ಅಥವಾ

ಒಟ್ಟು 47 ಕಡೆಗಳಲ್ಲಿ , 16 ವಚನಕಾರರು , 46 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಥಮ ಗುರು ಕಾಣಲಿಕೆಯಾಗಿ ಕರ್ಮಂಗಳು ಬೆದರಿ ಬೆಚ್ಚಿದವು: ಹುಸಿಯಾಮಿಷ ತಾಮಸ ಕುಟಿಲಂಗಳು ತವಗೆ ನಿಂದಿರೆಠ್ಞವಿಲ್ಲೆನುತಿದ್ದವು. ಸದ್ಗುರು ಕಾರುಣ್ಯ ಹಸ್ತಮಸ್ತಕ ಸಂಯೋಗದಲ್ಲಿ ಪೂರ್ವಗುಣವಳಿದು ಪುನರ್ಜಾತನಾಗಿ, ಕರಣಾದಿಗಳ ಕಳೆದು ಶಿವಲಿಂಗದಲ್ಲಿ ಉಳಿದು ಅನುಪಮ ಸುಖಸಾರಾಯ ಶರಣನೆನಿಸಿ[ದಫ] ಇದನರಿದು ಲಿಂಗದಲ್ಲಿ ಜಂಗಮದಲ್ಲಿ ಕರುಣವ ಪಡೆದು ಭವಿಯನೊಲ್ಲೆನೆಂದು ಬೇರೆ ನಿಂದ ಕಾರಣ ಕೂಡಲಚೆನ್ನಸಂಗಮದೇವಾ ನಿಮ್ಮ ಶರಣ ಭವಕಲ್ಪಿತವ ಕಳೆದ.
--------------
ಚನ್ನಬಸವಣ್ಣ
ಅಖಂಡ ಪ್ರಕಾಶಾಲಯ ಬ್ರಹ್ಮವನರಸಿಕೊಂಡು ಆ ವೀರಸ್ಥಲದಲ್ಲಿ ಧರಿಸಪ್ಪ ಅನುಪಮ ವೀರಮಾಹೇಶ್ವರನ ನಡೆಯಲ್ಲಿ ತೋರುವುದು, ನುಡಿಯಲ್ಲಿ ತೋರುವುದು, ಹಿಡಿವಲ್ಲಿ ಕಾಣುವುದು, ಕೊಡುವಲ್ಲಿ ಕಾಂಬುವುದು, ಕೊಂಬಲ್ಲಿ ಕಾಣುವುದು, ಬರುವಲ್ಲಿ ತೋರುವುದು, ಹೋಗುವಲ್ಲಿ ತೋರುವುದು ಗುರುನಿರಂಜನ ಚನ್ನಬಸವಲಿಂಗವು ತಾನೇ ನಿರುತವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನಂತಕಾಲ ಅಗಲಿದ ನಲ್ಲನ ಕೂಡಿಹೆನೆಂಬ ಸತಿಗೆ ಕೂಡಿದ ಬಳಿಕ ಕೂಡಿಹೆನೆಂಬ ಅವಸ್ಥೆಯುಂಟೆ ಹೇಳಾ?. ಕ್ಷುಧೆಯಡಿಸಿದವ ಭೋಜನವ ಮಾಡಿದ ಬಳಿಕ ಮತ್ತೆ ಭೋಜನವ ಮಾಡಿಹೆನೆಂಬ ಅವಸ್ಥೆಯುಂಟೇ ಹೇಳಾ?. ರುsುಳ ಹತ್ತಿದವ ಉದಕದಲ್ಲಿ ಮುಳುಗಿದ ಬಳಿಕ ಮತ್ತೆ ಉದಕದಲ್ಲಿ ಮುಳುಗಿಹೆನೆಂಬ ಅವಸ್ಥೆಯುಂಟೆ ಹೇಳಾ?. ಶಿವನ ನೆನೆನೆನೆದು ಮನ ಶಿವನಲ್ಲಿ ಲೀಯವಾದ ಬಳಿಕ ಮತ್ತೆ ನೆನೆದಿಹೆನೆಂಬ ಅವಸ್ಥೆಯುಂಟೆ ಹೇಳಾ. ಅನುಪಮ ನಿಜಾನುಭವ ಸಂಧಾನ ನಿಂದ ನಿಜವು ತಾನೇ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ ನಿಲವು.
--------------
ಸ್ವತಂತ್ರ ಸಿದ್ಧಲಿಂಗ
ಗಂಡನ ಸುಖಬಲ್ಲ ಮಿಂಡೆಯರೆಲ್ಲ ಬನ್ನಿರೆ. ತಂಡ ತಂಡದ ಭೋಗವನಾ ಮಂಡಲದ ಮಾನಿನಿಯರೇನು ಬಲ್ಲರು ಕಾಣಿರೆ ! ಸುಚಿತ್ತಾಲಯದಲ್ಲಿ ಬಹಿರಚತುಷ್ಟಿಕಳಾಯುಕ್ತದಿಂ ನೆರೆವ ವತ್ತರ ಒಲುಮೆಯ ರತಿಯೊಳ್ಮುಳುಗಿದ ಸೊಬಗಿನ ಸೊನ್ನೆಯನೇನೆಂಬೆನವ್ವ ! ಸುಬುದ್ಧಿ ನಿಲಯದಲ್ಲಿ ಮಧ್ಯಚತುಷ್ಟಿಕಳಾಯುಕ್ತದಿಂ ಕೂಡುವ ಬಣ್ಣಿತೆ ಭಾವರಮ್ಯ ನಯವಪ್ಪುಗೆಯಸುಖದೊಳ್ಮುಳುಗಿದ ಪರಿಣಾಮದ ಕುಶಲವನೇನೆಂಬೆನವ್ವ ! ನಿರಹಂಕಾರ ಗೃಹದಲ್ಲಿ ಅಂತಃಚತುಷ್ಟಿಕಳಾಯುಕ್ತದಿಂ ಸಂಯೋಗಿಸುವ ಎಳೆಮೋಹ ಸಮತೆಯ ಸುಖದೊಳ್ಮುಳುಗಿದ ಪರಮಪರಿಣಾಮವನೇನೆಂಬೆನವ್ವ ! ಸುಮನಮಂಟಪದಲ್ಲಿ ಮಹಾನುಭಾವ ಚತುಷ್ಟಿಕಳಾಯುಕ್ತದಿಂ ಸಂಯೋಗಿಸುವ ಕಲೆ ಸೋಂಕು ರತಿರಮ್ಯದೊಳ್ಮುಳುಗಿದ ಅತಿಶಯದುನ್ನತಿಯನೇನೆಂಬೆನವ್ವ ! ಸುಜ್ಞಾನಮಂದಿರದಲ್ಲಿ ಆನಂದಚತುಷ್ಟಿಕಳಾಯುಕ್ತದಿಂ ನೆರೆವ ಮೆಚ್ಚು ಅಚ್ಚೊತ್ತಿರ್ದವಿರಳ ಪರಿ ಸುಖವನೇನೆಂಬೆನವ್ವ ! ಸದ್ಭಾವಾಲಯದಲ್ಲಿ ಸಮರಸಚತುಷ್ಟಿಕಳಾಯುಕ್ತದಿಂ ಸತ್ಕೂಟ ಸನುಮತವೆನಿಸುವ ಅನುಪಮ ಸುಖರತಿಯೊಳ್ಮುಳುಗಿದ ಅಗಣಿತದುನ್ನತಿಯನೇನೆಂಬೆನವ್ವ ! ನಿಜಾಲಯದಲ್ಲಿ ನಿತ್ಯನಿಬ್ಬೆರಗು ಪರವಶ ಪರಿಪೂರ್ಣವೆಂಬ ಅಖಂಡ ಚತುಷ್ಟಿಕಳಾಯುಕ್ತದಿಂ ಅಭಿನ್ನಸಂಯೋಗದತಿಶಯದಾನಂದದೊಳ್ಮುಳುಗಿದ ಘನಸುಖದುನ್ನತಿಯ ಗುರುನಿರಂಜನ ಚನ್ನಬಸವಲಿಂಗದೊಳಗೆ ಏನೆಂಬೆನವ್ವ !
--------------
ದೇಶಿಕೇಂದ್ರ ಸಂಗನಬಸವಯ್ಯ
ಅದ್ವೈತನ ಕರಸ್ಥಲದೊಳಗೆ, ಅನಂತನೆಂಬ ಗಿಳಿ ಮೂರ್ತಗೊಂಡು ಅತೀತ ಅನಾಗತ ವರ್ತಮಾನವೆಂಬ ಕೊರೆಕೂಳನುಂಡು ಓದಿತ್ತು ಅಗಣಿತ ಪುರಾಣ(ವ), ಅನಾಮಯ ಶಾಸ್ತ್ರವನು, ಅನುಪಮ ವೇದವೆಂದು._ ನಿಃಸ್ಥಲವ ಸ್ಥಲವಿಡಲು, ನಿರ್ಮಳಾತ್ಮಂಗೆ ಇಹವಿಲ್ಲ ಪರವಿಲ್ಲ ! ಆದಿ ಮಧ್ಯಾಂತ ನಿರಾಳ ಗುಹೇಶ್ವರನ ಅನುಭವಿಗೆ ಸರ್ವಾಂಗ ಲಿಂಗವು !
