ಅಥವಾ

ಒಟ್ಟು 38 ಕಡೆಗಳಲ್ಲಿ , 16 ವಚನಕಾರರು , 38 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾವು ಮೀರಿದ ಸ್ಥಲದ ವಿರಕ್ತರೆಂದು ಹೇಳುವ ಅಣ್ಣಗಳಿರಾ ನೀವು ಮೀರಿದ ಸ್ಥಲದ ವಿರಕ್ತರಾದ ಬಗೆಯ ಹೇಳಿರಣ್ಣ. ಅರಿಯದಿರ್ದಡೆ ಹೇಳಿಹೆ ಕೇಳಿರಣ್ಣ, ಮೀರಿನಿಂದ ವಿರಕ್ತನ ವಿಚಾರದ ಭೇದವ. ಅನಾದಿ ಚಿದ್ಬಿಂದುವ ಅಧೋದ್ವಾರದಲ್ಲಿ ಬೀಳಗೊಡದೆ, ಸದ್ಗುರು ಕರುಣಕಟಾಕ್ಷೆಯಿಂದ ಮಹಾಮಂತ್ರವ ಪಡೆದು, ಆ ಚಿನ್ಮಂತ್ರ ಬಲದಿಂದ ಊಧ್ರ್ವಕ್ಕೆ ಮುಖವ ಮಾಡಿ, ಮೇಲುಗಿರಿ ಸಿಂಹಾಸನದಲ್ಲಿ ಮೂರ್ತಗೊಂಡಿರುವ ಪರಶಿವಲಿಂಗದ ಮಹಾಬೆಳಗಿನೊಳಗೆ ಏಕಾರ್ಥವ ಮಾಡಬೇಕು. ಜಿಹ್ವೆಯ ತುದಿಯ ಅಜ್ಞಾನದ ಹುಸಿ ಕುಶಬ್ದ ಕುರುಚಿಯ ನೀಗಬೇಕು. ಸದ್ಗುರುಮುಖದಿಂದ ನಿಜನುಡಿ, ಘನಪಾದೋದಕ, ಪ್ರಸಾದಮಂತ್ರವ ಪಡೆದು, ಸದ್ಭರ್ಮರೂಪದಿಂದಿರಬೇಕು. ಸರ್ವಾಚಾರಸಂಯುಕ್ತವಾದ ಭಕ್ತನೆ ನಿಜಮುಕ್ತಿಮಂದಿರವೆಂದು, ಭಾವ ಮನ ಕಾಯ ತುಂಬಿ, ಪರಿಪೂರ್ಣ ತೃಪ್ತನಾದಾತನೆ ಮೀರಿದ ಸ್ಥಲದ ವಿರಕ್ತ ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಜೀವಾತ್ಮ ಅಂತರಾತ್ಮನ ಸುದ್ದಿಯ ಬೆಸಗೊಂಬಡೆ ಹೇಳಿಹೆ ಕೇಳಿ ಭೋಃ ಹುಸಿಯ ಸಂಕಲೆಯಾಗಿದ್ದಲ್ಲಿ ಕಾದುಕೊಂಡಿದ್ದನೊಬ್ಬ. ಕಥೆ ಕನಸ ಮಾಡಿ ಹೇಳುತ್ತಿದ್ದನೊಬ್ಬ. ಪರಾಪರಕ್ಕೆ ಹೋಗಿ ಪರಮನ ಸುದ್ದಿಯ ಕೊಂಡುಬರುತ್ತಿಪ್ಪ ಅವರಿಬ್ಬರನೂ ಕೆಡೆಮೆಟ್ಟಿ ಹೋಹಾಗ, ಲೋಕ ನಿರ್ಬುದ್ಧಿಗೊಂಡಿತ್ತು, ಕೂಡಲಸಂಗಮದೇವಾ.
--------------
ಬಸವಣ್ಣ
ಆ ಮಹಾಂತಿನ ಘನವೆಂತೆಂದಡೆ, ಹೇಳಿಹೆ ಕೇಳಿರಣ್ಣಾ.
