ಅಥವಾ

ಒಟ್ಟು 57 ಕಡೆಗಳಲ್ಲಿ , 24 ವಚನಕಾರರು , 52 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉತ್ಪತ್ಯಕ್ಕೆ ಬ್ರಹ್ಮಂಗೆ ಸೃಷ್ಟಿಯ ಕೊಟ್ಟು, ಸ್ಥಿತಿಗೆ ವಿಷ್ಣುವಿಂಗೆ ಅವತಾರಲಕ್ಷ್ಮಿಯ ಕೊಟ್ಟು, ಲಯಕ್ಕೆ ರುದ್ರಂಗೆ ಉರಿಗಣ್ಣು, ಹತಕ್ಕೆ ಕರದಲ್ಲಿ ಕಂಡೆಹವ ಕೊಟ್ಟು, ತ್ರೈಮೂರ್ತಿಗೆ ನಿನ್ನ ವರ ಶಕ್ತಿಯನಿತ್ತು, ನೀ ತ್ರಿವಿಧ ನಾಸ್ತಿಯಾದೆಯಲ್ಲಾ. ಅನಾದಿಶಕ್ತಿಯ ಭಾವವನೊಡೆದು ಸದಾಶಿವಮೂರ್ತಿಲಿಂಗ ನೀನಾದೆಯಲ್ಲಾ.
--------------
ಅರಿವಿನ ಮಾರಿತಂದೆ
ಒಬ್ಬ ಕೆಂಚ, ಒಬ್ಬ ಕರಿಕ, ಒಬ್ಬ ಶುದ್ಧಧವಳಿತನೆಂತಯ್ಯಾ ಲಿಂಗವೆ ಒಬ್ಬರಿಗೊಬ್ಬರು ಘನವೆಂಬರು, ಅದೆಂತಯ್ಯಾ ಒಬ್ಬರಿಗೊಬ್ಬರು ಹಿರಿದೆಂಬರು, ಎಂತಯ್ಯಾ ಬ್ರಹ್ಮಂಗೆ ಪ್ರಳಯ, ವಿಷ್ಣುವಿಂಗೆ ಮರಣ ಉಂಟು. ಕೂಡಲಸಂಗಂಗಿಲ್ಲ.
--------------
ಬಸವಣ್ಣ
ಬ್ರಹ್ಮಂಗೆ ಅಂಡವ ಕೊಟ್ಟು ವಿಷ್ಣುವಿಂಗೆ ಪಿಂಡವ ಕೊಟ್ಟು ರುದ್ರಂಗೆ ಪ್ರಾಣವ ಕೊಟ್ಟು ನೀ ಹೊದ್ದದಿದ್ದ ಪರಿಯ ಹೇಳಾ ಕಾಲಾಂತಕ ಭೀಮೇಶ್ವರಲಿಂಗವೆ.
