ಅಥವಾ

ಒಟ್ಟು 39 ಕಡೆಗಳಲ್ಲಿ , 16 ವಚನಕಾರರು , 29 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸಿಯ ಸಂಗ ದೇಶವರಿಯೆ ಪಡಗ. ವೇಶಿಯ ಸಂಗ ಹದಿನೆಂಟುಜಾತಿ ನೂರೊಂದುಕುಲವೆಲ್ಲ ದೃಷ್ಟಿಸುವ ಮರದ ಕುಳಿ. ಪರಸ್ತ್ರೀಯ ಸಂಗ ಪಂಚಮಹಾಪಾತಕ, ಅಘೋರನರಕ. ಇಂತೀ ತ್ರಿವಿಧಸಂಗ ಸಲ್ಲವೆಂಬುದನರಿದು, ಬಿಡದೆ ಬಳಸುವವ ಗುರುವಾದಡಾಗಲಿ, ಚರವಾದಡಾಗಲಿ, ಭಕ್ತನಾದಡಾಗಲಿ, ಇಂತೀ ಗುರುಚರಪರದೊಳಗಾರಾದಡಾಗಲಿ, ಅವರನು ಪತಿತ ಪಾತಕರೆಂದು ಬಿಟ್ಟುಕಳೆಯದೆ, ಅವರನು ತನ್ನವರೆಂದು ಮನ್ನಿಸಿ ಒಳಕೊಂಡನಾದಡೆ, ಅವಂಗೆ ಕುಂಭೀಪಾತಕ, ನಾಯಕನರಕ ತಪ್ಪದೆಂದ, ಕಲಿದೇವಯ್ಯ.
--------------
ಮಡಿವಾಳ ಮಾಚಿದೇವ
ತನು ಮನ ಬಳಲದೆ ಉದ್ದಂಡವೃತ್ತಿಯಲ್ಲಿ ಧನವ ಗಳಿಸಿ ತಂದು ಗುರುಲಿಂಗಜಂಗಮಕ್ಕೆ ವೆಚ್ಚಿಸಿ, ದಾಸೋಹವ ಮಾಡಿ, ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ. ಅದೇಕೆಂದರೆ:ಅವ ಪರಧನ ಚೋರಕ; ಅವ ಪಾಪಿ, ಅವಗೆ ವಿಚಾರಿಸದೆ ಉಪದೇಶವ ಕೊಟ್ಟ ಗುರುವಿಂಗೆ gõ್ಞರವ ನರಕ. ಅವನ ಕಾಯಕವ ವಿಚಾರಿಸದೆ ಅವರ ಮನೆಯಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವ ಜಂಗಮಕ್ಕೆ ಏಳನೆಯ ಪಾತಕ. ಇಂತಹರ ಬದುಕು, ಹುಲಿ ಕಪಿಲೆಯ ತಿಂದು ಮಿಕ್ಕುದ ನರ ಬಂದು ತಿಂಬಂತೆ ಕಾಣಾ. ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಸದ್ಭಕ್ತನು ತನು ಮನ ಧನ ಪ್ರಾಣಾದಿಗಳನರ್ಪಿಸಿ, ಸಕಲ ಸಾಕಾರ ದ್ರವ್ಯಾದಿಗಳೆಲ್ಲವೂ ಶಿವನ ಸೊಮ್ಮಾಗಿ, ಅದೆಂತೆಂದಡೆ ಋಗ್ವೇದ, ಶಿವೋ ದಾತಾ ಶಿವೋ ಭೋಕ್ತಾ ಶಿವಸ್ಸರ್ವಮಿದಂ ಜಗತ್ ಶಿವೋ ಯಜತಿ ಸರ್ವತ್ರ ಯಶ್ಶಿವಸ್ಸೋ[s]ಹಮೇವ ಚ ಎಂದುದಾಗಿ, ಇದನರಿದು ದಾತೃ ಭೋಕ್ತೃ ಶಿವನೆಂದು, ಅಹಂ ಮಮತೆಗಳಡಗಿ, ಸ್ವಾನುಭಾವವಳವಟ್ಟು, ಬಾಗಿಲುಗಾಹಿಯಾಗಿ ದಾಸೋಹಮಂ ಮಾಡುವುದು, ಇದು ಉತ್ತಮ ಕ್ರಿಯೆಯು. ಇದು ಲಿಂಗದೊಡನೆ ಹುಟ್ಟಿ, ಲಿಂಗದೊಡನೆ ಬೆಳೆದು, ಲಿಂಗದೊಡನೆ ಲೀಯವಹ ಮಹಾಲಿಂಗಾಂಗಿಗಲ್ಲದೆ ಸಾಧ್ಯವಾಗದು. ಇದು ಅಳವಡದಿರ್ದಡೆ ಸದ್ಭಕ್ತನು ತನು, ಮನ, ಧನ, ಪ್ರಾಣ ಮುಂತಾಗಿ ವಂಚನೆ ಇಲ್ಲದೆ ಸದ್ಭಕ್ತಿಯಿಂ ದಾಸೋಹಮಂ ಮಾಡುವುದು. ಇದು ಮಧ್ಯಮ ಕ್ರಿಯೆಯು. ಇದು ಸಾಮಾನ್ಯರಿಗಳವಡದು. ಇದು ಅಸಾಧ್ಯವು. ಇದು ಅಳವಡದಿರ್ದಡೆ, ಸದ್ಭಕ್ತನು ತನ್ನ ತನು ಮನ ಪ್ರಾಣಂಗಳ ಬಳಲಿಸಿ ತನಗೆ ಪ್ರಿಯವಾದ ಪುತ್ರ ಮಿತ್ರ ಕಳತ್ರಾದಿಗಳಿಗೆ ಹೇಗೆ ಸಕಲ ದ್ರವ್ಯಂಗಳಂ ಕೊಡುವನೋ ಹಾಗೆ ಸ್ನೇಹದಿಂದ ದಾಸೋಹವ ಮಾಡುವುದು, ಇದು ಕನಿಷ*ಕ್ರಿಯೆಯು. ಇದು