ಅಥವಾ

ಒಟ್ಟು 405 ಕಡೆಗಳಲ್ಲಿ , 47 ವಚನಕಾರರು , 310 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿತ್ತೇ ಅಂಗ, ಸತ್ತೇ ಪ್ರಾಣ, ಆನಂದವೇ ಶರಣನ ಕರಣ ನೋಡಾ. ನಿತ್ಯವೇ ಪ್ರಸಾದ. ಪರಿಪೂರ್ಣವೇ ಸರ್ವಾಂಗದ ಪ್ರಕಾಶ. ಪರಮಾನಂದವೇ ಪಾದಜಲ ನೋಡಾ. ಇದುಕಾರಣ, ಸಚ್ಚಿದಾನಂದ ಸ್ವರೂಪನು ನಿಮ್ಮ ಶರಣನೈ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅರಿದ ಶರಣಂಗೆ ಆಚಾರವಿಲ್ಲ, ಆಚಾರವುಳ್ಳವಂಗೆ ಲಿಂಗವಿಲ್ಲ. ಲಿಂಗವಿಲ್ಲದ ಶರಣನ ಸುಳುಹು ಜಗಕ್ಕೆ ವಿಪರೀತ, ಚರಿತ್ರವದು ಪ್ರಕಟವಲ್ಲ ನೋಡಾ ! ಸಂಸಾರಿ ಬಳಸುವ ಬಯಕೆಯನೆಂದೂ ಹೊದ್ದನು. ಸಟೆಯ ಹಿಡಿದು ದಿಟವ ಮರೆದು, ಇಲ್ಲದ ಲಿಂಗವನು ಉಂಟೆಂದು ಪೂಜಿಸುವರಾಗಿ ಆಚಾರವುಂಟು, ಆಚಾರವುಳ್ಳವಂಗೆ ಗುರುವುಂಟು, ಗುರುವುಳ್ಳವಂಗೆ ಲಿಂಗವುಂಟು, ಲಿಂಗಪೂಜಕಂಗೆ ಭೋಗವುಂಟು. ಈ ಬರಿಯ ಬಾಯ ಬಣ್ಣಕರೆಲ್ಲರೂ ಪೂಜಕರಾದರು. ಗುಹೇಶ್ವರಲಿಂಗವು ಅಲ್ಲಿ ಇಲ್ಲವೆಂಬುದನು; ಈ ವೇಷಲಾಂಛನರೆತ್ತಬಲ್ಲರು ಹೇಳಾ ಸಂಗನಬಸವಣ್ಣ.
--------------
ಅಲ್ಲಮಪ್ರಭುದೇವರು
ಶರಣ ಲಿಂಗಸಮರಸವಾಗಿ ಆಚರಿಸುವ. ಶರಣನ ಲಿಂಗ ಬ್ಥಿನ್ನವಾಗಿ ಓಸರಿಸಿಹೋದರೆ ನೋಡಿ, ಅರಸಿ ಸಿಕ್ಕಿದ ಸಮಯದಲ್ಲಿ ಆ ಲಿಂಗವ ಪರೀಕ್ಷಿಸಿ ನೋಡುವುದು. ಆರು ಸ್ಥಾನಂಗಳಲ್ಲಿ ಭಿನ್ನವಿಲ್ಲದಿರ್ದಡೆ ಧರಿಸಿಕೊಂಬುದು. ಸರ್ವಮಾಹೇಶ್ವರರು ನೋಡಿ ಶಂಕೆಯುಳ್ಳಡೆ ಬಿಡುವುದು. ಅದೆಂತೆಂದಡೆ : ಶರಣನ ಸಂಕಲ್ಪ ಸನ್ಮತ ತನ್ನದೆಂಬುದೆ ದಿಟವೆಂದು ತಾ ನಿಶ್ಚೈಸಿ ತೆತ್ತಿಗರಾದ ಸರ್ವಮಾಹೇಶ್ವರರು ಮಂತ್ರಬೋಧನೆಯ ಕರ್ಣದಲ್ಲಿ ಬೋದ್ಥಿಸಬೇಕಲ್ಲದೆ ಆ ಲಿಂಗಧ್ಯಾನಾರೂಢನಪ್ಪಾತಂಗೆ ಧೂಪ ದೀಪ ಅಂಬರಗಳೆಂಬ ಬಂಧನವೈಕ್ಯವಂ ಮಾಡಲಾಗದು. ಮಾಡಿದಡೆ ಜ್ಞಾನಿಗಳೊಪ್ಪರು. ಅದು ಕಾರಣವಾಗಿ ಶಿವಧ್ಯಾನ ನಿಶ್ಚಿಂತವ ಮಾಡಿದ ಕಾರಣ ಅವರ ತೆತ್ತಿಗರಲ್ಲವೆಂಬೆ, ದಿಟ ಕಾಣಾ ನೀ ಸಾಕ್ಷಿ ನಿಮ್ಮಾಣೆನಿಮ್ಮಅರ್ಧಾಂಗಿಯಾಣೆ ಅಮರಗುಂಡದ ಮಲ್ಲಿಕಾರ್ಜುನಾ |
--------------
ಪುರದ ನಾಗಣ್ಣ
ಚಂದ್ರಶಿಲೆಯಲ್ಲಿ ಪಾವಕ ಹುಟ್ಟಿ, ಈಡಾ ಪಿಂಗಳ ಮಧ್ಯದಲ್ಲಿ ಅನಿಲ ತುಂಬಿ, ಅರಿದರಿದು ! ನಿಮ್ಮ ನೆನೆವ ಪರಿಕರ ಹೊಸತು ! ಅರಿವಡೆ ತಲೆಯಿಲ್ಲ, ಹಿಡಿವಡೆ ಮುಡಿಯಿಲ್ಲ ! ಕೂಡಲಚೆನ್ನಸಂಗಮದೇವಾ ನಿಮ್ಮ ಶರಣನ ಪರಿಯಿಂತುಟು; ಅರಿದರಿದು !
--------------
ಚನ್ನಬಸವಣ್ಣ
ಸ್ಥೂಲತನು ಸೂಕ್ಷ್ಮತನು ಕಾರಣತನು: ಸ್ಥೂಲತನುವಿನಲ್ಲಿ ಇಷ್ಟಲಿಂಗಪ್ರತಿಷ್ಠೆ, ಸೂಕ್ಷ್ಮತನುವಿನಲ್ಲಿ ಪ್ರಾಣಲಿಂಗಪ್ರತಿಷ್ಠೆ, ಕಾರಣತನುವಿನಲ್ಲಿ ತೃಪ್ತಿಲಿಂಗಪ್ರತಿಷ್ಠೆ. ಇಂತೀ ಸ್ಥೂಲ ಸೂಕ್ಷ್ಮ ಕಾರಣವು ಮಹವು ! ಮಹದುದಯ ಹೃದಯದಲ್ಲಿ ಕೊನೆದೋರುತ್ತಿಪ್ಪ ಪರಂಜ್ಯೋತಿ, ನಿಮ್ಮ ಶರಣನ ಸರ್ವಾಂಗದಲುಂಟು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಐದು ಕಂಬದ ಗುಡಿಯ ಶಿಖರದ ಮೇಲೆ ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತ್ತಿತ್ತು ನೋಡಾ. ಆ ಲಿಂಗದ ಬೆಳಗಿನೊಳಗೆ ತನ್ನ ಮರೆದು ನಿಃಪ್ರಿಯನಾದ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವೇದಾಂತ ಸಿದ್ಧಾಂತವಪ್ಪ ತರ್ಕಮರ್ಕಟ ವಿದ್ಥಿಯ ದರ್ಶನವಾದಿಗಳ ಪರಿ ವರ್ತನೆಯಲ್ಲ; ಶರಣನ ವರ್ತನೆ ಬೇರೆ. ವೀರಶೈವ ಸಿದ್ಧಾಂತ ನಿರ್ಣಯ ನಿಜಭಕ್ತಿ. ನಿಜ ಶಿವಜ್ಞಾನ, ಪರಮ ವೈರಾಗ್ಯವನುಳ್ಳ ಸರ್ವಾಚಾರ ಸಂಪನ್ನ ಶರಣ. ಲಿಂಗಾತ್ಮಕ, ಲಿಂಗೇಂದ್ರಿಯ, ಲಿಂಗಾಂಗಸಂಗಿ, ಘನಲಿಂಗಯೋಗಿ. ಪ್ರಾಣಮುಕ್ತ, ಮನೋಮುಕ್ತ, ಶರೀರಮುಕ್ತ. ಅನಾದಿ ಕೇವಲ ಮುಕ್ತರಯ್ಯಾ ನಿಮ್ಮ ಶರಣರು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇಷ್ಟಲಿಂಗದ ವೀರಶೈವ, ಪ್ರಾಣಲಿಂಗದ ವೀರಶೈವ, ಭಾವಲಿಂಗದ ವೀರಶೈವ. ತ್ರಿವಿಧ ಲಿಂಗದಲ್ಲಿ ನೈಷ್ಠೆವರಿಯಾದ ಶರಣನ ನೀವು ನೋಡಣ್ಣ. ಇಷ್ಟಲಿಂಗವ ಕಾಯಕರದಲ್ಲಿ ಹಿಡಿದ ಮೇಲೆ ಅನ್ಯದೈವಕೆ ತಲೆವಾಗದ ವೀರಶೈವಬೇಕು ಭಕ್ತಂಗೆ, ಮನದ ಕೈಯಲ್ಲಿ ಪ್ರಾಣಲಿಂಗವ ಹಿಡಿದ ಮೇಲೆ ಮಾಯಾ [ಮೋಹನಿರಸನೆಯಾಗಿ]ರುವ ವೀರಶೈವಬೇಕು ಭಕ್ತಂಗೆ. ಭಾವದ ಕೈಯಲ್ಲಿ ಭಾವಲಿಂಗವ ಹಿಡಿದ ಮೇಲೆ ಪರಧನ ಪರವಧು ಪರಾನ್ನವ ಬಯಸದ ವೀರಶೈವಬೇಕು ಭಕ್ತಂಗೆ. ಇಂತೀ ತ್ರಿವಿಧಲಿಂಗದ ವೀರಶೈವದೊಳಿಂಬುಗೊಂಡ ತ್ರಿಕರಣಶುದ್ಧವಾದ ತ್ರಿವಿಧಸಂಪನ್ನ ಶರಣಂಗೆ ನಮೋ ನಮೋಯೆಂದು ಬದುಕಿದೆನು ಕಾಣಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಶರಣನ ನೋಟ ಭವಕ್ಕೆ ಓಟ ನೋಡಯ್ಯಾ. ಶರಣನ ದೃಷ್ಟಿ ಶಿವದೃಷ್ಟಿ ನೋಡಯ್ಯಾ. ಶರಣನ ದೇಹ ಶಿವದೇಹ ನೋಡಯ್ಯಾ. ಶರಣನ ಪಾದುಕೆ ಎಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ಚಮ್ಮಾವುಗೆ ನೋಡಾ, ಮಡಿವಾಳ ಮಾಚಣ್ಣಾ.
--------------
ಸಿದ್ಧರಾಮೇಶ್ವರ
ಇಷ್ಟಲಿಂಗಕ್ಕೆ ತೋರಿ ಮೃಷ್ಟಾನ್ನ ಹೊಡದೆನೆಂಬುದೇನು ಆ ಇಷ್ಟಲಿಂಗ ಮುಖದಲ್ಲಿ ನಿಮಗೆ ತೃಪ್ತಿ ಆಗಲಿಲ್ಲವೆ. ಆ ಶರಣನ ಮುಖದಲ್ಲಿ ಲಿಂಗತೃಪ್ತಿ ಅಹುದಲ್ಲದೆ ಅಂಗಮುಖದಲ್ಲಿ ಶರಣತೃಪ್ತಿ ಆಗಲರಿಯದು. ''ವೃಕ್ಷಸ್ಯ ವದನಂ ಭೂಮಿಃ ಲಿಂಗಸ್ಯ ವದನಂ ಜಂಗಮಂ'' ಎಂಬ ಶ್ರುತಿ ನೋಡಿ ಮರುಳಾದ ಭಂಗಿತರಿಗೆ ಶಿವಲಿಂಗ ಮುನ್ನವಿಲ್ಲವೆಂದಾತ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಸ್ಥೂಲವಾದರೇನಯ್ಯ ? ಆ ಸ್ಥೂಲಕ್ಕೆ ಕ್ರಿಯವ ನಟಿಸಬೇಕಯ್ಯ. ಸೂಕ್ಷ್ಮವಾದರೇನಯ್ಯ ? ಆ ಸೂಕ್ಷ್ಮಕ್ಕೆ ಮಂತ್ರವ ನಟಿಸಬೇಕಯ್ಯ. ಕಾರಣವಾದರೇನಯ್ಯ? ಆ ಕಾರಣಕ್ಕೆ ಸದಾಚಾರವ ನಟಿಸಬೇಕಯ್ಯ. ಮಹಾಕಾರಣವಾದರೇನಯ್ಯ? ಆ ಮಹಾಕಾರಣಕ್ಕೆ ಲಿಂಗಾಂಗಸಮರಸವÀ ನಟಿಸಬೇಕಯ್ಯ. ಪರಕಾರಣವಾದರೇನಯ್ಯ? ಆ ಪರಕಾರಣಕ್ಕೆ ನಿಃಶಬ್ದ ನಿರಾಳವ ನಟಿಸಬೇಕಯ್ಯ. ಜ್ಞಾನಕಾರಣವಾದರೇನಯ್ಯ? ಆ ಜ್ಞಾನಕಾರಣಕ್ಕೆ ಸ್ವಾನುಭವಸಿದ್ಭಾಂತವ ನಟಿಸಬೇಕಯ್ಯ. ಇಂತೀ ಷಡ್ವಿಧ ಅಂಗವನರಿತು ಆಚರಿಸಬಲ್ಲ ಶರಣನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹಲವು ಕಡೆಗೆ ಹರಿದಾಡುವ ಮನವ ನಿಲಿಸಬಲ್ಲ ಶರಣನ ಅಂತರಂಗದಲ್ಲಿ ಪರಬ್ರಹ್ಮಲಿಂಗವಿರ್ಪುದು ನೋಡಾ. ಆ ಲಿಂಗದಲ್ಲಿ ತನ್ನ ಮರೆದು ಇರಬಲ್ಲ ಹಿರಿಯರ ಎನಗೊಮ್ಮೆ ತೋರಿಸಯ್ಯ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿಜವನರಿಯದ ಶರಣರು, ಲಿಂಗೈಕ್ಯರು, ಗಿರಿ ಗಗನ ಗಹ್ವರದೊಳಗಿದ್ದಲ್ಲಿ ಫಲವೇನೊ? ಮನವು ಲೇಸಾಗಿದ್ದಡೆ ಸಾಲದೆ? ಪರಮಸುಖಿಯಾಗಿರ್ಪ ಶರಣನ ಹೃದಯದಲ್ಲಿ ಸದಾಸನ್ನಹಿತನು ಸಕಳೇಶ್ವರದೇವ.
