ಅಥವಾ

ಒಟ್ಟು 37 ಕಡೆಗಳಲ್ಲಿ , 10 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮ್ಮ ಶರಣ ಅಂತರಂಗದ ಅಷ್ಟವಿಧಾರ್ಚನೆಯ ಮಾಡಿ ಸುಜ್ಞಾನದೃಷ್ಟಿಯಿಂದ ನೋಡಲು ಆ ಜ್ಯೋತಿರ್ಲಿಂಗ ಒಂದೆರಡಾಯಿತ್ತು ಎರಡು ಮೂರಾಯಿತ್ತು; ಮೂರಾರಾಯಿತ್ತು; ಆರೊಂಬತ್ತಾಯಿತ್ತು, ಒಂಬತ್ತು ಹದಿನೆಂಟಾಯಿತ್ತು; ಹದಿನೆಂಟು ಮೂವತ್ತಾರಾಯಿತ್ತು; ಆ ಮೂವತ್ತಾರೆ ಇನ್ನೂರ ಹದಿನಾರಾಯಿತ್ತು. ಇನ್ನೂರ ಹದಿನಾರೆ ಸಾವಿರದೇಳನೂರಿಪ್ಪತ್ತೆಂಟಾಯಿತ್ತು. ಆ ಲಿಂಗಂಗಳೆ ಶರಣನ ರೋಮದ ಕುಳಿಯಲ್ಲಿ ನಿಂದು ಸರ್ವಾಂಗ ಲಿಂಗವಾಯಿತ್ತು. ಆ ಲಿಂಗ ಶರಣಂಗೆ ಚೈತನ್ಯವಾಯಿತ್ತು. ಆ ಶರಣನೆ ಲಿಂಗಕ್ಕೆ ಚೈತನ್ಯವಾಗಲು, ಶರಣಸತಿ ಲಿಂಗಪತಿಯೆಂಬೆರಡಳಿದು ಒಬ್ಬ ಶರಣನೆ ಉಳಿಯಲು ಆ ಶರಣನ ಪಾದೋದಕವೆ ಲಿಂಗಕ್ಕೆ ಅಭಿಷೇಕವಾಯಿತ್ತು. ಆ ಶರಣನ ಪಾದಕ್ಕರ್ಪಿಸಿದ ಕುಸುಮವೆ ಪ್ರಸಾದಪುಷ್ಫವಾಯಿತ್ತು. ಆ ಶರಣನ ಪಾದಕ್ಕರ್ಪಿಸಿದ ಗಂಧಾಕ್ಷತೆಯೆ, ತಾಂಬೂಲವೆ ಲಿಂಗಪ್ರಸಾದಗಳಾದವು. ಆ ಶರಣನ ಸನ್ನಿಧಿಯಲ್ಲಿ ಪ್ರಕಾಶವಾದ ಧೂಪದೀಪಂಗಳೆ ಲಿಂಗದ್ರವ್ಯಂಗಳಾಗಿ ಆ ಶರಣನ ಪಾದಪೂಜಾದ್ರವ್ಯವೆ ಲಿಂಗಪೂಜಾದ್ರವ್ಯವಾಗಿ ಆಚರಿಸುತಿರ್ದಲ್ಲಿ ಶರಣಸತಿ ಲಿಂಗಪತಿ ಎಂಬ ನ್ಯಾಯ ಒಂದಾಯಿತ್ತು. ಲಿಂಗ ಹಿರಿದು ಅಂಗ ಕಿರಿದು ಎಂಬ ನ್ಯಾಯ ಇಲ್ಲದೆ ಹೋಯಿತ್ತು_ ಅದೆಂತೆಂದಡೆ; ದೀಪದಿಂದ ದೀಪ ಹುಟ್ಟಿದಲ್ಲಿ, ಆವ ಆವ ದೀಪ ಮೊದಲೆಂಬುದು ಕಾಣದಂತೆ; ಸರ್ಪ ಕಚ್ಚಿದ ಮನುಷ್ಯನ ಅಂಗವಿಷ, ಒಂದರ ಠಾವಿನಲ್ಲಿದೆಯೆಂದು ಕುರುಹಿಡಬಾರದಂತೆ, ಲಿಂಗ ಪ್ರಾಣವಾದ ಶರಣಂಗೆ, ಶರಣ ಪ್ರಾಣವಾದ ಲಿಂಗಕ್ಕೆ ಭೇದವಿಲ್ಲ_ ಹರಗುರು ವಾಕ್ಯದಲ್ಲಿ ಶರಣ_ ಲಿಂಗಾದಾಚರಣೆ ಇಂತಿಹುದು. ಈ ಶರಣ_ ಲಿಂಗದೂಷಣೆಯ ಮಾಡುವ ದ್ರೋಹಿಗಳಿಗೆ ನಾಯಕನರಕ ತಪ್ಪದು, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ನವನಾಳಂಗಳ ಬಲಿದು ಶಿವಧ್ಯಾನದಲ್ಲಿ ಕುಳ್ಳಿರ್ದು ಭಾವದ ದೃಕ್ಕಿನಿಂದ ನವಲಿಂಗಗಳ ನೋಡಿ ಪೂಜಿಸಿ, ಕದಡುವ ಭೇದವೆಂತೆಂದೊಡೆ : ಆಧಾರಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಆಚಾರಲಿಂಗಕ್ಕೆ ಶಿವಾನಂದ ಜಲದಿಂ ಮಜ್ಜನಕ್ಕೆರೆದು ಪೃಥ್ವಿ ನಿವೃತ್ತಿಯಾದ ಗಂಧವ ಧರಿಸಿ, ಚಿತ್ತ ಸುಚಿತ್ತವಾದ ಅಕ್ಷತೆಯನಿಟ್ಟು, ಅಲ್ಲಿಯ ಚತುರ್ದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಯ ಪೀತವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ, ಅಲ್ಲಿಯ ಜಾಗ್ರಾವಸ್ಥೆಯೆಂಬ ನವೀನ ವಸ್ತ್ರವ ಹೊದಿಸಿ, ನಿಷ್ಕಾಮವೆಂಬ ಆಭರಣವ ತೊಡಿಸಿ, ಸುಗಂಧವೆಂಬ ನೈವೇದ್ಯವನರ್ಪಿಸಿ, ಶ್ರದ್ಧೆಯೆಂಬ ತಾಂಬೂಲವನಿತ್ತು, ಇಂತು ಆಚಾರಲಿಂಗದ ಅಷ್ಟವಿಧಾರ್ಚನೆಯ ಮಾಡಿ, ಕೋಟಿಸೂರ್ಯಪ್ರಭೆಯಂತೆ ಬೆಳಗುವ ಆಚಾರಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಆಚಾರಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ನಂ ನಂ ನಂ ನಂ ನಂ ನಂ ಎಂಬ ನಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಆಚಾರಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ, ಸ್ವಾಧಿಷಾ*ನಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಗುರುಲಿಂಗಕ್ಕೆ ಪರಿಣಾಮವೆಂಬ ಜಲದಿಂ ಮಜ್ಜನಕ್ಕೆರೆದು, ಅಪ್ಪು ನಿವೃತ್ತಿಯಾದ ಗಂಧವ ಧರಿಸಿ ಬುದ್ಧಿ ಸುಬುದ್ಧಿಯಾದ ಅಕ್ಷತೆಯನಿಟ್ಟು ಅಲ್ಲಿಯ ಷಡುದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲ ಸದ್ವಾಸನೆಯ ಧೂಪವ ಬೀಸಿ, ಅಲ್ಲಿಯ ನೀಲವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ ಅಲ್ಲಿಯ ಸ್ವಪ್ನಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿಃಕ್ರೋಧವೆಂಬ ಆಭರಣವ ತೊಡಿಸಿ ಸುರುಚಿಯೆಂಬ ನೈವೇದ್ಯವನರ್ಪಿಸಿ, ನಿಷೆ*ಯೆಂಬ ತಾಂಬೂಲವನಿತ್ತು, ಇಂತು ಗುರುಲಿಂಗದ ಅಷ್ಟವಿಧಾರ್ಚನೆಯ ಮಾಡಿ, ಕೋಟಿಸೂರ್ಯಪ್ರಭೆಯಂತೆ ಬೆಳಗುವ ಗುರುಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಗುರುಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ, ಓಂ ಮಂ ಮಂ ಮಂ ಮಂ ಮಂ ಮಂ ಎಂಬ ಮಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಗುರುಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ ಮಣಿಪೂರಕವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಶಿವಲಿಂಗಕ್ಕೆ ಪರಮಾನಂದವೆಂಬ ಜಲದಿಂ ಮಜ್ಜನಕ್ಕೆರೆದು, ಅಗ್ನಿನಿವೃತ್ತಿಯಾದ ಗಂಧವ ಧರಿಸಿ ಅಹಂಕಾರ ನಿರಹಂಕಾರವಾದ ಅಕ್ಷತೆಯನಿಟ್ಟು ಅಲ್ಲಿಯ ದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ ಅಲ್ಲಿ ಕಮಲ ಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಕೆಂಪುವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ ಅಲ್ಲಿಯ ಸುಷುಪ್ತಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಲೋಭವೆಂಬ ಆಭರಣವ ತೊಡಿಸಿ ಸುರೂಪವೆಂಬ ನೈವೇದ್ಯವನರ್ಪಿಸಿ ಸಾವಧಾನವೆಂಬ ತಾಂಬೂಲವನಿತ್ತು, ಇಂತು ಶಿವಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿಸೂರ್ಯಪ್ರಭೆಯಂತೆ ಬೆಳಗುವ ಶಿವಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತಸಂಗೊಂಡು ಆ ಶಿವಲಿಂಗದ ಪೂಜೆಯ ನಿರ್ಮಾಲ್ಯಮಂ ಮಾಡದೆ, ಓಂ ಶಿಂ ಶಿಂ ಶಿಂ ಶಿಂ ಶಿಂ ಶಿಂ ಎಂಬ ಶಿಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಶಿವಲಿಂಗವನು ಕೂಡಿ ಎಡರಳಿದು, ಅಲ್ಲಿಂದ ಮುಂದಕ್ಕೆ ಹೋಗಿ ಅನಾಹತಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಜಂಗಮಲಿಂಗಕ್ಕೆ ಶಾಂತಿಯೆಂಬ ಜಲದಿಂ ಮಜ್ಜನಕ್ಕೆರೆದು ವಾಯುನಿವೃತ್ತಿಯಾದ ಗಂಧವ ಧರಿಸಿ ಮನ ಸುಮನವಾದ ಅಕ್ಷತೆಯನಿಟ್ಟು ಅಲ್ಲಿಯ ದ್ವಾದಶದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲ ಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಮಾಂಜಿಷ್ಟವರ್ಣವನೆ ಕರ್ಪುರದಜ್ಯೋತಿಯೆಂದು ಬೆಳಗಿ, ಅಲ್ಲಿಯ ತೂರ್ಯಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮೋಹವೆಂಬ ಆಭರಣವ ತೊಡಿಸಿ ಸುಸ್ಪರ್ಶನವೆಂಬ ನೈವೇದ್ಯವನರ್ಪಿಸಿ ಅನುಭಾವವೆಂಬ ತಾಂಬೂಲವನಿತ್ತು ಇಂತು ಜಂಗಮಲಿಂಗಕ್ಕೆ ಅಷ್ಟವಿಧಾರ್ಚನೆಯ ಮಾಡಿ, ಕೋಟಿಸೂರ್ಯಪ್ರಭೆಯಂತೆ ಬೆಳಗುವ ಜಂಗಮಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಜಂಗಮಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ವಾಂ ವಾಂ ವಾಂ ವಾಂ ವಾಂ ವಾಂ ಎಂಬ ವಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಜಂಗಮಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ ವಿಶುದ್ಧಿಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಪ್ರಸಾದಲಿಂಗಕ್ಕೆ ಕ್ಷಮೆಯೆಂಬ ಜಲದಿಂ ಮಜ್ಜನಕ್ಕೆರೆದು ಗಗನನಿವೃತ್ತಿಯಾದ ಗಂಧವ ಧರಿಸಿ, ಜ್ಞಾನ ಸುಜ್ಞಾನವಾದ ಅಕ್ಷತೆಯನಿಟ್ಟು, ಅಲ್ಲಿಯ ಷೋಡಶದಳಂಗಳನೆ ಪುಷ್ಪದ ಮಾಲೆಯೆಂದು ಧರಿಸಿ, ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಯ ಕೃಷ್ಣವರ್ಣವನೆ ಕರ್ಪುರದ ಜ್ಯೋತಿಯೆಂದು ಬೆಳಗಿ, ಅಲ್ಲಿಯ ತೂರ್ಯಾತೀತಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮದವೆಂಬ ಆಭರಣವ ತೊಡಿಸಿ ಸುಶಬ್ದವೆಂಬ ನೈವೇದ್ಯವನರ್ಪಿಸಿ ಆನಂದವೆಂಬ ತಾಂಬೂಲವನಿತ್ತು, ಇಂತು ಪ್ರಸಾದಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿ ಸೂರ್ಯಪ್ರಭೆಯಂತೆ ಬೆಳಗುವ ಪ್ರಸಾದಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಪ್ರಸಾದಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಓಂ ಯಂ ಯಂ ಯಂ ಯಂ ಯಂ ಯಂ ಎಂಬ ಯಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಪ್ರಸಾದಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ ಆಜ್ಞಾಚಕ್ರವೆಂಬ ರಂಗಮಂಟಪದಲ್ಲಿ ಮೂರ್ತಿಗೊಂಡಿರ್ದ ಮಹಾಲಿಂಗಕ್ಕೆ ಸಂತೋಷವೆಂಬ ಜಲದಿಂ ಮಜ್ಜನಕ್ಕೆರೆದು ಆತ್ಮನಿವೃತ್ತಿಯಾದ ಗಂಧವ ಧರಿಸಿ, ಭಾವ ಸದ್ಭಾವವಾದ ಅಕ್ಷತೆಯನಿಟ್ಟು, ಅಲ್ಲಿಯ ದ್ವಿದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಯ ಕಮಲಸದ್ವಾಸನೆಯ ಧೂಪವ ಬೀಸಿ ಅಲ್ಲಿಯ ಮಾಣಿಕ್ಯವರ್ಣವನೆ ಕರ್ಪುರದಜ್ಯೋತಿಯೆಂದು ಬೆಳಗಿ, ಅಲ್ಲಿಯ ನಿರಾವಸ್ಥೆಯೆಂಬ ವಸ್ತ್ರವ ಹೊದಿಸಿ ನಿರ್ಮಲವೆಂಬ ಆಭರಣವ ತೊಡಿಸಿ ಸುತೃಪ್ತಿಯೆಂಬ ನೈವೇದ್ಯವನರ್ಪಿಸಿ ಸಮರಸವೆಂಬ ತಾಂಬೂಲವನಿತ್ತು, ಇಂತು ಮಹಾಲಿಂಗದ ಅಷ್ಟವಿಧಾರ್ಚನೆಯ ಮಾಡಿ ಕೋಟಿಸೂರ್ಯಪ್ರಭೆಯಂತೆ ಬೆಳಗುವ ಮಹಾಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಮಹಾಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ, ಓಂ ಒಂ ಒಂ ಒಂ ಒಂ ಒಂ ಒಂ ಎಂಬ ಓಂಕಾರಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಮಹಾಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದಕ್ಕೆ ಹೋಗಿ ಬ್ರಹ್ಮರಂಧ್ರವೆಂಬ ಸಹಸ್ರದಳಮಂಟಪದಲ್ಲಿ ಮೂರ್ತಿಗೊಂಡಿರ್ದ ನಿಷ್ಕಳಲಿಂಗಕ್ಕೆ ಅನುಪಮವೆಂಬ ಜಲದಿಂ ಮಜ್ಜನಕ್ಕೆರೆದು ಅನಾದಿಯೆಂಬ ಗಂಧವ ಧರಿಸಿ, ಅಗಮ್ಯವೆಂಬ ಅಕ್ಷತೆಯನಿಟ್ಟು ಅವಿರಳವೆಂಬ ಪುಷ್ಪದ ಮಾಲೆಯ ಧರಿಸಿ, ಅಪ್ರಮಾಣವೆಂಬ ಧೂಪವ ಬೀಸಿ ಅಖಂಡವೆಂಬ ಜ್ಯೋತಿಯ ಬೆಳಗಿ ಸತ್ಯವೆಂಬ ವಸ್ತ್ರವ ಹೊದಿಸಿ ಸದಾನಂದವೆಂಬ ಆಭರಣವ ತೊಡಿಸಿ ನಿತ್ಯವೆಂಬ ನೈವೇದ್ಯವನರ್ಪಿಸಿ ನಿರುಪಮವೆಂಬ ತಾಂಬೂಲವನಿತ್ತು, ಇಂತು ನಿಷ್ಕಲಲಿಂಗದ ಅಷ್ಟವಿಧಾರ್ಚನೆಯ ಮಾಡಿ ಅನಂತಕೋಟಿಸೂರ್ಯಪ್ರಭೆಯಂತೆ ಬೆಳಗುವ ನಿಷ್ಕಲಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ನಿಷ್ಕಲಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ಅಗಣಿತವೆಂಬ ನಮಸ್ಕಾರಮಂ ಮಾಡಿ, ಆ ನಿಷ್ಕಲಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ ಶಿಖಾಚಕ್ರವೆಂಬ ತ್ರಿದಳಮಂಟಪದಲ್ಲಿ ಮೂರ್ತಿಗೊಂಡಿರ್ದ ಶೂನ್ಯಲಿಂಗಕ್ಕೆ ನಿರ್ಭಾವವೆಂಬ ಜಲದಿಂ ಮಜ್ಜನಕ್ಕೆರೆದು, ನಿರ್ಜಾತವೆಂಬ ಗಂಧವ ಧರಿಸಿ ನಿರ್ಜಡವೆಂಬ ಅಕ್ಷತೆಯನಿಟ್ಟು ನಿಧ್ರ್ವಂದ್ವವೆಂಬ ಪುಷ್ಪದಮಾಲೆಯ ಧರಿಸಿ ನಿರ್ಲಜ್ಜೆಯೆಂಬ ಧೂಪವ ಬೀಸಿ ನಿರಾಭಾರವೆಂಬ ಜ್ಯೋತಿಯ ಬೆಳಗಿ ನಿರಾಮಯವೆಂಬ ವಸ್ತ್ರವ ಹೊದಿಸಿ ನಿಸ್ಪೃಹವೆಂಬ ಆಭರಣವ ತೊಡಸಿ ನಿರಾಳವೆಂಬ ನೈವೇದ್ಯವನರ್ಪಿಸಿ ನಿರಾಲಂಬವೆಂಬ ತಾಂಬೂಲವನಿತ್ತು, ಇಂತು ಶೂನ್ಯಲಿಂಗದ ಅಷ್ಟವಿಧಾರ್ಚನೆಯಂ ಮಾಡಿ, ಅಗಣಿತ ಕೋಟಿಸೂರ್ಯ ಪ್ರಭೆಯಂತೆ ಬೆಳಗುವ ಶೂನ್ಯಲಿಂಗವನು ಕಂಗಳು ತುಂಬಿ ನೋಡಿ ಮನದಲ್ಲಿ ಸಂತೋಷಂಗೊಂಡು ಆ ಶೂನ್ಯಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ ನಿರ್ಭೇದ್ಯವೆಂಬ ನಮಸ್ಕಾರಮಂ ಮಾಡಿ ಆ ಶೂನ್ಯಲಿಂಗವನು ಕೂಡಿ ಎರಡಳಿದು, ಅಲ್ಲಿಂದ ಮುಂದಕ್ಕೆ ಹೋಗಿ, ಪಶ್ಚಿಮಚಕ್ರವೆಂಬ ಏಕದಳಮಂಟಪದಲ್ಲಿ ಮೂರ್ತಿಗೊಂಡಿರ್ದ ನಿರಂಜನಲಿಂಗಕ್ಕೆ ನಿರ್ನಾಮವೆಂಬ ಜಲದಿಂ ಮಜ್ಜನಕ್ಕೆರೆದು ನಿಷ್ಕಾರಣವೆಂಬ ಗಂಧವ ಧರಿಸಿ ನಿಃಸಂಗವೆಂಬ ಅಕ್ಷತೆಯನಿಟ್ಟು ನಿಸ್ಸಾರವೆಂಬ ಪುಷ್ಪವ ಧರಿಸಿ ನಿರುಪಾಧಿಕವೆಂಬ ಧೂಪವ ಬೀಸಿ ನಿಷ್ಕಳೆಯೆಂಬ ಜ್ಯೋತಿಯ ಬೆಳಗಿ ನಿಶ್ಚಲವೆಂಬ ವಸ್ತ್ರವ ಹೊದಿಸಿ ನಿರ್ವಾಸನೆಯೆಂಬ ಆಭರಣವ ತೊಡಿಸಿ ನಿಃಶೂನ್ಯವೆಂಬ ನೈವೇದ್ಯವನರ್ಪಿಸಿ ನಿರವಯವೆಂಬ ತಾಂಬೂಲವನಿತ್ತು, ಇಂತು ನಿರಂಜನಲಿಂಗದ ಅಷ್ಟವಿಧಾರ್ಚನೆಯ ಮಾಡಿ ತೆರಹಿಲ್ಲದೆ ಬೆಳಗಿನ ಮಹಾಬೆಳಗನೊಳಕೊಂಡು ಬೆಳಗುವ ನಿರಂಜನಲಿಂಗವನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಂಗೊಂಡು ಆ ನಿರಂಜನಲಿಂಗದ ಪೂಜೆಯ ನಿರ್ಮಾಲ್ಯವ ಮಾಡದೆ, ನಿಃಶಬ್ದವೆಂಬ ನಮಸ್ಕಾರಮಂ ಮಾಡಿ ಆ ನಿರಂಜನಲಿಂಗವನು ಕೂಡಿ ಎರಡಳಿದು ಅಲ್ಲಿಂದ ಮುಂದೆ ನೋಡಲು ಬಚ್ಚಬರಿಯ ಬಯಲಿರ್ಪುದ ಕಂಡು ಆ ಬಯಲೆ ತನ್ನ ನಿಜನಿವಾಸವೆಂದು ತಿಳಿದು ಆ ನಿಜವಾಸದಲ್ಲಿ ತಾ ನಿಂದು ತನ್ನಿಂದ ಕೆಳಗಣ ನವಚಕ್ರಂಗಳಲ್ಲಿರ್ದ ನವಲಿಂಗಗಳ ಪೂಜೆಯ ನಿರಂತರದಲ್ಲಿ ಮಾಡುವ ಶಿವಯೋಗಿಗೆ ಭವಬಂಧನವಿಲ್ಲ. ಆ ಭವಬಂಧನವಿಲ್ಲವಾಗಿ ಜೀವಕಲ್ಪಿತವು ಮುನ್ನವೇ ಇಲ್ಲ. ಆ ಜೀವಕಲ್ಪಿತವಿಲ್ಲವಾಗಿ ಆತನು ಪರಿಪೂರ್ಣನಾಗಿ ಪರಾತ್ಪರನಾಗಿ ಪರಶಿವಬ್ರಹ್ಮವೇ ಆಗಿ ಇರ್ಪನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಷ್ಟವಿಧಾರ್ಚನೆಯ ಮಾಡಿದರೇನೋ ತನುಗುಣಂಗಳ ಮೆಟ್ಟಿ ಮುರಿಯದನ್ನಕ್ಕರ? ಷೋಡಶೋಪಚಾರವ ಮಾಡಿದರೇನೋ ಸೂಳೆಯರಂತೆ ಹಲವು ಕಡೆಗೆ ಹೋಹ ಮನವ ನೆನಹಿನ ಹಸ್ತದಲ್ಲಿ ಹಿಡಿದು ಇಷ್ಟಲಿಂಗದಲ್ಲಿ ನೆನಹ ಗಟ್ಟಿಗೊಳಿಸಿ ಕೃತನಿಶ್ಚಯದಿಂ ದೃಢವಿಡಿದು ಅನಿಷ್ಟವ ಪರಿಹರಿಸಬಲ್ಲರೆ ಆತನೆ ಶಿವಲಿಂಗಾರ್ಚಕನು; ಲಿಂಗಧ್ಯಾನ ಸಂಪನ್ನನು; ಲಿಂಗವಲ್ಲದನ್ಯವನರಿಯದ ಅಚಲಿತ ಮಹಿಮನು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅಯ್ಯ ದರ್ಪಣಾಕೃತಿ, ಯಕಾರಪ್ರಣಮ, ಪ್ರಣವನಾಮ, ವಿಶುದ್ಧಿಚಕ್ರ, ಕಪೊತವರ್ಣ, ಶರಣಸ್ಥಲ, ಆನಂದತನು, ಸುಜ್ಞಾನಹಸ್ತ, ಪ್ರಸಾದಲಿಂಗ, ಶ್ರೋತ್ರವೆಂಬ ಮುಖ, ಆನಂದಭಕ್ತಿ, ಸುಶಬ್ದಪದಾರ್ಥ, ಸುಶಬ್ದ ಪ್ರಸಾದ, ಸದಾಶಿವ ಪೂಜಾರಿ, ಸದಾಶಿವನಧಿದೇವತೆ, ಶಿವಸಾದಾಖ್ಯ, ಪರಿಪೂರ್ಣವೆಂಬ ಲಕ್ಷಣ, ಅನಾದಿವತುವೆಂಬ ಸಂಜ್ಞೆ, ಊಧ್ರ್ವದಿಕ್ಕು, ಅಜಪೆವೇದ, ಆಕಾಶವೆ ಅಂಗ, ಶುದ್ದಾತ್ಮ, ಪರಾಶಕ್ತಿ, ಶಾಂತ್ಯತೀತಕಲೆ- ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು, ಎನ್ನ ವಿಶುದ್ಧಿಚಕ್ರವೆಂಬ ಐಮುಕ್ತಿಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಈಳನಾಸ್ವರೂಪವಾದ ಪ್ರಸಾದಲಿಂಗವೆ ವಿಶ್ವನಾಥಲಿಂಗವೆಂದು ಭಾವತ್ರಯವ ಮಡಿಮಾಡಿ, ಕ್ಷಮೆಯೆಂಬ ಜಲದಿಂ ಮಜ್ಜನಕ್ಕೆರೆದು, ಗಗನನಿವೃತ್ತಿಯಾದ ಗಂಧವ ಧರಿಸಿ, ಜ್ಞಾನ ಸುಜ್ಞಾನವಾದದಕ್ಷತೆಯನಿಟ್ಟು, ಅಲ್ಲಿಹ ಷೋಡಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಕಪೋತವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ತುರ್ಯಾತೀತಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ, ನಿರ್ಮದವೆಂಬಾಭರಣವ ತೊಡಿಸಿ, ಸುಶಬ್ಧವೆಂಬ ನೈವೇದ್ಯವನರ್ಪಿಸಿ, ಆನಂದವೆಂಬ ತಾಂಬೂಲನವಿತ್ತು, ಇಂತು ಪ್ರಸಾದಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಪ್ರಸಾದಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು ಆ ಪ್ರಸಾದಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ಯಂ ಯಂ ಯಂ ಯಂ ಯಂ ಯಂ ಎಂಬ ಯಕಾರ ಷಟ್ವಿಧ ಮಂತ್ರಗಳಿಂದೆ ನಮಸ್ಕರಿಸಿ, ಆ ಪ್ರಸಾದಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿರ್ಮೋಹಿಯಾಗಿ ಆಚರಿಸಬಲ್ಲಾತನೆ ಆನಂದಭಕ್ತಿಯುಳ್ಳ ಶಿವಶರಣ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಕಾಮನಾಸ್ತಿಯಾದಲ್ಲಿ ಅಷ್ಟವಿಧಾರ್ಚನೆಯ ಭಾವನಾಸ್ತಿ. ಕ್ರೋಧನಾಸ್ತಿಯಾದಲ್ಲಿ ಸುವಿಚಾರ ಭಾವನಾಸ್ತಿ. ಲೋಭನಾಸ್ತಿಯಾದಲ್ಲಿ ತನುಮನಪ್ರಾಣಭಾವನಾಸ್ತಿ. ಮೋಹನಾಸ್ತಿಯಾದಲ್ಲಿ ಈಷಣತ್ರಯ ಭಾವನಾಸ್ತಿ. ಮದನಾಸ್ತಿಯಾದಲ್ಲಿ ತ್ರಿಪುಟಿಭಾವನಾಸ್ತಿ. ಮತ್ಸರನಾಸ್ತಿಯಾದಲ್ಲಿ ಕೂಟದ ಭಾವನಾಸ್ತಿ. ಗುರುನಿರಂಜನ ಚನ್ನಬಸವಲಿಂಗನಾಸ್ತಿಯಾದಲ್ಲಿ ತಾನೆಂಬ ಭಾವನಾಸ್ತಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯ, ಜ್ಯೋತಿರಾಕೃತಿ, ಓಂಕಾರ ಪ್ರಣಮ, ಸಿಂಹನಾದ, ಆಜ್ಞಾಚಕ್ರ, ಮಾಣಿಕ್ಯವರ್ಣ, ಐಕ್ಯಸ್ಥಲ, ಶುದ್ಧತನು, ಸದ್ಭಾವಹಸ್ತ, ಮಹಾಲಿಂಗ ಹೃದಯವೆಂಬ ಮುಖ, ಸಮರಸಭಕ್ತಿ, ಸುತೃಪ್ತಿಪದಾರ್ಥ, ಸುತೃಪ್ತಿಪ್ರಸಾದ, ಮಹಾದೇವ ಪೂಜಾರಿ, ಮಹಾದೇವನಧಿದೇವತೆ, ಮಹಾಸಾದಾಖ್ಯ, ಅಖಂಡವೆಂಬ ಲಕ್ಷಣ, ಮಹವೆಂಬ ಸಂಜ್ಞೆ, ಪಾತಾಳದಿಕ್ಕು, ಗಾಯತ್ರಿವೇದ, ಆತ್ಮನೆ ಅಂಗ ಜ್ಞಾನಾತ್ಮ, ಚಿಚ್ಛಕ್ತಿ, ಶಾಂತ್ಯತೀತೋತ್ತರ ಕಲೆ ಇಂತು ಇಪ್ಪತ್ತುನಾಲ್ಕು ಸಕೀಲಂಗಳನೊಳಕೊಂಡು ಎನ್ನ ಆಜ್ಞಾಚಕ್ರವೆಂಬ ತ್ರಿಕೂಟಸಂಗಮಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ, ಬೋಧಾಸ್ವರೂಪವಾದ ಮಹಾಲಿಂಗವೆ ಸಂಗಮೇಶ್ವರಲಿಂಗವೆಂದು, ಅವಸ್ಥಾತ್ರಯವ ಮಡಿಮಾಡಿ, ಸಂತೋಷವೆಂಬ ಜಲದಿಂ ಮಜ್ಜನಕ್ಕೆರದು, ಆತ್ಮನಿವೃತ್ತಿಯಾದ ಗಂಧವ ಧರಿಸಿ, ಭಾವ ಸದ್ಭಾವವಾದದಕ್ಷತೆಯನಿಟ್ಟು, ಅಲ್ಲಿಹ ದ್ವಿದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಮಾಣಿಕ್ಯ ವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ನಿರಾವಸ್ಥೆಯೆಂಬ ನವೀನ ವಸ್ತ್ರವ ಹೊದ್ದಿಸಿ, ನಿರ್ಮಲವೆಂಬಾಭರಣವ ತೊಡಿಸಿ, ಸುತೃಪ್ತಿಯೆಂಬ ನೈವೇದ್ಯವನರ್ಪಿಸಿ, ಸಮರಸವೆಂಬ ತಾಂಬೂಲವನಿತ್ತು, ಇಂತು ಮಹಾಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಮಹಾಲಿಂಗವನ್ನು ಕಂಗಳು ತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು, ಆ ಮಹಾಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ಓಂ ಓಂ ಓಂ ಓಂ ಓಂ ಎಂಬ ಓಂಕಾರ ಷಡ್ವಿಧಮಂತ್ರಂಗಳಿಂದೆ ನಮಸ್ಕರಿಸಿ, ಆ ಮಹಾಲಿಂಗವೆ ತಾನೆಂದರಿದು ಕೂಡಿ ಎರಡಳಿದು ನಿತ್ಯತೃಪ್ತನಾಗಿ ಆಚರಿಸಬಲ್ಲಾತನೆ ಸಮರಸಭಕ್ತಿಯನುಳ್ಳ ಲಿಂಗೈಕ್ಯ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಧೂಪ ದೀಪಾರತಿಯ ಬೆಳಗುವಡೆ, ನೀನು ಸ್ವಯಂಜ್ಯೋತಿಪ್ರಕಾಶನು. ಅರ್ಪಿತವ ಮಾಡುವಡೆ, ನೀನು ನಿತ್ಯತೃಪ್ತನು. ಅಷ್ಟವಿಧಾರ್ಚನೆಯ ಮಾಡುವಡೆ, ನೀನು ಮುಟ್ಟಬಾರದ ಘನವೇದ್ಯನು. ನಿತ್ಯನೇಮಂಗಳ ಮಾಡುವಡೆ ನಿನಗೆ ಅನಂತನಾಮಂಗಳಾದವು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಕಾಯ ಮನ ಪ್ರಾಣ ಭಾವ ಜ್ಞಾನ ನಾಮ ಸೀಮೆ ನಿರಂಜನ ಶರಣನು ಮಾಡಲಿಲ್ಲ ಇಷ್ಟಲಿಂಗಕ್ಕೆ ಅಷ್ಟವಿಧಾರ್ಚನೆಯ. ನೋಡಲಿಲ್ಲ ಸ್ತೋತ್ರ ಜಪ ಮಂತ್ರ ಧ್ಯಾನವಿಟ್ಟು ಪ್ರಾಣಲಿಂಗವ. ಕೂಡಲಿಲ್ಲ ನಿರಂಜನ ಪೂಜೆ ಮನೋರ್ಲಯವಿಟ್ಟು ಭಾವಲಿಂಗವ. ಎಂತಿರ್ದಂತೆ ಗುರುನಿರಂಜನ ಚನ್ನಬಸವಲಿಂಗವ ತಾನಾಗಿ ಬಯಲಾದುದನೇನೆಂಬೆ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕ್ಷುತ್ ಪಿಪಾಸೆ ಶೋಕ ಮೋಹ ಜನನ ಮರಣವೆಂಬ ಷಡೂರ್ಮೆಗಳ ಹುಡಿಮಾಡಿ ಸುಟ್ಟುರುಹಿ, ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ ಅರಿಷಡ್‍ವರ್ಗಂಗಳ ಬೇರ ಕಿತ್ತು ಬಿಸುಟು. ಇಷ್ಟಲಿಂಗಕ್ಕೆ ನೈಷೆ*ಯಿಂದ ಜಲ ಗಂಧಾಕ್ಷತೆ ಧೂಪ ದೀಪ ನೈವೇದ್ಯ ತಾಂಬೂಲವೆಂಬ ಅಷ್ಟವಿಧಾರ್ಚನೆಯ ಮಾಡಿ, ಮತ್ತಾ ಲಿಂಗವನು ಧ್ಯಾನಮುಖದಿಂದೆ ಅಂತರಂಗಕ್ಕೆ ಬಿಜಯಂಗೈಸಿ, ಹೃದಯಕಮಲಕರ್ಣಿಕಾಸ್ಥಾನದಲ್ಲಿ ಕುಳ್ಳಿರಿಸಿ, ಪ್ರಾಣಾಯಾಮ ನಿರ್ಗುಣದ ಅಷ್ಟವಿಧಾರ್ಚನೆಯ ಮಾಡಿ, ಚಿತ್ತ ಸ್ವಸ್ಥಿರವಾಗಿ, ಭಾವವು ಬಯಲಬ್ರಹ್ಮದಲ್ಲಿ ಹೂಳಿಹೋಗಿ ತಾನಿದಿರೆಂಬುದನಳಿದು, ಉರಿ ಕರ್ಪುರದಂತೆ ಅವಿರಳ ಸಮರಸವಾಗಿರ್ಪಾತನೆ ನಿಜೈಕ್ಯನು ನೋಡಾ. ಅದೆಂತೆಂದೊಡೆ : ``ಷಡೂರ್ಮಯಶ್ಚ ಷಡ್ವರ್ಗೋ ನಾಸ್ತಿ ಚಾಷ್ಟವಿಧಾರ್ಚನಂ | ನಿರ್ಭಾವಂ ನಿಜಲಿಂಗೈಕ್ಯಂ ಶಿಖಿಕರ್ಪೂರಯೋಗವತ್''|| ಎಂದುದಾಗಿ, ಇಂತಪ್ಪ ನಿಜಲಿಂಗೈಕ್ಯರ ಮಹಾಘನ ನಿಜದ ನಿಲವಿಂಗೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯ, ಅರ್ಧಚಂದ್ರಾಕೃತಿ, ವಕಾರಪ್ರಣಮ, ಮೇಘನಾದ, ಅನಾಹತಚಕ್ರ, ಮಾಂಜಿಷ*ವರ್ಣ, ಪ್ರಾಣಲಿಂಗಿಸ್ಥಲ, ನಿರ್ಮಿಲತನು, ಸುಮನಹಸ್ತ, ಜಂಗಮಲಿಂಗ, ತ್ವಕ್ಕೆಂಬ ಮುಖ, ಅನುಭಾವಭಕ್ತಿ, ಸುಸ್ಪರ್ಶನ ಪದಾರ್ಥ, ಸುಸ್ಪರ್ಶನ ಪ್ರಸಾದ, ಈಶ್ವರಿ ಪೂಜಾರಿ, ಈಶ್ವರನಧಿದೇವತೆ, ಅಮೂರ್ತಿಸಾದಾಖ್ಯ, ನಿತ್ಯವೆಂಬ ಲಕ್ಷಣ, ನಿರ್ಮಲಾತ್ಮ, ಆದಿಶಕ್ತಿ, ಶಾಂತಿಕಲೆ-ಇಂತು ಇಪ್ಪತ್ತುನಾಲ್ಕು ಸಂಕೀಲಂಗಳನೊಳಕೊಂಡು, ಎನ್ನ ಅನಾಹತಚಕ್ರವೆಂಬ ಹಿಮವತ್ಕೇತಾರಕ್ಷೇತ್ರದಲ್ಲಿ ಮೂರ್ತಿಗೊಂಡಿರ್ದ ಯಜನಸ್ವರೂಪವಾದ ಜಂಗಮಲಿಂಗವೆ ಹಿಮಗಿರೀಶ್ವರಲಿಂಗವೆಂದು, ಪ್ರಾಣತ್ರಯವ ಮಡಿಮಾಡಿ, ಶಾಂತಿಯೆಂಬ ಜಲದಿಂ ಮಜ್ಜನಕ್ಕೆರದು, ವಾಯು ನಿವೃತ್ತಿಯಾದ ಗಂಧವ ಧರಿಸಿ, ಮನ ಸುಮನವಾದಕ್ಷತೆಯನಿಟ್ಟು ಅಲ್ಲಿಹ ದ್ವಾದಶದಳಂಗಳನೆ ಪುಷ್ಪದಮಾಲೆಯೆಂದು ಧರಿಸಿ, ಅಲ್ಲಿಹ ಕಮಲಸದ್ವಾಸನೆಯ ಧೂಪವ ಬೀಸಿ, ಅಲ್ಲಿಹ ಮಾಂಜಿಷ*ವರ್ಣವೆ ಕರ್ಪೂರದ ಜ್ಯೋತಿಯೆಂದು ಬೆಳಗಿ, ಅಲ್ಲಿಹ ತೂರ್ಯಾವಸ್ಥೆಯೆಂಬ ನವೀನವಸ್ತ್ರವ ಹೊದ್ದಿಸಿ, ನಿರ್ಲೇಪವೆಂಬಾಭರಣವ ತೊಡಿಸಿ, ಸುಸ್ಪರ್ಶನವೆಂಬ ನೈವೇದ್ಯವನರ್ಪಿಸಿ, ಅನುಭಾವವೆಂಬ ತಾಂಬೂಲವನಿತ್ತು ಇಂತು ಜಂಗಮಲಿಂಗಕ್ಕೆ ಅಷ್ಟವಿಧಾರ್ಚನೆಯಂ ಮಾಡಿ, ಕೋಟಿಸೂರ್ಯನ ಪ್ರಭೆಯಂತೆ ಬೆಳಗುವ ಜಂಗಮಲಿಂಗವನ್ನು ಕಂಗಳುತುಂಬಿ ನೋಡಿ, ಮನದಲ್ಲಿ ಸಂತೋಷಗೊಂಡು, ಆ ಜಂಗಮಲಿಂಗದ ಪೂಜೆಯ ಸಮಾಪ್ತವ ಮಾಡಿ, ಓಂ ವಾಂ ವಾಂ ವಾಂ ವಾಂ ವಾಂ ವಾಂ ಎಂಬ ವಾಕಾರಷಡ್ವಿಧ ಮಂತ್ರಂಗಳಿಂದೆ ನಮಸ್ಕರಿಸಿ, ಆ ಜಂಗಲಿಂಗಮವೆ ತಾನೆಂದರಿದು ಕೂಡಿ ಎರಡಳಿದು ನಿಃಪ್ರಪಂಚಿಯಾಗಿ ಆಚರಿಸಬಲ್ಲಾತನೆ ಅನುಭಾವಭಕ್ತಿಯನುಳ್ಳ ಲಿಂಗಪ್ರಾಣಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
-->