ಮಹಾಜ್ಞಾನಿಪುರುಷರಿಗಲ್ಲದೆ ಅಳವಡದು. ಇದು ಅಳವಡದಿರ್ದಡೆ, ಶಕ್ತ್ಯಾನುಸಾರದಿಂ ಮಾಡುವುದು. ಇದು ನಿಕೃಷ್ಟಕ್ರಿಯೆಯು. ಅದೆಂತೆಂದಡೆ: ಶ್ರೂಯತಾಂ ಧರ್ಮಸರ್ವಸ್ವಂ ಶ್ರುತ್ವಾ ಚೈವಾವಧಾರ್ಯತಾಂ ಆತ್ಮನಃ ಪ್ರತಿಕೂಲಂ ಚ ಪರೇಷಾಂ ನ ಸಮಾಚರೇತ್ ಎಂದುದಾಗಿ ಇದನರಿತು ತನ್ನಂತೆ ಭಾವಿಸಿಯಾದಡೂ ದಾಸೋಹವ ಮಾಡಿ ಪ್ರಸನ್ನತೆಯ ಪಡೆವುದೇ ಸದ್ಭಕ್ತನ ಪಥವು ನೋಡಾ. ಇಂತಪ್ಪ ಉತ್ತಮ ಮಧ್ಯಮ ಕನಿಷ* ನಿಕೃಷ್ಟವೆಂಬ ಈ ನಾಲ್ಕು ಪರ್ಯಾಯದಲ್ಲಾದಡೆಯೂ, ಒಂದು ಪರ್ಯಾಯದಲ್ಲಿ ಭಾವಿಸಿಕೊಂಡು, ತನುಮನಧನವನಿತ್ತು ಸ್ನೇಹದಿಂದ ದಾಸೋಹವ ಮಾಡಿ ಪ್ರಸಾದವ ಪಡೆದು ಭೋಗಿಸಿ, ಭಕ್ತರಾಗಬೇಕು. ಈ ಪ್ರಕಾರದಿಂದಲ್ಲದೆ, ಮುಕ್ತಿ ಇಲ್ಲ. ಈ ಚತುರ್ವಿಧ ಕ್ರಿಯೆಗಳೊಳಗೆ ಆವುದನು ಮಾಡದೆ, ದುಷ್ಕ್ರಿಯೆಯಲ್ಲಿ ವರ್ತಿಸುತ್ತ ದಾಸೋಹವವಿಲ್ಲದೆ, ತನ್ನೊಡಲನೆ ಹೊರೆದಡೆ ಅವನು ಸದ್ಭಕ್ತರೊಳಗೆ ಸಲ್ಲ, ಅವಂಗೆ ಪ್ರಸಾದವಿಲ್ಲ. ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಅವನು ಉಭಯಭ್ರಷ್ಟ. ಇದನರಿತು ತನ್ನಂತೆ ಭಾವಿಸಿ, ವಿಶ್ವಾಸದಿಂ ದಾಸೋಹವಂ ಮಾಡಲು, ಇಹಸಿದ್ಧಿ, ಪರಸಿದ್ಧಿ, ಸರ್ವಸಿದ್ಧಿಯಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ತನ್ನ ಲಿಂಗದಲ್ಲಿ ಪದಾರ್ಥದ ಪೂರ್ವಾಶ್ರಯ ಹೋಗದೆಂದು ಅನುಸರಿಸಿ ಜಂಗಮದ ಒಕ್ಕುದ ಮಿಕ್ಕುದ ಕೊಂಬೆನೆಂಬವನೊಬ್ಬ ಠಕ್ಕಭವಿ. ಆ ಚರಲಿಂಗ ಜಂಗಮ ಹೋದ ಬಳಿಕ್ಕ ತನ್ನ ಸ್ವಯಲಿಂಗಕ್ಕೆ ಅಷ್ಟವಿಧಾರ್ಚನೆ ಷೋಡಶೋಪಚಾರಮಂ ಮಾಡಿ, ಆ ಲಿಂಗಪ್ರಸಾದವಲ್ಲದೆ ಒಲ್ಲೆನೆಂಬವನೊಬ್ಬ ಠಕ್ಕಭವಿ. ಅವಂಗೆ ಲಿಂಗವಿಲ್ಲ, ಲಿಂಗಕ್ಕೆ ತಾನಿಲ್ಲ, ಆವ ಆಚಾರಭ್ರಷ್ಟ. ಅಂಥವರ ಕಂಡಡೆ ಇರಿದಿರಿದು ಸುಡುವನಲ್ಲದೆ, ಮೆರೆವನಲ್ಲ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
>ಶೈವ ಸೈವೆರಗಾದ, ಪಾಶುಪತಿ ಪಥವನರಿಯ ಕಾಳಾಮುಖಿ ಕಂಗೆಟ್ಟ, ಮಹಾವ್ರತಿ ಮದವೇರಿದ ಸನ್ಯಾಸಿ ಪಾಷಂಡಿಯಾದ, ಕಾಪಾಲಿ ಮರುಳಾಗಿ ತಿರುಗಿದ. ಈ ಆರು ಭಕ್ತಿಸ್ಥಲಕ್ಕೆ ಸಲ್ಲವು ಕೇಳಿರಣ್ಣಾ- ಏಳೇಳು ಭವದಲ್ಲಿ ಭವಿಯಾಗಿ ಬಂದು, ಶ್ರೀಗುರುಕಟಾಕ್ಷ ನಿರೀಕ್ಷಣೆಯಿಂದ ಪ್ರಾಣದಮೇಲೆ ಲಿಂಗಪ್ರತಿಷೆ*ಯಂ ಮಾಡಿಕೊಂಡು ಆರರಿಂದ ಮೀರಿದ ಸ್ಥಲವಿಟ್ಟು ವೀರಮಾಹೇಶ್ವರತ್ವಮಂ ಪಡೆದು ಮರಳಿ ತನ್ನ ಕುಲವನರಿಸಿದರೆ ಒಡೆದ ಮಡಕೆಯ ಓಡಿನಂತಹನು ಕೇಳಿರಣ್ಣಾ. ತನ್ನ ಕುಲವೆಂದು ಪ್ರಾಣಸ್ನೇಹ ಮಾಯಾಮೋಹ ಕಿಂಚಿತ್ ಮಾತ್ರ ಬೆರಸಿದರೆ, ಅವ ಪಂಚಮಹಾಪಾತಕಿ, ರೌರವ ನಾರಕಿ. ಅವನ ಭಕ್ತನೆಂದು