--------------
ಡಕ್ಕೆಯ ಬೊಮ್ಮಣ್ಣ
ಆದಿ ಅನಾದಿಯೆಂಬ (ಯೆಂಬುದ?) ಅಂತರಾತ್ಮನಲ್ಲಿ ತಿಳಿಯಲರಿಯದೆ ಆದಿ ದೈವವೆಂದು ಬರಿಯ ಬಹಿರಂಗದ ಬಳಕೆಯನೆ ಬಳಸಿ, ಅನ್ಯ ದೈವಂಗಳನಾರಾಧಿಸಿ ಕೆಡುತ್ತಿಪ್ಪರು ನೋಡಾ. ಅದಕೆ ತಪ್ಪೇನು, ಮಕ್ಕಳಿಗೆ ತಮ್ಮ ಮಾತೆಯೇ ದೈವ. ಮಾತೆಗೆ ತನ್ನ ಪುರುಷನೆ ದೈವ, ಪುರುಷಂಗೆ ತನ್ನ ಪ್ರಭುವೆ ದೈವ. ಪ್ರಭುವಿಗೆ ತನ್ನ ಪ್ರಧಾನನೆ ದೈವ, ಪ್ರಧಾನಂಗೆ ತನ್ನ ರಾಯನೆ ದೈವ. ರಾಯಂಗೆ ತನ್ನ ಲಕ್ಷ್ಮಿಯೆ ದೈವ, ಲಕ್ಷ್ಮಿಗೆ ತನ್ನ ವಿಷ್ಣುವೆ ದೈವ. ವಿಷ್ಣುವಿಗೆ ತನ್ನ ರುದ್ರನೆ ದೈವ, ಆ ರುದ್ರಂಗೆ ತನ್ನ ಈಶ್ವರನೆ ದೈವ. ಈಶ್ವರಂಗೆ ತನ್ನ ಸದಾಶಿವನೆ ದೈವ, ಸದಾಶಿವಂಗೆ ತನ್ನ ಸರ್ವಗತ ಶಿವನೆ ದೈವ. ಸರ್ವಗತ ಶಿವನಿಗೆ ಆಕಾಶಮಹಿಪತಿಯೆಂಬ ಮಹಾಲಿಂಗಕ್ಕೆ ಆದಿ ದೇವರುಳ್ಳಡೆ ಹೇಳಿರೆ, ಇಲ್ಲದಿರ್ದಡೆ ಸುಮ್ಮನೆ ಇರಿರೆ. ಇದು ಕಾರಣ ಷಡುದರುಶನದ ಚರಾಚರಾದಿಗಳೆಲ್ಲರೂ ತಮ ತಮಗಿಷ್ಟ ಕಾಮ್ಯವ ಕೊಡುವುದಕ್ಕೆ ವರವುಳ್ಳ ದೇವರೆಂದು ಬೆರವುತ್ತಿಹರು. ಅದಕ್ಕೆ ತಪ್ಪೇನು ಅವರಿಗಪ್ಪಂಥ, ವರವೀವುದಕ್ಕೆ ಸತ್ಯವುಳ್ಳವನಹುದು. ಆದಡೇನು, ಪ್ರಾಣಕ್ಕೆ ಪರಿಣಾಮವ ಕೊಡಲರಿಯವು. ಅವರ ಕೈಯಲ್ಲಿ ಆರಾಧಿಸಿಕೊಂಬ ದೈವಂಗಳೆಲ್ಲವು. ಪೃಥ್ವಿ ಅಪ್ಪು ತೇಜ ವಾಯು ಆಕಾಶ ಮನವೆಂಬಾರರ ಹಂಗಿನಲ್ಲಿ ಸಿಕ್ಕಿ, ವಿಭೂತಿಯನ್ನಿಟ್ಟು, ರುದ್ರಾಕ್ಷೆಯಂ ತೊಟ್ಟು ಜಪತಪ ಹೋಮ ನೇಮಂಗಳ ಮಾಡಿ ಮಾರಣ ಮೋಹನ ಸ್ತಂಭನ ಉಚ್ಚಾಟನ ಅಂಜನ ಸಿದ್ಧಿ, ಘುಟಿಕಾ ಸಿದ್ಧಿ, ಮಂತ್ರಸಿದ್ಧಿ, ದೂರದೃಷ್ಟಿ ದೂರ ಶ್ರವಣ, ಕಮಲದರ್ಶನ, ತ್ರಿಕಾಲಜ್ಞಾನ, ಪರಕಾಯಪ್ರವೇಶವೆಂಬ ಅಷ್ಟಮಹಾಸಿದ್ಧಿಗಳಂ ಲಿಂಗದಲ್ಲಿ ವರಂಬಡೆದು ತಮ್ಮ ಬೇಡಿದವರಿಗೆ ಕೊಟ್ಟು ತಮ್ಮಿಂದ ಹಿರಿಯರಿಗೆ ನಮಸ್ಕರಿಸಿ, ತಮ್ಮಿಂದ ಕಿರಿಯರಿಗೆ ದೇವರೆಂದು ಬೆರವುತ್ತಿಹರು. ಕಿರಿದುದಿನ ಅವರ ದೇವರೆನ್ನಬಹುದೆ ? ದೇಹಕೇಡಿಗಳ ಸತ್ಯರೆಂದೆನಬಹುದೆ ? ಅಸತ್ಯದಲ್ಲಿ ಅಳಿದವರ ಭಕ್ತರೆಂದೆನಬಹುದೆ ? ಬಹುರೂಪಿನ ಕಪಟಿಗಳ ನಿತ್ಯರೆನಬಹುದೆ ? ದಿನದಿನಕ್ಕೆ ಸತ್ತು ಸತ್ತು ಹುಟ್ಟುವವರ. ಅದೆಂತೆಂದಡೆ: ಬ್ರಹ್ಮನ ಜಾವವೊಂದಕ್ಕೆ ಒಬ್ಬ ಇಂದ್ರನಳಿವ ವಿಷ್ಣುವಿನ ಜಾವವೊಂದಕ್ಕೆ ಒಬ್ಬ ಬ್ರಹ್ಮನಳಿವ ರುದ್ರನ ಜಾವವೊಂದಕ್ಕೆ ಒಬ್ಬ ವಿಷ್ಣುವಳಿವ ಈಶ್ವರನ ಜಾವವೊಂದಕ್ಕೆ ಒಬ್ಬ ರುದ್ರನಳಿವ ಸದಾಶಿವನ ಜಾವವೊಂದಕ್ಕೆ ಒಬ್ಬ ಈಶ್ವರನಳಿವ ಸರ್ವಗತನ ಜಾವವೊಂದಕ್ಕೆ ಒಬ್ಬ ಸದಾಶಿವನಳಿವ ಲಿಂಗ ಶರಣರ ಒಂದು ನಿಮಿಷಕ್ಕೆ ಒಬ್ಬ ಸರ್ವಗತನಳಿವ ಲಿಂಗ ಶರಣರಿಗೆ ಅಳಿವುಳ್ಳಡೆ ಹೇಳಿರೆ ? ಇಲ್ಲದಿರ್ದಡೆ ಸುಮ್ಮನಿರಿರೆ. ಅಂತಪ್ಪ ಮಹಾಲಿಂಗವನು ಶರಣರನು ಅರಿಯದೆ ಷಡುದೇವತೆಗಳು ಮುಖ್ಯವಾದ ಮನು ಮುನಿ ದೇವ ದಾನವ ಮಾನವರೆಲ್ಲರೂ ಆರಿಸಿ ತೊಳಲಿ ಬಳಲುತ್ತಿಪ್ಪರು. ಅದು ಹೇಗೆಂದಡೆ: ಬ್ರಹ್ಮವೇದದಲ್ಲರಸುವನು. ವಿಷ್ಣು ಪೂಜೆಯಲ್ಲರಸುವನು. ರುದ್ರ ಜಪದಲ್ಲರಸುವನು. ಈಶ್ವರ ನಿತ್ಯನೇಮದಲ್ಲರಸುವನು. ಸದಾಶಿವನು ನಿತ್ಯ ಉಪಚಾರದಲ್ಲರಸುವನು. ಸರ್ವಗತ ಶೂನ್ಯದಲ್ಲರಸುವನು. ಗೌರಿ ತಪದಲ್ಲರಸುವಳು, ಗಂಗೆ ಉಗ್ರದಲ್ಲರಸುವಳು. ಚಂದ್ರ ಸೂರ್ಯರು ಹರಿದರಸುವರು. ಇಂದ್ರ ಮೊದಲಾದಷ್ಟದಿಕ್ಪಾಲಕರು ಆಗಮ್ಯದಲ್ಲರಸುವರು ಸಪ್ತ ಮಾತೃಕೆಯರು `ಓಂ ಪಟು ಸ್ವಾಹಾ' ಎಂಬ ಮಂತ್ರದಲ್ಲರಸುವರು. ಸತ್ಯಋಷಿ ದಧೀಚಿ ಗೌತಮ ವಶಿಷ* ವಾಲ್ಮೀಕಿ ಅಗಸ್ತ್ಯ ವಿಶ್ವಾಮಿತ್ರ ಇವರು ಮೊದಲಾದ ಸಪ್ತಋಷಿಯರುಗಳೆಲ್ಲಾ ತಪ, ಯೋಗ, ಆಗಮಂಗಳಲ್ಲಿ ಅರಸುವರು. ಇಂತಿವರೆಲ್ಲರಿಗೆಯೂ ಸಿಕ್ಕಿಯೂ ಸಿಕ್ಕದ ಘನವು ಶುಕ್ಲ ಶೋಣಿತವಿಲ್ಲದ ಕಾಮಿ, ಒಡಲಿಲ್ಲದ ರೂಪು, ತಲೆಯಿಲ್ಲದ ಗಜ, ಬಾಲವಿಲ್ಲದ ಸಿಂಹ, ನಿದ್ರೆಯಿಲ್ಲದ ನಿರಾಳ. ಇಂತೀ ಭೇದಮಂ ಭೇದಿಸಿ ನೋಡಬಲ್ಲಡೆ ಕಣ್ಣ ಮೇಲೆ ಕಣ್ಣುಂಟು. ಮತ್ತಾ ಕಣ್ಣ ತೆರೆದು ಅಮೃತಕಾಯದೃಷ್ಟಿಯಲ್ಲಿ ನೋಡಿದಡೊಂದೂಯಿಲ್ಲ. ನಮ್ಮ ಗುಹೇಶ್ವರ ಲಿಂಗವು ಬಚ್ಚಬರಿಯ ಬಯಲು ನಿಶ್ಚಿಂತ ನಿರಾಳನು
--------------
ಅಲ್ಲಮಪ್ರಭುದೇವರು
ನೀರಿಲ್ಲದ ಮರದ ಬೇರ ತಂದು, ಏಳು ಗುಳಿಗೆಯ ಮಾಡಿ ಎನ್ನ ಕೈಯೊಳಗೆ ಕೊಟ್ಟನು ಗೊಲ್ಲನು. ಆ ಏಳು ಗುಳಿಗೆಯನು- ಒಂದು ಬ್ರಹ್ಮಂಗೆ ಕೊಟ್ಟೆ, ಒಂದು ವಿಷ್ಣುವಿಂಗೆ ಕೊಟ್ಟೆ, ಒಂದು ಈಶúರಂಗೆ ಕೊಟ್ಟೆ, ಒಂದು ಸದಾಶಿವಂಗೆ ಕೊಟ್ಟೆ, ಒಂದು ರುದ್ರಂಗೆ ಕೊಟ್ಟೆ, ಒಂದು ಪರಮೇಶ್ವರಂಗೆ ಕೊಟ್ಟೆ, ಒಂದು ನಾ ನುಂಗಿ ಸತ್ತು ಬದುಕಿ ಕಾಯಕವ ಮಾಡುತ್ತಿರ್ದೆನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಹಜದಿಂದ ನಿರಾಲಂಬವಾಯಿತ್ತು, ನಿರಾಲಂಬದಿಂದ ನಿರವಯವಾಯಿತ್ತು, ನಿರವಯದಿಂದ ನಿರಾಕಾರವಾಯಿತ್ತು, ನಿರಾಕಾರದಿಂದ ಆದಿಯಾಯಿತ್ತು. ಆದಿಯಿಂದ ಮೂರ್ತಿಯಾದನೊಬ್ಬ ಶರಣ, ಆ ಶರಣನ ಮೂರ್ತಿಯಿಂದ ಸದಾಶಿವನಾದ. ಆ ಸದಾಶಿವಮೂರ್ತಿಗೆ ಜ್ಞಾನಶಕ್ತಿಯಾದಳು. ಆ ಸದಾಶಿವಂಗೆಯೂ ಜ್ಞಾನಶಕ್ತಿಯಿಬ್ಬರಿಗೆಯೂ ಶಿವನಾದ. ಆ ಶಿವಂಗೆ ಇಚ್ಛಾಶಕ್ತಿಯಾದಳು. ಆ ಶಿವಂಗೆಯೂ ಇಚ್ಛಾಶಕ್ತಿಯರಿಬ್ಬರಿಗೆಯೂ ರುದ್ರನಾದ. ಆ ರುದ್ರಂಗೆ ಕ್ರಿಯಾಶಕ್ತಿಯಾದಳು. ಆ ರುದ್ರಂಗೆಯೂ ಕ್ರಿಯಾಶಕ್ತಿಯಿಬ್ಬರಿಗೆಯೂ ವಿಷ್ಣುವಾದ. ಆ ವಿಷ್ಣುವಿಂಗೆ ಮಹಾಲಕ್ಷ್ಮಿಯಾದಳು. ಆ ವಿಷ್ಣುವಿಂಗೆಯೂ ಮಹಾಲಕ್ಷ್ಮಿಯಿಬ್ಬರಿಗೆಯೂ ಬ್ರಹ್ಮನಾದ. ಆ ಬ್ರಹ್ಮಂಗೆ ಸರಸ್ವತಿಯಾದಳು. ಆ ಬ್ರಹ್ಮಂಗೆಯೂ ಸರಸ್ವತಿಯಿಬ್ಬರಿಗೆಯೂ ನರರು ಸುರರು ದೇವರ್ಕಳು ಹೆಣ್ಣು ಗಂಡು ಸಚರಾಚರ ಸಹಿತವಾಗಿ ಎಂಬತ್ತುನಾಲ್ಕುಲಕ್ಷ ಜೀವಜಂತುಗಳು, ತೋರುವ ತೋರಿಕೆಯೆಲ್ಲ ಹುಟ್ಟಿತ್ತು ಕಾಣಾ, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಹಗಲೋದಿ ಬ್ರಹ್ಮಂಗೆ ಪೇಳಿದೆ, ಇರುಳೋದಿ ವಿಷ್ಣುವಿಂಗೆ ಪೇಳಿದೆ, ಉಭಯವಿಲ್ಲದ ವೇಳೆಯಲ್ಲಿ ಓದಿ ರುದ್ರಂಗೆ ಪೇಳಿದೆ, ಎನ್ನ ಓದು ಕೇಳಿ ನಿದ್ರೆಯ ಕಳೆದು ಜಾಗ್ರದಲ್ಲಿ ಕುಳಿತಿರ್ಪರು ನೋಡೆಂದನಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕ್ರಿಯಾಶಕ್ತಿ ಬ್ರಹ್ಮಂಗೆ ಹಿಂಗಿ, ಇಚ್ಛಾಶಕ್ತಿ ವಿಷ್ಣುವಿಂಗೆ ಹಿಂಗಿ, ಜ್ಞಾನಶಕ್ತಿ ರುದ್ರಂಗೆ ಹಿಂಗಿ, ಉತ್ಪತ್ತಿ ಸ್ಥಿತಿ ಲಯವೆಂಬುದಕ್ಕೆ ಮಾಯಾದೇವಿವೊಂದೆ ಗೊತ್ತಾಗಿ ಬಲ್ಲ ಬಲ್ಲವರೆಲ್ಲರ ತನ್ನಲ್ಲಿಯೇ ಅಡಗಿಸುತ್ತ ಅರಿದವರಿಗೆ ದೇವಿಯಾಗಿ, ಮರೆದವರಿಗೆ ಮಾರಿಯಾಗಿ, ಮೊರದೊಳಗೆ ಕೊಂಡು ಬಂದಿದ್ದೇನೆ. ಮೊರಕ್ಕೆ ಮೂರು ಗೋಟು, ತಾಯಿಗೆ ಅಯಿದು ಬಾಯಿ, ಬೇಡುವಾತನ ಬಾಯಿವೊಂದೆಯಾಯಿತ್ತು. ಡಕ್ಕೆಯ ದನಿಯ ಕೇಳಿ ಬೆಚ್ಚುವುದಕ್ಕೆ ಮುನ್ನವೆ ಕಾಲಾಂತಕ ಭೀಮೇಶ್ವರಲಿಂಗವನರಿಯಿರಣ್ಣಾ.