--------------
ಸಕಳೇಶ ಮಾದರಸ
ಇನ್ನೊಂದು ಪ್ರಕಾರದ ಷಡ್ಲಿಂಗನ್ಯಾಸಸ್ಥಲವೆಂತೆಂದಡೆ : ಪೃಥ್ವಿಯೇ ಅಂಗವಾದ ಭಕ್ತನ ಸುಚಿತ್ತಹಸ್ತದಲ್ಲಿ ಆಚಾರಲಿಂಗ ನ್ಯಾಸವಾಗಿಹುದು. ಅಪ್ಪುವೆ ಅಂಗವಾದ ಮಹೇಶ್ವರನ ಸುಬುದ್ಧಿಹಸ್ತದಲ್ಲಿ ಗುರುಲಿಂಗ ನ್ಯಾಸವಾಗಿಹುದು. ಅನಲಾಂಗವಾದ ಪ್ರಸಾದಿಯ ನಿರಹಂಕಾರಹಸ್ತದಲ್ಲಿ ಶಿವಲಿಂಗ ನ್ಯಾಸವಾಗಿಹುದು. ವಾಯುವೇ ಅಂಗವಾದ ಪ್ರಾಣಲಿಂಗಿಯ ಸುಮನವೆಂಬ ಹಸ್ತದಲ್ಲಿ ಚರಲಿಂಗ ನ್ಯಾಸವಾಗಿಹುದು. ವ್ಯೋಮಾಂಗವಾದ ಶರಣನ ಸುಜ್ಞಾನಹಸ್ತದಲ್ಲಿ ಪ್ರಸಾದಲಿಂಗ ನ್ಯಾಸವಾಗಿಹುದು. ಆತ್ಮಾಂಗವಾದ ಐಕ್ಯನ ಭಾವಹಸ್ತದಲ್ಲಿ ಮಹಾಲಿಂಗ ನ್ಯಾಸವಾಗಿಹುದು ನೋಡಾ. ಇದಕ್ಕೆ ಈಶ್ವರ್ದೋವಾಚ : ``ಆಚಾರಂ ಚಿತ್ತಹಸ್ತಂ ಚ ಬುದ್ಧಿಹಸ್ತೇ ಗುರುಸ್ತಥಾ | ಶಿವಲಿಂಗಂ ಚ ಅಹಂಕಾರೇ ಚರಲಿಂಗ ಮನೇ ತಥಾ || ಪ್ರಸಾದಂ ಜ್ಞಾನಹಸ್ತೇ ಚ ಭಾವಹಸ್ತೇ ಮಹಸ್ತಥಾ | ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಚ ವರಾನನೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಪರಶಿವನ ನಿಜಸ್ವರೂಪವೇ ಬ್ರಹ್ಮಾಂಡವಾಗಿ, ಪಿಂಡಾಂಡವಾಗಿ, ಕರಣಂಗಳಾಗಿ, ಕರ್ಮಂಗಳಾಗಿ, ಸೃಷ್ಟಿ ಸ್ಥಿತಿ ಲಯಂಗಳಾಗಿ, ನೋವು ಸಾವುಗಳಾಗಿ, ತಾನೇ ಇದ್ದದ್ದು, ಸರ್ವವು ತಾನೆಂಬುದು ತಾನೇ ಮರೆತು, ಶಿಶುವು ತಾನಾಡುವ ಆಟದಲ್ಲಿ, ಕಲ್ಲಿಗೆ ಕಾಲ ತಗಲಿಸಿಕೊಂಡು ಅಳುವಂತೆ, ವಿಷಯದಿಚ್ಛೆಯಲ್ಲಿ ನೊಂದು ಶೋಕಿಸುತ್ತಿರಲು, ಆ ಶಿಶುವಿಗೆ ತಂದಿ ಬಂದು ಕಣ್ಣೀರೊರಸಿ, ಆ ಕಲ್ಲತಗಲಿದ ಕಾಲ್ನೋವಿಗೆ ಔಷದ್ಥಿಯ ಮಾಡಿ, ತನ್ನ ಹೆಂಡತಿಯ ಕರೆದು, ಮಗನ ಸಮಾಧಾನಮಾಡೆಂದು ಹೇಳಲು, ಆ ತಾಯಿಯೆತ್ತಿಕೊಂಡು, ಕಣ್ಣು, ಮೂಗು, ಕಿವಿ, ಬಾಯಿ, ಮೈ ಧೂಳವನ್ನೆಲ್ಲಾ ತಾ ಹೊದ್ದ ಮೇಲ್‍ಸೆರಗಿಲೊರಸಿ ಮೊಲೆಯುಣಿಸಿ, ತೊಟ್ಟಿಲೊಳು ಹಾಸಿ ಮಲಗಿಸಿ ಹೊಚ್ಚಿ ಹೆಂಗ ಮಂಗಲ ನುಡಿ, ನಮ್ಮಪ್ಪ ಅರಸ ಛೀಮಾರಿ ಛೀ ಛೀ ಛೀ ಅಳುಳುಳುಳುಳುಳೆಂದು ಹಾಡುತ್ತಿರಲು, ಆ ಶಿಶುವು ಆ ಔಷಧದಿಂದೆ ನೋವು ಹೋಗಿ, ತಾಯಿಯ ಮೊಲೆಹಾಲಿನಿಂದೆ ಹಸಿವು ಅಡಗಿ, ಆ ಜೋಗುಳಹಾಡಿಗೆ ಸೊಂಪುದೋರಿ ಸುಮ್ಮನಾಗಿ, ತೊಟ್ಟಿಲ ತೂಗುವುದರೊಳಗೆ ಜೋಕಬಂದು, ಸುಖನಿದ್ರೆಯೊಳ್ ಮೈಮರೆದಿರಲು, ಮಾಯೆಸರ್ಪನು ಬಂದು ಕಚ್ಚಿ ಕಾಣಿಸಿಕೊಳ್ಳದೆ ಹೋಗಲು, ಆ ತಾಯಿ ತಂದಿ ಉಂಡು ಮಂಚದಮ್ಯಾಲೆ, ರತಿಸಂಭೋಗಸುಖನಿದ್ರೆಯಲ್ಲಿರೆ, ಮಾಳಿಗೆ ಬಿದ್ದು ಮರಣವಾಗಲು, ಆ ತಾಯಿ ತಂದಿಯು ಮಗ ಈ ಮೂವರು ಮಾಳಿಗೆ ಬಿದ್ದು ಮರಣವಾದರೆಂಬುದಾಯಿತ್ತಲ್ಲದೆ, ಆ ಶಿಶುವಿನ ಸಾವು ಆರು ಅರಿಯರು. ಇದರ ಹಾಂಗೆ ತನ್ನ ವಿಷಯದಿಚ್ಛೆಗೆ ಓಡ್ಯಾಡಿ ಕಾಲನ ಬಾಧೆಗೆ ಬಿದ್ದು ಭವದುಃಖದೊಳಗಿರುವ ನರರಿಗೆ ತಾನೇ ಗುರುವಾಗಿ ಬಂದು, ಸಾನಂದಸಿದ್ಧರಾಮನು ಹೀನ ನರಕಿಗಳ ತಗೆದಂತೆ, ಆ ಶಿಷ್ಯನ ಕೈಹಿಡಿದೆತ್ತಿ ಸರ್ವಕರಣಗಳ ಶುದ್ಧಗೊಳಿಸಿ, ಶಿಕ್ಷೋಪದೇಶವಮಾಡಿ, ತನ್ನ ಚಿತ್‍ಶಕ್ತಿಯ ಕರಸಂಜ್ಞೆ ನುಡಿನೋಟದಿಂದೆ ತೋರಿ ಹೇಳಿ ಕಾಣಿಸಿಕೊಡಲು, ಆ ಚಿತ್‍ಶಕ್ತಿ ಹತಿಗೊಂಡು ನಿತ್ಯತ್ವದ ನುಡಿ ಮನದ ಮೈಲಿಗೆಯ ತೊಳೆದು ತನ್ನ ಮೇಲುಮುಸುಕಿದ ಮಹಾಜ್ಞಾನದ ಬೆಳಗಿನಲ್ಲಿ ಸರ್ವ ಅವಯವಂಗಳ ಕಸರು ಕಳೆದು, ಆತ್ಮಜ್ಞಾನದೊಳಗೆ ಅಖಂಡಜ್ಞಾನದಲ್ಲಿರಿಸಿ, ಬ್ರಹ್ಮಜ್ಞಾನವನಾಚ್ಛಾದಿಸಿ, ನಿಜಜ್ಞಾನದಲ್ಲಿ ಲೋಲ್ಯಾಡಿ, ಅರುವಿನ ಹರುಷದಲ್ಲಿ ಹಿಂದಿಂದು ಹೇಯವಾಗೆ ಮುಂದಿಂದು ಹಿತವಚನ ಮುಂದೆ ಅಲ್ಲಲ್ಲಾ, ಸರ್ವವು ಸುಳ್ಳು ಸುಳ್ಳೆಂಬ ಮಹದರುವಿನ ಅನುಭವದ ಶಿವೋಹಂ ಶಿವೋಹಂ ಶಿವೋಹಂ, ಸೋಹಂ, ಸೋಹಂ, ಸೋಹಂ, ನಮೋ ನಮೋ, ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಓಂ ಏಂ ಏಂ ಏಂ ಏಂ ಏಂ ಎಂಬ ಮಹಾನಾದದೊಳಗೆ ಆ ಕಾಲನ ಬಾಧೆ ಹೋಗಿ, ಭವದುಃಖ ಹಿಂಗಿ, ಚಿತ್ತಚಿನ್ಮಯ ಸವಿಗೊಂಡು ನಿತ್ಯ ತೃಪ್ತನಾಗಿ, ನಿಜಲೀಲಾನುಭವದ ಶಬ್ದಕ್ಕೆ ಮುಗ್ಧನಾಗಿ, ಆತ್ಮಜ್ಞಾನದ ನಲಿಗಿನೊಳಗೆ ಲೋಲಗೊಂಡು, ಎಚ್ಚರಡಗಿ ಅಚ್ಚಸುಖದಲ್ಲಿ ಸಮರಸವಾಗಿರಲು, ಸಾವು ಬಂದು ಸಾವು ಸತ್ತು ಸಾವು ಸಾವಾಗಲು ಆ ಶರಣನ ಅಂಗ, ಮನ, ಭಾವ, ಆತ್ಮಸಂಗವೊಂದಾಗಿರೆ ಶ್ವಾಸ ಸುಳುಹುಗಳೆಲ್ಲಾ ನಿಂದು, ಚಿತ್ತ ಸತ್ತು ಸ್ವಸ್ಥವಾಗಲು, ನಿಜಶರಣನ ಅರುವು ಲಿಂಗದಲ್ಲಿ ಪರವಶರಾಗಿಹರೆಂಬುದು ಬಲ್ಲರಲ್ಲದೆ ಅರುವು ಮರೆಗೊಂಡಿರ್ಪ ನಿರ್ಬೈಲ ಆರೂ ಅರಿಯರೋ. ಆ ಶರಣ ತನ್ನರುವು ತಾನರಿಯ, ಸತ್ತ ಸುದ್ದಿ ಸತ್ತವ ಅರಿಯ, ಬದುಕಿದವ ಬಲ್ಲ. ಇದೇ ನಿಜಮುಕ್ತಿ ; ಇದನರಿಯದೆ, ತತ್ವವನೋದಿ ಗಾಳಿಗೊದರುವ ಒಡಕುಮಡಕಿಯ ಸ್ವರವ ಕಡಿಮಿಯಾದ ನಾದವನು ಆಲಿಸಿ, ನಾಹಂಬ್ರಹ್ಮವ ನುಡಿದು, ಕೋಹಂಬ್ರಹ್ಮವ ಬೆರೆತು, ಮುಂದೆ ಸೋಹಂ ಬ್ರಹ್ಮವ ಹುಡುಕದೆ, ದಾಸೋಹಂಬ್ರಹ್ಮವ ಕೂಡದೆ, ನಮಗೆ ಸಾವು ಇಲ್ಲಾ, ನಮ್ಮ ದೇಹ ಬೈಲು ಮಾಡುವೆವೆಂದು ಅದು ತಪ್ಪಲಿಕ್ಕೆ ಪಂಚತತ್ವದೇಹವು, ಪಂಚತತ್ವಕ್ಕೆ ಕೂಡಿಸುವೆವು ಎಂಬುವರು. ಅದು ಹಾಂಗಿರಲು, ಆ ದೇಹ ಬಯಲುವಾದರೇನು ? ಆ ಬಯಲಿಗೆ ಸಾವು ಇಲ್ಲವು. ತಾವು ಮಾಡಿದರೆ ಆಗುವುದೆ ? ತಾನೇ ಆಗಲರಿಯದು. ಎಷ್ಟು ನಿಜ ತಿಳಿದರೇನೋ ? ಅಷ್ಟು ತಾವಾಗದೇ, ಭ್ರಷ್ಟರಾಗಿ ಹೋದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇನ್ನಷ್ಟು ... -->