ನೋಡಿದಡೆ, ನುಡಿಸಿದಡೆ, ಸಪಂಕ್ತಿಯಲ್ಲಿ ಕುಳಿತಡೆ, ಸಂಭಾಷಣೆಯ ಮಾಡಿದಡೆ, ಕೈವೊಡ್ಡಿ ಬೇಡಿದಡೆ ಅವಂಗೆ ಕುಂಭೀಪಾತಕ ನಾಯಕನರಕ ಕೇಳಿರಣ್ಣಾ. ಭಕ್ತಂಗೆ ಭವಿನೇಮಸ್ತರು ಸಲಲಾಗದು. ಭವಿ ಶ್ವಪಚ, ನೇಮಸ್ತ ಸಮ್ಮಗಾರ- ಇವರಿಬ್ಬರನು ಸತಿಸುತ ಮಿತ್ರರೆಂದು ಮಠಮಂ ಹೊಗಿಸಿದಡೆ ಅನ್ನಮನಿಕ್ಕಿದಡೆ; ಸುರೆಯ ಮಡಕೆಯಂ ತೊಳೆದು ಘೃತಮಂ ತುಂಬಿ ಶ್ವಾನನಂ ಕರೆದು ತಿನಿಸಿ, ಮಿಕ್ಕುದನು ತಾನು ಭುಂಜಿಸಿದಂತೆ ಕೇಳಿರಣ್ಣಾ. ಭಕ್ತ ಲಿಂಗಾರ್ಚನೆಯ ಮಾಡಿದ ಪವಿತ್ರ ಭಾಜನಮಂ ಶ್ವಾನ ಸೂಕರ ಕುಕ್ಕುಟ ಮಾರ್ಜಾಲಂಗಳು ಮುಟ್ಟಿದಡೆ ಅವರ ಕೂಡೆ ಸಹಭೋಜನವ ಮಾಡಿದಂತೆ. ಗುರುಲಿಂಗಜಂಗಮಕ್ಕೆ ಅರ್ಪಿತವ ಮಾಡಿ, ಒಕ್ಕುಮಿಕ್ಕ ಪ್ರಸಾದವ ಭೋಗಿಸುವಲ್ಲಿ ಪದಾರ್ಥವೆಂದು ಭಾವಿಸಿದಡೆ ಪ್ರಸಾದದ್ರೋಹ. ಜಂಗಮದಲ್ಲಿ ಅನೃತ ಅಸ್ಥಿರವಾಕ್ಯ ಪಂಕ್ತಿಭೇದ ಉದಾಸೀನ, ನಿರ್ದಯೆ, ಇಷ್ಟು (ಇರ್ದಡೆ) ಜಂಗಮದ್ರೋಹ. ಲಿಂಗದಲ್ಲಿ ತ್ರಿಕಾಲಪೂಜೆ ಪ್ರೀತಿ ಪ್ರೇಮ ಸ್ನೇಹ ಮೋಹ -ಇಂತೀ ಐದು ಇಲ್ಲದಿರುವದೆ ಲಿಂಗದ್ರೋಹ ಗುರುವಿನಲ್ಲಿ ಅಹಂಕಾರ, ಭಯವಿಲ್ಲದಿಹುದು, ಸಮಪಂಕ್ತಿಯಲ್ಲಿ ಕುಳ್ಳಿರುವುದು ಸಂಭಾಷಣೆಯ ಮಾಡುವುದು, ಕೈವೊಡ್ಡಿ ಬೇಡುವುದು- ಇಷ್ಟು ಗುರುದ್ರೋಹ. ಇದು ಕಾರಣ ಗುರುಲಿಂಗಜಂಗಮಕ್ಕೆ, ತನುಮನಧನವ ಸಮರ್ಪಿಸಿ ಏಕಲಿಂಗನಿಷಾ*ಪರನಾಗಿ, ಭಕ್ತಕಾಯ ಮಮಕಾಯವೆಂಬ ಶಬ್ದಕ್ಕೆ ಸಂದು, ಪ್ರಸಾದವೆಂದು ಕೊಂಡು ಎಂಜಲೆಂದು ಕೈತೊಳೆದಡೆ ಅಘೋರನರಕ ತಪ್ಪದು ಕೂಡಲಚೆನ್ನಸಂಗಮದೇವಯ್ಯಾ.
--------------
ಚನ್ನಬಸವಣ್ಣ
ಮೂರು ಸುತ್ತಿನಕೋಟೆಯ ನಟ್ಟನಡುಮಧ್ಯ ಸಡಗರದ ಮನೆಯೊಳಗಿಪ್ಪನೊಬ್ಬ ಶಿವಯೋಗಿ. ಆ ಶಿವಯೋಗಿ ಮೊದಲ ಗಂಡನ ಸಂಭೋಗಸವಿಯಲ್ಲಿ ಬಂದನೆನ್ನ ಕಣ್ಣ ಮುಂದೆ. ಮೊದಲ ಗಂಡನಕೊಂದು ಅವಗೆ ಮಡದಿಯಾದುದು ಮೂರುಲೋಕವೆಲ್ಲ ಬಲ್ಲುದು ನೋಡಾ. ಹಲವು ಬಗೆಯಿಂದೆ ಹಲವು ಗಂಡರ ಸಂಗವ ನಲಿನಲಿದು ಮಾಡಿದರೆ ಗೆಲುವಾಯಿತ್ತು ಎನ್ನ ಗಂಡಂಗೆ. ನಿತ್ಯ ಮುತ್ತೈದೆ ನಿಜವಾದೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರು ಹಸ್ತಮಸ್ತಕಸಂಯೋಗ ಲಿಂಗಶರಣನಾದ ಬಳಿಕ ಮಲದೇಹಿ ಮಾಂಸಪಿಂಡ ವಾಯುಪ್ರಾಣಿಯು ಹೋಗಿ ಪ್ರಸಾದಕಾಯ ಮಂತ್ರಪಿಂಡ ಲಿಂಗಪ್ರಾಣಿಯಾಯಿತು. ಇಂತೀ ಸರ್ವಾಂಗಪ್ರಸಾದಮಂತ್ರಮೂರ್ತಿಯಾದ ಶರಣನ ನಿಲವನರಿಯದೆ ವೇಷಧಾರಿಗಳು ನಿಂದಿಸಿ ನುಡಿಯುತಿಹಿರಿ. ನಿಮ್ಮ ಅಂಗದ ಮೇಲೆ ಲಿಂಗ ಸೋಂಕಲು ಲಿಂಗಾಂಗವಾದುದಿಲ್ಲವೆ ? ನೀವು ಪ್ರಸಾದಕೊಂಡ ಕಾಯವೆಲ್ಲ ಪ್ರಸಾದಕಾಯ ಆದುದಿಲ್ಲವೆ ? ನೀವು ಮಂತ್ರಮೂರ್ತಿ ಆದುದಿಲ್ಲವೆ ? ಈ ತ್ರಿವಿಧ ಪೂರ್ವವ ಕಳೆದು ಪುನರ್ಜಾತನ ಮಾಡಿದಾತ ಅವಗೆ ಗುರುವಿಲ್ಲ, ಅವನು ಶಿಲೆಯ ಮಾರಿ ಹೊಟ್ಟೆಹೊರಕೊಂಬುವ ಭೂತದೇಹಿ. ಅವನು ಗುರುವೆಂದು ಪೂಜಿಸುವ ವೇಷಧಾರಿ, ಅವರಿಬ್ಬರಿಗೂ ಪಾದೋದಕ ಪ್ರಸಾದ ವಿಷವಾಗಿ ಹೊಟ್ಟೆ ಹೊರೆದುಕೊಂಬ ಜಂಗಮ ತುತ್ತು ಬುತ್ತಿಯನಾಯ್ದುಕೊಂಡು ತಿಂಬ ಪಿಶಾಚಿ. ಇಂತೀ ಲಿಂಗಾಂಗಿ ಲಿಂಗಪ್ರಾಣಿಯಾದ ಶರಣರ ನಿಂದಿಸುವ ಲಾಂಛನಧಾರಿಗಳಿಗೆ ಶಿವಲಿಂಗ ಸಂಬಂಧವಿಲ್ಲವೆಂದ ನಿಮ್ಮ ಶರಣ, ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಒಮ್ಮೆ ಶಿವನೆಯೆಂದು ನೆನೆದರೆ, ಕಳ್ಳಸುಳ್ಳರಿಗೆಲ್ಲ ಕೈಲಾಸವಾಯಿತೆಂದು ಹೇಳುವ ಅಣ್ಣಗಳಿರಾ, ಕೈಲಾಸಪದವಿ ಆದದ್ದು ಸಹಜ, ಅದೆಂತೆಂದಡೆ : ಒಬ್ಬ ಕಳವು ಮಾಡಿ ಸತ್ತರೆ, ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಒಯ್ಯಬೇಕೆಂದು ಅವಗೆ ಬ್ರಹ್ಮ ಬರೆದ ಕಲ್ಪನೆಯಲ್ಲಿತ್ತು . ಅವರಿಗೆ ಕೈಲಾಸಪದವಿ ಆಯಿತು ಕಾಣಿರೊ. ನೀವು ಕಳ್ಳರಲ್ಲ ಸುಳ್ಳರಲ್ಲ , ಒಳ್ಳೆಯ ಜನರು. ಶಿಲ್ಪಕಾರನ ಕೈಯಲ್ಲಿ ಹುಟ್ಟೆದ ಶಿಲೆಯ ಲಿಂಗವನು ತಂದು, ಶಿರದಲ್ಲಿ ಕಟ್ಟಿಕೊಂಡು ಉಂಬುವಲ್ಲಿ ಶಿವ, ಉಡುವಲ್ಲಿ ಶಿವ, ಕೊಂಬುವಲ್ಲಿ ಶಿವ, ಕೊಡುವಲ್ಲಿ ಶಿವ, ನಡೆವಲ್ಲಿ ಶಿವ, ನುಡಿವಲ್ಲಿ ಶಿವ. ಸರ್ವಾಂಗವೆಲ್ಲ ಶಿವಮಯವಾದ ಮೇಲೆ ನಿಮಗೆ ಶಿವ ಮೆಚ್ಚಿ, ಕೈಲಾಸಕ್ಕೆ ತಕ್ಕೊಂಡು ಹೋದನೆ ? ಹೋಗಲಿಲ್ಲ. ಕಾಲಚಕ್ರದ ಪ್ರಳಯಕ್ಕೆ ಒಳಗಾಗಿ, ಕಾಲ ಬಾಧೆಯೊಳಗೆ ಬಿದ್ದು ಬಳಲುತಿಪ್ಪಿರಿ. ಒಂದು ಅನಂತಕೋಟಿ. ಅದು ಎಂತೆಂದರೆ : ನೆಲುವಿನ ಮೇಲೆ ಇಟ್ಟಿದ್ದ ಹಾಲು ಬೆಣ್ಣೆಯನು ತಕ್ಕೊಂಡು ಸವಿದು ಉಣಲಾರದೆ, ಆಕಾಶವೆಂಬ ಬಯಲಿಗೆ ಬಾಯಿ ತೆರಕೊಂಡು ಕುಳಿತರೆ ಹಾಲು ಕರೆದೀತೆ ? ಕರೆಯಲರಿಯದು. ಅದು ಎಂತೆಂದರೆ :ನಿಮ್ಮ ಅಂತರಂಗವೆಂಬುದ ಅಡಿವಿಡಿದು ಅಳೆದರೆ, ಒಡನೆ ಮೂರಗೇಣಿನ ಒಳಗೆ ಹೊರಗೆ ಕೈಲಾಸವಾಗಿತ್ತು. ಆ ಕೈಲಾಸದಲ್ಲಿ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಈ ಐದುಮಂದಿ ಮಕ್ಕಳನ್ನು ಹಡೆದ ಒಂಕಾರ ಪರಬ್ರಹ್ಮ ದೇವರಿಂದೆ ಆರುಮಂದಿ ದೇವರಾದಲ್ಲಿ ಆಕಾರಾವಂ(?) ಕೋಟಿ ರುದ್ರ ನವಕೋಟಿ ವಿಷ್ಣುಗಳು ಇಂದ್ರಸಭೆ ದೇವಸಭೆ ಶಿವಸಭೆ ನಂದಿನಾಥ ಭೃಂಗಿನಾಥ ಮೊದಲಾದ ಗರುಡ ಗಂಧರ್ವ ಸಿದ್ಧರು ವಿದ್ಯಾಧರರು ಸಮಸ್ತ ಮುನಿಜನಂಗಳೆಲ್ಲ ಇದ್ದರು ಕಾಣಿರೊ. ಇಂತೀ ತಮ್ಮ ಅಂತರಂಗದಲ್ಲಿ ತಿಳಿದು ನೋಡಬಲ್ಲಾತಗೆ ಪಿಂಡಾಂಡವೆಂಬ ಕೈಲಾಸದಲ್ಲಿ ಇದ್ದಂತೆ, ಬ್ರಹ್ಮಾಂಡವೆಂಬ ಕೈಲಾಸದಲ್ಲಿ ಇದ್ದಂತೆ, ಬ್ರಹ್ಮಾಂಡವೆಂಬ ಕೈಲಾಸವಲ್ಲಿಯಿತ್ತು , ಪಿಂಡಾಂಡವೆಂಬ ಕೈಲಾಸವಲ್ಲಿಯಿತ್ತು ಕಾಣಿರೊ. ಅದು ಎಂತೆಂದರೆ : ಕೃತಯುಗದಲ್ಲಿ , ಬ್ರಹ್ಮರಾಕ್ಷಸರು ಪೃಥ್ವಿಯ ಆಧಾರದಲ್ಲಿ ನಿಂದು, ಕೈಲಾಸಕ್ಕೆ ದಾಳಿಯನಿಕ್ಕಿ ಕೋಳು ತಕ್ಕೊಂಡು ಬರುವರು. ಅವರಿಗೆ ಕೈಲಾಸಪದವು ದೊಡ್ಡದಾಗಿತ್ತೆ ? ದೊಡ್ಡದಾಗಿ ಇದ್ದಿಲ್ಲ. ತ್ರೇತಾಯುಗದಲ್ಲಿ, ಕ್ಷತ್ರಿಯರು [ಪೃಥ್ವಿಯ ಆಧಾರದಲ್ಲಿ ನಿಂದು], [ಕೈಲಾಸಕ್ಕೆ ದಾಳಿಯನಿಕ್ಕಲು], ಕೈಲಾಸದೊಡೆಯ ಮರೆಯ ಹೊಕ್ಕ, ಕಾಮುಕ ಋಷಿಯು ಕಣ್ಣು ತೆಗೆದು, ಗರಿಯ ಅಂಬಿಗ ತಲೆಗೆ ಕಟ್ಟಿದರು. ಈಶ್ವರನ ಜಡೆಯೊಳಗಿನ ಗಂಗೆಯನು ಸುಟ್ಟುರುಹಿದ ಮೇಲೆ ಹಾಸಿತ ಮಾಂಸವನು ಹುಟ್ಟಿಸಿಯಿದ್ದರು. ಅವರಿಗೆ ಕೈಲಾಸಪದವು ದೊಡ್ಡದಾಗಿ ಇತ್ತೆ ? ದೊಡ್ಡದಾಗಿ ಇದ್ದಿಲ್ಲ. ದ್ವಾಪರಯುಗದಲ್ಲಿ , ಸೋಮಕ್ಷತ್ರಿಯರು ಪೃಥ್ವಿಯ ಆಧಾರದಲ್ಲಿ ನಿಂದು, ಇಂದ್ರಪದದಲ್ಲಿ ಇದ್ದಂಥ ಶ್ವೇತವರ್ಣದ ಆನೆಯನು ತಂದು, ತಾಯಿಗೆ ನೋಂಪಿಯ ನುತಿಸಿದರೆ, ಅವರಿಗೆ ಕೈಲಾಸಪದವಿ ದೊಡ್ಡದಾಗಿ ಇತ್ತೆ ? ದೊಡ್ಡದಾಗಿ ಇದ್ದಿಲ್ಲ. ಕಲಿಯುಗದಲ್ಲಿ ಹುಟ್ಟಿದ ಮನುಜರನು ಕೈಲಾಸಕೆ ಅಟ್ಟಿದರೇನು ಒಮ್ಮೆ ಶಿವನೆಯೆಂದು ನೆನೆದರೆ, ಕೈಲಾಸಪದವಿ ಆದೀತೆಂದು ಬಹಿರಂಗದಲ್ಲಿ ಹೇಳುವ ಮಾತುಗಳೇ ಬಹಳ. ಅಂತರಂಗವಿಡಿದು ಹೋದವರು ಒಬ್ಬರು ಇಬ್ಬರು ಕಾಣಿರೊ. ಅದು ಎಂತೆಂದರೆ : ಬ್ರಹ್ಮ ಬರೆದ ಕಲ್ಪನೆಯಿಂದ ಕೈಲಾಸಪದವಿಯಾಗಬೇಕೆಂದು ಇದ್ದರೆ, ಎಂದೆಂದೂ ಶಿವನೆಯೆಂದು ನೆನೆಯದೆ, ಜಟ್ಟಿಂಗ ಮೈಲಾರ ಜಿನ ಭೈರವವೆಂಬ ಕೆಟ್ಟದೇವರ ಪೂಜೆಯ ಮಾಡಿದರೇನು ಅವನೂ ಬ್ರಹ್ಮ ಬರೆದ ಕಲ್ಪನೆಯಿದ್ದು, ಸತ್ತುಹೋಗುವಾಗ, ಅವನ ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಹೋದನು. ಬ್ರಹ್ಮ ಬರೆದ ಕಲ್ಪನೆಯಲ್ಲಿ ಅವಗೆ ಕೈಲಾಸಪದವು ಇಲ್ಲದಿದ್ದರೆ, ಜಟ್ಟಿಂಗ ಮೈಲಾರ ಜಿನ ಭೈರವ ದೇವರುಗಳೆಂಬ ಕೆಟ್ಟದೇವರ ಪೂಜೆಯ ಬಿಟ್ಟು, ಎಷ್ಟುದಿನ ಶಿವನೆಯೆಂದು ನೆನೆದರೇನು, ಅವನು ಬ್ರಹ್ಮ ಬರೆದ ಕಲ್ಪನೆಯಲ್ಲಿದ್ದು, ಸತ್ತುಹೋಗುವಾಗ ಅವನನು ಶಿವ ಮೆಚ್ಚಿ ಕೈಲಾಸಕ್ಕೆ ತಕ್ಕೊಂಡು ಹೋದನೆ ? ಹೋಗಲಿಲ್ಲ. ಅದು ಎಂತೆಂದರೆ : ಕಾಲಚಕ್ರವೆಂಬ ಪ್ರಳಯಕ್ಕೊಳಗಾಗಿ, ಕಾಲನ ಬಾಧೆಯಲ್ಲಿ ಬಿದ್ದು ಹೊರಳಾಡುತ್ತಿದ್ದರು ಕಾಣಿರೊ. ಅದು ಎಂತೆಂದರೆ : ಬ್ರಹ್ಮ ಬರೆದ ಕಲ್ಪನೆ ಹೊರತಾಗಿ, ಶಿವನನು ನೆನೆದು ಕೈಲಾಸ ಕಂಡೆವೆಂದು ಕಲೆ ಕೆಳಗಾಗಿ ಕಾಲು ಮೇಲ್ಮಾಡಿ ತಪವ ಮಾಡಿದರೆ, ಕೈಲಾಸ ಪದ ಆಗದೆಂದು ಇಕ್ಕುವೆನು ಮುಂಡಿಗೆಯ. ಇದನು ಎತ್ತುವರುಂಟೆ, ದೇವಧ್ವಜ ಮೃತ್ಯುಂಜಯನ ಭಾವದೊಲ್ಲಭ ಮುದ್ದನೂರೇಶಾ ?
