಾನದಲ್ಲಿ ಕೊಳಬಲ್ಲನಯ್ಯಾ ಬಸವಣ್ಣನು.
--------------
ಚನ್ನಬಸವಣ್ಣ
ಈ ಮಹಾಘನ ನೆಲೆಗೊಂಡಿಪ್ಪ ಶರಣನ ನೆಲೆ ಎಂತಿಪ್ಪುದೆಂದಡೆ: ಪೃಥ್ವಿ ಪೃಥ್ವಿಯನೆ ಕೂಡಿ, ಅಪ್ಪು ಅಪ್ಪುವನೆ ಕೂಡಿ, ಅಗ್ನಿ ಅಗ್ನಿಯನೆ ಕೂಡಿ, ವಾಯು ವಾಯುವನೆ ಕೂಡಿ, ಆಕಾಶ ಆಕಾಶವನೆ ಕೂಡಿ, ಪಂಚತತ್ವವೆಲ್ಲ ಹಂಚುಹುರಿಯಾಗಿ, ಹಿಂಚುಮುಂಚು ಮಾಡುವ ಮನದ ಸಂಚಲವಡಗಿ, ಕರ್ಮದ ಗೊಂಚಲ ನಿಂದ ನಿಶ್ಚಿಂತ ನಿಜೈಕ್ಯಂಗೆ ನಮೋ ನಮೋ ಎನುತಿರ್ದೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಕಂಗಳ ಕತ್ತಲೆಯ ಕೆಡಿಸಿದ ರವಿಯ ಚಂದದಂತಾಯಿತ್ತೆನ್ನಗುರುವಿನುಪದೇಶ. ಕನ್ನಡಿ ರವಿಯ ತನ್ನೊಳಗೆ ಇರಿಸಿದಂತಾಯಿತ್ತೆನ್ನ ಗುರುವಿನುಪದೇಶ. ಜಲದ ನಿರ್ಮಳ ಗಗನವನೊಳಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಚಂದ್ರಕಾಂತದ ಶಿಲೆಯ ಬಂದು ಚಂದ್ರಮ ಸೋಂಕಿದಂತಾಯಿತ್ತೆನ್ನ ಗುರುವಿನುಪದೇಶ. ಕೊಡನೊಳಗಣ ಬಯಲ ಹಂಚಿಕೊಂಡ ಪರಿಯಂತಾಯಿತ್ತೆನ್ನ ಗುರುವಿನುಪದೇಶ. ಇದು ಕಾರಣ, ದರ್ಪಣಕೆ ದರ್ಪಣವ ತೋರಿದಂತಾಯಿತ್ತೆನ್ನ ಗುರುವಿನುಪದೇಶ. ಮಹಾಘನ ಸದ್ಗುರು ಸಿದ್ಧಸೋಮನಾಥನೆಂಬ ಲಿಂಗದಂತಾಯಿತ್ತೆನ್ನ ಗುರುವಿನುಪದೇಶ.
--------------
ಅಮುಗಿದೇವಯ್ಯ
ಇನ್ನಷ್ಟು ... -->