ಅಥವಾ

ಒಟ್ಟು 37 ಕಡೆಗಳಲ್ಲಿ , 18 ವಚನಕಾರರು , 34 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿನಿರಾಳ, ಮಧ್ಯನಿರಾಳ, ಊಧ್ರ್ವನಿರಾಳ ಅಂತೆ ನಿನ್ನ ಪರಿಯಯ್ಯಾ. ಅನಾಮಯಶೂನ್ಯನೆಂದು ಹೊಗಳುತ್ತೈದಾರೆ ನಿನ್ನ ಹಲಬರು, ನೀನು ಭಕ್ತಕಾರಣ ಪರಶಿವಮೂರ್ತಿಯೆಂಬುದನರಿಯರಾಗಿ. ಎಲೆ ಅಯ್ಯಾ, ಸುಚಿತ್ತವಾದ ಲೋಕಂಗಳಲ್ಲಿ ನೀನು ಉರುತರ ನಿತ್ಯನೆಂಬುದನರಿಯರು ಕಾಣಾ ಎಲೆ ಅಯ್ಯಾ, ಅಯ್ಯ ನಿನ್ನ ಅನಾಹತ ಪಟ್ಟಣದಲ್ಲಿ ಶೂನ್ಯಕಾಯನೆಂಬ ಮಹಾಗಣೇಶ್ವರನ ಮನೆಯಲ್ಲಿ ಪದನಾಶನೆಂಬ ಯೋಗಿಯಾಗಿ ಬಂದು, ಫಲಕ್ಕೆ ಬಿತ್ತಲಿದ್ದ ಬೀಜಂಗಳ ನೀನು ಸಂಗ್ರಹಿಸಿ ಸ್ವಯಂಪಾಕವ ಮಾಡಿ, ಆತ ಕಿಂಕಿಲದಿಂ ಸದ್ಭಾವವೆಂದೆಂಬ ಪರಿಯಾಣದಲ್ಲಿ ಅಷ್ಟಪಾದಂಗಳನುಳ್ಳ ಆಧಾರವಂ ತಂದಿಟ್ಟು ಮಥಿತ ಮರ್ಧನ, ಸುಚಿತ್ತ ಸುಗುಣಂಗಳೆಂಬ ಓಗರವಂ ತಂದು ಎನಗೆ ಬಡಿಸಲಾಗಿ, ನಿತ್ಯವೆಂಬ ದೀಪ್ತಿಯ ಬೆಳಗಿನಲ್ಲಿ ಸುಚಿತ್ತಂ ಆರೋಗಣೆಯಂ ಮಾಡಿ, ರೇತೋದಾರನೆಂಬ ಗಣೇಶ್ವರ ಲೆಕ್ಕ ಮೂವತ್ತಾರು ಸಾವಿರ ಪಟ್ಟಣಂಗಳಲ್ಲಿ ಪ್ರವೇಶಿಸಿ ಬಂದ ಕಾಲದಲ್ಲಿ, ನಿನ್ನ ಸುಮತಿ ಪ್ರಸನ್ನತೆ ಪರಿಣಾಮ ಪ್ರಯೋಗವೆಂಬ ಪ್ರಸಾದ ಸ್ವೀಕಾರಂ ಮಾಡಲ್ಕಾಗಿ, ಆತನ ಮೂರರಿಂ ಮೇಲೆ ಹತ್ತರಿಂದೊಳಗೆ ಇದ್ದಂಥ ಹಲವೆಲ್ಲವೂ ಏಕೀಭವಿಸಿದವು. ಆತ ನಿತ್ಯನಾದ, ಆತ ಫಲಕ್ಕೆ ಪದಕ್ಕೆ ಭವಕ್ಕೆ ತುರೀಯ ಸಿದ್ಧ ತ್ವಮಸಿಯನೆಯ್ದಿ ಸಂದು ಹರಿದ, ಹಂಗು ಹರಿದ, ಆನಂದವೆಂಬ ಶ್ವೇತಜಲದಲ್ಲಿ ಚಂದ್ರಕಾಂತದ ಮಂಟಪವನಿಕ್ಕಿ, ಅರ್ಚನೆ ಪೂಜನೆ ವ್ಯವಹರಣೆಯೆಂಬವನತಿಗಳೆದು ಸದ್ಧಲಿಂಗಾರ್ಚನೆಯ ಮಾಡಿ ಸುಖಸಂಯೋಗದಲ್ಲಿ ಎರಡಿಲ್ಲದೆ ಮೂರ್ಚಿತವೋಗೈದಾನೆ ಕಾಣಾ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ವೇದ ದೈವವೆಂದು ನುಡಿವರು, ಶಾಸ್ತ್ರ ದೈವವೆಂದು ನುಡಿವರು, ಪುರಾಣ ದೈವವೆಂದು ನುಡಿವರು, ಕಲ್ಲು ದೈವವೆಂದು ನುಡಿವರು, ಕಾಷ* ದೈವವೆಂದು ನುಡಿವರು, ಪಂಚಲೋಹ ದೈವವೆಂದು ನುಡಿವರು, ಇವರೆಲ್ಲ ಸಕಲದಲಾದ ಸಂದೇಹವನೆ ಪೂಜಿಸಿ ಸತ್ತು ಹೋದರಲ್ಲಾ ! ಸಮಸ್ತ ಪ್ರಾಣಿಗಳೂ_ತಾಯನರಿಯದ ತರ್ಕಿಗಳು, ತಂದೆಯನರಿಯದ ಸಂದೇಹಿಗಳು. ತನು ಪೃಥ್ವಿಯಿಂದಲಾಯಿತ್ತು ಮನ ವಾಯುವಿನಿಂದಲಾಯಿತ್ತು. ಕಲ್ಲು ಕಾಷ* ಸಕಲ_ನಿಷ್ಕಲದಿಂದಲಾಯಿತ್ತು. ವಾಯುವಾಧಾರದ ಪವನಸಂಯೋಗದ ಅನಾಹತ ಚಕ್ರದಿಂದ ಮೇಲಣ ಆಜ್ಞಾಚಕ್ರದಲ್ಲಿ ನಿಂದು; ಅನಂತಕೋಟಿಬ್ರಹ್ಮಾಂಡಗಳ ಮೆಟ್ಟಿ_ ಕಾಯದ ಕಣ್ಣ ಮುಚ್ಚಿ, ಜ್ಞಾನದ ಕಣ್ಣ ತೆರೆದು ನೋಡಲ್ಕೆ, ಅಲ್ಲಿ ಒಂದು ನಿರಾಕಾರ ಉಂಟು. ಆ ನಿರಾಕಾರದಲ್ಲಿ ನಿಂದು ನಿರ್ಣಯಿಸಿ ನೋಡಲ್ಕೆ, ಅಲ್ಲಿ ಒಂದು ನಿಶ್ಶೂನ್ಯವುಂಟು. ಆ ನಿಶ್ಶೂನ್ಯದಲ್ಲಿ ನಿಂದು ನಿಶ್ಚಯಿಸಿ ನೋಡಲ್ಕೆ, ಕತ್ತಲೆಯಲ್ಲ ಬೆಳಗಲ್ಲ ಬಚ್ಚಬರಿಯ ಬಯಲು ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಪ್ರಥಮ ಮೂಲದಲ್ಲಿ ನಿರಾಕಾರವಸ್ತು ಸಾಕಾರವಾಯಿತ್ತು. ಆಚಾರಕ್ಕೋಸ್ಕರವಾಗಿ ವಸ್ತು ಅನಾಚಾರಿಯಾದ. ಅನಾಹತ ಸಂಸಿದ್ಧ ಆಗಲಾಗಿ ವಿಚಾರಮುಖದಿಂದ ಆಚಾರ್ಯನಾದ. ಆ ಮರದ ಶಾಖೆಯ ತೊಡಪಿಂದ ಆ ಮರದ ಫಲದ ಕೈಗೆ ತಾಹಂತೆ ಈ ಗುಣ ಕ್ರೀ ನಿಃಕ್ರೀಯೆಂಬ ಉಭಯವಿವರದ ಭೇದ. ಉಭಯಕ್ಕೆ ಒಂದು ಶುದ್ಧವಾದಲ್ಲಿ ಒಂದಲ್ಲಿ ಒಂದು ಸಂದಿತ್ತು. ಈ ಗುಣ ಕ್ರೀ ನಿಃಕ್ರೀಲೇಪ, ಏಕಸ್ಥಲ ಐಕ್ಯನ ಕೂಟ ಗೋಪತಿನಾಥ ವಿಶ್ವೇಶ್ವರಲಿಂಗದ ಒಳಗಿನಾಟ.