--------------
ಸರ್ವೇಶ್ವರಲಿಂಗ
ಹರಿಯ ಬೇಡುವಡೆ ಅವಗೆ ಬಲೀಂದ್ರ ದಾನವನಿಕ್ಕಿದನು, ಬ್ರಹ್ಮನ ಬೇಡುವಡೆ ಅವಗೆ ಶಿರವಿಲ್ಲ, ಚೌದ್ಧನ ಬೇಡುವಡೆ ಅವಗೆ ಬುದ್ಧಿ ಸಮನಿಸದು, ಜಿನನ ಬೇಡುವಡೆ ಅವಗೆ ಉಡಲಿಲ್ಲ, ಬೆನಕನ ಬೇಡುವಡೆ ಅವಗೆ ಕೋಡು ಮುರಿಯಿತ್ತು, ಭೈರವನ ಬೇಡುವಡೆ ಅವ ಉಟ್ಟುದನಿಕ್ಕಿ ಆಡುತ್ತಿರ್ದನು. ಅಭಯಂಕರ ಜಗಕ್ಕೆಲ್ಲ ! ಜಗದಾನಿಯ ಬೇಡುವೆನು ಕೂಡಲಸಂಗಯ್ಯನ.
--------------
ಬಸವಣ್ಣ
ಸತ್ಯಕಾಯಕ ಸತ್ಯಕಾಯಕವೆಂದು ನುಡಿವಿರಿ, ಸತ್ಯಕಾಯಕವಾವುದೆಂದರಿಯಿರಿ; ಭಕ್ತಗೃಹಂಗಳಿಗೆ ಭೃತ್ಯಕಾಯಕವನೊಡಗೊಂಡು ಹೋಗಿ ಆ ಭಕ್ತರಿಗೆ ತಾನು ಭೃತ್ಯನಾಗಿ ಶರಣೆಂದು, ತನ್ನ ಕಾಯಕವನೊಪ್ಪಿಸಿ ಪದಾರ್ಥಂಗಳನು ಪಡೆವಲ್ಲಿ ಭಕ್ತಿ ಬಂಧನವಿಲ್ಲದೆ, ಆ ಭಕ್ತನ ಮನವ ನೋಯಿಸದೆ, ಭಕ್ತಿಮಹೋತ್ಸಾಹದಿಂದ ಬಂದ ಪದಾರ್ಥಂಗಳನು ತಂದು ಲಿಂಗಜಂಗಮಕ್ಕೆ ನೀಡಿ, ಅವರೊಕ್ಕುದ ಕೊಂಡಿಪ್ಪುದೆ ಸತ್ಯಕಾಯಕ, ಆತನೆ ಸದ್ಭಕ್ತ. ಇನಿತಲ್ಲದೆ ಜಂಗಮಕ್ಕೆ ಸಲುವುದೆಂದು ಭಕ್ತನ ಬಂಧನಕಿಕ್ಕಿ ಭಕ್ತಿಯ ಮನೋತ್ಸಾಹಗುಂದಿಸಿ, ಅಸುರಕರ್ಮದಿಂದ ತಂದ ದ್ರವ್ಯಂಗಳೆಲ್ಲವು ಅಸ್ಥಿ ಮಾಂಸ ಚರ್ಮಂಗಳೆನಿಸುವುದಲ್ಲದೆ ಅವು ಪದಾರ್ಥಂಗಳಲ್ಲ. ಅದು ಲಿಂಗಜಂಗಮಕ್ಕೆ ಸಲ್ಲದು, ಅವಂಗೆ ಪ್ರಸಾದವಿಲ್ಲ. ಅದು ಸತ್ಯಕಾಯಕಕ್ಕೆ ಸಲ್ಲದು. ಅವ ರಾಕ್ಷಸನಪ್ಪನಲ್ಲದೆ ಭಕ್ತನಲ್ಲ. ಅವನ ಮನೆಯ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮಸ್ಥಲಕ್ಕೆ ಸಲ್ಲ. ಅವರಿರ್ವರನು ಕೂಡಲಚೆನ್ನಸಂಗಯ್ಯ ಇಪ್ಪತ್ತೆಂಟುಕೋಟಿ ನಾಯಕನರಕದಲ್ಲಿಕ್ಕುವ
--------------
ಚನ್ನಬಸವಣ್ಣ
ಅನ್ಯದೈವವ ಬಿಟ್ಟುದಕ್ಕೆ ಆವುದು ಕ್ರಮವೆಂದರೆ: ಅನ್ಯದೈವವ ಮನದಲ್ಲಿ ನೆನೆಯಲಾಗದು, ಅನ್ಯದೈವವ ಮಾತನಾಡಲಾಗದು. ಅನ್ಯದೈವದ ಪೂಜೆಯ ಮಾಡಲಾಗದು. ಸ್ಥಾವರಲಿಂಗಕ್ಕೆರಗಲಾಗದು. ಆ ಲಿಂಗ ಪ್ರಸಾದವ ಕೊಳಲೆಂತೂ ಬಾರದು. ಇಷ್ಟು ನಾಸ್ತಿಯಾದರೆ ಆತ ಅನ್ಯದೈವವ ಬಿಟ್ಟು ಲಿಂಗವಂತನೆನಿಸಿಕೊಂಬನು. ಇವರೊಳಗೆ ಅನುಸರಣೆಯ ಮಾಡಿಕೊಂಡು ನಡೆದನಾದೊಡೆ ಅವಂಗೆ ಕುಂಭೀಪಾತಕ ನಾಯಕನರಕ ತಪ್ಪದು ಕಾಣಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಸಕಲ ಗಣಂಗಳು ಸಾಕ್ಷಿಯಾಗಿ ಶ್ರೀಗುರುದೇವನು ಕರಸ್ಥಲಕ್ಕೆ ಕರುಣಿಸಿಕೊಟ್ಟ ಇಷ್ಟಲಿಂಗದಲ್ಲಿ ನಿಷೆ*ನಿಬ್ಬೆರಗಾಗಿ, ಶರಣಸತಿ ಲಿಂಗಪತಿ ಭಾವಬಿಡದೆ ಆಚರಿಸುವ ಲಿಂಗವು ಓಸರಿಸಿ ಹೋದಡೆ, ಆ ಲಿಂಗದಲ್ಲಿ ತನ್ನ ಪ್ರಾಣತ್ಯಾಗವ ಮಾಡಬೇಕಲ್ಲದೆ ಜೀವನ ಕಕ್ಕುಲಾತಿಯಿಂದುಳಿಯಲಾಗದು. ಮರಳಿ ಮತ್ತೊಂದು ಲಿಂಗವ ಧರಿಸಲಾಗದು. ಅದೇನು ಕಾರಣವೆಂದಡೆ : ಕಾಷ*ದಲ್ಲಿ ಅಗ್ನಿಯಿರ್ಪುದಲ್ಲದೆ ಕರಿಗೊಂಡ ಇದ್ದಲಿಯಲ್ಲಿ ಅಗ್ನಿಯಿರ್ಪುದೇ ? ಇಂತೀ ದೃಷ್ಟದಂತೆ, ಮುನ್ನ ಗುರೂಪದೇಶವಿದ್ದ ದೇಹದಲ್ಲಿ ಶಿವಕಳೆಯಿರ್ಪುದಲ್ಲದೆ, ಗುರೂಪದೇಶವಾಗಿ ಲಿಂಗವ್ರತವನಾಚರಿಸಿ ಮರಳಿ ಲಿಂಗಬಾಹ್ಯ ವ್ರತಗೇಡಿಯಾದ ದೇಹದಲ್ಲಿ ಪರಮಶಿವಕಳೆಯೆಲ್ಲಿಯದೊ ? ಆ ಶಿವಕಳೆಯಿಲ್ಲದ ದೇಹಕ್ಕೆ ಮರಳಿ ಲಿಂಗಧಾರಣವಾದಡೆಯು ಆ ಲಿಂಗ ಪ್ರೇತಲಿಂಗವು ; ಅವ ಭೂತಪ್ರಾಣಿ. ಆ ಲಿಂಗದ ಪೂಜೆಯ ಎಷ್ಟು ದಿನ ಮಾಡಿದಡೆಯು ಫಲವಿಲ್ಲ; ಮುಂದೆ ಮುಕ್ತಿಯಿಲ್ಲ. ಅವಗೆ ರಾಜನರಕ ಪ್ರಾಪ್ತಿಯಾಗಿರ್ಪುದು ನೋಡಾ. ಇದಕ್ಕೆ ಸಾಕ್ಷಿ: ``ಲಿಂಗಬಾಹ್ಯಾತ್ ವ್ರತಭ್ರಷ್ಟಃ ಪುನರ್ಲಿಂಗಂ ನ ಧಾರಯೇತ್ | ತತ್‍ಪೂಜಾ ನಿಷ್ಫಲಾ ಚೈವ ರೌರವಂ ನರಕಂ ವ್ರಜೇತ್ || ಮತ್ತಂ, ``ಪ್ರೇತಲಿಂಗೇನ ಸಂಸ್ಕಾರೇ ಭೂತಪ್ರಾಣೇ ನ ಜಾಯತೇ | ಪ್ರಭಾತೇ ತನ್ಮುಖಂ ದೃಷ್ಟ್ವಾ ಕೋಟಿ ಜನ್ಮಸು ಸೂಕರಃ ||'' ಎಂದುದಾಗಿ, ಇಂತಪ್ಪ ಲಿಂಗಬಾಹ್ಯ ವ್ರತಭ್ರಷ್ಟನ ಮುಖವ ಪ್ರಾತಃಕಾಲದಲ್ಲಿ ನೊಡಿದಾತಂಗೆ ಕೋಟಿವೇಳೆ ಶುನಿ ಸೂಕರನ ಬಸುರಲ್ಲಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಲಿಂಗಜಂಗಮದ ಘನಪ್ರಸಾದವ ಪಡಕೊಂಡು, ಅಂಗವಿಕಾರಕ್ಕೆ ಭುಂಜಿಸುವ ಅವಿಚಾರಿಗಳ ವಿವರವೆಂತೆಂದಡೆ; ಆದಿಸ್ವಾದಿ ಅನಾಹತ ಹೃದಯ ದೀನಸ್ಥಿತಿಯ ತಿಳಿಯದೆ, ಆದಿ ಅನಾದಿಯ ಭೇದಿಸಲರಿಯದೆ, ಆದಿಪ್ರಸಿದ್ಧವಾದ ಪರಮಗುರುವಿನಲ್ಲಿ ಸಮಯದ ಹಂಗಿಂಗೆ ಗಡಣಿಸಿಕೊಂಡು, ಬಲಭಿಚಾರಿಗಳು ನುಗ್ಗಿಯ ಬೀಜ, ಮಾವಿನ ಬೀಜ, ದಂಟುದಡಿ ಮೊದಲಾದ ನಾನಾ ಕಠಣಂಗಳನು ಅಂಗವಿಕಾರಕ್ಕೆ ಭುಂಜಿಸುವ ಭಕ್ಷಿಸುವ ಭವಕರ್ಮಿಗಳು. ಅಂಗವಿಕಾರಕ್ಕೆ ಭೂತನಂತೆ ಒಟ್ಟಿಕೊಂಡು, ಕರಿ ಸೂಕರನಂತೆ ಅಗ್ನಿಯಲ್ಲಿ ಸುಡು ಎಂಬ ಲಿಂಗದ್ರೋಹಿಗೇಕೊ ಪ್ರಸಾದ ಅಂತಪ್ಪ ಪರಮಪಾತಕರಿಗೆ ಪಾದೋದಕ ಪ್ರಸಾದವ ಕೊಡಲಾಗದು. ಇಂತಪ್ಪ ಪ್ರಸಾದದಿಂದೊಗೆದ ಕಠಣವನು ಅಗ್ನಿಯಲ್ಲಿ ದಗ್ಧವ ಮಾಡಲಾಗದು. ಬೆಂಕಿಯಲ್ಲಿ ಸುಡು ಎಂಬುದಕ್ಕೆ ಕುರಿಯ ಹೋಮವೆ ಮಾತಂಗಿಯ ಮಕ್ಕಳ ಸಂತಾನವೆ ಸತ್ತರೆ ಸುಡಿಸಿಕೊಂಬ ಶ್ವಪಚ ಮಾತಂಗಿಯ ಮಕ್ಕಳ ಸಂತಾನವನೇನೆಂಬೆನಯ್ಯಾ ! ಆ ಶಿವನ ಪ್ರಸಾದವ ಸುಡುವರೆ ಸತ್ತ ಹಾರುವನ ಅಗ್ನಿಯಲ್ಲಿ ಸುಡು ಎಂಬ ದ್ರೋಹಿಗೇಕೊ ಪ್ರಸಾದ ಅರಿಯದುದೆಲ್ಲ ಜ್ಞಾನದೊಳು ಅರಿದು, ಅರುಹಿಸಿಕೊಂಡ ಬಳಿಕ ತಿಳಿದಾಚರಿಸುವುದು, ಭಕ್ತಿಜ್ಞಾನವೈರಾಗ್ಯವಿಡಿದಾಚರಿಸುವುದೆ ಗುರುಭಕ್ತಿ. ಇಂತಪ್ಪ ಗುರುಮಾರ್ಗಾಚಾರವಸಾಧ್ಯವೆಂಬವರಿಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕವಿಲ್ಲ, ಪ್ರಸಾದವಿಲ್ಲ. ಆ ಪ್ರಸಾದವಿಲ್ಲದವಂಗೆ ಪಂಚಾಚಾರವಿಲ್ಲ, ಆ ಪಂಚಾಚಾರವಿಲ್ಲದವಂಗೆ ಪ್ರಸಾದವಿಲ್ಲ. ಇಂತಪ್ಪ ಪ್ರಸಾದವಿಲ್ಲದವಂಗೆ ಯುಕ್ತಿಯೆಂಬುದು ಎಂದೆಂದಿಗೂ ಇಲ್ಲ. ಅವಂಗೆ ಇಹವಿಲ್ಲ, ಪರಕ್ಕೆ ಸಲ್ಲನೆಂಬ ಗುರುವಚನವುಂಟು, ಪ್ರಭುವೆ ನಿಮ್ಮಾಣೆ, ಕೂಡಲಸಂಗಮದೇವಾ.
