ಅಥವಾ

ಒಟ್ಟು 49 ಕಡೆಗಳಲ್ಲಿ , 24 ವಚನಕಾರರು , 43 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನವನಾಗಿ ಅನ್ಯರ ಬೇಡುವ ಅನ್ಯಾಯವನೇನೆಂಬೆನೆಲೆಯಯ್ಯಾ. ನಿನ್ನನರ್ಚಿಸಿದ ಪುರಾತನರು ನೀವೆಯಾದರು. ನಿನ್ನನರ್ಚಿಸಿದ ಬಸವಣ್ಣ ನೀನೆಯಾದ. ಎಲೆ ಕಪಿಲಸಿದ್ಧಮಲ್ಲಿಕಾರ್ಜುನಯ್ಯ, ಗುರುವಾಗಿ ಬಂದೆನ್ನ ಭವದ ಬೇರ ಹರಿದ ಬಳಿಕ ನಿನ್ನವರು ನೀನು ನಾನೆಂಬ ಸಂದೇಹವೇಕಯ್ಯ?
--------------
ಸಿದ್ಧರಾಮೇಶ್ವರ
ಭಕ್ತನಾದಡೆ ತ್ರಿವಿಧದ ಮೇಲಣಾಸೆಯಳಿದಿರಬೇಕು. ವಿರಕ್ತನಾದಡೆ ಧರಿತ್ರಿಯ ವರ್ಗದವರಿಗೊಳಗಾಗಿರದಿರಬೇಕು. ಜಂಗಮವಾದಡೆ ಅನ್ಯರ ಬಲೆಗೆ ಸಿಲುಕದಿರಬೇಕು. ಗುರುವಾದಡೆ ಲೇಸ ಕಂಡು ಚರಿಸದಿರಬೇಕು. ಲಿಂಗವಾದಡೆ ತ್ರಿಶಕ್ತಿಯಿಚ್ಫೆಯಿಲ್ಲದಿರಬೇಕು. ಕಲಿದೇವಾ, ನಿಮ್ಮ ಶರಣ [ಧರೆಯ] ಪಾವನವ ಮಾಡಿದ ಪರಿಣಾಮಕ್ಕೆ ನಮೋ ನಮೋ ಎನುತಿರ್ದೆನು.
--------------
ಮಡಿವಾಳ ಮಾಚಿದೇವ
ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ. ಸುಳಿದು ಬೀಸುವ ವಾಯು ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ, ರಾಮನಾಥ.
--------------
ಜೇಡರ ದಾಸಿಮಯ್ಯ
ಆತನ ಅಗಲೊಳಗೆ ಕಪ್ಪು ಬಿದ್ದಿಹುದು, ಅನ್ಯರ ಎಡೆಯೊಳಗೆ ಕಪ್ಪು ಇದ್ದಿತು ನೋಡೆಂಬ ಅಂಧಕಗಳಿರಾ. ತಮ್ಮ ಕಾಣದೆ ಅನ್ಯರ ಧಿಕ್ಕರಿಸಿ ನುಡಿವ ಕುನ್ನಿಗಳಿಗೆ ಶಿವಲಿಂಗ ಮುನ್ನವೇ ಇಲ್ಲ[ವೆಂದ] ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಸಂಗವ ಮಾಡುವೆ ನಿನ್ನವರಲ್ಲಿ ಸ್ನೇಹವ ಮಾಡುವೆ ನಿನ್ನವರಲ್ಲಿ ನಿನ್ನವರಲ್ಲದ ಅನ್ಯಕ್ಕೊಡಂಬಡದೆನ್ನ ಮನಸು. ನಿನ್ನವರಲ್ಲದೆ ಅನ್ಯರ ಸಂಗವ ಮಾಡಿದರೆ ನರಕ ತಪ್ಪದೈ, ಕಪಿಲಸಿದ್ಧಮಲ್ಲಿಕಾರ್ಜುನ
--------------
ಸಿದ್ಧರಾಮೇಶ್ವರ
ಮಾತ ಕಲಿತು ಮಂಡೆಯ ಬೋಳಿಸಿಕೊಂಡಡೇನು ? ವೇಷಲಾಂಛನಧಾರಿ, ಉದರಪೋಷಕರಪ್ಪರಲ್ಲದೆ ಆಗಮಾಚಾರಿಯರಾಗಲರಿಯರು ಕಾಣಿರೇ. ಅಷ್ಟವಿಧಾರ್ಚನೆ ಷೋಡಶೋಪಚಾರಕ್ಕೆ ಸಲ್ಲದು ಸೀಮೆಯ ಕಲ್ಲು. ಅನ್ಯರ ಬೋಸರಿಸಿ ತನ್ನ ಉದರವ ಹೊರೆವ ವೇಷಡಂಭಕರ ಮೆಚ್ಚ ನಮ್ಮ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಎಲ್ಲ ಎಲ್ಲವನರಿದು ಫಲವೇನಯ್ಯಾ, ತನ್ನ ತಾನರಿಯಬೇಕಲ್ಲದೆ ? ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ ? ಚೆನ್ನಮಲ್ಲಿಕಾರ್ಜುನಾ, ನೀನರಿವಾಗಿ ಮುಂದುದೋರಿದ ಕಾರಣ ನಿಮ್ಮಿಂದ ನಿಮ್ಮನರಿದೆನಯ್ಯಾ ಪ್ರಭುವೆ.
--------------
ಅಕ್ಕಮಹಾದೇವಿ
ಶಿವಶಿವಾ ಮಹಾಪ್ರಸಾದ ಎನ್ನ ಚರಣವು ನಿಮ್ಮ ಶಿವಾಚಾರಮಾರ್ಗದಲ್ಲಲ್ಲದೆ ಅನ್ಯಮಾರ್ಗದಲ್ಲಿ ಚರಿಸದಂತೆ ಮಾಡಯ್ಯ. ಎನ್ನ ಹಸ್ತವು ನಿಮ್ಮನಲ್ಲದೆ ಅನ್ಯವ ಮುಟ್ಟದಂತೆ ಮಾಡಯ್ಯ. ಎನ್ನ ಕಂಗಳು ನಿಮ್ಮನಲ್ಲದೆ ಅನ್ಯವ ನೋಡದಂತೆ ಮಾಡಯ್ಯ. ಎನ್ನ ಶ್ರೋತ್ರವು ನಿಮ್ಮ ಕಿರ್ತನೆಯನಲ್ಲದೆ ಅನ್ಯವ ಕೇಳದಂತೆ ಮಾಡಯ್ಯ. ಎನ್ನ ಜಿಹ್ವೆಯು ನಿಮ್ಮನಲ್ಲದೆ ಅನ್ಯರ ಹೊಗಳದಂತೆ ಮಾಡಯ್ಯ. ಎನ್ನ ಮನವು ನಿಮ್ಮನಲ್ಲದೆ ಅನ್ಯವ ಬಯಸದಂತೆ ಮಾಡಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಲಿಂಗವನು ಪುರಾತನರನು ಅನ್ಯರ ಮನೆಯೊಳಯಿಕೆ ಹೋಗಿ ಹೊಗಳುವರು, ತಮ್ಮದೊಂದುದರ ಕಾರಣ. ಲಿಂಗವು ಪುರಾತನರು ಅಲ್ಲಿಗೆ ಬರಬಲ್ಲರೆ ? ಅನ್ಯವನೆ ಮರೆದು ನಿಮ್ಮ ನೆನೆವರ ಎನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಜಿಹ್ವೆಯ ಲಂಪಟಕ್ಕಾಗಿ ಅನ್ಯರ ಬೋಧಿಸಲೇಕೆ ? ಗುಹ್ಯದ ವಿಷಯಕ್ಕಾಗಿ ಮನುಷ್ಯರೊಳು ದೈನ್ಯಬಡಲೇಕೆ ? ಅಂಗದ ಇಂದ್ರಿಯಕ್ಕಾಗಿ ನಿಜಲಿಂಗವ ಹಿಂಗಲೇಕೆ ? ಮನುಷ್ಯರ ಹಂಗ ಬಿಟ್ಟು ನಿಜಾಂಗವಾದ ಮಹಾತ್ಮಂಗೆ ಇದಿರಿಡಲಿಲ್ಲ. ಇದಿರಿಂಗೆ ತಾನಿಲ್ಲ. ಉಭಯವಳಿದ ಮತ್ತೆ ಏನೂ ಇಲ್ಲ, ನಿಃಕಳಂಕ ಮಲ್ಲಿಕಾರ್ಜುನಾ
--------------
ಮೋಳಿಗೆ ಮಾರಯ್ಯ
ತಾನರಿಯದೆ ಮಾಡಿದ ದೋಷಕ್ಕೆ ತನಗೆ ಅಘೋರವಿಲ್ಲ. ಅದು ಜಗದ ಹುದುಗು. ತಾನರಿದು ಅಲ್ಲ ಅಹುದೆಂದು ಎಲ್ಲರಿಗೆ ಹೇಳಿ ಪರಧನದಲ್ಲಿ ಪರಸತಿಯಲ್ಲಿ ಅನ್ಯರ ನಿಂದೆಯಲ್ಲಿ ವ್ರತಾಚಾರಭಂಗಿತರಲ್ಲಿ ಇದನರಿದು ಅನುಸರಣೆಯ ಮಾಡಿದಡೆ ಕುಂಭೀನರಕದಲ್ಲಿ ಹಿಂಗದಿರ್ಪನು. ಕಾಲಾಂತಕ ಭೀಮೇಶ್ವರಲಿಂಗಕ್ಕೆ ಸ್ವಪ್ನದಲ್ಲಿ ದೂರಸ್ಥನು.
--------------
ಡಕ್ಕೆಯ ಬೊಮ್ಮಣ್ಣ
ಜ್ಞಾನಿಗಳು ತಾವಾದ ಬಳಿಕ ಅನ್ಯರ ಹಂಗಿನೊಳಗಾಗಬಾರದು. ಜ್ಞಾನಿಗಳು ತಾವಾದ ಬಳಿಕ ಅನ್ಯರ ಕುಲವ ಬೆರಸಬಾರದು. ಜ್ಞಾನಿಗಳು ತಾವಾದ ಬಳಿಕ ಅಸತ್ಯವ ನುಡಿಯಬಾರದು ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಸುಳಿವ ಜಂಗಮ ಕಾಲಿಲ್ಲದೆ ಸುಳಿಯಬೇಕು, ಮಾಡುವ ಭಕ್ತ ಕೈಯಿಲ್ಲದೆ ಮಾಡಬೇಕು. ಸುಳಿವ ಜಂಗಮಕ್ಕೆ ಕಾಲಿದ್ದರೇನು ? ಅನ್ಯರ ಮನೆಯ ಹೊಗದಿದ್ದರೆ ಸಾಕು. ಮಾಡುವ ಭಕ್ತಂಗೆ ಕೈಯಿದ್ದರೇನು ? ಲಿಂಗಜಂಗಮಕ್ಕಲ್ಲದೆ ಮಾಡದಿದ್ದರೆ ಸಾಕು. ಜಂಗಮಸ್ಯಾಗಮೋ ನಾಸ್ತಿ ಭಕ್ತಸ್ಯ ಗೃಹಮಾಚರೇತ್ ಅನ್ಯಸ್ಯ ಚೇದ್ಗೃಹಂ ಯಾತಿ ಸದ್ಯೋ ಗೋಮಾಂಸಭಕ್ಷಣಂ ಇದು ಕಾರಣ, ಕೂಡಲಚೆನ್ನಸಂಗಯ್ಯನಲ್ಲಿ ಶರಣಸಂಬಂಧವಪೂರ್ವ.
--------------
ಚನ್ನಬಸವಣ್ಣ
ನಿಮ್ಮ ನಿಲವಿಂಗೆ ನೀವು ನಾಚಬೇಡವೆ ? ಅನ್ಯರ ಕೈಯಲ್ಲಿ ಅಲ್ಲ ಎನಿಸಿಕೊಂಬ ನಡೆನುಡಿ ಏಕೆ ? ಅಲ್ಲ ಎನಿಸಿಕೊಂಬುದರಿಂದ ಆ ಕ್ಷಣವೆ ಸಾವುದು ಲೇಸು ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಕನ್ನವನಿಕ್ಕುವ ಕಳ್ಳನು ಕನ್ನಗಳ್ಳನೆಂದು ಉಸುರುವನೆ ? ಅನ್ಯರ ಕೂಡೆ ಬಣ್ಣಬಚ್ಚಣೆಯ ಮಾತಾಡುವ ಅಣ್ಣ ಅಪ್ಪ ಎಂಬ ಕುನ್ನಿಗಳ ಮೆಚ್ಚುವನೆ ಅಮುಗೇಶ್ವರಲಿಂಗವು?
--------------
ಅಮುಗೆ ರಾಯಮ್ಮ
ಇನ್ನಷ್ಟು ... -->