--------------
ಡಕ್ಕೆಯ ಬೊಮ್ಮಣ್ಣ
ಶಕಲಾತಿ ಬ್ರಹ್ಮಂಗೆ ಕೊಟ್ಟು, ಕಿನಕಾಪು ವಿಷ್ಣುವಿಂಗೆ ಕೊಟ್ಟು, ಸುಳುಹು ರುದ್ರಂಗೆ ಕೊಟ್ಟು, ಕೊಟ್ಟ ಕಪ್ಪಡದ ಹಣವ ಕೊಳ್ಳದೆ ಕಾಯಕವ ಮಾಡುತ್ತಿರ್ದರು ನೋಡೆಂದ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆದಿಯೆಂಬ ಅಂತರಾದಿಯಲ್ಲಿ ಅನಾದಿಯ ವಸ್ತುವನರಿತು, ಆದಿಯ ಬ್ರಹ್ಮಂಗೆ ಕೊಟ್ಟು, ಅಂತರಾದಿಯ ವಿಷ್ಣುವಿಂಗೆ ಕೊಟ್ಟು, ಅನಾದಿಯ ರುದ್ರನ ಗೊತ್ತ ಮಾಡಿ, ಗೊತ್ತನರಿದವರಲ್ಲಿ ಇಚ್ಛೆಗೆ ತಪ್ಪದೆ ಬೆಚ್ಚಂತಿರಬೇಕು. ಸದಾಶಿವಮೂರ್ತಿಲಿಂಗವನರಿವುದಕ್ಕೆ.
--------------
ಅರಿವಿನ ಮಾರಿತಂದೆ
ಒಂದೊಂದವರೆಯಿಲ್ಲದ ಯುಗ ಚಂದ್ರಾದಿಗಳು ಜನಿಸದಲ್ಲಿ ಬಿಂದು, ಲಘು, ಗುರು, ಉಭಯಂಗಳಿಲ್ಲದ ಮತ್ತೆ ಜಗವ ಸಂಧಿಸಿ ಶರಣೆನಿಸಿಕೊಂಬ ದೇವರಾರಯ್ಯ ? ಪ್ರಥಮದಲ್ಲಿ ಘನಕಲ್ಪಾಂತರಕ್ಕೆ ಎಯ್ದಿದ ದ್ವಿತೀಯದಲ್ಲಿ ಶಂಭು ಕೂಡಿದ ತೃತೀಯದಲ್ಲಿ ಪ್ರಮಾಣು ಅವಧಿಗೊಳಗಾದ ಪಂಚವಿಂಶತಿತತ್ವದಿಂದತ್ತ ಅಭೇದ್ಯವಸ್ತು ವೈದಿಕ ಮಾಯಾಭೇದವೆಂಬ ಸ್ವರೂಪವ ಕಂಡು ಪೂರ್ವಭಾಗದಲ್ಲಿ ಶಕ್ತಿಯ ಧರಿಸಿ, ಉತ್ತರಭಾಗದಲ್ಲಿ ವಸ್ತು ತಾನಾಗಿ ವಾಮಾಂಗನಾದ ವಿಷ್ಣುವಿಗೆ ಓಲೆಯನಿಟ್ಟು, ಬ್ರಹ್ಮಂಗೆ ನಾಲಗೆಯ ಕೊಟ್ಟು. ಏಕಾದಶರುದ್ರರಿಗೆ ಮುಖ್ಯನಾದ ಪರಮೇಶ್ವರಂಗೆ ಪರಮಪದವ ಕೊಟ್ಟು ನೀ ಭಕ್ತರ ಹೃತ್ಕಮಲಮಧ್ಯದಲ್ಲಿ ನಿಜವಾಸಿಯಾದೆಯಲ್ಲಾ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವೆ.