--------------
ಬಸವಣ್ಣ
ಅಯ್ಯಾ, ವಿರಕ್ತ ವಿರಕ್ತರೆಂದೇನೊ? ವಿರಕ್ತಿಯ ಮಾತನಾಡುವರಲ್ಲದೆ ವಿರಕ್ತಿಕೆ ಎಲ್ಲರಿಗೆಲ್ಲಿಯದೊ? ಕೈಯೊಳಗಣ ಓಲೆ, ಕಂಕುಳೊಳಗಣ ಸಂಪುಟ, ಬಾಯೊಳಗಣ ಮಾತು. ಪುಣ್ಯವಿಲ್ಲ-ಪಾಪವಿಲ್ಲ, ಕರ್ಮವಿಲ್ಲ-ಧರ್ಮವಿಲ್ಲ, ಸತ್ಯವಿಲ್ಲ-ಅಸತ್ಯವಿಲ್ಲವೆಂದು ಮಾತನಾಡುತಿಪ್ಪರು. ಅದೆಂತೆಂದಡೆ ಕಂಗಳ ನೋಟ ಹಿಂಗದನ್ನಕ್ಕ, ಕೈಯೊಳಗಣ ಬೆರಟು ನಿಲ್ಲದನ್ನಕ್ಕ, ಹೃದಯದ ಕಾಮ ಉಡುಗದನ್ನಕ್ಕ ವಿರಕ್ತಿಕೆ ಎಲ್ಲರಿಗೆಲ್ಲಿಯದೊ? ಬಲ್ಲ ವಿರಕ್ತನ ಹೃದಯವುದಕದೊಳಗಣ ಗುಂಡಿನಲ್ಲಿ ಮಾಣಿಕ್ಯದ ಪ್ರಭೆಯ ಕಂಡವರಾರೊ? ಕಂಡಾತಂಗೆ ಕಂಗಳಲ್ಲಿ ನೋಡಿದ ಸರ್ವವಸ್ತುಗಳು ಆ ಲಿಂಗಕ್ಕರ್ಪಿತ. ಆ ಲಿಂಗವ ಕಂಡಾತಂಗೆ, ಕರ್ಣದಲ್ಲಿ ಕೇಳಿದ ಆಗಮ ಪುರಾಣಂಗಳು ಆ ಲಿಂಗಕ್ಕರ್ಪಿತ. ಆ ಲಿಂಗವ ಕಂಡಾತಂಗೆ ಜಿಹ್ವೆಯಲ್ಲಿ ರುಚಿಸಿದ ಪದಾರ್ಥಗಳು ಆ ಲಿಂಗಕ್ಕರ್ಪಿತ. ಅದೆಂತೆಂದಡೆ ಅಂಗವೂ ಲಿಂಗವೂ ಏಕೀಭವಿಸಿದಡೆ ಅವಂಗೆ ಪುಣ್ಯವಿಲ್ಲ-ಪಾಪವಿಲ್ಲ, ಕರ್ಮವಿಲ್ಲ-ಧರ್ಮವಿಲ್ಲ, ಸತ್ಯವಿಲ್ಲ-ಅಸತ್ಯವಿಲ್ಲ. ಅದೆಂತೆಂದಡೆ: ಬಂದುದ ಲಿಂಗಕ್ಕೆ ಕೊಟ್ಟನಾಗಿ, ಬಾರದುದ ಬಯಸನಾಗಿ. ಅಂಗನೆಯರು ಬಂದು ಕಾಮಿತಾರ್ಥದಿಂದ ತನ್ನನಪ್ಪಿದಡೆ ತಾ ಮಹಾಲಿಂಗವನಪ್ಪುವನಾಗಿ, ಅವಂಗೆ ಮುಖ ಬೇರಲ್ಲದೆ, ಆತ್ಮನೆಲ್ಲಾ ಒಂದೆ. ಅದಕ್ಕೆ ಜಗವು ಪಾಪ ಪುಣ್ಯವೆಂದು ಮಾತನಾಡುತಿಪ್ಪರು. ಅದೆಂತೆಂದಡೆ: ಶಿವಂಗೆ ತಾಯಿಯಿಲ್ಲ, ಭುವನಕ್ಕೆ ಬೆಲೆಯಿಲ್ಲ. ತರು ಗಿರಿ ಗಹ್ವರಕ್ಕೆ ಮನೆಯಿಲ್ಲ. ಲಿಂಗವನೊಡಗೂಡಿದ ವಿರಕ್ತಂಗೆ ಪುಣ್ಯ ಪಾಪವಿಲ್ಲ ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
-->