ಅಥವಾ

ಒಟ್ಟು 61 ಕಡೆಗಳಲ್ಲಿ , 25 ವಚನಕಾರರು , 44 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ಕಾಯದ ಕೀಲನರಿತು ಕವಿತ್ವವನು ಮಾಡುವಂಥ ಭೇದವನು ಬಲ್ಲರೆ ಹೇಳಿ, ಅರಿಯದಿರ್ದರೆ ಕೇಳಿ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತು ಕೊಟ್ಟು ಇಳಿಯ ತೆಗೆದು ಜನ್ಮದಲ್ಲಿ ನುಡಿಸಬಲ್ಲರೆ ಆತನೀಗ ಪಂಚತತ್ವದ ಮೂಲವ ತಿಳಿದು ಮನವೆಂಬ ಗದ್ದಿಗೆಯ ಅಜ್ಞಾನವೆಂಬ ನಾದಸ್ವರವನು ಹಿಡಿದುಕೊಂಡು ಅದರ ಅನುವರಿತು ಊದಿ, ಪಿಂದೆ ದಾಡೆಯಿಂದ ಪೃಥ್ವಿಯ ಎತ್ತಿದ ಸರ್ಪನ ಎಬ್ಬಿಸಿ ಬ್ರಹ್ಮಾಂಡಕ್ಕೆ ಮುಖ ಮಾಡಿ ನಿಲ್ಲಿಸಬಲ್ಲರೆ ಆತನಿಗಾಗಿ ಗೀತ ಗಾಯನ ವಾದ್ಯ ಪ್ರಾಸ ದೀರ್ಘ ಗುರು ಲಘುಗಳೆಂಬ ಭೇದವ ಬಲ್ಲೆನೆಂದೆನ್ನಬಹುದು. ನಿಮ್ಮ ಅಂಗ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಕಾಣಿರೋ ! ಗುಡಿಸ ಕೊಟ್ಟು, ಗುಡಿಸಿನ ಒಳಗೆ ಸುಳಿದು ಜಿಹ್ವೆಯಲ್ಲಿ ನುಡಿಸಬಲ್ಲರೆ ಅಂತಹವನಿಗೆ ತನ್ನ ತನುವೆಂಬ ಹುತ್ತದ ಒಂಬತ್ತು ಹೆಜ್ಜವನು ಮುಚ್ಚಿದ ದ್ವಾರಂಗಳನ್ನೆಲ್ಲ ಬಳಿದು ಅಂಬರಮಂಟಪದೊಳಗೆ ಸುಳಿದಾಡುವಂಥ ಶಂಭುಲಿಂಗವನು ನೋಡಿಕೊಂಡು ಸಂತೈಸಿ, ವರುಷ ವರುಷಕ್ಕೆ ಒಂದು ಸಂಭ್ರಮದ ಜಾತ್ರೆಯ ನೆರೆಯಬಲ್ಲರೆ ಆತನಿಗೆ ಮಹಾಪ್ರೌಢನೆಂದೆನ್ನಬಹುದು ಕಾಣಿರೋ. ನಿಮ್ಮ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು, ಕೊಂಬಿನಿಂದಿಳಿಯ ತೆಗೆದು ಆತನಿಗೆ ಆರು ಮೂರುಗಳೆಂಬ ನವರಸವಿದ್ಯ ನಾದವನೆಬ್ಬಿಸುವಂಥ ತಾಳಗತಿಯ ಪದಕಾರಣವ ಬಲ್ಲನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಮೇಲೆತ್ವವಂ ಕೊಟ್ಟು, ಕೆಳಗೈತ್ವವಂ ಕೊಟ್ಟು, ಇವೆರಡನು ಕೂಡಿ ಒಂದಮಾಡಿ ನುಡಿಸಬಲ್ಲರೆ ಆತನಿಗೆ ಸ್ವರ್ಗ ಮತ್ರ್ಯ ಪಾತಾಳ ಇಂತೇಳು ಭುವನ, ಹದಿನಾಲ್ಕು ಲೋಕ, ಸಪ್ತೇಳುಸಾಗರ, ಅಷ್ಟಲಕ್ಷ ಗಿರಿಪರ್ವತಗಳನ್ನೆಲ್ಲ ತನ್ನ ಅಂತರಂಗವೆಂಬ ಕುಕ್ಷಿಯೊಳಗೆ ಇಂಬಿಟ್ಟುಕೊಂಡು ಪರರಿಗೆ ಕಾಣಬಾರದಂತಹ ಕುರೂಪಿಯಾಗಿ ಇರಬಲ್ಲರೆ ಆತನಿಗೆ ಮಹಾಶಿವಜ್ಞಾನಿಯೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು, ಉತ್ವ ಔತ್ವ ಕೊಟ್ಟು, ಉತ್ವ ಔತ್ವವೆರಡನು ಕೂಡಿ ಒಂದುಮಾಡಿ ನಿಲಿಸಿ ಜಮ್ಮೆದಲ್ಲಿ ನುಡಿಸಬಲ್ಲರೆ ಆತನಿಗೆ ಆ ನರಕವಿ ವರಕವಿಗಳ ಕಣ್ಣಿಗೆ ಕಾಣಬಾರದಂತಹ ಮುಸುಕಿನ ಮುಡಿಯಂ ಮಂದಿರ ಮನೆಯೊಳಗೆ ಮುಹೂರ್ತವ ಮಾಡಿಕೊಂಡಿಹುದು. ಓಂಕಾರವೆಂಬುವದೊಂದು ಅಕ್ಷರವ ನೋಡಿ ಅನಂತ ಪರಿಪರಿಯ ವಚನಗಳ ಮಾಡಬಲ್ಲರೆ ಆತನಿಗೆ ಮಹಾ ಉತ್ತಮ ಶಿವಕವೀಶ್ವರನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಒಂದು ಸೊನ್ನೆಯ ಕೊಟ್ಟರೆ `ವಂ' ಎಂದು ಅಂತರಂಗದಲ್ಲಿ ತಿಳಿದು, ಜಿಹ್ವೆಯಲ್ಲಿ ನುಡಿಯಬಲ್ಲರೆ ಆತನಿಗೆ ಕಾಯಪುರವೆಂಬ ಪಟ್ಟಣದೊಳಗೆ ಹರಿದಾಡುವಂಥ ಆರುಮಂದಿ ತಳವಾರರ ತಲೆಯ ಕುಟ್ಟಿ, ಮೂರುಮಂದಿ ಗರ ಬೆರೆದ ನೆಂಟರ ಮೂಗ ಕೊಯ್ದು, ಸಾವಿರೆಸಳಿನ ಕಮಲದೊಳಗೆ ಪೊಕ್ಕು, ತನ್ನ ಸಾವು ಮರಣ ತಪ್ಪಿಸಿಕೊಳ್ಳಬಲ್ಲರೆ ಆತನಿಗೆ ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಎರಡು ಸೊನ್ನೆಯ ಕೊಟ್ಟರೆ `ವಃ' ಎಂದು ಅಂತರಂಗದಲ್ಲಿ ತಿಳಿದು ಜಿಹ್ವೆಯಲ್ಲಿ ನುಡಿಯಬಲ್ಲರೆ, ಆತನಿಗೆ ತನ್ನ ಅಂತರಂಗವೆಂಬ ಹರಿವಾಣದೊಳಗೆ ತುಂಬಿಟ್ಟಿದ್ದಂತಹ ಷಡುರಸ ಪಂಚಾಮೃತ ಪಂಚಕಜ್ಜಾಯಗಳೆಲ್ಲ ಸವಿದುಂಡು ಚಪ್ಪರಿಸಿ ಹಿಪ್ಪೆಯ ಮಾಡಿ ಬೀದಿಯೊಳಗೆ ಬಿಸುಟಬಲ್ಲರೆ ಆತನಿಗೆ ಕಾಯದ ಕೀಲನರಿತು ಕವಿತ್ವವನು ಮಾಡುವಂತಹ ಪ್ರೌಢನೆಂದೆನ್ನಬಹುದು ಕಾಣಿರೋ. ಇಂತೀ ಕಾಯದ ಕೀಲನರಿಯದ ಕವಿಗಳು ಛಂದಸ್ಸು, ನಿಘಂಟು, ಅಮರ, ವ್ಯಾಕರಣ, ನಾನಾರ್ಥಗಳೆಂಬ ಹೆಂಚ ಹೊಡೆದು ನೆತ್ತಿಯ ಮೇಲೆ ಹೊತ್ತುಕೊಂಡು ತಿರುಗುವ ಕವಿಗಳೆಂಬ ಚಾತುರ್ಯದ ಮಾತ ನಿಟ್ಟಿಸಲು ಆಡ ಸವಿವ ಜಾತಿಗಳ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರು ಶಿವಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಅಸಂಬಂಧ ಸಂಬಂಧವಾಯಿತ್ತು, ಲಿಂಗಸಾರಾಯರ ಸನುಮತದಿಂದ ಉತ್ತಮ ಮಧ್ಯಮವ ಕೆಡಿಸಿತ್ತು, ಏಕೋ ಸತಿಪತಿಗುಣದಿಂದ, ಗರುವರ ಗರುವತನ ಕೂಡಲಸಂಗಯ್ಯನ ಅನುಭಾವದಿಂದ.
--------------
ಬಸವಣ್ಣ
ಭೃತ್ಯನಾದ ಬಳಿಕ ಕರ್ತೃವಿಂಗೆ ಉತ್ತಮ ವಸ್ತುವನೀಯಬೇಕು, ಇದೇ ಕರ್ತೃಭೃತ್ಯರ ಭೇದ. ಲಿಂಗಭಕ್ತನಾದಡೆ ಜಂಗಮಪಾದತೀರ್ಥಪ್ರಸಾದವ ಲಿಂಗಕ್ಕೆ ಮಜ್ಜನ ಭೋಜನ ನೈವೇದ್ಯವ ಮಾಡಿ, ಪ್ರಸಾದವ ಕೊಳ್ಳಬೇಕು. ಇದೇ ವರ್ಮ, ಇದೇ ಧರ್ಮ ಕಾಣಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ಮಧುರ ಚೂರ್ಣಕ್ಕೆ ಕಠಿಣದ ಪದರ ಉಂಟೆ? ವಿಶ್ವಾಸದಲ್ಲಿ ಪೂಜಿಸುವಾತಂಗೆ ಉತ್ತಮ ಕನಿಷ* ಮಧ್ಯಮವೆಂದು ಲಕ್ಷಿಸಲುಂಟೆ? ಮಾಹೇಶ್ವರ ಅರ್ಚನೆಯ ಮಾಡುವಲ್ಲಿ ಮಹಾದೇವ ತಪ್ಪದೆಯಿಪ್ಪ, ಇದು ಭಕ್ತಿವಿಶ್ವಾಸಸ್ಥಲ ಸದ್ಯೋಜಾತಲಿಂಗಕ್ಕೆ.
--------------
ಅವಸರದ ರೇಕಣ್ಣ
ಜಾತಿವಿಚಾರ, ನೀತಿವಿಚಾರ, ಸಮಯವಿಚಾರವೆಂಬ ತ್ರಿವಿಧವ ಹಿಡಿದು, ಬಿಡದೆ ಉತ್ತಮ ಮಧ್ಯಮ ಕನಿಷ*ವೆಂಬವ ಕಾಲಿಗೆ ಮಾವವ ಕಟ್ಟಿ ಸಿಕ್ಕಿಸಿ, ಸರ್ವಸೂತಕದೊಳಗಿರ್ದಜಾತನಾದೆ ಕ....ಗವನೆಂದಡಾತ ಸಾಧ್ಯವಾದಾತನೆ ? ಸಿಕ್ಕನೆಂದ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಆವಾವ ಕಾಲದಲ್ಲಿ ಆವಾವ ಪರಿಯಲ್ಲಿ ಒಂದೊಂದು ವಸ್ತುವನು ಜ್ಞಾನಿ ಮನದಲ್ಲಿ ಭಾವಿಸದಿಹನು. ಆತನು ಹೃದಯಾಕಾಶ ಶೂನ್ಯವಾಗಿ ನಿಸ್ತರಂಗ ಸಹಜಾನಂದಾಂಬುಧಿಯಾದ ಪರಮಾತ್ಮನಲ್ಲಿ ಮುಳುಗಿ ಪರಮಾತ್ಮ ತಾನಾದ ಮತ್ತೆ ಭೇದಭಾವ ಭ್ರಮೆಯ ಸೂತಕವಳಿದು, ಶರಣ ಸಚರಾಚರದಲ್ಲಿ ವ್ಯಾಪಕವಾಗಿಹನು. ಅದೆಂತೆಂದಡೆ: ಗಂಗೆಯ ಉದಕದಲ್ಲಿ ಬಿಂಬಿಸಿದ ಸೂರ್ಯನು ಮೃತ್ಕಾಂಚನ ಘಟಂಗಳ ಉದಕಮಧ್ಯದಲ್ಲಿಯೂ ಬಿಂಬಿಸುವಂತೆ ಹಿರಿದು ಕಿರಿದು ಉತ್ತಮ ಮಧ್ಯಮಾಧಮವೆನ್ನದೆ ಸರ್ವಾಂತರ್ಯಾಮಿಯಾಗಿಹನು ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆ ತಾನಾಗಿ.
--------------
ಸ್ವತಂತ್ರ ಸಿದ್ಧಲಿಂಗ
ಅಂಗದ ಮೇಲೆ ಲಿಂಗಯುಕ್ತವಾದ ಭಕ್ತನು ಆ ಭಕ್ತಿಯಾಚಾರದ ನೆಲೆಯನರಿಯದೆ ಸಂಬಂಧಕ್ಕನ್ಯವಾದ ನಂದಿ ವೀರಭದ್ರ ಮತ್ತೆ ಲಿಂಗಂಗಳೆಂಬಿವಾದಿಯಾದ ಭವಿಶೈವದೈವಂಗಳ ಹೆಸರಿನಲ್ಲಿ ಮೀಸಲುವಿಡಿದು ಬಾಸಣಿಸಿ ಮನೆದೈವಕ್ಕೆಂದು ನೇಮಿಸಿ ಮಾಡಿದ ಪಾಕವ ತನ್ನ ಕರಸ್ಥಲದ ನಿಜ ವೀರಶೈವಲಿಂಗಕ್ಕೆ ಓಗರವೆಂದರ್ಪಿಸುವದು ಅನಾಚಾರ, ಪಂಚಮಹಾಪಾತಕ. ಅವನು ಸದಾಚಾರಕ್ಕೆ ಹೊರಗು, ಅದೇನು ಕಾರಣವೆಂದೊಡೆ: ಅದು ಶೈವದೈವೋಚ್ಛಿಷ್ಟವಾದ ಕಾರಣ. ಅದರಿಂಲೂ ಭವಿಯ ಮನೆಯ ಅಶನ ಉತ್ತಮ. ಅದೆಂತೆಂದೊಡೆ:ಅದು ಅನ್ನವಾದ ಕಾರಣ. ಆ ಅನ್ನದ ಪೂರ್ವಾಶ್ರಯ ಕಳೆಯಬಹುದಾಗಿ ಆ ಉಚ್ಛಿಷ್ಟದ ಪೂರ್ವಾಶ್ರಯ ಹೋಗದಾಗಿ. ಅದೆಂತೆಂದೊಡೆ: ಭವಿಹಸ್ತಕೃತಂ ಪಾಕಂ ಲಿಂಗನೈವೇದ್ಯ ಕಿಲ್ಬಿಷಂ ಶಿವಭಕ್ತ ಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ_ ಎಂದುದಾಗಿ ಭಕ್ತಂಗೆ ಭವಿಯ ಮನೆಯ ಅಶನ ನಾಯಡಗು ನರಮಾಂಸ ಕ್ರಿಮಿ ಮಲಕ್ಕೆ ಸಮವೆಂದರಿದು ಶಿವಭಕ್ತರಾದವರು ಮುಟ್ಟರು; ಅದಕಿಂದಲೂ ಕರಕಷ್ಟ ಕರಕಷ್ಟ ನೋಡಾ. ಅರೆಭಕ್ತರು ತಮ್ಮ ಕುಲದೈವವ ಕೂರ್ತು ಮಾಡಿದ ಆ ಭವಿ ಶೈವದೈವೋಚ್ಛಿಷ್ಟವ ತಾ ನೆರೆಭಕ್ತನಾಗಿ ಆಚಾರವನನುಸರಣೆಯ ಮಾಡಿಕೊಂಡು ಆ ಅರೆಭಕ್ತರ ಮನೆಯಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವದಕ್ಕಿಂತಲೂ ಹೊರಗಣ ಹೊಲೆಯರ ಮನೆಯ ಅನ್ನವೇ ಮಿಗೆ ಮಿಗೆ ಉತ್ತಮ ಕಾಣಾ ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ತ್ರಿವಿಧಲಿಂಗಕ್ಕೆ ಸೂತ್ರಭೇದ. ಸ್ಥಾವರಲಿಂಗ ಬಾಣಲಿಂಗ ಇಷ್ಟಲಿಂಗಕ್ಕೆ, ಪಂಚಸೂತ್ರದ ತ್ರಿವಿಧಲಿಂಗಕ್ಕೆ ಲಕ್ಷಣಭೇದ. ಚಕ್ರದಂಡಕ್ಕೆ ಖಂಡಿಕಾದಂಡಕ್ಕೆ ಶಕ್ತಿಪೀಠ ಗೋಮುಖಕ್ಕೆ ಪಂಚಾಂಗುಲದಲ್ಲಿ ಪ್ರಥಮಾಂಗುಲದ ರೇಖೆ ಮಧ್ಯದಲ್ಲಿ ಹೇಮ ಪ್ರಥಮ ಅಂಗುಲ ಗತಿ ನಾಲ್ಕರಲ್ಲಿ ಏಕಾದಶ ಪ್ರಕಾರ ಪ್ರಯೋಗದಲ್ಲಿ ಗುಣಿತದ ಸೂತ್ರ ಲೆಕ್ಕ ಪ್ರಯೋಗಿಸಿರೆ ಚಕ್ರದಂಡಭೇದ. ಆ ಅರೆಪ್ರಯೋಗ ಸೂತ್ರ ಖಂಡಿಕಾದಂಡ. ಆ ಉಭಯಭೇದ ಸೂತ್ರಸಂಬಂಧ ಗೋಮುಖ ಸೂತ್ರಾವಟ್ಟ ಪರಿವರ್ತನ ಪ್ರಯೋಗಸಂಬಂಧ. ವಿಸ್ತೀರ್ಣಕ್ಕೆ ದಿಗ್ವಳಯಕ್ಕೆ ಸರ[ಳ]ರೇಖೆ ಶುದ್ಧಪೀಠಿಕಾವಳಯಕ್ಕೆ ಮೇಲೆ ಲಿಂಗಪ್ರಯೋಗ ಚಕ್ರ. ಖಂಡಿಕಾಶಕ್ತಿಪೀಠಕ್ಕೆ ಲಿಂಗಪ್ರಮಾಣ ಲಕ್ಷಣಭೇದ. ಕುಬ್ಜ ದೀರ್ಘ ಹರಿವರಿಯಿಲ್ಲದೆ ಪ್ರಮಾಣ ಪಂಚಸೂತ್ರವಾಗಿ ರವಿ ಶಶಿ ಪವನ ಪಾವಕ ಪವಿತ್ರಯೋಗಿ ರೇಖೆ ಮುಂತಾದ ಲಕ್ಷಣಯುಕ್ತಿಯಲ್ಲಿ ಪ್ರತಿಷೆ* ಶೈವಲಿಂಗಭೇದ. ಆ ಪ್ರಮಾಣುವಿನಲ್ಲಿ ಸ್ಥೂಲಕ್ಕೆ ಸ್ಥೂಲ ಸೂಕ್ಷ್ಮಕ್ಕೆ ಸೂಕ್ಷ್ಮ. ಈ ಸೂತ್ರದಲ್ಲಿ ಬಾಣಲಿಂಗ ಇಷ್ಟಲಿಂಗದ ಲಕ್ಷಣಯುಕ್ತಿ. ಇಂತೀ ಭೇದ ಉತ್ತಮ ಕನಿಷ* ಮಧ್ಯಮವೆಂದು ಸಂಕಲ್ಪಕ್ಕೊಳಗಹ ವೇದಾಂತ ಪ್ರಥಮಪ್ರತಿಷೆ* ಆಚಾರ್ಯನ ಕರ್ಮಕ್ರೀ. ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗವನರಿವುದಕ್ಕೆ ಆಚಾರ್ಯನಂಗ.
--------------
ಪ್ರಸಾದಿ ಭೋಗಣ್ಣ
ಗೃಹ ಗ್ರಾಮ ನಾಡು ದೇಶಂಗಳೆಂಬ ಭೂಮಿಯ ಆಗು_ಚೇಗೆಯ ರಾಗ_ದ್ವೇಷ, ಮರಳಿ ಭೂಮಿಯ ಆಶೆ, ಅಲ್ಪಭೂಮಿಯ ಆಶೆ. ಅಲ್ಪಭೂಮಿ ಅಲ್ಪಂಗಲ್ಲದೆ ಪಂಚಾಶತಕಕೋಟಿ ಯೋಜನ ಭೂಮಿಯನೂ ಒಳಕೊಂಡ ಬ್ರಹ್ಮಾಂಡ ಅಂತಹ ಬ್ರಹ್ಮಾಂಡವನೇಕವನೂ ಆಭರಣವ ಮಾಡಿಯಿಟ್ಟುಕೊಂಡಿಪ್ಪ, ಅಂತಹ ಆಭರಣದಿಂದ ಪೂಜೆಗೊಂಡಿಪ್ಪ, ಲಿಂಗವೇ ಪ್ರಾಣವಾಗಿ ಭೂಮಿಯಲ್ಲಿ ನಿಂದ ಲಿಂಗೈಕ್ಯಂಗೆ ಭೂಮಿಯ ಚಿಂತೆ ಇನ್ನೆಲ್ಲಿಯದೋ ? ಕಾಣೆ. ಕೋಟಿ ಕ್ಷಿತಿಪರಿಯಂತರ ಧನದಾಗುನಿರೋಧ ಆಗುಚೇಗೆಯ ನಿರೋಧಸುಖದುಃಖ ತನುಮನಧನಕಾಂಕ್ಷೆ ಅಲ್ಪಂಗಲ್ಲದೆ ಮಹಾಲಕ್ಷ್ಮಿಯೊಡೆಯನಾಗಿ, ಮಹದೈಶ್ವರ್ಯಸಂಪನ್ನನಾಗಿ, ಹಿರಣ್ಯಪತಿಯೇ ಪ್ರಾಣವಾಗಿ, ಹಿರಣ್ಯಪತಿಯೇ ಕಾಯವಾದ ಮಹಾಲಿಂಗೈಕ್ಯಂಗೆ ಧನದ ಚಿಂತೆ ಇನ್ನೆಲ್ಲಿಯದು ? ಉತ್ತಮ ಮಧ್ಯಮ ಕನಿಷ* ನಿಕೃಷ್ಟ ಹಸ್ತಿನಿ ಚಿತ್ತಿನಿ ಶಂಕಿನಿ ಪದ್ಮಿನಿಯರೆಂಬ ನಾಲ್ಕು ತೆರದ ಸ್ತ್ರೀಯರ ಸಂಗ; ಪಾತರ, ದಾಸಿ, ವೇಶ್ಯಾಗಮನ, ಪರಸ್ತ್ರೀ ಪರಸಂಗ ಅವಿಚಾರ ಅನ್ಯಜಾತಿಯ ಸಂಗ ಇವುಗಳಿಗಾಶಿಸುವ ಕ್ರೂರಾತ್ಮಂಗೆ ಹೆಣ್ಣಿನ ಚಿಂತೆಯಲ್ಲದೆ, ಇಚ್ಛಾಶಕ್ತಿ ಜ್ಞಾನಶಕ್ತಿ ಕ್ರಿಯಾಶಕ್ತಿಯ ವರ್ತನೆಯ ಮೀರಿ ಮಹಾಶಕ್ತಿ ತಾನಾಗಿ(ಹ) ಮಹಾಪುರುಷನಲ್ಲಿ ಮಹಾಸಂಗವಾದ ಮಹಾಶರಣಂಗೆ ಹೆಣ್ಣಿನ ಚಿಂತೆ ಇನ್ನೆಲ್ಲಿಯದೋ ? ವೇದಶಾಸ್ತ್ರ ಪುರಾಣಾಗಮಾದಿಯಾಗಿ ಅಷ್ಟಾದಶವಿದ್ಯಂಗಳನೋದುವ ಕೇಳುವ ವಿಚಾರಿಸುವ ತಿಳಿವ ವಿದ್ಯದ ಚಿಂತೆ ಅಲ್ಪಮತಿಯ ಅಲ್ಪಂಗಲ್ಲದೆ ವಾಗ್ದೇವತೆಗೆ ಅಧಿದೈವಮಪ್ಪ ಮಹಾವಿದ್ಯೆಯೇ ದೇಹವಪ್ಪ ವಿದ್ಯಾರೂಪ ಮಹಾದೇವನೇ ಪ್ರಾಣವಾಗಿ, ಮಹಾದೇವನೇ ಕಾಯವಾಗಿ ಮಹಾದೇವನೇ ಜಿಹ್ವೆಯಾಗಿ, ಮಹಾದೇವನೇ ಮನವಾಗಿಹ ಮಹಾಲಿಂಗೈಕ್ಯಂಗೆ ಇನ್ನುಳಿದ ಚಿಂತೆ ಇನ್ನೆಲ್ಲಿಯದೋ ? ಭಕ್ತಕಾಯ ಶಿವನಾಗಿ ಶಿವನೇ ಪ್ರಾಣವಾಗಿ ನಿಂದ ಸದ್ಭಕ್ತಂಗೆ ಆವ ಚಿಂತೆಯೂ ಇಲ್ಲ, ಆತ ನಿಶ್ಚಿಂತ, ಪರಮಸುಖಪರಿಣಾಮಿ ಸತ್ಯನು ನಿತ್ಯನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಅನಂತ ಅದ್ಭುತ ತಮಂಧ ತಾರಜ ತಂಡಜ ಭಿನ್ನಜ ಭಿನ್ನಾಯುಕ್ತ ಅದ್ಭೂತ ಅಮದಾಯುಕ್ತ ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರ ಕಲಿಯುಗ ಇಂತೀ ಹದಿನೆಂಟು ಯುಗಂಗಳಲ್ಲಿ ಪುಟ್ಟಿದವಾವೆಂದಡೆ: ಅನಂತವೆಂಬ ಯುಗದಲ್ಲಿ ಸಾಕ್ಷಾತ್ ಸರ್ವಜ್ಞ ತಾನೊಬ್ಬನೆ ಇದ್ದ. ಅದ್ಭುತವೆಂಬ ಯುಗದಲ್ಲಿ ಪಾರ್ವತಿ ಹುಟ್ಟಿದಳು. ತಮಂಧವೆಂಬ ಯುಗದಲ್ಲಿ ನಾರಾಯಣ ಪುಟ್ಟಿದನು. ಆ ನಾರಾಯಣನ ನಾಭಿಯಲ್ಲಿ ಒಂದು ಕಮಲ ಹುಟ್ಟಿತ್ತು. ಆ ಕಮಲದಲ್ಲಿ ಬ್ರಹ್ಮ ಹುಟ್ಟಿದನು. ತಾರಜವೆಂಬ ಯುಗದಲ್ಲಿ ಆ ಬ್ರಹ್ಮಂಗೆ ಅಜನೆಂಬ ಹೆಸರಾಯಿತ್ತು. ತಂಡಜವೆಂಬ ಯುಗದಲ್ಲಿ ಬ್ರಹ್ಮಾಂಡವೆಂಬುದೊಂದು ತತ್ತಿ ಪುಟ್ಟಿತ್ತು. ಭಿನ್ನಜವೆಂಬ ಯುಗದಲ್ಲಿ ಆ ತತ್ತಿ ಭಿನ್ನವಾಯಿತ್ತು. ಭಿನ್ನಾಯುಕ್ತವೆಂಬ ಯುಗದಲ್ಲಿ ಮೇಘ ಪಾರಿಜಾತಂಗಳು ಪುಟ್ಟಿದವು. ನಿಂದಲ್ಲಿ ಭೂಮಿ ಪುಟ್ಟಿತ್ತು. ಅದ್ಭೂತವೆಂಬ ಯುಗದಲ್ಲಿ ಅಷ್ಟ ಕುಲಪರ್ವತಂಗಳು ಪುಟ್ಟಿದುವು. ಅಮದಾಯುಕ್ತವೆಂಬ ಯುಗದಲ್ಲಿ ಸಪ್ತಸಮುದ್ರಂಗಳು ಪುಟ್ಟಿದುವು. ಮಣಿರಣವೆಂಬ ಯುಗದಲ್ಲಿ ಉತ್ತಮ ಮಧ್ಯಮ ಕನಿಷ*ಂಗಳು ಪುಟ್ಟಿದುವು. ಮಾನ್ಯರಣವೆಂಬ ಯುಗದಲ್ಲಿ ನಕ್ಷತ್ರಂಗಳಾಗಿರ್ದ Zõ್ಞರಾಸೀತಿ ಲಕ್ಷಣ ಜೀವರಾಶಿಗಳು ಪುಟ್ಟಿದುವು. ವಿಶ್ವಾರಣವೆಂಬ ಯುಗದಲ್ಲಿ ಚಂದ್ರ ಸೂರ್ಯರು ಪುಟ್ಟಿದರು. ವಿಶ್ವಾವಸುವೆಂಬ ಯುಗದಲ್ಲಿ ದೇವಾದಿ ದೇವರ್ಕ?ು ಪುಟ್ಟಿದರು. ಅಲಂಕೃತವೆಂಬ ಯುಗದಲ್ಲಿ ಕಾಮಾದಿವರಂಗ?ು ಪುಟ್ಟಿದುವು ಕೃತಯುಗದಲ್ಲಿ ದೇವ ದಾನವ ಮಾನವರಿಗೆ ಯುದ್ಧವಾಯಿತ್ತು. ತ್ರೇತಾಯುಗದಲ್ಲಿ ರಾಮರಾವಣರಿಗೆ ಯುದ್ಧವಾಯಿತ್ತು. ದ್ವಾಪರಯುಗದಲ್ಲಿ ಕೌರವ ಪಾಂಡವರಿಗೆ ಯುದ್ಧವಾಯಿತ್ತು. ಕಲಿಯುಗದಲ್ಲಿ ಮೌರಿಯ ಕದಂಬರಿಗೆ ಯುದ್ಧವಾಯಿತ್ತು. ಇಂತೀ ಹದಿನೆಂಟು ಯುಗಂಗಳಲ್ಲಿ ರಾಜ್ಯವನಾಳಿದ ಸೂರ್ಯವಂಶದ ಕ್ಷತ್ರಿಯರ ಹೆಸರಾವುವೆಂದಡೆ ಆದಿನಾರಾಯಣ, ಆದಿನಾರಾಯಣನ ಮಗ ಬ್ರಹ್ಮ, ಬ್ರಹ್ಮನ ಮಗ ಭೃಗು, ಭೃಗುವಿನ ಮಗ ಇಂದ್ರ, ಇಂದ್ರನ ಮಗ ನಯನೇಂದ್ರಿಯ, ನಯನೇಂದ್ರಿಯನ ಮಗ ಕಾಲಸ್ವಾಲ, ಕಾಲಸ್ವಾಲನ ಮಗ ದುಂದುಮಹಂತ, ದುಂದುಮಹಂತನ ಮಗ ತ್ರಿಶಂಕು, ತ್ರಿಶಂಕುವಿನ ಮಗ ಹರಿಶ್ಚಂದ್ರ, ಹರಿಶ್ಚಂದ್ರನ ಮಗ ಲೋಹಿತಾಕ್ಷ, ಲೋಹಿತಾಕ್ಷನ ಮಗ ನಳ, ನಳನ ಮಗ ಕೂರ್ಪಸ್ಯ, ಕೂರ್ಪಸ್ಯನ ಮಗ ಪುನೋರಪಿ, ಪುನೋರಪಿಯ ಮಗ ಪರಿತಾಸಿ, ಪರಿತಾಸಿಯ ಮಗ ಅಮರ, ಅಮರನ ಮಗ ಮಾಂಧಾತ, ಮಾಂಧಾತನ ಮಗ ಮಾಗ್ರೀಚ, ಮಾಗ್ರೀಚನ ಮಗ ಬಿಂದು, ಬಿಂದುವಿನ ಮಗ ಲವಲ, ಲವಲನ ಮಗ ಪರಿತಾಪಿ, ಪರಿತಾಪಿಯ ಮಗ ಸಿಳ್ಳಗೋಪಾಲ, ಸಿಳ್ಳಗೋಪಾಲನ ಮಗ ನಂದಗೋಪಾಲ, ನಂದಗೋಪಾಲನ ಮಗ ವಸುದೇವ, ವಸುದೇವನ ಮಗ ಶ್ರೀಕೃಷ್ಣ, ಶ್ರೀಕೃಷ್ಣನ ಮಗ ಸಿಳಪ್ಪ, ಸಿಳಪ್ಪನ ಮಗ ದಿಗು, ದಿಗುವಿನ ಮಗ ರಘು, ರಘುವಿನ ಮಗ ಅರಣ್ಯ, ಅರಣ್ಯನ ಮಗ ಮೃಗರಾಜ, ಮೃಗರಾಜನ ಮಗ ದಶರಥ, ದಶರಥನ ಮಗ ರಾಮ. ಇಂತಿವರೆಲ್ಲರೂ ಪ್ರಳಯಕ್ಕೊ?ಗಾದರು ನೋಡಿರೆ ! ಪ್ರ?ಯರಹಿತ ನಮ್ಮ ಸಂಗನಬಸವಣ್ಣ ಕೂಡಲಚೆನ್ನಸಂಗಮದೇವರು ತಾನು ತಾನಾಗಿರ್ದರು.
--------------
ಚನ್ನಬಸವಣ್ಣ
ಸದ್ಭಕ್ತನು ತನು ಮನ ಧನ ಪ್ರಾಣಾದಿಗಳನರ್ಪಿಸಿ, ಸಕಲ ಸಾಕಾರ ದ್ರವ್ಯಾದಿಗಳೆಲ್ಲವೂ ಶಿವನ ಸೊಮ್ಮಾಗಿ, ಅದೆಂತೆಂದಡೆ ಋಗ್ವೇದ, ಶಿವೋ ದಾತಾ ಶಿವೋ ಭೋಕ್ತಾ ಶಿವಸ್ಸರ್ವಮಿದಂ ಜಗತ್ ಶಿವೋ ಯಜತಿ ಸರ್ವತ್ರ ಯಶ್ಶಿವಸ್ಸೋ[s]ಹಮೇವ ಚ ಎಂದುದಾಗಿ, ಇದನರಿದು ದಾತೃ ಭೋಕ್ತೃ ಶಿವನೆಂದು, ಅಹಂ ಮಮತೆಗಳಡಗಿ, ಸ್ವಾನುಭಾವವಳವಟ್ಟು, ಬಾಗಿಲುಗಾಹಿಯಾಗಿ ದಾಸೋಹಮಂ ಮಾಡುವುದು, ಇದು ಉತ್ತಮ ಕ್ರಿಯೆಯು. ಇದು ಲಿಂಗದೊಡನೆ ಹುಟ್ಟಿ, ಲಿಂಗದೊಡನೆ ಬೆಳೆದು, ಲಿಂಗದೊಡನೆ ಲೀಯವಹ ಮಹಾಲಿಂಗಾಂಗಿಗಲ್ಲದೆ ಸಾಧ್ಯವಾಗದು. ಇದು ಅಳವಡದಿರ್ದಡೆ ಸದ್ಭಕ್ತನು ತನು, ಮನ, ಧನ, ಪ್ರಾಣ ಮುಂತಾಗಿ ವಂಚನೆ ಇಲ್ಲದೆ ಸದ್ಭಕ್ತಿಯಿಂ ದಾಸೋಹಮಂ ಮಾಡುವುದು. ಇದು ಮಧ್ಯಮ ಕ್ರಿಯೆಯು. ಇದು ಸಾಮಾನ್ಯರಿಗಳವಡದು. ಇದು ಅಸಾಧ್ಯವು. ಇದು ಅಳವಡದಿರ್ದಡೆ, ಸದ್ಭಕ್ತನು ತನ್ನ ತನು ಮನ ಪ್ರಾಣಂಗಳ ಬಳಲಿಸಿ ತನಗೆ ಪ್ರಿಯವಾದ ಪುತ್ರ ಮಿತ್ರ ಕಳತ್ರಾದಿಗಳಿಗೆ ಹೇಗೆ ಸಕಲ ದ್ರವ್ಯಂಗಳಂ ಕೊಡುವನೋ ಹಾಗೆ ಸ್ನೇಹದಿಂದ ದಾಸೋಹವ ಮಾಡುವುದು, ಇದು ಕನಿಷ*ಕ್ರಿಯೆಯು. ಇದು ಮಹಾಜ್ಞಾನಿಪುರುಷರಿಗಲ್ಲದೆ ಅಳವಡದು. ಇದು ಅಳವಡದಿರ್ದಡೆ, ಶಕ್ತ್ಯಾನುಸಾರದಿಂ ಮಾಡುವುದು. ಇದು ನಿಕೃಷ್ಟಕ್ರಿಯೆಯು. ಅದೆಂತೆಂದಡೆ: ಶ್ರೂಯತಾಂ ಧರ್ಮಸರ್ವಸ್ವಂ ಶ್ರುತ್ವಾ ಚೈವಾವಧಾರ್ಯತಾಂ ಆತ್ಮನಃ ಪ್ರತಿಕೂಲಂ ಚ ಪರೇಷಾಂ ನ ಸಮಾಚರೇತ್ ಎಂದುದಾಗಿ ಇದನರಿತು ತನ್ನಂತೆ ಭಾವಿಸಿಯಾದಡೂ ದಾಸೋಹವ ಮಾಡಿ ಪ್ರಸನ್ನತೆಯ ಪಡೆವುದೇ ಸದ್ಭಕ್ತನ ಪಥವು ನೋಡಾ. ಇಂತಪ್ಪ ಉತ್ತಮ ಮಧ್ಯಮ ಕನಿಷ* ನಿಕೃಷ್ಟವೆಂಬ ಈ ನಾಲ್ಕು ಪರ್ಯಾಯದಲ್ಲಾದಡೆಯೂ, ಒಂದು ಪರ್ಯಾಯದಲ್ಲಿ ಭಾವಿಸಿಕೊಂಡು, ತನುಮನಧನವನಿತ್ತು ಸ್ನೇಹದಿಂದ ದಾಸೋಹವ ಮಾಡಿ ಪ್ರಸಾದವ ಪಡೆದು ಭೋಗಿಸಿ, ಭಕ್ತರಾಗಬೇಕು. ಈ ಪ್ರಕಾರದಿಂದಲ್ಲದೆ, ಮುಕ್ತಿ ಇಲ್ಲ. ಈ ಚತುರ್ವಿಧ ಕ್ರಿಯೆಗಳೊಳಗೆ ಆವುದನು ಮಾಡದೆ, ದುಷ್ಕ್ರಿಯೆಯಲ್ಲಿ ವರ್ತಿಸುತ್ತ ದಾಸೋಹವವಿಲ್ಲದೆ, ತನ್ನೊಡಲನೆ ಹೊರೆದಡೆ ಅವನು ಸದ್ಭಕ್ತರೊಳಗೆ ಸಲ್ಲ, ಅವಂಗೆ ಪ್ರಸಾದವಿಲ್ಲ. ಪ್ರಸಾದವಿಲ್ಲಾಗಿ ಮುಕ್ತಿ ಇಲ್ಲ, ಅವನು ಉಭಯಭ್ರಷ್ಟ. ಇದನರಿತು ತನ್ನಂತೆ ಭಾವಿಸಿ, ವಿಶ್ವಾಸದಿಂ ದಾಸೋಹವಂ ಮಾಡಲು, ಇಹಸಿದ್ಧಿ, ಪರಸಿದ್ಧಿ, ಸರ್ವಸಿದ್ಧಿಯಯ್ಯ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ವೇದವೆಂಬ ಅಂಜನವ ನೆಚ್ಚಿಕೊಂಡು, ಶಿವನೆಂಬ ನಿಧಾನವ ಕಾಣಲರಿಯರೀ ದ್ವಿಜರು. ನರಗುರಿಗಳೆತ್ತ ಬಲ್ಲರು ಹೇಳಾ ? ಯಜುರ್ವೇದ: ತದ್ವಿಷ್ಣೋಃ ಪರಮಂ ಪದಂ ಸದಾಪಶ್ಶಂತಿಸೂರಯಃ ಜ್ವಾಲಾಯ ನಮಃ ಜ್ವಲಲಿಂಗಾಯ ನಮಃ ಶ್ರೀರುದ್ರಭಾಷ್ಯೇ: ಉತ್ತಮ ವೇದ ಭೂಶಿಕೋ ದೇವೋತ್ತುಮಾಭ್ಯಂ | ಪ್ರಜವನಮಾಲಂಕೃತಂ ಜಗತ್ಕಾರಣತ್ವೇನ ಜ | ನಯಾಮಸ ಶಿವಸಂಕಲ್ಪೋಪನಿಷದಿ ಪರಾತ್ಪರತರೋ ಬ್ರಹ್ಮಾ ಪರಾತ್ಪರತರೋ ಹರಿಃ ಯತ್ಪಪರಾತ್ಪರತತೋರೀಶ ತನ್ಮೇಃ ಮನಃ ಶಿವಸಂಕಲ್ಪಮಸ್ತು || ಇಂತೆಂದುದಾಗಿ, ಇದು ಕಾರಣ, ಪಾಪಿಂಗೆ ಪರಮಗತಿಯೇಕೊ, ಕುರುಡಗೆ ಕನ್ನಡಿಯೇಕೋ, ಶಿವನ ನಿಜತತ್ವವೇಕೊ ದ್ವಿಜರೆಂಬ ಅರೆಮರುಳುಗಳಿಗೆ ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಾ ?
