ಅಥವಾ

ಒಟ್ಟು 27 ಕಡೆಗಳಲ್ಲಿ , 16 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹಲವು ಬಣ್ಣದ ಊರೊಳಗೆ ಉರಿವ ಜ್ಯೋತಿಯ ಹಿಡಿದು ಪರಿಪರಿಯ ಕೇರಿಯಲ್ಲಿ ಸುಳಿದಾಡುವಳಿವಳಾರೋ? ಈ ಊರಿಗೆ ನಾನೊಡತಿ; ಇಲ್ಲಿ ಸುಳಿಯುವುದಕ್ಕೆ ನಿನಗೇನು ಕಾರಣ ಹೇಳಾ? ಈ ಊರಿಗೂ ನಿನಗೂ ನಾನೊಡತಿಯೆನುತ ಊರ ಸುಟ್ಟು ನಾರಿಯ ಕೊಂದವಳು ನಾನು ಪರಾಪರಾಂಗನೆಯೆನುತ ಸ್ವಪತಿಯ ನೆರೆದು ನಿಷ್ಪತಿಯನೆಯಿದುದ ಕಂಡು ಬೆರಗಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಸುಡುವ ಬೆಂಕಿಯ ತುದಿಮೊನೆಯಲ್ಲಿ, ಒಂದು ಅರಗಿನ ಮಣಿಮಾಡದೆ ಮನೆಯಲ್ಲಿ ಬೂರದ ಹಾಸುಹಾಕಿ, ನೀರಿನ ಮಂಚದ ಮೇಲೆ ನಾರಿಯರೆಲ್ಲರೂ ತಮ್ಮ ಕ್ರೀಡಾಭಾವಂಗಳಿಂದ ಮಲಗಿರಲಾಗಿ, ಅರಗಿನ ಮಾಡ ಎದ್ದುರಿದು, ನೀರ ಮಂಚವ ಸುಟ್ಟು, ಬೂರದ ಹಾಸು ಹೊತ್ತಿ, ನಾರಿಯರುರಿದು ಹೋಗಿ, ಉರಿವ ನಾಲಗೆ ಹರಿವ ನೀರ ಕೆಡಿಸಿತ್ತು. ಆ ಹರವರಿಯಲ್ಲಿ ಪರಿಹರಿಸಬಲ್ಲಡೆ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹರಿವ ನೀರ ಮಧ್ಯದಲ್ಲಿ ಉರಿವ ಜ್ಯೋತಿಯ ಬೆಳಗ ನೋಡಿ ಕಂಡೆನಯ್ಯ. ಸಾರಿರ್ದು ನೋಡಿದರೆ, ನೀರೊಳಗೆ ಮುಳುಗಿ ಉರಿವುತ್ತಿದೆ ನೋಡಾ. ದೂರದಲ್ಲಿರ್ದ ನೋಡಿದರೆ, ನೀರಮೇಲೆ ಉರಿವುತ್ತಿದೆ ನೋಡಾ. ಇದೇನೋ! ಇದೇನೋ!! ಜ್ಯೋತಿಯ ಗುಣವೋ, ತನ್ನ ಭ್ರಾಂತಿನ ಗುಣವೋ ಎಂದು, ಸ್ವಯಜ್ಞಾನ ಗುರುವಿನ ಮುಖದಿಂದ ವಿಚಾರಿಸಲು ಹರಿವ ನೀರು ಬತ್ತಿತ್ತು. ಜ್ಯೋತಿ ಉಳಿಯಿತ್ತು. ಆ ಉಳಿದ ಉಳಿಮೆಯೆ ತಾನೆಂದು ತಿಳಿದಾತನಲ್ಲದೆ, ಶಿವಶರಣನಲ್ಲ ಕಾಣಾ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹರಿವ ನದಿಗೆ ಮೈಯೆಲ್ಲಕಾಲು. ಉರಿವ ಕಿಚ್ಚಿಗೆ ಮೈಯೆಲ್ಲನಾಲಗೆ. ಬೀಸುವ ಗಾಳಿಗೆ ಮೈಯೆಲ್ಲಮುಖ (ಕೈ?) ಗುಹೇಶ್ವರಾ ನಿಮ್ಮ ಶರಣಂಗೆ, ಸರ್ವಾಂಗವೆಲ್ಲ ಲಿಂಗ !
--------------
ಅಲ್ಲಮಪ್ರಭುದೇವರು
ಹರಿವ ಜಲಧಿಯಂತೆ, ಚರಿಸಿ ಬಹ ಮನವ ನಿಲ್ಲೆಂದು ನಿಲಿಸುವ ಪುರುಷರುಂಟೆ ? ಬಿರುಗಾಳಿ ಬೀಸಿದರೆ ಒಲಿ ಒಲಿದು ಉರಿವ ಬಲುಗಿಚ್ಚಿನ ಉರಿಯ ನೆಲೆಗೆ ನಿಲಿಸುವರುಂಟೆ ? ಮಹಾಬಯಲೊಳಗಣ ಸಂಚವನರಿದು ಅವಗಡಿಸುವರುಂಟೆ ? ಮಹಾಬಯಲೊಳಗಣ ಸಂಚವನರಿದು ಅವಗಡಿಸುವರುಂಟೆ ? ಇವ ಬಲ್ಲೆನೆಂಬವರೆಲ್ಲ ಅನ್ನದ ಮದ, ಅಹಂಕಾರದ ಮದ, ಕುಲಮದ, ಛಲಮದ, ಯೌವನಮದ, ವಿದ್ಯಾಮದ, ತಪದ ಮದ, ಆತ್ಮದ ಮದ ಇಂತೀ ಅಷ್ಟಮದವಿಡಿದು ಬಲ್ಲೆವೆಂಬರಲ್ಲದೆ, ದೃಷ್ಟನಷ್ಟವಾವುದೆಂದರಿಯದೆ, ಎಲ್ಲರೂ ಭ್ರಷ್ಟರಾಗಿಹೋದರು, ಬಸವಪ್ರಿಯ ಕೂಡಲಚೆನ್ನಬಸವಣ್ಣಾ , ನಿಮ್ಮ ನೆಲೆಯನರಿಯದ ಕಾರಣ.
--------------
ಹಡಪದ ಅಪ್ಪಣ್ಣ
ಭಕ್ತನ ತ್ರಿವಿಧ ಲಿಂಗಬೇದ, ಚಿಪ್ಪಿನ ಮುತ್ತಿನ ಅಪ್ಪುವಿನಂತೆ ಇದ್ದಿತ್ತು. ಆ ತ್ರಿವಿಧದ ಆದಿಯನರಿದಲ್ಲಿ ಭಕ್ತಸ್ಥಲ ಸಂಪೂರ್ಣ. ಮಾಹೇಶ್ವರನ ತ್ರಿವಿಧಲಿಂಗ ಭೇದ, ವಾರಿವಾಯುವಿನ ಸಂಗದ ಕಲ್ಲಿನ ಬೆಗಡದಂತೆ ಇದ್ದಿತ್ತು. ಪ್ರಸಾದಿಯ ತ್ರಿವಿಧಲಿಂಗದ ಭೇದ, ಉರಿಯ ತುದಿಯ ಮೇಲೆ ಎರೆದೆಣ್ಣೆಯ ಕೊಂಡು ಉರಿವ ಸರದಂತೆ ಇದ್ದಿತ್ತು. ಪ್ರಾಣಲಿಂಗಿಯ ತ್ರಿವಿಧಲಿಂಗದ ಭೇದ, ಹರಿವ ಅಪ್ಪುವಿನಲ್ಲಿ ಬರೆದ ಚಿತ್ತಾರದಂತೆ ಇದ್ದಿತ್ತು. ಶರಣನ ತ್ರಿವಿಧಲಿಂಗದ ಭೇದ, ವಜ್ರದ ಬೆಳಗಿನ ಕಳೆಯ ಹೊಳಹಿನಂತೆ ಇದ್ದಿತ್ತು. ಐಕ್ಯನ ತ್ರಿವಿಧವಡಗಿದ ಭಾವ, ಈ ಪೂರ್ವದ ಐದನವಗವಿಸಿ ಸ್ವಯವಾದುದು ಐಕ್ಯಾನುಭಾವ. ಇಂತೀ ಸ್ಥಲವನೆಯ್ದಿ, ನಿಃಸ್ಥಲವಾದಲ್ಲಿ ನಿಃಕಳಂಕನಾದೆಯಲ್ಲಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಹರಿವ ಹಾವು, ಉರಿವ ಕಿಚ್ಚೆಂದಡೆ ಮುಟ್ಟುವವರಿಗೆ ಭೀತಿಯಲ್ಲವೆ ? ಅರಿದು ಹಿಡಿದಡೆ, ಉರಗ ಹೊರಳೆಗೆ ಸರಿ. ಸ್ತಂಭಕ್ಕೆ ಅಗ್ನಿ ಚಂದನದ ಮಡು. ಲಿಂಗವ ಹಿಡಿಯಬಲ್ಲಡೆ, ಅಂಗ ನಿರಂಗದ ಕೂಟ. ಉಭಯದ ಸಂಗವನರಿದಲ್ಲಿ, ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಹರಿವ ಹಾವಿಂಗೆ ಕಾಲ ಕೊಟ್ಟು, ಉರಿವ ಕಿಚ್ಚಿಗೆ ಕಯ್ಯನಿಕ್ಕಿ, ಅರಿವ ಆಯುಧಕ್ಕೆ ಕೊರಳ ಕೊಟ್ಟು, ಮತ್ತೆಂತೊ, ಅರುಹಿರಿಯರಾದಿರಿರಿ ಮುಂದಕ್ಕಾತನನರಿಯಬಲ್ಲಡೆ, ಹರಿವ ಚಿತ್ತವ ನಿಲಿಸಿ ಕುದಿವ ಆಸೆಯ ಕೆಡಿಸಿ, ಸರ್ವವ್ಯಾಪಾರವೆಂಬ ಗೊತ್ತಿಗೆ ಚಿತ್ತವನಿಕ್ಕದೆ ನಿಶ್ಚಯನಾಗಿ ನಿಂದುದು ಆತನಿರವೆ ಸದಾಶಿವಮೂರ್ತಿಲಿಂಗವು ತಾನೆ.
--------------
ಅರಿವಿನ ಮಾರಿತಂದೆ
ಅದೇ ಅದೇ ಎಂಬಲ್ಲಿ, ಇದು ಎಂಬುದುಂಟೆ ? ಅದು ಎಂದರೆ ವಸ್ತು, ಇದು ಅಂದರೆ ಅರಿವು. ಇದು ಹೋದ ಮ್ಯಾಲೆ ಅದು ಇರಲಿಲ್ಲಾ. ಕರ್ಪುರಕ್ಕೆ ಹತ್ತಿ ಉರಿವ ಉರಿ, ಆ ಕರ್ಪುರವು ಕರಗಿ ಹೋದ ಮೇಲೆ ಆ ಉರಿಯು ಏನಾಯಿತೊ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ ?
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ನೀರ ಮಧ್ಯೆ ಉರಿವ ಜ್ಯೋತಿ ಊರೊಳಗೆ ಬೆಳಗುವುದ ಕಂಡೆ. ಊರೊಳಗೆಲ್ಲ ಬೆಳಗಾಗಿ, ಊರ ಕದಳಿಯವನದ ಗಿರಿಯನಡರಿ ಉರಿವುದ ಕಂಡೆನು. ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಮುಗಿಲ ತೆರೆಯ ಮರೆಯಲ್ಲಿ ಉರಿವ ಬೆಂಕಿಯ ಹೊಗೆಯ ಹಿಡಿದಲ್ಲಿ, ಮತ್ತೆ ಅಳಿವುದಿನ್ನೇನೊ ? ಉಳಿವುದಿನ್ನೇನೊ ? ಕೆಂಡ ಕೆಟ್ಟಲ್ಲಿ ಹೊಗೆ ನಿಂದಿತ್ತು. ಅವಸಾನಕ್ಕೆ ಸಂದಿಲ್ಲ, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ನಿಃಪತಿಯಾದವಂಗೆ.
--------------
ಮೋಳಿಗೆ ಮಾರಯ್ಯ
-->