--------------
ಮೋಳಿಗೆ ಮಾರಯ್ಯ
ಅರ್ಪಿತ ಅವಧಾನದ ಕ್ರಮವ ವಿಸ್ತರಿಸಿ ಒಪ್ಪವಿಟ್ಟು ಹೇಳಿಹೆ ಕೇಳಿರಣ್ಣ. ಭಿನ್ನಭೋಜನ ಪ್ರಸಾದಭೋಜನ ಸಹಭೋಜನವೆಂದು ಲಿಂಗಾರ್ಪಿತ ಮೂರು ಪ್ರಕಾರವಾಗಿಪ್ಪುದು. ಮುಂದಿಟ್ಟು ಸಕಲಪದಾರ್ಥವಂ ಇಷ್ಟಲಿಂಗಕ್ಕೆ ಕೊಟ್ಟು ಆ ಲಿಂಗಮಂ ಸೆಜ್ಜೆಯರಮನೆಗೆ ಬಿಜಯಂಗೈಸಿ ಅಂದಂದಿಂಗೆ ಬಂದ ಪದಾರ್ಥಮಂ ಲಿಂಗಕ್ಕೆ ಕೊಡದೆ ಕೊಂಬುದೀಗ ಭಿನ್ನಭೋಜನ. ಮುಂದಿಟ್ಟ ಸಕಲಪದಾರ್ಥಂಗಳು ಲಿಂಗಕ್ಕೆ ಒಂದು ವೇಳೆ ಕೊಡದೆ ಎತ್ತಿದ ಭೋಜ್ಯಮಂ ಲಿಂಗಕ್ಕೆ ಕೊಟ್ಟು ಆ ಭೋಜ್ಯಮಂ ಇಳುಹದೆ ಕೊಂಬುದೀಗ ಪ್ರಸಾದಭೋಜನ. ಮುಂದಿಟ್ಟು ಸಕಲಪದಾರ್ಥಂಗಳ ಲಿಂಗಕ್ಕೆ ಮೊದಲು ಕೊಟ್ಟು ಮತ್ತೆ ಎತ್ತಿದ ಭೋಜ್ಯಮಂ ಲಿಂಗಕ್ಕೆ ಕೊಟ್ಟು ಕೊಂಬುದೀಗ ಸಹಭೋಜನ. ಇಂತೀ ತ್ರಿವಿಧ ಭೋಜನದ ಅಂತರಂಗದನ್ವಯವ ನಿಮ್ಮ ಶರಣರೇ ಬಲ್ಲರಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಮನ ಬುದ್ಧಿ ಚಿತ್ತ ಅಹಂಕಾರ ಜ್ಞಾನವೆಂಬ ಪಂಚಕರಣಂಗಳಿರವ ಹೇಳಿಹೆ ಕೇಳಿರಯ್ಯಾ. ಮನವೆಂಬುದು ಸಂಕಲ್ಪ ವಿಕಲ್ಪಕ್ಕೊಳಗಾಯಿತ್ತು. ಇಲ್ಲದುದ ಕಲ್ಪಿಸುವುದೆ ಸಂಕಲ್ಪ. ಇದ್ದುದನರಿಯದುದೆ ವಿಕಲ್ಪ. ಕಲ್ಪಿಸಿ ರಚಿಸುವುದೆ ಬ್ಧುಯಯ್ಯಾ. ಕಲ್ಪಿಸಿ ಮಾಡುವುದದು ಚಿತ್ತವಯ್ಯಾ. ಮಾಡಿದುದಕ್ಕೆ ನಾನೆಂಬುದು ಅಹಂಕಾರವಯ್ಯಾ. ಮಾಡುವ ನೀಡುವ ಭಾವ ಶಿವಕೃತ್ಯವೆಂದಡೆ ಜ್ಞಾನ ವೈರಾಗ್ಯವಯ್ಯಾ. ಅರಿಯದ ಅರಿವು ಮಹಾಜ್ಞಾನ, ಮೋಕ್ಷದ ಇರವು ನೋಡಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹೊತ್ತುಹೊತ್ತಿಗೆ ನಿತ್ಯರ ಸಂಗವ ಮಾಡಿ, ಕರ್ತೃವೆಂಬುದನರಿದೆ, ನಾ ಭೃತ್ಯನೆಂಬುದನರಿದೆ. ಸತ್ಯವೆಂಬುದನರಿದು, ಸದಾಚಾರವಿಡಿದು, ತುದಿ ಮೊದಲು ಕಡೆ ನಡುವೆ, ಆದಿ ಅನಾದಿಗೆ ನಿಲುಕದ ಘನವೇದ್ಯ ಲಿಂಗವ ಕಂಡೆ. ಆ ಲಿಂಗವ ಸೋಂಕಲೊಡನೆ ಲಿಂಗದಂತಾದೆ. ಜಂಗಮವ ಮುಟ್ಟಿ ಪೂಜಿಸಲೊಡನೆ ಜಂಗಮದಂತಾದೆ. ಪ್ರಸಾದವ ಕೊಳ್ಳಲಾಗಿ, ಆ ಪ್ರಸಾದದಂತಾದೆ. ಇನ್ನು ಪರವಿಲ್ಲವೆಂದು ಪ್ರಸಾದದಲ್ಲಿಯೆ ತಲ್ಲೀಯವಾದೆ. ಇದ ಬಲ್ಲವರು ನೀವು ಕೇಳಿ. ಎನ್ನ ಹಮ್ಮು ಬಿಮ್ಮು ಉಂಟೆನಬೇಡ. ಇದಕ್ಕೆ ದೃಷ್ಟವ ಹೇಳಿಹೆ ಕೇಳಿರಣ್ಣಾ ! ಕೀಡಿ ತುಂಬಿಯ ಸ್ನೇಹದ ಹಾಗೆ. ಶರಣನಾದರೆ ಜ್ಯೋತಿ ಜ್ಯೋತಿಯ ಮುಟ್ಟಿದ ಹಾಗೆ. ದರ್ಪಣ ದರ್ಪಣದೊಳಗೆ ಅಡಗಿದ ಹಾಗೆ. ಇದರೊಪ್ಪವ ಬಲ್ಲವರು ತಪ್ಪದೆ ಎನ್ನಂಗ, ಬಸವಪ್ರಿಯ ಕೂಡಲಚೆನ್ನಬಸವಣ್ಣ .