--------------
ತುರುಗಾಹಿ ರಾಮಣ್ಣ
ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧ ಆಜ್ಞೆ ಎಂದೆಂಬರು ಈ ಆರ ಬಲ್ಲಡೆ ನೀವು ಹೇಳಿರೇ. ಆಯನುಳ್ಳುದೆ ಆಧಾರ; ಆಧಾರವ ಕೂಡಿಪ್ಪುದೆ ಸ್ವಾಧಿಷಾ*ನ; ಮಣಿಯ ಬೆಳಗಿನಲ್ಲಿಪ್ಪುದೆ ಮಣಿಪೂರಕ; ಆಸೆಯಿಲ್ಲದುದೆ ಅನಾಹತ; ಅಲ್ಲ ಅಹುದೆಂಬುದನತಿಗಳೆಯದಿಹುದೆ ವಿಶ್ಧುದ್ಧಿ ಸರ್ವ ಜೀವಂಗಳಲ್ಲಿ ದಯವನುಳ್ಳದೆ ಆಜ್ಞೆ ; - ಇಂತಪುದೀಗ ಶಿವಯೋಗ. ಉಳಿದ ಅಭ್ಯಾಸಯೋಗಿಗಳ ಕಂಡು ನಗುತಿರ್ದೆನಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಯ್ಯಾ.
--------------
ಸಿದ್ಧರಾಮೇಶ್ವರ
ಅನಾದಿ ಸದಾಶಿವತತ್ವ, ಅನಾದಿ ಈಶ್ವರತತ್ವ, ಅನಾದಿ ಮಹೇಶ್ವರತತ್ವವೆಂಬ, ಅನಾದಿ ತ್ರಿತತ್ವಂಗಳು ತಾನಲ್ಲ. ಆದಿ ಸದಾಶಿವತತ್ವ, ಆದಿ ಈಶ್ವರತತ್ವ, ಆದಿ ಮಹೇಶ್ವರತತ್ವವೆಂಬ ಆದಿ ತ್ರಿತತ್ವಂಗಳು ತಾನಲ್ಲ. ಶಂಕರ ಶಶಿಧರ ಗಂಗಾಧರ ಗೌರೀಶ ಕಳಕಂಠ ರುದ್ರ, ಕಪಾಲಮಾಲಾಧರ ರುದ್ರ,ಕಾಲಾಗ್ನಿರುದ್ರ, ಏಕಪಾದರುದ್ರ, ಮಹಾಕಾಲರುದ್ರ, ಮಹಾನಟನಾಪಾದರುದ್ರ, ಊಧ್ರ್ವಪಾದರುದ್ರ, ಬ್ರಹ್ಮಕಪಾಲ ವಿಷ್ಣುಕಂಕಾಳವ ಪಿಡಿದಾಡುವ ಪ್ರಳಯಕಾಲರುದ್ರರು, ತ್ರಿಶೂಲ ಖಟ್ವಾಂಗಧರರು ವೃಷಭವಾಹನರು ಪಂಚಮುಖರುದ್ರರು, ಶೂನ್ಯಕಾಯನೆಂಬ ಮಹಾರುದ್ರ, ಅನೇಕಮುಖ ಒಂದುಮುಖವಾಗಿ ವಿಶ್ವರೂಪರುದ್ರ, ವಿಶ್ವಾಧಿಕಮಹಾರುದ್ರ, ಅಂಬಿಕಾಪತಿ ಉಮಾಪತಿ ಪಶುಪತಿ ಮೊದಲಾದ ಗಣಾಧೀಶ್ವರರೆಂಬ ಮಹಾಗಣಂಗಳು ತಾನಲ್ಲ. ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ಸಹಸ್ರಪಾದವನುಳ್ಳ ವಿರಾಟ್ಪುರುಷನು ತಾನಲ್ಲ. ವಿಶ್ವತೋಮುಖ ವಿಶ್ವತೋಚಕ್ಷು ತಾನಲ್ಲ. ವಿಶ್ವತೋಪಾದವನುಳ್ಳ ಮಹಾಪುರುಷ ತಾನಲ್ಲ. ಪತಿ-ಪಶು-ಪಾಶಂಗಳೆಂಬ ಸಿದ್ಧಾಂತಜ್ಞಾನತ್ರಯಂಗಳು ತಾನಲ್ಲ. ತ್ವಂ ಪದ ತತ್‍ಪದ ಅಸಿಪದವೆಂಬ ವೇದಾಂತಪದತ್ರಯ ಪದಾರ್ಥಂಗಳು ತಾನಲ್ಲ. ಜೀವಹಂಸ ಪರಮಹಂಸ ಪರಾಪರಹಂಸನೆಂಬ ಹಂಸತ್ರಯಂಗಳು ತಾನಲ್ಲ. ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಂಬ ಪಂಚಮೂರ್ತಿಗಳು ತಾನಲ್ಲ. ಆ ಸದಾಶಿವತತ್ವದಲ್ಲುತ್ಪತ್ಯವಾದ ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯಾತ್ಮರೆಂಬ ಅಷ್ಟತನುಮೂರ್ತಿಗಳು ತಾನಲ್ಲ. ಅಸ್ಥಿ ಮಾಂಸ ಚರ್ಮ ನರ ರೋಮ -ಈ ಐದು ಪೃಥ್ವಿಯಿಂದಾದವು. ಪಿತ್ಥ ಶ್ಲೇಷ್ಮ ರಕ್ತ ಶುಕ್ಲ ಮೂತ್ರ -ಈ ಐದು ಅಪ್ಪುವಿನಿಂದಾದವು. ಕ್ಷುದೆ ತೃಷೆ ನಿದ್ರೆ ಆಲಸ್ಯ ಸಂಗ -ಈ ಐದು ಅಗ್ನಿಯಿಂದಾದವು. ಪರಿವ ಪಾರುವ ಸುಳಿವ ಕೂಡುವ ಅಗಲುವ -ಈ ಐದು ವಾಯುವಿನಿಂದಾದವು. ವಿರೋಧಿಸುವ ಅಂಜಿಸುವ ನಾಚುವ ಮೋಹಿಸುವ ಅಹುದಾಗದೆನುವ -ಈ ಐದು ಆಕಾಶದಿಂದಾದವು. ಇಂತೀ ಪಂಚಭೌತಿಕದ ಪಂಚವಿಂಶತಿ ಗುಣಂಗಳಿಂದಾದ ದೇಹವು ತಾನಲ್ಲ. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ ಜ್ಞಾನೇಂದ್ರಿಯಂಗಳು ತಾನಲ್ಲ. ವಾಕು ಪಾದ ಪಾಣಿ ಪಾಯು ಗುಹ್ಯವೆಂಬ ಕರ್ಮೇಂದ್ರಿಯಂಗಳು ತಾನಲ್ಲ. ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ ಪಂಚವಿಷಯಂಗಳು ತಾನಲ್ಲ, ವಚನ ಗಮನ ದಾನ ವಿಸರ್ಗ ಆನಂದವೆಂಬ ಕರ್ಮೇಂದ್ರಿಯಂಗಳ ತನ್ಮಾತ್ರೆಗಳು ತಾನಲ್ಲ, ಇಡೆ ಪಿಂಗಳೆ ಸುಷುಮ್ನಾ ಗಾಂಧಾರೀ ಹಸ್ತಿಜಿಹ್ವಾ ಪೂಷೆ ಪಯಸ್ವಿನೀ ಅಲಂಬು ಲಕುಹ ಶಂಕಿನೀ-ಎಂಬ ದಶನಾಡಿಗಳು ತಾನಲ್ಲ. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯವೆಂಬ ದಶವಾಯುಗಳು ತಾನಲ್ಲ. ಸ್ಥೂಲತನು, ಸೂಕ್ಷ್ಮತನು, ಕಾರಣತನು, ನಿರ್ಮಲತನು, ಆನಂದತನು, ಚಿನ್ಮಯತನು, ಚಿದ್ರೂಪತನು, ಶುದ್ಧತನುವೆಂಬ ಅಷ್ಟತನುಗಳು ತಾನಲ್ಲ. ಜೀವಾತ್ಮ ಅಂತರಾತ್ಮ ಪರಮಾತ್ಮ ನಿರ್ಮಲಾತ್ಮ ಶುದ್ಧಾತ್ಮ ಜ್ಞಾನಾತ್ಮ ಭೂತಾತ್ಮ ಮಹಾತ್ಮವೆಂಬ ಅಷ್ಟ ಆತ್ಮಂಗಳು ತಾನಲ್ಲ. ಸಂಸ್ಥಿತ ತೃಣೀಕೃತ ವರ್ತಿನಿ ಕ್ರೋಧಿನಿ ಮೋಹಿನಿ ಅತಿಚಾರಿಣಿ ಗಂಧಚಾರಿಣಿ ವಾಸಿನಿಯೆಂಬ ಅಂತರಂಗದ ಅಷ್ಟಮದಂಗಳು ತಾನಲ್ಲ. ಕುಲ ಛಲ ಧನ ರೂಪ ಯೌವ್ವನ ವಿದ್ಯೆ ರಾಜ್ಯ ತಪವೆಂಬ ಬಹಿರಂಗ ಅಷ್ಟಮದಂಗಳು ತಾನಲ್ಲ. ರಸ ರುಧಿರ ಮಾಂಸ ಮೇದಸ್ಸು ಅಸ್ಥಿ ಮಜ್ಜೆ ಶುಕ್ಲವೆಂಬ ಸಪ್ತಧಾತುಗಳು ತಾನಲ್ಲ. ತನುವ್ಯಸನ, ಮನವ್ಯಸನ, ಧನವ್ಯಸನ, ರಾಜ್ಯವ್ಯಸನ, ವಿಶ್ವವ್ಯಸನ, ಉತ್ಸಾಹವ್ಯಸನ, ಸೇವಕವ್ಯಸನವೆಂಬ ಸಪ್ತವ್ಯಸನಂಗಳು ತಾನಲ್ಲ. ಕ್ಷುತ್ ಪಿಪಾಸೆ ಶೋಕ ಮೋಹ ಜನನ ಮರಣವೆಂಬ ಷಡೂರ್ಮಿಗಳು ತಾನಲ್ಲ. ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಂಗಳು ತಾನಲ್ಲ. ಜಾತಿ, ವರ್ಣ, ಆಶ್ರಮ, ಕುಲ, ಗೋತ್ರ, ನಾಮಗಳೆಂಬ ಷಟ್‍ಭ್ರಮೆಗಳು ತಾನಲ್ಲ. ಆಸ್ತಿ, ಜಾಯತೇ, ಪರಿಣಮತೇ, ವರ್ಧತೇ, ವಿನಶ್ಯತಿ, ಅಪಕ್ಷೀಯತೇ ಎಂಬ ಷಡ್ಭಾವವಿಕಾರಂಗಳು ತಾನಲ್ಲ. ಅನ್ನಮಯ ಪ್ರಾಣಮಯ ಮನೋಮಯ ವಿಜ್ಞಾನಮಯ ಆನಂದಮಯವೆಂಬ ಪಂಚಕೋಶಂಗಳು ತಾನಲ್ಲ. ಸತ್ವ ರಜ ತಮೋಗುಣತ್ರಯಂಗಳು ತಾನಲ್ಲ. ಅಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕವೆಂಬ ತಾಪತ್ರಯಂಗಳು ತಾನಲ್ಲ. ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯಂಗಳು ತಾನಲ್ಲ. ವಾತ ಪಿತ್ಥ ಕಫಂಗಳೆಂಬ ದೋಷತ್ರಯಂಗಳು ತಾನಲ್ಲ. ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳು ತಾನಲ್ಲ. ಸುಖ ದುಃಖ ಪುಣ್ಯ ಪಾಪಂಗಳು ತಾನಲ್ಲ. ಸಂಚಿತ, ಪ್ರಾರಬ್ಧ, ಆಗಾಮಿಯೆಂಬ ಕರ್ಮತ್ರಯಂಗಳು ತಾನಲ್ಲ. ಅಗ್ನಿಮಂಡಲ, ಆದಿತ್ಯಮಂಡಲ, ಚಂದ್ರಮಂಡಲವೆಂಬ ಮಂಡಲತ್ರಯಂಗಳು ತಾನಲ್ಲ. ಆಧಾರ, ಸ್ವಾಧಿಷಾ*ನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೆ ಎಂಬ ಷಡುಚಕ್ರಂಗಳ ದಳ ವರ್ಣ ಅಕ್ಷರಂಗಳು ತಾನಲ್ಲ. ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತಗಳೆಂಬ ಪಂಚಾವಸ್ಥೆಗಳು ತಾನಲ್ಲ. ಜಾಗ್ರದಲ್ಲಿಯ ಜಾಗ್ರ, ಜಾಗ್ರದಲ್ಲಿಯ ಸ್ವಪ್ನ, ಜಾಗ್ರದಲ್ಲಿಯ ಸುಷುಪ್ತಿ, ಜಾಗ್ರದಲ್ಲಿಯ ತೂರ್ಯ, ಜಾಗ್ರದಲ್ಲಿಯ ತೂರ್ಯಾತೀತವೆಂಬ ಜಾಗ್ರಪಂಚಾವಸ್ಥೆಗಳು ತಾನಲ್ಲ. ಸ್ವಪ್ನದಲ್ಲಿಯ ಜಾಗ್ರ, ಸ್ವಪ್ನದಲ್ಲಿಯ ಸ್ವಪ್ನ, ಸ್ವಪ್ನದಲ್ಲಿಯ ಸುಷುಪ್ತಿ, ಸ್ವಪ್ನದಲ್ಲಿಯ ತೂರ್ಯ, ಸ್ವಪ್ನದಲ್ಲಿಯ ತೂರ್ಯಾತೀತವೆಂಬ ಸ್ವಪ್ನಪಂಚಾವಸ್ಥೆಗಳು ತಾನಲ್ಲ. ಸುಷುಪ್ತಿಯಲ್ಲಿಯ ಜಾಗ್ರ, ಸುಷುಪ್ತಿಯಲ್ಲಿಯ ಸ್ವಪ್ನ, ಸುಷುಪ್ತಿಯಲ್ಲಿಯ ಸುಷುಪ್ತಿ , ಸುಷುಪ್ತಿಯಲ್ಲಿಯ ತೂರ್ಯ, ಸುಷುಪ್ತಿಯಲ್ಲಿಯ ತೂರ್ಯಾತೀತವೆಂಬ ಸುಷುಪ್ತಿಯ ಪಂಚಾವಸ್ಥೆಗಳು ತಾನಲ್ಲ. ತೂರ್ಯದಲ್ಲಿಯ ಜಾಗ್ರ, ತೂರ್ಯದಲ್ಲಿಯ ಸ್ವಪ್ನ, ತೂರ್ಯದಲ್ಲಿಯ ಸುಷುಪ್ತಿ, ತೂರ್ಯದಲ್ಲಿಯ ತೂರ್ಯ, ತೂರ್ಯದಲ್ಲಿಯ ತೂರ್ಯಾತೀತವೆಂಬ ತೂರ್ಯಪಂಚಾವಸ್ಥೆಗಳು