ಅಥವಾ

ಒಟ್ಟು 258 ಕಡೆಗಳಲ್ಲಿ , 56 ವಚನಕಾರರು , 182 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮದ್ದಿನ ಸುರೆಯ ತೊಗಲ ತಿತ್ತಿಯಲ್ಲಿ ತುಂಬಿ, ಒಪ್ಪದಲ್ಲಿ ನಿಲಿಸಲಿಕೆ, ಅದು ತನ್ನ ಉತ್ಸಾಹದಿಂದ ತಿತ್ತಿ ಹಾರಿ, ನೆಲಕ್ಕೆ ಅಪ್ಪಳಿಸಿ ಬೀಳೂದ ಕಂಡೆ. ದೃಷ್ಟವ ಕೇಳಲೇತಕ್ಕೆ ಕಾಯದ ತಿತ್ತಿಯಲ್ಲಿ ಜೀವ ಹೊಕ್ಕು, ತ್ರಿವಿಧಮಲವಂ ಕಚ್ಚಿ ನಡೆವುದಕ್ಕೆ ಕಾಲಿಲ್ಲದೆ, ನುಡಿವುದುಕ್ಕೆ ಬಾಯಿಲ್ಲದೆ, ನೋಡುವುದಕ್ಕೆ ಕಣ್ಣಾಲಿ ಮರೆಯಾಯಿತ್ತು. ಬೊಂಬೆ ಹೋಯಿತ್ತು ದೃಷ್ಟಾಂತರ ಬೊಂಬೆ ಕೆಟ್ಟಲ್ಲಿ. ಮಣ್ಣಿಗೆ ಕಾದಿ, ಹೊನ್ನಿಗೆ ಹೋರಿ, ಹೆಣ್ಣಿಂಗೆ ನಾಣುಗೆಟ್ಟ ಈ ಕುನ್ನಿಮನಕ್ಕೆ ಇನ್ನೇವೆ ಧರ್ಮೇಶ್ವರ[ಲಿಂಗಾ] ?
--------------
ಹೆಂಡದ ಮಾರಯ್ಯ
ಎನ್ನ ಜನನ ಸೂತಕ ಹೋಯಿತ್ತು ಶ್ರೀಗುರುವಿನ ಪಾಣಿಪದ್ಮದಲ್ಲಿ ಜನಿಸಿದೆನಾಗಿ. ಎನ್ನ ಜಾತಿಸೂತಕ ಹೋಯಿತ್ತು ಅಜಾತ ಲಿಂಗಸಂಗದಿಂದ. ಎನ್ನ ಕುಲಸೂತಕ ಹೋಯಿತ್ತು ಶಿವನಲ್ಲದೆ ಅನ್ಯದೈವವನರಿಯೆನಾಗಿ. ಎನ್ನ ಛಲಸೂತಕ ಹೋಯಿತ್ತು ಜೀವಭಾವವಿಲ್ಲವಾಗಿ. ಎನ್ನ ಮನಸೂತಕ ಹೋಯಿತ್ತು ನಿಮ್ಮ ನಾಮವ ನೆನೆನೆನೆದು. ಎನ್ನ ಕಂಗಳ ಸೂತಕ ಹೋಯಿತ್ತು ನಿಮ್ಮ ಮಂಗಳಸ್ವರೂಪವ ನೋಡಿ ನೋಡಿ. ಎನ್ನ ಕೈಯಸೂತಕ ಹೋಯಿತ್ತು ನಿಮ್ಮ ಮುಟ್ಟಿ ಪೂಜಿಸಿ ಪೂಜಿಸಿ. ಎನ್ನ ಕಿವಿಯ ಸೂತಕ ಹೋಯಿತ್ತು ನಿಮ್ಮ ಕೀರ್ತಿಯ ಕೇಳಿ ಕೇಳಿ. ಎನ್ನ ಜಿಹ್ವೆಯ ಸೂತಕ ಹೋಯಿತ್ತು ನಿಮ್ಮ ಪರಮಪ್ರಸಾದವ ಸವಿಸವಿದು. ಇಂತೀ ಸರ್ವಸೂತಕವ ಹರಿದು, ಪೂರ್ವಕಲ್ಪಿತಂಗಳ ಮೀರಿ. ನಿಮ್ಮೊಳಗೆ ನಿಜನಿಶ್ಚಿಂತನಿವಾಸಿಯಾಗಿರ್ದೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕಣ್ಣು ಕಳೆದ ಮತ್ತೆ ಅಂಜನಕ್ಕೆ ತಿಳಿವುದೆ ? ಆತ್ಮನಿದ್ದಲ್ಲಿ ಅರಿಯದೆ ಹಸು ಸತ್ತ ಮತ್ತೆ ಮೋಕ್ಷವನರಸಲುಂಟೆ ? ಎಚ್ಚರಿಕೆ ತನಗಿದ್ದಲ್ಲಿ ನಾನೊಂದು ನಿಶ್ಚಯದ ಮದ್ದ ತಂದೆ. ಆ ಮದ್ದಿನ ಭೇದ ಘಟಕ್ಕೆ ಕೇಡಿಲ್ಲ. ಆತ್ಮಂಗೆ ಭವವಿಲ್ಲ. ಅರಿವಿಂಗೆ ತುದಿಮೊದಲಿಲ್ಲ. ಇದು ನಿರಿಗೆ ಕೊಳಬಲ್ಲಡೆ, ಗುರುವಿಂಗೆ ತನು, ಲಿಂಗಕ್ಕೆ ಮನ, ಜಂಗಮಕ್ಕೆ ಧನ. ರೋಗ ಹೋಯಿತ್ತು, ಬೇಗ ಅರಿದುಕೊಳ್ಳಿ, ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.
--------------
ವೈದ್ಯ ಸಂಗಣ್ಣ
ಎತ್ತು ಹಸುವ ಹಾಯಲಾಗಿ ತೆಕ್ಕೆಯನಿಕ್ಕಿದ ಕಣ್ಣಿಯಲ್ಲಿ ತೆಕ್ಕೆಗೆ ನಡೆಯದ ಹಸು, ಕಟ್ಟುಗೊಳ್ಳದ ಹೋರಿ. ಇವೆರಡ ಸಿಕ್ಕಿಸುವ ಪರಿಯಿನ್ನೆಂತೊ? ಕಟ್ಟಿದ ಕಣ್ಣಿಯ ಕುಣಿಕೆ ಕಳಚಿ ಹೋರಿಯ ಕೊರಳಲ್ಲಿ ಹೋಯಿತ್ತು, ಹಸು ಬೆತ್ತಲೆಯಾಯಿತ್ತು, ನಾರಾಯಣಪ್ರಿಯ ರಾಮನಾಥಾ.
--------------
ಗುಪ್ತ ಮಂಚಣ್ಣ
ಐಗೈಮನೆ ನಾಗೈಕಂಬ ಮೂಗೈತೊಲೆ ಭೇದ ಕರವಳವ ಹಾಕಿ ನೋಡಿ ಅರಿದಡೆ ಆಯ ಬಂದಿತ್ತು. ಮಸದಡೆ ಆಯ ಹೋಯಿತ್ತು. ಮೂಗೆಯ್ಯ ಕರದಲ್ಲಿ ಇದರರಿಕೆಯಾಗಿ ಹೇಳಾ ಧಾರೇಶ್ವರ ನಿನ್ನಾಲಯಕ್ಕೆ.
--------------
ಕಾಮಾಟದ ಭೀಮಣ್ಣ
ಆಸೆ ಪರಿಣಾಮಕ್ಕೆ ಬೇಸತ್ತು ಹೋಯಿತ್ತು. ಆಶ್ರಯದ ನಿದ್ರೆ ಕೆಟ್ಟಿತ್ತು. ಗ್ರಾಸ ಮೆಲ್ಲನಾಯಿತ್ತು. ಸ್ತ್ರೀಯರ ಮೇಲಣ ಇಚ್ಛೆ ಕೆಟ್ಟಿತ್ತು. ಈಶ್ವರ! ನಿಮ್ಮ ಪಾದಾಂಬುಜ ಸೇವೆಯಿಂದ ಕಾಣಾ!ರಾಮನಾಥ.
--------------
ಜೇಡರ ದಾಸಿಮಯ್ಯ
ಅಷ್ಟತನುವಿನ ಕಷ್ಟದೊಳಗಿರ್ದು ದೃಷ್ಟಲಿಂಗವ ಕರದಲ್ಲಿ ಪಿಡಿದು ಕೆಟ್ಟ ವಾಕ ಜಿನುಗುತ ಮುಟ್ಟಿ ಲಿಂಗಾನುಭಾವವ ಮಾಡುವ ಭ್ರಷ್ಟಜೀವಿಗಳನೆಂತು ಶರಣರೆನ್ನಬಹುದಯ್ಯಾ? ಹುಟ್ಟಿದ ಯೋನಿಯ ಬಿಟ್ಟು ಕಳೆಯದೆ ನೆಟ್ಟನೆ ಲಿಂಗಶರಣನೆಂದೊಡೆ ಕೆಟ್ಟು ಹೋಯಿತ್ತು ಇವರರುಹು ಗುರುನಿರಂಜನ ಚನ್ನಬಸವಲಿಂಗವ ಮುಟ್ಟದೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕುಲದಲಧಿಕನು ಹೋಗಿ ಹೊಲೆಗೇರಿಯಲ್ಲಿ ಮನೆಯ ಕಟ್ಟಿದಡೆ, ಕುಲ ಕೆಡದಿಪ್ಪ ಈ ಪರಿಯ ನೋಡಾ ! ಆತನ ಕುಲದವರೆಲ್ಲರು ಮುಖವ ನೋಡಲೊಲ್ಲದಡೆ ಕುಲವುಳ್ಳವರೆಲ್ಲರೂ ಕೈವಿಡಿದರು. ಕುಲಗೆಟ್ಟವನೆಂದು ತಿಳಿದು ವಿಚಾರಿಸಲು, ಹೊಲೆಗೆಟ್ಟು ಹೋಯಿತ್ತು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಾಯದ ಪೂರ್ವಾಶ್ರಯ ಶ್ರೀಗುರುವಿನಿಂದ ಹೋಯಿತ್ತು; ಲಿಂಗದಿಂದ ಹೋ[ಗ]ದು. ಇಂದ್ರಿಯದ ಪೂರ್ವಾಶ್ರಯ ಶ್ರೀಗುರುವಿನಿಂದ ಹೋಯಿತ್ತು; ಲಿಂಗದಿಂದ ಹೋಗದು. ತನ್ನಿಂದಲೇ (ಅಹುದು), ತನ್ನಿಂದಲೇ ಹೋಹುದು. ಕಾಲಚಕ್ರ ಕರ್ಮಚಕ್ರ ನಾದಚಕ್ರ ಬಿಂದುಚಕ್ರವುಳ್ಳನ್ನಕ್ಕರ, ಕೂಡಲಚೆನ್ನಸಂಗನಲ್ಲಿ ಶರಣನೆನಿಸಲು ಬಾರದು.
--------------
ಚನ್ನಬಸವಣ್ಣ
ಆಡು ತೋಳನ ಮುರಿದಾಗ, ಮೊಲ ನಾಯ ಕಚ್ಚಿತ್ತು. ಕಚ್ಚುವುದ ಕಂಡು ಹದ್ದು ಹಾರಲಾಗಿ ಆ ಹದ್ದ ಹಾವು ಕಚ್ಚಿ ಸತ್ತಿತ್ತು; ವಿಷವೇರಿ ಹೋಯಿತ್ತು ಗಾರುಡ. ನಾರಾಯಣಪ್ರಿಯ ರಾಮನಾಥನಲ್ಲಿ ಐಕ್ಯಾನುಭಾವಿಯಾದ ಶರಣಂಗೆ.
--------------
ಗುಪ್ತ ಮಂಚಣ್ಣ
ಕಾಣುತ್ತ ಕಾಣುತ್ತ ಕಂಗಳ ಮುಚ್ಚಿದೆ ನೋಡವ್ವಾ. ಕೇಳುತ್ತ ಕೇಳುತ್ತ ಮೈಮರೆದೊರಗಿದೆ ನೋಡವ್ವಾ. ಹಾಸಿದ ಹಾಸಿಗೆಯ ಹಂಗಿಲ್ಲದೆ ಹೋಯಿತ್ತು ಕೇಳವ್ವಾ. ಚೆನ್ನಮಲ್ಲಿಕಾರ್ಜುನದೇವರದೇವನ ಕೂಡುವ ಕೂಟವ ನಾನೇನೆಂದರಿಯದೆ ಮರೆದೆ ಕಾಣವ್ವಾ.