--------------
ಅಲ್ಲಮಪ್ರಭುದೇವರು
ಆಚಾರಲಿಂಗಕ್ಕೆ ಅಂಗವಾದ ಅನುಪಮ ಶರಣನ ಕಂಡರೆ ಪೂರ್ಣೇಂದುವಿಂಗಿದಿರಗಡಲದಂತಾಯಿತ್ತೆನ್ನ ತನು; ರವಿಬರವಿಂಗರಳಿದ ಪದುಮದಂತಾಯಿತ್ತೆನ್ನ ಹೃದಯ; ಮೇಘದರ್ಶನಸುಖದ ಸಿಖಿಯಂತಾಯಿತ್ತೆನ್ನ ಗಮನಗತಿ; ಚಂಪಕದರಳಿಂಗೆರಗಿದ ಭ್ರಮರದಂತಾಯಿತ್ತೆನ್ನಭಾವ; ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅನುಪಮ ಶರಣನ ನೆನಹಿನ ಕೊನೆಯಲ್ಲಿ ಘನಲಿಂಗವು. ಆ ಘನಲಿಂಗದ ನೆನಹಿನ ಕೊನೆಯಲ್ಲಿ ನಿರವಯವು. ಆ ನಿರವಯದ ನೆನಹಿನ ಕೊನೆಯಲ್ಲಿ ನಿರಾಲಂಬವು. ಆ ನಿರಾಲಂಬದ ನೆನಹಿನ ಕೊನೆಯಲ್ಲಿ ನಿರಾಳವು. ಆ ನಿರಾಳದ ನೆನಹಿನ ಕೊನೆಯಲ್ಲಿ ಆದಿಮಹಾಲಿಂಗವು. ಆ ಆದಿ ಮಹಾಲಿಂಗದ ನೆನಹಿನ ಕೊನೆಯಲ್ಲಿ ಚಿತ್‍ಶಕ್ತಿ. ಆ ಚಿತ್‍ಶಕ್ತಿಯ ನೆನಹಿನ ಕೊನೆಯಲ್ಲಿ ಪರಮೇಶ್ವರನು. ಆ ಪರಮೇಶ್ವರನ ನೆನಹಿನ ಕೊನೆಯಲ್ಲಿ ಪರಾಶಕ್ತಿ. ಆ ಪರಾಶಕ್ತಿಯ ನೆನಹಿನ ಕೊನೆಯಲ್ಲಿ ಸದಾಶಿವನು. ಆ ಸದಾಶಿವನ ನೆನಹಿನ ಕೊನೆಯಲ್ಲಿ ಆದಿಶಕ್ತಿ. ಆ ಆದಿಶಕ್ತಿಯ ನೆನಹಿನ ಕೊನೆಯಲ್ಲಿ ಈಶ್ವರನು. ಆ ಈಶ್ವರನ ನೆನಹಿನ ಕೊನೆಯಲ್ಲಿ ಇಚ್ಛಾಶಕ್ತಿ. ಆ ಇಚ್ಛಾಶಕ್ತಿಯ ನೆನಹಿನ ಕೊನೆಯಲ್ಲಿ ಮಹೇಶ್ವರನು. ಆ ಮಹೇಶ್ವರನ ನೆನಹಿನ ಕೊನೆಯಲ್ಲಿ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ನೆನಹಿನ ಕೊನೆಯಲ್ಲಿ ಶ್ರೀರುದ್ರಮೂರ್ತಿ. ಆ ಶ್ರೀರುದ್ರಮೂರ್ತಿಯ ನೆನಹಿನ ಕೊನೆಯಲ್ಲಿ ವಿಷ್ಣುವು. ಆ ವಿಷ್ಣುವಿನ ನೆನಹಿನ ಕೊನೆಯಲ್ಲಿ ಮಹಾಲಕ್ಷ್ಮಿ. ಆ ಮಹಾಲಕ್ಷ್ಮಿಯ ನೆನಹಿನ ಕೊನೆಯಲ್ಲಿ ಬ್ರಹ್ಮನು. ಆ ಬ್ರಹ್ಮನ ನೆನಹಿನ ಕೊನೆಯಲ್ಲಿ ಸರಸ್ವತಿ. ಆ ಸರಸ್ವತಿಯ ನೆನಹಿನ ಕೊನೆಯಲ್ಲಿ ಸಕಲ ಚರಾಚರಂಗಳು. ಇಂತಿವೆಲ್ಲವು ಶರಣನ ನೆನಹುದೋರಿದಲ್ಲಿಯೇ ತೋರುತಿರ್ಪವು, ಆ ಶರಣನ ನೆನಹು ನಿಂದಲ್ಲಿಯೇ ಅಡುಗುತಿರ್ಪುವಾಗಿ, ಅಖಂಡೇಶ್ವರಾ, ನಿಮ್ಮ ಶರಣನು ಘನಕ್ಕೆ ಘನಮಹಿಮ, ವಾಙ್ಮನಕ್ಕಗೋಚರನು, ಉಪಮೆಗೆ ಉಪಮಾತೀತನು ನೋಡಾ.