--------------
ಪ್ರಸಾದಿ ಭೋಗಣ್ಣ
ಬ್ರಹ್ಮಂಗೆ ವಾಕ್ಪರುಷ, ವಿಷ್ಣುವಿಂಗೆ ನಯನಪರುಷ, ರುದ್ರಂಗೆ ಹಸ್ತಪರುಷ, ನಮ್ಮ ಕೂಡಲಸಂಗನ ಶರಣಂಗೆ ಪಾದವೇ ಪರುಷ !
--------------
ಬಸವಣ್ಣ
ಬ್ರಹ್ಮಂಗಂಟುದಾರ, ವಿಷ್ಣುವಿಂಗೆ ಉಭಯದ ಹೊಲಿಗೆ, ರುದ್ರಂಗೆ ಟಿಬ್ಬಿ, ಮಿಕ್ಕಾದ ದೇವಕುಲಕ್ಕೆಲ್ಲಕ್ಕೂ ಅಲ್ಲಲ್ಲಿಗೆ ಕಲ್ಲಿಯ ಹೊಲಿಗೆ. ಈ ಗುಣವ ಬಲ್ಲವರೆಲ್ಲರೂ ಪ್ರಸನ್ನ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವ ಬಲ್ಲವರಹರು.
--------------
ಸೂಜಿಕಾಯಕದ ಕಾಮಿತಂದೆ
ಆಧಾರವೆಂಬ ಹಾವುಗೆಯ ಮೆಟ್ಟಿ, ವಿಷಯ ವ್ಯಸನಂಗಳೆಂಬ ಸರ್ಪಳಿಯಂ ಹಾಕಿ, ಜನನ ಮರಣಂಗಳೆಂಬ ಜಂಗವ ಕಟ್ಟಿ, ಸಲಿಲವೆಂಬ ಕೌಪವ ಹಾಕಿ, ನಿರ್ಧಾರವೆಂಬ ಕಟಿಯಂ ಧರಿಸಿ, ಅಷ್ಟಮದಂಗಳೆಂಬ ಯೋಗವಟ್ಟಿಗೆಯಂ ಹಾಕಿ, ಕುಂಡಲಿಯೆಂಬ ನಾಗಬೆತ್ತಮಂ ಪಿಡಿದು, ಭಾವವೆಂಬ ಕಪನಿಯಂ ಧರಿಸಿ, ಚಂದ್ರಸೂರ್ಯಾದಿಗಳೆಂಬ ಸರವ ಹಾಕಿ, ಓಂಕಾರವೆಂಬ ಪಾವಡವ ಸುತ್ತಿ, ಹೃದಯಧಾರಣವೆಂಬ ಸೆಜ್ಜೆಯಂ ಮಾಡಿ, ಕಂಠಸ್ಥಾನವೆಂಬ ಶಿವದಾರವಂ ಮಾಡಿ, ಮಹಾಲಿಂಗವೆಂಬ ಮೂರ್ತಿಯಂ ನೆಲೆಗೊಳಿಸಿ, ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನ ನೀಡಿ, ಅಂತರಂಗದ ಬೆಳಗಿನ ಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಆ ಲಿಂಗಕ್ಕೆ ಒಬ್ಬ ಸತಿಯಳು ಭಕ್ತನೆಂಬ ಅಡ್ಡಣಿಗೆಯ ಮೇಲೆ ಮಾಹೇಶ್ವರನೆಂಬ ಹರಿವಾಣವನಿಕ್ಕಿ, ಮಹಾಪ್ರಸಾದವ ನೆಲೆಯಂಗೊಂಡು, ಪ್ರಾಣಲಿಂಗಿಯೆಂಬ ತುಪ್ಪವನೆರೆದು, ಶರಣನೆಂಬ ಸಕ್ಕರೆಯಂ ತಳೆದು, ಆ ಸತಿಯಳು ಆ ಲಿಂಗಕ್ಕೆ ನೈವೇದ್ಯವ ತೋರುತಿರ್ಪಳು ನೋಡಾ ! ಆ ಲಿಂಗಕ್ಕೆ ನಾದವಾಲಗವಂ ಮಾಡುವುದ ಕಂಡೆನಯ್ಯ. ಅದು ಹೇಗೆಂದಡೆ- ಬ್ರಹ್ಮಂಗೆ ತಾಳ, ವಿಷ್ಣುವಿಂಗೆ ವೇಣು, ರುದ್ರಂಗೆ ಮೃದಂಗ, ಈಶ್ವರಂಗೆ ಉಪಾಂಗ, ಸದಾಶಿವಂಗೆ ಗಾಯನ, ಈ ಐವರು ನಾದದ ವಾಲಗವ ಮಾಡುವುದ ಕಂಡೆನಯ್ಯ. ಆದಿಶಕ್ತಿ ಮಂತ್ರಶಕ್ತಿ ಕ್ರಿಯಾಶಕ್ತಿ ಇಚ್ಫಾಶಕ್ತಿ ಜ್ಞಾನಶಕ್ತಿ ಈ ಐವರೂ ನಾಂಟ್ಯವನಾಡುತಿರ್ಪರು ನೋಡಾ ! ನವನಾಳದಲ್ಲಿ ನವಮೂರ್ತಿಗಳು ನವದೀಪವ ನವಧೂಪವ ಬೆಳಗುತಿರ್ಪರು ನೋಡಾ ! ಸೋಪಾನವಿಡಿದು ಪ್ರಣವಬೆಳಗಿನೊಳು ಸುಳಿದಾಡುವ ಜಂಗಮಕ್ಕೆ ಓಂ ನಮೋ ಓಂ ನಮೋ ಓಂ ನಮೋ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಬ್ರಹ್ಮ, ಗುರು, ವಿಷ್ಣು, ಲಿಂಗ, ರುದ್ರ ಜಂಗಮವೆಂಬ ವ್ರತಗೇಡಿಗಳು ನೀವು ಕೇಳಿರೊ. ಬ್ರಹ್ಮನ ಶಿರ ಹೋಯಿತ್ತು. ವಿಷ್ಣುವಿಗೆ ಹತ್ತು ಪ್ರಳಯವಾಯಿತ್ತು. ರುದ್ರನು ಧ್ಯಾನಾರೂಢನಾದ. ಆ ರುದ್ರಂಗೆ ಪರತ್ರಯ, ಈಶ್ವರಂಗೆ ಪರತ್ರಯ, ಸದಾಶಿವಂಗೆ ಪರತ್ರಯ, ಪರಶಿವಂಗೆ ಪರತ್ರಯ, ಇಂತಿವರು ಆರುಮಂದಿ ಕೂಡಿ ಗುರುವಿನ ಧ್ಯಾನದಲ್ಲಿ ಪರವಶವಾಗಿ, ಆ ಶ್ರೀಗುರುವಿದ್ದ ನೆಲೆ ಎಂತೆಂದಡೆ : ಸಪ್ತಸ್ಥಾನ ಸಹಸ್ರದಳಕಮಲದ ಜ್ಯೋತಿವರ್ಣದ ಗುರು. ಆ ಗುರುವಿಂಗೆ ಪರತ್ರಯಲಿಂಗ, ಆ ಲಿಂಗಕ್ಕೆ ಪರತ್ರಯಜಂಗಮ. ಇಂತೀ[ಅ]ನೂನಸ್ಥಳದಲ್ಲಿದ್ದ ಜಂಗಮನ ಮಣಿಪೂರಕದಲ್ಲಿದ್ದ ರುದ್ರಂಗೆ ಸರಿಯೆಂಬ ಜಂಗಮದ್ರೋಹಿಗಳ ಮಾತ ಕೇಳಲಾಗದು ಕಾಣಾ ಗೊಹೇಶ್ವರಪ್ರಿಯ ನಿರಾಳಲಿಂಗಾ.
--------------
ಗುಹೇಶ್ವರಯ್ಯ
ಇನ್ನಷ್ಟು ... -->