--------------
ಅಕ್ಕಮಹಾದೇವಿ
ಸಪ್ತದ್ರವ್ಯಂಗಳು ಎಡೆಯಿಲ್ಲದೆ ಹೋದುವು. ಅಷ್ಟಮದಂಗಳು ನಷ್ಟವಾದುವು. ಅರಿಷಡ್ವರ್ಗದುರವಣಿ ತರಹರಿಸಲಾರದೆ ಹೋದವು. ಪಂಚೇಂದ್ರಿಯಂಗಳ ವಂಚನೆ ಬರತವು. ಕರ್ಮೇಂದ್ರಿಯಂಗಳ ವ್ಯಾಪಾರ ನಿಂದವು. ಕಾಮನ ಬಾಣ ಬತ್ತಳಿಕೆಯಲ್ಲಿ ಹಾಯ್ದುವು. ಕಾಲನ ಅಧಿಕಾರ ನಿಂದಿತ್ತು ಮಾಯೆ ಮುಂದುಗೆಟ್ಟು ಮುಖವಿಡಲಮ್ಮದೆ ಹೋಯಿತ್ತು. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ, ನಿಮ್ಮ ಶರಣರ ಮುಂದೆ.
--------------
ಸ್ವತಂತ್ರ ಸಿದ್ಧಲಿಂಗ
ವ್ರತ ನೇಮ ಸಪ್ಪೆ ಒರತೆ ಮುಂತಾದ ನೀರ್ವಿಡಿಯ ನೇಮವಂ ತಾಳಿ, ಅಂಗನೆಯರ ಸಂಗಸುಖವ ಮೆಚ್ಚಿ, ಲಿಂಗವ ಕೊಂಡಾಡುವ ಬಾಯಲ್ಲಿ ಹೆಂಗಳ ಅಧರವಂ ಚುಂಬಿಸೆ, ಲಿಂಗಜಂಗಮದ ಪ್ರಸಾದ ಹೋಯಿತ್ತು. ಇಷ್ಟಲಿಂಗ ಹಿಡಿವ ಕೈಯಲ್ಲಿ ಬಟ್ಟಿತ್ತು ಕುಚವ ಹಿಡಿದು, ಉಚ್ಚೆಯ ಬಚ್ಚಲ ತೋಡುವ ಕಸ್ತುಕಾರರನೊಪ್ಪೆನೆಂದ. ಇಂತಪ್ಪವರ ಭಕ್ತರೆಂದಡೆ, ಮೆಟ್ಟುವ ನರಕದಲ್ಲಿ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಮಾಟಕೂಟವೆಂಬ ಹೊಲದಲ್ಲಿ, ಪಾಪರುಣ್ಯವೆಂಬ ಬೀಜವ ಬಿತ್ತೆ, ತಂಗಾಲಕ್ಕೆ ಬೆಳೆದು, ಮಳೆಗಾಲಕ್ಕೆ ತಗ್ಗಿ, ಹೊಲದ ಓವರಿಯಲ್ಲಿ ಜಲಬಿದ್ದು ಹೋಯಿತ್ತು. ಮತ್ತೆ ಹೊಲದ ಹೊಲಬಿಲ್ಲ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಬಯಲಲ್ಲಿ ಒಂದು ಪಕ್ಷಿ ಗೂಡನಿಕ್ಕುವುದ ಕಂಡೆನಯ್ಯ. ಆ ಪಕ್ಷಿಯ ಒಡಲಲ್ಲಿ ಮೂರು ಹಂಸಗಳು ಹುಟ್ಟಿ, ಒಂದು ಹಂಸ ಪಾತಾಳಲೋಕಕ್ಕೆ ಮತ್ರ್ಯಲೋಕಕ್ಕೆ ಹೋಯಿತ್ತು. ಒಂದು ಹಂಸ ಸ್ವರ್ಗಲೋಕಕ್ಕೆ ತತ್ಪುರುಷಲೋಕಕ್ಕೆ ಹೋಯಿತ್ತು. ಒಂದು ಹಂಸ ಈಶಾನ್ಯಲೋಕಕ್ಕೆ ಅಂಬರಲೋಕಕ್ಕೆ ಹೋಯಿತ್ತು. ಆ ಪಕ್ಷಿಯ ನಿರ್ವಯಲು ನುಂಗಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->