--------------
ಷಣ್ಮುಖಸ್ವಾಮಿ
ಭವನಾಶಿನಿಯೆಂಬ ಶಿವಾಣಿಯ ಶಿರದಲ್ಲಿ ಜಗಂಜ್ಯೋತಿಯ ಕಂಡೆನಯ್ಯ. ಅದು ಹಗಲಿರುಳನರಿಯದೆ ಜಗಜಗಿಸುತ್ತಿದ್ದುದು ನೋಡಾ. ಜಗಂಜ್ಯೋತಿಯ ಬೆಳಗಿನೊಳಗೆ ಅಗಣಿತ ಮಹಿಮನಿದ್ದಾನೆ ನೋಡಾ. ಆ ಅಪ್ರಮಾಣಲಿಂಗದೊಳಗೆ ನಾನಿರ್ದೆನು ಕಾಣಾ. ಅನುಪಮ ಮಹಿಮ ಮಹಾಲಿಂಗಗುರು ಶಿವಸಿದ್ಧೇಶ್ವರಾಯೆಂಬುದಕ್ಕೆ ತೆರಹಿಲ್ಲ ನೋಡಿರೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ತತ್ವಾರ್ಥವ ಬಲ್ಲೆವೆಂಬರಯ್ಯ ತತ್ತಿಯೊಳಗಣ ಬಾಲಕರು. ತತ್ವಾನುಭಾವ ಸಂಭವಿಸಿದರೆ ಸತ್ತು ಹೋಗಲುಂಟೆ? ಸತ್ತು ಹೋಗುವ ಪ್ರಾಣಿಗಳ ಶಿವತತ್ವಾನುಭಾವಿಗಳೆಂತೆಂಬೆನಯ್ಯ? ಅನುಪಮ ಅದ್ವಯರೆಂತೆಂಬೆನಯ್ಯಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಖಂಡಬೆಳಗಿನೊಳಗಿರ್ದ ಅನುಪಮ ಶರಣನ ಕರಸ್ಥಲದಲ್ಲಿ ಕಾಣಿಸಿಕೊಂಬ ಜ್ಯೋತಿರ್ಮಯಲಿಂಗವು ತನ್ನ ವಿನೋದಕಾರಣ ಆ ಶರಣನ ಶ್ರದ್ಧೆಗೆ ಆಚಾರಲಿಂಗವಾಗಿ, ನಿಷೆ*ಗೆ ಗುರುಲಿಂಗವಾಗಿ, ಸಾವಧಾನಕ್ಕೆ ಶಿವಲಿಂಗವಾಗಿ, ಅನುಭಾವಕ್ಕೆ ಪ್ರಾಣಲಿಂಗವಾಗಿ, ತನ್ನ ಬೆಳಗಿನೊಳಡಗಿಸಿಕೊಂಡು ಆನಂದಭಕ್ತಿಯ ನೋಡುತಿರ್ದ ಗುರುನಿರಂಜನ ಚನ್ನಬಸವಲಿಂಗ ತಾನು ತಾನಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಎನ್ನ ಮಂದಿರದಲ್ಲಿ ಬಸವಣ್ಣನ ಮಹಾನುಭಾವಪ್ರಸಾದವನು ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ ! ಎನ್ನ ಮಂದಿರದಲ್ಲಿ ಮಡಿವಾಳಯ್ಯನ ಚಿದ್ರಸಪ್ರಸಾದವನು ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ ! ಎನ್ನ ಮಂದಿರದಲ್ಲಿ ಚನ್ನಬಸವಣ್ಣನ ಚಿದ್ರೂಪಪ್ರಸಾದವನು ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ ! ಎನ್ನ ಮಂದಿರದಲ್ಲಿ ಸಿದ್ಧರಾಮಯ್ಯನ ಚಿತ್ಕಲಾಸೋಂಕಿನ ಶುದ್ಧಪ್ರಸಾದವನು ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ ! ಎನ್ನ ಮಂದಿರದಲ್ಲಿ ಪ್ರಭುದೇವರ ಚಿದಾನಂದಪ್ರಸಾದವನು ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ ! ಎನ್ನ ಮಂದಿರದಲ್ಲಿ ಅಜಗಣ್ಣನ ಮಹದಾನಂದಪ್ರಸಾದವನು ಕೂಡೆಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ ! ಅಯ್ಯಾ, ಗುರುನಿರಂಜನ ಚನ್ನಬಸವಲಿಂಗಾ ಎನ್ನ ಮಂದಿರದಲ್ಲಿ ತೆರಹಿಲ್ಲದೆ ಇಪ್ಪ ಅಸಂಖ್ಯಾತ ಮಹಾ ಪ್ರಮಥಗಣಂಗಳ ಅನುಪಮ ಪ್ರಸಾದವನು ಕೂಡೆಸನ್ನಿಹಿತಸುಖಿಸಿದ ಪರಿಣಾಮವನೇನೆಂದುಪಮಿಸುವೆನಯ್ಯಾ !
--------------
ದೇಶಿಕೇಂದ್ರ ಸಂಗನಬಸವಯ್ಯ
ಕಾಲೋಚಿತವಾಗಿ ಅರ್ಪಿತಕ್ಕೆ ಬಂದ ಭೂತಜಾತಪದಾರ್ಥಂಗಳನು, ಕಾಯದ ಕರದಲ್ಲಿ ಮುಟ್ಟಿ, ಅರ್ಪಿಸುವ ಅರ್ಪಣವನರಿದು, ಇಂದ್ರಿಯಂಗಳ ಮುಖದಲ್ಲಿ ಮುಟ್ಟದೆ, ಅರ್ಪಿಸುವ ಅರ್ಪಣವರಿದು, ಇಷ್ಟಲಿಂಗಕ್ಕೆ ರೂಪು, ಪ್ರಾಣಲಿಂಗಕ್ಕೆ ರುಚಿಯನಿತ್ತು ಕೊಂಬ, ಅನುಪಮ ಪ್ರಸಾದಿಯನುಪಮಿಸಬಹುದೇ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ?
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯಾ, ಅನಾದಿ ಚಿನ್ಮಯಲಿಂಗವೆನ್ನ ಕರಸ್ಥಲಕ್ಕೆ ಬಂದುದು ಚೋದ್ಯ ನೋಡಾ ! ಅಯ್ಯಾ, ಆಕಾರ ನಿರಾಕಾರ ನಿರಂಜನಲಿಂಗವೆನ್ನ ಕುರಿತು ಗುರುಮುಖದಿಂದ ಸಾಕಾರವಾಗಿ ಬಂದುದೆನಗತಿ ಚೋದ್ಯ ನೋಡಾ. ಸುರೇಂದ್ರಜ ವಿಷ್ಣುಗಳರಿಯದ ಅನುಪಮ ಅಖಂಡ ಅವಿರಳಾನಂದ ಪರಬ್ರಹ್ಮವೆನ್ನನರಿದು ಬಂದುದಾಶ್ಚರ್ಯ ನೋಡಾ ! ಆರಾರರಿಯದಪ್ರತಿಮ ಗುರುನಿರಂಜನ ಚನ್ನಬಸವಲಿಂಗ ತಾನೇ ಬಂದ ಪರಿಯ ನೋಡಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕರ್ತು ಗುರುಮೂರ್ತಿಯೆನ್ನ ಮಿಥ್ಯವ ಪರಿಹರಿಸಿ ಅತ್ತತ್ತಲಾದ ಅಸಮಾಕ್ಷಲಿಂಗವನ್ನು ಸತ್ಯವಿದೆಂದು ಕರ-ಮನ-ಭಾವಕ್ಕೆ ಕರುಣಿಸಿ ಕೊಟ್ಟ ಬಳಿಕ ಅತ್ತಣಿತ್ತಣ ಕಾರ್ಯಕ್ಕೆಳಸದೆನ್ನ ಕಾಯಭಾವ. ಸುತ್ತಿಸುತ್ತಿ ಸುಳಿಯದೆನ್ನ ಮನ. ಸೂಸಿದಲ್ಲಿ ಆಶೆಯನರಿಯದೆನ್ನ ಭಾವ. ಅನುಪಮ ನಿರಂಜನ ಚನ್ನಬಸವಲಿಂಗವನಗಲಿ ನೆನೆಯಲಾರದೆ ಆವರಿಸಿಕೊಂಡಿಪ್ಪೆನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುವಿನಿಂದಾಯಿತ್ತೆನ್ನ ಗುರುಸಂಬಂಧ; ಲಿಂಗದಿಂದಾಯಿತ್ತೆನ್ನ ಲಿಂಗಸಂಬಂಧ; ಜಂಗಮದಿಂದಾಯಿತ್ತೆನ್ನ ಜಂಗಮಸಂಬಂಧ. ಅದೆಂತೆಂದಡೆ: ತನುವಿಕಾರವಳಿದೆನಾಗಿ ಗುರುಸಂಬಂಧ; ಮನವಿಕಾರವಳಿದೆನಾಗಿ ಲಿಂಗಸಂಬಂಧ; ಧನವಿಕಾರವಳಿದೆನಾಗಿ ಜಂಗಮಸಂಬಂಧ. ಇಂತೀ ತ್ರಿವಿಧವಿಕಾರವಳಿದೆನಾಗಿ, ಗುರುವಾಗಿ ಗುರುಭಕ್ತಿಸಂಪನ್ನ; ಲಿಂಗವಾಗಿ ಲಿಂಗಭಕ್ತಿಸಂಪನ್ನ; ಜಂಗಮವಾಗಿ ಜಂಗಮಭಕ್ತಿ ಸಂಪನ್ನ. ಇದು ಕಾರಣ, ಅರಿವೆ ಗುರು, ಅನುಭಾವವೆ ಲಿಂಗ, ಆನಂದವೆ ಜಂಗಮ. ಅದು ಹೇಗೆಂದಡೆ: ಅರಿವೆಂಬ ಗುರುವಿನಿಂದ ಇಷ್ಟಲಿಂಗಸಾಹಿತ್ಯ; ಅನುಭಾವವೆಂಬ ಲಿಂಗದಿಂದ ಪ್ರಾಣಲಿಂಗಸಾಹಿತ್ಯ ಆನಂದವೆಂಬ ಜಂಗಮದಿಂದ ತೃಪ್ತಿಲಿಂಗಸಾಹಿತ್ಯ. ಅರಿವಿನಿಂದ ಅನುಭವ; ಅನುಭವದಿಂದ ಅರಿವು. ಅರಿವು ಅನುಭವ ಸಮರಸವಾದುದೆ ಆನಂದ. ಆನಂದಕ್ಕೆ ಅರಿವೆ ಸಾಧನ. ಇಷ್ಟದಿಂದ ಪ್ರಾಣ, ಪ್ರಾಣದಿಂದ ಇಷ್ಟ; ಇಷ್ಟಪ್ರಾಣಸಂಯೋಗವಾದುದೆ ತೃಪ್ತಿ. ಆ ತೃಪ್ತಿಗೆ ಇಷ್ಟಲಿಂಗದರಿವೆ ಸಾಧನ. ಅದೆಂತೆಂದಡೆ: ಆ ಇಷ್ಟಲಿಂಗದಲ್ಲಿ ವಿನಯ ಮೋಹ ಭಯ ಭಕ್ತಿ ಕರುಣ ಕಿಂಕುರ್ವಾಣ ಸಮರಸವಾದುದೆ ಆಚಾರಲಿಂಗ. ಮತ್ತಾ ಇಷ್ಟಲಿಂಗದಲ್ಲಿ ದೃಢಸ್ನೇಹ ನಿಶ್ಚಯ ನಿಶ್ಚಲವಿಶ್ವಾಸ ಸಮರಸವಾದುದೆ ಗುರುಲಿಂಗ. ಮತ್ತಾ ಇಷ್ಟಲಿಂಗದಲ್ಲಿ ಎಚ್ಚರಿಕೆ ಸುಜನತ್ವ ಸಾವಧಾನ ಸನ್ನಹಿತ ಪ್ರಸನ್ನತ್ವ ಸಮರಸವಾದುದೆ ಶಿವಲಿಂಗ. ಮತ್ತಾ ಇಷ್ಟಲಿಂಗದಲ್ಲಿ ನಿಸ್ತರಂಗ ದೃಕ್ಕಿರಣೋದಯ ಹೃದಯಕುಹರ ಸ್ವಯಾನುಭಾವಾಂತರ್ಮುಖ ಸಮರಸವಾದುದೆ ಜಂಗಮಲಿಂಗ. ಮತ್ತಾ ಇಷ್ಟಲಿಂಗದಲ್ಲಿ ಪರವಶ ಗೂಢ ಏಕಾಗ್ರಚಿತ್ತ ಉತ್ತರಯೋಗ ಪರಿಪೂರ್ಣಭಾವ ಸಚ್ಚಿದಾನಂದ ಸಮರಸವಾದುದೆ ಪ್ರಸಾದಲಿಂಗ. ಮತ್ತಾ ಇಷ್ಟಲಿಂಗದಲ್ಲಿ ಮನೋಲಯ ಭಾವಾದ್ವೈತ ಅನುಪಮ ಚಿತ್ತಾತ್ಮಿಕದೃಷ್ಟಿ ಸುನಾದ ಭೋಜ್ಯ ಸಮರಸವಾದುದೆ ಮಹಾಲಿಂಗ. ಇಂತಪ್ಪ ಮಹಾಲಿಂಗದಿಂದ ಪ್ರಸಾದಲಿಂಗ, ಪ್ರಸಾದಲಿಂಗದಿಂದ ಜಂಗಮಲಿಂಗ, ಜಂಗಮಲಿಂಗದಿಂದ ಶಿವಲಿಂಗ, ಶಿವಲಿಂಗದಿಂದ ಗುರುಲಿಂಗ, ಗುರುಲಿಂಗದಿಂದ ಆಚಾರಲಿಂಗ. ಆಚಾರಲಿಂಗದಲ್ಲಿ ಅನುಭಾವಿಯಾದಡೆ, ಇಪ್ಪತ್ತೈದು ಕರಣಂಗಳನರಿದಾಚರಿಸಬೇಕು. ಗುರುಲಿಂಗದಲ್ಲಿ ಅನುಭಾವಿಯಾದಡೆ, ಇಪ್ಪತ್ತು ಕರಣಂಗಳನರಿದಾಚರಿಸಬೇಕು. ಶಿವಲಿಂಗದಲ್ಲಿ ಅನುಭಾವಿಯಾದಡೆ, ಹದಿನೈದು ಕರಣಂಗಳನರಿದಾಚರಿಸಬೇಕು. ಜಂಗಮದಲ್ಲಿ ಅನುಭಾವಿಯಾದಡೆ, ಹತ್ತು ಕರಣಂಗಳನರಿದಾಚರಿಸಬೇಕು. ಪ್ರಸಾದಲಿಂಗದಲ್ಲಿ ಅನುಭಾವಿಯಾದಡೆ, ಐದು ಕರಣಂಗಳನರಿದಾಚರಿಸಬೇಕು. ಮಹಾಲಿಂಗದಲ್ಲಿ ಅನುಭಾವಿಯಾದಡೆ, ಎಲ್ಲಾ ಕರಣಂಗ?