--------------
ಹಡಪದ ಅಪ್ಪಣ್ಣ
ವ್ರತವ ಮಾಡಿಕೊಂಡೆವೆಂದು ಗನ್ನಘಾತಕತನದಲ್ಲಿ ನಡೆವಧಿಕರ ನೋಡಾ. ತನುವಿಂಗೆ ವ್ರತವೋ, ಮನಕ್ಕೆ ವ್ರತವೋ ? ಮಡಕೆಗೆ ವ್ರತವೆಂದು ಸಡಗರಿಸುತ್ತಿರ್ಪ ಗತಿಹೀನರ ಕಂಡು ನಾಚಿತ್ತೆನ್ನ ಮನ. ದಿಟದ ವ್ರತವ ಹೇಳಿಹೆ ಕೇಳಿರಣ್ಣಾ. ಹುಸಿ ಕಳವು ಪಾರದ್ವಾರ ಕೊಲೆ ಅತಿಚಾಂಡಾಲಮಂ ಬಿಟ್ಟು, ಪರದ್ರವ್ಯಕ್ಕೆ ಕೈಯಾನದೆ, ಪರರ ಬಾಗಿಲಲ್ಲಿ ನಿಂದು, ನೆರೆ ಹೊಲಬುಗೆಟ್ಟು, ಅರಿವುಳ್ಳವರು ನಾವೆಂದು ಬರಿದೆ ಹಲಬುತ್ತಿರ್ಪರ ಮಾತಿಗೆ ಒಡಲಪ್ಪುದೆ ಶೀಲ್ಞೂ? ತನ್ನ ಸುಬುದ್ಧಿಯಿಂದ, ಸುಕಾಯಕದಿಂದ, ಗುರುಲಿಂಗಜಂಗಮಕ್ಕೆ ತನುಮನಧನವಂ ಸವೆಸಿ, ಚಿತ್ತಶುದ್ಧನಾಗಿ ಅಚ್ಚೊತ್ತಿದಂತಿದ್ದುದೆ ಶೀಲವ್ರತ. ಹಾಂಗಲ್ಲದೆ ಜಾತಿಗಾರನ ಕೈಯ ದೀಹದಂತೆ, ಬಾಲೆಯರ ಮನದ ಸೋಲುವೆಯಂತೆ, ಇಂತಿವರಾಳವಾಡಿ ಸಿಕ್ಕಿಸುವ, ಸೋಲುಗಾರರಿಗೆಲ್ಲಿಯದೊ ಸತ್ಯ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಆಚಾರ ಅನಾಚಾರವೆಂದಡೆ ಹೇಳಿಹೆ ಕೇಳಿರಣ್ಣಾ : ಸರ್ವಪದಾರ್ಥಂಗಳ ಇದಿರಿಟ್ಟಲ್ಲಿ ಇಷ್ಟಲಿಂಗಕ್ಕೆ ಕೊಟ್ಟು ಪ್ರಸಾದವೆಂದು ಕೊಂಡು ಸುಯಿಧಾನವಿಲ್ಲದೆ ಸೂಸಿದಲ್ಲಿ, ದೂಷಿಸಿ ಪ್ರಸಾದದಲ್ಲಿ ಒಳ್ಳಿತು ಹೊಲ್ಲಹ ವಿಷ ಸಿಹಿ ಹುಳಿ ಸಪ್ಪೆಯೆಂದು ಜರೆದು ಝಂಕಿಸಿ ಬಿಡುವ ಕರ್ಮಿಗಳು ನೀವು ಕೇಳಿರೊ_ ಜ್ಯೋತಿಯ ತಂದು ಬತ್ತಿಯ ಮುಟ್ಟಿಸಲು ಜ್ಯೋತಿಯಪ್ಪಂತೆ ಕಾಣಿರೊ ಒಂದು ವೇಳೆ ಪ್ರಸಾದವೆಂದು ಕೊಂಡು, ಮತ್ತೊಂದು ವೇಳೆಯಲ್ಲಿ ಎಂಜಲೆಂದು ನಿಂದಿಸುವ ಪ್ರಸಾದದ್ರೋಹಿಗಳಿಗೆ ದೇವಭಕ್ತರೆನ್ನಲಾಗದು. ಅವರಿಗೆ ಸೂರ್ಯಚಂದ್ರರುಳ್ಳನ್ನಕ್ಕ ನರಕ. ಎಕ್ಕಲನರಕದಲ್ಲಿ ಮುಳುಗಾಡುತ್ತಿಪ್ಪವರ ಮುಖವನೆನಗೆ ತೋರದಿರಾ ಗುಹೇಶ್ವರ.
--------------
ಅಲ್ಲಮಪ್ರಭುದೇವರು
-->