--------------
ಸಂಗಮೇಶ್ವರದ ಅಪ್ಪಣ್ಣ
ಪ್ರಸಾದ ಪ್ರಸಾದವೆಂಬರು, ಪ್ರಸಾದವಾವುದೆಂದರಿಯರು. ಅನ್ನವೆ ಪ್ರಸಾದವೆಂದು ಕೊಡುವಾತ ಶರಣನಲ್ಲ. ಅನ್ನವೆ ಪ್ರಸಾದವೆಂದು ಕೊಂಬಾತ ಭಕ್ತನಲ್ಲ. ಅದೆಂತೆಂದಡೆ: ಅನ್ನ ಮಹಾರೇತ್ಸರ್ವಮನ್ನಮುತ್ಪತ್ತಿಹೇತವೇ ಅನ್ನಮಾಭ್ಯಂತರಂ ಪ್ರಾಣಂ ಸರ್ವಮನ್ನಮಯಂ ಜಗತ್ ಇಂತೆಂದುದಾಗಿ, ಅನ್ನ ಜೀವಕ್ಕೆ ಆಧಾರ, ಅನ್ನವೇ ಸರ್ವಜನಕ್ಕೆ ಸನ್ಮತ. ಇದು ಕಾರಣ, ಅನ್ನವೆ ಪ್ರಸಾದವಲ್ಲ. ಶರಣನಪ್ಪ ಸದ್ಗುರುಸ್ವಾಮಿ ನೆತ್ತಿಯಲ್ಲಿರ್ದ ಉತ್ತಮ ಪ್ರಸಾದವನರು[ಹೆ] ಬ್ರಹ್ಮರಂಧ್ರದಲ್ಲಿ ಪ್ರಕಾಶಿಸುತಿರ್ಪ ಮಹಾಲಿಂಗದೊಳ್ಪುಟ್ಟಿದ ಪರಮಾಮೃತವೆ ಪ್ರಸಾದ. ಅಂತಪ್ಪ ಪ್ರಸಾದಗ್ರಾಹಕತ್ವವೆಂತಪ್ಪುದೆಂದಡೆ, ಅಂಗವ ಮರೆದು ಮನಮಗ್ನವಾಗಿ ಉಚ್ಛ್ವಾಸ ನಿಶ್ವಾಸಂಗಳಡಗಿ, ಪ್ರಾಣನು ಪ್ರಸಾದದೊಳ್ಮುಳುಗಿ ಪರಮಕಾಷೆ*ಯನೆಯ್ದಿ ನಿಂದಾತನೆ, ಸೌರಾಷ್ಟ್ರ ಸೋಮೇಶ್ವರನಲ್ಲಿ ಮಹಾಪ್ರಸಾದಿ ಎನಿಸಿಕೊಂಬನು.
--------------
ಆದಯ್ಯ
ಈರೇಳುಲೋಕ, ಹದಿನಾಲ್ಕು ಭುವನವಳಯದಲ್ಲಿ ಜಂಬೂದ್ವೀಪ ನವಖಂಡ ಪೃಥ್ವಿ ಹಿಮಸೇತು ಮಧ್ಯದೊಳಗಾದ ಖಂಡಮಂಡಲ ಯುಗಜುಗಂಗಳು, ಪಂಚಭೌತಿಕ ಪಂಚವಿಂಶತಿತತ್ವ ಸಕಲವಾಸಂಗಳೆಲ್ಲವು ತನ್ನ ಸಾಕಾರದಲ್ಲಿ ತೋರುವುದು. ಉತ್ತಮ ಕನಿಷ* ಮಧ್ಯಮವೆಂಬ ಸುಕ್ಷೇತ್ರವಾಸ, ತನ್ನಂಗದಲ್ಲಿ ಸುಳಿದಾಡುವ ಮಂಗಳಮಯದಿರವ, ಸಕಲೇಂದ್ರಿಯವ ಬಂಧಿಸದೆ ಕೂಡಿ, ಅವರವರ ಅಂಗದ ಮುಖದಲ್ಲಿ ಲಿಂಗಕ್ಕೆ ಕೊಟ್ಟು, ಸುಸಂಗಿಯಾಗಿ ವಸ್ತುವಿನ ಅಂಗದಲ್ಲಿ ಬೆರಸು. ನೀನರಿದನೆಂಬುದಕ್ಕೆ ಬೇರೊಂದು ಕಡೆಯಿಲ್ಲ. ನೀ ಮರೆದನೆಂಬುದಕ್ಕೆ ಬೇರೊಂದು ಮನವಿಲ್ಲ. ವಸ್ತು ದ್ರವ್ಯವ ತೋರಿ ಅಳಿದ ಮತ್ತೆ ವಸ್ತುವ ಕೂಡಿದಂತೆ, ಜಗಕ್ಕೆ ಭಕ್ತಿಯ ತೋರಿ ವಸ್ತು ಲೇಪ, ಸಗರದ ಬೊಮ್ಮನೊಡೆಯ ತನುಮನ ಸಂಗಮೇಶ್ವರಲಿಂಗವು ಐಕ್ಯಲೇಪವಾದ.
--------------
ಸಗರದ ಬೊಮ್ಮಣ್ಣ
ಬಲ್ಲೆ ಬಲ್ಲಿದರೆಂಬ ಅಹಂಕಾರಿಗೆ ಸಲ್ಲದು ಭಕ್ತಿ . ಹುಲ್ಲ ಬೆಂಕಿಯೊಳು ಕೆಂಡ ನಿಲ್ಲುವುದೆ ಹುದುಗಿ ಮುಚ್ಚಿದರೆ ? ಹಲ್ಲಣವ ಕತ್ತೆಗೆ ಹಾಕಿದರೆ ಉತ್ತಮ ತೇಜಿಯಾದಪುದೆ ? ಎಲ್ಲಿಯ ಭಕ್ತಿ ? ಎಲ್ಲಿ ಮುಕ್ತಿ ? ಸಲ್ಲದು ನಿಮ್ಮಾಣೆ ನಿಮ್ಮ ಪ್ರಮಥರಾಣೆ ಕಾಣಾ ಎಲೆ ನಮ್ಮ ಕೂಡಲಚೆನ್ನಸಂಗಮದೇವಯ್ಯ.
--------------
ವೀರಸಂಗಯ್ಯ
ಇನ್ನಷ್ಟು ... -->