ನರಿದಾಚರಿಸಬೇಕು. ಇಂತಪ್ಪ ಮಹಾಲಿಂಗವೆ ಇಷ್ಟಲಿಂಗವಾಗಿ, ಆ ಇಷ್ಟಲಿಂಗದ ಗಂಧಂಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಆಚಾರಲಿಂಗಭೋಗಿ. ಮತ್ತಾ ಇಷ್ಟಲಿಂಗದ ರಸಂಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಗುರುಲಿಂಗಭೋಗಿ. ಮತ್ತಾ ಇಷ್ಟಲಿಂಗದ ರೂಪುಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಶಿವಲಿಂಗಭೋಗಿ. ಮತ್ತಾ ಇಷ್ಟಲಿಂಗದ ಸ್ಪರ್ಶನಂಗಳಾರು ಮುಖಂಗಳಾಗಿ ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಜಂಗಮಲಿಂಗಭೋಗಿ. ಮತ್ತಾ ಇಷ್ಟಲಿಂಗದ ಶಬ್ದಂಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳ್ಳಬಲ್ಲನಾಗಿ ಪ್ರಸಾದಲಿಂಗಭೋಗಿ. ಮತ್ತಾ ಇಷ್ಟಲಿಂಗದ ಪರಿಣಾಮಂಗಳಾರು ಮುಖಂಗಳಾಗಿ, ಆ ಮುಖಂಗಳ ತತ್ತತ್‍ಸ್ಥಾನದ್ರವ್ಯಂಗಳನರಿದರ್ಪಿಸಿಕೊಳಬಲ್ಲನಾಗಿ ಮಹಾಲಿಂಗಭೋಗಿ. ಇಂತಪ್ಪ ಮಹಾಲಿಂಗವೆ ಇಷ್ಟಲಿಂಗವಾಗಿ, ಆ ಇಷ್ಟಲಿಂಗದ ಸದ್ಯೋಜಾತಮುಖವಪ್ಪ ಪ್ರಾಣಂಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ವಾಮದೇವಮುಖವಪ್ಪ ಜಿಹ್ವೆಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ಅಘೋರಮುಖವಪ್ಪ ನೇತ್ರಂಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ತತ್ಪುರುಷಮುಖವಪ್ಪ ತ್ವಕ್ಕುಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ಈಶಾನಮುಖವಪ್ಪ ಶ್ರೋತ್ರಂಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ, ಮತ್ತಾ ಇಷ್ಟಲಿಂಗದ ಗೋಪ್ಯಮುಖವಪ್ಪ ಹೃದಯಂಗಳಾರು ದ್ರವ್ಯಂಗಳಲ್ಲಿ ಷಟ್‍ತ್ರಿಂಶಲ್ಲಿಂಗಾವಧಾನಿಯಾಗಿ. ಇಂತಪ್ಪ ತೃಪ್ತಿಪದಾರ್ಥಂಗಳಾರು, ಶಬ್ದಪದಾರ್ಥಂಗಳಾರು, ಸ್ಪರ್ಶನಪದಾರ್ಥಂಗಳಾರು, ರೂಪುಪದಾರ್ಥಂಗಳಾರು, ರಸಪದಾರ್ಥಂಗಳಾರು, ಗಂಧಪದಾರ್ಥಂಗಳಾರು. ಇಂತೀ ಗಂಧಪದಾರ್ಥಂಗಳಾರನು ಘ್ರಾಣಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ರಸಪದಾರ್ಥಂಗಳಾರನು ರುಚಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ರೂಪುಪದಾರ್ಥಂಗಳಾರನು ನಿರೀಕ್ಷಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ಸ್ಪರ್ಶನ ಪದಾರ್ಥಂಗಳಾರನು ಸೋಂಕಿಸುವಲ್ಲಿ ಅಷ್ಟಾದಶಲಿಂಗಶೇಷ ಭುಕ್ತನಾಗಿ, ಶಬ್ದಪದಾರ್ಥಂಗಳಾರನು ಲಾಲಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ತೃಪ್ತಿಪದಾರ್ಥಂಗಳಾರನು ಪರಿಣಾಮಿಸುವಲ್ಲಿ ಅಷ್ಟಾದಶಲಿಂಗಶೇಷಭುಕ್ತನಾಗಿ, ಅರ್ಪಿತ ಪ್ರಸಾದ ಅವಧಾನ ಸ್ಥಳಕು? ಅನುಭಾವ ಆಚರಣೆ ಇಂತಿವೆಲ್ಲವನು ಇಷ್ಟಲಿಂಗದಲ್ಲಿಯೆ ಕಂಡು ಸುಖಿಸುತ್ತಿರ್ಪ ಮಹಾಮಹಿಮನ ನಾನೇನೆಂಬೆನಯ್ಯಾ ! ಇಂತಪ್ಪ ಮಹಾಮಹಿಮನೊಳಕೊಂಡಿಪ್ಪ ಇಷ್ಟಬ್ರಹ್ಮವ ನಾನೇನೆಂಬೆನಯ್ಯಾ ! ಫಲ ಪತ್ರ ಕುಸುಮ ರಸ ಗಂಧ ಕಾರ ಒಗರು ಹುಳಿ ಮಧುರ ಇಂತಿವೆಲ್ಲಕ್ಕೂ ಜಲವೊಂದೆ ಹಲವು ತೆರನಾದಂತೆ, ಮಸೆದ ಕೂರಲಗು ಮೊನೆ ಮೊನೆಗೆ ಬಂದಾನುವಂತೆ, ರಸಘುಟಿಕೆಯೊಂದೆ ಸಹಸ್ರ ಮೋಹಿಸುವಂತೆ, ಬಂಗಾರವೊಂದೆ ಹಲವಾಭರಣವಾದಂತೆ, ಹತ್ತೆಂಟುಬಾಯ ಹುತ್ತದೊಳಗೆ ಸರ್ಪನೊಂದೆ ತಲೆದೋರುವಂತೆ ಹಲವು ಕರಣಂಗಳ ಕೊನೆಯ ಮೊನೆಯ ಮೇಲೆ ತೊ?ಗಿ ಬೆಳಗುವ ಪರಂಜ್ಯೋತಿರ್ಲಿಂಗವು ! ಅನುಪಮ ಅದ್ವಯ ವಾಙ್ಮನೋತೀತ ಅವಿರಳ ಅಪ್ರಮೇಯ ಚಿನ್ಮಯ ನಿರಾವರಣ ನಿರುತ ನಿರ್ಗುಣ ನಿರ್ಭೇದ್ಯ, ಕೂಡಲಚೆನ್ನಸಂಗಮದೇವಾ, ನಿಮ್ಮ ಶರಣ ಸರ್ವಾಂಗಲಿಂಗಿ.
--------------
ಚನ್ನಬಸವಣ್ಣ
ಇನ್ನಷ್ಟು ... -->