ತಾನಲ್ಲ. ತೂರ್ಯಾತೀತದಲ್ಲಿಯ ಜಾಗ್ರ, ತೂರ್ಯಾತೀತದಲ್ಲಿಯ ಸ್ವಪ್ನ , ತೂರ್ಯಾತೀತದಲ್ಲಿಯ ಸುಷುಪ್ತಿ, ತೂರ್ಯಾತೀತದಲ್ಲಿಯ ತೂರ್ಯ, ತೂರ್ಯಾತೀತದಲ್ಲಿಯ ತೂರ್ಯಾತೀತವೆಂಬ ತೂರ್ಯಾತೀತಪಂಚಾವಸ್ಥೆಗಳು ತಾನಲ್ಲ. ಸಕಲ-ಶುದ್ಧ-ಕೇವಲಾವಸ್ಥೆಗಳು ತಾನಲ್ಲ. ಸಕಲದಲ್ಲಿಯ ಸಕಲ, ಸಕಲದಲ್ಲಿಯ ಶುದ್ಧ, ಸಕಲದಲ್ಲಿಯ ಕೇವಲವೆಂಬ ಸಕಲತ್ರಿಯಾವಸ್ಥೆಗಳು ತಾನಲ್ಲ. ಶುದ್ಧದಲ್ಲಿಯ ಸಕಲ, ಶುದ್ಧದಲ್ಲಿಯ ಶುದ್ಧ, ಶುದ್ಧದಲ್ಲಿಯ ಕೇವಲವೆಂಬ ಶುದ್ಧತ್ರಿಯಾವಸ್ಥೆಗಳು ತಾನಲ್ಲ. ಕೇವಲದಲ್ಲಿಯ ಸಕಲ, ಕೇವಲದಲ್ಲಿಯ ಶುದ್ಧ, ಕೇವಲದಲ್ಲಿಯ ಕೇವಲವೆಂಬ ಕೇವಲತ್ರಿಯಾವಸ್ಥೆಗಳು ತಾನಲ್ಲ. ಜ್ಞಾತೃ ಜ್ಞಾನ ಜ್ಞೇಯವೆಂಬ ಜ್ಞಾನತ್ರಯಂಗಳು ತಾನಲ್ಲ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಯೆಂಬ ಅಷ್ಟಾಂಗಯೋಗಂಗಳು ತಾನಲ್ಲ. ಧರ್ಮ ಅರ್ಥ ಕಾಮ ಮೋಕ್ಷಂಗಳೆಂಬ ಚತುರ್ವಿಧ ಪುರುಷಾರ್ಥಂಗಳು ತಾನಲ್ಲ. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧಪದಂಗಳು ತಾನಲ್ಲ. ಅಣಿಮಾ ಗರಿಮಾ ಲಘಿಮಾ ಮಹಿಮಾ ಪ್ರಾಪ್ತಿ ಪ್ರಕಾವ್ಯ ಇಶಿತ್ವ ವಶಿತ್ವ ಎಂಬ ಅಷ್ಟಮಹದೈಶ್ವರ್ಯಂಗಳು ತಾನಲ್ಲ. ರಾಜಸಹಂಕಾರ ತಾಮಸಹಂಕಾರ ಸ್ವಹಂಕಾರವೆಂಬ ಅಹಂಕಾರತ್ರಯಂಗಳು ತಾನಲ್ಲ. ಅಂಜನಾಸಿದ್ಧಿ, ಘುಟಿಕಾಸಿದ್ಧಿ, ರಸಸಿದ್ಧಿ, ಪಾದೋದಕಸಿದ್ಧಿ, ಪರಕಾಯ ಪ್ರವೇಶ, ದೂರಶ್ರವಣ, ದೂರದೃಷ್ಟಿ, ತ್ರಿಕಾಲಜ್ಞಾನವೆಂಬ ಅಷ್ಟಮಹಾಸಿದ್ಧಿಗಳು ತಾನಲ್ಲ. ಉದರಾಗ್ನಿ ಮಂದಾಗ್ನಿ ಶೋಕಾಗ್ನಿ ಕ್ರೋಧಾಗ್ನಿ ಕಾಮಾಗ್ನಿಯೆಂಬ ಪಂಚಾಗ್ನಿಗಳು ತಾನಲ್ಲ. ಪ್ರಕೃತಿ, ಪುರುಷ, ಕಾಲ, ಪರ, ವ್ಯೋಮಾಕಾಶಂಗಳು ತಾನಲ್ಲ. ಊಧ್ರ್ವಶೂನ್ಯ, ಅಧಃಶೂನ್ಯ, ಮಧ್ಯಶೂನ್ಯ, ಸರ್ವಶೂನ್ಯವಾಗಿಹ ಸಹಜನಿರಾಲಂಬವೇ ತಾನೆಂದರಿದ ಮಹಾಶರಣಂಗೆ ನಾಮ ರೂಪ ಕ್ರಿಯಾತೀತವಾಗಿಹ ಮಹಾಘನವೇ ತನ್ನ ಶಿರಸ್ಸು ನೋಡಾ. ದಿವ್ಯಜ್ಞಾನವೇ ತನ್ನ ಚಕ್ಷು, ಅಚಲಪದವೇ ತನ್ನ ಪುರ್ಬು, ಅಚಲಾತೀತವೇ ತನ್ನ ಹಣೆ ನೋಡಾ. ನಿರಾಕುಳಪದವೇ ತನ್ನ ನಾಸಿಕ, ನಿರಂಜನಾತೀತವೆ ತನ್ನ ಉಶ್ವಾಸ-ನಿಶ್ವಾಸ ನೋಡಾ. ನಿರಾಮಯವೇ ತನ್ನ ಕರ್ಣ, ನಿರಾಮಯಾತೀತವೇ ತನ್ನ ಕರ್ಣದ್ವಾರ ನೋಡಾ. ಅಮಲ ನಿರ್ಮಲವೇ ತನ್ನ ಗಲ್ಲ, ಅಮಲಾತೀತವೇ ತನ್ನ ಗಡ್ಡಮೀಸೆ ಕೋರೆದಾಡೆ ನೋಡಾ. ನಾದಬಿಂದುಕಳಾತೀತವೆ ತನ್ನ ತಾಳೋಷ*ಸಂಪುಟ ನೋಡಾ. ಅಕಾರ, ಉಕಾರ, ಮಕಾರ, ನಾದ ಬಿಂದು ಅರ್ಧಚಂದ್ರ ನಿರೋದಿನಾದಾಂತ ಶಕ್ತಿವ್ಯಾಪಿನಿ ವ್ಯೋಮರೂಪಿಣಿ ಅನಂತ ಆನಂದ ಅನಾಶ್ರಿತ ಸುಮನೆ ಉನ್ಮನಿ ಇಂತೀ ಪ್ರಣವದಲ್ಲಿ ಉತ್ಪತ್ಯವಾದ ಷೋಡಶಕಳೆ ತನ್ನ ಷೋಡಶ ದಂತಂಗಳು ನೋಡಾ. ಆ ದಂತಂಗಳ ಕಾಂತಿ ಅನೇಕಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ. ತನ್ನ ಕೊರಳೆ ನಿರಾಕುಳ, ತನ್ನ ಭುಜಂಗಳೆ ಅಪ್ರಮಾಣ ಅಗೋಚರ ನೋಡಾ. ತನ್ನ ಹಸ್ತಾಂಗುಲಿ ನಖಂಗಳೆ ಪರತತ್ವ, ಶಿವತತ್ವ, ಗುರುತತ್ವ, ಲಿಂಗತತ್ವಂಗಳು ನೋಡಾ. ಪರಬ್ರಹ್ಮವೇ ತನ್ನ ಎದೆ, ಆ ಪರಬ್ರಹ್ಮವೆಂಬ ಎದೆಯಲ್ಲಿ ನಿರಂಜನಪ್ರಣವ ಅವಾಚ್ಯಪ್ರಣವವೆಂಬ ಸಣ್ಣ ಕುಚಂಗಳು ನೋಡಾ. ಚಿತ್ತಾಕಾಶ ಭೇದಾಕಾಶವೆ ತನ್ನ ದಕ್ಷಿಣ ವಾಮ ಪಾಶ್ರ್ವಂಗಳು ನೋಡಾ. ಬಿಂದ್ವಾಕಾಶವೇ ತನ್ನ ಬೆನ್ನು ನೋಡಾ. ಮಹಾಕಾಶವೇ ತನ್ನ ಬೆನ್ನ ನಿಟ್ಟೆಲವು ನೋಡಾ. ಪಂಚಸಂಜ್ಞೆಯನುಳ್ಳ ಅಖಂಡಗೋಳಕಾಕಾರಲಿಂಗವೆ ತನ್ನ ಗರ್ಭ ನೋಡಾ. ಆ ಗರ್ಭ ಅನೇಕಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದುನೋಡಾ. ಆ ಗರ್ಭದಲ್ಲಿ ಅನೇಕಕೋಟಿತತ್ವಂಗಳು, ಅನೇಕಕೋಟಿ ಸದಾಶಿವರು, ಅನೇಕಕೋಟಿ ಮಹೇಶ್ವರರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿರುದ್ರರು, ಅನೇಕಕೋಟಿ ವಿಷ್ಣಾ ್ವದಿಗಳಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಋಷಿಗಳು ಅನೇಕಕೋಟಿ ಚಂದ್ರಾದಿತ್ಯರು ಅಡಗಿಹರು ನೋಡಾ. ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ದೇವರ್ಕಗಳು, ಅನೇಕಕೋಟಿ ಬ್ರಹ್ಮಾಂಡಗಳಡಗಿಹವು ನೋಡಾ. ತನ್ನ ನಡುವೆ ವ್ಯೋಮಾತೀತವು, ತನ್ನ ಕಟಿಸ್ಥಾನವೇ ಕಲಾಪ್ರಣವ, ತನ್ನ ಪಚ್ಚಳವೆ ಅನಾದಿಪ್ರಣವ ಆದಿಪ್ರಣವ ನೋಡಾ. ತನ್ನ ಉಪಸ್ಥವೇ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ ಮೊದಲಾದ ಸಮಸ್ತ ದೇವರ್ಕಗಳಿಗೂ ಜನನಸ್ಥಳವಾಗಿಹ ನಿರ್ವಾಣಪದ ನೋಡಾ. ಶಿವಸಂಬಂಧ, ಶಕ್ತಿಸಂಬಂಧವಾಗಿಹ ಓಂಕಾರವೆ ತನ್ನ ಒಳದೊಡೆ ನೋಡಾ. ಸಚ್ಚಿದಾನಂದ ಪರಮಾನಂದವೆ ತನ್ನ ಒಳಪಾದ ಕಂಬಗಳು ನೋಡಾ. ಚಿದಾತ್ಮ ಪರಮಾತ್ಮನೆ ತನ್ನ ಹರಡು, ಅತಿಸೂಕ್ಷ್ಮಪಂಚಾಕ್ಷರವೆ ತನ್ನ ಪಾದಾಂಗುಷಾ*ಂಗುಲಿಗಳೆಂಬ ಸಾಯುಜ್ಯಪದ ನೋಡಾ. ತನ್ನ ಸ್ವರವೆ ಪರಾಪರ, ತನ್ನ ಮಾತೇ ಮಹಾಜ್ಯೋತಿರ್ಮಯಲಿಂಗ, ಚಿನ್ಮಯ ಚಿದ್ರೂಪ ಚಿತ್ಪ್ರಕಾಶವೆ ತನ್ನ ವಪೆ ನೋಡಾ. ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ, ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಮೊದಲಾಗಿ ಇನ್ನೂರ ಹದಿನಾರು ಷಡುಸ್ಥಲಲಿಂಗವೆ ತನ್ನಂತಃಸ್ಥಾನದಲ್ಲಿ ಧರಿಸಿಹ ಆಭೂಷಣಂಗಳು ನೋಡಾ. ಮಹಾಲಿಂಗವೇ ತುರುಬು, ಶಿವಜ್ಞಾನವೆ ಶೃಂಗಾರವಾಗಿಹ ತನ್ನ ತಾನರಿದು ಅಂತಃಶೂನ್ಯ, ಅಧಃಶೂನ್ಯ, ಬಹಿಃಶೂನ್ಯ, ದಶದಿಶಾಶೂನ್ಯ ನಿರಾಕಾರವಾಗಿಹ ತನ್ನ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳ ತಿಳಿದು ಮಹಾಶರಣನು ತಾನೆ ಗುರು, ತಾನೆ ಲಿಂಗ, ತಾನೆ ಜಂಗಮ, ತಾನೆ ಪರಮಪಾದೋದಕಪ್ರಸಾದ ನೋಡಾ. ತಾನೆ ನಾದಬಿಂದುಕಳಾತೀತ ನೋಡಾ. ತಾನೆ ಶೂನ್ಯ ನಿಶ್ಶೂನ್ಯನು, ತಾನೆ ಘನಶೂನ್ಯ, ಮಹಾಘನಶೂನ್ಯ ನೋಡಾ. ತಾನೆ ಬಯಲು ನಿರ್ಬಯಲು, ತಾನೆ ನಿರುಪಮ ನಿರಾಕಾರ ತಾನೆ ನಿರಾಳ ನಿರಾಲಂಬ ನೋಡಾ. ತಾನೆ ಸಚ್ಚಿದಾನಂದ ನಿತ್ಯಪರಿಪೂರ್ಣನು, ತನ್ನಿಂದಧಿಕವಪ್ಪ ಪರಬ್ರಹ್ಮವೊಂದಿಲ್ಲವಾಗಿ ತಾನೆ ಸ್ವಯಂಜ್ಯೋತಿರ್ಲಿಂಗ ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ತಾರಕಾಕೃತಿ, ನಕಾರಪ್ರಣಮ, ಆಧಾರಚಕ್ರ, ಸದ್‍ಭಕ್ತನೆ ಅಂಗ, ಸುಚಿತ್ತವೆ ಹಸ್ತ, ಆಚಾರಲಿಂಗ, ಘ್ರಾಣವೆಂಬ ಮುಖ, ಕ್ರಿಯಾಶಕ್ತಿ, ಶ್ರದ್ಧಾಭಕ್ತಿ, ಸುಗಂಧಪದಾರ್ಥ, ಗಂಧಪ್ರಸಾದ, ನಿವೃತ್ತಿಕಲೆ, ಕರ್ಮಸಾದಾಖ್ಯ, ಸತ್ತುವೆಂಬ ಲಕ್ಷಣ, ಪರವೆಂಬ ಸಂಜ್ಞೆ, ಋಗ್ವೇದ- ಇಂತಿವೆಲ್ಲವು ಇಷ್ಟಲಿಂಗದ ವೃತ್ತದಲ್ಲಿ ಸಂಬಂಧವು. ದಂಡಕಾಕೃತಿ, ಮಕಾರಪ್ರಣಮ, ಸಾಧಿಷಾ*ನಚಕ್ರ, ಮಹೇಶ್ವರನೆ ಅಂಗ, ಸುಬುದ್ಧಿಯೆ ಹಸ್ತ, ಗುರುಲಿಂಗ, ಜಿಹ್ವೆಯೆಂಬ ಮುಖ, ಜ್ಞಾನಶಕ್ತಿ, ನೈಷಿ*ಕಭಕ್ತಿ , ಸುರಸಪದಾರ್ಥ, ರಸಪ್ರಸಾದ, ಪ್ರತಿಷಾ*ಕಲೆ, ಕರ್ತೃಸಾದಾಖ್ಯ, ಚಿತ್ತುವೆಂಬ ಲಕ್ಷಣ, ಗೂಢವೆಂಬ ಸಂಜ್ಞೆ, ಯುಜುರ್ವೇದ ಇಂತಿವೆಲ್ಲವು ಇಷ್ಟಲಿಂಗದ ಕಟಿಯಲ್ಲಿ ಸಂಬಂಧವು. ಕುಂಡಲಾಕೃತಿ, ಶಿಕಾರಪ್ರಣಮ, ಮಣಿಪೂರಕಚಕ್ರ, ಪ್ರಸಾದಿಯೆ ಅಂಗ, ನಿರಹಂಕಾರವೆ ಹಸ್ತ , ಶಿವಲಿಂಗನೇತ್ರವೆಂಬ ಮುಖ, ಇಚ್ಛಾಶಕ್ತಿ , ಸಾವಧಾನಭಕ್ತಿ , ಸುರೂಪುಪದಾರ್ಥ, ರೂಪುಪ್ರಸಾದ, ವಿದ್ಯಾಕಲೆ, ಮೂರ್ತಿಸಾದಾಖ್ಯ, ಆನಂದವೆಂಬ ಲಕ್ಷಣ, ಶರೀರಸ್ಥವೆಂಬ ಸಂಜ್ಞೆ, ಸಾಮವೇದ- ಇಂತಿವೆಲ್ಲ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧವು. ಅರ್ಧಚಂದ್ರಾಕೃತಿ, ವಕಾರಪ್ರಣಮ, ಅನಾಹತ ಚಕ್ರ, ಪ್ರಾಣಲಿಂಗಿಯೆ ಅಂಗ, ಸುಮನವೆ ಹಸ್ತ , ಜಂಗಮಲಿಂಗ, ತ್ವಗೀಂದ್ರಿಯವೆಂಬ ಮುಖ, ಆದಿಶಕ್ತಿ , ಅನುಭಾವಭಕ್ತಿ , ಸುಸ್ಪರ್ಶನಪದಾರ್ಥ, ಸ್ಪರ್ಶನಪ್ರಸಾದ, ಶಾಂತಿಕಲೆ, ಅಮೂರ್ತಿಸಾದಾಖ್ಯ, ನಿತ್ಯವೆಂಬ ಲಕ್ಷಣ, ಲಿಂಗಕ್ಷೇತ್ರಸಂಜ್ಞೆ, ಅಥರ್ವಣವೇದ- ಇಂತಿವೆಲ್ಲ ಇಷ್ಟಲಿಂಗದ ಗೋಮುಖದಲ್ಲಿ ಸಂಬಂಧವು. ದರ್ಪಣಾಕೃತಿ, ಯಕಾರಪ್ರಣಮ, ವಿಶುದ್ಧಿ ಚಕ್ರ, ಶರಣನೆ ಅಂಗ, ಸುಜ್ಞಾನವೆ ಹಸ್ತ, ಪ್ರಸಾದಲಿಂಗ, ಶ್ರೋತ್ರವೆಂಬ ಮುಖ, ಪರಾಶಕ್ತಿ , ಆನಂದ ಭಕ್ತಿ , ಸುಶಬ್ದಪದಾರ್ಥ, ಶಬ್ದಪ್ರಸಾದ, ಶಾಂತ್ಯತೀತಕಲೆ, ಶಿವಸಾದಾಖ್ಯ, ಪರಿಣಾಮವೆಂಬ ಲಕ್ಷಣ, ಅನಾದಿವತ್ ಎಂಬ ಸಂಜ್ಞೆ, ಅಜಪೆವೇದ- ಇಂತಿವೆಲ್ಲ ಇಷ್ಟಲಿಂಗದ ನಾಳದಲ್ಲಿ ಸಂಬಂಧವು. ಒಂಕಾರಾಕೃತಿ, ಒಂಕಾರಪ್ರಣಮ, ಆಜ್ಞೇಯಚಕ್ರ, ಐಕ್ಯನೆ ಅಂಗ, ಸದ್‍ಭಾವಹಸ್ತ, ಮಹಾಲಿಂಗ, ಹೃದಯವೆಂಬ ಮುಖ, ಚಿಚ್ಛಕ್ತಿ , ಸಮರಸಭಕ್ತಿ , ಸುತೃಪ್ತಿಪದಾರ್ಥ, ತೃಪ್ತಿಪ್ರಸಾದ, ಶಾಂತ್ಯತೀತೋತ್ತರಕಲೆ, ಮಹಾಸಾದಾಖ್ಯ, ಅಖಂಡವೆಂಬ ಲಕ್ಷಣ, ಮಹಾಸಂಜ್ಞೆ, ಗಾಯತ್ರಿಯೆಂಬ ವೇದ- ಇಂತಿವೆಲ್ಲ ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧವು. ಇಂತೀ ತೊಂಬತ್ತಾರು ಸಕೀಲಗಳನೊಳಕೊಂಡ ಮಹಾಘನ ಪರಾತ್ಪರವಾದ ಇಷ್ಟಲಿಂಗವನೆ ಕರ ಮನ ಭಾವದೊಳಗೆ ಕುಳ್ಳಿರಿಸಿ ಅರ್ಚಿಸಿ, ಧ್ಯಾನಿಸಿ ಕೂಡಿ ಎರಡಳಿದ ಮಹಾಘನ ಶರಣರ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಕರುಣದಿಂದ ವಿಭೂತಿಯ ಪಟ್ಟವಂ ಕಟ್ಟಿ ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ ಬ್ರಹ್ಮರಂಧ್ರ ಶಿಖಾಚಕ್ರ ಪಶ್ಚಿಮಚಕ್ರ ನಾದಚಕ್ರ ಬಿಂದುಚಕ್ರ ಕಲಾಚಕ್ರವೆಂಬ ದ್ವಾದಶಚಕ್ರಂಗಳ ದಳ-ವರ್ಣ-ಅಕ್ಷರಂಗಳಂ ನ್ಯಾಸವಮಾಡಿ ತೋರಿದಬಳಿಕ ಆ ಶಿವಭಕ್ತನೆ ಶಿವನು, ಆತನ ಮತ್ರ್ಯನೆಂದರೆ ನಾಯಕನರಕ ತಪ್ಪದು ಕಾಣಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆಧಾರ, ಸ್ವಾಧಿಷ*ನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾಚಕ್ರವೆಂಬ ಷಡಾಧಾರಚಕ್ರವನರಿದು, ಏರಿ ಏರಿ ಇಳಿದು ಆದಿಯ ನೋಡಿಕೊಂಡು, ಆದಿ ಅನಾದಿ ಎಂಬ ಭೇದವ ನೋಡಿ, ಶೋಧಿಸಿ, ಸಪ್ತಧಾತುವಿನ ನೆಲೆಯ ಕಂಡು, ಮನ ಬುದ್ಧಿ ಚಿತ್ತವ ಏಕಹುರಿಯ ಮಾಡಿ, ಉತ್ಪತ್ತಿ ಸ್ಥಿತಿ ಲಯವೆಂಬ ಕಾಲಮೂಲಾದಿಗಳ ಸುಟ್ಟು, ಧ್ಯಾನದಲ್ಲಿ ನಿಂದು, ಅಂಗ ಲಿಂಗ ಹಸ್ತ ಮುಖ ಅರ್ಪಿತ ಅವಧಾನವೆಂಬ ಷಟ್‍ಸ್ಥಲವ ಮೆಟ್ಟಿನಿಂದು, ಆರರಿಂದ ವಿೂರಿ ತೋರುವ ಬೆಳಗ ಕಂಡು, ನಾನು ಒಳಹೊಕ್ಕು ನೋಡಲಾಗಿ, ಒಳಹೊರಗೆ ತೊಳತೊಳಗಿ ಬೆಳಗುತ್ತ ಇಳೆ ಬ್ರಹ್ಮಾಂಡ ತಾನೆಯಾಗಿರ್ದ ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.
--------------
ಹಡಪದ ಅಪ್ಪಣ್ಣ
ಆತ್ಮಸ್ಥಿತಿ ಶಿವಯೋಗ ಸಂಬಂಧವ ಅರಿದೆನೆಂದಡೆ ಹೇಳಿರಣ್ಣ ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚತತ್ವದ ವಿವರಮಂ ಪೇಳ್ವೆ; ಅಸ್ಥಿ ಮಾಂಸ ಚರ್ಮ ರುಧಿರ ಶುಕ್ಲ ಮೇಧಸ್ಸು ಮಜ್ಜೆ ಎಂಬ ಸಪ್ತಧಾತುವಿನ ಇಹವು, ಶ್ರೋತ್ರ ನೇತ್ರ ಘ್ರಾಣ ಜಿಹ್ವೆ ತ್ವಕ್ಕು ಎಂಬ ಪಂಚಜ್ಞಾನೇಂದ್ರಿಯಂಗಳಿಂದ ಶರೀರವೆನಿಸಿಕೊಂಬುದು. ಶಬ್ದ ಸ್ಪರ್ಶ ರೂಪು ರಸ ಗಂಧವೆಂಬಿವು ಪಂಚೇಂದ್ರಿಯಗಳು, ವಾಕ್ಕು ಪಾಣಿ ಪಾದ ಪಾಯು ಗುಹ್ಯವೆಂಬ ಪಂಚಕರ್ಮೇಂದ್ರಿಯಂಗಳಿವರು ಪರಿಚಾರಕರು, ಇಡಾ ಪಿಂಗಲಾ ಸುಷುಮ್ನಾ ಗಾಂಧಾರಿ ಹಸ್ತಿಜಿಹ್ವಾ ಪೂಷಾ ಅಲಂಬು ಲಕುಹಾ ಪಯಸ್ವಿನಿ ಶಂಖಿನಿಯೆಂಬ ದಶನಾಡಿಗಳಂ ಭೇದಿಸುತ್ತಂ. ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕೃಕರ ದೇವದತ್ತ ಧನಂಜಯವೆಂಬ ದಶವಾಯುವಿನ ಸ್ಥಾನಂಗಳನರಿದು, ಆಧ್ಯಾತ್ಮಿಕ ಆಧಿದೈವಿಕ ಆದಿ¨sõ್ಞತಿಕವೆಂಬ ತಾಪತ್ರಯಂಗಳನರಿದು, ರಾಜಸ ತಾಮಸ ಸಾತ್ವಿಕವೆಂಬ ಗುಣತ್ರಯಂಗಳನಳಿದು, ಮನ ಬುದ್ಧಿ ಚಿತ್ತ ಅಹಂಕಾರವೆಂಬ ಅಂತಃಕರಣ ಚತುಷ್ಟಯಂಗಳು ತಿಳಿದು, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್ವರ್ಗಂಗಳ ಗೆಲಿದು, ಜಾಯತೆ ಅಸ್ತಿತೆ ವರ್ಧತೆ ಪರಿಣಮತೆ ಅಪಕ್ಷೀಯತೆ ವಿನಶ್ಯತೆ ಎಂಬ ಷಡ್ಬಾವ ವಿಕಾರಂಗಳಂ ಬಿಟ್ಟು, ಕ್ಷುತ್ತು ಪಿಪಾಸೆ ಶೋಕ ಮೋಹ ಜರೆ ಮರಣವೆಂಬ ಷಡೂರ್ಮಿಗಳ ವರ್ಮವ ತಿಳಿದು, ಜಾತಿ ವರ್ಣ ಆಶ್ರಮ ಕುಲ ಗೋತ್ರ ನಾಮವೆಂಬ ಷಡ್‍ಭ್ರಮೆಗಳಂ ತಟ್ಟಲೀಯದೆ. ಅನ್ನಮಯ ಪ್ರಾಣಮಯ ಮನೋಮಯ ಆನಂದಮಯವೆಂಬ ಪಂಚಕೋಶಂಗಳ ಸಂಬಂಧವನರಿದು, ಕುಲ ಛಲ ದಾನ ಯೌವನ ರೂಪು ರಾಜ್ಯ ವಿದ್ಯೆ ತಪವೆಂಬ ಅಷ್ಟಮದಂಗಳಂ ಕೆಡಿಸಿ, ಧರ್ಮ ಅರ್ಥ ಕಾಮ ಮೋಕ್ಷವೆಂಬ ಚತುರ್ವಿಧ ಪುರುಷಾರ್ಥಂಗಳಂ ಕೆಡಿಸಿ, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ ಚತುರ್ವಿಧ ಮುಕ್ತಿಯ ಬಯಸದೆ, ಬ್ರಹ್ಮ ಕ್ಷತ್ರಿಯ ವೈಶ್ಯ ಶೂದ್ರರೆಂಬ ನಾಲ್ಕು ಜಾತಿಯಲ್ಲಿ ಭೇದವೆಂತೆಂದರಿದು ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾ ಎಂಬ ಷಡುಚಕ್ರಂಗಳಂ ಭೇದಿಸಿ, ಕೃತಯುಗ ದ್ವಾಪರಯುಗ ಕಲಿಯುಗಂಗ?ಡಗಿ, ಪೃಥ್ವಿ ಸಲಿಲ ಪಾವಕ ಪವನ ಅಂಬರ ರವಿ ಶಶಿ ಆತ್ಮವೆಂಬ ಅಷ್ಟತನು ಮದಂಗಳ ಭೇದಾಭೇದಂಗಳ ಭೇದಿಸಿ, ಸ್ಥೂಲತನು ಸೂಕ್ಷ್ಮತನು ಕಾರಣತನು ಚಿದ್ರೂಪತನು ಚಿನ್ಮಯತನು ಆನಂದತನು ಅದ್ಭುತತನು ಶುದ್ಧತನುವೆಂಬ ಅಷ್ಟತನುವ ಏಕಾರ್ಥವಂ ಮಾಡಿ, ಕಪಿಲವರ್ಣ ನೀಲವರ್ಣ ಮಾಂಜಿಷ್ಟವರ್ಣ ಪೀತವರ್ಣ ಕಪ್ಪುವರ್ಣ ಗೌರವರ್ಣ ಶ್ವೇತವರ್ಣವೆಂಬ ಸಪ್ತಧಾತುಗಳ ಸ್ವಸ್ಥಾನವಂ ಮಾಡಿ, ಜಾಗ್ರ ಸ್ವಪ್ನ ಸುಷುಪ್ತಿ ಎಂಬ ಅವಸ್ಥಾತ್ರಯಂಗಳಂ ಮೀರಿ, ಜೀವಾತ್ಮ ಅಂತರಾತ್ಮ ಪರಮಾತ್ಮನೆಂಬೀ ಆತ್ಮತ್ರಯಂಗಳನೊಂದು ಮಾಡಿ, ಅಣಿಮಾ ಮಹಿಮಾ ಗರಿಮಾ ಲಘಿಮಾ ಪ್ರಾಪ್ತಿ ಪ್ರಾಕಾಮ್ಯ ವಶಿತ್ವ ಈಶತ್ವವೆಂಬ ಅಷ್ಟಸಿದ್ಧಿಗಳಂ ಬಿಟ್ಟು, ಅಂಜನಸಿದ್ಧಿ ಘುಟಿಕಾಸಿದ್ಧಿ ರಸಸಿದ್ಧಿ ತ್ರಿಕಾಲಜ್ಞಾನಸಿದ್ಧಿ ಎಂಬ ಅಷ್ಟಮಹಾಸಿದ್ಧಿಗಳಂ ತೃಣೀಕೃತಮಂ ಮಾಡಿಕೊಂಬುದು. ತನುವ್ಯಸನ ಮನವ್ಯಸನ ಧನವ್ಯಸನ ರಾಜ್ಯವ್ಯಸನ ವಿಶ್ವವ್ಯಸನ ಉತ್ಸಾಹವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನಂಗಳಂ ಬಿಟ್ಟು, ವಡಬಾಗ್ನಿ ಮಂದಾಗ್ನಿ ಉದರಾಗ್ನಿ ಶೋಕಾಗ್ನಿ ಕಾಮಾಗ್ನಿ ಎಂಬ ಪಂಚಾಗ್ನಿಯಂ ಕಳೆದು, ಶರೀರಾರ್ಥ ಪರಹಿತಾರ್ಥ ಯೋಗಾರ್ಥ ಪರಮಾರ್ಥ ತತ್ವಾರ್ಥಂಗಳಲ್ಲಿ ಅವಧಾನಿಯಾಗಿ, ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗವೆಂಬ ಷಡುಸ್ಥಲಂಗ?ಂ ಭೇದಿಸಿ, ದಾಸ ವೀರದಾಸ ಭೃತ್ಯ ವೀರಭೃತ್ಯ ಸಜ್ಜನಸಮಯಾಚಾರ ಸಕಲಾವಸ್ತೀಯರ್ಚನೆಯೆಂಬ ಷಡ್ವಿಧ ದಾಸೋಹದಿಂದ ನಿರಂತರ ತದ್ಗತವಾಗಿ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಯೋಗ ಸಮಾಧಿ ಎಂಬ ಅಷ್ಟಾಂಗ ಯೋಗದಲ್ಲಿ ಮುಕ್ತವಾಗಿ, ಬಾಲ ಬೋಳ ಪಿಶಾಚ ರೂಪಿಗೆ ಬಾರದ ದೇಹಂಗಳನರಿದು ಅನಿತ್ಯವಂ ಬಿಡುವುದು. ಲಯಯೋಗವನರಿದು ಹಮ್ಮ ಬಿಡುವುದು. ಮಂತ್ರಯೋಗವನರಿದು ಆಸೆಯಂ ಬಿಡುವುದು. ಮರೀಚಿಕಾಜಲದಂತೆ ಬೆಳಗುವ ಶರಣ ಆತ ರಾಜಯೋಗಿ, ಆತಂಗೆ ನಮೋ ನಮೋ ಎಂಬೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸ್ಥಾನಭೇದ ಸಂಶಯ ಆಧಾರ ಸ್ವಾದಿಷ್ಟ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೆ ಎಂಬ ಷಟ್‍ಚಕ್ರಂಗಳ ವರ್ತನೆಯ ನುಡಿದಡೇನು ? ಆದಿ ಅನಾದಿಯ ಕೇಳಿದಡೇನು ? ತನ್ನಲ್ಲಿದ್ದುದ ತಾನರಿಯದನ್ನಕ್ಕ ಉನ್ಮನಿಯ ರಭಸದ ಸಿಂಹಾಸನದ ಮೇಲೆ ಚೆನ್ನಮಲ್ಲಿಕಾರ್ಜುನನ ಭೇದಿಸಲರಿಯರು.
--------------
ಅಕ್ಕಮಹಾದೇವಿ
ಲಿಂಗಗಂಭೀರ ಸುನಾದವೆ ತನುಗುಣ ಚರಿತ್ರ ಜಂಗಮಗಂಭೀರ ಅನಾಹತವೆ ಮನಗುಣ ಸ್ವಭಾವ. ಈ ಎರಡರ ಸಂಬಂಧವೆ ಒಡಲು. ಪರಮಾನಂದ ಜಲದಲ್ಲಿ ಅಲುಬಿ, ಮಹಾಪ್ರಕಾಶದಲ್ಲಿ ಆರಿಸಿ ಅನಾಹತ ಮಥನದಲ್ಲಿ ಘಟ್ಟಿಸಿ ಆ ವಸ್ತ್ರವ ಎನಗೆ ಕೊಟ್ಟಡೆ ಉಡದ ಮುನ್ನವೆ ಉರಿ ಹತ್ತಿತ್ತು ನೋಡಾ ! ಆ ಉರಿಯು ಕಣ್ಣಿಗೆ ಕಾಣಬಾರದು ಮನಕ್ಕೆ ನೆನೆಯಬಾರದು. ಉರಿ ಉಂಟು ಉಷ್ಣವಿಲ್ಲದ ಆ ಸ್ವಯಂಜ್ಯೋತಿಯ ನಿಜನಿವಾಸದಲ್ಲಿ ನಿಶ್ಚಿಂತನಾಗಿದ್ದು, ಮಡಿವಾಳನ ಕೃಪೆಯಿಂದ ನಾನು ಬದುಕಿದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯಯೆಂಬ ಷಡುಸ್ಥಲಕ್ಕೆ ಷಡ್ವಿಧಮೂರ್ತಿಗಳಿಪ್ಪವು ನೋಡಾ. ಅದು ಹೇಗೆಂದಡೆ : ಆಧಾರದಲ್ಲಿ ಬ್ರಹ್ಮನೆಂಬ ಮೂರ್ತಿ, ಸ್ವಾಧಿಷಾ*ನದಲ್ಲಿ ವಿಷ್ಣುವೆಂಬ ಮೂರ್ತಿ, ಮಣಿಪೂರಕದಲ್ಲಿ ರುದ್ರನೆಂಬ ಮೂರ್ತಿ, ಅನಾಹತದಲ್ಲಿ ಈಶ್ವರನೆಂಬ ಮೂರ್ತಿ, ವಿಶುದ್ಧಿಯಲ್ಲಿ ಸದಾಶಿವನೆಂಬ ಮೂರ್ತಿ, ಆಜ್ಞೇಯದಲ್ಲಿ ಪರಶಿವನೆಂಬ ಮೂರ್ತಿ, ಇಂತೀ ಭೇದವ ಮರೆತು ಇರಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞಾಯೆಂಬ ಷಡುಚಕ್ರದೊಳಗಣ ದಳ-ವರ್ಣ-ಅಕ್ಷರ-ಅಧಿದೇವತೆ ಶಕ್ತಿ-ಭಕ್ತಿ -ಸಾದಾಖ್ಯಂಗಳ ದೇವರೆಂಬರು ; ಅಲ್ಲಲ್ಲ ನೋಡಾ. ವಾಙ್ಮನಕ್ಕಗೋಚರವಾಗಿಹ ಪರಶಿವತತ್ವವ ತಾನೆಂದರಿದಡೆ ತಾನೆ ದೇವ ನೋಡಾ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಯೋಗೀಶ್ವರರ ಧ್ಯಾನಯೋಗಕ್ಕೆ ಸ್ಥಾನಂಗಳಾವುವೆನೆ : ಆಧಾರ ಸ್ವಾಧಿಷಾ*ನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯ ಭ್ರೂಮಧ್ಯಾದಿ ಸ್ಥಾನಂಗಳಲ್ಲಿ ಬಂಧಮುದ್ರೆಗಳಿಂದೆ ಧ್ಯಾನಮಂ ಮಾಳ್ಪುದೆಂತೆನೆ : ಆಧಾರಚಕ್ರಗಳ ನಾಲ್ಕೆಸಳಮಧ್ಯದಲ್ಲಿ ಇಷ್ಟಾರ್ಥಮಂ ಕೊಡುವ ಸುವರ್ಣ ಕಾಂತಿಯನುಳ್ಳ ಆಧಾರಶಕ್ತಿಯಂ ಧ್ಯಾನಿಸುವುದು. ಸ್ವಾಧಿಷಾ*ನಚಕ್ರ ಆರೆಸಳಮಧ್ಯದಲ್ಲಿ ಸಕಲವರ್ಣದಿಂ ಲಿಂಗಸ್ವರೂಪನಾದ ಶಿವನಂ ಧ್ಯಾನಿಸುವುದು. ಮಣಿಪೂರಕಚಕ್ರ ಹತ್ತೆಸಳಮಧ್ಯದಲ್ಲಿ ಸುಪ್ತ ಸರ್ಪಾಕಾರದ ಮಿಂಚಿಗೆ ಸಮಾನದೀಪ್ತಿಯುಳ್ಳ ಸಕಲಸಿದ್ಧಿಗಳಂ ಕೊಡುವ ಕುಂಡಲಿಶಕ್ತಿಯಂ ಧ್ಯಾನಿಸುವುದು. ಅನಾಹತಚಕ್ರ ಹನ್ನೆರಡೆಸಳಮಧ್ಯದಲ್ಲಿ ಜ್ಯೋತಿರ್ಮಯಲಿಂಗಮಂ ಧ್ಯಾನಿಸುವುದು. ವಿಶುದ್ಧಿಚಕ್ರ ಷೋಡಶದಳಮಧ್ಯದಲ್ಲಿ ಸುಸ್ಥಿರಮಾದ ಆನಂದರೂಪಿಣಿಯಾದ ಸುಷುಮ್ನೆಯಂ ಧ್ಯಾನಿಸುವುದು. ಆಜ್ಞಾಚಕ್ರ ದ್ವಿದಳಮಧ್ಯದಲ್ಲಿ ವಾಕ್ಸಿದ್ಧಿಯಂ ಕೊಡುವ ದೀಪದ ಜ್ವಾಲೆಗೆ ಸಮಾನವಾದ ಜ್ಞಾನನೇತ್ರವೆನಿಸುವ ಶುದ್ಧಪ್ರಸಾದಜ್ಯೋತಿಯಂ ಧ್ಯಾನಿಸುವುದೇ ಧ್ಯಾನಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ದಾಯವ ನುಂಗಿದ ಬಣ್ಣ ಬಣ್ಣವ ನುಂಗಿದ ದಾಯ, ಆನಂದ ಪ್ರವೇಶಿಸಿದಲ್ಲಿ ತಾನೆಯಾದಳವ್ವೆ ಅನಾಹತ ಸ್ವರವನರ್ಪಿತವ ಮಾಡಿ ಕಪಿಲಸಿದ್ಧ ಮಲ್ಲಿಕಾರ್ಜುನಯ್ಯನಲ್ಲಿ ನಿತ್ಯಳಾದಳವ್ವೆ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->